ದಿನದ ಸುದ್ದಿ
ಬದಲಾದ ಸನ್ನಿವೇಶದಲ್ಲಿ ಹೀಗಿರಲಿ ಶಿಕ್ಷಣ ಪದ್ಧತಿ; ಮಗುವಿನ ಜೀವ ಮತ್ತು ಜೀವನ ಎರಡಕ್ಕೂ ಸಿಗಲಿ ಸಮಾನ ಆದ್ಯತೆ
- ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ
ಇಡೀ ಭೂ ಖಂಡಕ್ಕೆ ವಕ್ಕರಿಸಿರುವ ಕೊರೋನಾ ವಿಷ ಪೀಡೆಯ ಹಾವಳಿಯಿಂದ ಇಂದು ಎಲ್ಲವೂ ಅಯೋಮಯವಾಗಿದೆ. ಈ ವಿಷವರ್ತುಲದಲ್ಲೇ ಬದುಕು ಸವೆಸುವುದು ಸರ್ವರಿಗೂ ಅನಿವಾರ್ಯವಾಗಿದೆ. ಬಹುಕಾಲದಿಂದ ಅಸ್ತಿತ್ವದಲ್ಲಿದ್ದ ನಮ್ಮ ಧೀಮಂತ ಶಿಕ್ಷಣ ವ್ಯವಸ್ಥೆಯೂ ಸಹ ಇದರಿಂದ ಹೊರತಾಗಿಲ್ಲ. ಪ್ರಸ್ತುತ ಸಂದಿಗ್ಧ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ನೇರವಾಗಿ ಚಾಲನೆ ಕೊಡುವ ಬಗ್ಗೆ ಎಲ್ಲರಲ್ಲೂ ಜಿಜ್ಞಾಸೆ ಇದೆ.
ಹೇಗೋ ಶಾಲೆಗಳು ಪುನರಾರಂಭವಾದರೂ, ಈ ಮೊದಲಿನಂತೆ ಶಿಕ್ಷಣದ ರಥವನ್ನ ಎಳೆಯುವುದು ಪ್ರಾಯಾಸದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ಸಂಬಂಧಿಸಿದ ರಾಜ್ಯ ಸರಕಾರಗಳು ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿರುವುದು ಒಂದಷ್ಟು ವಿಶ್ವಾಸ ಮೂಡಿಸಿದ್ದರೂ, ಅವುಗಳ ಜಾರಿ ಮತ್ತು ಪಾಲನೆ ಅಷ್ಟು ಸರಾಗದ ಕೆಲಸವಲ್ಲ. ಶಾಲೆಗಳು ಆರಂಭವಾದ ನಂತರ ಸರಕಾರದ ಮಾರ್ಗಸೂಚಿಗಳ ಜೊತೆಗೆ, ಕೈಗೊಳ್ಳಬಹುದಾದ ಇನ್ನಿತರ ಉಪಕ್ರಮಗಳನ್ನು ಕುರಿತು ಒಂದು ಅವಲೋಕನ ಇಲ್ಲಿದೆ.
ಹಿರಿದಾಗಬೇಕಿದೆ ಪೋಷಕರ ಪಾತ್ರ
ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ನಾಣ್ಣುಡಿಯಂತೆ ಬದಲಾದ ಶೈಕ್ಷಣಿಕ ದಿನಗಳಲ್ಲಿ ಪೋಷಕರು ಸಹ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿ ಹೊರಳಬೇಕಿದೆ. ಈ ಮೊದಲು ಶಿಕ್ಷಕ-ಪಠ್ಯವಸ್ತು–ವಿದ್ಯಾರ್ಥಿ ಕೇಂದ್ರಿತವಾಗಿದ್ದ ತ್ರಿಸೂತ್ರದ ಶಿಕ್ಷಣ ವ್ಯವಸ್ಥೆ ಇಂದು ಪೋಷಕರನ್ನೂ ಒಳಗೊಂಡು ಚತುರ್ ಸೂತ್ರವಾಗಬೇಕಿದೆ. ಶಾಲಾವಧಿಯನ್ನು ಕಡಿತಗೊಳಿಸುವ ಬಗ್ಗೆ ಈಗಾಗಲೇ ಉನ್ನತ ಮಟ್ಟದ ಚಿಂತನೆ ನಡೆಯುತ್ತಿರುವುದರಿಂದ, ಇನ್ನು ಮುಂದೆ ಮಗುವಿಗೆ ಮನೆಯಲ್ಲೂ ಸಹ ಕಲಿಕೆಯಾಗಬೇಕಿದೆ.
ವಿಶೇಷವಾಗಿ ತಾಯಂದಿರು ಸ್ವತಃ ಶಿಕ್ಷಕರಾಗಿ ಬದಲಾಗಬೇಕಿದೆ. ಪ್ರಬುದ್ಧ ಪೌರರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಹಿರಿದಾಗಿದ್ದು, ಈ ನಿಟ್ಟಿನಲ್ಲಿ ನಾವಿಡುವ ಪ್ರತೀ ಹೆಜ್ಜೆಯೂ ಭವಿಷ್ಯದಲ್ಲಿ ಶಿಕ್ಷಣದ ಸ್ಥಿತಿಸ್ಥಾಪಕತ್ವದ ಮುನ್ನುಡಿಯಾಗುತ್ತದೆ. ಇತಿಹಾಸದಲ್ಲಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯನ್ನು ಮೊದಲುಗೊಂಡು, ಅನೇಕ ತಾಯಂದಿರು ತಮ್ಮ ಕಂದಮ್ಮಗಳ ಭವಿಷ್ಯಕ್ಕೆ ಅಡಿಪಾಯವಾದದ್ದನ್ನು ಸ್ಮರಿಸಿಕೊಳ್ಳುತ್ತಾ, ಅದೇ ಹಾದಿಯಲ್ಲಿ ಸಾಗಬೇಕಿದೆ.
‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ಮಕ್ಕಳು ಮನೆಯಲ್ಲಿ ಮೊಂಡು ಬೀಳುವುದು ಸಹಜವೇ. ಆದರೆ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಿದೆ. ಪೋಷಕರೂ ಸಹ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಾನ ಸಹಭಾಗಿತ್ವ ತೋರಬೇಕಿದೆ. ಇಂತಹ ಚತುರ್ ಸೂತ್ರದ ಪಾಲನೆಗೆ ಕ್ರಮೇಣವಾಗಿ ಎಲ್ಲರೂ ಒಗ್ಗಿಕೊಳ್ಳಬೇಕಿದೆ.
ಶಾಲೆಗಳ ಆರಂಭದ ನಂತರವಂತೂ ಮಗುವಿನ ಆರೋಗ್ಯ ರಕ್ಷಣೆಯ ವಿಚಾರ ಅತ್ಯಂತ ಗಂಭೀರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಗುವಿನ ಭವಿಷ್ಯ ಡೋಲಾಯಮಾನವಾಗದಂತೆ ರಕ್ಷಿಸುವ ಹೊಣೆ ಎಲ್ಲರದ್ದೂ ಆಗಿದೆ. ಮನೆಯಲ್ಲಿ ಅವರಿಗೆ ಸ್ವಚ್ಛವಾದ ಆಹಾರ ಪೂರೈಕೆ, ಪ್ರತಿನಿತ್ಯ ಸ್ನಾನ, ಶಾಲೆಯಲ್ಲಿ ಅವರು ಅನುಸರಿಸಬೇಕಾದ ಕ್ರಮಗಳು, ಅವರ ಓದು ಬರಹದ ಮೇಲೆ ಪೂರ್ಣ ನಿಗಾ ಇಡುವುದು ಇವೆಲ್ಲವೂ ಸಹ ಮಗುವಿನ ಬೆಳವಣಿಗೆಗೆ ಮಹತ್ವದ ಆಧಾರ ಸ್ಥಂಭಗಳಾಗಲಿವೆ. ಶಾಲೆಗೂ ಸಹ ಮನೆಯಿಂದಲೇ ಆಹಾರ ಮತ್ತು ಬಿಸಿ ನೀರಿನ ಪೂರೈಕೆ ಮಾಡುವುದು ಸಮಂಜಸ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಹೊರಗಿನ ತಿಂಡಿ-ತಿನಿಸುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ.
ಶಿಕ್ಷಣ ಸಂಸ್ಥೆಗಳಿಗೆ ಸವಾಲು
ವರ್ಷವಿಡೀ ಪಠ್ಯವಸ್ತುವನ್ನು ಬೋಧಿಸಿ, ಅದನ್ನು ಮಗುವಿಗೆ ಮನದಟ್ಟು ಮಾಡಿಸಿ, ಮಧ್ಯದಲ್ಲಿ ಕೆಲವು ಪಠ್ಯೇತರ ಚಟುವಟಿಕೆಗಳನ್ನು ನಡೆಸಿ, ಕೊನೆಗೆ ಮಕ್ಕಳನ್ನು ಪರೀಕ್ಷೆಗೆ ಒರೆ ಹಚ್ಚುವುದು ನಮ್ಮ ಈ ಮೊದಲಿನ ಶಿಕ್ಷಣ ವ್ಯವಸ್ಥೆಯ ಸಮಗ್ರ ಭಾಗವಾಗಿತ್ತು. ಇಂದಿನ ಬದಲಾದ ಸನ್ನಿವೇಶದಲ್ಲಿ, ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಗುವನ್ನು ಕಾಣದ ಕ್ರಿಮಿಯ ದಾಳಿಯಿಂದ ಪಹರೆ ಮಾಡಬೇಕಾದ ದೊಡ್ಡಮಟ್ಟದ ಜವಾಬ್ದಾರಿ ಶಾಲೆಗಳ ಮೇಲಿದೆ.
ಕೊರೋನಾ ಪೂರ್ವ ಕಾಲದಲ್ಲಿದ್ದಂತೆ, ಕೊರೋನೋತ್ತರ ಕಾಲದಲ್ಲೂ ಮಗುವಿನ ಸಮಗ್ರ ವಿಕಾಸಕ್ಕೆ ಅಗತ್ಯವಾದ ಕ್ರಮಗಳ ಅನುಷ್ಠಾನ ಇಂದು ಶಿಕ್ಷಣ ಸಂಸ್ಥೆಗಳಿಗೆ ಸವಾಲಾಗಿದೆ. ಮಕ್ಕಳ ಸರ್ವಾಂಗೀಣ ಪ್ರಗತಿಯು ಶಿಕ್ಷಣದ ಮೂಲಭೂತ ಗುರಿಯಾಗಿದ್ದು, ಪಾಠಪ್ರವಚನಗಳ ಜೊತೆಗೆ ಮಗುವಿಗೆ ಆರೋಗ್ಯ ಶಿಕ್ಷಣ, ನೈತಿಕ ಮೌಲ್ಯಗಳ ವೃದ್ಧಿ, ದೈಹಿಕ ಬಲವರ್ಧನೆಯಂತಹ ಕಾರ್ಯಕ್ರಮಗಳಿಗೆ ಮತ್ತಷ್ಟು ಸಮಾನ ಪ್ರಾಶಸ್ತ್ಯದ ಅಗತ್ಯವಿದೆ.
ಹಿರಿಯರೊಬ್ಬರು ಸಮಾರಂಭದಲ್ಲಿ ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ “ಇಂದಿನ ಶಿಕ್ಷಣ ಪದ್ಧತಿ ಮಗವಿಗೆ ಭವಿಷ್ಯದಲ್ಲಿ ಹೇಗೆ ಹಣ ಸಂಪಾದಿಸಬೇಕು ಎನ್ನುವುದನ್ನಷ್ಟೇ ಕಲಿಸುತ್ತಿದೆ” ಎಂದು. ಇಂತಹ ಅಪವಾದಗಳಿಂದ ಮುಕ್ತವಾಗುವುದರ ಜೊತೆಗೆ, ‘ಶಿಕ್ಷಣವೇ ಜೀವನ’ ಎಂಬ ಶಿಕ್ಷಣ ತಜ್ಞರ ಅಭಿಮತಕ್ಕೆ ಮರುಜೀವ ದೊರಕಬೇಕಿದೆ. ಇಂತಹ ಹಲವು ತಂತ್ರಗಾರಿಕೆಗಳನ್ನು ನಾವಿಂದು ರೂಪಿಸಿಕೊಂಡು ಮುಂದಡಿ ಇಡಬೇಕಿದೆ.
ಉದಾರೀಕರಣ, ಜಾಗತೀಕರಣ, ಔದ್ಯೋಗೀಕರಣದ ವ್ಯವಸ್ಥೆಗಳಿಗೆ ಮಕ್ಕಳನ್ನು ಈಗಲೇ ಸಜ್ಜುಗೊಳಿಸುವ ಪ್ರಯತ್ನದ ಮುನ್ನ, ಮಕ್ಕಳನ್ನ ಮಕ್ಕಳಾಗಿಯೇ ನೋಡಬೇಕಿದೆ. ಸ್ಫರ್ಧೆಗಿಂತ ಸಾಮರಸ್ಯದ ಶಿಕ್ಷಣಕ್ಕೆ ಮಾನ್ಯತೆ ಸಿಗಬೇಕಿದೆ. ಇಲ್ಲವಾದಲ್ಲಿ ಎಲ್ಲವೂ ನಗಣ್ಯವಾಗಿ, ನೀರಿನ ಮೇಲೆ ಹೋಮ ಮಾಡಿದಂತಾಗುತ್ತದೆ. ಸುದೀರ್ಘ ಚರ್ಚಾ ರೀತಿಯ ಬೋಧನಾ ವಿಧಾನವೂ ಸಹ ಮುಂಬರುವ ದಿನಗಳಲ್ಲಿ ತೊಡಕಾಗಬಹುದು. ಹಾಗೆಯೇ ಇದೆಲ್ಲದಕ್ಕೂ ಸಮಯದ ಅಭಾವವೂ ಆಗುತ್ತದೆ.
ಆದ್ದರಿಂದ ಇಂದು ಮಗುವಿನ ಸರ್ವಾಂಗೀಣ ಅಭ್ಯುದಯಕ್ಕೆ ಕಾರಣವಾಗುವ ಕೇಂದ್ರೀಕೃತ ನೂತನ ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಬೇಕಿದೆ. ಪ್ರಯೋಗಾತ್ಮಕ ಹಾಗೂ ಚಟುವಟಿಕಾತ್ಮಕ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಕೋವಿಡ್‍ನ ಆತಂಕದ ನಡುವೆಯೇ ಇವೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಅತಿ ದೊಡ್ಡ ಹೊಣೆಗಾರಿಕೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಬಿದ್ದಿದೆ.
ಸಾಮಾಜಿಕ ಅಂತರ ಕಷ್ಟಸಾಧ್ಯ
ಹಿರಿಯರಲ್ಲೇ ಕ್ಷೀಣಿಸುತ್ತಿರುವ ಸಾಮಾಜಿಕ ಅಂತರವನ್ನು ಮಕ್ಕಳಲ್ಲಿ ಮೈಗೂಡಿಸುವುದು ದೊಡ್ಡ ಸಾಹಸವೇ ಸರಿ. ತುಂಟಾಟದ ವಯೋಮಾನದ ಮಕ್ಕಳಿಗೆ ನಾವು ಯಾವುದನ್ನು ಮಾಡಬೇಡಿ ಎನ್ನುತ್ತೇವೋ ಅದನ್ನೇ ಮಾಡುವುದು ಹೆಚ್ಚು. ಪ್ರತಿನಿತ್ಯ ಗೆಳೆಯರ ಒಡನಾಟ, ವಾಟರ್ ಬಾಟಲ್, ಆಹಾರ, ತಿಂಡಿ-ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ, ಕೈ ತೊಳೆಯುವ ಜಾಗದಲ್ಲಿ ಗುಂಪುಗೂಡುವಿಕೆ, ಶಾಲಾ ವಾಹನಗಳಲ್ಲಿ ಸೀಟಿಗಾಗಿ ನಡೆಯುವ ಕಿತಾಪತಿಗಳು, ತರಗತಿಯಲ್ಲಿ ನಡೆಯುವ ಕೀಟಲೆಗಳು, ಪ್ರಾರ್ಥನೆ, ಆಟದ ಸಮಯದಲ್ಲಾಗುವ ಪೈಪೋಟಿಯುತ ವಾತಾವರಣ ಇವುಗಳ ಮಧ್ಯೆ ಅಂತರ ಮರೀಚೀಕೆಯಾಗಬಹುದು.
ಈ ನಿಟ್ಟಿನಲ್ಲಿ ಅತೀ ಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇವೆಲ್ಲದರ ನಡುವೆ ಮಕ್ಕಳನ್ನು ತಹಬಂದಿಗೆ ತಂದು, ಅವರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ಕೊಟ್ಟು, ನಂತರ ಬಾಕಿ ಕಾರ್ಯಕ್ರಮಗಳತ್ತ ಗಮನ ಹರಿಹಸಬೇಕಿದೆ. ಅಲ್ಲದೇ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಮಗುವಿನ ಮನಸ್ಸಿನ ಮೇಲೆ ಕೊಂಚವೂ ನಕಾರತ್ಮಕ ಪರಿಣಾಮ ಬೀರದಂತೆ ಎಚ್ಚರಿಕೆವಹಿಸಬೇಕಿದೆ. ಹೀಗೆ ಎಲ್ಲವೂ ಅತ್ಯಂತ ಸವಾಲೇ ಸರಿ.
ಇದಲ್ಲದೆ ನಮ್ಮ ದಿನನಿತ್ಯದ ಕರ್ತವ್ಯಗಳಂತಾಗಿರುವ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಸಾಬೂನಿನಲ್ಲಿ ಆಗಾಗ್ಗೆ ಕೈ ತೊಳೆಯುವುದು, ವಯಕ್ತಿಕ ಸ್ವಚ್ಛತೆ, ಅಂಗಾಂಗಳನ್ನು ಮುಟ್ಟದಿರುವಿಕೆ ಇತ್ಯಾದಿ ಕ್ರಮಗಳನ್ನು ಅಲಕ್ಷಿಸದೆ ಅನುಸರಿಸಬೇಕಿದೆ. ಪೆನ್ನು, ಪುಸ್ತಕ, ಪೆನ್ಸಿಲ್, ಇತ್ಯಾದಿ ವಸ್ತುಗಳನ್ನು ಕೆಲವು ತುಂಟ ಮಕ್ಕಳು ಕದಿಯುತ್ತಿದ್ದ ಬಗ್ಗೆ ಬರುತ್ತಿದ್ದ ದೂರುಗಳು ಮುಂದೆ ಸ್ಯಾನಿಟೈಸರ್, ಮಾಸ್ಕ್, ಸಾಬೂನುಗಳತ್ತ ತಿರುಗುವುದಂತಾದರೆ ಅದು ಮುಂಬರುವ ವಾಸ್ತವದ ನಗೆಹನಿಯೇ ಸರಿ..!
ಒಟ್ಟಾರೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯಿಂದ ನಾವು ಹಿಂದಿನ ಗುರುಕುಲ ಪದ್ಧತಿಯ ಶಿಕ್ಷಣದ ಕೆಲ ಭಾಗಗಳತ್ತ ಒಳನೋಟ ಬೀರಬೇಕಿದೆ. ಇವೆಲ್ಲವೂ ಶಾಶ್ವತವಾಗಿ ನಡೆಯುತ್ತದೋ ಇಲ್ಲವೋ ಎಂಬ ಅಪನಂಬಿಕೆಯ ನಡುವೆ ಸದ್ಯಕ್ಕಂತೂ ಯಾವುದನ್ನೂ ತಾತ್ಸಾರ ಮನೋಭಾವದಿಂದ ನೋಡುವುದು ಬೇಡವಷ್ಟೆ. ಈ ಮಧ್ಯೆ ವಿಷಕಾರಿ ಕೊರೋನಾ ಮಹಾಮಾರಿಯ ಬಗ್ಗೆ ಪ್ರತಿನಿತ್ಯ ಮಕ್ಕಳಿಗೆ 10 – 15 ನಿಮಿಷಗಳ ಕಾಲ ತಿಳಿ ಹೇಳುವ ಕೆಲಸವೂ ಇಂದು ಜರುಗಬೇಕಿದೆ.
ಶಾಲೆಯಲ್ಲೇ ಶುರುವಾಗಲಿ ಕೊರೋನಾ ವಿರುದ್ಧದ ಹೋರಾಟ
ಮಗುವಿನ ವರ್ತನೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಶಿಕ್ಷಣದ ಧ್ಯೇಯೋದ್ದೇಶಗಳಲ್ಲೊಂದು. ಕುಟುಂಬದ ಜೊತೆಗೆ ಮಗುವನ್ನು ಸಾಮಾಜೀಕರಣಗೊಳಿಸುವ ಮಹತ್ತರ ಹೊಣೆ ಶಾಲೆಗಳ ಮೇಲೂ ಸಹ ಇದೆ. ಇಂತಹ ಪ್ರಗತಿಯ ಹಾದಿಯ ನಡುವೆ ನಾವಿಂದು ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಎಂಬ ವಿವೇಕವಾಣಿಯನ್ನು ನೆನೆಯಬೇಕಿದೆ.
ಇಡೀ ಜಗತ್ತನ್ನೇ ನಿತ್ರಾಣಗೊಳಿಸುತ್ತಿರುವ ಕೊರೋನಾ ವಿಷಪೀಡಿಗೆ ಲಸಿಕೆ ಸಿಕ್ಕರೂ, ಶೀಘ್ರವಾಗಿ ಅದು ನಮ್ಮನ್ನು ಬಿಟ್ಟು ಹೋಗದು ಎಂಬ ಕೂಗು ಪ್ರತಿಧ್ವನಿಸುತ್ತಲೇ ಇದೆ. ಇಂತಹ ವಿಷ ಪೀಡೆಯ ವಿರುದ್ಧ ಹೋರಾಡಲು ಅಗತ್ಯವಾದ ಶಕ್ತಿ, ಸಾಮಥ್ರ್ಯಗಳನ್ನು ಪಡೆಯುವಂತಹ, ದೇಹವನ್ನು ಗಟ್ಟಿಗೊಳಿಸುವಂತಹ ಕ್ರಿಯೆಗಳಿಗೆ ಶಾಲೆಗಳಿಂದ ಚಾಲನೆ ಸಿಗಬೇಕಿದೆ. ಪಠ್ಯದೊಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಡುವ ಆಟಗಳಿಗೆ ಇಂದು ಮನ್ನಣೆ ದೊರಕಬೇಕಿದೆ.
ತನ್ಮೂಲಕ ದೇಹ ಗಟ್ಟಿಗೊಳ್ಳುವುದರ ಜೊತೆಗೆ, ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ. ಆದರೆ ಇವೆಲ್ಲವುಗಳನ್ನು ಅತೀ ಸೂಕ್ಷ್ಮ ಹಾಗೂ ಜಾಗರೂಕವಾಗಿ ನಿರ್ವಹಿಸಬೇಕಷ್ಟೆ. ಇವುಗಳಂತೆ ಚಿತ್ರಕಲೆ, ಸಂಗೀತ, ತೋಟಗಾರಿಕೆ, ಕರಕುಶಲ ಕಲೆ, ನಾಟಕ, ಪ್ರಬಂಧ, ಪ್ರಯೋಗ, ನೃತ್ಯ, ಇವುಗಳ ಮೂಲಕವೂ ಮೂಲಭೂತ ಶಿಕ್ಷಣ ನೀಡುವಂಹ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ. ಇಂತಹ ಕ್ರಮಗಳಿಂದ ಸಾಮಾಜಿಕ ಅಂತರ ಪಾಲನೆಯೂ ಸರಳವಾಗುತ್ತದೆ.
ಪೂರ್ವ ತಯಾರಿ ಅಗತ್ಯ
ಸರಕಾರದ ಮಾರ್ಗಸೂಚಿಗಳ ಪಾಲನೆಯಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಶಾಲೆಗಳ ಪಾತ್ರ ನಿರ್ಣಾಯಕವಾಗಲಿದೆ. ಮಕ್ಕಳಂತೆಯೇ ಶಾಲಾ ಸಿಬ್ಬಂದಿಯ ಸುರಕ್ಷತೆ, ಪ್ರತಿನಿತ್ಯ ಕೊಠಡಿಗಳ ಸ್ವಚ್ಛತೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆಗಳ ಲಕ್ಷಣಗಳಿದ್ದರೂ ವಿಶೇಷ ಚಿಕಿತ್ಸಾ ಆರೈಕಾ ಕೊಠಡಿಗಳ ನಿರ್ಮಾಣ, ಸಾಧ್ಯವಾದರೆ ಬಿಸಿ ನೀರಿನ ಪೂರೈಕೆ, ಇಂತಹ ಹಲವು ಸೌಕರ್ಯಗಳತ್ತ ಗಮನ ಹರಿಸಬೇಕಿದೆ.
ಇವೆಲ್ಲಕ್ಕೂ ಪೂರ್ವ ತಯಾರಿ ಅತ್ಯಗತ್ಯ. ಏಕೆಂದರೆ ಕೊರೋನಾ ಸಾವಿನೋಟದಾಟದ ನಡುವೆ ನಾವು ನಿರ್ಮಾಣ ಮಾಡಹೊರಟಿರುವುದು ಭವಿಷ್ಯದ ಪೌರರನ್ನು. ಇದರಲ್ಲಿ ಒಂದು ತಪ್ಪು ಹೆಜ್ಜೆ ಇಟ್ಟರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೊಂಚವೂ ನಿರ್ಲಕ್ಷ್ಯ ಸಲ್ಲದು. ಮಗುವಿನ ಜೀವ, ಹಾಗೂ ಜೀವನ ನಮ್ಮೆಲ್ಲರ ಸಮಾನ ಆದ್ಯತೆಯಾಗಬೇಕಿದೆ. ಇಷ್ಟೆಲ್ಲದರ ನಡುವೆ ಮಗುವಿನ ಮೇಲೆ ಮಾನಸಿಕ ಒತ್ತಡ ಬೀಳದಂತೆ ಕ್ರಮ ವಹಿಸಬೇಕಿದೆ.
ಶಿಕ್ಷಣ, ಆರೋಗ್ಯ, ಜೀವ, ಜೀವನ, ಮಾನಸಿಕ ವಿಕಾಸ, ದೈಹಿಕ ಬೆಳವಣಿಗೆ, ಒತ್ತಡ ರಹಿತ ಬದುಕು, ಸಹಕಾರ, ಸಹಬಾಳ್ವೆ, ನಿರಾತಂಕ ಹೀಗೆ ಹತ್ತು ಹಲವು ವಿಚಾರಗಳನ್ನು ಇಂದು ಮಗುವಿನ ಮನಸ್ಸಿನಲ್ಲಿ ರಿಜಿಸ್ಟರ್ ಮಾಡುವ ಕೆಲಸ ಶಾಲೆ ಮತ್ತು ಮನೆಗಳಿಂದ ಆಗಬೇಕಿದೆ.
ಬದಲಾಗಬೇಕಿದೆ ಪರೀಕ್ಷಾ ಪದ್ಧತಿ
ಪ್ರಸ್ತುತ ಪರೀಕ್ಷಾ ಪದ್ಧತಿಯು ಅತ್ಯಂತ ಸಮಗ್ರವಾಗಿದ್ದು, ಮುಂದೆ ಶಾಲಾವಧಿಯು ಕಡಿತಗೊಂಡರೆ ಇದೇ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದು ಕಠಿಣವಾಗಬಹುದು. ಸೀಮಿತ ಅವಧಿಗೆ ಪೂರಕವಾಗುವಂತಹ ಪರೀಕ್ಷಾ ಪದ್ಧತಿಯನ್ನು ಇಂದು ನಿರ್ಮಿಸಬೇಕಿದೆ. ಬರವಣಿಗೆಯನ್ನೂ ಒಳಗೊಂಡಂತೆ ಒಂದಷ್ಟು ಪ್ರಾಯೋಗಿಕ ಮತ್ತು ಚಟುವಟಿಕೆ ಆಧಾರಿತ ಪರೀಕ್ಷೆಗೆ ಆದ್ಯತೆ ನೀಡಬೇಕಿದೆ. ಅಲ್ಲದೇ ಈ ರೀತಿಯ ಪರೀಕ್ಷೆಗಳು ಒತ್ತಡರಹಿತವಾಗಿಯೂ ಇರುವುದರ ಜೊತೆಗೆ ಮಕ್ಕಳ ಔದ್ಯೋಗಿಕ ಭವಿಷ್ಯಕ್ಕೂ ಸಹಕಾರಿಯಾಗಿರಬೇಕಾಗುತ್ತದೆ.
ಪರ್ಯಾಯವಾಗುವುದೇ ಆನ್‍ಲೈನ್ ಕ್ಲಾಸ್..?
ಇಡೀ ವಿಶ್ವವೇ ಸ್ತಬ್ಧವಾಗಿದ್ದರೂ, ಶಿಕ್ಷಣದ ಚಟುವಟಿಕೆಗಳು ಮೊಟಕುಗೊಳ್ಳಬಾರದೆಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಇಂದು ಆನ್‍ಲೈನ್ ಶಿಕ್ಷಣದತ್ತ ಮುಖ ಮಾಡಿರುವುದು ನಮ್ಮ ಮುಂದಿರುವ ಸತ್ಯ. ಆದರೆ ತೀರಾ ಸಣ್ಣ ವಯೋಮಾನದ ಮಕ್ಕಳನ್ನು ಮಾತ್ರ ಇದರಿಂದ ಹೊರತಾಗಿಸಬೇಕಷ್ಟೆ.
ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ನೇರ ಶಿಕ್ಷಣ ಪದ್ಧತಿ ಬೀರುವಷ್ಟು ಪರಿಣಾಮ ಇದರಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಣವೆಂದರೆ ಮಗು ಮತ್ತು ಶಿಕ್ಷಕನ ನಡುವಿನ ದ್ವಿ ಕೇಂದ್ರಿತ ವ್ಯವಸ್ಥೆ ಹಾಗೂ ಚಟುವಟಿಕೆ ಆಧಾರಿತವಾಗಿರಬೇಕು. ಆನ್‍ಲೈನ್ ತರಗತಿಗಳು ಶಿಕ್ಷಣದ ಏಕಮುಖ ಸಂಚಾರವಾಗಿದೆ. ಒಂದಷ್ಟು ಕಾಲಮಿತಿಯೊಳಗೆ ಇಂತಹ ಹೊಸತನಗಳಿಗೆ ನಾವಿಂದು ಬಲವಂತವಾಗಿ ತೊಡಗಿಸಿಕೊಂಡಿದ್ದೇವಷ್ಟೆ.
ಆದರೆ ಎಂದಿಗೂ ಇದು ಶಾಶ್ವತವಾದ ಪರ್ಯಾಯ ವ್ಯವಸ್ಥೆಯಾಗಲಾರದು. ಶಿಕ್ಷಕರೂ ಸಹ ‘ವರ್ಕ್ ಫ್ರಮ್ ಹೋಮ್’ ಮಾಡಿಯಾರು ಎಂಬುದು ತರ್ಕಕ್ಕೆ ನಿಲುಕದ್ದು. ಒಂದು ವೇಳೆ ಸರಕಾರವೇ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದರೂ, ಅದು ಸಮಗ್ರ ಹಿಂದೂಸ್ಥಾನದ ಮೂಲೆ ಮೂಲೆಗೂ ತಲುಪುವ ವ್ಯವಸ್ಥೆಯನ್ನು ಅಣಿಗೊಳಿಸಬೇಕಿದೆ.
ಭಾರತ ಹಳ್ಳಿಗಳ ದೇಶವಾಗಿರುವುದರಿಂದ ಎಲ್ಲೆಡೆಯೂ ಸಮರ್ಪಕವಾದ ಡಿಜಿಟಲ್ ಸಂಪರ್ಕವನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಹೀಗಾಗಿ ಸರಕಾರಕ್ಕೂ ಇದು ಸವಾಲಾಗಿಯೇ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಡಿಜಿಟಲ್ ಸಾಧನಗಳು ಮಕ್ಕಳ ಆರೋಗ್ಯಕ್ಕೆ ಬಹುತೇಕ ಹಾನಿಕಾರಕ ಎಂಬ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿವೆ.
ಇದರಿಂದ ಅವಕಾಶ ವಂಚಿತ ಅನೇಕ ಮಕ್ಕಳಲ್ಲಿ ಕೀಳರಿಮೆ ಉಂಟಾಗಿ ಅವರು ಮಾನಸಿಕವಾಗಿ ಕುಗ್ಗಬಹುದು. ಈಗಾಗಲೇ ಆನ್‍ಲೈನ್ ತರಗತಿಗೆ ಹಾಜರಾಗದೆ, ಭಯಗೊಂಡು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಮಕ್ಕಳ ನಡೆ ಗಾಬರಿ ಹುಟ್ಟಿಸುತ್ತಿದೆ.
(ವಿ.ಕೆ.ಕುಮಾರಸ್ವಾಮಿ
ಬರಹಗಾರ ಶಿಕ್ಷಕರು
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್ ಖರೀದಿಗೂ ಎದುರಾಗುತ್ತಿದೆ ಒತ್ತಡ
ಸುದ್ದಿದಿನ,ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ಶಕ್ತಿ ಯೋಜನೆಯ ಮತ್ತೊಂದು ಮುಖ ಇದೀಗ ಚರ್ಚೆಗೆ ಬಂದಿದೆ. ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡಿರುವ ಉಚಿತ ಟಿಕೆಟ್ಗಳ ಮೊತ್ತದಲ್ಲಿ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಿಗೆ ₹5,651.24 ಕೋಟಿ ಬಾಕಿ ಉಳಿಸಿಕೊಂಡಿರುವುದು ನಿಗಮಗಳ ಆರ್ಥಿಕ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಬಾಕಿ ಮೊತ್ತದ ಮರುಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನ, ಡೀಸೆಲ್, ಬಿಡಿಭಾಗಗಳ ಖರೀದಿ ಸೇರಿದಂತೆ ದೈನಂದಿನ ವೆಚ್ಚಗಳನ್ನು ನಿರ್ವಹಿಸುವ ಒತ್ತಡ ಹೆಚ್ಚಾಗಿದೆ.
ಶಕ್ತಿ ಯೋಜನೆಗೆ ಮೂರು ವರ್ಷಗಳ ಪಯಣ
ಕಾಂಗ್ರೆಸ್ ಸರ್ಕಾರ 2023ರ ಜೂನ್ 11ರಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಾರಿಗೆ ನಿಗಮಗಳ ಮೇಲೆ ಸೇವಾ ಹೊರೆ ಕೂಡ ವಿಸ್ತರಿಸಿದೆ.
2023-24ರಿಂದ 2026ರ ಜುಲೈ ಅಂತ್ಯದವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್ಗಳಲ್ಲಿ ಮಹಿಳೆಯರು 797.16 ಕೋಟಿ ಪ್ರಯಾಣ ಕೈಗೊಂಡಿದ್ದಾರೆ. ಈ ಪ್ರಯಾಣಗಳಿಗೆ ನೀಡಲಾದ ಉಚಿತ ಟಿಕೆಟ್ಗಳ ಒಟ್ಟು ಮೌಲ್ಯ ₹20,955.99 ಕೋಟಿ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.
₹15,304 ಕೋಟಿ ಪಾವತಿ, ಇನ್ನೂ ₹5,651 ಕೋಟಿ ಬಾಕಿ
ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡಬೇಕಿದೆ. ಇದುವರೆಗೆ ₹15,304.76 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ₹5,651.24 ಕೋಟಿ ಪಾವತಿಯಾಗಬೇಕಿದೆ.
ಈ ಬಾಕಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಪಾಲುದಾರರಾಗಿವೆ.
ನಿಗಮಗಳಿಗೆ ಆರ್ಥಿಕ ಒತ್ತಡ ಏಕೆ?
ಈಗಾಗಲೇ ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದ ಒತ್ತಡದಲ್ಲಿವೆ. ಶಕ್ತಿ ಯೋಜನೆಯ ಟಿಕೆಟ್ ಮೊತ್ತ ಸಕಾಲದಲ್ಲಿ ಪಾವತಿಯಾಗದಿರುವುದು ನಗದು ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿಯ ವೇತನ, ಡೀಸೆಲ್ ಖರೀದಿ, ಬಸ್ಗಳ ನಿರ್ವಹಣೆ, ಬಿಡಿಭಾಗಗಳ ಪೂರೈಕೆ ಹಾಗೂ ನಿವೃತ್ತ ನೌಕರರ ಬಾಕಿ ಪಾವತಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಗಮಗಳು ನಿರ್ವಹಿಸಬೇಕಿದೆ.
₹18,459 ಕೋಟಿ ನೆರವು ನೀಡಿದರೂ ನಷ್ಟದ ಹೊರೆ
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಿವಿಧ ಕಾರಣಗಳಿಗಾಗಿ ಸಾರಿಗೆ ನಿಗಮಗಳಿಗೆ ₹18,459.37 ಕೋಟಿ ನೆರವು ನೀಡಿದೆ. ಶಕ್ತಿ ಯೋಜನೆ, ವಿದ್ಯಾರ್ಥಿ ಪಾಸ್ಗಳ ಸಹಾಯಧನ, ಸಾಲ ಮತ್ತು ಬಡ್ಡಿ ಮರುಪಾವತಿ, ಬಸ್ ಖರೀದಿ, ವೇತನ, ಡೀಸೆಲ್, ಪಿಎಫ್ ಹಾಗೂ ರಜೆ ನಗದೀಕರಣ ಸೇರಿದಂತೆ ಹಲವು ವೆಚ್ಚಗಳಿಗೆ ಈ ನೆರವು ಬಳಕೆಯಾಗಿದೆ.
ಆದರೂ ನಿಗಮಗಳ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿಲ್ಲ. ಡೀಸೆಲ್ ಬಸ್ಗಳ ಜತೆಗೆ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಯಿಂದಲೂ ನಿರೀಕ್ಷಿತ ಮಟ್ಟದ ಆದಾಯ ಬರುತ್ತಿಲ್ಲ ಎಂಬುದು ಮತ್ತೊಂದು ಸವಾಲಾಗಿದೆ.
ಸಕಾಲಿಕ ಪಾವತಿಯೇ ಪರಿಹಾರವೇ?
ಶಕ್ತಿ ಯೋಜನೆಯ ಸಾಮಾಜಿಕ ಮಹತ್ವವನ್ನು ಪ್ರಶ್ನಿಸುವುದಕ್ಕಿಂತ, ಅದರ ಆರ್ಥಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಸರ್ಕಾರದಿಂದ ಬಾಕಿ ಮೊತ್ತ ಸಕಾಲದಲ್ಲಿ ಬಿಡುಗಡೆಯಾದರೆ ನಿಗಮಗಳ ನಗದು ಹರಿವು ಸುಧಾರಿಸಿ, ವೇತನ, ಇಂಧನ ಮತ್ತು ನಿರ್ವಹಣಾ ವೆಚ್ಚಗಳನ್ನು ನಿರ್ವಹಿಸಲು ಹೆಚ್ಚಿನ ಬಲ ದೊರೆಯಬಹುದು.

ದಿನದ ಸುದ್ದಿ
ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!
ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ. ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.
http://Visit : www.suddidina.com
ಪಶ್ಚಿಮಘಟ್ಟದಿಂದ ಬಯಲುಸೀಮೆಯವರೆಗೆ ಭದ್ರೆಯ ಪಯಣ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ–ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.
ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್ ಉದ್ದ ಹಾಗೂ 59.14 ಮೀಟರ್ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.
ಒಣಭೂಮಿಗೆ ಹಸಿರು ಹೊದಿಸಿದ ನೀರು
ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತದೆ.
ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.
ಕುಡಿಯುವ ನೀರಿಗೂ ಭದ್ರೆಯೇ ಆಸರೆ
ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.
ಹೂಳು, ಮೇಲ್ದಂಡೆ ಯೋಜನೆ: ಭವಿಷ್ಯದ ಸವಾಲು
ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್ ಘನ ಮೀಟರ್ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್ ಸ್ಟೋರೇಜ್ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.
ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.
ಭದ್ರೆಯ ಅಂಕಿ-ಅಂಶಗಳು
- ಜಲಾನಯನ ಪ್ರದೇಶ: 1,968.40 ಚ.ಕಿ.ಮೀ.
- ಅಣೆಕಟ್ಟು ಎತ್ತರ: 59.14 ಮೀಟರ್
- ಅಣೆಕಟ್ಟು ಉದ್ದ: 1,708 ಮೀಟರ್
- ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ
- ಅಚ್ಚುಕಟ್ಟು ಪ್ರದೇಶ: 1,05,570 ಹೆಕ್ಟೇರ್
- ನಾಲೆಗಳ ಒಟ್ಟು ಉದ್ದ: 444.14 ಕಿ.ಮೀ.

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

-
ದಿನದ ಸುದ್ದಿ6 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ6 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ4 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ4 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ4 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ4 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ4 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ4 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ


