ಸಿನಿ ಸುದ್ದಿ
ಮಲಯಾಳಿ ಮನಸ್ಸುಗಳಲ್ಲಿ ಪ್ರೀತಿ-ಪ್ರೇಮದ ಕಿಡಿ ಹೊತ್ತಿಸಿದ ‘ಮೊಯ್ದಿನ್’..!

- ಶಫಿಕ್ ಅಬ್ಬಾಸ್
1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಹಾಗೂ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ. ಅಲ್ಲಾಹ್ ಏಸು ಈಶ್ವರನ ಮೇಲಾಣೆ; ಅದು ಲವ್ ಜಿಹಾದ್ ಅಲ್ಲ, ಶುದ್ಧ ಪ್ರೀತಿ. ಪರಸ್ಪರ ಪ್ರೀತಿಯೇ ಅವರ ಜೀವನ ಆಗಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ಇಬ್ಬರದ್ದು ರೆಬೆಲ್ ಪರ್ಸನಾಲಿಟಿ..
ಪ್ರೀತಿಸುವುದೇ ಅಪರಾಧವಾಗಿದ್ದ ಆ ಕಾಲದಲ್ಲಿ ‘ಹಿಂದೂ-ಮುಸ್ಲಿಂ’ ಪ್ರೀತಿಯನ್ನು ಯಾರಾದರೂ ಒಪ್ಪಿಯಾರೇ? ಕಾಲೇಜು ಕಲೀತಿದ್ದ ಕಾಂಚನಮಾಲಾಗೆ ಗೃಹಬಂಧನದ ಶಿಕ್ಷೆ.. ತನ್ನ ಆಪ್ತ ಮಿತ್ರನ ಮಗಳನ್ನೇ ಪ್ರೀತಿಸಿದ ಕಾರಣಕ್ಕೆ ಮೊಯ್ದಿನ್ ನ ಮುಂಗೋಪಿ ಅಪ್ಪ ತನ್ನ ಕರುಳ ಕುಡಿಯನ್ನೇ ಗುಂಡಿಕ್ಕಿ ಕೊಲ್ಲಲು ಪ್ರಯತ್ನ ಮಾಡಿದ್ದ.
ಮತ್ತೊಮ್ಮೆ 22 ಬಾರಿ ಇರಿದು ಸೀದಾ ಪೊಲೀಸ್ ಠಾಣೆಗೆ ಹೋದ ಮೊಯ್ದಿನ್ ಅಪ್ಪ, ‘ಮಗನನ್ನು ನಾನೇ ಕೊಂದೆ’ ಅಂತ ಶರಣಾಗಿದ್ದ. ಮೊಯ್ದಿನ್ ಪವಾಡದ ರೀತಿ ಬದುಕುಳಿದಿದ್ದ. “ನನಗ್ಯಾರು ಇರಿದಿಲ್ಲ, ನಾನೇ ಬಿದ್ದು ಗಾಯಗೊಂಡೆ” ಎಂದು ಕೋರ್ಟ್ ಕಟಕಟೆಯಲ್ಲಿ ಸುಳ್ಳು ಹೇಳಿ ಶಿಕ್ಷೆಯಿಂದ ಅಪ್ಪನನ್ನು ಪಾರು ಮಾಡಿದ್ದ. ‘ನನ್ನನ್ನು ಕೊಂದರೂ ನಮ್ಮ ಪ್ರೀತಿ ಸಾಯಲ್ಲ’ ಎಂದು ಹಠ ಹಿಡಿದಿದ್ದ ಮೊಯ್ದಿನ್ ಕೊನೆಗೆ ಹುಟ್ಟಿದ ಮನೆಯಿಂದಲೇ ಹೊರದಬ್ಬಲ್ಪಟ್ಟಿದ್ದ.
ಉಲ್ಲಾಟಿಲ್ ಉನ್ನಿ ಮೊಯ್ದಿನ್ ಸಾಹೇಬರ ಮಗ ಮೊಯ್ದಿನ್ ಹಾಗೂ ಕೊಟ್ಟಂಗಲ್ ಅಚ್ಯುತನ್ ಅವರ ಮಗಳು ಕಾಂಚನಮಾಲಾ ಮಧ್ಯೆ ಪ್ರೀತಿಗೆ ಕಿಚ್ಚು ಹಚ್ಚಿದ್ದು ಮುಕ್ಕಂನಲ್ಲಿ ಹರಿಯುವ ಇರುವಂಜಿ ನದಿ. ಈ ನದಿ ದಂಡೆಯಲ್ಲಿ ಪ್ರೇಮ ಹಕ್ಕಿಗಳು ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮುಖಾಮುಖಿಯಾದಾಗ ಕಣ್ಣುಗಳೇ ಮಾತಾಡಿ ನಿಟ್ಟುಸಿರು ಬಿಟ್ಟಿದ್ದವು.
‘ಇರುವಂಜಿಪುಝ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಹಾಗೆ ನಾವು ಒಂದು ದಿನ ಜೊತೆಯಾಗಿ ಬಾಳೋದು ಸತ್ಯ’ ಎಂದು ಮೊಯ್ದಿನ್ ಮಾತು ಕೊಟ್ಟಿದ್ದ. ಕಾಂಚನಾಳ ಈ ಸುದೀರ್ಘ ಗೃಹ ಬಂಧನದ ಸಮಯದಲ್ಲಿ ಇಬ್ಬರ ಮಧ್ಯೆ ಪತ್ರ ವ್ಯವಹಾರ ಮಾತ್ರ ನಡೀತಿತ್ತು. ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತನ್ನ ಪ್ರೇಮ ಪತ್ರಕ್ಕೆ ಹೊಸ ಲಿಪಿ ಕಂಡುಹಿಡಿದಿದ್ದಳು ಕಾಂಚನ. ಈ ಜಗತ್ತಿನಲ್ಲಿ ಮೊಯ್ದಿನ್ ಮತ್ತು ಕಾಂಚನಾಳಿಗೆ ಮಾತ್ರ ಓದೋಕೆ ಬರೆಯೋಕೆ ಸಾಧ್ಯವಿರುವ ಲಿಪಿ ಅದು.
ಇರುವಂಜಿ ನದಿ ಹರಿದು ಸಮುದ್ರ ಸೇರಲು ಒಂದಷ್ಟು ದಿನಗಳಾಗುತ್ತೆ ಅಂತ ನಂಬಿಕೊಂಡಿದ್ದ ಈ ಜೋಡಿ ಕಾಯುವಿಕೆಯನ್ನೂ ಪ್ರೀತಿಸಿದ್ದರು. ಪ್ರೀತಿಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಸಿಟ್ಟಲ್ಲಿ ಈಗಿನ ಜಮಾನದವರಂತೆ ಓಡಿಹೋಗಲಿಲ್ಲ. ಎರಡು ದಶಕಗಳ ಕಾಲ ಮನೆಯವರ ಒಪ್ಪಿಗೆಗಾಗಿ ಕಾದು ಕುಳಿತರು.
ಆದರೆ ಹೆತ್ತವರ ಮನಸು ಬದಲಾಗಲಿಲ್ಲ. ‘ಹುಡುಗಿ ಇಸ್ಲಾಮಿಗೆ ಮತಾಂತರವಾದರೆ ಓಕೆ’ ಎಂಬ ಅಂತಿಮ ಆಯ್ಕೆಯ ಸಂದೇಶ ಅಪ್ಪನ ಕಡೆಯಿಂದ ಬಂದಾಗ “ಆಕೆ ಮತಾಂತರವಾದ ಕ್ಷಣವೇ ನನ್ನ ಪ್ರೀತಿ ಅಂತ್ಯಗೊಳ್ಳುತ್ತೆ” ಎಂಬ ಉದಾತ್ತ ಧರ್ಮ ಸಹಿಷ್ಣುತೆಯ ಸಂದೇಶ ಮೊಯ್ದಿನ್ ಕಡೆಯಿಂದ ರವಾನೆಯಾಗಿತ್ತು.
ಅಪ್ಪ ಕಟ್ಟಾ ಕಾಂಗ್ರೆಸ್ಸಿಗನಾದರೂ ಮಗ ಮೊಯ್ದಿನ್ ಪಕ್ಕಾ ಸೋಷಿಯಲಿಸ್ಟ್. ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮೂಗು ಮುಟ್ಟೋಕೂ ಸಾಧ್ಯವಿಲ್ಲ ಎಂದು ಅಪ್ಪ ಮೂದಲಿಸಿದಾಗ ಮುಕ್ಕಂನಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸಂಘಟಿಸಿ ಕಾಂಗ್ರೆಸಿಗರೇ ಮೂಗು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದು ಮೊಯ್ದಿನ್ ಹೆಗ್ಗಳಿಕೆ. ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಮೊಯ್ದಿನ್ ಜನಪ್ರತಿನಿಧಿಯೂ ಆಗಿದ್ದ.
ಮುಕ್ಕಂ ಮಣ್ಣಿನ ಅಪತ್ಬಾಂದವನಾಗಿದ್ದ ಮೊಯ್ದಿನ್ ಬಹುಮುಖ ಪ್ರತಿಭೆ. ಪತ್ರಕರ್ತ, ಛಾಯಗ್ರಾಹಕ, ಲೇಖಕ, ಪ್ರಕಾಶಕ, ನಿರ್ದೇಶಕ, ನಿರ್ಮಾಪಕ, ಜನನಾಯಕ.. ಉತ್ತಮ ಫುಟ್ಬಾಲ್ ಆಟಗಾರ, ನುರಿತ ಈಜುಗಾರ, ಆಟಗಾರ-ಓಟಗಾರ, ಖಡಕ್ ಹೋರಾಟಗಾರ. ಮುಕ್ಕಂನ ಸಮಸ್ಯೆಗೆ ಪರಿಹಾರ ಬೇಕಾದರೆ ಅಲ್ಲಿ ಮೊಯ್ದಿನ್ ಇರಲೇಬೇಕಿತ್ತು. “ಕೇರಳದ ಹುಡುಗಿಯರು ಪ್ರೀತಿ ಮಾಡಿ ಓಡಿಹೋಗಲು ಕಾರಣಾಗಿರುವ ನಟ”, ಕೇರಳಿಯರ ನೆಚ್ಚಿನ ಸಿನಿಮಾ ಹೀರೋ ಪೃಥ್ವಿರಾಜ್ ಗೂ ಈ ಮೊಯ್ದಿನೇ ರಿಯಲ್ ಹೀರೋ.
60 ದಶಕದ ಪ್ರೀತಿ 80ರ ದಶಕವನ್ನು ದಾಟಿತ್ತು. ದಿನಗಳು ಊರುಳುತ್ತಾನೇ ಇತ್ತು. ಗೃಹಬಂಧನದಲ್ಲಿದ್ದ ಕಾಂಚನ,, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೊಯ್ದಿನ್.. ಇಬ್ಬರ ವಯಸ್ಸು 40ರ ಗಡಿ ದಾಟಿತ್ತು. ಆದರೆ ಪರಸ್ಪರ ಪ್ರೀತಿ ಚೂರು ಕಡಿಮೆಯಾಗಿರಲಿಲ್ಲ. ದೂರದಲ್ಲೇ ಇದ್ದು ಗಾಢವಾಗಿ ಪ್ರೀತಿಸುತ್ತಲೇ ಇದ್ದರು.
1982ರ ಮಳೆಗಾಲದ ಸಮಯ. ಆ ದಿನ ಮುಕ್ಕಂನಲ್ಲಿ ಮಳೆಯ ಆರ್ಭಟ ಜೋರಿತ್ತು. ಇರುವಂಜಿ ನದಿಯ ನೀರಿನ ಮಟ್ಟ ಕೂಡ ಏರಿತ್ತು. 10 ಜನರ ಕೆಪಾಸಿಟಿ ಇರುವ ದೋಣಿಯಲ್ಲಿ 30 ಮಂದಿ ತೂರಿಕೊಂಡಿದ್ದರು. ಮುಂದಾಗುವ ಅನಾಹುತದ ಸುಳಿವು ಯಾರಿಗೂ ಇರಲಿಲ್ಲ. ನದಿದಂಡೆಯಿಂದ ಹತ್ತಿಪ್ಪತ್ತು ಮೀಟರ್ ದೂರ ಸಾಗುತ್ತಿದ್ದಂತೆ ದೋಣಿ ಮಗುಚಿ ಬಿತ್ತು. ಮುಕ್ಕಂನ ಆಪತ್ಬಾಂದವ ಮೊಯ್ದಿನ್ ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಮುಳುಗುತ್ತಿದ್ದವರ ರಕ್ಷಣೆಗೆ ಧುಮುಕಿದ್ದ. ಆಳಕ್ಕೆ ಹೋಗಿ ಒಬ್ಬರನ್ನೇ ತಂದು ದಡ ಮುಟ್ಟಿಸುತ್ತಿದ್ದ. “ನನ್ನ ಬಗ್ಗೆ ಚಿಂತೆ ಬಿಡಿ, ಬೇರೆಯವರನ್ನು ನೋಡಿ” ಎಂದು ಹೇಳಿ ಕೊನೆಯದಾಗಿ ಆಳಕ್ಕೆ ಹೋದ ಮೊಯ್ದಿನ್ ಮರಳಿ ಬರಲೇ ಇಲ್ಲ.
ಆಳದಲ್ಲಿದ್ದ ನೀರಿನ ಸುಳಿ ಮೊಯ್ದಿನ್ ನ ಬಲಿ ಪಡೆದಿತ್ತು. ಸಮಾಜಕ್ಕಾಗಿ ತನ್ನ ಜೀವನ ಮುಡುಪಾಗಿಟ್ಟಿದ್ದ ಮೊಯ್ದಿನ್ ಬೇರೆಯವರ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದ. ಮೂರು ದಿನಗಳ ಬಳಿಕ ಶವ ಮೇಲೆ ಬಂದಾಗಲೂ ಮುಕ್ಕಂನ ಕಣ್ಣೀರು ಕೊನೆಯಾಗಿರಲಿಲ್ಲ. ಮಳೆಯ ರೂಪದಲ್ಲಿ ಕಣ್ಣೀರು ಸುರಿಸುತ್ತ ಆ ವಿಧಿ ಕೂಡ ಪಶ್ಚತಾಪ ಪಟ್ಟಿತ್ತು. ಆ ಕಾಲದಲ್ಲಿ ಮುಕ್ಕಂನ ಮಣ್ಣಿನಲ್ಲಿ ನಿಂತು ಇಂದಿರಾ ಗಾಂಧಿಯ ನೀತಿಗಳ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ಮೊಯ್ದಿನ್ ಗೆ 1983ರಲ್ಲಿ ಇಂದಿರಾ ಗಾಂಧಿಯ ಸರ್ಕಾರವೇ ಮರಣೋತ್ತರ ಜೀವನ್ ರಕ್ಷಾ ಪದಕ ನೀಡಿ ಗೌರವಿಸಿತ್ತು.
ಪ್ರಿಯಕರನ ಸಾವಿನ ಸುದ್ದಿ ಕೇಳಿ ಕುಸಿದು ಹೋಗಿದ್ದ ಕಾಂಚನಾಳಿಗೆ, ಮೊಯ್ದಿನ್ ಮುಖ ನೋಡಬೇಕೆಂಬ ಕೊನೆ ಆಸೆಯೂ ಈಡೇರಲಿಲ್ಲ. ಮೊಯ್ದಿನ್ ಸಮಾಧಿಯಾಗುವುದರ ಜೊತೆಯಲ್ಲೇ ಅಪ್ಪಟ ಪ್ರೀತಿಯೊಂದಕ್ಕೆ ಗೋರಿ ಕಟ್ಟಲಾಯಿತು. ಮೊಯ್ದಿನ್ ಇಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಯಾವ ಆಸೆಯೂ ಕಾಂಚನಾಳಿಗೆ ಇರಲಿಲ್ಲ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗಲೂ ಮನೆಯವರು ತಡೆಯಾದರು.
ಆರನೇ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿ ಕಣ್ಣುಬಿಟ್ಟಾಗ ಕಾಂಚನಾಳ ಮುಂದೆ ಮೊಯ್ದಿನ್ ತಾಯಿ ನಿಂತಿದ್ದರು. ಮೊಯ್ದಿನ್-ಕಾಂಚನ ಮದುವೆಯಾಗದಿದ್ದರೂ ಹಿಂದೂ ಹುಡುಗಿಯನ್ನು ವಿಧವಾ ಸೊಸೆಯಾಗಿ ಸ್ವೀಕರಿಸಿದಳು ಮೊಯ್ದಿನ್ ಉಮ್ಮ. ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದ ಕಾಂಚನ, ಮೃತ ಪ್ರಿಯಕರನ ಮನೆ ಸೇರಿಕೊಂಡಳು. ಹಿಂದೂವಾಗಿದ್ದುಕೊಂಡೇ ಮುಸ್ಲಿಂ ಮನೆಯಲ್ಲಿ ಹೊಸ ಜೀವನ ಶುರು ಮಾಡಿದಳು.
79 ವರ್ಷ ವಯಸ್ಸಿನ ಕಾಂಚನ ಅಮ್ಮ, ಮೊಯ್ದಿನ್ ಎಂಬ ಅಮರ ಪ್ರೇಮಿಯ ನೆನಪಲ್ಲಿ ಈಗಲೂ ಅದೇ ಮನೆಯಲ್ಲಿದ್ದಾರೆ. ಮುಕ್ಕಂನ ಮಳೆಯಲಿ ನಡೆಯುತ್ತ, ಇರುವಂಜಿ ನದಿ ದಂಡೆಯಲ್ಲಿ ವಿಹರಿಸುತ್ತ, ಖಬರಸ್ಥಾನದಲ್ಲಿ ಮೊಯ್ದಿನ್ ಸಮಾಧಿ ಸಂದರ್ಶನ ಮಾಡುತ್ತ ತಮ್ಮ ಪ್ರೀತಿಯನ್ನು ಜೀವಂತವಾಗಿಟ್ಟಿದ್ದಾರೆ ದೇವರ ನಾಡಿನ ಬ್ಯಾಚುಲರ್ ವಿಧವೆ ಕಾಂಚನಮಾಲಾ.
ಇವತ್ತು ಜುಲೈ 15.. ಸರಿಯಾಗಿ 37 ವರ್ಷಗಳ ಹಿಂದೆ ಇದೇ ದಿನದಂದು ಇರುವಂಜಿ ನದಿ ಮೊಯ್ದಿನ್ ಎಂಬ ಮಹಾತ್ಮನನ್ನು ಬಲಿ ಪಡೆದಿತ್ತು. ಮೊಯ್ದಿನ್ ಈ ಜಗತ್ತಿನಲ್ಲಿ ಇಲ್ಲದಿದ್ದರೂ ಆತನ ಪ್ರೀತಿ ಇವತ್ತಿಗೂ ಅಮರ. ಮೊಯ್ದಿನ್ ಹುಟ್ಟಿ ಬೆಳೆದಿದ್ದ ಮನೆ ಈಗ ಮೊಯ್ದಿನ್ ಸೇವಾ ಮಂದಿರವಾಗಿ ಬದಲಾಗಿದೆ. ತನ್ನ ಮನೆಯನ್ನು ಮೊಯ್ದಿನ್ ತಾಯಿ ‘ವಿಧವಾ ಸೊಸೆಗೆ’ ಕೊಟ್ಟು ನಿರ್ಗಮಿಸಿದ್ದರು. ಹಿರಿಯ ಜೀವ ಕಾಂಚನಮಾಲಾ ಸೇವಾ ಮಂದಿರದ ಮೂಲಕ ಮೊಯ್ದಿನ್ ಅರ್ಧದಲ್ಲಿ ಬಿಟ್ಟುಹೋಗಿದ್ದ ಕನಸುಗಳನ್ನು ಪೂರ್ತಿ ಮಾಡುತ್ತಿದ್ದಾರೆ.
“ಜಲಂ ಕೊಂಡು ಮುರಿವೇಟಲ್” (ನೀರಿನಿಂದ ಆಗಿರುವ ಗಾಯ) ಹೆಸರಿನ ಡಾಕ್ಯುಮೆಂಟರಿ ಮೂಲಕ ಈ ಅಮರ ಪ್ರೇಮ ಕತೆಯನ್ನು 2006ರಲ್ಲಿ ಜಗತ್ತಿಗೆ ತಿಳಿಸಿದ ಕೇರಳದ ಪತ್ರಕರ್ತ ವಿಮಲ್, 2015ರಲ್ಲಿ ಇದೇ ರಿಯಲ್ ಸ್ಟೋರಿಯನ್ನು “ಎನ್ನುಂ ನಿಂಡೆ ಮೊಯ್ದಿನ್“( ಎಂದಿಗೂ ನಿನ್ನ ಮೊಯ್ದಿನ್) ಹೆಸರಿನ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ತಂದಿದ್ದರು. ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ನಟನೆಯ ಈ ಚಿತ್ರ ಮಾಲಿವುಡ್ ಬಾಕ್ಸ್ ಆಫೀಸಿನಲ್ಲಿ ಅಬ್ಬರ ಮಾಡಿತ್ತು. ಈ ಸಿನಿಮಾದ ‘ಮುಕ್ಕತ್ತೆ ಪೆಣ್ಣೆ’ ಹಾಡು ಪ್ರೇಮಿಗಳ ಪಾಲಿಗೆ ಪವಿತ್ರ ಗೀತೆ..
ಅಮರ ಪ್ರೇಮ ಅಂದರೆ ರೋಮಿಯೋ-ಜೂಲಿಯೆಟ್,, ಲೈಲಾ- ಮಜ್ನು, ಸಲೀಂ-ಅನಾರ್ಕಲಿ ಅಂತ ಜಗತ್ತು ನೆನಪು ಮಾಡಬಹುದು. ಆದ್ರೆ ಕೇರಳಕ್ಕೆ ಮಾತ್ರ ಮೊಯ್ದಿನ್- ಕಾಂಚನ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
