Connect with us

ನೆಲದನಿ

ನೋಮ್ ಚಾಮ್ಸ್ಕಿ : ಒಬ್ಬ Radical ಚಿಂತಕನಾದ ಕಹಾನಿ..!

Published

on

  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನೋಮ್ ಚಾಮ್ಸ್ಕಿಯು 1928 ರಲ್ಲಿ ಫಿಲಡೆಲ್ಫಿಯಾದಲ್ಲಿ ಜನಸಿದನು. ಇವನ ತಂದೆ-ತಾಯಿಗಳು ರಷ್ಯಾದಿಂದ ಅಮೇರಿಕಕ್ಕೆ ವಲಸಿ ಬಂದವರು. ನೋಮ್ ಚಾಮ್ಸ್ಕಿಯು ಬೆಳದಿದ್ದೆಲ್ಲ ಪಕ್ಕಾ ಐರಿಶ್ ಮತ್ತು ಜರ್ಮನ್ ಪರಿಸರವಾಗಿತ್ತು. ಇವನನ್ನು ತುಂಬಾ ಎಳೆ ವಯಸ್ಸಿನಲ್ಲಿಯೇ ಡೆವೆಯೈಟ್ ಪ್ರಾಯೋಗಿಕ ಸ್ಕೂಲ್ಗೆ ಸೇರಿಸಿಲಾಗಿತ್ತು. ಈ ಸ್ಕೂಲ್ನಲ್ಲಿ ಮಕ್ಕಳ ಕಲಿಕೆಗಾಗಿಯೇ ಕಲಿಕೆಯನ್ನು ಉತ್ತೇಜಿಸುತ್ತಿದ್ದರು.

ನೋಮ್ ಚಾಮ್ಸ್ಕಿಯು ಪ್ರತಿಯೊಂದಕ್ಕೂ ಬಹಳ ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದನು. ಇವನು ತನ್ನ ಹತ್ತನೆಯ ವಯಸ್ಸಿನಲ್ಲಿಯೇ ಸ್ಪ್ಯಾನಿಶ್ ಸಿವಿಲ್ ವಾರ್ನ್ನು ಕುರಿತು ಒಂದು ದೀರ್ಘ ಲೇಖನ ಬರೆದು ತನ್ನ ಸ್ಕೂಲ್ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ್ದನು ಎನ್ನುವುದು ಗಮನಾರ್ಹ.

ಕೆಲವೇ ವರ್ಷಗಳಲ್ಲಿಯೇ ಚಾಮ್ಸ್ಕಿಯು ತನ್ನ ಕಾರ್ಯಕ್ಷೇತ್ರವನ್ನು ರಾಜಕೀಯ ದಿಗಂತಕ್ಕೂ ವಿಸ್ತರಿಸಿಕೊಂಡನು. ಇವನು ನ್ಯೂಯಾರ್ಕಿನ ತನ್ನ ತಾಯಿಯ ಸಂಬಂಧಿಕರ ಮನೆಗೆ ನಿರಂತರವಾಗಿ ಹೋಗುತ್ತಿದ್ದನು. ಇಲ್ಲಿ ಇವನ ಒಬ್ಬ ಅಂಕಲ್ ನ್ಯೂಸ್ ಪೇಪರ್ ಅಂಗಡಿಯನ್ನು ಕಿಯೋಸ್ಕ್ ಬೀದಿಯಲ್ಲಿ ಇಟ್ಟುಕೊಂಡಿದ್ದನು. ಸ್ವದೇಶದಿಂದ ಬಹಿಷ್ಕಾರಕ್ಕೆ ಒಳಗಾಗಿ ಇಲ್ಲಿಗೆ ವಲಸೆ ಬಂದ ಎಲ್ಲ Radical ಚಿಂತಕರು ಹಾಗೂ ಜ್ಯೂಯಿಶ್ ಆನ್ಯಾರ್ಕಿ-ಸಿಂಡಿಕಲಿಸ್ಟ್ರು ನಿತ್ಯವೂ ಇಲ್ಲಿ ಸೇರುತ್ತಿದ್ದರು. ಇವರು “Freie Arbeiter Stimme”ಎನ್ನುವ ಪ್ರಗತಿಪರ ದಿನಪತ್ರಿಕೆಯೊಂದನ್ನು ತರುತ್ತಿದ್ದರು.

ಸುಪ್ರಸಿದ್ಧ ಆನ್ಯಾರ್ಕಿಸ್ಟ್ ಬರಹಗಾರ ಮತ್ತು ಆಕ್ಟಿವಿಸ್ಟ್ ಆಗಿದ್ದ ರೂಡಾಲ್ಫ ರಾಕರ್ ಇತನು ತನ್ನ ಲೇಖನಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದನು. ಇಂತಹ ಬರಹ ಮತ್ತು ಅವುಗಳ ಕುರಿತ ಚರ್ಚೆ-ಸಂವಾದಗಳು ಚಾಮ್ಸ್ಕಿಯ ತಿಳಿವಳಿಕೆಯನ್ನು ವಿಸ್ತರಿಸಿದವು. ರಾಜಕೀಯ ಚಿಂತನೆಯಲ್ಲಿ ತೊಡಗಿಕೊಳ್ಳುವ ಈತನ ಆಸಕ್ತಿಗೆ ಇದುವೇ ಪ್ರೇರಣೆಯಾಗಿತ್ತು. ಪರಿಣಾಮವಾಗಿ ಚಾಮ್ಸ್ಕಿಯು ತನ್ನ ರಾಜಕೀಯ ತಾತ್ವಿಕತೆ ಮತ್ತು ಚಿಂತನೆಯನ್ನು ಅತ್ಯಂತ ಪ್ರಖರವಾಗಿ ರೂಪಿಸಿಕೊಂಡನು.

ಆದರೆ ಚಾಮ್ಸ್ಕಿಗೆ ಜೀವನವದ ಬಗ್ಗೆ ಗಾಭರಿ ಉಂಟಾಗಿದ್ದು ಸ್ಥಳೀಯ ಹೈಸ್ಕೂಲ್ಗೆ ಸೇರಿಕೊಂಡಾಗ. ಏಕೆಂದರೆ ಇಲ್ಲಿಯ ಸಾಂಪ್ರದಾಯಿಕ ಹಿತಾಸಕ್ತಿ ಹಾಗೂ ಸಂಕುಚಿತ ಆಲೋಚನ ಕ್ರಮಕ್ಕೆ ಸೀಮಿತಗೊಂಡ ಶಿಕ್ಷಣ ಕ್ರಮವನ್ನು ಕಂಡು ವಿಚಲಿತನಾಗಿದ್ದ. ಆದರೆ ಇದಕ್ಕೆ ಎದೆಗುಂದದೆ ಚಾಮ್ಸ್ಕಿಯು ಇದೆಲ್ಲವನ್ನೂ ಮೀರಿ, ಇದರಿಂದ ಯಾವುದೇ ಬಗೆಯಲ್ಲಿ ಬಾಧಿತನಾಗದೆ ತನ್ನ ಹದಿನಾರನೇ ವಯಸ್ಸಿನಲ್ಲಿ ಆ ಶಾಲೆಯಿಂದ ಶಿಕ್ಷಣವನ್ನು ಮುಗಿಸಿಕೊಂಡು ಹೊರಬಂದನು.

ಎರಡನೇ ಜಾಗತಿಕ ಮಹಾಯುದ್ಧವು ಕೊನೆಗೊಂಡಿದ್ದರೂ, ಹೀರೊಶಿಮಾ ಮತ್ತು ನಾಗಸಾಕಿ ಮೇಲಿನ ಬಾಂಬ್ ದಾಳಿ ಜಗತ್ತಿನ ದೆಸೆಯನ್ನೇ ಬದಲಿಸಿತ್ತು. ಆಗಾಗಲೇ ಬೌದ್ಧಿಕ ಮತ್ತು ತಾತ್ವಿಕ ಸ್ಪಷ್ಟತೆಯನ್ನು ರೂಪಿಸಿಕೊಂಡಿದ್ದ ಈ ನೋಮ್ ಚಾಮ್ಸ್ಕಿಯು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ, ತರ್ಕಶಾಸ್ತ್ರ ಮತ್ತು ಭಾಷಾಶಾಸ್ತ್ರ ವಿಷಯಗಳಲ್ಲಿ ಜನರಲ್ ಪದವಿಗೆ ಪ್ರವೇಶವನ್ನು ಪಡೆದುಕೊಂಡನು. ಜ್ಯೂಯಿಶ್ ಕಾಲೇಜಿನಲ್ಲಿ ಹೀಬ್ರೂ ಭಾಷೆಯನ್ನು ಕಲಿಸುತ್ತಾ ತನ್ನ ನಿರ್ವಹಣೆಗೆ ಬೇಕಾದ ಹಣವನ್ನು ಈತನು ಸಂಪಾದಿಸಿಕೊಳ್ಳುತ್ತಿದ್ದ. ಪ್ರಖ್ಯಾತ ಹೀಬ್ರೂ ಭಾಷಾ ವಿದ್ವಾಂಸರಾದ ಈತನ ತಂದೆ ಈ ಕಾಲೇಜಿನಲ್ಲಿಯೇ ಪ್ರಾಂಶುಪಾಲರಾಗಿದ್ದರು.

ತರುಣ ಚಾಮ್ಸ್ಕಿಗೆ ಈ ವಿಶ್ವವಿದ್ಯಾನಿಲಯವು ಸಾಕಷ್ಟು ನಿರಾಸೆಯನ್ನು ಹುಟ್ಟಿಸಿತು. ಇಲ್ಲಿಯೂ ಕೂಡ ಹೆಚ್ಚು-ಕಡಿಮೆ ಹೈಸ್ಕೂಲಿನ ಪರಿಸ್ಥಿತಿಯೇ ಮುಂದುವರೆದಿತ್ತು. ಆದರೆ ಇತನ ಕುಟುಂಬವು ಸಾಂಪ್ರದಾಯಿಕವೂ ಹಾಗೂ ವೈಚಾರಿಕವೂ ಆಗಿದ್ದ ಜ್ಯೂಯಿಶ್ ಸಂಸ್ಕೃತಿಯಲ್ಲಿ ಸಂಪೂರ್ಣ ಸಮೀಕರಣಗೊಂಡಿತ್ತು ಎನ್ನುವುದು ಮಾತ್ರ ವಿಶೇಷ. ಚಾಮ್ಸ್ಕಿಯು ಕೂಡ ಇತರೆ ಜ್ಯೂಯಿಶ್ ತರುಣರ ಹಾಗೆ ಪ್ಯಾಲೆಸ್ತೈನ್ಗೆ ಹೋಗಿ ತನ್ನ ರಾಜಕೀಯ ಬಳಗದೊಂದಿಗೆ ಸೇರಿ, ಈ ರಾಷ್ಟ್ರದ ಜ್ಯೂಯಿಶ್ ಮತ್ತು ಅರಬ್ ಸಮೂಹಗಳ ನೆಮ್ಮದಿಯ ಹಾಗೂ ಸಹಬಾಳ್ವೆಯ ಬದುಕನ್ನು ನಡೆಸುವುದಕ್ಕೆ ಪೂರಕವಾಗುವ ಹೊಸ ರಾಷ್ಟ್ರದ ನಿರ್ಮಾಣಕ್ಕೆ ಕೊಡುಗೆ ನೀಡುವ ದಾರಿಯನ್ನು ಈತನು ಗಂಭೀರವಾಗಿಯೇ ಪರಿಗಣಿಸಿದ್ದನು.

ಸಾಧ್ಯವಾದರೆ ಇದನ್ನು ತನ್ನ ಆ್ಯನಾರ್ಕಿಸ್ಟ್ ತಾತ್ವಿಕ ಆದರ್ಶದ ನೆಲೆಯಿಂದ ರೂಪಿಸಿಕೊಳ್ಳುವ ದೆಸೆಯಲ್ಲಿದ್ದನು. ಆವಾಗಲೇ ಚಾಮ್ಸ್ಕಿ ಪೆನ್ಸಿಲೇನ್ವಿಯಾ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರದ ಪ್ರಾಧ್ಯಾಪಕ ಝೆಲ್ಲಿಂಗ್ ಹ್ಯಾರಿಸ್ರನ್ನು ಭೇಟಿಯಾದನು. ಈ ಪ್ರಾಧ್ಯಾಪಕನು ಕೂಡ ಜ್ಯೂಯಿಶ್ ವೈಚಾರಿಕ ಸಂಘಟನೆಯ (Avukah) ಪ್ರಭಾವಿ ಚಿಂತಕನಾಗಿದ್ದನು. ಈ ಸಂಘಟನೆಯು ಪ್ಯಾಲೆಸ್ತೈನ್ಗಾಗಿ ಆ್ಯಂಟಿ-ಝೀಯಾನಿಸ್ಟಿಕ್ ಬೆಳವಣೆಗೆಯನ್ನು ಸಮರ್ಥಿಸುವುದಾಗಿತ್ತು.

ಆದರೆ ಭಾಷಾಶಾಸ್ತ್ರದ ಅಧ್ಯಯನವು ಚಾಮ್ಸ್ಕಿಯ ಹಣೆಬರಹವನ್ನೇ ಬದಲಿಸಿತು ಎಂದು ಹೇಳಬಹುದು. ಭಾಷೆ ಎಂದರೇನು? ನಾವು ಭಾಷೆಯನ್ನು ಹೇಗೆ ಗ್ರಹಿಸುತ್ತೇವೆ? ಈ ಪ್ರಕ್ರಿಯೆ ಹೇಗಾಗುತ್ತೆ? ಎಂಬೀತ್ಯಾದಿ ತಾತ್ವಿಕ ಜಿಜ್ಞಾಸೆಗಳನ್ನು ಕುರಿತು ಭಾಷಾಶಾಸ್ತ್ರ ಅಧ್ಯಯನ ಮಾಡಲಾರಂಭಿಸಿದ ಚಾಮ್ಸ್ಕಿಗೆ, ಪ್ಯಾಲೆಸ್ತೈನ್ಗೆ ಹೋಗುವ ಇತನ ಉದ್ದೇಶವನ್ನೇ ಮಾರ್ಗಪಲ್ಲಟಗೊಳಿಸಿತು. ಹೌದು ಈ ಕಾರಣಕ್ಕಾಗಿಯೇ ಚಾಮ್ಸ್ಕಿ ತನ್ನ ಬಾಲ್ಯ ಸ್ನೇಹಿತೆ ಕರೊಲ್ ಡೋರಿಸ್ ಶಾಟ್ಜ್ನನ್ನು ಪ್ರೀತಿಸಿ 1949ರಲ್ಲಿ ಮದುವೆಯಾದನು.

ಈ ಜೋಡಿ ತಾವು ಪ್ಯಾಲೆಸ್ತೈನ್ಗೆ ಹೋಗುವ ಉದ್ದೇಶವನ್ನು ಮಾತ್ರ ಕೈ ಬಿಟ್ಟಿರಲಿಲ್ಲ, ಆದರೆ ಇಷ್ಟೊತ್ತಿಗೆ ಚಾಮ್ಸ್ಕಿ ಭಾಷಾಶಾಸ್ತ್ರದ ಅಧ್ಯಯನದಲ್ಲಿ ಆಳವಾಗಿ ಮುಳುಗಿ ಹೋಗಿದ್ದ. ಈ ವಿಷಯವನ್ನೇ ತನ್ನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಅಧ್ಯಯನದ ಮುಖ್ಯ ವಿಷಯವನ್ನಾಗಿಯೂ ಆಯ್ದುಕೊಂಡನು. ಇವನೊಬ್ಬ ಅಸಾಧಾರಣ ಭಾಷಾಶಾಸ್ತ್ರಜ್ಞನಾಗಿಯೇ ಹುಟ್ಟಿರುವನು ಎಂಬುದೀಗ ಚರಿತ್ರೆ.

ಆ ಹೊತ್ತಿಗಾಗಲೇ ವಿದ್ವತ್ ವಲಯದಲ್ಲಿ ಕೆಲವು ವಿದ್ವಾಂಸರು ಇತನ ಪ್ರತಿಭೆಯನ್ನು ಗುರುತಿಸಿದ್ದರು. ಹಾಗಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಚಾಮ್ಸ್ಕಿಗೆ ಫೆಲೋಶಿಪ್ ಸಿಕ್ಕಿತು. ಚಾಮ್ಸ್ಕಿ ಭಾಷಾಶಾಸ್ತ್ರದಲ್ಲಿ ತನ್ನ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸದ ಅಧ್ಯಯನವನ್ನು ಇಲ್ಲಿಯೇ ಅತ್ಯಂತ ಗಂಭೀರವಾಗಿ ಆರಂಭಿಸಿದನು. ಈ ಫಲೋಶಿಪ್ನಲ್ಲಿ ಟ್ರಾವೆಲ್ ಗ್ರ್ಯಾಂಟಿಗೆ ಅವಕಾಶವಿದ್ದದರಿಂದ, 1953 ರಲ್ಲಿ ಚಾಮ್ಸ್ಕಿಯು ತನ್ನ ಹೆಂಡತಿಯೊಂದಿಗೆ ಯೂರೋಪ್ ಮತ್ತು ಇಸ್ರೇಲ್ಗೆ ಭೇಟಿ ಕೊಟ್ಟನು.

ಈ ಭೇಟಿಯು ಇವರಿಬ್ಬರ ಮೇಲೆ ಗಾಢ ಪ್ರಭಾವವನ್ನು ಬೀರಿತು. ವಿಶೇಷವಾಗಿ, ಯೂರೋಪ್ ಮತ್ತು ಅಮೇರಿಕ ಹಾಗೂ ಇಸ್ರೇಲ್ಗಳ ನಡುವಿರುವ ಸಂಪತ್ತಿನ ಅಗಾಧ ಅಂತರವನ್ನು ಮತ್ತು ಇಸ್ರೇಲ್ ಒಂದು ಯುದ್ಧದ ರಣರಂಗವಾಗಿದ್ದು ನೋಡಿ ಇವರು ನಲುಗಿ ಹೋಗಿದ್ದರು. ಇವರಿಗೆ ಇಸ್ರೇಲ್ ಜನರ ಸಮೂಹ ಪ್ರಜ್ಞೆ ಬಾಂಧವ್ಯ ಇಷ್ಟವಾಗಿತ್ತು.

ಆದರೆ, ಚಾಮ್ಸ್ಕಿಗೆ ತನ್ನ ರಾಜಕೀಯ ಸೂಕ್ಷ್ಮಭಾವನೆಗಳು ಪ್ರತಿವಾದಿ ರಾಜಕೀಯ ತತ್ವಗಳು ಹಾಗೂ ಧಾರ್ಮಿಕ-ಸಾಂಸ್ಕೃತಿ ಅಂಟುವಿಕೆಯಿಂದ ತೀವ್ರವಾಗಿ ಬಾಧಿಸಿದವು. ಅದು ಸ್ಟ್ಯಾಲಿನಿಸಂ ಆಗಿರಬಹುದು ಅಥವಾ ಝೀಯಾನಿಸಂ ಆಗಿರಬಹುದು ಅಥವಾ ಇಲ್ಲಿಯ ಸ್ಥಳೀಯ ಅರಬ್ರ ಜನಾಂಗೀಯ ಪ್ರಾಬಲ್ಯ ಆಗಿರಬಹುದು. ಯಾವುದಾದರೂ ಸರಿ ವಸ್ತುನಿಷ್ಠ ಬದ್ಧತೆಯೇ ಚಾಮ್ಸ್ಕಿಯ ಹಂಬಲವಾಗಿತ್ತು.

ಬೂಸ್ಟನ್ಗೆ ವಾಪಸ್ಸು ಬಂದ ಮೇಲೆ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸ್ಸಾಚುಸೆಟ್ಸ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕ ಹುದ್ದೆ ಚಾಮ್ಸ್ಕಿಗೆ ಲಬಿಸಿತು. ಇಲ್ಲಿ ಪ್ರಾಯೋಗಿಕ ವಿಜ್ಞಾನ ವಿಭಾಗದಲ್ಲಿ ಚಾಮ್ಸ್ಕಿಗೆ ಸ್ವತಂತ್ರ ಅಧಿಕಾರವನ್ನು ಕೊಡಲಾಗಿತ್ತು. ಚಾಮ್ಸ್ಕಿಗೆ ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಭಾಗವನ್ನು ಇಲ್ಲಿ ಸ್ಥಾಪಿಸಲು ಇದರಿಂದ ಸಾಧ್ಯವಾಯ್ತು. ಕೆಲವೇ ದಿನಗಳಲ್ಲಿ, ಜಗತ್ತಿನಲ್ಲಿಯೇ ಈ ವಿಭಾಗವು ಪ್ರಗತಿಪರ ಮತ್ತು ಹೊಸ ಬದಲಾವಣೆಯ ಭಾಷಾಶಾಸ್ತ್ರದ ಸಂಶೋಧನೆಯ ಕೇಂದ್ರವಾಗಿ ಹೊರಹೊಮ್ಮಿತು.

ಚಾಮ್ಸ್ಕಿ ಮತ್ತು ಈತನ ಸಹೋದ್ಯೋಗಿ (ವಿದ್ಯಾರ್ಥಿಗಳನ್ನು ಒಳಗೊಂಡಂತೆ)ಗಳು ಸೇರಿ ಭಾಷೆಯನ್ನು ಕೇವಲ ವರ್ಣಿಸುವ (Describing) ಕ್ರಮದಿಂದ ಅದನ್ನು ವಿವರಿಸುವ (Explaining) ನೆಲೆಯಲ್ಲಿ, ಭಾಷಾಶಾಸ್ತ್ರವನ್ನು ಆಮೂಲಾಗ್ರವಾಗಿ (ಕ್ರಾಂತಿಕಾರಿಗೊಳಿಸಿದರು) ಬದಲಾಯಿಸಿದರು ಎಂದೇ ಹೇಳಬೇಕು. ಭಾಷಾಶಾಸ್ತ್ರ ಕುರಿತ ಚಾಮ್ಸ್ಕಿಯ ಈ ಪುಸ್ತಕಗಳ ಸರಣಿಯೂ “ಚಾಮ್ಸ್ಕಿಯನ್ ಲಿಂಗ್ವಿಸ್ಟಿಕ್ಸ್” ಎನ್ನುವ ಭಾಷಾಧ್ಯಯನದ ಹೊಸಮಾದರಿಯ ಒಂದು ಹಾಲ್ಮಾರ್ಕ್ನ್ನು ಸ್ಥಾಪಿಸಿದೆ.

ಇವನ ಈ ವಿಸ್ತೃತ ಭಾಷಿಕ ಅಧ್ಯಯನವು ವೈಶ್ವಿಕ ವ್ಯಾಕರಣ (Universal Grammar), ಭಾಷೆಯ ಗ್ರಹಿಕೆಯ ನೆಲೆಗಳು ಹಾಗೂ ಜೈವಿಕವಾಗಿ ಅಂತಸ್ಥಗೊಂಡಿರುವ ಸಾಮರ್ಥ್ಯವು ಮಾನವನಿಗೆ ಭಾಷಿಕ ಸಾಮರ್ಥ್ಯವನ್ನು ಪಡಕೊಳ್ಳುವಲ್ಲಿ ಹೇಗೆ ಒಂದು ಅಂತರ್ನಿಹಿತ ಕಸುವು ಆಗಿರುತ್ತೆ ಅನ್ನುವುದನ್ನು ವಿಶ್ಲೇಷಿಸುತ್ತವೆ.

ಜಗತ್ತಿನಾದ್ಯಂತವಿರುವ ಸ್ಥಾಪಿತ ಶೈಕ್ಷಣಿಕ ವಲಯವು ಇಂತಹ ಅಸಾಂಪ್ರದಾಯಿಕ ಆಲೋಚನಾ ಮಾದರಿಯನ್ನು ತಮ್ಮ ಶಕ್ತಿ ಮೀರಿ ದಮನ ಮಾಡುವ ಪ್ರಯತ್ನ ಮಾಡಿದವು. ಇದು ಒಂದು ರೀತಿಯಲ್ಲಿ ಗೆಲಿಲೀಯೋನ ಎದುರಾಳಿಗಳು ಅವನ “ಫ್ಯ್ಲಾಟ್ ಅರ್ಥ್”ಸಿದ್ಧಾಂತವನ್ನು ಅಂತಿಮವಾಗಿ ಅಂಗೀಕರಿಸಿದ ಹಾಗೆ, ಚಾಮ್ಸ್ಕಿಯ ಅಧ್ಯಯನದ ಈ ಮಾದರಿಯನ್ನು ಇವರು ಅಂಗೀಕರಿಸಿದರು.

ಈ ಭಾಷಾಶಾಸ್ತ್ರ ಅಧ್ಯಯನದ ನಡುವೆಯೂ ಚಾಮ್ಸ್ಕಿಗೆ ರಾಜಕೀಯ ಕುರಿತ ಅರಿವು ಅಥವಾ ತಿಳಿವಳಿಕೆಯನ್ನು ಪಡೆಯುವ ಹಂಬಲವೇನು ಕಮ್ಮಿಯಾಗಿರಲಿಲ್ಲ. ಮೈಸ್ಸಾಚುಸೆಟ್ಸ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತನ್ನ ಕೆಲಸವನ್ನು ಆರಂಭಿಸಿದ ಮೇಲೆ ವಿಯೆಟ್ನಾಮ್ ಯುದ್ಧವು ತುಂಬಾ ಗಂಭೀರ ಹಾಗೂ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತ್ತು. ಈ ಯುದ್ಧವನ್ನು ವಿರೋಧಿಸುವ ಮತ್ತು ಈ ಯುದ್ಧ ವಿರೋಧ ನೀತಿಯ ಸಂಘಟನೆಯಲ್ಲಿ ಸಕ್ರಿಯವಾಗಿ ಒಳಗೊಳ್ಳಲು ಚಾಮ್ಸ್ಕಿಯು ರಾಜಕೀಯ ಹೋರಾಟಗಾರ (ಆ್ಯಕ್ಟಿವಿಸ್ಟ್) ಆಗುವ ಮಹತ್ವದ ತೀರ್ಮಾನವನ್ನು ಕೈಗೊಂಡನು.

1967ರಲ್ಲಿ ಎಲ್ಲ ಸಮಾನಮನಸ್ಕರು ಸೇರಿ RESIST ಎನ್ನುವ ಸಂಘಟನೆಯೊಂದನ್ನು ಹುಟ್ಟುಹಾಕಿದರು. ಜೀವಪರ ಕಾಳಜಿ ಇರುವವರೆಲ್ಲರೂ ಈ ಅನೈತಿಕ ಅಧಿಕಾರದ ವಿರುದ್ಧ ಹೋರಾಡುವ ಸಂಘಟೆನೆಯಲ್ಲಿ ಪಾಲುದಾರರಾಗಲು ಈ ಸಂಘಟೆನೆಯಿಂದ ಕರೆ ಕೊಟ್ಟರು. RESIST ಹಾಗೂ ಇನ್ನಿತರ ಸಂಘಟನೆಗಳು ಸೇರಿ ಯುದ್ಧ ವಿರೋಧಿಸಿ ಹಲವಾರು ಜಾಥ ಮತ್ತು ಪ್ರದರ್ಶನಗಳನ್ನು ಮಾಡಿದರು. ಪರಿಣಾಮವಾಗಿ ಚಾಮ್ಸ್ಕಿಯನ್ನು ಬಂಧಿಸಿ ಜೈಲಿಗೆ ಹಾಕಿದರು.

ಈ ಸೆರೆವಾಸದಲ್ಲಿ ಚಾಮ್ಸ್ಕಿಯ ಸಹಪಾಠಿಯಾಗಿ ನಾರ್ಮ್ನ್ ಮೈಲರ್ ಕೂಡ ಇದ್ದನು. ಈ ಜೈಲವಾಸದಿಂದ ಎದೆಗುಂದದೆ ನಿರಂತರವಾಗಿ ಯುದ್ಧವಿರೋಧ ರ್ಯಾಲಿಗಳನ್ನು (Rallies) ಸಂಘಟಿಸುತ್ತ ಭಾಷಣಗಳನ್ನು ಮಾಡುತ್ತಿದ್ದನು. ಈತನ ಈ ಎಲ್ಲ ಭಾಷಣಗಳು 1969ರಲ್ಲಿ ಪ್ರಕಟಗೊಂಡ “ಅಮೇರಿಕನ್ ಪವರ್ ಆ್ಯಂಡ್ ದಿ ನ್ಯೂ ಮಂಡೆರಿಯನ್ಸ್” ಎನ್ನುವ ಪುಸ್ತಕದಲ್ಲಿ ದಾಖಲಾಗಿವೆ. ಇವತ್ತಿಗೂ ಈ ಪುಸ್ತಕವು ರಾಜಕೀಯ ಭಿನ್ನಮತೀಯ ಕುರಿತ ಕ್ಲಾಸಿಕ್ ಪಠ್ಯವಾಗಿಯೇ ಉಳದಿದೆ.

ಅಧ್ಯಕ್ಷ ನಿಕ್ಸನ್ನ ರಾಜಕೀಯ ವಿರೋಧಿಗಳ ಹಿಟ್ಲಿಸ್ಟ್ನಲ್ಲೂ ಚಾಮ್ಸ್ಕಿಯ ಹೆಸರಿತ್ತು. ಇದಾವುದಕ್ಕೂ ಚಾಮ್ಸ್ಕಿ ಮಣಿಯದೇ ಸತ್ಯವನ್ನು ಬಹಿರಂಗಪಡಿಸುವ ಜವಾಬ್ದರಿಯಲ್ಲಿ ನಿರತನಾಗಿದ್ದಾನೆ. ಇವನು 1970ರಲ್ಲಿ ಹನಯೈಗೆ ಭೇಟಿ ಕೊಟ್ಟಿದ್ದ ಆದರೆ ಜೇನ್ ಫಾಂಡ್ನ ಹಾಗೆ ಇವನು ಯಾವತ್ತು ನಾರ್ಥ್ ವಿಯೆಟ್ನಾಮ್ಸಿಗಳಿಗೆ ನೀಡಿದ ಬೆಂಬಲದ ಬಗ್ಗೆ ಬೇಸರಪಟ್ಟಿದ್ದಿಲ್ಲ.

ಇಂದಿಗೂ ತನ್ನ ತೊಂಭತ್ತೊಂದರ ಹರೆಯದಲ್ಲಿಯೂ ಕೂಡಾ, ಚಾಮ್ಸ್ಕಿಯು ಅಮೇರಿಕ ಪ್ರಭುತ್ವ ವಿದಿಸುವ ವಿದೇಶಾಂಗ ನೀತಿಯ ಕರಾರುಗಳ ಕುರಿತು ಒಂದು ಕಡೆಯಿಂದ ಇನ್ನೊಂದು ಕಡೆ ನಡೆಯುವ ಸಭೆಗಳಿಗೆ ಹೋಗಲು ಯಾವತ್ತೂ ನಿರಾಕರಿಸಿದ್ದಿಲ್ಲ. ಅದು ಕ್ಯೂಬಾ ಇರಬಹುದು ಅಥವಾ ಲೆಬಾನಿನ್ನ ನಾಯಕ ಹೆಝ್ಬೂಲ್ಲಾನ ಜೊತೆಗಿನ ಭೇಟಿ ಆಗಿರಬಹುದು.

ಚಾಮ್ಸ್ಕಿಯ ಅಮೇರಿಕದ ವಿದೇಶಾಂಗ ನೀತಿಯ ವಿರುದ್ಧದ ಕಡುವಿಮರ್ಶೆ/ಕಟುವಿಮರ್ಶೆ ಇವತ್ತಿಗೂ ಒಂದು ಲೆಜಂಡ್ಯೇ ಸರಿ. ಚಾಮ್ಸ್ಕಿ ತನ್ನ ಮಹತ್ವದೊಂದು ಪುಸ್ತಕ “ಫೇಲ್ಡ್ ಸ್ಟೇಟ್ಸ್”ನಲ್ಲಿ ಚರ್ಚಿಸಿದಂತೆ, ಅಮೇರಿಕದ ಸರಕಾರ/ಪ್ರಭುತ್ವಗಳು ಸ್ಟೇಟ್ ಟೆರರಿಸಿಮ್ ನಿರಂತರವಾಗಿ ನಡೆಯಲು ಮತ್ತು ಅದನ್ನು ಯಸಶ್ವಿಗೊಳಿಸಲು ಕುಮ್ಮಕ್ಕು ನೀಡಿದೆ ಎನ್ನುವುದನ್ನು ಸಾಬೀತಪಡಸಿದ್ದಾನೆ.

ಯಾರು ಈ ಜಗತ್ತು ಮತ್ತು ಈ ಜನರ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೋ ಅವರೆಲ್ಲರೂ ಚಾಮ್ಸ್ಕಿಯನ್ನು ಒಬ್ಬ ದಾರ್ಶನಿಕ ಮತ್ತು ಜನಪರ ಚಿಂತಕನೆಂದು ಗುರುತಿಸಿದ್ದಾರೆ. ಚಾಮ್ಸ್ಕಿಯು ಸಾಮಾಜಿಕ ಸರಿ-ತಪ್ಪುಗಳ ವಿವೇಚನೆಯಿರುವ ಒಬ್ಬ ಪ್ರಖ್ಯಾತ ಸಂಶೋಧಕನೂ, ಎಂದಿಗೂ ಬೇಸರವನ್ನರಿಯದ ಶೈಕ್ಷಣಿಕ ವಿದ್ವಾಂಸನೂ ಆಗಿರುವನು. ಅತ್ಯಂತ ಅಪರಿಮಿತ ಒಳನೋಟಗಳಿರುವ ಅಪಾರವಾದ ಅಕಾಡೆಮಿಕ್ ಕೆಲಸವನ್ನು ಇತನು ಮಾಡಿರುತ್ತಾನೆ.

ನಿರಿಚ್ಛೆಯಿಂದಲೇ ತನ್ನ ಖಾಸಗಿ ಬದುಕನ್ನು ಜನರ ಕಲ್ಯಾಣ ಮತ್ತು ಜಗತ್ತಿನ ಒಳತಿಗಾಗಿ ತ್ಯಜಿಸಿರುತ್ತಾನೆ. ಈ ಅರ್ಥದಲ್ಲಿ ಇವನೊಬ್ಬ ಸಂರಕ್ಷಕ, ಇದು ಇವನಿಗಿರುವ ನೈಜ ಪರಿಸರ ಕಾಳಜಿಯ ಅಭಿವ್ಯಕ್ತಿಯಾಗಿದೆ, ಇದೆಲ್ಲವನ್ನೂ ಇತನ ಇತ್ತೀಚಿನ ಬರಹಗಳಲ್ಲಿ ಕಾಣಬಹುದು.

ರಾಜಕೀಯ ಮತ್ತು ಆರ್ಥಿಕ ಸಾಂಪ್ರದಾಯಿಕವಾದಿಗಳು ಇತನನ್ನು ಸಮಾಜ ವಿರೋಧಿ ನಂಬರ್ ಒಂದು ಎಂದೂ ಬಿಂಬಿಸಿದರೇನೂ ಆಶ್ಚರ್ಯವಿಲ್ಲ. ಆದರೆ ಇದಕ್ಕೆ ಅವರು ಅಪಾರ ಮೊತ್ತವನ್ನು ತೆರಬೇಕಾಗುತ್ತೆ. ಇಂತಹದನ್ನೂ ಹಸನ್ಮೂಖಿಯಾಗಿಯೇ ಸ್ವೀಕರಿಸುವ ಹಣೆಬರಹದ ಈ ವ್ಯಕ್ತಿ ನಮಗೆಲ್ಲರಿಗೂ ಪ್ರೇರಣೆಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending