Connect with us

ನೆಲದನಿ

ಜಾತಿ ಪ್ರಜ್ಞೆ ಮತ್ತು ಪ್ರಗತಿಪರತೆಯ ನಡುವೆ ಡಾ. ರಾಜ್..!

Published

on

  • ನಾ ದಿವಾಕರ

ಒಂದು ಸಮಾಜ ಮತ್ತು ಸಮಾಜೋ ಸಾಂಸ್ಕೃತಿಕ ಸ್ಥಿತ್ಯಂತರಗಳು ಒಬ್ಬ ನಟನನ್ನು ರೂಪಿಸುತ್ತದೆಯೋ ಅಥವಾ ಒಬ್ಬ ಚಿತ್ರ ನಟ ಸಾಮಾಜಿಕ ಚಿಂತನೆಗಳನ್ನು, ಸ್ವರೂಪವನ್ನು ತನ್ನ ಪಾತ್ರಗಳ ಮೂಲಕ ಬಿಂಬಿಸುತ್ತಾನೋ ? ಈ ಪ್ರಶ್ನೆ ಬಹುಶಃ ಭಾರತದಲ್ಲಿ ಮಾತ್ರ ಪ್ರಸ್ತುತತೆ ಪಡೆಯುತ್ತದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ.

ಏಕೆಂದರೆ ಚಿತ್ರ ನಟರ ಮೂಲಕ ಸಮಾಜವನ್ನು ನೋಡುವ ಪರಂಪರೆಯೊಂದಿಗೇ , ಸಾಮಾಜಿಕ ನೆಲೆಯಲ್ಲಿ ನಿಂತು ಚಿತ್ರ ನಟರನ್ನು ನಿಷ್ಕರ್ಷೆಗೊಳಪಡಿಸುವ ಪರಂಪರೆಯೂ ಇಲ್ಲಿ ಬೆಳೆದುಬಂದಿದೆ. ಈ ಪರಂಪರೆಗೆ ಸುದೀರ್ಘ ಇತಿಹಾಸವೇನೂ ಇಲ್ಲ. ಬಹುಶಃ 1960ರ ದಶಕದ ನಂತರ ಕಂಡುಬಂದ ವಿದ್ಯಮಾನ ಇದು. 1970-80ರಲ್ಲಿ ಒಂದು ತಳಪಾಯವನ್ನು ನಿರ್ಮಿಸಿಕೊಂಡು ಈಗ ಬೃಹತ್ ವೃಕ್ಷವಾಗಿ ನಮ್ಮೆದುರು ನಿಂತಿದೆ.

ಮೂಲದಲ್ಲಿ ಈ ಬೃಹತ್ ವೃಕ್ಷಕ್ಕೆ ಬೀಜ ಬಿತ್ತಿದವರಾರು, ನೀರೆರೆದು ಪೋಷಿಸಿದವರಾರು ಎಂದು ನಾವು ಯೋಚಿಸುತ್ತಾ ಕುಳಿತರೆ ಕೊನೆಗೆ ನಮ್ಮನ್ನು ನಾವೇ ಹಳಿಯುತ್ತಲೋ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಲೋ ಕಾಲ ಕಳೆಯಬೇಕಾಗುತ್ತದೆ. ಏಕೆಂದರೆ ಇದು ಸಾಮಾಜಿಕ ಪಲ್ಲಟಗಳಿಂದ ಉಗಮಿಸಿದ ವಿದ್ಯಮಾನವಲ್ಲ. ಬದಲಾಗಿ ಈ ವಿದ್ಯಮಾನದಿಂದ ಕೆಲವು ಸಾಮಾಜಿಕ ಪಲ್ಲಟಗಳು ಕಂಡುಬಂದವು.

ಚಲನ ಚಿತ್ರ ನಟರನ್ನು ನಮ್ಮ ನಡುವೆ ತಂದು ನಿಲ್ಲಿಸಿ ಮೌಲ್ಯಮಾಪನ ಮಾಡುವ ಮೂಲಕ ಅವರಲ್ಲಿ ನಮ್ಮ ಸುತ್ತಲಿನ ಮೌಲ್ಯಗಳನ್ನು ಕಂಡುಕೊಳ್ಳುವ ಯತ್ನ ಒಂದೆಡೆಯಾದರೆ, ಮತ್ತೊಂದೆಡೆ ರಜತ ಪರದೆಯ ಮೇಲೆ ನಮ್ಮ ಸುತ್ತಲಿನ ಸಮಾಜವನ್ನು ಮೂಡಿಸಿ ಮೌಲ್ಯಗಳನ್ನು ಬಿತ್ತುವ ಪ್ರಕ್ರಿಯೆಯೂ ಚಾಲನೆ ಪಡೆದಿದ್ದನ್ನು ನಾವು ಗಮನಿಸಬೇಕು.

ಇದರ ನೇರ ಪರಿಣಾಮವೇ 1960-70ರ ದಶಕದ ಸಾಮಾಜಿಕ ಕಥಾವಸ್ತುಗಳ ಚಲನಚಿತ್ರಗಳ ಮಹಾಪೂರ. ಇದು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಲ್ಲ. ಹಿಂದಿ ಚಿತ್ರರಂಗದಲ್ಲಿ 1940-50ರ ದಶಕಗಳಲ್ಲಿ ನಡೆದ ಪ್ರಯತ್ನಗಳು ನಮ್ಮಲ್ಲಿ ನಡೆದಿದ್ದು ತಡವಾಗಿ. ಏಕೆಂದರೆ ದಕ್ಷಿಣ ಭಾರತದ ಚಲನಚಿತ್ರ ರಂಗ ತನ್ನ ರಂಗಸಜ್ಜಿಕೆಯನ್ನು ಬದಲಿಸಲು ಹೆಚ್ಚು ಕಾಲ ಬೇಕಾಗಿತ್ತು.

ಪೌರಾಣಿಕ-ಭಕ್ತಿರಸ ಕಥನಗಳನ್ನು ದಾಟಿ, ಅದೇ ಕಥಾವಸ್ತುಗಳನ್ನು ಸಾಮಾಜಿಕ ಚೌಕಟ್ಟಿನಲ್ಲಿ ಅಳವಡಿಸುವ ಪ್ರಯತ್ನದ ಫಲ ಈ ಮನ್ವಂತರದ ಘಟ್ಟದಲ್ಲಿ ಕಾಣಬಹುದಾಗಿತ್ತು. ಇಂದಿಗೂ ಕೆಲವು ಸಂದೇಶಾತ್ಮಕ ಅಥವಾ ಕಾದಂಬರಿ ಆಧರಿತ ಚಿತ್ರಗಳನ್ನು ಹೊರಗಿಟ್ಟು ನೋಡಿದಾಗ ಮೂರು ರೀತಿಯ ಕಥನಗಳು ಪರದೆಯ ಮೇಲೆ ವಿಭಿನ್ನ ಶೈಲಿಯಲ್ಲಿ, ವೈವಿಧ್ಯಮಯ ಸ್ವರೂಪಗಳಲ್ಲಿ ಕಂಡುಬರುತ್ತವೆ.

ಒಂದು, ತಂದೆ ಮಗನ ಸಂಘರ್ಷ. ತಾನು ಪ್ರೀತಿಸುವ ಹುಡುಗಿಯನ್ನು ಪ್ರಾಣ ತೆತ್ತಾದರೂ ಪಡೆಯುವ ಛಲ, ಹಂಬಲ ಮತ್ತು ಹಪಹಪಿಯಿಂದ ನಾಯಕ ನಟ ತನ್ನ ಹೆತ್ತವರನ್ನೂ ಧಿಕ್ಕರಿಸಿ, ಸಾಯಲೂ ಸಿದ್ಧವಾಗುವ ಕಥಾವಸ್ತು. ಇದರ ಮೂಲ ಮುಘಲ್‍ಎ-ಅಝಮ್ ನಲ್ಲಿ ಕಾಣಬಹುದು. ಇದು ಚಾರಿತ್ರಿಕ ಹಿನ್ನೆಲೆಯ ಕಾಲ್ಪನಿಕ ಕಥಾವಸ್ತು ಇರುವ ಚಿತ್ರ.

ಎರಡನೆಯದು ಕಳ್ಳ ಪೊಲೀಸ್ ಆಟ. ಕೆಳವರ್ಗದ ಅಥವಾ ಬಡತನದ ಬೇಗೆಯಲ್ಲಿ ಬೆಂದು ತನ್ನ ಸಮಸ್ಯೆಗಳಿಗೆ ಸಾಮಾಜಿಕ ಸ್ಥಿತ್ಯಂತರಗಳೇ ಕಾರಣ ಎಂದು ಭಾವಿಸಿ ವಾಮಮಾರ್ಗದ ಮೂಲಕ ತನ್ನ ಜೀವನ ಸುಧಾರಣೆಗಾಗಿ ಕಳ್ಳತನ, ದರೋಡೆ, ಕೊಲೆ ಸುಲಿಗೆಯಲ್ಲೂ ತೊಡಗುವ ನಾಯಕನ ಸುತ್ತಲಿನ ಕಥಾವಸ್ತು. ಇದಕ್ಕೆ ಅಶೋಕ್ ಕುಮಾರ್ ನಟಿಸಿರುವ ಕಿಸ್ಮತ್ ಸ್ಪೂರ್ತಿ.

ಮೂರನೆಯದು ಬಡತನ, ಊಳಿಗಮಾನ್ಯ ದೌರ್ಜನ್ಯ, ಭೂಮಿಯ ಪ್ರಶ್ನೆ, ಗ್ರಾಮೀಣ ಬದುಕು ಮತ್ತು ಶೋಷಣೆಯ ವಿರುದ್ಧ ಸಿಡಿದೇಳುವ ಯುವ ಮನಸ್ಸಿನ ಚಿತ್ರಣ. ತಾಯಿ ಮತ್ತು ಮಗನ ನಡುವಿನ ತಾತ್ವಿಕ ಸಂಘರ್ಷ. ಇದನ್ನು ಮದರ್ ಇಂಡಿಯಾ ಚಿತ್ರದಲ್ಲಿ ಕಾಣಬಹುದು. ನಾಲ್ಕನೆಯದು ಅಣ್ಣ ತಮ್ಮಂದಿರ ನಡುವೆ ಸೈದ್ಧಾಂತಿಕ ಸಂಘರ್ಷ. ಸಮಾಜ ಬದಲಾವಣೆಗೆ ವ್ಯವಸ್ಥೆಯ ಒಳಗಿದ್ದುಕೊಂಡೇ ಹೋರಾಡುವ ಒಬ್ಬ, ವ್ಯವಸ್ಥೆಯ ವಿರುದ್ಧ ದಂಗೆ ಎದ್ದು ಹೋರಾಡುವ ಮತ್ತೊಬ್ಬ ಇವರ ನಡುವಿನ ಸಂಘರ್ಷ, ಪೊಲೀಸ್-ಡಕಾಯಿತ ಹೀಗೆ. ಈ ಕಥಾವಸ್ತು ಗಂಗಾ ಜಮುನಾ ಚಿತ್ರದಲ್ಲಿದೆ. ಈ ನಾಲ್ಕೂ ಚಿತ್ರಗಳು 1950-60ರ ನಡುವೆ ಬಂದವು.

1960ರ ದಶಕದ ನಂತರ ಇಲ್ಲಿಯವರೆಗೂ ಈ ನಾಲ್ಕು ಕಥಾವಸ್ತುಗಳನ್ನು ಹೊರತುಪಡಿಸಿದ ಚಲನಚಿತ್ರಗಳನ್ನು , ವಾಣಿಜ್ಯ ಚಿತ್ರಗಳ ವಲಯದಲ್ಲಿ ಕಾಣಲು ಸಾಧ್ಯವೇ ಇಲ್ಲ. ಇದರೊಳಗೇ Taming of the Shrew ಆಂಗ್ಲ ಕಥೆಯಲ್ಲಿನ, ಹಠಮಾರಿ ಹೆಣ್ಣನ್ನು ಮಣಿಸುವ ಕಥೆ ಸೇರಿಕೊಳ್ಳುತ್ತದೆ. ಅಲ್ಲಿಯವರೆಗೂ ಸಾಮಾಜಿಕ ಕಥಾವಸ್ತುಗಳಿಂದ ತುಸು ದೂರವೇ ಇದ್ದ ದಕ್ಷಿಣ ಭಾರತದ ಚಿತ್ರರಂಗಕ್ಕೆ ಈ ಸಂದರ್ಭದಲ್ಲಿ ನೆಲೆಯಾಗಿ ನಿಂತ ನಟರು ಎಂಜಿಆರ್, ಶಿವಾಜಿಗಣೇಶನ್, ಎನ್‍ಟಿಆರ್, ನಾಗೇಶ್ವರ್‍ರಾವ್, ಪ್ರೇಂ ನಜೀರ್ ಮತ್ತು ನಮ್ಮ ರಾಜಕುಮಾರ್. ಇವರ ವರ್ಚಸ್ಸು ಬೆಳೆಯುವುದರಲ್ಲಿ ಕಥೆಗಾರರ ಪಾತ್ರ ಬಹಳ ದೊಡ್ಡದು.

1960ರ ದಶಕ ಭಾರತೀಯ ಸಮಾಜದಲ್ಲಿ ಹಲವಾರು ಪಲ್ಲಟಗಳಿಗೆ, ವಿಪ್ಲವಗಳಿಗೆ ಸಾಕ್ಷಿಯಾಗಿತ್ತು. ಸಾಮಾಜಿಕ ಬದಲಾವಣೆಗಾಗಿ ಜನಸಾಮಾನ್ಯರಲ್ಲಿ ಇದ್ದ ತುಡಿತ ಸಾಹಿತ್ಯದಲ್ಲೂ ವ್ಯಕ್ತವಾಗತೊಡಗಿತ್ತು. ಒಂದು ಸ್ವಸ್ಥ ಸಮಾಜ ಎಂದರೆ ಹೀಗೇ ಇರಬೇಕು ಎನ್ನುವ ಚಿಂತನೆಗಳು ಸ್ಪಷ್ಟ ನೆಲೆ ಕಂಡುಕೊಂಡಿದ್ದೂ ಈ ದಶಕದಲ್ಲೇ. ಮತ್ತೊಂದೆಡೆ ರಾಜಕೀಯ ಬದಲಾವಣೆಗಳು ಈ ದಶಕದ ಉತ್ತರಾರ್ಧದಲ್ಲಿ ತೀವ್ರತೆ ಪಡೆದುಕೊಂಡರೂ, ಆರಂಭದಲ್ಲಿ ಮೌಲ್ಯಯುತ ಸಮಾಜ ಆದರ್ಶಪ್ರಾಯವಾಗಿತ್ತು.

ರಾಜಕೀಯ ವಲಯದಲ್ಲೂ ಇದೇ ರೀತಿಯ ಮೌಲ್ಯಯುತ ಅಭಿವ್ಯಕ್ತಿಗೆ ಅಂದು ಅವಕಾಶವಿತ್ತು. ಈ ಮೌಲ್ಯಗಳ ಮೂಲಕವೇ ಒಂದು ಸಭ್ಯ, ಸಂಯಮಶೀಲ, ಸಂವೇದನಾಶೀಲ ಸಮಾಜ ನಿರ್ಮಾಣ ಸಾಧ್ಯ ಎನ್ನುವ ಒಂದು ದೃಢ ಸಂಕಲ್ಪ ಸಾಹಿತ್ಯಕ ಸ್ವರೂಪ ಪಡೆದಂತೆಯೇ, ಸಂಘಟನಾತ್ಮಕ ಸ್ವರೂಪವನ್ನೂ ಪಡೆದಿತ್ತು. ಸಿನಿಮಾ ಮೂಲಕವೂ ಇದೇ ಅಭಿವ್ಯಕ್ತಿಯನ್ನು ಕಾಣಬಹುದಿತ್ತು.

ಈ ಸಂದರ್ಭದಲ್ಲಿ ಹೊರಬಂದ ಸಾಮಾಜಿಕ ಕಥಾವಸ್ತುವಿನ ಚಲನಚಿತ್ರಗಳು ಜನಸಾಮಾನ್ಯರನ್ನು ಹೆಚ್ಚಾಗಿ ಆಕರ್ಷಿಸಿದವು. ರಾಮಾಯಣದ ರಾಮ, ಮಹಾಭಾರತದ ಧರ್ಮರಾಯ, ಹರಿಶ್ಚಂದ್ರ ಕಾವ್ಯದ ಹರಿಶ್ಚಂದ್ರರನ್ನು ಜನರು ಸಾಮಾಜಿಕ ಚಿತ್ರಗಳ ನಾಯಕರಲ್ಲಿ ನೋಡಲು ಬಯಸುತ್ತಿದ್ದರು. ಡಾ ರಾಜ್ ಅಭಿನಯದ ನಮ್ಮ ಸಂಸಾರ, ನಂದಗೋಕುಲ, ದೇವರ ಮಕ್ಕಳು ಹೀಗೆ ಹಲವು ಚಿತ್ರಗಳನ್ನು ನೆನೆಯಬಹುದು. ಈ ಸಂದರ್ಭದಲ್ಲೇ ಎಂಜಿಆರ್ ತಮ್ಮ ರಾಜಕೀಯ ಪ್ರವೇಶಕ್ಕೆ ಅನುಕೂಲವಾಗುವಂತಹ ರಾಬಿನ್ ಹುಡ್ ಮಾದರಿಯ ಚಿತ್ರಗಳನ್ನು ಸಾಮಾಜಿಕ ಚೌಕಟ್ಟಿನಲ್ಲೇ ನೀಡಿದ್ದನ್ನೂ ಗಮನಿಸಬೇಕು. ರೈತರಿಗಾಗಿ, ಕಾರ್ಮಿಕರಿಗಾಗಿ, ಶೋಷಿತರಿಗಾಗಿ ತನ್ನ ಪ್ರಾಣ ನೀಡುವ ನಾಯಕ ಪರದೆಯ ಮೇಲೆ ವಿಜೃಂಭಿಸತೊಡಗಿದ್ದು ಈ ಅವಧಿಯಲ್ಲೇ.

ಇದರ ಮುಂದುವರೆದ ಭಾಗವಾಗಿ ದುಷ್ಟ ಶಿಕ್ಷಕ-ಶಿಷ್ಟ ರಕ್ಷಕನ ಪಾತ್ರವೂ ಮುನ್ನೆಲೆಗೆ ಬಂದಿತ್ತು. ಸಮಾಜದ ದುಷ್ಟ ಶಕ್ತಿಗಳನ್ನು ಸದೆಬಡಿಯುವ ಹೀರೋ ಕೊನೆಗೆ ಪ್ರಾಣ ತೆತ್ತರೂ ಜನ ಸ್ವೀಕರಿಸುತ್ತಿದ್ದುದನ್ನು 1960ರ ದಶಕದಲ್ಲಿ ಕಾಣಬಹುದಿತ್ತು. ಆದರೆ 1980ರ ನಂತರ ನಾಯಕ ನಟ ಸಾಯುವುದನ್ನು ಜನರು ಬಯಸುತ್ತಿರಲಿಲ್ಲ. ಇದು ಬೇರೆ ವಿಚಾರ. ಸಮಾಜದಲ್ಲಿ ದುಷ್ಟರಿದ್ದಾರೆ, ಅವರನ್ನು ಮುಗಿಸಬೇಕು, ಒಳ್ಳೆಯ ಸಮಾಜ ಕಟ್ಟಬೇಕು ಈ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ಕಂಡುಬಂದ ತಾಕಲಾಟಗಳನ್ನು, ಒಳಿತು ಕೆಡಕುಗಳನ್ನು ಪರದೆಯ ಮೇಲೆ ಬಿಂಬಿಸುವ ಮೂಲಕ ಸೋದರರ ನಡುವಿನ ಕಲಹಗಳು ಎಷ್ಟೋ ಚಿತ್ರಗಳ ಕಥಾವಸ್ತುವಾಗಿತ್ತು.

ಪುನಃ ಇಲ್ಲಿ ನಾಯಕ ನಟ ಧರ್ಮರಾಯ ಅಥವಾ ಶ್ರೀರಾಮ. ಕೆಲವೊಮ್ಮೆ ಹರಿಶ್ಚಂದ್ರನಂತೆ ಎಲ್ಲವನ್ನೂ ತ್ಯಾಗಮಾಡುವಂತೆಯೂ ಬಿಂಬಿಸಲ್ಪಟ್ಟ. ಖಳನಾಯಕನಿಗೆ ಸಿದ್ಧ ಮಾದರಿಗಳನ್ನು ಹುಡುಕಲಿಲ್ಲ. ನಾಯಕ ನಟರ ಈ ಮಾದರಿಗಳನ್ನೇ ವೀಕ್ಷಕರು ಸಮಾಜದಲ್ಲೂ ಹುಡುಕಲಾರಂಭಿಸಿದ್ದರು. ತಲೆ ಬಾಚುವ ಶೈಲಿಯಿಂದ ಹಿಡಿದು ಧರಿಸುವ ಉಡುಪು, ನಡಿಗೆಯ ಶೈಲಿಯವರೆಗೂ ಪರದೆಯ ಮೇಲಿನ ಹೀರೋಗಳು ಯುವ ಪೀಳಿಗೆಯ ಮೇಲೆ ಪ್ರಭಾವ ಬೀರಲಾರಂಭಿಸಿದ್ದರು.

ಹಾಗಾಗಿ ಸಿನಿಮಾ ಕಥೆ ಬರೆಯುವವರಿಗೆ ಇದೇ ಮೌಲ್ಯಗಳ ಚೌಕಟ್ಟಿನಲ್ಲೇ ಹೀರೋ ಪಾತ್ರವನ್ನು ಕಟ್ಟಿಕೊಡುವುದೂ ಅನಿವಾರ್ಯವಾಯಿತು. ಮುತ್ತುರಾಜ್ ಡಾ ರಾಜ್ ಆಗಿ ಉದಯಿಸಿದ್ದು ಹೀಗೆ. ನಮಗೆ ಡಾ ರಾಜ್ ಇಷ್ಟವಾಗುವುದಕ್ಕೂ ಇದೇ ಕಾರಣ. ತೆಲುಗಿನಲ್ಲಿ ಎನ್‍ಟಿಆರ್, ತಮಿಳಿನ ಎಂಜಿಆರ್ ಜನಪ್ರಿಯರಾದದ್ದೂ ಈ ಕಾರಣಕ್ಕೇ. ಈ ಚೌಕಟ್ಟಿನಿಂದ ಹೊರನಿಂತದ್ದು ಶಿವಾಜಿ, ನಾಗೇಶ್ವರರಾವ್.

ಇದನ್ನು ಅಪರಾಧ ಎಂದೇನೂ ಭಾವಿಸಬೇಕಿಲ್ಲ. ಆಗಿನ ಸಮಾಜ ಅದನ್ನು ಬಯಸಿತ್ತು, ಚಿತ್ರ ನಿರ್ಮಾಪಕರು ನೀಡಿದರು. ಆಗಿನ ಕಥಾವಸ್ತುಗಳು ಹೀರೋಗಾಗಿ ರೂಪುಗೊಳ್ಳುತ್ತಿರಲಿಲ್ಲ. ಹೀರೋ ಈ ಕಥಾವಸ್ತುವಿನ ಮೂಲಕ ಜನಮಾನಸದಲ್ಲಿ ಮನೆ ಮಾಡುತ್ತಿದ್ದ. ಇದು ಬದಲಾಗಿದ್ದು 1975-80ರ ನಂತರ. ನಾಯಕ ನಟನ ವರ್ಚಸ್ಸನ್ನು ಗಮನದಲ್ಲಿಟ್ಟುಕೊಂಡೇ ಕಥೆ ಹೆಣೆಯುವ ಪರಂಪರೆ ಆರಂಭವಾಗಿದ್ದು ಈ ದಶಕದಲ್ಲಿ. ಡಾ ರಾಜ್ ಸಹ ಇದಕ್ಕೆ ಹೊರತಾಗಲಿಲ್ಲ. ಡಾ ರಾಜ್ ಸ್ವಂತ ನಿರ್ಮಾಣ ಸಂಸ್ಥೆ ಆರಂಭವಾಗಿದ್ದೂ ಈ ಹಂತದಲ್ಲೇ. ಡಾ ರಾಜ್ ನಟನೆಯ ಚಿತ್ರಗಳನ್ನು ಈ ಎರಡು ಅವಧಿಗಳ ನಡುವೆ ಪರದೆಯನ್ನಿಟ್ಟು ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ.

ಮತ್ತೊಂದೆಡೆ ಚಿತ್ರ ನಟರನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವ ಪರಂಪರೆ ಆರಂಭವಾದದ್ದೂ ಈ ಸಂದರ್ಭದಲ್ಲೇ ಹೆಚ್ಚು. ಚಿತ್ರನಟರನ್ನು ಬಾಹ್ಯ ಸಮಾಜ ಜಾತಿಯ ಮೂಲಕ ಗುರುತಿಸುವ ಪರಂಪರೆ ಆರಂಭವಾದದ್ದು 1980ರ ನಂತರ. ಹಾಗಾಗಿಯೇ ನಮಗೆ ಬಾಲಣ್ಣ,. ಅಶ್ವಥ್, ವಾದಿರಾಜ್, ನರಸಿಂಹರಾಜು, ಉದಯಕುಮಾರ್, ದಿನೇಶ್ ಇವರಾರೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಕಾಣಲಿಲ್ಲ. ನಾಗ್ ಸೋದರರೂ ಸಹ. ಈಗ ನಾವು ಈ ಸಂದರ್ಭದಿಂದ ಬಹುತೇಕ ಅರ್ಧಶತಮಾನದಷ್ಟು ದೂರ ಬಂದಿದ್ದೇವೆ. ಈ ಮಹಾನ್ ಕಲಾವಿದರ ನಟನೆ ಇಂದಿಗೂ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅವರು ಪರದೆಯ ಮೇಲೆ ಕಟ್ಟಿಕೊಟ್ಟ ಆದರ್ಶಗಳು ನಮ್ಮ ನಡುವೆ ನಶಿಸಿಹೋಗುತ್ತಿದ್ದರೂ ಅದನ್ನು ಮೌಲ್ಯೀಕರಿಸಲು ನಾವು ಸಿದ್ಧರಾಗಿದ್ದೇವೆ. ಏಕೆಂದರೆ 1990ರ ನಂತರದ ಚಿತ್ರರಂಗ ಈ ಮೌಲ್ಯಗಳನ್ನು ದಾಟಿ ಬಂದಿದೆ.

ಈ ಸಂದರ್ಭದಲ್ಲಿ ನಾವು ಡಾ ರಾಜ್ ಅವರನ್ನು ಯಾವ ನೆಲೆಯಲ್ಲಿಟ್ಟು ಕಾಣಬೇಕು ? ಅವರ ನಟನೆಯನ್ನು ಎಲ್ಲರೂ ಇಷ್ಟಪಡಬೇಕು ಎಂದು ಅಪೇಕ್ಷಿಸುವುದೇ ತಪ್ಪಲ್ಲವೇ ? ಡಾ ರಾಜ್ ಒಬ್ಬ ನಟನೇ ಅಲ್ಲ ಎನ್ನುವವರು ಯಾರೇ ಆಗಿರಲಿ ಅವರಿಗೆ ನಟನೆಯ ಬಗ್ಗೆ ಅತ್ಯದ್ಭುತವಾದ ಕಲ್ಪನೆ, ಜ್ಞಾನ ಮತ್ತು ಅಭಿನಯ ಕಲೆಯ ಜ್ಞಾನ ಇರಬೇಕು. ಇಲ್ಲವಾದರೆ ಅದು ಬೀಸು ಹೇಳಿಕೆಯಾಗಿರಬೇಕು. ಇದು ಎಲ್ಲ ನಟರಿಗೂ ಅನ್ವಯಿಸುತ್ತದೆ. ಇನ್ನು ರಾಜ್ ನಟನೆ ಇಷ್ಟವಾಗುವುದಿಲ್ಲ ಎಂದರೆ ಅದು ನಾವು ಅಭಿನಯವನ್ನು ನೋಡುವ ನಮ್ಮದೇ ಆದ ರೀತಿಯನ್ನು ಅವಲಂಬಿಸುತ್ತದೆ. ಕೆಲವರಿಗೆ ಇಷ್ಟವಾಗದಿದ್ದರೆ ಏನಂತೆ, ಅದು ಡಾ ರಾಜ್‍ಗೆ ಅಪಚಾರ ಎಸಗಿದಂತೆ ಎಂದು ಏಕೆ ಭಾವಿಸಬೇಕು.

ಇಲ್ಲಿಯೂ ಜಾತಿಪ್ರಜ್ಞೆಯ ನೆಲೆಯಲ್ಲಿ ನಾವು ನಿಷ್ಕರ್ಷೆ ಮಾಡುತ್ತಾ ಹೋದರೆ ಭಾರತದ ಬಾಲಿವುಡ್ ಕೋಮುವಾದದ ಪ್ರಯೋಗಾಲಯವಾಗಿಬಿಡುತ್ತದೆ. ಅಲ್ಲವೇ ? ಹಾಗಾಗುವುದು ಬೇಡ. ಸಾಹಿತ್ಯ, ಕಲೆ, ನೃತ್ಯ, ಸಿನಿಮಾ, ರಂಗಭೂಮಿ ಇವೆಲ್ಲವೂ ಸಮಾಜದ ಆ ಹೊತ್ತಿನ ಸ್ಥಿತ್ಯಂತರಗಳನ್ನು ಬಿಂಬಿಸುವ ಆಕರಗಳೂ ಹೌದು, ವಾಹಿನಿಗಳೂ ಹೌದು. ಈ ಆಕರಗಳಲ್ಲಿ ಉದಯಿಸುವ ಕಲಾವಿದರು ತಮ್ಮದೇ ಆದ ನೆಲೆಯಲ್ಲಿ ತಮ್ಮ ಅಂಗಿಕ ಅಭಿನಯವನ್ನೋ, ಕಲಾಪ್ರತಿಭೆಯನ್ನೋ, ಅಕ್ಷರ ಪಾಂಡಿತ್ಯವನ್ನೋ ಹೊರಸೂಸುತ್ತಾರೆ. ಆ ಭೂಮಿಕೆಯಿಂದಾಚೆಗಿನ ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ, ಅವರ ಪರದೆಯ ಮೇಲಿನ, ರಂಗದ ಮೇಲಿನ ಅಭಿವ್ಯಕ್ತಿಯನ್ನೂ ಗೌರವಿಸುವುದು ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕು.

ಪ್ರಗತಿಪರ ಮನಸುಗಳಿಗೆ ರಾಜ್ ಹೇಗೆ ನೆರವಾಗುತ್ತಾರೆ ? ಅಥವಾ ಹೇಗೆ ನೆರವಾಗುವುದಿಲ್ಲ ? ಈ ಪ್ರಶ್ನೆಗಳಿಗೆ ಉತ್ತರ ಶೋಧಿಸಲು ಸಾಧ್ಯವೇ ? ಇಲ್ಲ ಎಂದ ಮೇಲೆ ಪ್ರಗತಿಪರರಲ್ಲಿ ಒಡಕು ಮೂಡಿಸಲು ರಾಜ್ ಏಕೆ ದಾಳವಾಗಬೇಕು ? ಭೈರಪ್ಪನವರ ಒಂದು ಹೇಳಿಕೆಗೆ ನಾವು ಇಷ್ಟೊಂದು ಮೌಲ್ಯ ನೀಡಬೇಕೇ ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತಲೇ ಹೋಗುತ್ತವೆ. ನಮ್ಮ ಮುಂದಿನ ಸವಾಲುಗಳಿಗೆ ಈ ಪ್ರಶ್ನೆಗಳು ಯಾವ ರೀತಿಯಲ್ಲೂ ಸಾಂತ್ವನ ನೀಡುವುದಿಲ್ಲ. ಹಾಗಿದ್ದ ಮೇಲೆ ಪ್ರಾಮಾಣಿಕ ಪ್ರಗತಿಪರರನ್ನೂ ಅವಹೇಳನ ಮಾಡಲು ಡಾ ರಾಜ್ ಏಕೆ ಬಳಕೆಯಾಗಬೇಕು. ಇದು ನಾವು ರಾಜ್ ಅವರಿಗೆ ಮಾಡುವ ಅಪಚಾರ. ಬೇಡ ಅಲ್ಲವೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

Trending