ಸಿನಿ ಸುದ್ದಿ
ವರನಟ ಡಾ.ರಾಜಕುಮಾರ ‘ಒಂದು ಜಾಗತಿಕ ವಿಸ್ಮಯ’..!
- ನಿಜಲಿಂಗಯ್ಯ ಹಾಲದೇವರಮಠ
(ಲೇಖನ ಭಾಗ-2)
- “12ನೆಯ ಶತಮಾನದಲ್ಲಿ ಒಂದು ಪುಟ್ಟ ಮಗು ಕನ್ನಡ ಭಾಷೆಯ ವಿರೋಧಿಗಳ ವಿರುದ್ಧ ಧ್ವನಿ ಎತ್ತಿತ್ತು. ಅಲ್ಲಿಂದಲೇ ಕನ್ನಡ ಚಳುವಳಿ ಉಗಮವಾದದ್ದು ನಂತರ ಆ ಮಗು ಪ್ರಾಪ್ತಕ್ಕೆ ಬಂದಾಗ ವಚನ ಸಾಹಿತ್ಯದ ಮೂಲಕ ಸಮಾಜದ ಮೌಢ್ಯವನ್ನು ನಿವಾರಿಸುವಲ್ಲಿ ಶ್ರಮಿಸಿದ ವ್ಯಕ್ತಿಯೇ ನಮ್ಮ ಬಸವಣ್ಣ. ಹನ್ನೆರಡನೇ ಶತಮಾನ ಕಳೆದು 20ನೇ ಶತಮಾನಕ್ಕೆ ಅಡಿ ಇಟ್ಟಿದ್ದೇವೆ. ಈ ಆಧುನಿಕ ಯುಗದಲ್ಲಿ ಕಲಾ ಲೋಕದ ಮೂಲಕ ನಾಡು-ನುಡಿಗೆ ಸಂಸ್ಕೃತಿಗೆ ಶ್ರೇಷ್ಠ ಸೇವೆಗೈದು ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡಿ ಅದರ ಉನ್ನತಿಗೆ ಶ್ರಮಿಸಿದ ವ್ಯಕ್ತಿಯೇ ರಾಜಣ್ಣ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಇಪ್ಪತ್ತನೇ ಶತಮಾನದಲ್ಲಿ ರಾಜಣ್ಣ”
–ಮಹಾಕವಿ ಸಿದ್ಧಯ್ಯ ಪುರಾಣಿಕರು
ಇತಿಹಾಸದಲ್ಲಿ 12ನೇ ಶತಮಾನದ ಬಸವಯುಗದಷ್ಟೇ ಪ್ರಖರವಾದದ್ದು ಇಪ್ಪತ್ತನೇ ಶತಮಾನದ ರಾಜಯುಗ. ಬಸವಣ್ಣನಂತೆ ರಾಜಣ್ಣನವರು ಕ್ರಾಂತಿಕಾರಿ ಬದಲಾವಣೆಯ ಕರ್ಮಯೋಗಿ. ಕನ್ನಡ ಸಮಾಜವನ್ನು ಒಂದುಗೂಡಿಸಿದ ಮಹಾಚೇತನ. ಕಲಾಜ್ಯೋತಿಯಿಂದ ಮಾನವ ಜ್ಯೋತಿ ಬೆಳಗಿಸಿದ ನಂದಾದೀಪ. ತಮ್ಮ ಕಾಯಕದಲ್ಲಿಯೇ ಕೈಲಾಸ ಕಂಡ ಅವರು ಕಾಯಕ ತತ್ವದ ಕರ್ಮಾನುಷ್ಠಾನಿ. ಸಂಸ್ಕೃತಿ ಮತ್ತು ಮಾನವತ್ವಗಳ ಮಹತ್ವವನ್ನು ಮನದಟ್ಟು ಮಾಡಿಕೊಟ್ಟು ಶತಮಾನಗಳಿಂದ ಹೆಪ್ಪುಗಟ್ಟಿದ್ದ ಮೌಢ್ಯಚಿಂತನೆಗಳನ್ನು ತಮ್ಮ ಪಾತ್ರಗಳ ಮೂಲಕ ಕಡೆದು ನವನೀತ ತೆಗೆದ ವಿಚಾರಶೀಲ.
ಸಮಾಜದ ಮೇಲು-ಕೀಳು, ಹಿಂಸೆ, ಅನ್ಯಾಯ, ಅನೀತಿ, ಬಡತನ, ಶೋಷಣೆ, ಜಾತೀಯತೆ, ಪಾಶ್ಚಾತ್ಯ ಸಂಸ್ಕೃತಿಯ ಹೀನ ಪ್ರಭಾವ ಮೊದಲಾದ ಸಮಾಜದ ಓರೆ-ಕೋರೆಗಳನ್ನು ತಮ್ಮ ಕಲಾ ಜೀವನದಿಂದಲೇ ತಿದ್ದಿ ತೀಡಿ ಮಾನವ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ವಿಶ್ವನಟ. ಕಾಳಸಂತೆ ಎಂಬ ಕಲೆಯನ್ನು ಕಿತ್ತುಹಾಕಿ ಕಲೆಗೆ ಕಿಮ್ಮತ್ತು ತಂದುಕೊಟ್ಟ ಕಲಾಯೋಗಿ. “ಕಲೆಯು ಕಲೆಗಾಗಿ ಅಲ್ಲ; ದಾನವನನ್ನು ಮಾನವನನ್ನಾಗಿ, ಮಾನವನನ್ನು ಮಹಾದೇವನನ್ನಾಗಿ ಮಾಡುವುದೇ ಕಲೆಯ ನಿಜವಾದ ಗುರಿ” ಎಂಬುದನ್ನು ರಾಜಕುಮಾರ್ ತಮ್ಮ ಸೇವೆಯಿಂದ ಸಾಧಿಸಿ ತೋರಿಸಿದ್ದಾರೆ.
ಈ ಮಹಾನುಭಾವರ ಕಲಾವಂತಿಕೆ, ಸಂಸ್ಕೃತಿ, ಮಾನವತೆ, ವಿನಯತೆ, ಸಾಮಾಜಿಕ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿವೆ. ರಾಜಕುಮಾರ ತತ್ವಗಳು ಕಾಲ, ದೇಶ, ಭಾಷೆ, ಜಾತಿಗಳನ್ನು ಗೆದ್ದುನಿಂತಿವೆ. ಅವು ನಿತ್ಯನೂತನ, ಸತ್ಯ ದರ್ಶನವಾಗಿವೆ. ವರಕವಿ ಬೇಂದ್ರೆಯವರು ಬೆಳಕನ್ನು ಕುರಿತು “ಇದು ಬರೀ ಬೆಳಗಲ್ಲೋ ಅಣ್ಣ” ಅನ್ನುವಂತೆ ವರನಟ ರಾಜಕುಮಾರ ಚಿತ್ರಗಳು “ಬರೀ ಚಿತ್ರವಲ್ಲೋ ಅಣ್ಣ” ಎಂಬಂತಿವೆ. ಅವುಗಳಲ್ಲಿ ಜಗತ್ತೇ ಅಡಗಿದೆ. ವರನಟರು ತಮ್ಮ ನೂರಾರು ಪಾತ್ರಗಳಲ್ಲಿ ಸಾವಿರಾರು ವೇಷಭೂಷಣಗಳಲ್ಲಿ ವಿಶ್ವ ದರ್ಶನವನ್ನೇ ಮಾಡಿಸಿದ್ದಾರೆ.
ಅವರ ಭಾವಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿದರೆ ಕರ್ನಾಟಕ ದರ್ಶನವೇ ಆಗುತ್ತದೆ. ಅವರ ಚಿತ್ರಗಳಲ್ಲಿ ಭಾರತೀಯ ಪರಂಪರೆ ಕರ್ನಾಟಕದ ಸಂಸ್ಕೃತಿಯಿದೆ, ಕನ್ನಡಿಗರ ಭವಿಷ್ಯವಿದೆ, ಮಾನವ ಕಲ್ಯಾಣ ಅಡಗಿದೆ, ಬದುಕುವ ಕಲೆಯಿದೆ, ವಿಶ್ವಮಾನವ ಸಂದೇಶವಿದೆ, ಪರಿಪೂರ್ಣ ಮನುಷ್ಯತ್ವವಿದೆ, ಮಾತಾ-ಪಿತೃ ಭಕ್ತಿ, ಹೆಣ್ಣಿಗೆ ಗೌರವ ಸ್ಥಾನವಿದೆ, ಕೆಳವರ್ಗದ ಜಾತಿಯವರ ನೋವಿದೆ, ಆ ನೋವಿಗೆ ಸಾಂತ್ವನವಿದೆ, ಅನುಭಾವ, ಆಧ್ಯಾತ್ಮ, ತಪಸ್ಸಿದೆ, ಜ್ಞಾನ ಸರಸ್ವತಿಗೆ ಪೂಜ್ಯತೆ ಇದೆ, ಬುದ್ಧ, ಬಸವ, ಗಾಂಧಿ, ಕಾರ್ಲ್ ಮಾರ್ಕ್ಸ್, ಲೋಹಿಯಾ ತತ್ವಗಳು ಸಾಕಾರಗೊಂಡಿವೆ.
ಪರಮಹಂಸ ವಿವೇಕಾನಂದರ ಅಧ್ಯಾತ್ಮದ ತಾತ್ಪರ್ಯವು ಅವರ ವಿಭಿನ್ನ ಪಾತ್ರ ವೈವಿಧ್ಯತೆ ಮತ್ತು ಬದುಕಿನಲ್ಲಿ ಸೂಸಾಡಿದೆ, ಶತಮಾನಗಳವರೆಗೂ ಯಾವುದೇ ಪೀಳಿಗೆಯ ಜನರಿಗೂ ಬೇಕಾದ ಸಾರ್ವಕಾಲಿಕ ಮಾರ್ಗದರ್ಶನಗಳಿವೆ, ಬಡತನ, ಅವಿದ್ಯಾವಂತಿಕೆ, ಕೆಳವರ್ಗದ ಅವಮಾನಗಳ ಹಿನ್ನೆಲೆಯಿಂದ ಬಂದವನು ಸಾಧಿಸಿದ ಸಾಹಸಗಾಥೆಗಳಿವೆ, ಏನಾದರೂ ಆಗುವದಕ್ಕಿಂತ ಮೊದಲು ಮಾನವನಾಗುವ ಸಂದೇಶವಿದೆ, ಶಾಲಾ ಶಿಕ್ಷಣದ ಅವಶ್ಯಕತೆಯೇ ಇಲ್ಲದೆ ಜೀವನದಲ್ಲಿ ಬಂಗಾರದ ಮನುಷ್ಯನಾಗುವ ರಾಜಪಥವಿದೆ, “ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ” ಎಂದು ಜಗತ್ತಿಗೆ ಸಾರಲಾಗಿದೆ.
ಈ ಮೂಲಕ ಚಿತ್ರೋದ್ಯಮವೆಂಬ ವಾಣಿಜ್ಯ ಕ್ಷೇತ್ರವನ್ನು ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಕಟ್ಟಿದ ಸಾಂಸ್ಕೃತಿಕ ಶಿಲ್ಪಿ. ಅವರ ಪೌರಾಣಿಕ, ಭಕ್ತಿ ಪ್ರಧಾನ, ಐತಿಹಾಸಿಕ, ಜಾನಪದ, ಸಾಮಾಜಿಕ, ಹಿಚ್ ಕಾಕ್, ಜೇಮ್ಸ್ ಬಾಂಡ್ ಯಾವುದೇ ಪಾತ್ರವಿರಲಿ, ಸಂಭಾಷಣೆಯಿರಲಿ, ಗೀತೆಯಿರಲಿ ಎಲ್ಲದರಲ್ಲೂ ಸಂಸ್ಕೃತಿಯು ಪ್ರತಿಧ್ವನಿಸುತ್ತಿತ್ತು. ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರು “ರಾಜಕುಮಾರ್ ಭಾರತದ ಸಂಸ್ಕೃತಿಯ ಸಂಪತ್ತು” ಎಂದು ಹೇಳಿದ ಮಾತು ಸ್ತುತ್ಯಾರ್ಹ. ಚಿತ್ರಗಳಲ್ಲಿ ಅದೆಷ್ಟೋ ನಾಟಕಗಳಲ್ಲಿ ಎಲ್ಲೂ ಅವಾಚ್ಯ ಪದಗಳ ಬಳಕೆಯಾಗಿಲ್ಲ, ಎಲ್ಲೂ ಧೂಮಪಾನ, ಮದ್ಯಪಾನಕ್ಕೆ ಅವಕಾಶವಿಲ್ಲದಂತೆ, ಹೆಣ್ಣಿಗೆ, ಸರಸ್ವತಿಗೆ ಅವಮಾನವಾಗದಂತೆ ಜಾಗೃತ ವಹಿಸುತ್ತಿದ್ದ ದಾರ್ಶನಿಕ ನಟ.
ಇತರೆ ಭಾರತೀಯ ನಟರಂತೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಬಹುದಿತ್ತು. ಆದರೆ ಅದೆಲ್ಲಕ್ಕಿಂತ ಅವರಿಗೆ ಸಾಮಾಜಿಕ ಕಳಕಳಿಯಿತ್ತು. ನಾನು ನುಡಿದಂತೆ ಜನ ನಡೆಯುತ್ತಾರೆ ಎಂಬ ಜವಾಬ್ದಾರಿ ಇತ್ತು. ಆದ್ದರಿಂದ ಅವರು ಮಾಡುವ ಪಾತ್ರಗಳು ಅವರ ಮಾತುಗಳು ನವ ಸಮಾಜದ ನಿರ್ಮಾಣಕ್ಕೆ ಆಶಯಗಳಾಗಿದ್ದವು. ಈ ದೃಷ್ಟಿಯಲ್ಲಿ ರಾಜಕುಮಾರ ಒಂದು ಶಾಲೆಯಾಗಿ ಕೆಲಸ ಮಾಡಿದ ಕಲಾವಿದ. ಅವರ ಚಿತ್ರ ಜೀವನದ ಮೂಲಕ ಶಿಕ್ಷಣ ಪಡೆದವನು ಸಂಸ್ಕಾರ ಜೀವಿಯಾಗಿ ಹೊರಬರುತ್ತಾನೆ. ಅವನು ಉನ್ನತ ಯಶಸ್ಸು ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊರಬಂದು ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಾನೆ.
ಈ ಪರಿದೃಷ್ಟಿಯಲ್ಲಿ “ರಾಜಕುಮಾರ ಒಬ್ಬ ಲೋಕ ಶಿಕ್ಷಕ, ಮಹಾನಾಡೋಜ, ಆಚಾರ್ಯ ಶ್ರೇಷ್ಠ.” ಅವರ ಮಾತು ಶುದ್ಧವಾಗಿತ್ತು, ನಡೆ ಶುದ್ಧವಾಗಿತ್ತು, ಮನಸ್ಸು ಶುದ್ಧವಾಗಿತ್ತು, ಜ್ಞಾನ ಶುದ್ಧವಾಗಿತ್ತು. ವರನಟರು ಶುದ್ಧತೆಗಾಗಿ ಬಾಳಿದರು, ಶುದ್ಧತೆಗಾಗಿ ನಟಿಸಿದರು, ಶುದ್ಧತೆಗಾಗಿ ಲೋಕವನ್ನು ನಡೆಸಿದರು ಅವರ ಕಂಡ ಶುದ್ಧತೆಯಲ್ಲಿ ಮಾನವತೆ ಇತ್ತು. ಅದನ್ನೇ ಬಿತ್ತಿದರು, ಬೆಳೆದರು, ಹಂಚಿದರು. ಬದುಕಿದರೆ ಅವರಂತೆ ಬದುಕಬೇಕೆಂದು ಬದುಕಿ ತೋರಿಸಿದರು.
ರಾಜಣ್ಣನವರು ವಚನಕಾರ ದೇವರ ದಾಸಿಮಯ್ಯನ ಉಕ್ತಿಯಂತೆ “ಕರಿಯನ್ನು ಬೇಡಲಿಲ್ಲ, ಸಿರಿಯನ್ನು ಬೇಡಲಿಲ್ಲ, ಹಿರಿದಪ್ಪ ರಾಜ್ಯವನ್ನು ಬೇಡಲಿಲ್ಲ, ಶರಣರ ಸೂಳ್ಳುಡಿಯನ್ನು ಬೇಡಿದರು.” ಅಭಿಮಾನಿ ದೇವರುಗಳೇ ಅವರಿಗೆ ಶರಣರಂತಿದ್ದರು. ಅವರ ಸೂಳ್ಳುಡಿಗಳು ವಾಕ್ ಶುದ್ದಿಯ ದೀಪಗಳಾಗಿದ್ದವು. ಅವರ ಮನಸ್ಸು ಅನ್ಯವಿಷಯಕ್ಕೆಳಸದಂತೆ ಸದಾ ಶುದ್ದಿಯ ತೀರ್ಥವಾಹಿನಿಯಾಗಿತ್ತು. ಬುದ್ಧ, ಗಾಂಧೀಜಿ, ಕುವೆಂಪು ಕನಸಿನ ಸಮಾಜ; ಮಾನವ ದೇವನಾಗುವ ಪರಿ ರಾಜಕುಮಾರ ಜೀವನವೇ ಆಗಿತ್ತು”.
“ವರನಟರ ಮುಂದೆ ನರನಟರು ವಿದ್ಯೆತೋರಬಾರದು” ಎಂಬ ಮಾತು ಇತರ ಭಾರತೀಯ ನಟರ ಸಂದರ್ಭದಲ್ಲಿ ರಾಜಕುಮಾರ ಅವರ ಘನತೆಯನ್ನು, ತೂಕವನ್ನು ಹೆಚ್ಚಿಸುತ್ತದೆ. ಏನೇನೋ ಹೇಳಿದವರಿದ್ದಾರೆ, ಅದಕ್ಕೆ ವಿರುದ್ಧವಾಗಿ ಬದುಕಿದವರಿದ್ದಾರೆ, ಎಷ್ಟೋ ಭಾರತೀಯ ನಟರು ರಾಜಕೀಯದ ಕೊಚ್ಚೆಯಲ್ಲಿ ಮಿಂದು ಮುಳುಗಿ ಹೋದರು, ಅನೇಕರು ಕಲೆಯನ್ನು ಮನರಂಜನೆಯ ಸರಕು ಎಂದು ತಿಳಿದರು.
ಹಲವರು ವ್ಯವಹಾರದಲ್ಲಿ ತೊಡಗಿಕೊಂಡರು, ತಮ್ಮನ್ನು ನಂಬಿದ ಅಭಿಮಾನಿಗಳನ್ನು ರಾಜಕೀಯಕ್ಕೆ ಬಳಿಸಿಕೊಂಡರು. ಇಂಥಹವರೆಲ್ಲರ ಮಧ್ಯೆ ಪಲ್ಲಟವಾಗದ ಕಲಾ ಪ್ರವಾದಿ ವರನಟರಿದ್ದಾರೆ. ಮಾನವನಿಂದ ಘಟಿಸುವ ಪ್ರಕೃತಿಸಹಜ ತಪ್ಪುಗಳನ್ನು ವರನಟರು ಮರುಕಳಿಸದಂತೆ ತಮ್ಮನ್ನು ಪರಿಶೋಧಿಸುಕೊಳ್ಳುತ್ತಾ, ಪರಿಶುದ್ಧಿಸಿಕೊಳ್ಳುತ್ತಾ ಸಾಗಿದರು, ಅವರು ಶ್ರದ್ಧೆಯಿಂದ ನಟಿಸಿದರು, ಸರಳವಾಗಿ ಬದುಕಿದರು, ತಮಗನಿಸಿದ್ದನ್ನು ಮಾತ್ರ ಮಾಡಿದರು, ವಿನಯವನ್ನು ಕಲಿಸಿಕೊಟ್ಟರು, ಬದುಕುವುದನ್ನು ಕಲಿಸಿಕೊಟ್ಟರು.
ಆ ಕಾಲದಿಂದ ಈ ಕಾಲಕ್ಕೆ ಬದಲಾಗದೆ ಉಳಿದ ಅಪರೂಪದ ಜೀವ, ಎಲ್ಲ ಜನರೇಷನ್ನಿನ ಜನತೆಯನ್ನು ಪ್ರಭಾವಿಸುವ ಭಾರತದ ಏಕೈಕ ರೋಲ್ ಮಾಡೆಲ್. ಆದ್ದರಿಂದಲೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜಕುಮಾರ್ ಅವರನ್ನು ಮೀರಿಸುವ ಮಾತು ಒತ್ತಟ್ಟಿಗಿರಲಿ ಸರಿಗಟ್ಟುವವರು ಇಲ್ಲ ಎಂಬುವುದನ್ನು ಸಾರ್ವತ್ರಿಕವಾಗಿ ಸತ್ಯವಾಗಿ ಒಪ್ಪಿಕೊಳ್ಳಲಾಗಿದೆ. ಅವರು “ನ ಭೂತೋ ನ ಭವಿಷ್ಯತಿ” ಎನ್ನುವಷ್ಟು ತಮಗೊಂದು ಪರ್ಯಾಯವಿಲ್ಲದಂತೆ ಬೆಳೆದು ನಿಂತಿದ್ದಾರೆ.
ಭಾರತದಲ್ಲಿ ರಾಜಕುಮಾರ ಮುಂಚೆ ಕಪೂರ್ ಮನೆತನದವರಿದ್ದರು, ಕುಮಾರತ್ರಯರು ಬಂದರು, ಖನ್ನಾ, ಖಾನ್ ಗಳು ಬಂದರು, ಎಂ.ಜಿ.ಆರ್ , ಎನ್.ಟಿ.ಆರ್ , ಎ.ಎನ್.ಆರ್, ಶಿವಾಜಿ ಬಂದರು, ಇಂದು ಬಚ್ಚನ್, ರಜನಿಕಾಂತ್ ವಂಶಸ್ಥರಿದ್ದಾರೆ. ಆದರೆ ವರನಟ ರಾಜಕುಮಾರ್ ಅವರನ್ನು ಸರಿಗಟ್ಟುವ ಅಥವಾ ಮೀರಿಸುವ ನಟ ಭಾರತದ ಯಾವುದೇ ಭಾಷೆಯಲ್ಲಿ ಇದುವರೆಗೂ ಬಂದಿಲ್ಲ.
ಆದ್ದರಿಂದಲೇ ಪರಿಪೂರ್ಣವಾಗಿ ಭಾರತರತ್ನಕ್ಕೆ ಅರ್ಹರಾಗಬಲ್ಲ ಭಾರತದ ಏಕೈಕ ನಟರೆಂದರೆ ಅದು ರಾಜಕುಮಾರ್ ಮಾತ್ರ. ಇದನ್ನು ಅನ್ಯಭಾಷೆಯ ನಟರು, ವಿದ್ವಾಂಸರು, ಚಿತ್ರ ವಿಮರ್ಶಕರು ಒಪ್ಪಿಕೊಂಡಿದ್ದಾರೆ. ಆದರೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ರಾಜಕುಮಾರ್ ಒಬ್ಬ ಅವಿದ್ಯಾವಂತ, ಕೆಳವರ್ಗದವರು ಎಂಬ ಕಾರಣಕ್ಕೆ ತುಳಿಯಲ್ಪಟ್ಟುದು ದುರಂತ. ಈ ಅಮಾನವತೆ ಇಂದಿಗೂ ಸಕ್ರಿಯವಾಗಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ನಿಧನರಾಗಿ 35 ವರ್ಷಗಳ ಬಳಿಕ ಭಾರತರತ್ನ ನೀಡಿದ ನಮ್ಮ ದೇಶ ಸಾಂಸ್ಕೃತಿಕ ಶಿಲ್ಪಿ ಡಾ. ರಾಜಕುಮಾರ್ ಅವರಿಗೆ ಭಾರತರತ್ನ ನೀಡಲು ಎಷ್ಟು ವರ್ಷಗಳನ್ನು ಕಾಯಬೇಕಾಗಬಹುದೋ?
ಇಂಥ ನಿರ್ವಿಕಾರ ನಿರಾಡಂಬರ ನಿರ್ಲಿಪ್ತರಾಗಿ ಇಡೀ ರಾಷ್ಟ್ರವೇನು, ಜಗತ್ತೇ ನಿಬ್ಬೆರಗಾಗುವಂತೆ ಬದುಕಿ, ಸಾಧಿಸಿದ ಸರ್ವನಾಂಪ್ರಿಯ, ಲೋಕಮಿತ್ರ, ಪ್ರಶ್ನಾತೀತ, ಪಕ್ಷಾತೀತ ವಿಶ್ವನಟ ಡಾ.ರಾಜಕುಮಾರ್ ಭಾರತದ ಪಾಲಿಗೆ ಅನರ್ಘ್ಯರತ್ನ. ಆದ್ದರಿಂದಲೇ “ಗಾಂಧೀಜಿಯವರು ನೊಬೆಲ್ ಗಿಂತ ದೊಡ್ಡವರು; ರಾಜಕುಮಾರ ಭಾರತರತ್ನಕ್ಕಿಂತ ದೊಡ್ಡವರು”
–ನಿಜಲಿಂಗಯ್ಯ ಹಾಲದೇವರಮಠ (ರಾಜಸುತ)
(2012ರ ಡಿಸೆಂಬರ್ ಅವಧಿಯಲ್ಲಿ ನನ್ನ ಲಗ್ನ ಪತ್ರಿಕೆಯಲ್ಲಿ ವರನಟ ರಾಜಕುಮಾರ ಕುರಿತು ಬರೆದ ಲೇಖನದ ಆಯ್ದ ಭಾಗ-2)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ2 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


