ಲೈಫ್ ಸ್ಟೈಲ್
‘ಕೊರೋನ ವೈರಸ್’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು ; ಮಿಸ್ ಮಾಡ್ದೆ ಈ ಲೇಖನ ಓದಿ..!
- ಡಾ. ಸಂತೋಷ್. ಕೆ. ಬಿ.
ಎಲ್ಲರ ಬಾಯಲ್ಲೂ ಕೊರೋನಾದೇ ಸುದ್ದಿ. 2019ರ ವಿದಾಯದಲ್ಲಿ ಚೀನಾ ದೇಶವನ್ನು ಮಾತ್ರವೇ ಕಾಡಿದ ಕೊರೋನ, ಇದೀಗ ಭಾರತವನ್ನೂ ಹಬ್ಬಿದೆ. ಅದರಲ್ಲೂ ನಮ್ಮ ಸುತ್ತಮುತ್ತಲಿನವರಲ್ಲಿಯೇ ಎನಾದರೂ ಕೊರೋನ ಇದ್ದರೆ ಎಂಬ ಭಯ ಎಲ್ಲರಲ್ಲೂ ಮನೆ ಮಾಡಿದೆ. ಕಾರಣ ಅದರ ಅಸಾಮಾನ್ಯ ಸಾಂಕ್ರಾಮಿಕ ಗುಣ.
ಕೊರೋನ ವೈರಸ್ ಡಿಸೀಸ್ 2019, ಕೋವಿಡ್-19, ನೋವೆಲ್ ಕೊರೋನ ವೈರಸ್,
SARS CoV-2 ಎಂದೆಲ್ಲಾ ಕರೆಯಲ್ಪಡುವ ಈ ಸಾಂಕ್ರಾಮಿಕ ಖಾಯಿಲೆ, 2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ದೇಶ – ವಿದೇಶಗಳಲ್ಲಿ ಹರಡಿಕೊಂಡಿರುವ ಒಂದು ವೈರಸ್ ಸೋಂಕು. ಚೀನಾ ದೇಶದಲ್ಲಿ ಒಂದು ಸಣ್ಣ ಅವಧಿಯಲ್ಲಿ ಸಾಕಷ್ಟು ಜನರಿಗೆ ಹಬ್ಬಿದ ನಂತರ ಚೀನಾ ದೇಶವು ವಿಶ್ವ ಆರೋಗ್ಯ ಸಂಸ್ಥೆಗೆ ನೋಟಿಫಿಕೇಶನ್ ಸಲ್ಲಿಸಿತು.
ನಂತರ, ಅಮೇರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಅದೇ ವೈರಸ್ ಸೋಂಕು ತಗುಲಿದ್ದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಕೊರೋನ ವೈರಸ್ ಡಿಸೀಸ್ 2019 ನ್ನು ಒಂದು ಪ್ಯಾಂಡೆಮಿಕ್ ಖಾಯಿಲೆ ಅಂದರೆ, ದೇಶದಾದ್ಯಂತ ಅಥವಾ ವಿಶ್ವದಾದ್ಯಂತ ಹರಡಬಹುದಾದ ಸೋಂಕು ಎಂದು ಘೋಷಿಸಿತು. ಇದೊಂದು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಸೋಂಕಾಗಿದೆ.
ವೈರಸ್ ಹರಡಬಹುದಾದ ಜಾಗಗಳು
- ಸಾರ್ವಜನಿಕ ಪ್ರಯಾಣ, ಸಾಮಾಜಿಕ ಕಾರ್ಯಕ್ರಮಗಳು, ಜನಸಂದಣಿಯಿಂದ ಕೂಡಿರುವ ಪ್ರದೇಶಗಳು.
ಯಾರಲ್ಲಿ ಕಂಡುಬರಬಹುದು?
- ಇತ್ತೀಚಿನ ಯಾವುದಾದರೂ ಕೊರೋನ ಹರಡಿರುವ ಪ್ರದೇಶಕ್ಕೆ ಕಳೆದ 14 ದಿನಗಳಲ್ಲಿ ಪ್ರಯಾಣ ಬೆಳೆಸಿದವರು.
- ಕೊರೋನ ಎಂದು ಖಾತ್ರಿಯಾದ ಅಥವಾ ಸಂಶಯಾಸ್ಪದ ಯಾವುದೇ ವ್ಯಕ್ತಿಯ ಜೊತೆ ಕಳೆದ 14 ದಿನಗಳಲ್ಲಿ ಸಂಪರ್ಕ ಹೊಂದಿದವರು.
- ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು.
ಸೋಂಕಿನ ಲಕ್ಷಣಗಳು
- ಜ್ವರ(83%), ಕೆಮ್ಮು(82%), ಉಸಿರಾಟದ ತೊಂದರೆ (31%), ಗಂಟಲು ಕಡಿತ(5%), ಶೀತ(4%), ಭೇದಿ(2%)
ಇವೆಲ್ಲವೂ ಸಾಮಾನ್ಯವಾಗಿ ಕಂಡುಬರುವ ಗುಣಲಕ್ಷಣಗಳೇ ಆದರೂ ಇವುಗಳೊಂದಿಗೆ ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದವರು ಅಥವಾ ಕೊರೋನ ಶಂಕಿತ ವ್ಯಕ್ತಿಯೊಂದಿಗಿನ ಸಂಪರ್ಕ ಇದ್ದಲ್ಲಿ ಕೊರೋನ ಇರುವ ಸಾಧ್ಯತೆಗಳು ಹೆಚ್ಚು ಎಂದು ಪರಿಗಣಿಸಬಹುದು.ಸೋಂಕಿನ ಲಕ್ಷಣಗಳು ಕಂಡುಬರಲು ವೈರಸ್ ದೇಹದೊಳಗೆ ಸೇರಿ ಸುಮಾರು14 ದಿನಗಳವರೆಗೂ ಸಮಯ ಬೇಕಾಗಬಹುದು. - ಅತೀ ಚಿಕ್ಕ ವಯಸ್ಸಿನವರಲ್ಲಿ, ವಯಸ್ಸಾದವರಲ್ಲಿ, ಮೊದಲೇ ಮಧುಮೇಹ ಅಥವಾ ಶ್ವಾಸಕೋಶದ ತೊಂದರೆ ಅಥವಾ ಹೃದಯ ಸಂಬಂಧಿತ ರೋಗ ಉಳ್ಳವರಲ್ಲಿ ಈ ಸೋಂಕು ಅತೀ ತೀವ್ರವಾಗಿ ಕಾಣಿಸಿಕೊಳ್ಳಬಹುದು.
ಸೋಂಕು ನಿರ್ಣಯ
- ರಕ್ತಪರೀಕ್ಷೆ : ಬಿಳಿ ರಕ್ತಕಣಗಳು ಕಡಿಮೆಯಾಗುವುದು, ಮೂತ್ರಪಿಂಡ ಹಾಗೂ ಲಿವರ್ ನ ಕಾರ್ಯಕ್ಷಮತೆ ಕಡಿಮೆಯಿರುವ ಅಂಶಗಳು ಮತ್ತು ರಕ್ತದಲ್ಲಿ ಸೋಂಕಿನ ಮೂಲ ಮತ್ತು ಪ್ರಮಾಣವನ್ನು ತಿಳಿಯಲು ಬೇಕಾದ ಸಿ.ಆರ್.ಪಿ., ಪ್ರೊಕ್ಯಾಲ್ಸಿಟೊನಿನ್, ಎಲ್.ಡಿ.ಎಚ್ ಗಳಂತಹ ಪರೀಕ್ಷೆಗಳು.
- ಎಕ್ಸ್ರೇ: ಸೋಂಕಿನ ಪ್ರಭಾವದಿಂದ ಹಾನಿಗೊಳಗಾದ ಶ್ವಾಸಕೋಶಗಳ ಅಂಗಾಂಶಗಳನ್ನು ಕಾಣಬಹುದು.
- ಶ್ವಾಸಕೋಶಗಳ ಪರಿಸ್ಥಿತಿಯನ್ನು ತಿಳಿಯಲು ಕೆಲವೊಮ್ಮೆ ಇನ್ನೂ ಹೆಚ್ಚಿನ ಪರೀಕ್ಷೆಗಳು ಅಂದರೆ ಸಿ.ಟಿ.ಸ್ಕ್ಯಾನ್ ಕೂಡ ಅವಶ್ಯಕವಾಗಬಹುದು.
- ಇದೆಲ್ಲವೂ ಕೇವಲ ಸೋಂಕಿನ ಪ್ರಭಾವದಿಂದ ದೇಹದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ತಿಳಿಯುವ ಪರೀಕ್ಷೆಗಳು ಮಾತ್ರ. ಆದರೆ, ಸೋಂಕನ್ನು ನಿರ್ಣಾಯಕ ತಿಳಿದುಕೊಳ್ಳಬೇಕೆಂದರೆ ಕೊರೋನ ವೈರಸ್‌ನ ಪಿ. ಸಿ. ಆರ್. ಎಂಬ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಕೆಲವೇ ಪ್ರಯೋಗಾಲಯಗಳಲ್ಲಿ ಮಾಡಲಾಗುತ್ತಿದೆ.
ಚಿಕಿತ್ಸೆ
- ಕೊರೋನ ಎಂದು ಶಂಕಿತ ಅಥವಾ ಸೋಂಕಿತನೆಂದು ತಿಳಿದ ಕೂಡಲೇ ಚಿಕಿತ್ಸೆಯ ಮೊಟ್ಟಮೊದಲನೇ ಹೆಜ್ಜೆ ಆ ವ್ಯಕ್ತಿಯನ್ನು ಪ್ರತ್ಯೇಕಿಸುವುದು. ಮತ್ತು ಇದೊಂದು ಸಾಂಕ್ರಾಮಿಕ ಸೋಂಕಾಗಿರುವುದರಿಂದ ವೈದ್ಯರು ನೀಡುವ ಚಿಕಿತ್ಸೆ ಅಥವಾ ಪರೀಕ್ಷೆಗಳಿಗೆ ಸಹಕರಿಸುವುದು.
- ಕೊರೋನ ವೈರಸ್‌ನ ಪಿ. ಸಿ. ಆರ್. ಪರೀಕ್ಷೆಗಾಗಿ ಮೂಗು, ಗಂಟಲು ಅಥವಾ ಶ್ವಾಸಕೋಶದ ಮಾದರಿಯನ್ನು ಪಿ.ಸಿ.ಆರ್. ವ್ಯವಸ್ಥಿತ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ. ಇದರ ಫಲಿತಾಂಶಕ್ಕಾಗಿ ಕೆಲವು ದಿನಗಳವರಗೆ ಕಾಯಬೇಕಾಗಬಹುದು.
- ರೋಗಿಯ ಪರಿಸ್ಥತಿಗೆ ತಕ್ಕ ಹಾಗೆ ಆಮ್ಲಜನಕದ ಜೊತೆಗೆ ಇನ್ನೂ ಉಸಿರಾಟದ ತೊಂದರೆಯನ್ನು ನೀಗಿಸಲು ಉಸಿರಾಟದ ಯಂತ್ರಗಳ ಚಿಕಿತ್ಸೆಯೂ ಬೇಕಾಗಬಹುದು. ಆಗ ರೋಗಿ ಪರಿಸ್ಥಿತಿ ಗಂಭೀರವಾಗಿರುತ್ತದೆ.
- ವೈರಸ್ ಅನ್ನು ಹೋಗಲಾಡಿಸುವ ಪ್ರಯತ್ನದ ಸಲುವಾಗಿ ವಿವಿಧ ಆಂಟಿವೈರಲ್ ಚಿಕಿತ್ಸೆಯೂ ಬೇಕಾಗಬಹುದು. ಆದರೆ ಕೋರೋನ ವೈರಸ್ ಬಾರದಂತೆ ತಡೆಯುವುದಕ್ಕೆ ಅಥವಾ ಚಿಕಿತ್ಸೆಗೆ ಬೇಕಾದ ಅಧಿಕೃತ ಯಾವುದೇ ಆಂಟಿವೈರಲ್ ಧಾತುವನ್ನು ಈವರೆಗೂ ಸಂಶೋಧಿಸಲಾಗಿಲ್ಲ ಮತ್ತು ಸಂಶೋಧನೆ ಇನ್ನೂ ಪ್ರಗತಿಯಲ್ಲಿದೆ.
ಮುಂಜಗ್ರತಾ ಕ್ರಮಗಳು
- ಈ ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು. ಕೆಮ್ಮುವ, ಸೀನುವ, ಅಥವಾ ಮಾತನಾಡುವ ವೇಳೆ ವೈಜ್ಞಾನಿಕವಾಗಿ ಕನಿಷ್ಟ 0.5ರಿಂದ 2 ಮೀಟರ್‌ನಷ್ಟು ಅಂತರ ಕಾಪಾಡಿಕೊಳ್ಳುವುದು. ಮತ್ತು ಇನ್ನೊಬ್ಬರಿಗೆ ಹರಡದಂತೆ ಕ್ರಮ ವಹಿಸುವುದು. ಮೂಗು, ಬಾಯಿಗಳನ್ನು ಕರ್ಚಿಫ್, ಮಾಸ್ಕ್ ಗಳಿಂದ ಮುಚ್ಚಿಕೊಳ್ಳುವುದು. ಮತ್ತು ಮನೆಯಿಂದ ಹೊರಗೆ ಬಾರದಂತೆ ಮನೆಯೊಳಗೇ ಸ್ವ ಇಚ್ಚೆಯಿಂದ ಪ್ರತ್ಯೇಕ (Home Quarantine)ವಾಗುವುದು.
- ಕೈಗಳನ್ನು ಸರಿಯಾಗಿ ಸಾಬೂನು, ಇನ್ನಿತರ ಅದಕ್ಕೆಂದೇ ತಯಾರಿಸಿರುವ ಸಲ್ಯೂಷನ್ ಗಳಿಂದ ತೊಳೆದುಕೊಳ್ಳುವುದು.
- ಈ ಮಧ್ಯದಲ್ಲಿ ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದ್ದರೆ ಶಂಕಿತ ಅಥವಾ ಸೋಂಕಿತನೆಂದು ತಿಳಿದ ವ್ಯಕ್ತಿಯೊಂದಿಗಿನ ಸಂಪರ್ಕವಿದ್ದರೆ ವೈದ್ಯರಿಗೆ ಅಥವಾ ಆರೋಗ್ಯ ಇಲಾಖೆಯ ಯಾವುದೇ ಅಧಿಕಾರಿಗೆ ಮೊದಲೇ ತಿಳಿಸುವುದು.
- ಮದುವೆಗಳು, ಸಾಮಾಜಿಕ ಕಾರ್ಯಕ್ರಮಗಳು, ದೂರದೂರಿಗೆ ಪ್ರಯಾಣಗಳಿಗೆ ಆದಷ್ಟು ಕಡಿವಾಣ ಹಾಕುವುದು.
(ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಡಾ. ಸಂತೋಷ್ ಅವರ ಈ ಇಮೇಲ್ ಗೆ ಕಳಿಸಿ. santhosh.achar15892@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
ಸುದ್ದಿದಿನ, ಬೆಂಗಳೂರು: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಲ್ಲಿ ಬಹುದಿನಗಳಿಂದ ಒಂದು ದೊಡ್ಡ ಗೊಂದಲವಿದೆ. ನಾನು ಕೆಲಸ ಬಿಟ್ಟಿದ್ದೇನೆ, ಕಳೆದ 5 ವರ್ಷಗಳಿಂದ ಪಿಎಫ್ ಖಾತೆಗೆ ಹಣ ಜಮೆಯಾಗಿಲ್ಲ, ಹಾಗಾದರೆ ನನ್ನ ಖಾತೆಗೆ ಇನ್ನೂ ಬಡ್ಡಿ ಸಿಗುತ್ತದೆಯೇ ಅಥವಾ ನನ್ನ ಹಣ ಹಾಗೆಯೇ ಉಳಿದುಕೊಳ್ಳುತ್ತದೆಯೇ?’ ಎಂಬುದು ಆ ಪ್ರಶ್ನೆ. ಈ ಪ್ರಶ್ನೆಗೆ ಇಪಿಎಫ್‌ಒ ನೇರವಾಗಿ ನೀಡಿರುವ ಉತ್ತರ – ಹೌದು, ಖಂಡಿತವಾಗಿಯೂ ಬಡ್ಡಿ ಸಿಗುತ್ತದೆ’.ಪಿಎಫ್‌ಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ವಾಸ್ತವವೇ ಬೇರೆ.
http://Visit : www.suddidina.com
3 ವರ್ಷಗಳ ಹಳೆಯ ನಿಯಮದ ಅಸಲಿ ಸತ್ಯವೇನು?
ಈ ಗೊಂದಲಕ್ಕೆ ಕಾರಣ 2016ಕ್ಕಿಂತ ಮೊದಲು ಇದ್ದ ನಿಯಮ. ಹಳೆಯ ನಿಯಮದ ಪ್ರಕಾರ, ಒಂದು ಪಿಎಫ್ ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ವಂತಿಗೆ ಜಮೆಯಾಗದಿದ್ದರೆ, ಅದನ್ನು `ನಿಷ್ಕ್ರಿಯ ಖಾತೆ’ (Inoperative Account) ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಅಂತಹ ಖಾತೆಗೆ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಲಕ್ಷಾಂತರ ಖಾತೆದಾರರ ಹಣಕ್ಕೆ ಬಡ್ಡಿ ಸಿಗದೆ ನಷ್ಟವಾಗುತ್ತಿತ್ತು.ಆದರೆ ಚಂದಾದಾರರ ಹಿತದೃಷ್ಟಿಯಿಂದ ಇಪಿಎಫ್‌ಒ 2016 ರಲ್ಲಿ ಈ ನಿಯಮಕ್ಕೆ ಮಹತ್ವದ ತಿದ್ದುಪಡಿ ತಂದಿದೆ. ಹೊಸ ಮತ್ತು ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಯಮಿತವಾಗಿ ಚಕ್ರಬಡ್ಡಿ (Compounding Interest) ಜಮೆಯಾಗುತ್ತಲೇ ಇರುತ್ತದೆ. ನೀವು ಕೆಲಸದಲ್ಲಿದ್ದರೂ, ಇಲ್ಲದಿದ್ದರೂ ಇದು ಅನ್ವಯಿಸುತ್ತದೆ.
ಉದಾಹರಣೆ:
ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ. ಒಬ್ಬ ವ್ಯಕ್ತಿ ತಮ್ಮ 40ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ತಮ್ಮ ಪಿಎಫ್ ಖಾತೆಯಲ್ಲಿದ್ದ 10 ಲಕ್ಷ ರೂಪಾಯಿಯನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದುಕೊಳ್ಳಿ. ಅವರು ಮುಂದಿನ 5 ವರ್ಷಗಳ ಕಾಲ ಅಂದರೆ 45ನೇ ವಯಸ್ಸಿನವರೆಗೆ ಯಾವುದೇ ಹಣವನ್ನು ಜಮೆ ಮಾಡದಿದ್ದರೂ, ಅವರ ಖಾತೆಯಲ್ಲಿರುವ ಆ 10 ಲಕ್ಷ ರೂಪಾಯಿಗೆ ಇಪಿಎಫ್‌ಒ ಪ್ರತಿ ವರ್ಷ ಘೋಷಿಸುವ ಬಡ್ಡಿ ದರದಂತೆ (ಪ್ರಸ್ತುತ 8.25%) ಬಡ್ಡಿ ಸೇರ್ಪಡೆಯಾಗುತ್ತಲೇ ಹೋಗುತ್ತದೆ. ಇದು ಅವರಿಗೆ 58 ವರ್ಷ ತುಂಬುವವರೆಗೆ ಅಂದರೆ ಇನ್ನೂ 13 ವರ್ಷಗಳ ಕಾಲ ನಿರಂತರವಾಗಿ ಸಿಗುತ್ತದೆ. ಅದೇ ರೀತಿ 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟವರಿಗೆ 58 ವರ್ಷದವರೆಗೆ 8 ವರ್ಷಗಳ ಕಾಲ ಬಡ್ಡಿ ಸಿಗುತ್ತದೆ.
ಈ ಒಂದು ತೆರಿಗೆ ನಿಯಮವನ್ನು ಮಾತ್ರ ಮರೆಯಬೇಡಿ!
ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ ಎಂಬುದು ಖುಷಿಯ ವಿಚಾರವೇ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ಎಚ್ಚರಿಕೆಯಿದೆ. ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಪಿಎಫ್ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ನೀವು ಕೆಲಸ ಬಿಟ್ಟ ನಂತರ ನಿಮ್ಮ ಖಾತೆಗೆ ಜಮೆಯಾಗುವ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆಯು `ಇತರ ಮೂಲಗಳಿಂದ ಬಂದ ಆದಾಯ’ (Income from Other Sources) ಎಂದು ಪರಿಗಣಿಸುತ್ತದೆ. ಆದ್ದರಿಂದ ಆ ಬಡ್ಡಿಯ ಮೊತ್ತವನ್ನು ನೀವು ನಿಮ್ಮ ವಾರ್ಷಿಕ ಆದಾಯದಲ್ಲಿ ತೋರಿಸಿ, ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ಖಾತೆದಾರರು ಏನು ಮಾಡಬೇಕು?
1. ಕೆಲಸ ಬದಲಾಯಿಸಿದ್ದರೆ: ಹಳೆಯ ಕಂಪನಿಯ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಬದಲು, ನಿಮ್ಮ ಯುಎಎನ್ (UAN) ಮೂಲಕ ಹೊಸ ಕಂಪನಿಯ ಖಾತೆಗೆ ವರ್ಗಾವಣೆ (Transfer) ಮಾಡಿಕೊಳ್ಳಿ. ಇದರಿಂದ ನಿಮ್ಮ ಸೇವಾ ಅವಧಿ ನಿರಂತರವಾಗಿರುತ್ತದೆ.
2. ವೃತ್ತಿ ವಿರಾಮದಲ್ಲಿದ್ದರೆ: 58 ವರ್ಷದವರೆಗೆ ಹಣ ಸುರಕ್ಷಿತವಾಗಿ ಬೆಳೆಯುತ್ತದೆ. ಆದರೆ ನಿಮಗೆ ತುರ್ತು ಅಗತ್ಯವಿಲ್ಲದಿದ್ದರೆ, ಹೆಚ್ಚಿನ ಆದಾಯಕ್ಕಾಗಿ ಬೇರೆಡೆ ಹೂಡಿಕೆ ಮಾಡುವ ಬಗ್ಗೆಯೂ ಯೋಚಿಸಬಹುದು.
3. 58 ವರ್ಷದ ನಂತರ: ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣವನ್ನು ಹಿಂಪಡೆಯದಿದ್ದರೆ ಮಾತ್ರ ಆ ಖಾತೆಯನ್ನು ಮತ್ತೆ `ನಿಷ್ಕ್ರಿಯ’ ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ.ಆದ್ದರಿಂದ 5 ವರ್ಷದಿಂದ ಹಣ ಜಮೆಯಾಗದಿದ್ದರೂ ಚಿಂತಿಸಬೇಕಿಲ್ಲ, ನಿಮ್ಮ ಪಿಎಫ್ ಹಣ ಇಪಿಎಫ್‌ಒ ನಲ್ಲಿ ಸುರಕ್ಷಿತವಾಗಿ ಬಡ್ಡಿಯೊಂದಿಗೆ ಬೆಳೆಯುತ್ತಿದೆ.




