Connect with us

ಬಹಿರಂಗ

CAA, NRC, NPR ಭಾರತದ ಎದೆ ಸೀಳುವ ತ್ರಿಶೂಲ : ಮೋದಿ-ಶಾ ಕಾರ್ಖಾನೆಯ ಹತ್ತು ಮಹಾ ಸುಳ್ಳುಗಳು

Published

on

ಮೋದಿ ಸರಕಾರದ ಭಾರತದ ಎದೆ ಸೀಳುವ ಕ್ರಮಗಳಾದ CAA, NRC, NPR ಕುರಿತುಸಿಪಿಐ(ಎಂ) ಸದ್ಯದಲ್ಲೇ ಪ್ರಕಟಿಸಲಿರುವ ಪುಸ್ತಿಕೆಯ ಸಾರಾಂಶಇಲ್ಲಿದೆ. ಇವುಗಳ ವಿರುದ್ಧತೀವ್ರ ಪ್ರತಿಭಟನೆಯ ನಂತರ ಈ ಕುರಿತು ಮೋದಿ ಸರಕಾರ ಹರಿಯಬಿಟ್ಟಿರುವ ಹತ್ತು ಮಹಾ ಸುಳ್ಳುಗಳನ್ನು ಬಯಲು ಮಾಡಿ ಸತ್ಯ ಸಂಗತಿಯನ್ನುಈ ಪುಸ್ತಿಕೆಯಲ್ಲಿ ವಿವರಿಸಲಾಗಿದೆ. ಇಲ್ಲಿ ಹತ್ತು ಮಹಾ ಸುಳ್ಳುಗಳು ಮತ್ತುಚುಟುಕಾದ ಉತ್ತರವಿದೆ.

ಮೋದಿ ಸರಕಾರವು ಭಾರತದ ಎದೆಯನ್ನೇ ಸೀಳಲು ಇರಿದಿರುವ ತ್ರಿಶೂಲದ ಮೂರು ಅಲಗುಗಳೆಂದರೆ : ಪೌರತ್ವತಿದ್ದುಪಡಿ ಕಾಯಿದೆ(CAA), ನಾಗರಿಕರ ರಾಷ್ಟ್ರೀಯ ರಿಜಿಸ್ಟರ್(NRC) ಮತ್ತುರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್(NRC). ರಾಷ್ಟ್ರೀಯ ಜನ ಸಂಖ್ಯಾ ರಿಜಿಸ್ಟರ್ (ಎನ್.ಪಿ.ಆರ್) ನ್ನು ಸಮಕಾಲೀನಗೊಳಿಸಲು ತಕ್ಷಣತಯಾರಿ ನಡೆಸಲುಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಸಿಪಿಐ(ಎಂ) ಬಲವಾಗಿ ವಿರೋಧಿಸಿದ ಪೌರತ್ವ ತಿದ್ದುಪಡಿಕಾಯಿದೆ (ಸಿಎಎ) ಮಂಜೂರಾದ ನಂತರ, ಪೌರತ್ವ ಹಕ್ಕುಗಳಿಗೆ ಕೋಮುವಾದಿ ಬಣ್ಣಕೊಡುವ ಚೌಕಟ್ಟು ಸಾಧಿಸುವತ್ತ ಇದು ಎರಡನೇ ಅಪಾಯಕಾರಿ ಹೆಜ್ಜೆ.

ಆಸ್ಸಾಂಒಪ್ಪಂದದಚಾರಿತ್ರಿಕ ಸನ್ನಿವೇಶದಿಂದಾಗಿ ಸಿಎಎ ಮತ್ತುಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಂದ ಈಶಾನ್ಯ ಭಾರತದ ಪ್ರದೇಶಗಳನ್ನು ಹೊರಗಿಡಬೇಕೆಂಬುದು ಸಿಪಿಐ(ಎಂ) ನಿಲುವು. ಪೌರತ್ವತಿದ್ದುಪಡಿ ಮಸೂದೆ (ಸಿಎಬಿ) ಗೆ ಇದನ್ನುತಿದ್ದುಪಡಿಯಾಗಿ ಸಿಪಿಐ(ಎಂ) ಸೂಚಿಸಿತ್ತು. ಆದರೆಅದನ್ನು ಸರಕಾರ ತಿರಸ್ಕರಿಸಿದೆ. ಆಸ್ಸಾಂಒಪ್ಪಂದದದಲ್ಲಿ ಪೌರತ್ವಕ್ಕೆ 1971ರ ಗಡುವನ್ನು ನಿಗದಿ ಪಡಿಸಲಾಗಿದೆ. ಅದರ ನಂತರ ಬಂದವರ ನಡುವೆ ಮತಧರ್ಮದಆಧಾರದ ಮೇಲೆ ಯಾವುದೇತಾರತಮ್ಯ ಮಾಡಲಾಗಿಲ್ಲಎಂಬುದು ಗಮನಿಸಬೇಕಾದಅರ್ಥಪೂರ್ಣ ಅಂಶ. ಸಿಎಎ ಆಸ್ಸಾಂಒಪ್ಪಂದದ ನೇರ ಹಲ್ಲೆ ನಡೆಸುತ್ತದೆ ಮತ್ತು “ವಿದೇಶೀಯರ” ಪ್ರಶ್ನೆಗೆ ಕೋಮುವಾದಿ ಆಯಾಮವನ್ನು ಸೇರಿಸುತ್ತದೆ.

ಈಗ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ವ್ಯಕ್ತವಾಗಿರುವುದರಿಂದ ಮೊದಿ-ಶಾ ಜೋಡಿತಮ್ಮ ಸುಳ್ಳಿನ ಸಾಮೂಹಿಕ ಉತ್ಪಾದನೆಯ ಫ್ಯಾಕ್ಟರಿಗಳನ್ನು ಕೆಲಸಕ್ಕೆ ಹಚ್ಚಿದ್ದಾರೆ. ಹಿಟ್ಲರನಜರ್ಮನಿಯಲ್ಲಿ ನಾಜೀ ಪ್ರಚಾರದ ನೀತಿಯೊಂದನ್ನುಇಲ್ಲಿ ನೆನಪಿಸಿಕೊಳ್ಳಬಹುದು : “ಒಂದು ಸುಳ್ಳನ್ನು ಸಾವಿರ ಬಾರಿ ಹೇಳುತ್ತಾ ಹೋದರೆಅದು ಸತ್ಯವಾಗುತ್ತದೆ”. ಅದೇ ಮೋದಿ ಸರಕಾರದ ನೀತಿ ಸಹ ಆಗಿದೆ. ಆದ್ದರಿಂದ ಈ ಮೋದಿ ಸರಕಾರದ ಪ್ರತಿಯೊಂದು ಸುಳ್ಳನ್ನು ಬಯಲುಪಡಿಸಬೇಕಾಗಿದೆ.ಅವರ ಸುಳ್ಳಿನ ಪಟ್ಟಿ ದಿನೇ ಹೆಚ್ಚುತ್ತಲೇಇದೆ.

ಇಲ್ಲಿಯವರೆಗಿನ ಹತ್ತು ಮಹಾ ಸುಳ್ಳುಗಳು ಹೀಗಿವೆ 

ಮಹಾಸುಳ್ಳು 1 : ಸಿಎಎ ಕಾಯಿದೆಯಲ್ಲಿ ತಾರತಮ್ಯವಿಲ್ಲ. ಕಿರುಕುಳಕ್ಕೊಳಗಾದವರ ನೆರವಿಗೆ ಧಾವಿಸುವುದು ಭಾರತದ ಸಂಸ್ಕøತಿ. ಯಾವ ಭಾರತೀಯ ನಾಗರಿಕನಿಗೂ ಇದರಿಂದ ತೊಂದರೆಯಾಗುವುದಿಲ್ಲ.

ಸತ್ಯ ಸಂಗತಿ : ಭಾರತೀಯ ಪೌರತ್ವಕಾಯಿದೆ 1955ರ ಪ್ರಕಾರ ಭಾರತೀಯ ನಾಗರಿಕನಾಗುವಐದು ವಿಧಾನಗಳಲ್ಲಿ (ಹುಟ್ಟಿನಿಂದ, ತಂದೆ-ತಾಯಿ ನಾಗರಿಕತ್ವದಿಂದ, ನೆಲೆಸುವಿಕೆಯಿಂದ, ರಿಜಿಸ್ಟರ್ ಮಾಡುವ ಮೂಲಕ, ಪ್ರದೇಶದ ಸೇರಿಸುವಿಕೆಯಿಂದ) ಮತಧರ್ಮದ ಅಥವಾ ಇನ್ಯಾವುದೇ ಆಧಾರದ ಮೇಲೆ ಯಾವುದೇತಾರತಮ್ಯವಿರಲಿಲ್ಲ. ಇದು ಪೌರತ್ವಕ್ಕೆ ಮತಧರ್ಮ ಸೇರಿದಂತೆಯಾವುದೇ ನೆಲೆಯಲ್ಲಿ ತಾರತಮ್ಯ ಮಾಡದಿರುವ ನಮ್ಮ ಸಂವಿಧಾನದ ಆಶಯಕ್ಕೆ ಅನುಗುಣವಾಗಿದೆ. ಸಿಎಎ ಮೂರು ವಿಧದ ತಾರತಮ್ಯವನ್ನು ಸೇರಿಸಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದೆ. ನೆರೆಯ ದೇಶಗಳಲ್ಲಿ ಮೂರು ದೇಶಗಳ – ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ– ವಲಸೆಗಾರರಿಗೆ ಬೇರೆ ನಿಯಮಗಳನ್ನು ರೂಪಿಸಿದೆ.

ಈ ಮೂರು ದೇಶಗಳ ವಲಸೆಗಾರರಲ್ಲೂ ಮುಸ್ಲಿಮರನ್ನು ಹೊರಗಿಡಲಾಗಿದೆ. ಈ ಮೂರು ದೇಶಗಳ ಮುಸ್ಲಿಮೇತರ ವಲಸೆಗಾರರಿಗೆ ಪೌರತ್ವಕ್ಕೆ ಅರ್ಹತೆಯ ಅವಧಿಯನ್ನು ಇತರರಿಗೆ ಇರುವ 11 ವರ್ಷಗಳಿಂದ 5 ವರ್ಷಕ್ಕೆ ಕಡಿತಗೊಳಿಸಲಾಗಿದೆ. ಕಿರುಕುಳಕ್ಕೊಳಗಾದವರ ಮತ್ತು ನಿರಾಶ್ರಿತರ ನೆರವಿಗೆಧಾವಿಸುವುದು ಸರಿಯಾದ್ದೇ. ಆದರೆಅಲ್ಲೂ ಮತಧರ್ಮ, ದೇಶ, ಭಾಷೆಗಳ ಆಧಾರದಲ್ಲಿ ತಾರತಮ್ಯ ತೋರಲಾಗಿದೆ.

ಶ್ರೀಲಂಕಾದಲ್ಲಿ ಧಾರ್ಮಿಕ, ಭಾಷೆಎರಡೂ ನೆಲೆಗಳಲ್ಲಿ ತಾರತಮ್ಯ ಕಿರುಕುಳ ತಾಳಲಾರದೆ ಭಾರತದಲ್ಲಿ ದಶಕಗಳಿಂದ ನೆಲೆಸಿರುವ ಹತ್ತಾರು ಲಕ್ಷ ತಮಿಳರನ್ನು ಹೊರಗಿಡಲಾಗಿದೆ. ಪಾಕಿಸ್ತಾನದಲ್ಲಿಧಾರ್ಮಿಕ ತಾರತಮ್ಯಕ್ಕೊಳಗಾಗಿರುವ ಶಿಯಾ, ಅಹಮದೀಯ ಮುಂತಾದ ಅಲ್ಪಸಂಖ್ಯಾತರನ್ನೂ, ಮ್ಯಾನ್ಮಾರಿನರೋಹಿಂಗ್ಯ ಮುಸ್ಲಿಮರ ನೆರವಿಗೆಧಾವಿಸದಿರುವುದು ಭಾರತೀಯ ಸಂಸೃತಿಯ ಘನತೆ ಮತ್ತು ಸಂವಿಧಾನದ ಆಶಯ ಎರಡಕ್ಕೂತಕ್ಕುದಲ್ಲ.

ಮಹಾಸುಳ್ಳು 2 : ವಲಸಿಗ ಸಮುದಾಯಗಳನ್ನು ಹಿಂದೆಬೆಂಬಲಿಸಿದ ಕಾಂಗ್ರೆಸ್ ಮತ್ತು ಸಿಪಿಐ(ಎಂ) (20ನೇ ಮಹಾಧಿವೇಶನದ ನಿರ್ಣಯ ಮತ್ತು ಆಗಿನ ಪ್ರಧಾನ ಕಾರ್ಯದರ್ಶಿಯ ಪತ್ರದಲ್ಲಿ ದಾಖಲಿಸಿದಂತೆ) ಪಕ್ಷಗಳು ಈಗ ಮತಬ್ಯಾಂಕ್ ರಾಜಕೀಯದಿಂದಾಗಿ ಈ ತಿದ್ದುಪಡಿಯನ್ನು ವಿರೋಧಿಸುತ್ತಿವೆ.

ಸತ್ಯ ಸಂಗತಿ : ಕಿರುಕುಳಕ್ಕೊಳಗಾದವರಿಗೆ ನಿರಾಶ್ರಿತರಾದವರಿಗೆ ಆಶ್ರಯಕೊಡಬೇಕೆಂಬುದು ಯಾವತ್ತೂ ಕಮ್ಯುನಿಸ್ಟ್, ಎಡ ಚಳುವಳಿಗಳ, ಸಿಪಿಐ(ಎಂ) ಪಕ್ಷದ ನಿಲುವಾಗಿತ್ತು.1947ರ ದೇಶ ವಿಭಜನೆ ಮತ್ತು 1971ರ ಪಾಕಿಸ್ತಾನಿ ಮಿಲಿಟರಿ ಸರಕಾರದ ದೌರ್ಜನ್ಯಗಳ ಬಲಿಪಶುಗಳಾದ ಈಗಿನ ಬಾಂಗಾದೇಶದ ನಿರಾಶ್ರಿತರಿಗೆ ನೆಲೆ ಒದಗಿಸಲು ಪೌರತ್ವ ಕೊಡಲು ಸಿಪಿಐ(ಎಂ)ಹೋರಾಡಿತ್ತು. ಮಾತ್ರವಲ್ಲ ನಿರಾಶ್ರಿತರಾಗಿ ಬಂದು ನೆಲೆಸಿದ ನಾಮಶೂದ್ರರಿಗೆದಲಿತ ಸ್ಥಾನಮಾನವನ್ನೂ ಪಶ್ಚಿಮ ಬಂಗಾಳದಲ್ಲಿ ಒದಗಿಸಿತ್ತು. ಅವರು ನೆಲೆಸಿದ ಇತರ ರಾಜ್ಯಗಳಲ್ಲೂ ಈ ಸ್ಥಾನಮಾನ ಸಿಗುವಂತೆ ಹೋರಾಟ ನಡೆಸಿತ್ತು.

ಆದರೆಯಾವತ್ತೂ ಮತಧರ್ಮದ ಅಥವಾ ಇನ್ಯಾವುದೇ ಆಧಾರದ ಮೇಲೆ ತಾರತಮ್ಯದ ನೀತಿಯನ್ನು ಬೆಂಬಲಿಸಿರಲಿಲ್ಲ. ಸಿಎಬಿ ಗೆ ಸಿಪಿಐ(ಎಂ) ಮಂಡಿಸಿದ ತಿದ್ದುಪಡಿಯಲ್ಲಿ ನಿರಾಶ್ರಿತರಿಗೆ ವಲಸಿಗರಿಗೆ ಆಶ್ರಯಕೊಡುವಲ್ಲಿ ತಾರತಮ್ಯವನ್ನು ತೆಗೆದು ಹಾಕುವ ತಿದ್ದುಪಡಿಗಳನ್ನು ಮಂಡಿಸಿತ್ತು. ಈಗ ಮೊಸಳೆ ಕಣ್ಣೀರು ಹಾಕುವ ಆರೆಸ್ಸೆಸ್ ಆಗ ಬಂಗಾಳದ ನಿರಾಶ್ತಿತರ ಬಗ್ಗೆ ಮೌನವಾಗಿತ್ತು.ಬಿಜೆಪಿ ಆಡಳಿತದ ಯು.ಪಿ, ಉತ್ತರಾಖಂಡ, ಮಧ್ಯಪ್ರದೇಶದ ಬಿಜೆಪಿ ಸರಕಾರಗಳು ನಾಮಶೂದ್ರರಿಗೆ ದಲಿತ ಸ್ಥಾನಮಾನಕೊಡುವುದಕ್ಕೆ ನಿರಾಕರಿಸಿದ್ದವು.

ಮಹಾಸುಳ್ಳು 3 :ಸಿಎಎ (ಪೌರತ್ವತಿದ್ದುಪಡಿಕಾಯಿದೆ) ಗೂ ಎನ್.ಆರ್.ಸಿ.(ನಾಗರಿಕರರಾಷ್ಟ್ರೀಯರಿಜಿಸ್ಟರ್)ಗೂ ಯಾವುದೇ ಸಂಬಂಧವಿಲ್ಲ. ಅವುಗಳು ಪ್ರತ್ಯೇಕವಾದುವುಗಳು. ವಿರೋಧ ಪಕ್ಷಗಳು ಇವೆರಡರ ನಡುವೆತಪ್ಪಾಗಿ ಸಂಬಂಧಕಲ್ಪಿಸುತ್ತಿವೆ.

ಸತ್ಯ ಸಂಗತಿ :ಸಿಎಎ ಗೂ ಎನ್.ಆರ್.ಸಿ. ಗೂ ಸಂಬಂಧ ಕಲ್ಪಿಸಿರುವುದು ಗೃಹಮಂತ್ರಿಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷಜೆ ಪಿ ನಡ್ಡಾಅವರು, ವಿರೋಧ ಪಕ್ಷಗಳಲ್ಲ. ಈ ವರ್ಷವೇಏಪ್ರಿಲ್ ನಲ್ಲಿ ಬಂಗಾಳದಲ್ಲಿ ಮತ್ತುಡಿಸೆಂಬರ್ 9 ರಂದು ಪಾರ್ಲಿಮೆಂಟಿನಲ್ಲಿ ಮಾಡಿದ ಹೇಳಿಕೆಗಳಲ್ಲಿ ಅಮಿತ್ ಶಾ ಮತ್ತುಡಿಸೆಂಬರ್ 19 ರಂದುಜೆ ಪಿ ನಡ್ಡಾ ಹೇಳಿಕೆಗಳಿಂದ ಬಿಜೆಪಿಯ ಈ ಹುನ್ನಾರ ಸ್ಪಷ್ಟ. ಸಿಎಎ ಮುಸ್ಲಿಮೇತರ ‘ನಿರಾಶ್ರಿತ’ರಿಗೆ ನಾಗರಿಕತ್ವಕೊಡುತ್ತದೆ. ಎನ್. ಆರ್.ಸಿ. “ನುಸುಳುಕೋರರ”ನ್ನು ಗುರುತಿಸುತ್ತದೆ. ಸಿಎಎ ನಲ್ಲಿ ಹೊರಗಿಟ್ಟ ಮುಸ್ಲಿಮರನ್ನು “ನುಸುಳುಕೋರರ”ನ್ನಾಗಿ ಮಾಡಿ ಹೊರಗಟ್ಟುವುದು ಬಿಜೆಪಿಯ ಹುನ್ನಾರ

ಮಹಾಸುಳ್ಳು 4 : ಡಿಸೆಂಬರ್ 22ರ ದೆಹಲಿ ರ್ಯಾಲಿಯಲ್ಲಿ “ತಮ್ಮ ಸರಕಾರ 2014ರಲ್ಲಿ ನನ್ನ ಸರಕಾರಕ್ಕೆಅಧಿಕಾರಕ್ಕೆ ಬಂದಾಗಿನಿಂದ ಎನ್.ಆರ್.ಸಿ ಬಗ್ಗೆ ಎಲ್ಲೂಯಾವುದೇಚರ್ಚೆ ನಡೆದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸತ್ಯ ಸಂಗತಿ : ಜೂನ್20, 2019 ರ ಸದನಗಳ ಜಂಟಿಅಧಿವೇಶನಕ್ಕೆಅಧ್ಯಕ್ಷರು ಮಾಡಿದ ಭಾಷಣದಲ್ಲಿ, ನವೆಂಬರ್ 21, 2019ರಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿಎನ್.ಆರ್.ಸಿ ಬಗ್ಗೆ ಸ್ಪಷ್ಟಉಲ್ಲೇಖವಿದೆ. ಮಾತ್ರವಲ್ಲ, ಎನ್.ಆರ್.ಸಿಜಾರಿಯ ಬಗ್ಗೆ ಕೇಂದ್ರ ಸರಕಾರದ ಮಂತ್ರಿಗಳ 9 ಅಧಿಕೃತ ಹೇಳಿಕೆಗಳಿವೆ. ಇವೆಲ್ಲ ಹೇಳಿಕೆಗಳನ್ನು ಕೇಂದ್ರ ಸಂಪುಟದಲ್ಲಿ ಯಾವುದೇ ಚರ್ಚೆಯಿಲ್ಲದೆ ಮಾಡಲಾಗಿದೆಯೇ?

ಮಹಾಸುಳ್ಳು 5 :ಎನ್.ಆರ್.ಸಿ. ಪ್ರಕ್ರಿಯೆ ಕಾನೂನು ಪ್ರಕಾರಈವರೆಗೆ ಸ್ಥಾಪಿತವಾಗಿಲ್ಲ ಮತ್ತು ವಿರೋಧ ಪಕ್ಷಗಳು ಸುಳ್ಳುಗಳನ್ನು ಹರಡುತ್ತಿವೆ ಎಂದು ಪ್ರಧಾನಿ ಮೋದಿ, ಅವರ ಸಂಪುಟ ಸಚಿವರುಗಳು, ಪಕ್ಷದವಕ್ತಾರರು ಹಾಗೂ ಬಾಲಡುಕ ಮಾಧ್ಯಮ ಮಿತ್ರರು ವಿರೋಧ ಪಕ್ಷಗಳನ್ನು ದೂರುತ್ತಿದ್ದಾರೆ. “ದೇಶದಾದ್ಯಂತ ಎನ್.ಆರ್.ಸಿ ಪ್ರಕ್ರಿಯೆಯನ್ನು ಈ ವರೆಗೆ ಅಧಿಸೂಚಿತಗೊಳಿಸಿಲ್ಲ ಮತ್ತುಯಾರೂ ಈ ಕುರಿತು ಹೆದರಬೇಕಾಗಿಲ್ಲ.” ಎಂದು ಗೃಹ ಖಾತೆಯರಾಜ್ಯ ಮಂತ್ರಿ ಜಿ. ಕಿಶನ್ರೆಡ್ಡಿ ಹೇಳಿಕೆ ನೀಡಿದ್ದಾರೆ.

ಸತ್ಯ ಸಂಗತಿ : ಎನ್.ಆರ್.ಸಿ. ಪ್ರಕ್ರಿಯೆಯನ್ನು ಕಾನೂನು ಪ್ರಕಾರ ಸ್ಥಾಪಿಸಲು ವಾಜಪೇಯಿ ಸರಕಾರದ ಅವಧಿಯಲ್ಲಿ ಗೃಹ ಮಂತ್ರಿ ಎಲ್.ಕೆ.ಅಡ್ವಾಣಿ ಅವರಿಂದ ಮಂಡಿತವಾಗಿ 2003ರಲ್ಲಿ ಅಂಗೀಕೃತವಾಯಿತು. ಇದಕ್ಕಾಗಿ ಪ್ರತ್ಯೇಕ ಕಾನೂನು ರಚನೆಯಾಗಿಲ್ಲ. ಬದಲಿಗೆ, ಭಾರತ ಪೌರತ್ವಕಾಯಿದೆ 1955ಗೆ ತಿದ್ದುಪಡಿಮಾಡಲಾಗಿದೆ. ಎನ್.ಆರ್.ಸಿ.ಜಾರಿಗೆ ನಿಯಮಾವಳಿಯನ್ನು ಸಹ ರಚಿಸಿ 2003ರಲ್ಲೇ ಅಂಗೀಕರಿಸಲಾಗಿದೆ.

ಮಹಾಸುಳ್ಳು 6 : ಎನ್.ಆರ್.ಸಿ. ಪ್ರಕ್ರಿಯೆ ಇ್ಲನ್ನೂ ಆರಂಭವಾಗಿಲ್ಲ ಮತ್ತು ಆ ಕುರಿತು ಯಾವುದೇ ಅಧಿಸೂಚನೆಯೂ ಇಲ್ಲ.

ಎನ್.ಆರ್.ಸಿ.ಜಾರಿಗೆ ನಿಯಮಾವಳಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ರಾಷ್ಟ್ರೀಯ ಜನಸಂಖ್ಯಾರಿಜಿಸ್ಟರ್ (ಎನ್.ಪಿಆರ್.) ಪ್ರಕ್ರಿಯೆಯೊಂದಿಗೆ ಆರಂಭವಾಗುತ್ತದೆಎಂದು ಸ್ಪಷ್ಟವಾಗಿ ಹೇಳಲಾಗಿದೆ. ಎನ್.ಪಿ.ಆರ್. ಪ್ರಕ್ರಿಯೆ ಮುಗಿದ ನಂತರ ಅದರ ಆಧಾರದ ಮೇಲೆ ಎನ್.ಆರ್.ಸಿ.ರಚಿಸಲಾಗುವುದು. ಎನ್.ಪಿ.ಆರ್. ಮತ್ತುಎನ್.ಆರ್.ಸಿ ನಡುವಿನ ಸಂಬಂಧದ ಬಗ್ಗೆ ಕೇಂದ್ರ ಗೃಹ ರಾಜ್ಯ ಮಂತ್ರಿಜುಲೈ 23, 2014ರಲ್ಲಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಎನ್.ಪಿ.ಆರ್. ಪ್ರಕ್ರಿಯೆ ಆರಂಭಿಸಲುಜುಲೈ 31, 2019ರಂದು ಅಧಿಸೂಚನೆ ಹೊರಡಿಸಲಾಗಿದೆ.

ಮಹಾಸುಳ್ಳು 7 : ಎನ್.ಆರ್.ಸಿ. (ಪೌರತ್ವರಿಜಿಸ್ಟರ್)ಗೂ ಎನ್.ಪಿ.ಆರ್. (ಜನಸಂಖ್ಯಾರಿಜಿಸ್ಟರ್)ಗೂ ಏನೂ ಸಂಬಂಧವಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಎನ್.ಪಿ.ಆರ್ ಹೆಚ್ಚಿನ ಪ್ರಶ್ನೆಗಳೊಂದಿಗೆ ಸಮಕಾಲೀನಗೊಳಿಸುವ ಕೇಂದ್ರ ಸಂಪುಟದ ನಿರ್ಧಾರದ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ಎನ್.ಪಿ.ಆರ್. ಜನಗಣತಿಯ ಉದ್ದೇಶಕ್ಕೆ ಮಾತ್ರವಿದೆ. ಎನ್.ಆರ್.ಸಿ. ಅಥವಾ ಪೌರತ್ವಕ್ಕೂ ಅದಕ್ಕೂಯಾವುದೇ ಸಂಬಂಧವಿಲ್ಲ. ಆದ್ದರಿಂದ ಭಾರತೀಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ವಿರೋಧ ಪಕ್ಷಗಳು ಯಾಕೆ ಹೇಳುತ್ತಿವೆ ಎಂದುಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಹೇಳಿದ್ದಾರೆ.

ಸತ್ಯ ಸಂಗತಿ :ಗೃಹ ಸಚಿವಾಲಯದ2018-19 ವಾರ್ಷಿಕ ವರದಿಯಅಧ್ಯಾಯ 15 ಪಾರಾ 15.40 ಎನ್.ಪಿ.ಆರ್ ಮತ್ತು ಎನ್.ಆರ್.ಸಿ. (ಅಂದರೆ ಪೌರತ್ವದ) ಗಳ ಸಂಬಂಧದ ಬಗೆಗ ಸ್ಪಷ್ಟವಿದೆ. ಎನ್.ಪಿ.ಆರ್ ಮತ್ತು ಜನಗಣತಿಯನ್ನು ಜನಗಣತಿ ಅಧಿಕಾರಿಗಳು ನಡೆಸುತ್ತಾರೆಎಂದು ಬಿಟ್ಟರೆ ಅವೆರಡಕ್ಕೆ ಸಂಬಂಧವಿಲ್ಲ. ಎನ್.ಪಿ.ಆರ್. ಪ್ರಶ್ನಾವಳಿಯಲ್ಲಿ ಹಿಂದಿನ 15 ಪ್ರಶ್ನೆಗಳಿಗೆ ಆರು ಹೊಸ ಪ್ರಶ್ನೆಗಳÀನ್ನು ಸೇರಿಸಲಾಗಿದೆ. ತಂದೆ, ತಾಯಿ ಹುಟ್ಟಿದತಾರೀಕು, ಸ್ಥಳಗಳ ಮತ್ತುಆಧಾರ್ ಬಗ್ಗೆ ಬಗ್ಗೆ ಕೇಳಲಾಗಿದ್ದು, ಇವನ್ನುಎನ್.ಆರ್.ಸಿ. ಮತ್ತು ಪೌರತ್ವಕ್ಕೆ ಸಂಬಂಧಿಸಿ ಕೇಳಲಾಗುತ್ತಿದೆ.

ಮಹಾಸುಳ್ಳು 8 :ಯಾವುದೇ ಭಾರತೀಯ ಭಯಪಡುವಂಥದ್ದೇನಿಲ್ಲ.

ಸತ್ಯ ಸಂಗತಿ :ಎಲ್ಲಾ ಸಮುದಾಯಗಳ ಬಡವರು ಮತ್ತು ಅಂಚಿಗೆ ತಳ್ಳಲ್ಲಪಟ್ಟವರು ಭಯ ಪಡುವಂಥದ್ದು ಖಂಡಿತ ಇದೆ. ತಂದೆ, ತಾಯಿ ಹುಟ್ಟಿದತಾರೀಕು, ಸ್ಥಳಗಳ ಮಾಹಿತಿ ಒದಗಿಸುವುದು ಹೆಚ್ಚಿನ ಶಾಶ್ವತ ಸೂರುಇಲ್ಲದ, ನೆರೆ ಬರ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ, ಆಗಾಗ ವಲಸೆ ಹೋಗುವ ಅನಕ್ಷರಸ್ಥ ಬಡವರಿಗೆ ಕಷ್ಟಕರ ವಿಷಯ. ಇದು ಆಸ್ಸಾಂನಲ್ಲಿ ನಡೆದಎನ್.ಆರ್.ಸಿ. ಪ್ರಕ್ರಿಯೆಯ ಅನುಭವ ಕೂಡಾ. ಸಾಲದ್ದಕ್ಕೆ ಬಯೋಮೆಟ್ರಿಕ್ ಕೊಡಬೇಕಾಗಿದೆ.

ಬಯೋಮೆಟ್ರಿಕ್ ಮತ್ತು ಆಧಾರ್ ಮ್ಯಾಚಿಂಗ್ ಹಲವು ಕಾರಣಗಳಿಗೆ ವಿಫಲವಾಗುವುದು ಸಹ ವ್ಯಾಪಕವಾದ ಬಡವರ ಅನುಭವ. ಇದರಿಂದಾಗಿ ರೇಶನ್, ರೇಗಾ ಕೂಲಿ ಕಳೆದುಕೊಂಡ ಲಕ್ಷಾಂತರ ಬಡವರ ದೃಷ್ಟಾಂತಗಳಿವೆ. ಮುಂದಿನ ಹಂತದಲ್ಲಿ ಅಧಿಕಾರಿಗಳು ಕೇಳಿದರೆ ತಂದೆ-ತಾಯಿಗಳ ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸಬೇಕು.

ಆಸ್ಸಾಂ ಎನ್.ಆರ್.ಸಿ ಪ್ರಕ್ರಿಯೆ ಸ್ಪಷ್ಟ ಪಡಿಸಿದಂತೆ ಸಾಮಾನ್ಯಗುರುತಿನ ದಾಖಲೆ (ಜನ್ಮಪತ್ರ, ಆಧಾರ್, ವೋಟರ್ಐಡಿ, ಪಾನ್ಕಾರ್ಡ್, ಪಾಸ್ ಪೋರ್ಟ್) ಸಾಕಾಗುವುದಿಲ್ಲ. ತಂದೆತಾಯಿ ಇಬ್ಬರದಾಖಲೆ ಬೇಕಾಗುತ್ತದೆ. ಆದ್ದರಿಂದಲೇಎನ್.ಪಿ.ಆರ್-ಎನ್.ಆರ್.ಸಿ. ಪ್ರಕ್ರಿಯೆ ಬಗ್ಗೆ ವ್ಯಾಪಕ ಭಯ ಉಂಟಾಗಿದೆ. ಇದು ಬಿಜೆಪಿ ಸರಕಾರದ ನೋಟು ನಿಷೇಧ ಮುಂತಾದಕ್ರೂರ ಕ್ರಮಗಳ ಹಿಂದಿನ ರೆಕಾರ್ಡಿನಿಂದ ಬಂದಸಹಜ ವಾಸ್ತವಿಕ ಭಯ.

ಇನ್ನೊಂದು ಕಾರಣಕ್ಕಾಗಿ ಮೋದಿ ಸರಕಾರ ಝಳಪಿಸುತ್ತಿರುವ ಸಿಎಎ-ಎನ್.ಪಿ.ಆರ್-ಎನ್.ಸಿ.ಆರ್ ಎಂಬ ಮೂರು ಅಲಗುಗಳ ತ್ರಿಶೂಲದ ಬಗ್ಗೆ ಚರಿತ್ತೆಯಿಂದ ಪಾಠಕಲಿತಎಲ್ಲಾ ಪ್ರಜ್ಞಾವಂತ ನಾಗರಿಕರು ಭಯ ಪಡಬೇಕಾಗಿದೆ. ನಾಜಿವಾದಿ ಮಾದರಿಯನ್ನು ಹಂತ ಹಂತವಾಗಿ ಕಾಪಿ ಹೊಡೆದು ಸಾಗಿರುವ ಸಂಘ ಪರಿವಾರದ ‘ಹಿಂದೂರಾಷ್ಟ್ರ’ದ ಯೋಜನೆಯಲ್ಲಿ ಈ ಕಾನೂನುಗಳ ತ್ರಿಶೂಲ ವಹಿಸಬಹುದಾದ ಪಾತ್ರದ ಬಗ್ಗೆ ಭಯ ಪಡಬೇಕಾಗಿದೆ. 1935ರಲ್ಲಿ ನಾಜಿಗಳು ತಂದ ಕುಪ್ರಸಿದ್ಧ ‘ನ್ಯುರೆಂಬರ್ಗ್ ಕಾನೂನುಗಳು’ ಒಂದೇ ಏಟಿಗೆಯೆಹೂದಿಯರ ಪೌರತ್ವ ಕಸಿದುಕೊಂಡು ಅವರನ್ನು ಯಾವುದೇ ಹಕ್ಕುಗಳಿಲ್ಲದ ಎರಡನೇದರ್ಜೆಯ ನಾಗರಿಕರನ್ನಾಗಿ ಮಾಡಿದ್ದವು.

ಕೊನೆಗೆ ಇದು 60 ಲಕ್ಷಯೆಹೂದಿಯರ ಸಾಮೂಹಿಕ ಬಂಧನ, ಯಾತನಾ ಶಿಬಿರಗಳಲ್ಲಿ ದೌರ್ಜನ್ಯ ಮತ್ತುಅವರ ನರಮೇಧದಲ್ಲಿ ಕೊನೆಗೊಂಡಿತ್ತು. ಇದು ಇಡೀ ಜರ್ಮನ್ ದೇಶದಲ್ಲಿ ಫ್ಯಾಸಿಸ್ಟ್ ಆಡಳಿತ ಸ್ಥಾಪಿಸುವಲ್ಲಿ, ಜನತೆಯನ್ನು ಫ್ಯಾಸಿಸ್ಟ್ ಕ್ರೌರ್ಯದ ಮತ್ತು ಯುದ್ಧದ ಉನ್ಮಾದದಲ್ಲಿ ಮುಳುಗಿಸಿ, ಎರಡನೇ ಮಹಾಯುದ್ಧಕ್ಕೆ ಮತ್ತುಜರ್ಮನರು ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಕ ವಿನಾಶ ನರಮೇಧಗಳಿಗೆ ಕಾರಣವಾಗುವುದರಲ್ಲಿ ತನ್ನದೇ ಪಾತ್ರ ವಹಿಸಿತ್ತು.

ನಾಜಿಗಳು ಒಂದೇ ಏಟಿಗೆ ತಂದ ಕುಪ್ರಸಿದ್ಧ ‘ನ್ಯುರೆಂಬರ್ಗ್ ಕಾನೂನುಗಳು’ ಮಾಡಿದ ಪರಿಣಾಮವನ್ನು ಮೋದಿ ಸರಕಾರ ಹಂತ ಹಂತವಾಗಿ ಈ ಕಾನೂನುಗಳ ತ್ರಿಶೂಲದಿಂದ ಸಾಧಿಸುವ ಹಠತೊಟ್ಟಿರುವಂತೆ ಕಾಣುತ್ತದೆ ಎನ್ನುವ ಭಯ ಸಹಜವಾಗಿಯೇ ಉಂಟಾಗುತ್ತಿದೆ.

ಮಹಾಸುಳ್ಳು 9 :ದೇಶದಎಲ್ಲೂ ಬಂಧನ ಕೇಂದ್ರಗಳು ಇಲ್ಲಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಸತ್ಯ ಸಂಗತಿ : ಕಾನೂನುಬಾಹಿರ ವಲಸೆಗಾರರು ಮತ್ತು ವಿದೇಶಿ ಅಪರಾಧಿಗಳನ್ನು ಇಡಲು ಬಂಧನ ಕೇಂದ್ರಗಳನ್ನು ಕಟ್ಟುವಂತೆ
ಜನವರಿ 9, 2019ರಂದು ಕೇಂದ್ರ ಸರಕಾರ ಸರಕಾರ ನಿರ್ದೇಶನ ನೀಡಿದೆ(ಮಾಹಿತಿ ಮೂಲ : ಡಿಸೆಂಬರ್ 11, 2019 ರಾಜ್ಯ ಸಭೆಯಲ್ಲಿ ಗೃಹ ರಾಜ್ಯ ಸಚಿವರಉತ್ತರ). ಆಸ್ಸಾಂ ನಲ್ಲಿ 6 ಬಂದನ ಕೇಂದ್ರಗಳಿವೆ. ಅದರಲ್ಲಿ 988 “ವಿಧೇಶಿಯರು” ಇದ್ದು 28 ಬಂಧಿತರು ಸತ್ತಿದ್ದಾರೆ ಎಂದು ನವೆಂಬರ್ 2019ರಲ್ಲಿ ಪ್ರಶ್ನೋತ್ತರದಲ್ಲಿ ಗೃಹ ರಾಜ್ಯ ಸಚಿವರ ಹೇಳಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಬಂಧನಕೇಂದ್ರಕಟ್ಟುವ ಕೆಲಸ ಆರಂಭವಾಗಿದೆ.

ಮಹಾಸುಳ್ಳು 10 : ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಲಾಗಿಲ್ಲ. ವ್ಯಾಪಕ ಪ್ರತಿಭಟನೆ ನಡೆದಿರುವದೆಹಲಿ, ಯುಪಿ ಮತ್ತುಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೋಲಿಸರು ಗೋಲಿಬಾರು ಮಾಡಿಲ್ಲ.

ಸತ್ಯ ಸಂಗತಿ :ಬಹುಪಾಲು ಭಾರೀ ಪ್ರತಿಭಟನಾ ಪ್ರದರ್ಶನಗಳು ಶಾಂತಿಯುತವಾಗಿ ನಡೆದಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಪೋಲಿಸರದಮನ ಕ್ರಮಗಳಿಂದ ಕೆಲವು ಹಿಂಸಾಕೃತ್ಯಗಳು ಜರುಗಿವೆ.ಜಾಮಿಯಾ ಮಿಲಿಯ, ಅಲಿಘರ್, ದೆಹಲಿ ವಿವಿ ಗಳಲ್ಲಿ ಪೋಲಿಸರ ದೌರ್ಜನ್ಯಗಳು ಮುಗಿಲು ಮುಟ್ಟಿವೆ. ಯು.ಪಿ. ಒಂದೇ 21 ಜನ ಗೋಲಿಬಾರಿನಲ್ಲಿ ಸತ್ತಿದ್ದಾರೆ. ದಿನೇ ಈ ಸಂಖ್ಯೆ ಹೆಚ್ಚುತ್ತಿದೆ. ಆದರೆ ಪೋಲಿಸ್ ಗೋಲಿಬಾರು ಮಾಡಿರುವುದನ್ನೇ ನಿರಾಕರಿಸಿದ್ದಾರೆ.

ಪೋಲಿಸರು ಪ್ರತಿಭನಾಕಾರರು ಮತ್ತು ಮಾಯಕ ನಾಗರಿಕರ ಮೇಲೆ ಗೋಲಿಬಾರು ಮಾಡಿರುವುದು, ಬೇಕಾಬಿಟ್ಟಿ ದೌರ್ಜನ್ಯಗಳನ್ನು ಎಸಗಿರುವುದು, ತಾವೇ ವಿಧ್ವಂಸಕ ಕೃತ್ಯಗಳಲಿ ತೊಡಗಿರುವುದು – ದಿನೇ ಈ ಬಗ್ಗೆ ವಿಡಿಯೋ ಪುರಾವೆಗಳು ಹೊರ ಬರುತ್ತಿವೆ. ಆಸ್ಸಾಂನಲ್ಲಿ 5, ಕರ್ನಾಟಕದಲ್ಲಿ ಇಬ್ಬರು ಗೋಲಿಬಾರಿನಲ್ಲಿ ಸತ್ತಿದ್ದಾರೆ. ಯುಪಿ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ಕಲಮು 144 ಹೇರುವ ಮೂಲಕ ನಿಷೇಧಿಸಿದ್ದು ಮತ್ತು ಪ್ರತಿಭಟನಾಕಾರರನ್ನು ಉದ್ರೇಕಿಸಿದ್ದು ಈಗ ನಡೆದಿರುವ ಸೀಮಿತ ಹಿಂಸಾಚಾರಕ್ಕೆಕಾರಣ.

ಕೃಪೆ : ಜನಶಕ್ತಿ ಮೀಡಿಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

Trending