Connect with us

ಲೈಫ್ ಸ್ಟೈಲ್

ಜಾನುವಾರುಗಳ ಗೆರಸಲು(ಕಾಲು-ಬಾಯಿ ಜ್ವರ) ರೋಗವೂ,.. ಕರುವುಗಲ್ಲಮ್ಮ ದೇವತೆಯೂ..

Published

on

ರೈತರ ಮಕ್ಕಳು ದಯಮಾಡಿ ಈ ಲೇಖನವನ್ನು ತಪ್ಪದೇ ಓದಿರಿ…

  • ಡಾ.ವಡ್ಡಗೆರೆ ನಾಗರಾಜಯ್ಯ

ಮ್ಮದು ರೈತಾಪಿ ಕುಟುಂಬ. ಕೃಷಿ ಕೆಲಸ ಮತ್ತು ಕರಾವಿಗಾಗಿ ನಮ್ಮ ಮನೆಯಲ್ಲಿ ಸದಾ ಒಂದು ಜೊತೆ ನಾಟಿ ಹಸುಗಳು ಮತ್ತು ಕರುಗಳು ಇರುತ್ತಿದ್ದವು. ಅವುಗಳನ್ನು ನಾವು ಸಾಕುತ್ತಿದ್ದೆವು ಎಂಬುದಕ್ಕಿಂತಲೂ ಆ ‘ಜೀವಧನ’ಗಳು ನಮ್ಮನ್ನು ಸಾಕುತ್ತಿದ್ದವು ಎಂದು ಹೇಳಿದರೆ ಸರಿಯಾದೀತು. ಜಾನುವಾರುಗಳನ್ನು ನಮ್ಮ ಪೂರ್ವಿಕರು ‘ಜೀವಧನ’ ಎಂದು ಕರೆದಿರುವುದು ಅನ್ವರ್ಥಕವಾಗಿದೆ.

ಜೀವಧನ ಎಂದರೆ ಜೀವಂತ ಹಣ! ಈ ಜೀವಧನಗಳು ಜೀವಂತ ಹಣ ಮಾತ್ರವಾಗಿರದೆ ಹಣಕ್ಕಿಂತಲೂ ಮಿಗಿಲಾಗಿ ನಮ್ಮ ಜೀವಭಾವದೊಂದಿಗೆ ನಂಟು ಬೆಸೆದುಕೊಂಡಿರುತ್ತಿದ್ದವು. ಜಾನುವಾರುಗಳನ್ನು ನೋಟುಗಳ ರೂಪದ ಆರ್ಥಿಕ ದೃಷ್ಟಿಯಿಂದ ನೋಡುವುದೇ ಅಮಾನವೀಯ ಅನ್ನಿಸುತ್ತದೆ.

ಪುರಾತನ ಕಾಲದ ಚೇಗಿದ ಮರವೊಂದನ್ನು ನಾವು ಹಣದ ರೂಪದಲ್ಲಿ ಬೆಲೆಕಟ್ಟಲು ಹೋದರೆ, ಆ ಮರವು ಇಷ್ಟೂ ದೀರ್ಘ ವರ್ಷಗಳ ಕಾಲ ನೀಡಿದ ನೆರಳು, ಒದಗಿಸಿದ ಆಶ್ರಯ, ಕಣ್ಮನಗಳಿಗೆ ತಂಪು ತುಂಬಿದ ಸೌಂದರ್ಯ, ಪಸರಿಸಿದ ಗಾಳಿಗಮಲು, ಕರುಣಿಸಿದ ಹಣ್ಣುಹಂಪಲು ಮುಂತಾದವುಗಳಿಗೆ ಯಾವ ಬೆಲೆ ಕಟ್ಟಲು ಸಾಧ್ಯ?

ದನಕರು ಕುರಿಮೇಕೆ ಕೋಳಿಗಳನ್ನು ಸಾಕುತ್ತಾ ಅವುಗಳೊಂದಿಗೆ ನಾವು ಬದುಕು ಕಟ್ಟಿಕೊಂಡಿದ್ದೆವು. ಅವುಗಳು ಖಾಯಿಲೆ-ಕಸಾಲೆ ಮುಂತಾದ ಕಾರಣಗಳಿಂದ ಅಕಾಲ ಮರಣಕ್ಕೀಡಾದರೆ ನಮ್ಮದೇ ಕಳ್ಳುಬಳ್ಳಿಯನ್ನು ಕಳೆದುಕೊಂಡಂತೆ ತೀವ್ರ ದುಃಖ ನಮ್ಮನ್ನು ಆವರಿಸುತ್ತಿತ್ತು.

ಜಾನುವಾರುಗಳಿಗೆ ಬಾಧಿಸುವ ಗೆರಸಲು ರೋಗ (ಕಾಲು – ಬಾಯಿ ಜ್ವರ), ಕುಂದು, ಚಪ್ಪೆರೋಗ ಮುಂತಾದವು ಕಾಣಿಸಿಕೊಂಡರಂತೂ ನಮ್ಮ ಕರುಳು ಬಾಯಿಗೆ ಬಂದಂತೆ ನಡುಗಿಹೋಗುತ್ತಿದ್ದೆವು. ಅವುಗಳ ನರಳಾಟ ನೋಡಿ ಕಣ್ಣೀರಾಕುತ್ತಿದ್ದ ನನ್ನ ಅಪ್ಪ, ಊಟ ನೀರು ನಿದ್ದೆ ಎಲ್ಲವನ್ನೂ ಬಿಟ್ಟು ಒದ್ದಾಡುತ್ತಿದ್ದ. ತನಗೆ ತೋಚಿದ ಗಿಡಮೂಲಿಕೆ ಮುಂತಾದ ಮುದ್ದುಗಳನ್ನು ಬಳಸುವುದರ ಜೊತೆಗೆ, ರೋಗಪೀಡಿತ ದನಗಳಿಗೆ ನಾಟಿ ಔಷಧ ನೀಡುವ ಪಂಡಿತರನ್ನು ಹುಡುಕಾಡಿಕೊಂಡು ಅಲೆದಾಡುತ್ತಿದ್ದ.

ತಿಗಳರ ಬೈಲಪ್ಪ, ಬುಡ್ಡೆ ಈರಣ್ಣ, ಮಂತ್ರವಾದಿ ವೆಂಕಟಸ್ವಾಮಯ್ಯ, ಬಡಗಿ ಮುದ್ಧಣ್ಣ ಮುಂತಾದ ಪಂಡಿತರು ನಮ್ಮೂರ ದನಗಳಿಗೆ ನಾಟಿಮದ್ದು ನೀಡುತ್ತಿದ್ದರು. ನಾಟಿಮದ್ದು ಕೊಡಿಸುವುದರ ಜೊತೆಗೆ ಇಂಗ್ಲೀಷ್ ಔಷಧವನ್ನೂ ಕೊಡಿಸಬೇಕೆಂದು ಆಲೋಚಿಸುತ್ತಿದ್ದ ನಾನು, ನಮ್ಮೂರಿನಲ್ಲಿಯೇ ಇದ್ದ ಪಶುಸಂಗೋಪನೆ ಇಲಾಖೆಯ ಸರ್ಕಾರಿ ಪಶು ಚಿಕಿತ್ಸಾಲಯದ ‘ದನಿನ ಡಾಕ್ಟರ್’ ಡಾ.ಹುಲಿಯಪ್ಪನ ಬರುವಿಕೆಗಾಗಿ ದಾರಿ ಕಾಯುತ್ತಾ ಆಸ್ಪತ್ರೆಯ ಬಾಗಿಲಲ್ಲಿ ನಿಲ್ಲುತ್ತಿದ್ದೆ.

ಪುಟಗೋಸಿ ಬಿಗಿಮಾಡಿಕೊಂಡು ಲಾಡಿದಾರದಲ್ಲಿಯೋ ಉಡುದಾರದಲ್ಲಿಯೋ ಕಟ್ಟಿಕೊಂಡಿದ್ದ ಪುಡಿಕಾಸನ್ನು ಔಷಧ ಇಂಜೆಕ್ಷನ್ ಪೌಡರ್ ಮುಂತಾದವುಗಳಿಗಾಗಿ ಅಪ್ಪ ಸುರಿಯುತ್ತಿದ್ದ. ಅಮ್ಮನೂ ತನ್ನ ಕೂಲಿನಾಲಿಯ ದುಡ್ಡನ್ನು ಎಲೆಅಡಕೆಯ ಸಂಚಿಯಿಂದ ತೆಗೆದು ಕೊಡುತ್ತಿದ್ದಳು. ದಿಕ್ಕುದೇವರುಗಳಿಗೆಲ್ಲಾ ಕಾಸಿನ ಮುಡುಪು ಕಟ್ಟಿ ಹರಕೆ ಹೊರುತ್ತಿದ್ದಳು.

ವಿಶೇಷವಾಗಿ ಮುದುಗೆರೆ ಸಪ್ಪಲಮ್ಮ ಹಾಗೂ ಮಚ್ಚೇನಹಳ್ಳಿ(ದನಿನ) ಮಾರಮ್ಮ ದೇವರ ಹೆಸರುಗಳಲ್ಲಿ ಹರಿಷಿಣದ ಬಟ್ಟೆಯಲ್ಲಿ ಮುಡುಪು ಕಟ್ಟಿದ ಕಾಸನ್ನು ದೇವರ ಪಟದ ಮುಂದಿನ ಮೊಳೆ ಅಥವಾ ನಿಲದ(ನೆಲುವು) ನೇಕೆಹುರಿಗಳಿಗೆ ಗಂಟು ಹೂಡುತ್ತಿದ್ದಳು.ಸ್ಥಳೀಯ ದೇವರ ಗುಡಿಗಳಿಗೆ ಹೋಗಿ ಪೂಜೆ ಮಾಡಿಸಿ ತೆಂಗಿನಕಾಯಿಯ ತೀರ್ಥವನ್ನು ದನಗಳ ಮೈಮೇಲೆ, ನಮಗೆ ಮತ್ತು ಕೊಟ್ಟಿಗೆಗೆ ಚುಮುಕಿಸಿ ಎಲ್ಲರ ಹಣೆಗಳಿಗೂ ಬೊಟ್ಟಿಕ್ಕುತ್ತಿದ್ದಳು.

ಗೆರಸಲು ರೋಗ ಅಥವಾ ಕಾಲು- ಬಾಯಿ ಜ್ವರ ಎಂಬ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಒಂದು ರೋಗಗ್ರಸ್ತ ರಾಸಿನಿಂದ ಇನ್ನೊಂದು ಆರೋಗ್ಯವಂತ ರಾಸಿಗೆ ನೇರ ಸಂಪರ್ಕದಿಂದಲೂ, ಮೂತ್ರ ಗಂಜಳದ ವಾಸನೆ ತುಂಬಿಕೊಂಡ ಗಾಳಿಯ ಮೂಲಕವೂ ಹರಡಿಕೊಂಡು ಇಡೀ ಊರಿನ ಜಾನುವಾರುಗಳಿಗೆ ಅತೀ ಶೀಘ್ರವಾಗಿ ಹಬ್ಬಿಬಿಡುತ್ತಿತ್ತು.

ಕಲುಷಿತಗೊಂಡ ಮೇವು ಮತ್ತು ಮಲೆತ ನೀರನ್ನು ಸೇವಿಸುವುದರ ಮೂಲಕವೂ ಗೆರಸಲು ರೋಗಾಣುಗಳು ಹರಡುತ್ತವೆಂಬ ವೈಜ್ಞಾನಿಕ ತಿಳಿವಳಿಕೆ ಇರದಿದ್ದ ನಮ್ಮ ಪೂರ್ವಿಕರು, ಇವೆಲ್ಲವೂ ದೇವರುಗಳೇ ತಂದೊಡ್ಡುವ ದೊಡ್ಡ ರೋಗಗಳೆಂದು ನಂಬಿದ್ದರು.

ನಮ್ಮದು ಚಿಕ್ಕ ಮನೆ. ದನಗಳ ಗ್ವಾಂದಿಗೆ ಎದುರಿನಲ್ಲಿಯೇ ನಾವು ರಾತ್ರಿ ಹೊತ್ತು ಮಲಗಿರುತ್ತಿದ್ದೆವು. ದನಗಳು ಒಮ್ಮೊಮ್ಮೆ ಹಾಯ್ದಾಡುತ್ತಾ ಕೊಂಬುಗಳಿಂದ ಬಡಿದಾಡಿಕೊಂಡರೆ ಸಾಕು ಅಪ್ಪ ದಡಕ್ಕನೆ ಎದ್ದು ಕೂರುತ್ತಿದ್ದ. ಹಾಯ್ದಾಡುವ ದನಗಳನ್ನು ನಾವು ಸಾಕಿದ್ದೇ ಅಪರೂಪ. ನಮ್ಮ ಮನೆಯಲ್ಲಿದ್ದದ್ದು ಹಸುಮಕ್ಕಳಂತಹ ದನಗಳು.

ನಾನು ಒಮ್ಮೊಮ್ಮೆ ನೇರವಾಗಿ ಹಸುವಿನ ಕೆಚ್ಚಲಿಗೆ ಬಾಯಿಹಾಕಿ ಹಾಲು ಕುಡಿಯುತ್ತಿದ್ದೆನು. ನಮ್ಮ ಮನೆಯಲ್ಲಿದ್ದ ದನಗಳು ಅಂತಹ ಸಾಧುಜೀವಿಗಳಾಗಿದ್ದವು. ಇಂಥಾ ಹಸುಗಳಿಗೆ ಗೆರಸಲು ರೋಗ ತಗುಲಿದಾಗ ರೋಗಗ್ರಸ್ತ ರಾಸಿನಲ್ಲಿ ಮೊದಲಿಗೆ ತೀವ್ರ ಜ್ವರ ಕಾಣಿಸುಕೊಂಡು ಮೇವು ತಿನ್ನುವುದನ್ನು ನಿಲ್ಲಿಸಿಬಿಡುತ್ತಿತ್ತು. ಬಾಯಲ್ಲಿ ನೊರೆ ಎಂಜಲು ಸುರಿಸಿಕೊಂಡು ಮೂಗಿನಲ್ಲಿ ಸಿಂಬಳ ಸುರಿಸಿಕೊಂಡು ನೀರನ್ನೂ ಕೂಡಾ ಮುಟ್ಟದೆ ಮೈಕೂದಲು ಮುಳ್ಳೆದ್ದು ನಿಂತುಬಿಡುತ್ತಿತ್ತು.

ನಾವು ಹಾಲಿಂಡುವ ಮಾತಿರಲಿ ಕರುವಿಗೂ ಹಾಲೂಡುವುದನ್ನು ನಿಲ್ಲಿಸುತ್ತಿದ್ದ ಹಸುವಿಗೆ ನೋಡನೋಡುತ್ತಲೇ ಕಾಲು ಕುಂಟು ಬೀಳುತ್ತಿತ್ತು. ಮುಸುಡಿಯ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ಆ ಗುಳ್ಳೆಗಳೊಡೆದು ಬಾಯಿಯ ಜೊಲ್ಲು ವಾಸನೆ ನಮ್ಮ ಮನೆ ತುಂಬಾ ಹರಡಿಕೊಳ್ಳುತ್ತಿತ್ತು. ನನ್ನ ಅಪ್ಪನು ಹಸುವಿನ ಬಾಯಿಯನ್ನು ಭದ್ರವಾಗಿ ಹಿಡಿದು ಕೈಗಳಿಂದ ಮುಸುಡಿಯನ್ನು ವಸಡುಗಳನ್ನೂ ಅಗಲವಾಗಿ ತೆಗೆದು ಬಾಯಿಯ ಮತ್ತು ನಾಲಗೆಯ ಹುಣ್ಣುಗಳನ್ನು ಗಮನಿಸುತ್ತಿದ್ದ.

ವಸಡು ನಾಲಗೆ ಮುಸುಡಿಯ ಮೇಲೆಲ್ಲಾ ಅಲ್ಸರ್ ಬೊಬ್ಬೆಗಳೆದ್ದು ಈರುಳ್ಳಿ ಪೊರೆ ತೆಗೆದಂತೆ ಅಲ್ಸರ್ ಪೊರೆಯುದುರಿದ ಜಾಗಗಳೆಲ್ಲಾ ಕೆಂಪಗೆ ಕಾಣಿಸುತ್ತಿದ್ದವು. ಚಿಕ್ಕ ಮಕ್ಕಳಾಗಿದ್ದ ನಾವು, ನಮ್ಮ ಹಸುವಿಗೆ ಒದಗಿದ ಪಾಡನ್ನು ಕಂಡು ಮನೆ ತುಂಬಾ ಅಳುತ್ತಿದ್ದೆವು. ನಾವು ಎಷ್ಟೇ ಪ್ರಯತ್ನಸಿದರೂ ಆ ಹಸು ಮೇವು ತಿನ್ನಲು ನೀರು ಕುಡಿಯಲು ನಿರಾಕರಿಸುತ್ತಿತ್ತು. ಪಾದಗಳ ಗೊರಸಿನ ಸೀಳುಗಳಲ್ಲಿಯೂ ಹುಣ್ಣುಗಳಾಗಿ ನೊಣ ಸೊಳ್ಳೆ ಜೀರುಂಡೆಗಳು ಕುಳಿತು ಹುಣ್ಣುಗಳು ದೊಡ್ಡ ವ್ರಣಗಳಾಗಿ ಹುಳುಗಳು ಬೀಳುತ್ತಿದ್ದವು. ಕೆಲವೊಮ್ಮೆ ಮೊಲೆತೊಟ್ಟು ಮತ್ತು ಕೆಚ್ಚಲಿಗೂ ಗುಳ್ಳೆಗಳು ಹಬ್ಬುತ್ತಿದ್ದವು.

ಅಪ್ಪನು ಬೆಟ್ಟ ಗುಡ್ಡ ಬಯಲು ಅಲೆದಾಡಿ ಲೋಳೆಸರ (ಆಲೋವೆರಾ) ತಂದು ಬೆಂಬೂದಿಯಲ್ಲಿ ಸುಟ್ಟು, ಹಿಂಡಿ ತೆಗೆದ ರಸವನ್ನು ದನಗಳ ಬಾಯಿ ನಾಲಗೆ ವಸಡು ಗೊರಸುಗಳ ಮೇಲೆ ಸವರಿ ಬಿಳಿ ಪಾವುಡದಲ್ಲಿ ಒರೆಸುತ್ತಿದ್ದ. ಗೊರಸಿನ ಗಾಯಗಳನ್ನು ಬಿಸಿನೀರಿನಲ್ಲಿ ತೊಳೆದು, ಸೀಳುಗಳಿಗೆ ಹೊಂಗೆಣ್ಣೆ, ಹಿಪ್ಪೆ ಎಣ್ಣೆ ಅಥವಾ ಬೇವಿನೆಣ್ಣೆ ಸುರಿಯುತ್ತಿದ್ದೆವು ಕೋಳಿಪುಕ್ಕ ಅಥವಾ ಗರಿಕೆ ಎಸಳನ್ನು ಬೇವಿನೆಣ್ಣೆಯಲ್ಲಿ ಅದ್ದಿ ಸೀಳುಸೀಳಿಗೂ ಹಚ್ಚಿದರೆ ನೊಣ ಕೂರುತ್ತಿರಲಿಲ್ಲ.

ಗುಡಾಣದಲ್ಲಿ ಬಿಸಿನೀರು ಕಾಯಿಸಿ ಮೈತೊಳೆಯುತ್ತಿದ್ದೆವು. ಬಲು ಎಚ್ಚರದಿಂದ ದನದ ಕೊಟ್ಟಿಗೆಯಲ್ಲಿ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿ ಧಗಧಗಿಸುವ ಜ್ವಾಲೆಯ ಮೇಲೆ ಬೇವಿನಸೊಪ್ಪು ಲಕಲಿಸೊಪ್ಪು ತಂಗಡಿಸೊಪ್ಪು ಕಕ್ಕೆಸೊಪ್ಪು ಮುಂತಾದ ನಾಲ್ಕಾರು ಬಗೆಯ ಹಸಿರು ತೊಪ್ಪಲು ಹಾಕಿ ಉರಿಸಿ ಹೊಗೆ ತುಂಬಿಸಿ, ಹಸಿರೆಲೆ ಹೊಗೆಯ ಕಾವಿನಲ್ಲಿ ದನಗಳನ್ನು ನಿಲ್ಲಿಸುತ್ತಿದ್ದೆವು.

ಗೆರಸಲು ರೋಗದಿಂದ ನಮ್ಮ ಹಸುಗಳು ನರಳುವಾಗ ಅಮ್ಮನು ಮೂರ್ನಾಲ್ಕು ಸೇರಿನಷ್ಟು ಹುರುಳಿಕಾಳನ್ನು ನೀರಿನಲ್ಲಿ ನೆನೆಸಿ, ರುಬ್ಬು ಗುಂಡಿನಿಂದ ರುಬ್ಬಿ ಹುರುಳಿಕಾಳಿನ ಹಾಲನ್ನು ಸೋಸಿಕೊಡುತ್ತಿದ್ದಳು. ಕೆಲವೊಮ್ಮೆ ರಾಗಿ ಅಂಬಲಿಯನ್ನು ಕಾಯಿಸಿ ತಂದುಕೊಡುತ್ತಿದ್ದಳು. ಅಪ್ಪ ಅದೆಲ್ಲವನ್ನೂ ಬಿದಿರಿನ ಗೊಟ್ಟದಿಂದ ದನಗಳಿಗೆ ಕುಡಿಸುತ್ತಿದ್ದ. ಸ್ವಲ್ಪ ಚೇತರಿಕೆ ಕಾಣಿಸಿದಾಗ ಹಸಿ ಹುಲ್ಲು, ಹುರುಳಿ ಹೊಟ್ಟು, ತೊಗರಿ ಹೊಟ್ಟು, ಅವರೆ ಹೊಟ್ಟು, ಸಾವೆ ಹುಲ್ಲು, ಆರಕದ ಹುಲ್ಲು, ಕೊರಲೆ ಹುಲ್ಲು ಮುಂತಾದ ಮೆತ್ತನೆ ಮೇವನ್ನು ತಿನ್ನಿಸುತ್ತಿದ್ದ.

ನಾನು ನನ್ನ ಅಕ್ಕ ಮತ್ತು ತಮ್ಮಂದಿರು ಹಸಿ ಹುಲ್ಲನ್ನು ಹೊಲಮಾಳದಲ್ಲಿ ಕಿತ್ತು ತರುತ್ತಿದ್ದೆವು. ಅಂತೂ ಇಂತೂ ನಾಟಿಮದ್ದು, ಇಂಗ್ಲೀಷ್ ಮದ್ದು, ದೇಶಿಜ್ಞಾನದ ಚಿಕಿತ್ಸೆ, ಮೆತ್ತನೆಯ ಮೇವು ಮುಂತಾದ ಆರೈಕೆಗಳು ಫಲಿಸಿ ನಮ್ಮ ದನಗಳು ಮತ್ತೆ ಹೊಸ ಜೀವಕಳೆ ತುಂಬಿಕೊಳ್ಳುತ್ತಿದ್ದವು.ನಮ್ಮ ಮುಖದಲ್ಲೂ ನಗು ತರಿಸಿ ಬದುಕಿಗೆ ಕಳೆ ತುಂಬುತ್ತಿದ್ದವು.

ಇಲ್ಲಿ ನನ್ನದೇ ಅನುಭವಗಳನ್ನು ದಾಖಲಿಸಲು ನನಗೆ ಪ್ರೇರಣೆ ನೀಡಿದ್ದು ನಾನು ಇತ್ತೀಚೆಗೆ ಸಂಶೋಧಿಸಿದ ಒಂದು ಜಾನಪದ ಸ್ಥಳಪುರಾಣ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ದೇವರತೋಪು ಎಂಬ ಗ್ರಾಮದಲ್ಲಿರುವ ಕರುವುಗಲ್ಲಮ್ಮ ಎಂಬ ಗೋಕಲ್ಲನ್ನು ಕುರಿತ ಈ ಸ್ಥಳಪುರಾಣವು ಹದಿಮೂರು ಶತಮಾನಗಳಷ್ಟು ಹಿಂದಕ್ಕೆ ಸರಿಯುತ್ತದೆ. ಜಯಮಂಗಲಿ ನದಿಯ ತಟದಲ್ಲಿರುವ ದೇವರತೋಪು ಗ್ರಾಮದ ಪುರಾತನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅಂಗಳದಲ್ಲಿರುವ ಕರುವುಗಲ್ಲು ಆ ಊರಿನ ಹುಟ್ಟಿನ ಕಥೆಯನ್ನು ಹೇಳುತ್ತದೆ.

ಸೀಮಾಂಧ್ರದ ರಾಯಲಸೀಮಾ ಕರ್ನೂಲು ಜಿಲ್ಲೆಯ ಆಹೋಬಲಂ ಮೂಲದ ವೈಷ್ಣವ ಪಂಥೀಯ ಕಾಪುರೆಡ್ಡಿ ಸಮುದಾಯದ ಕೆಲವು ಕುಟುಂಬಗಳು ಆರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ದಕ್ಷಿಣ ಮಾರ್ಗವಾಗಿ ಮಧುಗಿರಿ ಸೀಮೆಗೆ ವಲಸೆ ಬಂದರು. ಕಡಪ – ಕದಿರಿ ಮಾರ್ಗವಾಗಿ ಪಿನಾಕಿನಿ ನದಿಯ ತೋಳುಗಳನ್ನಿಡಿದು ತಮ್ಮ ವಲಸೆ ದಾರಿಯನ್ನು ಮುಂದುವರೆಸಿ ನಡೆಯುತ್ತಿರುವಾಗ ಪಿನಾಕಿನಿಯು ಮೈದುಂಬಿದಳು.

ಕುಲದೇವತೆಯಾದ ಆಹೋಬಲ ನರಸಿಂಹಸ್ವಾಮಿಯ ಹೆಸರೆತ್ತಿ ಪೂಜಿಸಿದ ಅವರು, ಪಿನಾಕಿನಿಯನ್ನು ಪ್ರಾರ್ಥಿಸಲು ಮೈದುಂಬಿ ಹರಿಯುತ್ತಿದ್ದ ಅವಳು ಬಂಡಿಜಾಡಿನಷ್ಟು ಓಣಿಯನ್ನು ಬಿಟ್ಟು ಹರಿದಳು. ಬಂಡಿಗಳು ಸಾಗಲು ಬಂಡಿಜಾಡಿನಷ್ಟು ಅಗಲ ಅವಕಾಶ ನೀಡಿದ ಪಿನಾಕಿನಿಗೆ ಕೈಮುಗಿದು ಪ್ರಯಾಣ ಮುಂದುವರೆಸಿದ ಕಾಪುರೆಡ್ಡಿಗಳು ದೊಡ್ಡದಾಳವಟ್ಟ ಎಂಬ ಊರಿನ ಸಮೀಪಕ್ಕೆ ಬಂದು ತಲುಪಿದಾಗ ಸಂಜೆಯಾಗಿತ್ತು.

ಬಂಡಿಗೆ ಹೂಡಿದ್ದ ಬಿಳಿ ಎತ್ತೊಂದು ಸತ್ತ ಕಾರಣ ಬಿಳಿ ಎತ್ತುಗಳ ಬಂಡಿಗಳಲ್ಲಿದ್ದ ಕುಟುಂಬದವರೆಲ್ಲರೂ ಅಲ್ಲಿಯೇ ಹಳ್ಳದ ದಿಡ್ಡೆಯಲ್ಲಿ ನೆಲೆಸಬೇಕೆಂದು ಹಾಗೂ ಕರಿ ಎತ್ತಿನ ಬಂಡಿಗಳ ಕುಟುಂಬಗಳು ತಮ್ಮ ಪ್ರಯಾಣವನ್ನು ಮುಂದಕ್ಕೆ ಬೆಳೆಸಬೇಕೆಂದು ತೀರ್ಮಾನಿಸಲಾಯಿತು. ಬಿಳಿ ಎತ್ತಿನ ಬಂಡಿಯ ಕುಟುಂಬಗಳು ಅಲ್ಲಿಯೇ ನೆಲೆಸಿ ತಮ್ಮ ಕುಲದೇವತೆ ನರಸಿಂಹಸ್ವಾಮಿಯ ಗುಡಿಯನ್ನು ಕಟ್ಟಿಕೊಂಡರು.

ಕರಿ ಎತ್ತಿನ ಬಂಡಿಯಲ್ಲಿದ್ದ ಕಾಪುರೆಡ್ಡಿ ಕುಟುಂಬದವರು ಕೊಡಿಗೇನಹಳ್ಳಿ ಹತ್ತಿರದ ತೋಪಿಗೆ ಬಂದಾಗ ಜಯಮಂಗಲಿಯು ಮೈದುಂಬಿ ಹರಿಯುತ್ತಿದ್ದಳು. ಆ ರಾತ್ರಿ ಅಲ್ಲಿಯೇ ಒಲೆಗುಂಡು ಹೂಡಿ ಅಟ್ಟುಂಡು ಬೆಳಗಾದಾಗ ಪ್ರಯಾಣ ಮುಂದುವರಿಸಲೆಂದು ಬಂಡಿಹೂಡಲು ಹೋದಾಗ ಕರಿ ಎತ್ತೊಂದು ತಾನು ಕಳೆದುಕೊಂಡ ಬಿಳಿ ಎತ್ತನ್ನು ನೆನೆದು ದುಃಖಿಸುತ್ತಾ ಮೇವು ನೀರು ಸೇವಿಸುವುದನ್ನು ನಿರಾಕರಿಸಿತು.

ಜ್ವರ ಬಂದು ಬಂಡಿಯ ನೊಗಕ್ಕೆ ಹೆಗಲು ಕೊಡಲೊಪ್ಪದೆ ಪಡಾವು ಮಲಗಿಬಿಟ್ಟಿತು. ಆಗ ಬಿಳಿ ಎತ್ತಿನ ನೆನಪಿಗಾಗಿ ಬೆಣಚುಕಲ್ಲಿನ ಬಿಳಿ ಗೋಕಲ್ಲನ್ನು ತಂದು ನಿಲ್ಲಿಸಲು ದುಃಖ ಮರೆತ ಆ ಎತ್ತು ಲವಲವಿಕೆಯಿಂದ ಮೇವುಕಚ್ಚಿ ನೊಮರು ಹಾಕಿತು. ಮೈದುಂಬಿ ಹರಿಯುತ್ತಿದ್ದ ಜಯಮಂಗಲಿ ನದಿಯ ದಂಡೆಯಲ್ಲಿ ತಮ್ಮ ಕುಲದೇವತೆಯಾದ ಲಕ್ಷ್ಮೀನರಸಿಂಹಸ್ವಾಮಿಯ ಹೆಸರೆತ್ತಿ ಪೂಜಿಸಿ ಅವನಿಗೊಂದು ಗುಡಿಯನ್ನು ಕಟ್ಟಿ ಅಲ್ಲಿಯೇ ನೆಲೆಸಿದರು.

ಮುಂದೆ ಕರಿ ಎತ್ತು ತೀರಿಕೊಂಡಾಗ ಅದನ್ನು ಅಲ್ಲಿಯೇ ಸಮಾಧಿ ಮಾಡಿದರು. ಅಂದು ಸಮಾಧಿಗುಡ್ಡೆಯ ಗುರುತಿಗೆ ನೆಟ್ಟ ಗೋಕಲ್ಲು ಅಂದಿನಿಂದಲೂ ಕರುವುಗಲ್ಲಮ್ಮ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಿದೆ. ಇಲ್ಲಿನ ಸುತ್ತೇಳು ಊರುಗಳ ರೈತಾಪಿಗಳು ತಮ್ಮ ಜಾನುವಾರುಗಳಿಗೆ ಶ್ರೇಯಸ್ಕರವಾಗಲೆಂದು ಹಾಗೂ ಜಾನುವಾರುಗಳಿಗೆ ರೋಗರುಜಿನಗಳು ಬಂದಾಗ ಈ ಗೋಕಲ್ಲಿಗೆ ಹರಕೆ ಹೊತ್ತು ಪೂಜಿಸುತ್ತಿದ್ದಾರೆ. ಕರಿ ಗೋಕಲ್ಲಿನ ಪಕ್ಕದಲ್ಲಿಯೇ ಬಿಳಿ ಗೋಕಲ್ಲು ಕೂಡಾ ಇದೆ. ಇದು ಸ್ಥಳಪುರಾಣ.

ದಕ್ಷಿಣ ಕರ್ನಾಟಕದ ಬಹುತೇಕ ಊರುಗಳಲ್ಲಿ ಕರುವುಗಲ್ಲಮ್ಮ ಹೆಸರಿನಿಂದ ಪೂಜಿಸುವ ಗೋಕಲ್ಲುಗಳಿವೆ. ಜಾನುವಾರುಗಳಿಗೆ ಗೆರಸು ರೋಗ (ಕಾಲು – ಬಾಯಿ ಜ್ವರ) ಬಂದಾಗ, ಪ್ರತಿ ಕುಟುಂಬದ ರೈತರು ಕರುವುಗಲ್ಲಮ್ಮನ ಮೇಲೆ ಕೊಡಗಟ್ಟಲೆ ನೀರು ಸುರಿದು ಪೂಜಿಸುತ್ತಾರೆ. ನೀರು ಹರಿದ ದಾರಿಗುಂಟ ಬುರುದೆಯಲ್ಲಿ ತಮ್ಮ ಜಾನುವಾರುಗಳನ್ನು ಮೂರು ಸುತ್ತು ಓಡಾಡಿಸುತ್ತಾರೆ.

ಆಶ್ಚರ್ಯವೆಂಬಂತೆ ಗೊರಸಿನ ಸಂದಿಯಲ್ಲಿ ಹುಣ್ಣುಗಳಾಗಿ ಹುಳು ತುಂಬಿದ ಗೋಪಾದಗಳು ಬುರುದೆ ತುಂಬಿಕೊಂಡು ಹುಳು-ಹುಣ್ಣು ನೀಗಿಕೊಂಡು ಗೆಲುವಾಗುತ್ತಿದ್ದವು. ಮುಸುಡಿಮೂತಿ ನಾಲಗೆಯ ಹುಣ್ಣುಗಳೂ ವಾಸಿಯಾಗಿ ಮೇವು ತಿಂದು ಲವಲವಿಕೆಯಿಂದ ನೊಮರು ಹಾಕುತ್ತಿದ್ದವು. ಪಶು ಸಂಗೋಪನೆ ಇಲಾಖೆಯ ‘ದನಿನ ಡಾಕ್ಟರ್’ ದೇವತೆಗಳಿಗೂ ಸ್ಥಳೀಯ ನಾಟಿಔಷಧಿ ಪಂಡಿತ ದೇವತೆಗಳಿಗೂ ನಮಸ್ಕಾರ. ಈಗಿನ ಖಾಯಿಲೆ ಮತ್ತು ದೇವರ ಸ್ವರೂಪ ಬೇರೆ ಬೇರೆಯೇ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

Published

on

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರಡ್‍ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ.

ತರಬೇತಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ತರಬೇತಿ ವಸತಿಯುತವಾಗಿದ್ದು, ಉಚಿತ ಊಟ, ವಸತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದು ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending