ಸಿನಿ ಸುದ್ದಿ
ಹಾಲಿವುಡ್ ನಟಿ ‘ಲುಪಿತಾ’ಅಂತರಂಗದ ಮಾತುಗಳು : ಮಿಸ್ ಮಾಡ್ದೆ ಓದಿ ; ಅಭಿಪ್ರಾಯ ತಿಳಿಸಿ
- ಹಾಲಿವುಡ್ ನಟಿ ಲುಪಿತಾ ನ್ಯೋಂಗೊಗೆ ಮೊನ್ನೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸ್ಟೀವ್ ಮಕೀನ್ ನಿರ್ದೇಶನದ “12 Years a Slave ಚಿತ್ರದಲ್ಲಿ ಪಾಟ್ಸಿ ಪಾತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ ಈಕೆಗೆ ’ಅತ್ಯುತ್ತಮ ಪೋಷಕನಟಿ’ ಪ್ರಶಸ್ತಿ ಲಭಿಸಿದೆ. ಈ ಕೀನ್ಯಾ ಮೂಲದ ಪೋಷಕರನ್ನು ಹೊಂದಿರುವ ಮೆಕ್ಸಿಕನ್ ಕಪ್ಪು ವರ್ಣದ ತಾರೆಗೆ ಆಸ್ಕರ್ ಪ್ರಶಸ್ತಿ ಲಭಿಸುವ ಮುನ್ನ ‘ಎಸೆನ್ಸ್ ಮ್ಯಾಗಜೀನ್’ ಎಂಬ ಪ್ರಸಿದ್ಧ ಸಿನಿಮಾ ಪತ್ರಿಕೆ ’ಬ್ಲಾಕ್ ವಿಮೆನ್ ಇನ್ ಹಾಲಿವುಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆ ಪ್ರಶಸ್ತಿ ಆಕೆ ಸ್ವೀಕರಿಸುವಾಗ ಮಾಡಿದ ಭಾಷಣದಲ್ಲಿ ತನ್ನ ಅಂತರಂಗದ ಸೌಂದರ್ಯವನ್ನು ಬಿಚ್ಚಿಟ್ಟಳು. ಅವಳಾಡಿದ ಮಾತುಗಳನ್ನು ಅನುವಾದಿಸಿ ಬರಹ ರೂಪದಲ್ಲಿರಿಸಿದ್ದೇನೆ.
-ಅನುವಾದ ಮತ್ತು ಬರಹ ರೂಪ : ಹರ್ಷಕುಮಾರ್ ಕುಗ್ವೆ
“ಹುಡುಗಿಯೊಬ್ಬಳು ನನಗೆ ಬರೆದಿದ್ದ ಪತ್ರದ ಒಂದೆರಡು ಸಾಲುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ‘ಪ್ರಿಯ ಲುಪೀಟಾ, ರಾತ್ರೋ ರಾತ್ತಿ ಹಾಲಿವುಡ್‌ನಲ್ಲಿ ಯಶಸ್ಸು ಕಂಡ ನೀನು ಇಷ್ಟು ಕಪ್ಪಗಿರಲಿಕ್ಕೆ ನಿಜಕ್ಕೂ ಅದೃಷ್ಟ ಮಾಡಿದ್ದೆ ಅನ್ನಿಸುತ್ತ್ತಿದೆ. ನಾನು ನನ್ನ ಚರ್ಮವನ್ನು ಬೆಳ್ಳಗಾಗಿಸಲು ಫೇರ್‌ನೆಸ್ ಕ್ರೀಮ್ ಒಂದನ್ನು ಕೊಳ್ಳುವುದರಲ್ಲಿದ್ದೆ. ಅಷ್ಟರಲ್ಲಿ ನೀನು ಪ್ರಪಂಚದ ಭೂಪಟದಲ್ಲಿ ಕಾಣಿಸಿಕೊಂಡು ನನ್ನನ್ನು ಉಳಿಸಿದೆ”.
ಆ ಹುಡುಗಿ ಬರೆದ ಪತ್ರದ ಈ ಸಾಲುಗಳನ್ನು ಓದಿದ ನನ್ನ ಹೃದಯದಿಂದ ಕೊಂಚ ರಕ್ತ ಒಸರಿದಂತಾಯಿತು. ಶಾಲೆಯಿಂದ ಹೊರಬಿದ್ದೊಡನೆ ನಾನು ಆರಿಸಿಕೊಂಡ ಕೆಲಸ ನನ್ನನ್ನು ಈ ಮಟ್ಟಕ್ಕೆ ಪ್ರಭಾವಿಯನ್ನಾಗಿ ಮಾಡುತ್ತದೆ ಎಂಬ ಕಲ್ಪನೆಯೂ ನನಗಿರಲಿಲ್ಲ. ‘ಕಲರ್ ಪರ್ಪಲ್’ನ ಆ ಮಹಿಳೆಯರು ನನ್ನ ಪಾಲಿಗೆ ಹೇಗೆ ಆಶಾಭಾವನೆ ತುಂಬಿದ್ದರೋ ಅದೇ ರೀತಿಯಲ್ಲಿ ನಾನೂ ಇತರರಿಗೆ ಸ್ಪೂರ್ತಿಯಾಗಿ ನಿಲ್ಲುವ ದೃಶ್ಯವನ್ನು ನಾನು ಕಲ್ಪಸಿಕೊಂಡೂ ಇರಲಿಲ್ಲ. ’ನಾನು ಸುಂದರವಾಗಿಲ್ಲ; ಕಪ್ಪಾಗಿದ್ದೇನೆ ಎಂದು ನನಗೆ ನಾನೇ ಪದೇಪದೇ ಹೇಳಿಕೊಳ್ಳುತ್ತಿದ್ದ ದಿನಗಳು ನನಗೆ ನೆನಪಾಗುತ್ತವೆ. ಟಿ.ವಿ ಆನ್ ಮಾಡಿದರೆ ಸಾಕು ಬರೀ ಬಿಳಿಮುಖಗಳನ್ನು ನೋಡುತ್ತಿದ್ದೆ. ನನ್ನ ನಿಶಾವರ್ಣದ ಬಗ್ಗೆ ಅಪಹಾಸ್ಯಪರಿಹಾಸ್ಯಕ್ಕೊಳಗಾಗುತ್ತಿದ್ದೇನೆನಿಸುತ್ತಿತ್ತು.
ಪವಾಡಗಳನ್ನೇ ಜರುಗಿಸುವ ಆ ದೇವರಿಗೆ ನನ್ನ ಒಂದೇ ಒಂದು ಪ್ರಾರ್ಥನೆ ಏನಾಗಿತ್ತೆಂದರೆ ನಾನು ಬೆಳಿಗ್ಗೆ ಹಾಸಿಗೆ ಬಿಟ್ಟು ಏಳುತ್ತಿದ್ದಂತೆ ನನ್ನ ತ್ವಚೆ ಬೆಳ್ಳಗಾಗಲಿ ಎಂದಾಗಿತ್ತು. ಏಳುವಾಗ ದೇವರೇನಾದರೂ ನನ್ನ ವಿನಂತಿ ಆಲಿಸಿ ಕೃಪೆ ತೋರಿರಬಹುದೇ ಎಂಬ ಆಸೆಯ ಕಣ್ಣುಗಳಿಂದ ಕನ್ನಡಿ ಬಳಿ ಓಡುತ್ತಿದ್ದೆ. ಕತ್ತು ಬಗ್ಗಿಸಿ ಮೈ ನೋಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ನಾನು ಮೊದಲು ನೋಡಿಕೊಳ್ಳಬಯಸುತ್ತಿದ್ದುದು ಬೆಳ್ಳಗಾಗಿ ಬದಲಾದ ಮುಖಾರವಿಂದವನ್ನು. ಆದರೆ ಪ್ರತಿದಿನವೂ ನನಗೆ ಅದೇ ಆಶಾಭಂಗವಾಗುತ್ತಿತ್ತು. ರಾತ್ರಿ ಮಲಗುವಾಗ ಹೇಗಿತ್ತೋ ಬೆಳಗೆದ್ದು ನೊಡಿಕೊಂಡಾಗಲೂ ಹಾಗೇ ಇರುತ್ತಿತ್ತು ನನ್ನ ಮುಖ. ಕೊನೆಗೆ ದೇವರೊಂದಿಗೆ ಒಂದು ಚೌಕಾಸಿ ಕುದುರಿಸಲು ನೋಡಿದೆ.
ಆತನೇನಾದರೂ ನನ್ನ ಬೇಡಿಕೆ ಈಡೇರಿಸಿದರೆ ನಾನು ಸಕ್ಕರೆ ಉಂಡೆಗಳನ್ನು ಕದಿಯುವುದನ್ನು ನಿಲ್ಲಿಸಿಬಿಡುವ ಮಾತುಕೊಟ್ಟೆ. ಮಾತ್ರವಲ್ಲದೇ ದೇವರೇನಾದರೂ ನನ್ನನ್ನು ಸ್ವಲ್ಪವಾದರೂ ಬೆಳ್ಳಗೆ ಮಾಡಿದ್ದೇ ಆದಲ್ಲಿ ಅಮ್ಮ ಹೇಳುವ (ಇಲ್ಲೇ ಕುಳಿತಿದ್ದಾರೆ ಅಮ್ಮ) ಪ್ರತಿ ಮಾತನ್ನೂ ಚಾಚೂ ತಪ್ಪದೆ ಪಾಲಿಸುತ್ತೇನೆ ಮತ್ತು ಸ್ಕೂಲ್ ಸ್ವೆಟರ್‌ನ್ನು ಎಂದೂ ಕಳೆದುಕೊಂಡು ಮನೆಗೆ ಬರಲ್ಲ ಎಂದೂ ಮಾತುಕೊಟ್ಟೆ. ಆದರೆ ಈ ಯಾವ ಭರವಸೆಗಳೂ ದೇವರ ಮೇಲೆ ಪರಿಣಾಮ ಬೀರಲಿಲ್ಲ. ಅವನು ನನ್ನ ಮಾತುಗಳನ್ನು ಕೆಳಿಸಿಕೊಂಡೇ ಇರಲಿಲ್ಲ.
ನಾನು ಹದಿವಯಸ್ಸಿನವಳಾದಾಗ ನನ್ನ ಬಣ್ಣದ ಮೇಲೆ ನನಗಿದ್ದ ದ್ವೇಶ ಇನ್ನೂ ಹೆಚ್ಚಾಯಿತು. ನನ್ನ ಅಮ್ಮನೇನೋ ಆಗಾಗ ನನ್ನನ್ನು ‘ನೀನು ಚೆಂದ ಇದ್ದೀಯ ಕಣೆ’ ಎಂದು ಉಸುರುತ್ತಿದ್ದಳು.
ಆದರೆ ಅದು ನನಗೆನೂ ಸಮಾಧಾನ ತರುತ್ತಿಲಿಲ್ಲ. ಎಷ್ಟೆಂದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ. ಅಮ್ಮ ಹೇಳುತ್ತಿದ್ದುದೂ ಹಾಗೇ ಅಂದುಕೊಳ್ಳುತ್ತಿದ್ದೆ. ಆ ಹೊತ್ತಿನಲ್ಲಿ ಅಂತರ ರಾಷ್ರ ಮಟ್ಟದಲ್ಲಿ ಹೆಸರುವಾಸಿಯಾದ ಮಾಡೆಲ್ ತಾರೆ ಅಲೆಕ್ ವೆಕ್ ತೆರೆಯ ಮೇಲೆ ಕಾಣಿಸಿಕೊಂಡರು ನೋಡಿ. ಆಕೆಯೂ ಕತ್ತಲಿನಷ್ಟೇ ಕಡುಗಪ್ಪು ವರ್ಣದವಳು. ಆದರೂ ಪ್ರತಿಯೊಂದು ಮ್ಯಾಗಝೀನ್ ಹಾಗೂ ಪ್ರತಿಯೊಬ್ಬರ ಬಾಯಲ್ಲಿ ಆಕೆಯ ಚೆಲು”ನ ಬಗ್ಗೆ ಪುಂಖಾನುಪುಂಖವಾಗಿ ಮಾತುಗಳು ಕೇಳಿಬರುತ್ತಿದ್ದವು. ಓಪ್ರಾ ಕೂಡಾ ಆಕೆಯನ್ನು ಚೆಲುವೆ ಎಂದು ಹೇಳಿದ ಮೇಲೆ ಅದು ನಿಜಸಂಗತಿಯೇ ಸರಿ.
ನನ್ನದೇ ಬಣ್ಣದ ಮಹಿಳೆಯೊಬ್ಬಳನ್ನು ಜನರು ಸುಂದರಿ ಎಂದು ಸ್ವೀಕರಿಸುತ್ತಿರುವುದು ನನಗೆ ನನ್ನ ಕಣ್ಣುಗಳನ್ನೇ ನಂಬದಂತೆ ಮಾಡಿತ್ತು. ನನ್ನಲ್ಲಿ ನನ್ನ ಮುಖದ ಬಣ್ಣವೇ ನನಗೆ ಒಂದು ದೊಡ್ಡ ತಡೆ ಎಂದುಕೊಂಡಿದ್ದವಳು ನಾನು. ಆದರೆ ಇಲ್ಲಿ ಒಪ್ರಾ ಅದು ಹಾಗಲ್ಲ ಎನ್ನುತ್ತಿದ್ದರು. ನಾನು ನಿಜಕ್ಕೂ ಗೊಂದಲಕ್ಕೆ ಬಿದ್ದೆ. ನನ್ನ ಮನಸ್ಸು ಓಪ್ರಾ ಮಾತನ್ನು ನಿರಾಕರಿಸತೊಡಗಿತ್ತು. ಯಾಕೆಂದರೆ ನನ್ನದೇ ಅಸಮರ್ಪಕತೆಯ ಮೋಹಕ್ಕೆ ನಾನು ಹೊಂದಿಕೊಂಡಿದ್ದೆ.
ಆದರೂ ನನ್ನೊಳಗೇ ಇದ್ದ ಹೂವೊಂದು ಅರಳುತ್ತಿತ್ತು. ಅಲೆಕ್ ಅವರನ್ನು ನೋಡಿದಾಗ ನಾನು ಆಕೆಯಲ್ಲಿ ನನ್ನನ್ನೇ ಕಂಡುಕೊಂಡಿದ್ದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೂ ನನ್ನ ಸುತ್ತಲಿನ ವಾತಾವರಣದಲ್ಲಿ ಬಿಳಿಚರ್ಮಕ್ಕೆ ಆದ್ಯತೆ ನೀಡುವುದು ಇದ್ದೇ ಇತ್ತು. ಎಲ್ಲರ ದೃಷ್ಟಿಯಲ್ಲಿ ನಾನು ಸುಂದರವಲ್ಲ ಎಂಬ ಭಾವನೆ ಕೊರೆಯುತ್ತಲೇ ಇತ್ತು. ಆ ಕುರಿತು ಯೋಚಿಸಿದಾಗಲೆಲ್ಲ ಮತ್ತೆ ನಾನು ಸುಂದರಳಲ್ಲ ಎನ್ನಿಸತೊಡಗುತ್ತಿತ್ತು. ಆಗ ಅಮ್ಮ ಹೇಳುತ್ತಿದ್ದ ಮಾತು ಇಷ್ಟೆ- “ಸೌಂದರ್ಯವನ್ನು ತಿನ್ನೋಕಾಗಲ್ಲ, ಅದೇನೂ ನಿನಗೆ ಹೊಟ್ಟೆ ತುಂಬಿಸಲ್ಲ”. ಅವಳ ಈ ಮಾತುಗಳು ನನಗೆ ಬಹಳ ತಾಗಿದವು. ಸೌಂದರ್ಯ ಎನ್ನುವುದು ನಾವು ಸ್ವಾದೀನಪಡೆದುಕೊಳ್ಳಬಹುದಾದ ಅಥವಾ ನಾವು ಭೋಗಿಸುವಂತಹದ್ದಲ್ಲ. ಸೌಂದರ್ಯ ಏನಿದ್ದರೂ ನಾನು ಇರಬೇಕಾದ ಸ್ಥಿತಿ, ರೀತಿ ಎಂದು ನನಗೆ ಮನವರಿಕೆಯಾಗುವವರೆಗೂ ಅಮ್ಮ ಹೇಳಿದ್ದ ಆ ಮಾತಿನ ಅರ್ಥ ಏನೆಂದು ನನಗಾಗಿರಲಿಲ್ಲ.
’ನೀನು ನಿನ್ನ ಸೌಂದರ್ಯವನ್ನು ತಿನ್ನೋಕಾಗಲ್ಲ’ ಎಂದು ಅಮ್ಮ ಹೇಳಿದ್ದರ ಅರ್ಥ ನಮ್ಮನ್ನು ನಾವು ಉಳಿಸಿಕೊಳ್ಳುವುದು ನಾವು ಹೇಗೆ ಕಾಣುತ್ತೇವೆ ಎನ್ನುವುದನ್ನು ಅವಲಂಬಿಸಿಲ್ಲ ಎಂದು. ನಿಜದಲ್ಲಿ ನಮ್ಮನ್ನು ಉಳಿಸುವುದು ಮತ್ತು ಮೂಲಭೂತವಾಗಿ ಸುಂದರವಾದದ್ದು ಎಂದರೆ ನಮ್ಮೊಳಗಡೆ ನಮ್ಮ ಬಗೆಗೆ ಮತ್ತು ನಮ್ಮ ಸುತ್ತಲಿರುವವರ ಬಗೆಗೆ ನಾವು ಹೊಂದಿರುವ ದಯೆ; ಕರುಣೆ ಮಾತ್ರ. ಈ ಬಗೆಯ ಸೌಂದರ್ಯ ಹೃದಯವನ್ನು ಬೆಳಗಿಸಬಲ್ಲದು ಮತ್ತು ಆತ್ಮಕ್ಕೆ ಆಹ್ಲಾದವನ್ನುಂಟುಮಾಡಬಲ್ಲದು.
ನಾನು ಅಭಿನಯಿಸಿದ ಪಾತ್ರವಾದ ಪ್ಯಾಟ್ಸಿ ತನ್ನ ಒಡೆಯನೊಂದಿಗೆ ಅಷ್ಟೊಂದು ತೊಂದರೆ ಎದುರಿಸಿದ್ದೂ ಇದಕ್ಕಾಗಿಯೇ. ಅಲ್ಲದೆ ಆಕೆಯ ಈ ಕತೆಯನ್ನು ಇಲ್ಲಿಯವರೆಗೆ ಉಳಿಸಿಕೊಂಡು ಬಂದಿದ್ದೂ ಇದೇ. ಅವಳ ದೇಹದ ಸೌಂದರ್ಯ ಮಸುಕಾದ ಮೇಲೂ ಅವಳಲ್ಲಿನ ಸ್ಪೂರ್ತಿಯ ಸೌಂದರ್ಯವನ್ನು ನಾವು ನೆನಪಿಸಿಕೊಳ್ಳಬಹುದು.ನೀವು ಓದುವ ಮ್ಯಾಗಝೀನ್‌ಗಳಲ್ಲಿ, ಮತ್ತು ನಿಮ್ಮ ಟಿವಿಗಳ ಪರದೆಗಳ ಮೇಲೆ ನನ್ನ ಬರುವಿಕೆ ಯುವತಿಯರನ್ನೆಲ್ಲಾ ನನ್ನದೇ ಬಗೆಯ ಪಯಣದಕ್ಕೆ ಕೊಂಡೊಯ್ಯಲಿ.
ಬಾಹ್ಯ ಸೌಂದರ್ಯವನ್ನು ಗುರುತಿಸಿಕೊಳ್ಳುವುದರ ಜೊತೆಗೆ ಅಂತರಂಗದಲ್ಲಿ ಸುಂದರವಾಗಿ ಕಾಣುವ ಉದ್ದಿಮೆಯಲ್ಲಿ ಇನ್ನೂ ಆಳವಾಗಿ ತೊಡಗಿಸಿಕೊಳ್ಳುವ ಪಯಣ ನಿಮ್ಮದೂ ಆಗಲಿ ಎಂದು ಆಶಿಸುತ್ತೇನೆ. ನಾನು ಹೇಳಿದ ಈ ಅಂತರಂಗದ ಸೌಂದರ್ಯಕ್ಕೆ ಕಪ್ಪುಛಾಯೆ ಇರುವುದಿಲ್ಲ ಎಂದು ನೆನಪಿರಲಿ.
ಧನ್ಯವಾದಗಳು.
‘12 Years a Slave’ ಸಿನೆಮಾ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ಅಭಿಮಾನಿಗಳ ಸಂಭ್ರಮದಿಂದ ದೂರ ಕಿಚ್ಚನ ಬರ್ತ್‌ಡೇ; 53ನೇ ವಸಂತದಲ್ಲಿ ಸುದೀಪ್ ಸಿನಿಮಾ ಸರ್ಪ್ರೈಸ್‌ಗೆ ಕೌಂಟ್‌ಡೌನ್!
ಸುದ್ದಿದಿನ,ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು, ಸೆಪ್ಟೆಂಬರ್ 2, ವಿಶೇಷ ದಿನ. 53ನೇ ವಸಂತಕ್ಕೆ ಕಾಲಿಡುತ್ತಿರುವ ಸುದೀಪ್, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸೆ.2ರಂದು ಮನೆ ಬಳಿ ಅಭಿಮಾನಿಗಳು ಯಾರೂ ಬರಬಾರದು ಎಂದು ಸುದೀಪ್ ಈಗಾಗಲೇ ಮನವಿ ಮಾಡಿದ್ದರು. ಹೀಗಾಗಿ ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ಕಿಚ್ಚನ ಬರ್ತ್‌ಡೇ ಈ ಬಾರಿ ವಿಭಿನ್ನವಾಗಿದೆ.
ಆದರೆ, ಅಭಿಮಾನಿಗಳಿಗೆ ನಿರಾಸೆಯಾಗದಂತೆ ಸಿನಿಮಾ ವಿಚಾರದಲ್ಲಿ ಭರ್ಜರಿ ಸರ್ಪ್ರೈಸ್ ಸಿಗುವ ನಿರೀಕ್ಷೆ ಮೂಡಿದೆ. ಹುಟ್ಟುಹಬ್ಬದ ಸಂದರ್ಭದಲ್ಲೇ ಕಿಚ್ಚನ ಮುಂಬರುವ ಸಿನಿಮಾಗಳ ಕುರಿತು ಮಹತ್ವದ ಅಪ್‌ಡೇಟ್‌ಗಳು ಹೊರಬರುವ ಸಾಧ್ಯತೆ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
http://Visit : www.suddidina.com
53ನೇ ವಸಂತ, 30 ವರ್ಷದ ಸಿನಿ ಪಯಣ
ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, 1997ರಲ್ಲಿ ಬಿಡುಗಡೆಯಾದ ‘ತಾಯವ್ವ’ ಚಿತ್ರದ ಮೂಲಕ ಸಿನಿಮಾ ಪಯಣ ಆರಂಭಿಸಿದ್ದರು. ಇದೀಗ ಚಿತ್ರರಂಗದಲ್ಲಿ ಮೂರು ದಶಕಗಳ ಪಯಣ ಪೂರ್ಣಗೊಳಿಸಿರುವುದು ಈ ಹುಟ್ಟುಹಬ್ಬದ ಮತ್ತೊಂದು ವಿಶೇಷ.
ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ ಹಾಗೂ ಕಿರುತೆರೆಯಲ್ಲಿಯೂ ಸುದೀಪ್ ತಮ್ಮದೇ ಗುರುತು ಮೂಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕರಾಗಿ ಸತತವಾಗಿ ಮುಂದುವರಿದಿರುವುದು ಅವರ ಜನಪ್ರಿಯತೆಗೆ ಮತ್ತೊಂದು ಸಾಕ್ಷಿಯಾಗಿದೆ.
View this post on Instagram
‘ಬಿಲ್ಲ ರಂಗ ಭಾಷಾ’ ಮೇಲೆ ಹೆಚ್ಚಿದ ನಿರೀಕ್ಷೆ
‘ವಿಕ್ರಾಂತ್ ರೋಣ’ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಸುದೀಪ್ ಮತ್ತೊಮ್ಮೆ ‘ಬಿಲ್ಲ ರಂಗ ಭಾಷಾ’ ಮೂಲಕ ಒಂದಾಗಿದ್ದಾರೆ. ಈಗಾಗಲೇ ಚಿತ್ರದ ಲುಕ್ ಅಭಿಮಾನಿಗಳ ಗಮನ ಸೆಳೆದಿದ್ದು, ಮಾಸ್ ಅವತಾರದಲ್ಲಿ ಕಿಚ್ಚ ಕಾಣಿಸಿಕೊಂಡಿರುವುದು ನಿರೀಕ್ಷೆ ಹೆಚ್ಚಿಸಿದೆ.
ಚಿತ್ರದ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಕೂಡ ಉತ್ಸಾಹ ವ್ಯಕ್ತಪಡಿಸಿದ್ದು, ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಿನಿಮಾಗೆ ಸಂಬಂಧಿಸಿದ ಹೊಸ ಅಪ್‌ಡೇಟ್ ಸಿಗುವ ಸಾಧ್ಯತೆ ಇದೆ. ಸಿನಿಮಾ 2027ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
4 ಸಿನಿಮಾಗಳ ಸದ್ದು?
2024ರಲ್ಲಿ ‘ಮ್ಯಾಕ್ಸ್’ ಬಿಡುಗಡೆಯಾದ ಬಳಿಕ ಸುದೀಪ್ ಅವರ ಹೊಸ ಸಿನಿಮಾ ತೆರೆಗೆ ಬಂದಿಲ್ಲ. ಇದೀಗ ಒಂದೇ ಬಾರಿ ನಾಲ್ಕು ಸಿನಿಮಾಗಳ ಕುರಿತಂತೆ ಘೋಷಣೆ ಅಥವಾ ಅಪ್‌ಡೇಟ್ ಸಿಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ಮೂಲಕ ಬರ್ತ್‌ಡೇ ಸಂಭ್ರಮದಿಂದ ದೂರವಿದ್ದರೂ, ಸಿನಿಮಾ ಸುದ್ದಿಗಳ ಮೂಲಕ ಕಿಚ್ಚ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲಿದ್ದಾರೆ.
ಸೆ.6ಕ್ಕೆ ಮತ್ತೆ ಟಿವಿ ಪರದೆ ಮೇಲೆ ಕಿಚ್ಚ
ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಕಿಚ್ಚನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಪ್ರೀಮಿಯರ್ ಸೆಪ್ಟೆಂಬರ್ 6ರಂದು ನಡೆಯಲಿದ್ದು, ಮತ್ತೊಮ್ಮೆ ಸುದೀಪ್ ನಿರೂಪಕರಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೀಗಾಗಿ 53ನೇ ಹುಟ್ಟುಹಬ್ಬ, 30 ವರ್ಷದ ಸಿನಿ ಪಯಣ, ಹೊಸ ಸಿನಿಮಾಗಳ ನಿರೀಕ್ಷೆ ಹಾಗೂ ‘ಬಿಗ್ ಬಾಸ್’ ಎಂಟ್ರಿ—ಈ ಬಾರಿ ಕಿಚ್ಚನ ಬರ್ತ್‌ಡೇಗೆ ವಿಶೇಷ ಅರ್ಥ ಸಿಕ್ಕಿದೆ.

ದಿನದ ಸುದ್ದಿ
Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್; ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್ ಕನ್ನಡ 13ರ ವಿಶೇಷತೆಗಳೇನು?
ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್‌ಬಾಸ್ ಕನ್ನಡ ಸೀಸನ್ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್‌ಬಾಸ್ ಅಗ್ನಿಪರೀಕ್ಷೆ’ ಮೂಲಕ ಕುತೂಹಲ ಹೆಚ್ಚಿಸಿರುವ ಕಾರ್ಯಕ್ರಮದ ಟಿವಿ ಸೀಸನ್ ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ. ಹೊಸ ಸೀಸನ್‌ನಲ್ಲಿ ಮನೆ, ಥೀಮ್, ಸ್ಪರ್ಧಿಗಳ ಆಯ್ಕೆ ಹಾಗೂ ವೀಕ್ಷಣಾ ಅನುಭವದಲ್ಲೂ ಹಲವು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ.
ಕಳೆದ 12 ಸೀಸನ್‌ಗಳಂತೆ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಸತತ 13 ಸೀಸನ್‌ಗಳನ್ನು ನಿರೂಪಣೆ ಮಾಡುತ್ತಿರುವುದು ಬಿಗ್‌ಬಾಸ್ ಇತಿಹಾಸದಲ್ಲೇ ಗಮನಾರ್ಹ ದಾಖಲೆಯಾಗಿದೆ.
ಹೈಲೈಟ್ಸ್: ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್ ಹವಾ |
|
http://Visit : www.suddidina.com
ಈ ಬಾರಿ ‘Flight’ ಥೀಮ್ ಏಕೆ ವಿಶೇಷ?
ಕಳೆದ ಸೀಸನ್‌ನಲ್ಲಿ ವೀಕ್ಷಕರು ಅರಮನೆ ಮಾದರಿಯ ಬಿಗ್‌ಬಾಸ್ ಮನೆಯನ್ನು ಕಂಡಿದ್ದರು. ಆದರೆ ಈ ಬಾರಿ ಇಡೀ ಕಾರ್ಯಕ್ರಮದ ಕಲ್ಪನೆಯೇ ಬದಲಾಗಿದೆ. ‘Flight’ ಥೀಮ್ ಆಧಾರಿತವಾಗಿ ಸೀಸನ್ 13 ರೂಪಿಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲೂ ಇದರ ಝಲಕ್ ಕಾಣಿಸಿಕೊಂಡಿದೆ.
ವಿಶೇಷವೆಂದರೆ ಫ್ಲೈಟ್ ಥೀಮ್ ಕೇವಲ ಪ್ರೋಮೋಗೆ ಸೀಮಿತವಾಗಿಲ್ಲ. ಬಿಗ್‌ಬಾಸ್ ಮನೆಯ ವಿನ್ಯಾಸದಲ್ಲೂ ಇದೇ ಪರಿಕಲ್ಪನೆಯನ್ನು ಬಳಸಲಾಗಿದೆ. ಹೀಗಾಗಿ ಈ ಬಾರಿ ಮನೆ ಹೇಗೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಸೆಲೆಬ್ರಿಟಿಗಳ ಜತೆಗೆ ಕಾಮನ್ ಮ್ಯಾನ್ ಎಂಟ್ರಿ
ಬಿಗ್‌ಬಾಸ್ ಕನ್ನಡದ ಪ್ರತಿ ಸೀಸನ್‌ನಲ್ಲೂ ಸ್ಪರ್ಧಿಗಳ ಆಯ್ಕೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.
‘ಬಿಗ್‌ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಮೂವರು ಸಾಮಾನ್ಯ ಸ್ಪರ್ಧಿಗಳು ಸೀಸನ್ 13ರ ಮನೆಗೆ ಪ್ರವೇಶಿಸಲಿದ್ದಾರೆ. ಇದರಿಂದ ಮನೆಯಲ್ಲಿ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವಿನ ಸಂವಹನ, ಅಭಿಪ್ರಾಯ ಭೇದ ಹಾಗೂ ಹೊಸ ರೀತಿಯ ಸ್ಪರ್ಧೆ ಮೂಡುವ ನಿರೀಕ್ಷೆಯಿದೆ.
ಮನೆಯ ಪ್ರತಿಕ್ಷಣವೂ 24×7 ಲೈವ್
ಈ ಬಾರಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಟಿವಿ ಎಪಿಸೋಡ್‌ಗಳಿಗೆ ಮಾತ್ರ ಸೀಮಿತವಾಗದೆ, ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್ ಮನೆಯ 24×7 ಲೈವ್ ವೀಕ್ಷಣೆ ಲಭ್ಯವಿರಲಿದೆ.
ಅಂದರೆ ದಿನದ ಎಪಿಸೋಡ್‌ನಲ್ಲಿ ಪ್ರಸಾರವಾಗದ ಮನೆಯೊಳಗಿನ ಹಲವು ಬೆಳವಣಿಗೆಗಳನ್ನೂ ವೀಕ್ಷಕರು ಗಮನಿಸಬಹುದು. ಸ್ಪರ್ಧಿಗಳ ನಡುವಿನ ಮಾತುಕತೆ, ಚಟುವಟಿಕೆಗಳು ಹಾಗೂ ಅನಿರೀಕ್ಷಿತ ಘಟನೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.
ಪ್ರಸಾರದ ಸಮಯವೂ ಫಿಕ್ಸ್
ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.
ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಶನಿವಾರ ಮತ್ತು ಭಾನುವಾರದ ವಿಶೇಷ ಸಂಚಿಕೆಗಳು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿವೆ.
ಬಿಗ್‌ಬಾಸ್ ಪ್ರಯಾಣ ಯಾವ ದಿಕ್ಕಿಗೆ?
ಫ್ಲೈಟ್ ಥೀಮ್, ಹೊಸ ಮುಖಗಳು, ಸಾಮಾನ್ಯ ಸ್ಪರ್ಧಿಗಳ ಪ್ರವೇಶ ಮತ್ತು 24×7 ಲೈವ್ ವೀಕ್ಷಣೆಯೊಂದಿಗೆ ಸೀಸನ್ 13 ಕುತೂಹಲ ಮೂಡಿಸಿದೆ. ಈ ‘ಫ್ಲೈಟ್’ನಲ್ಲಿ ಯಾರು ಟೇಕಾಫ್ ಆಗುತ್ತಾರೆ, ಯಾರು ಮಧ್ಯದಲ್ಲೇ ಎಲಿಮಿನೇಟ್ ಆಗುತ್ತಾರೆ ಮತ್ತು ಕೊನೆಯವರೆಗೂ ಯಾರು ಪ್ರಯಾಣ ಮುಂದುವರಿಸುತ್ತಾರೆ ಎಂಬುದೇ ಮುಂದಿನ ದಿನಗಳ ಪ್ರಮುಖ ಪ್ರಶ್ನೆ.

ದಿನದ ಸುದ್ದಿ
Bigg Boss Agniparikshé: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಕುಮಾರಿ ಎಕ್ಸಿಟ್; ಆಟ ಮುಗಿದರೂ ಭವಿಷ್ಯಕ್ಕೆ ಸಿಕ್ಕಿತು ದೊಡ್ಡ ಗಿಫ್ಟ್
ಸುದ್ದಿದಿನ,ಬೆಂಗಳೂರು: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋನಲ್ಲಿ ತಮ್ಮ ಸರಳತೆ, ಮುಗ್ಧತೆ ಹಾಗೂ ಸಹಜ ವರ್ತನೆಯಿಂದ ವೀಕ್ಷಕರ ಗಮನ ಸೆಳೆದಿದ್ದ ನಂಜನಗೂಡಿನ ಕುಮಾರಿ ಇದೀಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರಿ, ವೈದ್ಯರ ಸಲಹೆಯಂತೆ ಆಟವನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೋನಿಂದ ಹೊರಬಂದಿದ್ದಾರೆ.
ಕಳೆದ ಕೆಲವು ಸಂಚಿಕೆಗಳಲ್ಲಿ ಕುಮಾರಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅವರು ಯಾಕೆ ಕಾರ್ಯಕ್ರಮದಲ್ಲಿ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಪರ್ಧಿ ಪೂರ್ಣಿಮಾ, ತಮ್ಮನ್ನು ಕಳುಹಿಸಿ ಕುಮಾರಿಯನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಕುಮಾರಿ ಶೋನಿಂದ ದೂರ ಉಳಿದಿರುವ ನಿಜವಾದ ಕಾರಣ ಅನಾರೋಗ್ಯ ಎಂಬುದು ಸ್ಪಷ್ಟವಾಗಿದೆ.
http://Visit : www.suddidina.com
ಆಟ ಅರ್ಧಕ್ಕೆ ನಿಂತರೂ ಸಿಕ್ಕಿತು ₹5 ಲಕ್ಷ!
ಕುಮಾರಿಯ ಬಿಗ್ ಬಾಸ್ ಪಯಣ ಅರ್ಧಕ್ಕೆ ಅಂತ್ಯಗೊಂಡಿದ್ದರೂ, ಕಾರ್ಯಕ್ರಮದ ವೇದಿಕೆ ಅವರಿಗೆ ನಿರೀಕ್ಷೆಗೂ ಮೀರಿದ ನೆರವು ನೀಡಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆ ಕುಮಾರಿಗೆ ಬರೋಬ್ಬರಿ ₹5 ಲಕ್ಷ ನಗದು ನೆರವು ನೀಡಿದೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕುಮಾರಿಗೆ ಈ ಹಣ ದೊಡ್ಡ ಆರ್ಥಿಕ ಆಸರೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗೆ ಈ ಹಣ ನೆರವಾಗಬಹುದು ಎಂಬ ನಿರೀಕ್ಷೆಯೂ ಇದೆ.
ಶಿಕ್ಷಣದ ಬಳಿಕ ಉದ್ಯೋಗಕ್ಕೂ ಭರವಸೆ
₹5 ಲಕ್ಷ ನೆರವಿನ ಜತೆಗೆ ಕುಮಾರಿಗೆ ಮತ್ತೊಂದು ಮಹತ್ವದ ಅವಕಾಶವನ್ನು ಸಂಸ್ಥೆ ಘೋಷಿಸಿದೆ. ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡಲಾಗಿದೆ.
ಇದು ಕುಮಾರಿಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಘೋಷಣೆಯಾಗಿದೆ. ರಿಯಾಲಿಟಿ ಶೋನಿಂದ ಸಿಕ್ಕ ಜನಪ್ರಿಯತೆಯ ಜತೆಗೆ ಇದೀಗ ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಡುವ ಅವಕಾಶವೂ ದೊರೆತಿದೆ.
ಭಾವುಕ ವಿದಾಯ, ಹೊಸ ಬದುಕಿನ ಭರವಸೆ
ಹಳ್ಳಿಯಿಂದ ಬಂದ ಕುಮಾರಿಗೆ ಬೆಂಗಳೂರನ್ನು ನೋಡುವ ಅವಕಾಶದಿಂದ ಹಿಡಿದು ದೊಡ್ಡ ರಿಯಾಲಿಟಿ ಶೋ ವೇದಿಕೆಯಲ್ಲಿ ಸ್ಪರ್ಧಿಸುವವರೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಹಲವು ಹೊಸ ಅನುಭವಗಳನ್ನು ನೀಡಿದೆ. ಶೋನಿಂದ ನಿರ್ಗಮಿಸುವ ಸಂದರ್ಭದಲ್ಲಿ ಕುಮಾರಿ ಸೇರಿದಂತೆ ಇತರ ಸ್ಪರ್ಧಿಗಳು ಭಾವುಕರಾದರು.
ಸ್ಪರ್ಧೆಯಲ್ಲಿ ಮುಂದುವರಿಯಲು ಸಾಧ್ಯವಾಗದ ನೋವಿನ ನಡುವೆಯೂ, ಇಷ್ಟು ದೊಡ್ಡ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದಾಗಿ ಅವರ ಆಟ ಅಂತ್ಯಗೊಂಡಿದ್ದರೂ, ₹5 ಲಕ್ಷ ನೆರವು ಮತ್ತು ಭವಿಷ್ಯದ ಉದ್ಯೋಗದ ಭರವಸೆ ಕುಮಾರಿಯ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಹೀಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕುಮಾರಿಯ ಆಟ ಅರ್ಧಕ್ಕೆ ನಿಂತಿದ್ದರೂ, ಕಾರ್ಯಕ್ರಮದ ವೇದಿಕೆಯಿಂದ ಸಿಕ್ಕ ಬೆಂಬಲ ಅವರ ಮುಂದಿನ ಬದುಕಿಗೆ ಮಹತ್ವದ ತಿರುವು ನೀಡಿದೆ.



