ದಿನದ ಸುದ್ದಿ
ದೀಪಿಕಾ ಪಡುಕೋಣೆ ನಿಲುವಿನ ಹಿಂದಿನ ಆಯಾಮಗಳು
- ಕೇಸರಿ ಹರವೂ
ಹೆಚ್ಚೂ ಕಡಿಮೆ ಇಡೀ ಬಾಲಿವುಡ್ ಅಡ್ಡಗೋಡೆಯ ಮೇಲೆ ಕೂತಿರುವಾಗ ದೀಪಿಕಾರ ನಿಲುವು ಪ್ರಾಶಸ್ತ್ಯ ಪಡೆಯುತ್ತದೆ. ದೀಪಿಕಾರ ನಿಲುವಿನ ಹಿಂದಿನ ಪ್ರಾಮಾಣಿಕತೆಯನ್ನು ನಾನು ಖಂಡಿತಾ ಅನುಮಾನಿಸುತ್ತಿಲ್ಲ. ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಉದಾತ್ತ ಆದರ್ಶವನ್ನು ನಾವೆಲ್ಲರೂ ಹೆಮ್ಮೆಯಿಂದ ಪಾಲಿಸುತ್ತಿದ್ದ ಎಂಭತ್ತು ತೊಂಭತ್ತರ ದಶಕದ ಕರ್ನಾಟಕದಲ್ಲಿ ಬೆಳೆದ ಪರಿಸರದಲ್ಲೇ ಆಕೆಯೂ ಬೆಳೆದವರು. ಈಗ ನಮ್ಮಲ್ಲೇ ಕೆಲವರು ಮೋಡಿಗೊಳಗಾಗಿ ಒಡಕು ಮೂಡಿಸಿಕೊಂಡಿದ್ದಾರೆ. ಆದರೂ ನಾವು ಬಹುತೇಕರು ಹಾಗೇ ಇದ್ದೇವೆ ಎನ್ನುವುದು ನಿರ್ವಿವಾದ. ಅದನ್ನು ಈ ಕ್ಷಣದ ಮಟ್ಟಿಗೆ ಬದಿಗಿಡೋಣ.
ಮೊದಲ ಪ್ರಶ್ನೆ ಏಳುವುದು ನಾಸಿರುದ್ದೀನ್ ಷಾ, ಶಬನಾ ಅಜ್ಮಿ, ಜಾವೇಡ್ ಅಖ್ತರ್, ಇನ್ನೂ ಅನೇಕರು ದೀಪಿಕಾಳಂತೆಯೇ, ಆಕೆ ಪ್ರಟಕವಾಗುವುದಕ್ಕಿಂತ ತುಂಬಾ ಮೊದಲಿಂದಲೇ ಈ ನಿಲುವನ್ನು ಹೊಂದಿದ್ದಾರೆ. ಇನ್ನೂ ಹಲವಾರು ಬಾಲಿವುಡ್ ಪ್ರಮುಖರು ಇವರುಗಳಂತೆಯೇ ನಮ್ಮ ದೇಶದ ಸಂವಿಧಾನವೇ ಮೊದಲು ಮತ್ತು ಅಂತಿಮ, ನಮ್ಮ ಜಾತ್ಯತೀತ ನಿಲುವೇ ನನ್ನದು ಎನ್ನುವಂತಾ ನಿಲುವನ್ನೇ ಹೊಂದಿರಬಹುದು. ಆದರೂ ಏಕೆ ತಮ್ಮ ನಿಲುವನ್ನು ನೇರವಾಗಿ ಪ್ರಕಟಿಸುವುದಕ್ಕೆ ಹಿಂಜರಿಯುತ್ತಿದ್ದಾರೆ? ದೀಪಿಕಾ ಕೂಡಾ ಈ ಮಾತುಗಳನ್ನು ನೇರವಾಗಿ ಹೇಳಿಲ್ಲ, ನಮ್ಮ ಯುವಜನರ ಧೈರ್ಯವನ್ನು ಮೆಚ್ಚಿಕೊಂಡತಹ ಮಾತುಗಳಲ್ಲಿ ಆ ಅರ್ಥ ಬರುವಂತೆ ಹೇಳಿದ್ದಾರೆ ಎನ್ನುವುದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು.
ಬಾಲಿವುಡ್ ಎಷ್ಟೇ ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಿದ್ದರೂ, ಅದು ಮೊದಲಿಂದಲೂ ಸಂಪ್ರದಾಯವಾದಿ ಎನ್ನುವುದು ಸ್ಪಷ್ಟ. ಹಿಂದೂಯೇತರ ತಾರೆಯರು ಅಲ್ಲಿ ಮಿಂಚುವುದೂ ಬಹುತೇಕ ಹಿಂದೂ ಪ್ರೊಟಾಗೋನಿಸ್ಟುಗಳಾಗಿಯೇ. ಅಮರ್, ಅಕ್ಬರ್ ಮತ್ತು ಆಂಟೊನೀ ಮೂವರೂ ಒಬ್ಬ ಹಿಂದೂ ತಾಯಿಯ ಹೊಟ್ಟೆಯಲ್ಲೇ ಹುಟ್ಟಿ ಬೇರೆಬೇರೇ ಧರ್ಮಗಳಲ್ಲಿ ಬೆಳೆದು ನಂತರ ಮತ್ತೆ ತಮ್ಮ ಹಿಂದೂ ತಾಯಿಯನ್ನೇ ಸೇರಿದವರು ಎನ್ನುವುದನ್ನು ನೆನಪಿಸಿಕೊಳ್ಳಿ. ಇದನ್ನು ಬಾಲಿವುಡ್ ಎಂದಿಗೂ ಪಾಲಿಸುತ್ತಲೇ ಬಂದಿರುವ ಸಂಪ್ರದಾಯ. ಹಿಂದೂಯೇತರ ಪ್ರೇಕ್ಷಕ ವರ್ಗ ಇಡೀ ಭಾರತದಲ್ಲಿ ಗಣನೀಯವಾಗಿ ಇದ್ದರೂ ಬಾಲಿವುಡ್ ಬಹುತೇಕವಾಗಿ ಓಲೈಸುವುದು ಬಹುಸಂಖ್ಯಾತ ವರ್ಗವನ್ನೇ.
ಈ ಬಾಲಿವುಡ್ಡಿನ ಜನ ತಮ್ಮ ಸಂವಿಧಾನ ಬದ್ಧತೆ, ಜಾತ್ಯತೀತ ನಿಲುವುಗಳನ್ನು ಪ್ರಕಟಿಸಲು ಹಿಂಜರಿಯುವುದು ಈ ಕಾರಣಕ್ಕೇ. ನಾಳೆ ತಮ್ಮ ಚಿತ್ರಗಳನ್ನು ಈ ಬಹುಸಂಖ್ಯಾತರು ಎಲ್ಲಿ ಬಹಿಷ್ಕರಿಸುತ್ತಾರೋ ಎನ್ನುವ ಭಯ ಅಲ್ಲಿನ ಅನೇಕ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ಖಂಡಿತಾ ಇದೆ. ಹಾಗೆಂದು ಅಲ್ಲಿ ಎಲ್ಲರೂ ಇಂಥಾ ನಿಲುವನ್ನೇ ಹೊಂದಿದ್ದರೆ ಎನ್ನಲೂ ಆಗುವುದಿಲ್ಲ. ಬಹುತೇಕರು ಹಿಂದುತ್ವ ಪರ ನಿಲುವುಗಳನ್ನೇ ಹೊಂದಿದ್ದಾರೆ ಎನ್ನುವುದೇ ನನ್ನ ಗುಮಾನಿ.
ಇವರುಗಳ ಆತಂಕಕ್ಕೆ ಇನ್ನೊಂದು ಮುಖ್ಯ ಕಾರಣ ಫೈನಾನ್ಸ್, ಹಂಚಿಕೆ ಮತ್ತು ಪ್ರದರ್ಶನ ವಲಯಗಳು. ಬಾಲಿವುಡ್ಡಿನ ಮೂರೂ ವಲಯಗಳಿಗೂ ಫೈನಾನ್ಸ್ ಮಾಡುವ ಬಹುತೇಕರು ಗುಜರಾತಿಗಳು ಮತ್ತು ಮಾರ್ವಾಡಿಯರು. ಇಂದು ಧರ್ಮಾತೀತವಾಗಿ ಮೌನ ವಹಿಸಿರುವ ಬಹುತೇಕರು ಹಿಂದುತ್ವಕ್ಕೆ ಭಯಪಟ್ಟು ಮೌನ ವಹಿಸಿರುವುದು ಹೌದಾದರೂ, ಅವರ ಮೂಲ ಭಯ ಇರುವುದು ಈ ಮೇಲಿನ ಕಾರಣಕ್ಕೆ. ಆದರೆ, ಈ ಫೈನಾನ್ಷಿಯರುಗಳು ಕೂಡಾ ಎಂದಿಗೂ ಹೀಗೇ ಇರುತ್ತಾರೆಂದು ಹೇಳಲು ಬರುವುದಿಲ್ಲ.
ಭಾರತ ನಿಜಕ್ಕೂ ಜಾತ್ಯತೀತತೆಯೆಡೆಗೆ ಹೆಜ್ಜೆ ಇಡುತ್ತಿದ್ದ ಕಾಲದಲ್ಲಿ ಅವರುಗಳು ಹಾಗೇ ನಡೆದುಕೊಂಡರು. ಇಂದು ಬಲಪಂಥೀಯ ಆಳ್ವಿಕೆಯಲ್ಲಿ ಅವರು ಹೀಗೆ ನಡೆದುಕೊಳ್ಳುತ್ತಾರೆ. ನಾಳೆ ಇನ್ನೊಂದು ರೀತಿಯಾದರೆ ಆಗ ಅವರೂ ಹಾಗೇ. ಟ್ರೆಂಡ್ ಅನುಸರಿಸಿ ಬಂಡವಾಳದ ಸೇವೆ ಮಾಡುವುದೇ ಅವರ ಧರ್ಮ. ಹೀಗಾಗಿ, ಇಂದು ಹೀಗೆ, ನಾಳೆ ಹೇಗೋ ಎಂದು ಮೌನ ವಹಿಸಿರುವವರು ಮೌನ ವಹಿಸಿದ್ದಾರೆ.
ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು? ಯಾವ ಭಯಗಳು ಕೆಲವರನ್ನು ಮೌನ ವಹಿಸುವಂತೆ ಮಾಡಿದವೋ, ಆ ಭಯಗಳನ್ನು ದಾಟಿ ಅನುಪಮ್ ಖೇರ್, ಪರೇಶ ರಾವಲ್ ಮುಂತಾದವರು ನಾವು ‘ಬಲಪಂಥೀಯರು’ ಎಂದು ಘೋಷಿಸಿಕೊಂಡರು. ಅದು ಒಂದು ರೀತಿಯಲ್ಲಿ ಅವರುಗಳು ತೆಗೆದುಕೊಂಡ ರಿಸ್ಕ್. ಅವರ ಪ್ರೇಕ್ಷಕವರ್ಗದಲ್ಲಿ ಒಂದು ಪಾಲು ಅವರನ್ನು ಖಂಡಿಸಿತು. ಹಾಗೆಯೇ, ದೀಪಿಕಾ ಕೂಡಾ ಆ ರಿಸ್ಕಿಗೆ ತದ್ವಿರುದ್ಧವಾದ ರಿಸ್ಕ್ ಒಂದನ್ನು ಈಗ ತೆಗೆದುಕೊಂಡಿದ್ದಾರೆ.
ಈಕೆಯನ್ನೂ ಒಂದು ವರ್ಗ ಈಗ ಖಂಡಿಸುತ್ತಿದೆ, ಆಕೆಯ ಫಿಲ್ಮ್ ಬಹಷ್ಕರಿಸಿ ಎನ್ನುತ್ತಿದೆ. ಈ ರಿಸ್ಕ್ ತಿಳಿದಿದ್ದರೂ ಸಹ ಆಕೆ ತನ್ನನ್ನು ಪ್ರಕಟಿಸಿಕೊಂಡಿದ್ದಾರೆ. ಸಧ್ಯ ಈ ದಿನಗಳ CAA ಮತ್ತು NRC ವಿರೋಧೀ ಹೋರಾಟಗಳ ಟ್ರೆಂಡಿನಲ್ಲಿ ಈ ರಿಸ್ಕ್ ಒಂದು ಅಡ್ವಾಂಟೇಜ್ ಆದರೂ ಆಗಬಹುದು ಎನ್ನುವುದು ಆಕೆಯ ಆಶಯ ಇರಬಹುದು. ಆದರೆ, ಈ ಆಶಯ ತೀರ ತಾತ್ಕಾಲಿಕ ಎಂದೇನೂ ನನಗೆ ಎನಿಸುವುದಿಲ್ಲ.
ಏಕೆಂದರೆ ‘ಬದಲಾವಣೆ ತರಲು ನಾವು ಧೈರ್ಯವಾಗಿ, ಮುಕ್ತವಾಗಿ ಪ್ರಕಟಿಸಿಕೊಳ್ಳಬೇಕು’ ಎನ್ನುವ ಮಾತನ್ನು ಆಕೆ ಆಡಿದ್ದಾರೆ. ಸಾಂಪ್ರದಾಯಿಕ ಬಂಡವಾಳಶಾಹಿಗಳ ಮೂಗಿನ ನೇರಕ್ಕೇ ಬಾಲಿವುಡ್ ಏಕೆ ನಡೆದುಕೊಳ್ಳಬೇಕು? ಎನ್ನುವ ಆಧುನಿಕ ಪ್ರಶ್ನೆಯೊಂದನ್ನು ತನ್ನ ಮಿತಿಯೊಳಗೇ ದೀಪಿಕಾ ಹುಟ್ಟಿಹಾಕಿದ್ದಾರೆ. ಈ ಪ್ರಶ್ನೆ ಬಾಲಿವುಡ್ಡನ್ನೂ ದಾಟಿ ಇಡೀ ಭಾರತೀಯ ಸಮಾಜಕ್ಕೂ ಅನ್ವಯಿಸುವಂತದ್ದು. ಈಕೆ ನಿಜಕ್ಕೂ ಬದಲಾವಣೆ ಬಯಸಿದ್ದಾರೆ. ನಾನು ಈಕೆಯ ನಿಲುವನ್ನು ಸಂಭ್ರಮಿಸುವುದು ಈ ಕಾರಣಕ್ಕೇ…
ಇನ್ನು ಸ್ಯಾಂಡಲ್ ವುಡ್ ಬಗ್ಗೆ ನಾನೇನೂ ಹೇಳಲ್ಲ. ಅಲ್ಲಿ ಬಹಳಷ್ಟು ಜನಕ್ಕೆ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಸ್ಪಷ್ಟವಾಗಿ ಗೊತ್ತಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


