ರಾಜಕೀಯ
ಬಲಪಂಥೀಯ ದಾಳಿಯ ಕ್ರೋಡೀಕರಣಕ್ಕೆ ಎದುರಾಗಿ ವರ್ಗಪರ್ಯಾಯವನ್ನು ಆಧರಿಸಿದ ಎಡಪಂಥೀಯ ಪ್ರತಿಧಾಳಿ –ಇದೀಗ ದೇಶದಲ್ಲಿನ ಹೊಸಧ್ರುವೀಕರಣ : ಸೀತಾರಾಂಯೆಚುರಿ
“17ನೇ ಲೋಕಸಭಾ ಚುನಾವಣೆಗಳಲ್ಲಿ ಬಲಪಂಥೀಯರಿಗೆ ಒಂದು ದೊಡ್ಡ ವಿಜಯಸಿಕ್ಕಿದೆ, ಇದು ಕಳೆದ ಐದು ವರ್ಷಗಳಲ್ಲಿ ನಡೆಸಿದ ಬಲಪಂಥೀಯದಾಳಿಗಳ ಕ್ರೋಡೀಕರಣ, ಎಡಶಕ್ತಿಗಳು ದೊಡ್ಡ ಹಿನ್ನಡೆ ಅನುಭವಿಸಿವೆ, ಆದರೆ ಎಡಪಂಥೀಯರು, ಕೆಲವರು ಹೇಳುವ ಹಾಗೆ ನಿಶ್ಶಸ್ತ್ರರಾಗಿಲ್ಲ, ಅಥವ ನಿರ್ಮೂಲಗೊಂಡಿಲ್ಲ., ನೆನಪಿಟ್ಟುಕೊಳ್ಳಿ, ಬಲಪಂಥೀಯ ರಾಜಕೀಯ ದಾಳಿಯನ್ನು ಎಡಪಂಥೀಯ ರಾಜಕೀಯ ಪ್ರತಿಧಾಳಿ ಮಾತ್ರವೇ ಎದುರಿಸಬಲ್ಲದು. ಈ ಪ್ರತಿದಾಳಿ ಒಂದು ವರ್ಗ ಪರ್ಯಾಯವನ್ನು, ವರ್ಗರಾಜಕೀಯವನ್ನು ಆಧರಿಸಿದೆ. ಕೇಂದ್ರಸಮಿತಿಯಲ್ಲಿಸಿಪಿಐ(ಎಂ) ಈಗಇದನ್ನೇಮಾಡಲುನಿರ್ಧರಿಸಿದೆ” ಎಂದುಸೀತಾರಾಮ್ ಯೆಚುರಿ, ಸಿಪಿಐ(ಎಂ) ಪ್ರಧಾನಕಾರ್ಯದರ್ಶಿ ಹೇಳಿದ್ದಾರೆ.
ಅವರು ಜೂನ್ 7ರಿಂದ 9 ರವರೆಗೆ ನಡೆದ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಚರ್ಚೆಗಳು, ನಿರ್ಧಾರಗಳ ಬಗ್ಗೆ ಪತ್ರಿಕಾ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಎಡಶಕ್ತಿಗಳು ಹಿಮ್ಮೆಟ್ಟುತ್ತಿಲ್ಲ, ಪ್ರತಿದಾಳಿ ನಡೆಸುತ್ತವೆ. ಇದೀಗ ಎಡಶಕ್ತಿಗಳು ಸೆಟೆದುನಿಲ್ಲುವ ಸಮಯ, ಆಧುನಿಕ ಭಾರತದ ಮೌಲ್ಯಗಳನ್ನು ಎತ್ತಿಹಿಡಿಯಲು, ನಮ್ಮ ಸಂವಿಧಾನದ ಆಶ್ವಾಸನೆಗಳನ್ನು ರಕ್ಷಿಸಿಕೊಳ್ಳಲು ಮತ್ತು ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಲು ಸೆಟೆದುನಿಲ್ಲುವ ಸಮಯ. ಬಲಪಂಥಬಲಗೊಂಡಾಗ, ಎಡಪಂಥವೂ ಶಕ್ತಿಶಾಲಿಯಾಗಬೇಕಾಗುತ್ತದೆ. ಇದೀಗ ದೇಶದಲ್ಲಿನ ಹೊಸಧ್ರುವೀಕರಣ, ಮೆದುಹಿಂದುತ್ವವು ಕಟ್ಟಾಹಿಂದುತ್ವಕ್ಕೆ ಉತ್ತರವಾಗದು, ಎಡಪಂಥಮಾತ್ರವೇ ಏಕೈಕ ಆಯ್ಕೆ ಎಂದು ಯೆಚುರಿ ಹೇಳಿದರು.
ಸಿಪಿಐ(ಎಂ) ಕೇಂದ್ರಸಮಿತಿ ಈ ಮೂರು ದಿನಗಳ ಸಭೆಯಲ್ಲಿ 17ನೇ ಲೋಕಸಭಾ ಚುನಾವಣೆಗಳ ಫಲಿತಾಂಶದ ಪ್ರಾಥಮಿಕ ವಿಮರ್ಶೆ ನಡೆಸಿದೆ. ಬಿಜೆಪಿ ಕಳೆದ ಐದುವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ ಎಂದು ವಿಶ್ಲೇಷಿಸಿರುವ ಕೇಂದ್ರಸಮಿತಿ, ಪ್ರತಿಪಕ್ಷಗಳ ವಿಫಲತೆ, ಎಡಶಕ್ತಿಗಳ ತೀವ್ರಪರಾಭವದ ಪ್ರಾಥಮಿಕ ವಿಮರ್ಶೆಯನ್ನು ನಡೆಸಿತು.
ಪಕ್ಷದ ಸ್ವತಂತ್ರಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಗಮನಿಸಿದ ಸಿಪಿಐ(ಎಂ) ಕೇಂದ್ರಸಮಿತಿ ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವು ಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.
ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರಸಮಿತಿ ಬಂದಿದೆ. ಅದು ಇಂತಹ ನಾಲ್ಕು ಮುಖ್ಯಸವಾಲುಗಳನ್ನು ಗಮನಿಸಿ, ಅವನ್ನು ಎದುರಿಸುವ ಬಗೆಗಳನ್ನೂ ಗುರುತಿಸಿದೆ.
ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರಸಮಿತಿ, ಪಕ್ಷದ ಕೊಲ್ಕತಾಪ್ಲೀನಂನ ಮಹತ್ವದ ನಿರ್ಣಯಗಳ ಜಾರಿಯ ವಿಮರ್ಶೆಯೂ ಸೇರಿದಂತೆ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.
ಕೇಂದ್ರಸಮಿತಿಯ ಸಭೆ ಚುನಾಣಾ ಸುಧಾರಣೆಗಳ, ಅದರಲ್ಲೂ ಚುನಾವಣಾ ಆಯೋಗದ ಸುಧಾರಣೆಗಳ ಅಗತ್ಯ ಮತ್ತು ಇಲೆಕ್ಟ್ರಾನಿಕ್ಮತಯಂತ್ರಗಳ ಬಗ್ಗೆ ಎದ್ದಿರುವ ಸಂದೇಹಗಳನ್ನೂ ಚರ್ಚಿಸಿತು.
ಚುನಾವಣೆಗಳ ನಂತರ ಮುಂಬಯಿಯಲ್ಲಿ ಖ್ಯಾತ ಜಾತ್ಯತೀತಚಿಂತಕ ಡಾ. ರಾಮ್ ಪುನಿಯಾನಿಯವರಿಗೆ ಬೆದರಿಕೆಗಳು ಬರುತ್ತಿರುವುದನ್ನು ಕೇಂದ್ರಸಮಿತಿ ಖಂಡಿಸಿದೆ, ಹಾಗೂ ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಹಿಂದಿನ ದಿನವೇ ಜಾತಿಕಿರುಕುಳ-ದ್ವೇ಼ಷ ಪ್ರಚಾರಕ್ಕೆ ಬಲಿಯಾದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪಾಯಲ್ ತಡ್ವಿ ಆತ್ಮಹತ್ಯೆಯ ಬಗ್ಗೆ ದುಃಖ ವ್ಯಕ್ತಪಡಿಸಿದೆ.
ಈ ಸಭೆಯನಂತರ ಪ್ರಕಟಿಸಿರುವ ಸಿಪಿಐ(ಎಂ) ಕೇಂದ್ರಸಮಿತಿಯ ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆಕೊಡಲಾಗಿದೆ.
ಲೋಕ ಸಭಾಚುನಾವಣೆಗಳ ಪ್ರಾಥಮಿಕ ಪರಾಮರ್ಶೆ
ಬಿಜೆಪಿ ವಿಜಯ
17ನೇ ಲೋಕಸಭಾಚುನಾವಣೆಗಳ ತೀರ್ಪು ಬಿಜೆಪಿ ನೇತೃತ್ವದ ಎನ್.ಡಿ.ಎ. ಗೆ 2014ರಲ್ಲಿ ಗೆದ್ದುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮತ್ತು ಹೆಚ್ಚಿನ ಮತಗಳಿಕೆಯನ್ನು ಕೊಟ್ಟಿದೆ. ಇದು ಅವರ ಪರವಾದ ಒಂದು ನಿರ್ಣಾಯಕ ಜನಾದೇಶವಾಗಿದೆ. ಬಿಜೆಪಿ ಕಳೆದ ಐದುವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ.
ಪುಲ್ವಾಮ ಮತ್ತು ಬಾಲಾಕೋಟ್ ನಂತರ ಜನಗಳ ನಡುವೆ ಕಥನವನ್ನು ಕಳೆದ ಐದುವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಹೇರಿದ ಹತ್ತು-ಹಲವು ಜೀವನಾಧಾರದ ಪ್ರಶ್ನೆಗಳಿಂದ ಪಲ್ಲಟಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಕುಚಿತ ಕೋಮುವಾದಿ ರಾಷ್ಟ್ರವಾದಿ ಅಬ್ಬರದ ಹೊಸ ಕಥನಕ್ಕೆ ಹಲವಾರು ಅಂಶಗಳ ಮೂಲಕ ಮೋದಿಯ ವ್ಯಕ್ತಿತ್ವವನ್ನು ಕಟ್ಟಿದ್ದು ಇದಕ್ಕೆ ನೆರವಾಯಿತು. ಮಾಧ್ಯಮಗಳ ವಿಭಾಗಗಳು ಈ ಪ್ರಾಜೆಕ್ಟಿನಲ್ಲಿ ಪಾಲುದಾರರಾದವು. ಹಿಂದೆಂದೂ ಕಾಣದಂತಹ ಹಣಬಲದ ಬಳಕೆ ಈ ಚುನಾವಣೆಗಳಲ್ಲಿ ಕಂಡುಬಂತು. ಚುನಾವಣಾ ಬಾಂಡುಗಳ ಮೂಲಕ ಅಗಾಧ ಮೊತ್ತಗಳು ಬಿಜೆಪಿಗೆ ವರ್ಗಾಯಿಸಲ್ಪಟ್ಟವು. ಚುನಾವಣಾಆಯೋಗದ ಪಾತ್ರವೂತನ್ನಕೊಡುಗೆನೀಡಿತು.
ಪ್ರತಿಪಕ್ಷಗಳು
ಹೆಚ್ಚಿನ ಪ್ರತಿಪಕ್ಷಗಳು, ತಮಿಳುನಾಡು, ಆಂಧ್ರಪ್ರದೇಶ, ಇನ್ನು ಕೆಲವು ರಾಜ್ಯಗಳನ್ನು ಬಿಟ್ಟರೆ ಬೇರೆಡೆಗಳಲ್ಲಿ ದೊಡ್ಡ ನಷ್ಟವನ್ನು ಕಂಡಿವೆ. ಪ್ರತಿಪಕ್ಷಗಳು, ನಿರ್ದಿಷ್ಟವಾಗಿ ಕಾಂಗ್ರೆಸ್, ಚುನಾವಣೆಗಳ ಮೊದಲು ಮುಂದಿಟ್ಟ ಜಾತ್ಯತೀತ ಪ್ರತಿಪಕ್ಷಗಳ ಐಕ್ಯತೆಯನ್ನು ಪ್ರಸ್ತುತ ಪಡಿಸುವಲ್ಲಿ ವಿಫಲವಾದವು. ಕೋಮುವಾದಿದಾಳಿಗೆ ಎದುರಾಗಿ ಜಾತ್ಯತೀತತೆಯನ್ನು ರಕ್ಷಿಸಿಕೊಳ್ಳುವ ಒಂದು ಪ್ರಚಾರಾಂದೋಲನವನ್ನು ನಡೆಸಲಿಲ್ಲ. ಕಟ್ಟಾಹಿಂದುತ್ವಕ್ಕೆ ಮೆದುಹಿಂದುತ್ವ ಉತ್ತರವಲ್ಲ. ಹಿಂದುತ್ವ ಮತ್ತು ಜಾತ್ಯತೀತತೆಯ ನಡುವಿನ ಸೈದ್ಧಾಂತಿಕ ಸಮರವನ್ನು ಶಕ್ತಿಯುತವಾಗಿ ನಡೆಸಲಿಲ್ಲ.
ಸಿಪಿಐ(ಎಂ) ಮತ್ತು ಎಡಶಕ್ತಿಗಳಿಗೆ ತೀವ್ರಪರಾಭವ
ಸಿಪಿಐ(ಎಂ) ಮತ್ತು ಎಡಶಕ್ತಿಗಳು ಒಂದು ತೀವ್ರ ಹಿನ್ನಡೆಯನ್ನು, ವಿಶೇಷವಾಗಿ ಕೇರಳ, ಪಶ್ಚಿಮಬಂಗಾಲ ಮತ್ತು ತ್ರಿಪುರಾದಲ್ಲಿನ ತಮ್ಮ ಬಲಿಷ್ಟನೆಲೆಗಳಲ್ಲಿ, ಅನುಭವಿಸಿವೆ.ಪಶ್ಚಿಮಬಂಗಾಲ ಮತ್ತು ತ್ರಿಪುರಾ ಈ ಎರಡರಲ್ಲೂ ಚುನಾವಣೆಗಳು ತೀವ್ರಭಯೋತ್ಪಾದನೆ ಮತ್ತು ಹಿಂಸಾಚಾರದ ವಾತಾವರಣದಲ್ಲಿ ನಡೆದವು. ಇಂತಹ ಹಿಂಸಾಚಾರದಲ್ಲಿ ಪಶ್ಚಿಮಬಂಗಾಲದಲ್ಲಿ ಐವರು ಮತ್ತು ತ್ರಿಪುರಾದಲ್ಲಿ ಒಬ್ಬರು ಸಿಪಿಐ(ಎಂ) ಕಾರ್ಯಕರ್ತರು ಜೀವ ಕಳಕೊಂಡಿದ್ದಾರೆ.
ತ್ರಿಪುರಾ ಪಶ್ಚಿಮಕ್ಷೇತ್ರ ಮತ್ತು ಪಶ್ಚಿಮಬಂಗಾಲದ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಬಹುಪಾಲು ಮತಗಟ್ಟೆಗಳಲ್ಲಿ ಚುನಾವಣಾ ಮೋಸನಡೆದಿದೆ, ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ದೂಷಿತಗೊಂಡಿದೆ. ಚುನಾವಣಾ ಆಯೋಗಕ್ಕೆ “ಮುಕ್ತ ಮತ್ತು ನ್ಯಾಯಯುತ ಮತದಾನ”ಗಳನ್ನು ನಡೆಸುವ ತನ್ನ ಆಶ್ವಾಸನೆಯನ್ನು ಜಾರಿಗೊಳಿಸಲು ಆಗಲಿಲ್ಲ.
ಈ ಮೂರು ರಾಜ್ಯಸಮಿತಿಗಳು ನಡೆಸಿರುವ ಪ್ರಾಥಮಿಕ ವಿಮರ್ಶೆಗಳನ್ನು ಕೇಂದ್ರಸಮಿತಿ ಚರ್ಚಿಸಿತು. ಒಂದು ವಿವರವಾದ ಮತಗಟ್ಟೆವಾರು ವಿಮರ್ಶೆ ನಡೆಯುತ್ತಿದ್ದು, ಅದರ ಆಧಾರದಲ್ಲಿ ಅಂತಿಮ ಅನುಭವಗಳ ಮೌಲ್ಯಮಾಪನ ಮಾಡಲಾಗುವುದು.
ಈ ಚುನಾವಣೆಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸಬೇಕು, ಸಂಸತ್ತಿನಲ್ಲಿ ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತಿತ ಸರಕಾರವನ್ನು ಸ್ಥಾಪಿಸಲು ಅನುವುಮಾಡಿಕೊಡಬೇಕು ಎಂದು ಸಿಪಿಐ(ಎಂ) ಕರೆನೀಡಿತ್ತು. ಈ ಧ್ಯೇಯೋದ್ದೇಶಗಳನ್ನು ಈ ಜನಾದೇಶ ನಿರಾಕರಿಸಿದೆ.
ಕೇರಳದಲ್ಲಿ ಮತದಾರರು ಒಂದು ಪರ್ಯಾಯ ಜಾತ್ಯತೀತ ಸರಕಾರವನ್ನು ರಚಿಸುವಲ್ಲಿ ಕಾಂಗ್ರೆಸ್ ಗೇ ಸಾಧ್ಯತೆ ಹೆಚ್ಚು ಎಂದು ಭಾವಿಸಿದರು. ಇದರ ಫಲಿತಾಂಶವಾಗಿ ಜಾತ್ಯತೀತ ಒಲವಿನ ಜನಗಳು ಮತ್ತು ಅಲ್ಪಸಂಖ್ಯಾತರು ಅವರಿಗೆ ಮತ ನೀಡುವಂತಾಯಿತು. ಶಬರಿಮಲೆ ಕುರಿತ ಸುಪ್ರಿಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಬದ್ಧವಾಗಿದ್ದ ಎಲ್.ಡಿ. ಎಫ್. ಸರಕಾರದ ಸರಿಯಾದ ನಿಲುವನ್ನು ಕುರಿತಂತೆ ಬಿಜೆಪಿ ಮತ್ತು ಯುಡಿಎಫ್ ಆಸ್ತಿಕ ಜನ ವಿಭಾಗಗಳಲ್ಲಿ ಹಲವರಲ್ಲಿ ತಪ್ಪುಕಲ್ಪನೆಗಳನ್ನು ಸೃಷ್ಟಿಸಿದವು. ಈ ವಿಭಾಗಗಳನ್ನು ಮತ್ತೆ ನಮ್ಮತೆಕ್ಕೆಗೆ ತರಲು ಪಕ್ಷವು ಸರ್ವಪ್ರಯತ್ನಗಳನ್ನು ನಡೆಸುತ್ತದೆ.
ಪಶ್ಚಿಮಬಂಗಾಲದಲ್ಲಿ ಚುನಾವಣೆಗಳು ಅತ್ಯಂತ ಧ್ರುವೀಕೃತ ವಾತಾವರಣದಲ್ಲಿ ನಡೆದಿವೆ. ಮಾಧ್ಯಮ ಒಂದು ಅವಳಿಕಥನವನ್ನು ಕಟ್ಟಿ ಟಿಎಂಸಿ ಮತ್ತು ಬಿಜೆಪಿ ನಡುವೆ ಇಂತಹ ಧ್ರುವೀಕರಣದಲ್ಲಿ ನೆರವಾಗುವಲ್ಲಿ ಒಂದು ದೊಡ್ಡಪಾತ್ರವನ್ನು ವಹಿಸಿತು. ಕೋಮುವಾದ ಪ್ರೇರಿತ ಪ್ರಚಾರವು ಮತದಾರರನ್ನು ಮತ್ತಷ್ಟು ಧ್ರುವೀಕರಿಸಿತು. ಟಿಎಂಸಿ ವಿರುದ್ಧ ಅಧಿಕಾರ ಸ್ಥ-ವಿರೋಧಿ ಭಾವನೆ ಬಹಳಗಟ್ಟಿಯಾಗಿತ್ತು. ಅದಕ್ಕೆ ಸಿಪಿಐ(ಎಂ) ಮತ್ತು ಎಡಶಕ್ತಿಗಳು ಪರ್ಯಾಯ ಎಂದು ಮತದಾರರು ಕಾಣಲಿಲ್ಲ, ಇದರಿಂದಾಗಿ ನಮ್ಮ ಪಾರಂಪರಿಕ ಬೆಂಬಲಿಗರಲ್ಲಿ ಒಂದು ವಿಭಾಗ ಪಲ್ಲಟಗೊಳ್ಳುವಂತಾಯಿತು. ಬಜೆಪಿ-ವಿರೋಧಿ, ಟಿಎಂಸಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸುವ ಎಡಪಕ್ಷಗಳ ಪ್ರಸ್ತಾವವನ್ನು ಸ್ವೀಕರಿಸಲು ಕಾಂಗ್ರೆಸ್ ನಿರಾಕರಿಸಿದ್ದು ಈ ಅವಳಿ ಕಥನವನ್ನು ಗಟ್ಟಿಗೊಳಿಸಿತು.
ತ್ರಿಪುರಾದಲ್ಲಿ ಎರಡರಲ್ಲಿ ಒಂದು ಸ್ಥಾನದಲ್ಲಿ ಸುಮಾರಾಗಿ ಚುನಾವಣಾ ಮೋಸವೇ ನಡೆದಿದೆ. ಮೀಸಲು ಎಸ್.ಟಿ. ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ, ಕಾಂಗ್ರೆಸ್ ಎರಡನೇ ಸ್ಥಾನಪಡೆದಿದೆ.
ಈ ಎರಡೂ ರಾಜ್ಯಗಳಲ್ಲಿ ಪಕ್ಷದಸಮಿತಿಗಳು ನಮ್ಮ ಪಾರಂಪರಿಕ ಬೆಂಬಲ ನೆಲೆಕುಗ್ಗುತ್ತಿರುವ ಬಗ್ಗೆ ಪ್ರಾಮಾಣಿಕ ಮೌಲ್ಯಮಾಪನ ನಡೆಸುತ್ತಿವೆ ಮತ್ತು ಈ ವಿಭಾಗಗಳನ್ನು ಮತ್ತೆ ನಮ್ಮತೆಕ್ಕೆಗೆ ತರಲು ತುರ್ತುಕ್ರಮಗಳನ್ನು ರೂಪಿಸಲಾಗುವುದು.
ಈ ಬಲಿಷ್ಟ ನೆಲೆಗಳ ಹೊರಗೆ, ಸಿಪಿಐ(ಎಂ) ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಚುನಾವಣಾ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಎರಡೂಸ್ಥಾನಗಳನ್ನು ಗೆದ್ದುಕೊಂಡಿದೆ. ಬೇರೆಲ್ಲ ರಾಜ್ಯಗಳಲ್ಲಿ ಸಿಪಿಐ(ಎಂ) ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಈ ಸ್ಥಾನಗಳಲ್ಲಿ, ಮಹಾರಾಷ್ಟ್ರದ ದಿಂಡೋರಿ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ 1,09,570 ಮತಗಳನ್ನು ಪಡೆದಿದೆ. ಒಡಿಶಾ ವಿಧಾನಸಭೆಯ ಚುನಾವಣೆಗಳಲ್ಲಿ ಸಿಪಿಐ(ಎಂ) ತನ್ನ ಬೊನೈ ಕ್ಷೇತ್ರವನ್ನು, ಕಳೆದ ಬಾರಿಗಿಂತ 20,000 ಹೆಚ್ಚುಮತಗಳನ್ನು (34.67%) ಗಳಿಸಿ ಉಳಿಸಿಕೊಂಡಿದೆ.
ಪಕ್ಷದ ಸ್ವತಂತ್ರ ಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಕೇಂದ್ರಸಮಿತಿ ಗಮನಿಸಿತು. ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಕೇಂದ್ರ ಸಮಿತಿ ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವುಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.
ಚುನಾವಣೆಗಳ ನಂತರದ ಸವಾಲುಗಳು
ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರಸಮಿತಿ ಬಂದಿದೆ. ಕೇಂದ್ರಸಮಿತಿ ಇಂತಹ ನಾಲ್ಕು ಸವಾಲುಗಳನ್ನು ಗಮನಿಸಿದೆ.
- ಬಿಜೆಪಿ ಈ ನಿರ್ಣಾಯಕ ವಿಜಯವನ್ನು ಅಭೂತಪೂರ್ವ ಹಣಬಲ ಮತ್ತು ಅಂತರ್ರಾಷ್ಟ್ರೀಯ ಹಾಗೂ ದೇಶೀಕಾರ್ಪೊರೇಟ್ಗಳ ಸಂಪೂರ್ಣ ಬೆಂಬಲದಿಂದ ಗೆದ್ದಿದೆ. ದೊಡ್ಡವ್ಯವಹಾರಸ್ಥರು ಮತ್ತು ಶ್ರೀಮಂತರಿಗೆ ಅನುಕೂಲಕರವಾದ ಜನ-ವಿರೋಧಿ ಆರ್ಥಿಕ ಸುಧಾರಣೆಗಳ ದಿಕ್ಪಥವನ್ನು ಅದು ಇನ್ನಷ್ಟು ತೀವ್ರಗೊಳಿಸಲು ಬಹುಪಾಲು ಜನತೆಯ ಮೇಲೆ ಮತ್ತಷ್ಟು ಹೆಚ್ಚಿನ ಸಂಕಟಗಳನ್ನು ಖಂಡಿತವಾಗಿಯೂ ಹೇರುತ್ತದೆ. ಇಂತಹ ಆರ್ಥಿಕ ಹೊಡೆತಗಳ ವಿರುದ್ಧ ಹೋರಾಟಗಳಲ್ಲಿ ಗರಿಷ್ಟ ಜನವಿಭಾಗಗಳನ್ನು ಅಣಿನೆರೆಸುವಲ್ಲಿ ಪಕ್ಷವು ನೇತೃತ್ವ ನೀಡುತ್ತದೆ.
- ಹಿಂದುತ್ವ ಕೋಮುವಾದಿ ಧ್ರುವೀಕರಣದ ಕ್ರೋಡೀಕರಣದಿಂದಾಗಿ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಹೆಚ್ಚೆಚ್ಚು ಹಲ್ಲೆಗಳು ನಡೆಯಲಿವೆ, ಇದರಿಂದಾಗಿ, ಈ ಜನ ವಿಭಾಗಗಳ ಭದ್ರತೆ ಮತ್ತು ಜೀವನಾಧಾರ ಕುರಿತ ಆತಂಕಗಳು ಇನ್ನಷ್ಟು ಹದಗೆಡಲಿವೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಟಾಪಿಸಿರುವ ಜಾತ್ಯತೀತತೆಯನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಪಕ್ಷವು ಈ ಹೋರಾಟಗಳಲ್ಲಿ ಸಾಕಷ್ಟು ವಿಶಾಲ ಪ್ರಮಾಣದಲ್ಲಿ ಜನವಿಭಾಗಗಳನ್ನು ಸೆಳೆದುಕೊಂಡು ಕೈಗೆತ್ತಿಕೊಳ್ಳುತ್ತದೆ.
- ಕಳೆದ ಐದುವರ್ಷಗಳಲ್ಲಿ ಎಲ್ಲಸಂವಿಧಾನಿಕ ಅಧಿಕಾರ ಪಡೆದಿರುವ ಸಂಸ್ಥೆಗಳಲ್ಲಿ ನಡೆದಿರುವ ಆರೆಸ್ಸೆಸ್ ನ ನುಸುಳಿಕೆ ಇನ್ನಷ್ಟು ತೀವ್ರಗೊಳ್ಳುವುದು ಖಂಡಿತ. ಇದು, ಸಂವಿಧಾನಿಕ ಗಣತಂತ್ರವನ್ನು ಆರೆಸ್ಸೆಸ್ ನ ಸೈದ್ಧಾಂತಿಕ ಯೋಜನೆಯಾದ ‘ಹಿಂದೂರಾಷ್ಟ್ರ’ವಾಗಿ ಪರಿವರ್ತಿಸಲು ಅನುವುಮಾಡಿಕೊಳ್ಳುವುದಕ್ಕಾಗಿ, ಇಂತಹ ಸಂವಿಧಾನಿಕ ಪ್ರಾಧಿಕಾರಗಳನ್ನು ಶಿಥಿಲಗೊಳಿಸುವ ದಿಕ್ಕಿನಲ್ಲಿ ಸಾಗಲಿದೆ. ಎಲ್ಲ ಸಂವಿಧಾನಿಕ ಪ್ರಾಧಿಕಾರಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಸಿಪಿಐ(ಎಂ) ಈ ಹೋರಾಟಗಳಲ್ಲಿ ಜತೆಗೂಡಲು ಸಿದ್ಧವಿರುವ ಇತರ ಎಲ್ಲ ಶಕ್ತಿಗಳೊಂದಿಗೆ ಪ್ರತಿಪಾದಿಸುತ್ತದೆ.
- ಬಿಜೆಪಿಯ ವಿಜಯವು ಭಾರತದಲ್ಲಿ ಒಂದು “ಭದ್ರತಾ’ ಪ್ರಭುತ್ವವನ್ನು ಸ್ಥಾಪಿಸುವ ಅಗತ್ಯವಿದೆಯೆಂಬುದರತ್ತ ಗಮನ ಕೇಂದ್ರೀಕರಿಸಿತ್ತು. ಇದರಿಂದಾಗಿ ವ್ಯಕ್ತಿಗಳ ಹಕ್ಕುಗಳನ್ನು, ನಿರ್ದಿಷ್ಟವಾಗಿ ಭಿನ್ನಾಭಿಪ್ರಾಯದ ಹಕ್ಕನ್ನುತೀವ್ರವಾಗಿ ಮೊಟಕುಗೊಳಿಸಲಾಗುತ್ತದೆ. ಈಗಾಗಲೇ ಅನಿಷ್ಟಕಾರಿ ಸಂಕೇತಗಳು ಕಾಣುತ್ತಿವೆ. ಒಂದಿಲ್ಲೊಂದುನೆ ಪದಲ್ಲಿ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಖಾಸಗಿಪಡೆಗಳ ಹಲ್ಲೆಗಳು ತೀವ್ರಗೊಳ್ಳಲಿವೆ. ದುಡಿಯುವ ಜನಗಳ ಮತ್ತು ಧಾರ್ಮಿಕ, ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳು ದಾಳಿಗೆ ಒಳಗಾಗಲಿವೆ, ಅವರ ಬೇಟೆ ನಡೆಯಲಿದೆ.
ಈ ಸವಾಲುಗಳನ್ನುನೇರವಾಗಿ ಎದುರಿಸಲು, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನೆಚ್ಚಿಕೊಂಡಿರುವ ಸಾಧ್ಯವಾದಷ್ಟು ವಿಶಾಲವಾದ ಜನವಿಭಾಗಗಳನ್ನು ಅಣಿ ನೆರೆಸುವಲ್ಲಿ ಸಿಪಿಐ(ಎಂ) ನೇತೃತ್ವವಹಿಸುತ್ತದೆ.
ಕಾರ್ಯಭಾರಗಳು
ಪಕ್ಷಕ್ಕೆ ಈ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರಸಮಿತಿ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.
- ಜನಗಳೊಂದಿಗೆ ಸಂಪರ್ಕವನ್ನು ಆಳಗೊಳಿಸಲು ಮತ್ತು ವಿವಿಧರಂಗಗಳ ಚಟುವಟಿಕೆಗಳನ್ನು ಬಲಪಡಿಸಲು ನಿರ್ದಿಷ್ಟಕ್ರಮಗಳನ್ನು ನಿರ್ಧರಿಸಲಾಗಿದೆ. ಜೀವನಾಧಾರದ ಪ್ರಶ್ನೆಗಳನ್ನು ಕುರಿತ ಹೋರಾಟಗಳನ್ನು, ಪರಿಶಿಷ್ಟಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸಾಮಾಜಿಕ ದಮನದ ವಿರುದ್ಧ ಹೋರಾಟಗಳೊಂದಿಗೆ ಸಮಗ್ರೀಕರಿಸಲು ನಿರ್ದಿಷ್ಟ ಗಮನವನ್ನು ಕೊಡಲಾಗುವುದು.
- ಪಕ್ಷವು 2015ರಲ್ಲಿ ಕೊಲ್ಕತಾಪ್ಲೀನಂನಲ್ಲಿ ಅಂಗೀಕರಿಸಿದ ಪಕ್ಷದ ಸಂಘಟನೆ ಮತ್ತು ಅದರ ಕಾರ್ಯವೈಖರಿ ಕುರಿತ ಮಹತ್ವದ ನಿರ್ಣಯಗಳ ಜಾರಿಯ ಒಂದು ಪರಾಮರ್ಶೆಯನ್ನು ನಡೆಸುತ್ತದೆ. ಆಗಸ್ಟ್ಕೊನೆಯ ವೇಳೆಗೆ ರಾಜ್ಯಗಳು ಈ ಪರಾಮರ್ಶೆಯನ್ನು ಪೂರ್ಣಗೊಳಿಸಲಿದ್ದು, ಇದರ ಆಧಾರದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವ ಮತ್ತು ನಮ್ಮ ಕಾರ್ಯಕರ್ತರಲ್ಲಿ ಹುರುಪು ತುಂಬುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಈ ಚುನಾವಣೆಗಳ ಅನುಭವವು ವ್ಯಾಪಕವಾದ ಚುನಾವಣಾ ಸುಧಾರಣೆಗಳ ಅಗತ್ಯವನ್ನು, ಚುನಾವಣಾ ಆಯೋಗವನ್ನು ಸುಧಾರಿಸಬೇಕಾದ ತುರ್ತನ್ನು ತೋರಿದೆ. ಚುನಾವಣಾ ಆಯುಕ್ತರುಗಳನ್ನು ತತ್ಕಾಲೀನ ಸರಕಾರ ನೇಮಿಸುವ ಬದಲು ಭಾರತದ ರಾಷ್ಟ್ರಪತಿಗಳ ನೇತೃತ್ವದ ಒಂದು ವ್ಯವಸ್ಥೆಯ ಮೂಲಕ ನೇಮಿಸುವಂತೆ ಮಾಡಲು, ಇದನ್ನು ಒಪ್ಪುವ ಎಲ್ಲ ರಾಜಕಿಯ ಅಭಿಪ್ರಾಯದವರನ್ನು ಸಿಪಿಐ(ಎಂ) ಅಣಿನೆರೆಸುತ್ತದೆ.
- ಇಲೆಕ್ಟ್ರಾನಿಕ್ಮತಯಂತ್ರ(ಇವಿಎಂ)ಗಳ ತಟಸ್ಥತೆಯ ಕುರಿತಂತೆ ಇರುವ ವಿವಿಧ ದೂರುಗಳು ಮತ್ತು ಈ ಯಂತ್ರಗಳಲ್ಲಿ ಕೈಯಾಡಿಸುವ ಸಾಧ್ಯತೆಯ ಬಗ್ಗೆ ಎದ್ದಿರುವ ಸಂದೇಹಗಳನ್ನು ಕುರಿತ ವರದಿಗಳ ಒಂದು ಅಧ್ಯಯನವನ್ನು ಸಿಪಿಐ(ಎಂ) ನಡೆಸುತ್ತದೆ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತದೆ.
ಜಾತ್ಯತೀತ ಚಿಂತಕ ಡಾ. ರಾಮ್ ಪುನಿಯಾನಿಯವರಿಗೆ ಚುನಾವಣೆಗಳ ನಂತರ ಬೆದರಿಕೆಯ ಕರೆಗಳನ್ನು ಮಾಡಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ.ಒಬ್ಬ ಯುವಪರಿಶಿಷ್ಟ ಬುಡಕಟ್ಟಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಪಾಯಲ್ ತಡ್ವಿಯ ಆತ್ಮಹತ್ಯೆಯ ಬಗ್ಗೆ ಕೇಂದ್ರ ಸಮಿತಿ ತನ್ನ ದುಃಖವನ್ನು ವ್ಯಕ್ತಪಡಿಸಿದೆ. ಜಾತಿ ಕಿರುಕುಳಗಳು ಆಕೆಯನ್ನು ಆತ್ಮಹತ್ಯೆಯ ತ್ತತಳ್ಳಿದವು. ಮಹಾರಾಷ್ಟ್ರ ರಾಜ್ಯ ಸರಕಾರ ಅಪರಾಧಿಗಳ ವಿರುದ್ಧ ಮತ್ತು ಇಂತಹ ದ್ವೇಷಪ್ರಚಾರಗಳನ್ನು ಹುಟ್ಟಿಹಾಕುವವರ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕು.
ಕೃಪೆ : ಜನಶಕ್ತಿ
ಸುದ್ದಿದಿನ.ಕಾಂ|ವಾಟ್ಸಾಪ್| 9980346243

ದಿನದ ಸುದ್ದಿ
ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ – ಪ್ರಾಣಿಬಲಿ ಮತ್ತು ಮದ್ಯಪಾನ ನಿಷೇಧ, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ
ಸುದ್ದಿದಿನ,ದಾವಣಗೆರೆ:ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯು ಫೆ. 22 ರಿಂದ 25 ರವರೆಗೆ 3 ದಿನಗಳ ಕಾಲ ನಡೆಯಲಿದ್ದು, ಭಕ್ತಿಪೂರಕವಾಗಿ ವಿಜೃಂಭಣೆಯಿಂದ ನಡೆಯಲು ಕ್ರಮವಹಿಸಲಾಗಿದೆ, ಜಾತ್ರೆ ಸಮಯದಲ್ಲಿ ದೇವಸ್ಥಾನದ ಸುತ್ತಮುತ್ತಲು ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ. ಹಾಗೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆಯಾಗಿ ಮದ್ಯಪಾನವನ್ನು ನಿಷೇದಿಸಲಾಗಿದೆ. ಸಾರ್ವಜನಿಕರು ಸಹಕಾರ ನೀಡುವಂತೆ ಹಾಗೂ ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯವೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದರು.
ಅವರು ಫೆ.17 ರಂದು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಹೋತ್ಸವದ ಅಂಗವಾಗಿ ದೇವಸ್ಥಾನದ ಬಳಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಟ್ಟು ಐದು ಸಭೆಗಳನ್ನು ನಡೆಸಲಾಗಿದೆ. ಕಳೆದ ಜಾತ್ರೆಯಲ್ಲಿನ ಅನುಭವಗಳ ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳು ಮತ್ತು ಧರ್ಮದರ್ಶಿಗಳು ನೀಡಿದ ಸಲಹೆಗಳನ್ನು ಈ ಬಾರಿ ಜಾರಿಗೆ ತರಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಸ್ವಚ್ಛಗೊಳಿಸದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 100 ಟ್ರಕ್ ಲೋಡ್ಗಳಷ್ಟು ಹೂಳನ್ನು ಹೊರತೆಗೆಯಲಾಗಿದೆ. ಬಾರ್ಲೈನ್ ರಸ್ತೆ, ರೇಣುಕಾ ಮಂದಿರ ರಸ್ತೆ ಮತ್ತು ಡಬಲ್ ರೋಡ್ಗಳಲ್ಲಿ ಚರಂಡಿ ನೀರು ಉಕ್ಕಿ ಹರಿಯದಂತೆ ಕ್ರಮ ಕೈಗೊಂಡು ರಸ್ತೆಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.
ಬೆಸ್ಕಾಂ ಲೈನ್ಗಳಲ್ಲಿನ ತೊಂದರೆಗಳನ್ನು ಸರಿಪಡಿಸಲಾಗಿದೆ ಮತ್ತು ತೆರೆದಿದ್ದ ಟ್ರಾನ್ಸ್ಫಾರ್ಮರ್ಗಳನ್ನು ಮುಚ್ಚಿ ರಕ್ಷಣೆ ಒದಗಿಸಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಸೊಳ್ಳೆಗಳ ಕಾಟವಿಲ್ಲದಂತೆ ಮತ್ತು ನೀರು ನಿಲ್ಲದಂತೆ ಕ್ರಮ ವಹಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸೇರಿ ಸುಗಮ ಸಂಚಾರಕ್ಕಾಗಿ ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ದೇವಸ್ಥಾನದ ಸುತ್ತಮುತ್ತಲು ಇರುವ ದೇವಸ್ಥಾನಗಳು ಮತ್ತು ಕಳೆದ ಬಾರಿ ಬಿಟ್ಟುಹೋಗಿದ್ದ ದೇವಸ್ಥಾನಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದು, ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನವರಂತಹ ಮಹನೀಯರ ಪ್ರತಿಮೆಗಳನ್ನು ಜಲಪ್ರೋಕ್ಷಣೆ ಮಾಡಿ ಸ್ವಚ್ಛಗೊಳಿಸಲು ಆದೇಶಿಸಲಾಗಿದೆ, ಸ್ವಚ್ಛತಾ ಕಾರ್ಯ ಮುಗಿದ ನಂತರ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಸುರಕ್ಷತಾ ದೃಷ್ಠಿಯಿಂದ ದುರ್ಗಾಂಭ ದೇವಸ್ಥಾನದ ಸುತ್ತಮುತ್ತಲು ಉಪವಿಭಾಗಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕರು ಇವರುಗಳನ್ನ ನೊಡೆಲ್ ಅಧಿಕಾರಿಗಳು, ಚೌಡೇಶ್ವರಿ ದೇವಸ್ಥಾನ ಮತ್ತು ವಿನೋಬ್ ನಗರ ಸುತ್ತಮುತ್ತಲು ನೋಡಲ್ ಅಧಿಕಾರಿಗಳು ಮತ್ತು ಕಾಯಿ ಪೇಟೆ ಮತ್ತು ವಸಂತ ಟಾಕೀಸ್ ಪ್ರದೇಶಗಳಿಗೆ ಮಹಾನಗರ ಪಾಲಿಕೆ ಆಯುಕ್ತರು ರವರನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸದರಿ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತಾ ಕ್ರಮಗಳನ್ನು ವಹಿಸುವರು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ದುರ್ಗಾಂಭಿಕ ದೇವಸ್ಥಾನದ ಸುತ್ತಮುತ್ತಲ ದೇವಸ್ಥಾನಗಳಿಗೆ ಸುಮಾರು 51 ಲಕ್ಷ ವೆಚ್ಚದಲ್ಲಿ ಬಣ್ಣವನ್ನು ಬಳಿಯಲಾಗುತ್ತಿದೆ, ದೇವಸ್ಥಾನದ ಬಳಿ 24 ಗಂಟೆ ಕುಡಿಯುವ ನೀರು , 30 ಸ್ವಚ್ಚತಾ ಸಿಬ್ಬಂದಿಗಳ ನೇಮಕ, ಉರುಳು ಸೇವೆ ಮಾಡಲು ಮರಳು, ಸ್ನಾನ ಮಾಡಲು 20 ನಳಗಳ ವ್ಯವಸ್ಥೆ ಮಾಡಲಾಗಿದ್ದು ಇವುಗಳಿಗೆ 11 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಚೌಡೇಶ್ವರಿನಗರ, ವಿನೋಬ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಮತ್ತು ಒಳಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಲಾಗಿದೆ. ದೇವಸ್ಥಾನದ ಸುತ್ತಮುತ್ತಲು, ಸಂಗೊಳ್ಳಿ ರಾಯಣ್ಣ ಸರ್ಕಲ್, ಗುಂಡಿ ಸರ್ಕಲ್, ದಾವಣಗೆರೆ ನಗರಕ್ಕೆ ಪ್ರವೇಶಿಸುವ ರಸ್ತೆಗಳು, ಮಹಾನಗರ ಪಾಲಿಕೆ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಗಳಲ್ಲಿ ದೀಪಾಲಂಕಾರ ಮಾಡಲಾಗಿದೆ , ದೇವಸ್ಥಾನದ ಸುತ್ತಮುತ್ತಲು ಪಾರ್ಕಿಂಗ್ ಸ್ಥಳದಲ್ಲಿ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ ಅವರು ಮಾತನಾಡಿ, ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ದೇವಸ್ಥಾನದ ಸುತ್ತಮುತ್ತಲು ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಸರಗಳ್ಳತನ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತಾ ದೃಷ್ಠಿಯಿಂದ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ದೇವಸ್ಥಾನದ ಪಕ್ಕದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಭಕ್ತಾಧಿಗಳಿಗೆ ಹಾಗೂ ವಿವಿಐಪಿಗಳಿಗೆ ದರ್ಶನಕ್ಕೆ ಅನುಕೂಲಕರವಾಗಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಸುಗಮ ಸಂಚಾರ ನಡೆಸಲು ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಬ್ಯಾನರ್ ಮತ್ತು ಬಂಟಿಂಗ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆದು ಅಳವಡಿಸಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಮತ್ತು ಪ್ರಜೋದನಕಾರಿ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಾಣಿಬಲಿ ಕುರಿತು ಹಳೆಯ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡಬಾರದು, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೆಲಸಗಳನ್ನು ಮಾಡಬಾರದು ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ಸಮಿತಿಯ ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರ ಉದ್ಘಾಟನೆಗಳು
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ5 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ7 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ5 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ2 days agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
-
ದಿನದ ಸುದ್ದಿ18 hours agoಯಶಸ್ವಿ ಬೃಹತ್ ಉದ್ಯೋಗ ಮೇಳಕ್ಕೆ ಕ್ರಮವಹಿಸಿ: ಡಿಸಿ ಗಂಗಾಧರ್ ಸ್ವಾಮಿ
-
ದಿನದ ಸುದ್ದಿ8 hours agoಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ – ಪ್ರಾಣಿಬಲಿ ಮತ್ತು ಮದ್ಯಪಾನ ನಿಷೇಧ, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ

