ಲೈಫ್ ಸ್ಟೈಲ್
ಹಲ್ಲುಗಳನ್ನು ಕಪ್ಪುಗೊಳಿಸುವ ಹಲ್ಲಿಟ್ಟು ಗಿಲಾವು ಎಂಬ ಸಾಂಪ್ರದಾಯಿಕ ಕಲೆ..!

“Some pains are physical,
And some are mental,
But the one that is both Is dental.”
-Ogden Nash.
“ಕೆಲವು ನೋವುಗಳು ದೈಹಿಕ. ಹಾಗೂ ಕೆಲವು ಮಾನಸಿಕ. ಎರಡೂ ಆಗಿರುವ ನೋವೇ ದಾಂತಿಕ!”
– ಆಗ್ಡನ್ ನ್ಯಾಶ್
ದೈಹಿಕವಾಗಿಯೂ ಮಾನಸಿಕವಾಗಿಯೂ ಬಾಧಿಸುವ ದಂತ ನೋವಿಗೆ ನಮ್ಮ ಪೂರ್ವಿಕರು ಅನೇಕ ರೀತಿಯ ಪರಿಹಾರೋಪಾಯಗಳನ್ನು ಕಂಡುಕೊಂಡಿದ್ದರು. ಅಂತಹ ಉಪಾಯಗಳಲ್ಲಿ ಹಲ್ಲಿಟ್ಟು ಎಂಬ ಪುಡಿಯಿಂದ ಹಲ್ಲುಗಳಿಗೆ ಕಪ್ಪು ಗಿಲಾವು ಮಾಡಿಕೊಳ್ಳುವ ಕಲೆಯೂ ಒಂದು. ನನ್ನ ಅಪ್ಪನ ಚಿಕ್ಕಮ್ಮನ ಹೆಸರು ಬುಡ್ಡಕದರಮ್ಮಜ್ಜಿ. ಸುಮಾರು ನಾಲ್ಕೂವರೆ ಅಡಿಗಳಷ್ಟು ಎತ್ತರದ ಮಟ್ಟಸವಾದ ಆಳ್ತನದ ಅವಳು ಕೆಂಪನೆ ಮೈಬಣ್ಣದ ಚೆಲುವೆ. ನಮ್ಮ ಪಕ್ಕದ ಮನೆಯಲ್ಲಿ ತುಂಬು ಸಂಸಾರವಂದಿಗಳಾಗಿ ವಾಸವಿದ್ದಳು. ನನ್ನ ಬಾಲ್ಯದ ದಿನಗಳಲ್ಲಿ ಅವಳು ನಮ್ಮ ಮನೆಗೆ ಬಂದಾಗಲೆಲ್ಲಾ ಕೆಂಪು ವಸಡಿಗೆ ಸಾಲಾಗಿ ಜೋಡಿಸಿದ ಕಪ್ಪು ಮುತ್ತಿನ ಮಣಿಗಳಂತಹ ಅವಳ ಹಲ್ಲುಗಳನ್ನು ತದೇಕ ಚಿತ್ತನಾಗಿ ನೋಡುತ್ತಿದ್ದೆ. “ಏನ್ಮಾಡ್ತಾ ಇದ್ದೀಯೇ…ಗ್ಗೇ.. ಕದರಿ… ಒಂದು ತಾಳೆ ಇಳೆದೆಲೆ ಕೊಡೆ” ಎಂದು ಬುಡ್ಡಕದರಮ್ಮಜ್ಜಿ ನನ್ನ ಅಮ್ಮನನ್ನು ಮಾತಾಡಿಸಿಕೊಂಡು ನಮ್ಮ ಪಕ್ಕದ ಮನೆಯಿಂದ ಗೋಡೆ ತಡವಿಕೊಂಡು ನಮ್ಮ ಮನೆಗೆ ಬರುತ್ತಿದ್ದಳು. ಕೇವಲ ಗೋಟಡಿಕೆ ಚೂರುಗಳನ್ನು ಬಾಯೊಳಗೆ ಅತ್ತಲಿತ್ತ ನಾಗೆಯಿಂದ ಹೊರಳಾಡಿಸುತ್ತಾ ಯಾವುದೋ ಗಂಧರ್ವ ಲೋಕದಿಂದ ಇಳಿದು ಬಂದ ಕನ್ಯೆಯಂತೆ ತರಕು ವಿಳೆದೆಲೆಗಾಗಿ ಬರುತ್ತಿದ್ದಳು. ಕಟವಾಯಿಯಲ್ಲಿ ಸೋರುತ್ತಿದ್ದ ತೊಂಬುಲವನ್ನು ಸೊರ್ರನೆ ಒಳಗೆಳೆದುಕೊಂಡು ಬಾಯಲ್ಲಿ ತೊಂಬುಲ ತುಂಬಿಕೊಂಡೇ ಮಾತಾಡುತ್ತಿದ್ದ ಅವಳ ಮಾತನ್ನು ಆಲಿಸುವುದೊಂದು ಚೆಂದವಾಗಿತ್ತು. ಬಾಯೊಳಗಿನ ತೊಂಬುಲವನ್ನು ಆಚೆಗೆ ಉಗುಳಿ ಬಂದು, ಗಳಾಗಂಟೆ ಬಿಟ್ಟುಕೊಂಡು ನಿಂತುಕೊಂಡಿದ್ದ ನನ್ನ ಕಡೆಗೆ ನೋಡಿ ಕರ್ರಗೆ ನಗುತ್ತಾ, ನನ್ನ ಕೆನ್ನೆ ಸವರಿ ನೆಟಿಗಿಕೊಂಡು, ನನ್ನ ಬುಲಕಾಯಿ ಹಿಡಿದು ಸವರಿ ತನ್ನ ಬೆರಳುಗಳಿಗೆ ತಾನೇ ಮುತ್ತು ಕೊಟ್ಟುಕೊಳ್ಳುತ್ತಿದ್ದಳು.
ನನ್ನ ಅಮ್ಮನ ಹಲ್ಲುಗಳು ಬೆಳ್ಳಗಿದ್ದರೆ ಬುಡ್ಡಕದರಮ್ಮಜ್ಜಿಯ ಹಲ್ಲುಗಳು ಮಾತ್ರ ಕರ್ರಗಿದ್ದವು. ದಿನವೆಲ್ಲಾ ಎಲೆಅಡಕೆ ನಮುಲಿ ನಮುಲಿ ಹಲ್ಲುಗಳು ಹೀಗೆ ಕರ್ರಗಾಗಿರಬಹುದೆಂದೂ, ಮುಂದೊಂದು ದಿನ ನನ್ನ ಅಮ್ಮನು ಮುದುಕಿಯಾಗುವ ಹೊತ್ತಿಗೆ ಅವಳ ಹಲ್ಲುಗಳೂ ಬುಡ್ಡಕದರಮ್ಮಜ್ಜಿಯ ಹಲ್ಲುಗಳಂತೆ ಕರ್ರಗಾಗಬಹುದೆಂದು ನಾನು ಯೋಚಿಸುತ್ತಿದ್ದೆ. ಆದರೆ ನಂತರದ ದಿನಗಳಲ್ಲಿ ಕರಿಹಲ್ಲುಗಳ ಹಿಂದಿನ ಸೀಕ್ರೆಟ್ ಏನೆಂಬುದನ್ನು ನಾನು ಕಂಡುಕೊಂಡೆ. ನಮ್ಮೂರಿನ ಹತ್ತಿರದ ಯಾದಗೆರೆ ಗ್ರಾಮದ ಅಲೆಮಾರಿ ಕೊರಮ ಸಮುದಾಯದ ಹೆಂಗಸರಿಂದ ನಮ್ಮೂರಿನ ಕೆಲವು ಮಧ್ಯ ವಯಸ್ಕ ಹೆಂಗಸರು ಹಲ್ಲಿಟ್ಟು ಎಂಬ ಗಿಡಮೂಲಿಕೆಯ ಪುಡಿಯನ್ನು ತಮ್ಮ ಹಲ್ಲುಗಳಿಗೆ ತಿಕ್ಕಿಸಿಕೊಂಡು ಬಾಯೊಳಗಿದ್ದ ಎಲ್ಲಾ ಹಲ್ಲುಗಳನ್ನು ಕರ್ರಗೆ ಹೊಳೆಯುವಂತೆ ಗಿಲಾವು ಮಾಡಿಕೊಳ್ಳುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಬಿತ್ತು. ಬುಡ್ಡಕದರಮ್ಮಜ್ಜಿಯೂ ಕೂಡಾ ಬಲು ಹಿಂದೆ ಇದೇ ಅಲೆಮಾರಿಗಳಿಂದ ತನ್ನ ಹಲ್ಲುಗಳಿಗೆ ಹಲ್ಲಿಟ್ಟು ಹಾಕಿಸಿ ಗಿಲಾವು ಮಾಡಿಸಿಕೊಂಡಿದ್ದಳು.
ನನ್ನ ಅಪ್ಪನ ಅಕ್ಕ ಅಂದರೆ ನನ್ನ ಸೋದರತ್ತೆಯ ಬೆಲ್ಲದಹಳ್ಳಿ ಎಂಬ ಊರಿನಲ್ಲಿಯೂ ಎಲ್ಲಕ್ಕ ಎಂಬ ಕೆಂಪನೆ ಅಜ್ಜಿಯೊಬ್ಬಳು ತನ್ನ ಹಲ್ಲುಗಳನ್ನು ಹಲ್ಲಿಟ್ಟಿನಿಂದ ತಿಕ್ಕಿಕೊಂಡು ಹೊಳೆಯುವ ಕರಿ ಇದ್ದಿಲಿನಂತೆ ಮೆರಗು ಮಾಡಿಕೊಂಡಿದ್ದಳು. ಎಲ್ಲಕ್ಕಜ್ಜಿಯು ವಾರಕ್ಕೊಮ್ಮೆ ಹಲ್ಲಿಟ್ಟಿನ ಪುಡಿಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಳು. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದ ಆ ಬೆನ್ನು ಬಾಗಿದ ಅಜ್ಜಿಯ ಬಳಿ ನಾನೊಂದು ದಿನ ಅದೂ ಇದೂ ಮಾತಾಡುತ್ತಾ ಹಲ್ಲಿಟ್ಟು ಹಾಕಿಸಿಕೊಳ್ಳುವ ಉದ್ದೇಶ ಕುರಿತು ಕೇಳಿದೆ. “ನಾವು ಸದಾ ಕಾಲ ಬದುಕಿನ ಮ್ಯಾಲಿರೋರು…. ಕೆಲಸ ಮಾಡುವಾಗ ಆಸರಿಕೆ ಬ್ಯಾಸರಿಕೆ ಕಳೆಯೋದಕ್ಕೆ ಎಲೆಅಡಕೆ ಹಾಕ್ತೀವಿ… ಸದಾ ಎಲೆಅಡಕೆ ಹಾಕಿ ಹಲ್ಲುಜ್ಕಂಡ್ ಬೆಳ್ಳಗೆ ಮಾಡ್ಕಂಡ್ ಕೂತ್ಕಮಾಕೆ ಸಾಧ್ಯನಾ ನಮಗೆ? ಒಂದೊಂದ್ ಸಲಿ ಬದುಕಿನ ಯಾಳ್ಯದಾಗೆ ನಮ್ಮ ತಿಕ ಕೆರ್ಕಳಕೂ ಸಡುವಿರಾದಿಲ್ಲ. ಅದುಕ್ಕೆ ಇಂಗೆ ಹಲ್ಲಿಟ್ಟು ಹಾಕಸ್ಕಮ್ತೀವಿ” ಅಂದಳು.
ಈಗಿನ ನಾವು ಬಿಳಿಕೂದಲಿಗೆ ಕಪ್ಪು ಡೈ ಹಾಕುವ ರೀತಿಯಲ್ಲಿಯೇ ಆಗಿನ ಕೆಲವು ಮುದುಕ ಮುದುಕಿಯರು ಹಲ್ಲಿಟ್ಟಿನಿಂದ ಹಲ್ಲುಜ್ಜುವುದನ್ನು ನಾನು ನೋಡಿದ್ದೆ. ಈಗಲೂ ನನ್ನ ನೆನಪಿನಿಂದ ಆ ದೃಶ್ಯಗಳು ಮಾಸಿಲ್ಲ. ಆಗಿನ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದು ಮುಖ ತೊಳೆಯುವಾಗ ಮನೆಗಳ ಮಣ್ಣೆಂಟೆಯ ಗೋಡೆಗೆ ನೀರು ಚಿಮುಕಿಸಿ ಬೆರಳಿನಿಂದ ಮಣ್ಣನ್ನು ನಾದಿಕೊಂಡು ಹಲ್ಲುಜ್ಜುವುದು ಅಥವಾ ತೆಂಗಿನ ಕುರಂಬಳೆಯ ಇದ್ದಿಲನ್ನು ಕರಕರನೆ ಜಗಿದು ಬೆರಳಿನಿಂದ ಹಲ್ಲುಜ್ಜುವುದು ಸಾಮಾನ್ಯ ದೃಶ್ಯಗಳಾಗಿದ್ದವು. ಬೇವಿನ ಕಡ್ಡಿಯಿಂದ, ನಂಜನಗೂಡು ಹಲ್ಲುಪುಡಿ ಅಥವಾ ಚಂಪಕಾ ದಂತಚೂರ್ಣದಿಂದ ಹಲ್ಲುಜ್ಜುವುದನ್ನು ಮೇಲ್ವರ್ಗದ ಕಲಿತ ಜನರಲ್ಲಿ ಮಾತ್ರ ನೋಡಬಹುದಾಗಿತ್ತು. ಈಗಿನಂತೆ ಆಗಿನ ಕಾಲದಲ್ಲಿ ದುಬಾರಿ ಬೆಲೆಯ ತರಹೇವಾರಿ ಟೂತ್ ಪೇಸ್ಟು ಬ್ರಶ್ ಗಳು ಹಾಗೂ ದಂತ ಚಿಕಿತ್ಸಾಲಯಗಳು ಮಾರುಕಟ್ಟೆ ಪ್ರವೇಶಿಸಿರಲಿಲ್ಲ. ಆಗಿನ ಜನ ಹಲ್ಲುಗಳ ಬಗ್ಗೆಯಾಗಲೀ ತಲೆಕೂದಲಿನ ಬಗ್ಗೆಯಾಗಲೀ ಅತಿಯಾದ ಎಚ್ಚರಿಕೆ ಮತ್ತು ಆಸಕ್ತಿ ತೋರಿಸುವಂತೆ ಕಾಣಿಸದಿದ್ದರೂ ಅವರು ಮುಪ್ಪಾನು ಮುಪ್ಪಾಗಿ ಸಾಯುವ ದಿನಗಳವರೆಗೂ ತಲೆಕೂದಲು ಕಡುಕಪ್ಪಗೆ ಮತ್ತು ಹಲ್ಲುಗಳು ಸುಭದ್ರವಾಗಿರುವುದನ್ನು ನಾವು ಕಾಣುತ್ತಿದ್ದೆವು.
ಮುದುಕರಿಗಿಂತಲೂ ಹೆಚ್ಚಾಗಿ ಮುದುಕಿಯರು ಮಾತ್ರ ಹಲ್ಲಿಟ್ಟು ತಿಕ್ಕಿಕೊಂಡು ಹಲ್ಲುಗಳನ್ನು ಕರ್ರಗೆ ಮೆರಗುಗೊಳಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆಗಿನ ಅಜ್ಜಿಯರಿಗೆ ಹಲ್ಲುಗಳನ್ನು ಕಪ್ಪುಗೊಳಿಸಿಕೊಳ್ಳುವುದು ಬಹುಶಃ ಫ್ಯಾಷನ್ ಆಗಿರಲಿಲ್ಲ. ವಯೋವೃದ್ಧರಾಗುವತನಕ ಎಲೆಅಡಕೆ ಜಗಿಯಲು ಎಮಕೆ- ಕಾಳುಕಡ್ಡಿ ಮುಂತಾದ ಗಟ್ಟಿ ಪದಾರ್ಥಗಳನ್ನು ಜಗಿಯಲು ಅನುಕೂಲವಾಗುವಂತೆ ಹಲ್ಲುಗಳನ್ನು ಸುಭದ್ರಪಡಿಸಿಕೊಳ್ಳುವುದೇ ಅವರಿಗಿದ್ದ ಮುಖ್ಯ ಉದ್ದೇಶವೆನ್ನಿಸುತ್ತದೆ. ಹಲ್ಲಿಟ್ಟು ಹಾಕಿಸಿಕೊಂಡವರಿಗೆ ಎಂದಿಗೂ ಹುಳುಕುಹಲ್ಲು, ಹಲ್ಲು ಕುಳಿ ಬೀಳುವುದು, ಹಲ್ಲುಗಳ ನಡುವೆ ಸದುವುಗಳಾಗುವುದು ಮುಂತಾದ ಸಮಸ್ಯೆ ಎದುರಾಗುತ್ತಿರಲಿಲ್ಲ. ಫ್ಲೋರೈಡ್ ಯುಕ್ತ ಉಪ್ಪುನೀರು ಸೇವನೆಯ ಪರಿಣಾಮದಿಂದ ಹಲ್ಲುಗಳು ಹಳದಿಗಟ್ಟುವ ಸಮಸ್ಯೆಯೂ ಕಾಣಿಸುತ್ತಿರಲಿಲ್ಲ.
ಇಂದಿಗೂ ನಮ್ಮ ಹಳ್ಳಿಗಳಲ್ಲಿ ಇಂತಹ ಕಪ್ಪು ಹಲ್ಲುಗಳ ಮುದುಕಿಯರು ವಿರಳವಾಗಿ ಕಾಣಸಿಗುತ್ತಾರೆ. ಕೆಲವು ಜನ ತಮ್ಮ ನೆನಪಿಗಾಗಿ ಹಚ್ಚೆ ಹಾಕಿಸುವುದು ಮತ್ತು ಹಲ್ಲಿಗೆ ಹಲ್ಲಿಟ್ಟು ಹಾಕಿಸುವುದು ರೂಢಿಗತ ವಿದ್ಯಮಾನವಾಗಿತ್ತು. “ಸತ್ತಾಗ ನಮ್ಮ ಜೊತೆಗೆ ಯಾರೂ ಬರಲ್ಲ… ಬರೋದೊಂದೇ ಹಚ್ಚೆ ಹಲ್ಲಿಟ್ಟು” ಎಂಬ ಲೋಕರೂಢಿಯ ಮಾತು ಜನಜನಿತವಾಗಿತ್ತು. ಇವತ್ತಿನ ಹೊಸ ತಲೆಮಾರಿನ ಜನರಿಗೆ ಹಲ್ಲಿಟ್ಟು ಅಂದ್ರೆ ಗೊತ್ತೇ ಇಲ್ಲ. ಹಲ್ಲಿಟ್ಟು ಕಣ್ಮರೆಯಾಗಿ ರಾಕ್ಷಸ ಸ್ವರೂಪಿಯಾದ ಟ್ಯಾಟೂ ಸಂಸ್ಕೃತಿ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕವಿಗಳು ಹೆಣ್ಣಿನ ಚಿತ್ತಾಕರ್ಷಕ ಹಲ್ಲುಗಳನ್ನು ದಾಳಿಂಬೆ ಬೀಜಗಳಿಗೆ ಹೋಲಿಸಿದ್ದಾರೆ. ಕೆಂಪು ದಾಳಿಂಬೆ ಬೀಜಗಳನ್ನು ಮತ್ತು ಬಿಳಿಯ ಹಲ್ಲುಗಳನ್ನು ಹೇಗೆ ಒಂದನ್ನೊಂದು ಹೋಲಿಸಿದರೋ ಕಾಣೆ. ಹಲ್ಲಿಟ್ಟು ಹಾಕಿಸಿಕೊಂಡು ಕರ್ರಗೆ ಗಿಲಾವು ಮಾಡಿಕೊಂಡ ಹಲ್ಲುಗಳಂತೂ ಸೀತಾಫಲ ಅಥವಾ ಕಲ್ಲಂಗಡಿ ಹಣ್ಣಿನ ಬೀಜಗಳಂತೆ ಕರ್ರಗೆ ಕಾಣಿಸುತ್ತವೆ.
ಹಿಂದೆ ಪರಕೀಯರು ಮತ್ತು ಕುಲೀನ ರಾಜಮಹಾರಾಜರು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ತಳಸ್ತರ ಸಾಮಾಜಿಕ ವಲಯಗಳ ಹೆಣ್ಣಿನ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ತಡೆಗಟ್ಟಲು ಹಲ್ಲಿಟ್ಟಿನ ಗಿಲಾವು ಮಾಡಿಸಿಕೊಳ್ಳುವ ಉಪಾಯವನ್ನು ಮಹಿಳೆಯರು ಕಂಡುಕೊಂಡಿದ್ದರೆಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಈ ಅಭಿಪ್ರಾಯವನ್ನು ಅಷ್ಟಾಗಿ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಹಲ್ಲಿಟ್ಟು ಹಾಕಿಕೊಳ್ಳುವುದು ವಿಶ್ವಾದ್ಯಂತ ರೂಢಿಯಲ್ಲಿದ್ದ ಪದ್ದತಿಯಾಗಿತ್ತು. ಕೆಲವು ಆದಿವಾಸಿಗಳು ಮತ್ತು ದುಡಿಯುವ ವರ್ಗಗಳ ಮಹಿಳೆಯರಲ್ಲಿ ಈ ಪದ್ದತಿ ಹೆಚ್ಚು ಚಾಲ್ತಿಯಲ್ಲಿತ್ತು. ಹಲ್ಲಿಟ್ಟನ್ನು ಹಾಕಿಸಿಕೊಂಡು ಹಲ್ಲು ಸವಕಳಿ, ಹುಳುಕಲ್ಲು, ದಂತಕುಳಿ, ಸದುವಲ್ಲು, ವಸಡು ಬಾಧೆ, ಹಲ್ಲು ಕೀಸುಗಟ್ಟುವಿಕೆ ಆಗದಂತೆ ಶಾಶ್ವತವಾಗಿ ದಂತ ರಕ್ಷಣೆ ಮಾಡಿಕೊಳ್ಳುವ ಹಾಗೂ ಮಿರುಗುವ ಕಡುಕಪ್ಪು ದಂತಕಾಂತಿಯನ್ನು ಹೊಂದುವ ಸಾಂಪ್ರದಾಯಿಕತೆ ಮತ್ತು ವೈಜ್ಞಾನಿಕತೆಗಳೇ ಹಲ್ಲಿಟ್ಟು ಹಾಕಿಸಿಕೊಳ್ಳುವುದರ ಹಿಂದಿನ ಅಸಲಿ ಕಾರಣವಿರಬೇಕು ಅನ್ನಿಸುತ್ತಿದೆ. ಹಲ್ಲಿಟ್ಟು ಬಳಸಿ ತೊಳೆದ ಬಾಯಿಯು ಸ್ವಚ್ಛವಾಗಿಯೂ ತಾಜಾತನದಿಂದಲೂ ಇರುವುದರಿಂದ ದುರ್ವಾಸನೆಯಿಂದ ಮುಕ್ತವಾಗಿ ಒಳ್ಳೆಯ ಪರಿಮಳ ತುಂಬಿಕೊಳ್ಳುತ್ತದೆಂಬುದು ಹಲ್ಲಿಟ್ಟು ಹಾಕಿಸಿಕೊಂಡವರ ಅನುಭವದ ಮಾತು. ಹಲ್ಲಿಟ್ಟಿನ ಅತಿಯಾದ ಬಳಕೆಯು ಆರೋಗ್ಯದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆಂದು ಹೇಳುತ್ತಾರೆ.
ಈಗಿನ ಆಧುನಿಕ ತರುಣಿಯರಿಗೆ ಬಣ್ಣಗುರುಡುತನ ಜಾಸ್ತಿ. ಸಹಜ ರೂಪವತಿಯರೂ ಕೂಡ ತಮ್ಮ ತುಟಿಗಳಿಗೆ ಬಣ್ಣ ಹಚ್ಚಿಕೊಳ್ಳದೆ ಮನೆಯಿಂದಾಚೆಗೆ ಹೋಗಲು ನಿರಾಕರಿಸುತ್ತಾರೆ. ಅವರಿಗೆ ಬಿಳಿ ಹಲ್ಲುಗಳ ಮೇಲೆಯೇ ಹೆಚ್ಚು ವ್ಯಾಮೋಹ. ಹಲ್ಲಿಟ್ಟಾಕಿ ಹಲ್ಲು ಕಪ್ಪಾಗಿಸಿಕೊಳ್ಳಲು ಇವರು ಒಪ್ಪುವುದಿಲ್ಲ. ಹಲ್ಲು ಮತ್ತು ವಸಡಿನ ಆರೋಗ್ಯಕ್ಕಿಂತಲೂ ಹಲ್ಲು ಬೆಳ್ಳಗಿರೋದು ಮುಖ್ಯ. ಆದುದರಿಂದಲೇ ಈಗಿನವರು ಹಲ್ಲುಗಳು ಥಳಥಳಿಸುವಂತೆ ಬ್ಲೀಚ್ ಮಾಡಿಸಿಕೊಳ್ಳುತ್ತಾರೆ. ಇಂತಹ ಸೌಂದರ್ಯ ವ್ಯಸನದಿಂದ ಸನ್ಯಾಸಿಗಳೂ ಕೂಡಾ ಮುಕ್ತರಾಗಿಲ್ಲವೆಂಬುದಕ್ಕೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರಾವಧೂತ ಮಠದ ಶ್ರೀ ನಂಜಾವಧೂತ ಸ್ವಾಮೀಜಿಯು ತನ್ನ ಹಲ್ಲುಗಳಿಗೆ ಬ್ಲೀಚ್ ಮಾಡಿಸಿಕೊಂಡಿದ್ದಾರೆ. ಆಗಿಂದಾಗ್ಗೆ ಪುರುಷರ ಪಾರ್ಲರ್ ಗೆ ಹೋಗುವ ಪಾರ್ಲರ್ ಸ್ವಾಮೀಜಿಯಾಗಿ ಹೆಸರುವಾಸಿಯಾಗಿದ್ದಾರೆ. ಕೆಲವರಂತೂ ತಮ್ಮ ಹಲ್ಲುಗಳಿಗೆ ಗೋಲ್ಡನ್ ಓವರ್ ಕೋಟ್ ಮಾಡಿಸಿಕೊಂಡಿದ್ದಾರೆ. ಅದು ಅವರವರ ವಯಕ್ತಿಕ ಅಭಿರುಚಿಯೂ ಸ್ವಾತಂತ್ರ್ಯವೂ ಆಗಿರುತ್ತದೆ.
ಹಲ್ಲಿಟ್ಟನ್ನು ದಾಲ್ಚುಣ್ಣ- ಕಾಚು – ಹಸಿರೆಲೆಗಳ ರಸ- ಗಿಡಮೂಲಿಕೆಯ ಪುಡಿಗಳಿಂದ ತಯಾರಿಸುತ್ತಾರೆಂದು ನನ್ನ ಅಪ್ಪ ಹೇಳುತ್ತಿದ್ದದ್ದು ನನಗಿಂದಿಗೂ ನೆನಪಿಗಿದೆ. ನೈಸರ್ಗಿಕ ಸಸ್ಯ ಮೂಲಿಕಾಂಶಗಳಿಂದ ತಯಾರಿಸಲಾದ ಹಲ್ಲಿಟ್ಟು ಹಲ್ಲುಗಳಿಗೆ ಸುರಕ್ಷಿತವೂ ಉಪಯುಕ್ತವೂ ಆಗಿದೆ. ಅದು ಹಲ್ಲುಗಳನ್ನು ಆಳವಾಗಿ ಕಪ್ಪುಗೊಳಿಸುವುದು ಮಾತ್ರವಲ್ಲದೆ ಹಲ್ಲುಗಳ ಕಲೆಗಳು ಮತ್ತೆ ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ. ಹಲ್ಲು ಕಪ್ಪು ಮಾಡುವಿಕೆಯು ಧೂಮಪಾನ ಮತ್ತು ಚಹಾ ಅಥವಾ ಕಾಫಿಯನ್ನು ಕುಡಿಯುವುದರಿಂದ ಉಂಟಾದ ಕಲೆಗಳನ್ನು ಕಾಣದ ರೀತಿಯಲ್ಲಿ ಮರೆಮಾಚುತ್ತದೆ, ಹಳದಿ ಹಲ್ಲುಗಳನ್ನು ಹಲ್ಲಿಟ್ಟು ಸಂಪೂರ್ಣವಾಗಿ ಕಪ್ಪುಗೊಳಿಸುತ್ತದೆ. ಈ ಪುಡಿಯು ಕಪ್ಪು ಬಣ್ಣದ ಪರಿಣಾಮವನ್ನು ವ್ಯಕ್ತಿಯ ಜೀವಿತಾಂತ್ಯದವರೆಗೂ ಕಾಪಾಡಿಕೊಳ್ಳುವಂತಹ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಸರಳ ದೇಶಿ ತಂತ್ರಜ್ಞಾನದಿಂದ ರೂಪಿಸಲಾಗಿರುತ್ತದೆ. ಅದು ಯಾವುದೇ ಹೊಸ ಬಣ್ಣದ ವರ್ಣದ್ರವ್ಯವನ್ನು ಹಲ್ಲುಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ.
ಹಲ್ಲುಗಳನ್ನು ಕಪ್ಪಾಗಿಸಿಕೊಳ್ಳುವುದು ಚೀನಾ, ಪೆಸಿಫಿಕ್ ದ್ವೀಪಗಳು ಮತ್ತು ಆಗ್ನೇಯ ಏಷ್ಯಾದ ಜನರಲ್ಲಿ ಇಂದಿಗೂ ವಿರಳವಾಗಿ ರೂಢಿಗಿದೆ. ದಕ್ಷಿಣ ಚೀನಾದಲ್ಲಿ ಮತ್ತು ಜಪಾನ್ ದೇಶದಲ್ಲಿ ಹಲ್ಲು ಕಪ್ಪಾಗಿಸಿಕೊಳ್ಳುವ ಸಂಪ್ರದಾಯಬದ್ಧ ಆಚರಣೆಗಳಿವೆ. ಹಲ್ಲು ಗಿಲಾವು ಮಾಡಿಕೊಳ್ಳುವುದನ್ನು ಪ್ರಬುದ್ಧತೆ, ಸೌಂದರ್ಯ ವರ್ಧನೆ ಮತ್ತು ನಾಗರಿಕತೆಯ ಸಂಕೇತವೆಂದು ನಂಬಲಾಗಿದೆ. ಕಪ್ಪಾದ ಹಲ್ಲುಗಳು ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತವೆಂಬುದು ಮತ್ತೊಂದು ಸಾಮಾನ್ಯ ನಂಬಿಕೆ. ಇದು ಮುಖ್ಯವಾಗಿ ವಯಸ್ಸಾದ ಮಹಿಳೆಯರಲ್ಲಿ ಪ್ರಚಲಿತದಲ್ಲಿದೆ. 1938 ರಲ್ಲಿ ನಡೆದ ಫ್ರೆಂಚ್ ಸಮೀಕ್ಷೆಯೊಂದರ ಪ್ರಕಾರ ವಿಯೆಟ್ನಾಂ ದೇಶದ 80% ಗ್ರಾಮಾಂತರ ಜನಪದರು ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದಾರೆ. ವಿಯೆಟ್ನಾಂ ಮತ್ತು ಇತರ ಆಗ್ನೇಯ ಏಷ್ಯಾದ ಮಧ್ಯಕಾಲೀನ ರಾಜರು ಸಹ ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದರು. ವಸಾಹತುಶಾಹಿ ಯುಗದಲ್ಲಿ ಪಾಶ್ಚಾತ್ಯ ಸೌಂದರ್ಯದ ಮಾನದಂಡಗಳು ಪರಿಚಯವಾದ ನಂತರದ ಕಾಲದಲ್ಲಿ ಹಲ್ಲಿಟ್ಟು ಗಿಲಾವು ಸಂಸ್ಕೃತಿಯು ಕಣ್ಮರೆಯಾಗುತ್ತಾ ಬಂತು.
ದಕ್ಷಿಣ ಭಾರತದಲ್ಲಿ ಹಲ್ಲುಗಳನ್ನು ಕಪ್ಪಾಗಿಸುವಿಕೆಯು ಲೈಂಗಿಕ ಪರಿಪಕ್ವತೆಗೆ ಸಂಬಂಧಿಸಿದ ಜೀವನ ಚಕ್ರ ಘಟನೆಯಾಗಿ ಮತ್ತು ಲೈಂಗಿಕ ಪ್ರಚೋದಕವಾಗಿ ದೇವದಾಸಿ ಮಹಿಳೆಯರಲ್ಲಿ ಹೆಚ್ಚಾಗಿ ಅಭ್ಯಾಸಕ್ಕೆ ಬಂದಂತಿದೆ. ತಾಂಬೂಲ ಸೇವನೆ ಮತ್ತು ಹಲ್ಲಿಟ್ಟು ಮೆರುಗು ಆರೋಗ್ಯಕರವಾದ ಹಲ್ಲುಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ಲೈಂಗಿಕ ಆಕರ್ಷಣೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಏಷ್ಯಾದ ಇತಿಹಾಸದುದ್ದಕ್ಕೂ ಹಲ್ಲು ಕಪ್ಪಾಗಿಸುವ ಸಾಂಪ್ರದಾಯಿಕ ಜನಪದ ಸಂಸ್ಕೃತಿಯು ಸಾಕಷ್ಟು ಜನಪ್ರಿಯವಾಗಿದೆ.
ಫೋಟೋ : ಅಂತರ್ಜಾಲ
ವಿಡಿಯೋ ನೆರವು : ಅಂಬಿಕಾ ವಾಸುದೇವ್
ಪ್ರಸ್ತುತ ಪೋಸ್ಟ್ ನ ವಿಡಿಯೋ ವಕ್ತೃ : ಸಾವಂತಮ್ಮ (ಸು.70), ಹೆರಗು ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು, ಹಾಸನ ಜಿಲ್ಲೆ.
ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.
ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
-
ದಿನದ ಸುದ್ದಿ5 days ago
ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ
-
ದಿನದ ಸುದ್ದಿ7 days ago
ಅನ್ನಭಾಗ್ಯ ಯೋಜನೆ | ನೇರ ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ
-
ದಿನದ ಸುದ್ದಿ2 days ago
ನೆಲಮಂಗಲ ಸಮೀಪದ ದಾಸನಪುರದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣ : ಸಚಿವ ಶಿವಾನಂದಪಾಟೀಲ್
-
ದಿನದ ಸುದ್ದಿ5 days ago
ಬೆಂವಿವಿ | ಸಂವಹನ ವಿದ್ಯಾರ್ಥಿಗಳಿಂದ ಹೋಳಿ ಸಂಭ್ರಮ
-
ದಿನದ ಸುದ್ದಿ2 days ago
ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
-
ದಿನದ ಸುದ್ದಿ4 days ago
ಕವಿತೆ | ಮತ್ತಿನ ಕುಣಿಕೆ
-
ದಿನದ ಸುದ್ದಿ2 days ago
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ರಾಜ್ಯದ ಶಿಲಾ ಶಾಸನಗಳು ಸೇರ್ಪಡೆ