ದಿನದ ಸುದ್ದಿ
ದಾವಣಗೆರೆ | 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಎ.ಬಿ.ರಾಮಚಂದ್ರಪ್ಪ ಆಯ್ಕೆ
ಸುದ್ದಿದಿನ,ದಾವಣಗೆರೆ:ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜಗಳೂರು ಪಟ್ಟಣದಲ್ಲಿ ದಿನಾಂಕ 11 ಮತ್ತು 12 ಜನವರಿ 2025 ರಂದು ನಡೆಯಲಿದೆ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಕನ್ನಡ ಅಧ್ಯಾಪಕರು, ಲೇಖಕರು, ವಾಗ್ಮಿಗಳು ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎ.ಬಿ.ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ವೈಚಾರಿಕ ಹಾಗೂ ಸಾಂಸ್ಕೃತಿಕ ಚಿಂತಕ, ಜನಪರ ಹೋರಾಟಗಾರ ಪ್ರೊ.ಎ.ಬಿ.ರಾಮಚಂದ್ರಪ್ಪನವರು 3 ದಶಕಗಳಿಗೂ ಹೆಚ್ಚಿನ ಕಾಲ ಪದವಿ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್ ಚಿಂತನೆಗಳು” ವಿಷಯದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಹೊಂದಿದ್ದಾರೆ. ಈವರೆಗೆ ಅವರ 19 ಕೃತಿಗಳು ಪ್ರಕಟಗೊಂಡಿವೆ. ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ.
ಶನಿವಾರ ಕುವೆಂಪು ಕನ್ನಡ ಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನದ ಕುರಿತಾಗಿ ಕೂಲಂಕಷವಾಗಿ ಚರ್ಚೆ ನಡೆಸಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಭಾಗವಹಿಸಿದ ಬಹುತೇಕ ಕಾರ್ಯಕಾರಿ ಸಮಿತಿ ಸದಸ್ಯರು ಪ್ರೊ.ಎ.ಬಿ.ರಾಮಚಂದ್ರಪ್ಪನವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲು ಒಲವು ತೋರಿದ್ದರಿಂದ ಸರ್ವಾಧ್ಯಕ್ಷತೆಯ ಆಯ್ಕೆ ಸುಗಮವಾಗಿ ನಡೆಯಿತು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ಜಗಳೂರಿನ ಶಾಸಕ ಚಿಮ್ಮನಕಟ್ಟಿ ಬಿ.ದೇವೇಂದ್ರಪ್ಪ ಅವರು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಜನವರಿ 11 ಮತ್ತು 12 ರಂದು ಅರ್ಥಪೂರ್ಣವಾಗಿ ಸಮ್ಮೇಳನ ನಡೆಸುವುದಾಗಿ ಬಿ.ವಾಮದೇವಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾದ ಹಾಗೂ ಜಿಲ್ಲಾ ಕಸಾಪ ಪದ ನಿಮಿತ್ತ ಸದಸ್ಯ ವೀರೇಶ್ ಎಸ್ ಒಡೇನಪುರ ಆವರನ್ನು ಜಿಲ್ಲಾ ಕಸಾಪ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕಾರಿ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ದಾವಣಗೆರೆ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಗಳೂರು ತಾಲೂಕು ಅಧ್ಯಕ್ಷೆ ಕೆ.ಸುಜಾತಮ್ಮ, ಹರಿಹರ ತಾಲೂಕು ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಚನ್ನಗಿರಿ ತಾಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಹೊನ್ನಾಳಿ ತಾಲೂಕು ಅಧ್ಯಕ್ಷ ಜಿ.ಮುರಿಗೆಪ್ಪಗೌಡ, ನ್ಯಾಮತಿ ತಾಲೂಕು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ್ ಎಸ್ ಒಡೇನಪುರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸೋಮೇಶ್ವರ ಕೆ.ಎಂ.ಸುರೇಶ್, ಪ್ರಸಾದ್ ಬಂಗೇರ, ಎಸ್.ಎಂ.ಮಲ್ಲಮ್ಮ, ಬಿ.ಎಂ.ಭೈರವೇಶ್ವರ, ಸಿ.ಕೆ.ರುದ್ರಾಕ್ಷಿ ಬಾಯಿ, ಹೆಚ್.ಕೆ.ಸತ್ಯಭಾಮ ಮಂಜುನಾಥ್, ಎ.ರಿಯಾಜ್ ಅಹಮದ್, ಎಂ.ಎ.ಸುದರ್ಶನ್, ಕೆ.ಪಿ.ಮರಿಯಾಚಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


