Connect with us

ಅಂತರಂಗ

ಪರೀಕ್ಷೆಗೆ ಪರಿಣಾಮಕಾರಿ ಓದು

Published

on

 

ವಿದ್ಯಾ ನಾಮನರಸ್ಯ ರೂಪಮಧಿಕಂ ಪ್ರಚ್ಛನ್ನ ಗುಪ್ತ ಧನಂ
ವಿದ್ಯಾಭೋಗಕರೀ ಯಶಃ ಸುಖಕರೀ ವಿದ್ಯಾ ಗುರುಣಾಂ ಗುರುಃ ||
ವಿದ್ಯಾಬಂಧು ಜನೋ ವಿದೇಶಗಮತೀ ವಿದ್ಯಾಪರಂ ದೈವತಂ |
ವಿದ್ಯಾ ರಾಜಸು ಪೂಜ್ಯತೀ ನಹಿ ಧನಂ ವಿದ್ಯಾವಿಹೀನಃ ಪಶುಃ ||

ವಿದ್ಯೆಯು ಮನುಷ್ಯನಿಗೆ, ಸ್ತ್ರೀಗೆ ಸೌಂದರ್ಯವಾಗಿದೆ. ಅದೊಂದು ದೊಡ್ಡ ಸಂಪತ್ತು, ಆದರೆ ಅದು ಹೊರಗೆ ಕಾಣಿಸದು. ವಿದ್ಯೆಯ ಬಲದಿಂದ ನಾವು ನಾನಾ ಬಗೆಯ ಸುಖ ಅನುಭವಿಸಬಹುದು. ಅದು ಯಶಸ್ವಿಗೆ ಮೂಲ ಕಾರಣವು. ಗುರುಗಳಲ್ಲಿ ಅದು ಶ್ರೇಷ್ಠ ಗುರು ಎನಿಸಿರುವುದು. ಪರ ನಾಡಿನಲ್ಲಿ ವಿದ್ಯೆಯೇ ಶ್ರೇಷ್ಠ ಗೆಳೆಯ. ವಿದ್ಯೆಯು ಶ್ರೇಷ್ಠ ದೇವತೆ. ರಾಜ ಮಹಾರಾಜರ ಸನ್ನಿಧಾನದಲ್ಲಿ ಸಂಪತ್ತಿಗೆ ಬೆಲೆಯಿಲ್ಲ. ಆದರೆ ಅದೇ ವಿದ್ಯೆ ದೊಡ್ಡ ಗುಣವಾಗಿ ಪರಿಣಮಿಸುವುದು.

ಹೀಗೆ ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಬೇಕು.‌ಅತೀ ಹೆಚ್ಚು ಅಂಕ ಪಡೆಯುವ ದಿಸೆಯಲ್ಲಿ ಪರಿಣಾಮಕಾರಿ ಓದುವುದು ಬಹಳ ಮುಖ್ಯವಾದುದು. ಓದು ಶಿಕ್ಷಣದ ಹಾಗೂ ವ್ಯಕ್ತಿತ್ವ ರೂಪಿಸುವ ಅವಿಭಾಜ್ಯ ಅಂಗ. ವಿದ್ಯಾರ್ಥಿಯಾದವನು/ಆದವಳು ಸದಾ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಂಡಿರಬೇಕು. ಬಲವಂತ, ಕಷ್ಟಪಟ್ಟು ಹಾಗೂ ಒತ್ತಾಯಕ್ಕೆ ಓದುವುದು ಸಮಂಜಸವಲ್ಲ. ಇಷ್ಟಪಟ್ಟು ಓದಿದಾಗ ವಿಷಯವನ್ನು ಬೇಗ ಅರ್ಥಮಾಡಿಕೊಳ್ಳಬಹುದು.ಓದಿನಲ್ಲೂ ಸಂಪೂರ್ಣ ಮನಸ್ಸಿಟ್ಟು ಹೆಚ್ಚಿನ ಏಕಾಗ್ರತೆಯಿಂದ ಓದುವ ಅಭ್ಯಾಸವನ್ನು ಚಿಕ್ಕ ವಯೋಮಾನದಿಂದಲೇ ಬೆಳೆಸಿಕೊಳ್ಳಬೇಕು.

ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು

  1. ನೀವು ಓದುವ ಕೊಠಡಿ ಸಾಕಷ್ಟು ಗಾಳಿ, ಬೆಳಕಿನಿಂದ ಕೂಡಿರಲಿ. ಬಿಳಿಯ ಬೆಳಕು ಅವಶ್ಯಕ.
  2. ಮನಸ್ಸನ್ನು ಉದ್ರೇಕಿಸುವ ಭಾವಚಿತ್ರಗಳು ಬೇಡ.
  3. ವಿವಿಧ ವಿಷಯಕ್ಕೆ ಸಂಬಂಧಿಸಿದ ಚಾರ್ಟ್‍ಗಳಿರಲಿ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಅನುಸರಿಸಬೇಕಾದ ನಿರ್ವಹಣೆ ಪಟ್ಟಿ, ವೇಳಾ ಪಟ್ಟಿ ಇರಲಿ.
  4. ಪುಸ್ತಕಗಳನ್ನು ಕ್ರಮಬದ್ಧವಾಗಿ ಜೋಡಿಸಿಡಬೇಕು. ಎಲ್ಲಾ ಪುಸ್ತಕಗಳನ್ನು ಹರಡಿಕೊಂಡು ಓದುವುದು ಸೂಕ್ತವಲ್ಲ.
  5. ಓದಲು ಕುಳಿತುಕೊಳ್ಳುವ ಜಾಗ ಸ್ಥಿರವಾಗಿರಲಿ, ಪದೇ ಪದೇ ಬದಲಾಯಿಸುವುದು ಬೇಡ.
  6. ಓದುವ ಕೊಠಡಿಯಲ್ಲಿ ಟಿ.ವಿ., ರೇಡಿಯೋ, ಮೊಬೈಲ್, ಟೇಪ್‍ರೆಕಾರ್ಡರ್, ಫೋನ್ ಇವುಗಳಿಂದ ದೂರವಿರಿ.
  7. ನೀವು ಓದುವಾಗ ಬೇರೆ ಕೊಠಡಿಯಲ್ಲಿರುವ ಟಿ.ವಿ. ಅಥವಾ ರೇಡಿಯೋ, ಮೊಬೈಲ್ ಶಬ್ದ ಕೇಳದಂತೆ ಎಚ್ಚರವಹಿಸಿರಿ.
  8. ಕುಳಿತುಕೊಂಡು ಓದುವುದು ಸೂಕ್ತ. ಮಲಗಿ ಓದುವುದರಿಂದ ಬಹುಬೇಗ ನಿದ್ರೆಗೆ ಜಾರುತ್ತೀರಿ.
  9. ಬೆಳಗಿನ ಜಾವದ ಸಮಯದಲ್ಲಿ ಹೆಚ್ಚು ಓದುವುದು ಒಳ್ಳೆಯ ಅಭ್ಯಾಸ ಹಾಗೂ ವಿಷಯವನ್ನು ಬಹುಬೇಗ ಗ್ರಹಿಸಬಹುದು.
  10. ಒಮ್ಮೆ ಓದುವುದಕ್ಕೆ ಕುಳಿತರೆ ಕನಿಷ್ಠ ಅರ್ಧ ಗಂಟೆ/ ಒಂದು ಗಂಟೆ ಏಳದಂತೆ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ.
  11. ತರಗತಿಯಲ್ಲಿ ಆದ ಪಾಠಗಳನ್ನು ಅಂದಿನ ದಿನದಂದೆ ಓದಿ ಬರೆಯಿರಿ.
  12. ಅರ್ಥವಾಗದೇ ಇರುವ ವಿಷಯಗಳನ್ನು ನಿಮ್ಮ ಗೆಳೆಯರ ಅಥವಾ ಶಿಕ್ಷಕರ ಜೊತೆ ಚರ್ಚಿಸಿ ತಿಳಿದುಕೊಳ್ಳಿ.
  13. ಯಾವ ವಿಷಯವೂ ಕಠಿಣವಲ್ಲ ಎಂಬುದಕ್ಕೆ ಮನವರಿಕೆ ಮಾಡಿಕೊಳ್ಳಿ.
  14. ಕಡಿಮೆ ಅಂಕ ಬಂದಿರುವ ವಿಷಯಗಳ ಮೇಲೆ ಹೆಚ್ಚು ಹೆಚ್ಚು ಏಕಾಗ್ರತೆಯಿಂದ ಓದಿ ಬರೆದು ಅಭ್ಯಾಸ ಮಾಡಿ.
  15. ಓದುವಾಗ ಆ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಸಣ್ಣ ಟಿಪ್ಪಣಿ ಮಾಡಿಕೊಳ್ಳಿ.
  16. ಓದಬೇಕಾದ ದಿನಚರಿ, ಕಾಲ ನಿರ್ವಹಣಾ ಪಟ್ಟಿ ಹಬ್ಬ, ರಜಾ ದಿನವೂ ಅನುಸರಿಸಲ್ಪಡುವಂತೆ ಎಚ್ಚರಿಕೆ ವಹಿಸಿ. ಆ ದಿನ ಹಿಂದಿನ ವಾರದಲ್ಲಿ ಕಲಿಯುವಿಕೆಯಲ್ಲಿ ಆಗಿರಬಹುದಾದ ಕೊರತೆಯನ್ನು ಭರಿಸುವ ದಿನ ಎಂಬುದಾಗಿ ಭಾವಿಸುತ್ತ ಓದಿ ಬರೆಯುವ ಪರಿಪಾಠ ಬೆಳೆಸಿಕೊಳ್ಳಿ.
  17. ಕೀಳು ಅಭಿರುಚಿ, ಕಾಡು ಹರಟೆಯಲ್ಲಿ ತೊಡಗಬೇಡಿ
  18. ಪದ್ಯ, ಸೂತ್ರ, ಸಮೀಕರಣ ಇತ್ಯಾದಿಗಳನ್ನು ಬಾಯಿಪಾಠ ಅಥವಾ ಕಂಠಪಾಠ ಮಾಡಿ.

ಪರೀಕ್ಷೆ

ಪರೀಕ್ಷೆಗಳು ವಿದ್ಯಾಭ್ಯಾಸದ ಒಂದು ಭಾಗವೇ ಆಗಿದೆ. ಟೆಸ್ಟುಗಳು, ಚಿಕ್ಕ ಪರೀಕ್ಷೆಗಳು, ಅರ್ಧವಾರ್ಷಿಕ ಪರೀಕ್ಷೆಗಳು ಅಣಕು ಪರೀಕ್ಷೆಗಳು,ಫೈನಲ್ ಪರೀಕ್ಷೆಗಳು ಹೀಗೆ.. ವಿದ್ಯಾರ್ಥಿ ಅನೇಕ ಪರೀಕ್ಷೆಗಳನ್ನು ಎದುರಿಸಬೇಕು.

ಪಬ್ಲಿಕ್ ಪರೀಕ್ಷೆಯಿರುವ 10ನೇ ತರಗತಿ, ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಅತೀ ಹೆಚ್ಚು ಕಾಳಜಿ ವಹಿಸುವ ಪ್ರಯತ್ನದಲ್ಲಿರುತ್ತಾರೆ. ಏಕೆಂದರೆ ಇದು ವಿದ್ಯಾರ್ಥಿಯ ದೆಶೆಯಲ್ಲಿ

ನೂರಕ್ಕೊಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಒಂದೆರಡು ತಿಂಗಳು ಅಧ್ಯಯನ ಮಾಡಿ ಒಳ್ಳೆಯ ಅಂಕಗಳನ್ನು ಗಳಿಸಬಲ್ಲರು. ಆದರೆ ಉಳಿದ 98 ಸ್ಲೋ ಅಂಡ್ ಸ್ಟಡಿ, ವಿನ್ ದಿ ರೇಸ್ ನಿಧಾನವಾಗಿ ಅವಸರ ಮಾಡಿಕೊಳ್ಳದೆ, ಕ್ರಮಬದ್ಧವಾಗಿ ಅಧ್ಯಯನ ಮಾಡಿ, ಯಶಸ್ಸನ್ನು ಸಾಧಿಸಬಹುದು ಪ್ರಾರಂಭದಿಂದಲೇ ಓದಿದರೆ ಸಿದ್ಧತೆ ಮಾಡಿದರೆ, ಸಾಕಷ್ಟು ಸಮಯ ಸಿಗುತ್ತದೆ. ರಿಕಾಲ್ ಮತ್ತು ರಿಹರ್ಸಲ್ ಮಾಡಲು ಕಾಲಾವಕಾಶವಿರುತ್ತದೆ. ಮಾನಸಿಕ ಒತ್ತಡ ಕಂಡುಬರುವುದಿಲ್ಲ. ಮಧ್ಯೆ ಮಧ್ಯೆ ವಿಶ್ರಾಂತಿ ಮಾಡಲು ಸಮಯ ಸಿಗುತ್ತದೆ. ತಮ್ಮ ನಿರೀಕ್ಷಿತ ಗುರಿ ತಲುಪಲು ಸಹಾಯಕವಾಗುತ್ತದೆ. ಇಂತಹ ವಿಚಾರಗಳನ್ನು ಶಿಕ್ಷಕರು ಪಾಲಕರಿಗೆ ಪೋಷಕರು ವರ್ಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ತಿಳಿಸಬೇಕು. ಪ್ರತಿ ತಿಂಗಳಿಗೊಮ್ಮೆ ಶಿಕ್ಷಕರು ಪೋಷಕರ ಸಭೆ ಕರೆದು ತಮ್ಮ ಯೋಜನೆ, ಗುರಿ ಉದ್ದೇಶವನ್ನು ತಿಳಿಸುವುದು ಸೂಕ್ತ.

ಆಸಕ್ತಿಯಿಂದ ಪಾಠ ಕೇಳುವುದು

ವಿದ್ಯಾರ್ಥಿಗಳು ಒತ್ತಾಯಕ್ಕೆ ತರಗತಿಗಳಿಗೆ ಹೋಗಬಾರದು. ಶಿಕ್ಷಕರು ಹೇಳುವಂತಹ ಪಾಠವನ್ನು ಶ್ರದ್ಧೆಯಿಂದ ಆಲಿಸಿಕೊಳ್ಳಬೇಕು. ಅಲ್ಲದೆ ಅನುಮಾನದ ಅರ್ಥವಾಗದಂತಹ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕು.ನುರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಭಿನ್ನ ಆಯಾಮಗಳಿಂದ, ಸರಳವಾಗಿ, ಆಕರ್ಷಕವಾಗಿ ಭೋದನೆ ಮಾಡಿ ಆಸಕ್ತಿಯನ್ನು ಕೆರಳಿಸುವಂತಿದ್ದರೆ. ಆದ್ದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗುವುದರಿಂದ ಧನಾತ್ಮಕವಾದ ಅಂಶಗಳು ಹೆಚ್ಚುತ್ತವೆ.

ತರಗತಿಯಲ್ಲಿರುವಾಗ ನಮ್ಮ ಮನಸ್ಸು ಹಿಡಿದು ಏಕಾಗ್ರತೆಯಿಂದ ಪಾಠ, ಪ್ರವಚನದ ಕಡೆ ಸಾಗಬೇಕು. ಹಸಿವಿನಿಂದ ಪಾಠ ಕೇಳುವುದು ಕಲಿಕೆಗೆ ಭಂಗ ತರುತ್ತವೆ. ಅಲ್ಲದೆ ಅತೀ ಹೆಚ್ಚು ಊಟ ಮಾಡಿದರೆ ನಿದ್ರೆಗೆ ಜಾರುತ್ತಾರೆ. ಊಟ, ತಿಂಡಿ ಸಮ ಪ್ರಮಾಣದಲ್ಲಿ ಸೇವಿಸಿದಾಗ ಮನಸ್ಸು ಹತೋಟಿಯಲ್ಲಿದ್ದು ಕಲಿಕೆಗೆ ಪೂರಕವಾದ ಅಂಶಗಳನ್ನು ಒದಗಿಸುತ್ತದೆ. ಶಾಲಾ ಅಥವಾ ಕಾಲೇಜಿನಿಂದ ಮನೆಗೆ ಬಂದ ಮೇಲೆ ಮುಖ ತೊಳಿದು ದೈಹಿಕ ಶ್ರಮವಾಗುವಂತಹ ಆಟಗಳನ್ನು ಆಟವಾಡಿದಾಗ ಮನಸ್ಸು ಹಗುರವಾಗುತ್ತದೆ.

ನಂತರ ದೈನಂದಿನ ಪಾಠ ಪ್ರವಚನಗಳನ್ನು ನೆನಪು ಮಾಡಿಕೊಳ್ಳಿ. ಇಲ್ಲಿ ನೆನಪಾಗುವ ವಿಷಯವನ್ನು ಒಂದು ಕಡೆ ಬರೆಯಿರಿ. ಅಲ್ಲದೆ ನೆನಪಾಗದ ವಿಷಯವನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ನೋಟ್ಸ್ ಮತ್ತು ಪುಸ್ತಕಗಳಿಂದ ನೋಡಿ, ಪುನಃ ನೆನಪು ಮಾಡಿಕೊಳ್ಳಿ. ಅರ್ಥವಾಗದ ವಿಷಯವನ್ನು ಗುರುತು ಮಾಡಿಕೊಂಡು ನಿಮ್ಮ ಮಿತ್ರರು ಅಥವಾ ಶಿಕ್ಷಕರಿಂದ ಪರಿಹಾರ ಕಂಡುಕೊಂಡರೆ ಶಾಶ್ವತವಾಗಿ ಸ್ಮೃತಿಪಟಲದಲ್ಲಿ ಉಳಿಯುತ್ತದೆ. ಇದನ್ನು ದಿನನಿತ್ಯವೂ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ಮನೆಯ ಅಭ್ಯಾಸ

ಗೇಮ್ಸ್, ರೇಡಿಯೋ, ಟಿ.ವಿ.,ಮೊಬೈಲ್, ವೀಡಿಯೋ ಇವುಗಳಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ ಇವುಗಳಿಂದ ದೂರವಿರುವುದು ಸೂಕ್ತ.

ಮನೆಯಲ್ಲಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಓದಿಗೆ ಭಂಗತರದಂತಹ ಸ್ಥಳದಲ್ಲ್ಲಿ ಕುಳಿತುಕೊಳ್ಳುವುದು ಸಹಾಯವಾಗುತ್ತದೆ. ಪದೇ ಪದೇ ಓದುವ ಸ್ಥಳವನ್ನು ಬದಲಾವಣೆ ಮಾಡಬಾರದು. ಆದರೆ ಓದುವ ಸಮಯ ಯಾವುದು ಪರಿಣಾಮಕಾರಿ, ಯಾವುದು ಅತ್ಯುತ್ತಮವೆಂದು ತುಂಬಾ ಪೋಷಕರು ಶಿಕ್ಷಕರನ್ನು ಕೇಳುವ ಪ್ರಶ್ನೆಯಾಗಿದೆ. ಆದರೆ ಯಾವುದು ಪರಿಣಾಮಕಾರಿ ಎಂದು ಯಾವಾಗ ಏಕಾಗ್ರತೆಯಿಂದ ಓದುತ್ತಾರೆಯೋ ಅದೇ ಸೂಕ್ತ ಸಮಯ. ನೀವು ಕುಳಿತುಕೊಳ್ಳುವ ಸಮಯ. ನಿತ್ಯ ಕುಳಿತುಕೊಳ್ಳುವ ಜಾಗ, ಪ್ರಶಾಂತವಾದ ಸ್ಥಳ, ಆಕರ್ಷಣೆಗೊಳ್ಳುವ ಮುಕ್ತವಾದ ಪ್ರದೇಶ, ಸಾಕಷ್ಟು ಗಾಳಿ, ಬೆಳಕು ಇರುವ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಿ.

ಓದಿನ ವಿಧಾನ

ಏಕಾಗ್ರತೆಯಿಂದ ಓದಿ ಅರ್ಥವಾಗುವಂತೆ ಓದಿ, ಮನನ ಮಾಡಿಕೊಳ್ಳಿ. ಗಟ್ಟಿಯಾಗಿ ಅಥವಾ ಮನಸ್ಸಿನಲ್ಲಿಯೋ ಓದುತ್ತೀರೋ ಅದು ಓದುಗರಿಗೆ ಬಿಟ್ಟ ವಿಚಾರ. ಆದರೆ ಗಟ್ಟಿಯಾಗಿ ಓದಿದರೆ ಬಹು ಬೇಗ ಆಯಾಸವಾಗುವುದು ಸಹಜ. ಆದರೆ ಬಾಯಿಪಾಠ ಕಲಿಯುವುದರಿಂದ ಅಲ್ಪಾವಧಿ ನೆನಪಿನಲ್ಲಿ ಅದು ಉಳಿದು ಒಂದೆರಡು ದಿನಗಳಲ್ಲಿ ಮರೆಯುವುದು ಸಾಧ್ಯವಾಗುತ್ತದೆ. ಅರ್ಥ ಮಾಡಿಕೊಂಡು ಓದಿದಾಗ ದೀರ್ಘಾವಧಿ ನೆನಪಿನ ಸಂಗ್ರಹಕ್ಕೆ ಸೇರುತ್ತದೆ.

ಗುಂಪು ಅಧ್ಯಯನ

ಕೆಲವು ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಅಧ್ಯಯನ ಮಾಡಲು ಇಷ್ಟಪಡುತ್ತಾರೆ. ಇಬ್ಬರು, ಮೂವರು ಅಥವಾ ನಾಲ್ಕೈದು ಜನ ಸೇರಿ ಶಾಲೆ, ಮನೆ,ಟೆರಸ್‍ನಲ್ಲಿ ಅಧ್ಯಯನ ಮಾಡುತ್ತಾರೆ. ಒಬ್ಬರು ಗಟ್ಟಿಯಾಗಿ ಓದುವುದು, ಉಳಿದವರು ಕೇಳಿಸಿಕೊಳ್ಳುವುದು, ಒಬ್ಬರು ಅಧ್ಯಯನ ಮಾಡಿ ಭೋದಿಸುವುದು, ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದು, ಅರ್ಥವಾಗದ ವಿಷಯ ಚರ್ಚೆ ಮಾಡುವುದು.

ಅನುಕೂಲಗಳು

  • ಒಬ್ಬರು ಇನ್ನೊಬ್ಬರಿಗೆ ಪ್ರೇರಣೆಯಾಗುತ್ತಾರೆ.
  • ಕ್ರಮಬದ್ಧ ಅಧ್ಯಯನಕ್ಕೆ ಸಹಾಯಕಾರಿ
  • ಏಕಾಗ್ರತೆ ಹೆಚ್ಚಿಸುವುದು.
  • ಉತ್ಸಾಹದ ವಾತಾವರಣ ನಿರ್ಮಿಸುತ್ತದೆ.
  • ಕಲಿಕೆ ಮತ್ತು ನೆನಪು ಉತ್ತಮಗೊಳ್ಳುತ್ತವೆ.
  • ಪರಿಣಾಮಕಾರಿ ಕಲಿಕೆಗೆ ಈ ವಿಧಾನ ಅನುಸರಿಸಿ ಅನುಷ್ಠಾನಗೊಳಿಸಿ.
  • ಓದಲು ಸೂಕ್ತ ಸಮಯ ಮತ್ತು ಸ್ಥಳ ಆಯ್ಕೆ ಮಾಡಿ
  • ಏಕಾಗ್ರತೆಯಿಂದ 30 ನಿಮಿಷ ಓದಿ, ಓದಿದ್ದನ್ನು ಅರ್ಥ ಮಾಡಿಕೊಳ್ಳಿ.
  • ಏನನ್ನು ಓದಿದ್ದೇನೆ ಎಂಬುದರ ಸಾರಾಂಶವನ್ನು ಬರೆದುಕೊಳ್ಳಿ.
  • ಓದಿದ್ದನ್ನು ಮನಸ್ಸಿನಲ್ಲಿ ಮನನ ಮಾಡಿಕೊಳ್ಳಿ. ಓದಿದ ವಿಷಯವನ್ನು ಪ್ರತಿದಿನ, ಒಂದು ವಾರ ನಂತರ ತಿಂಗಳ ನಂತರ ಯಾವುದು ಮನಸ್ಸಿಗೆ ಬರುತ್ತಿದೆ ಹಾಗೂ ಯಾವುದೂ ಮನಸ್ಸಿನಲ್ಲಿ ಬರುವುದಿಲ್ಲವೆಂದು ಪಟ್ಟಿ ಮಾಡಿಕೊಂಡು ಪುನಃ ಅಧ್ಯಯನ ಮಾಡುವುದು.
  • ಪ್ರಶ್ನೆಗೆ ಸಂಬಂಧಿಸಿದಂತೆ ಮನೆಯಲ್ಲಿ ಕಾಲಮಿತಿಯಲ್ಲಿ ಉತ್ತರಿಸುವ ಅಭ್ಯಾಸ ಮಾಡಿ. ಇದರಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸಿಕೊಂಡರೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
  • ಶ್ರದ್ಧೆ, ಶ್ರಮ, ಕ್ರಮಬದ್ಧ ಅಧ್ಯಯನ ನಿರಂತರವಾಗಿರಲಿ.
  • ಆರೋಗ್ಯದ ಸುಧಾರಣೆ ಸಮಯಕ್ಕೆ ಸರಿಯಾಗಿ ಆಹಾರ, ನಿದ್ರೆ, ಯೋಗ, ಧ್ಯಾನದ ಅಭ್ಯಾಸವಿಟ್ಟುಕೊಳ್ಳುವುದು.

ಪರೀಕ್ಷಾ ಭಯ

  • ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳಲ್ಲಿ ಆತಂಕ, ಭಯ ಪ್ರಾರಂಭವಾಗುತ್ತಿದೆ.
  • ನನ್ನ ಪರೀಕ್ಷಾ ಸಿದ್ಧತೆಗಳು ಕಡಿಮೆಯಾದವು ಎಂಬುದರ ಚಿಂತೆ
  • ನನ್ನಿಂದ ಬೇಗ ಕಲಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಪರೀಕ್ಷಾ ಸಂದರ್ಭದಲ್ಲೂ ಎಲ್ಲಾ ವಿಷಯಗಳನ್ನು ಅಥವಾ ಪಾಠಗಳನ್ನು ಮುಗಿಸಲಿಕ್ಕೆ ಆಗುತ್ತೋ ಇಲ್ಲವೋ ಎಂಬುದರ ಭಯ.
  • ನನಗೆ ಪರೀಕ್ಷೆಗೆ ಪ್ರಶ್ನೆಗಳಿಗೆ ಪೂರ್ಣ ಉತ್ತರವನ್ನು ಬರೆಯಲಿಕ್ಕೆ ಆಗುತ್ತೋ ಅಥವಾ ಇಲ್ಲವೋ ಎನ್ನುವ ಆತಂಕ ಅಲ್ಲದೇ ಮೌಲ್ಯಮಾಪಕರು ಪೂರ್ತಿ ಅಂಕ ಕೊಡುತ್ತಾರೋ ಇಲ್ಲವೋ ಎಂಬುದು.
  • ನಾನು ಫೇಲಾದರೆ ಎಷ್ಟು ಅವಮಾನ ಅಲ್ಲದೆ ನನಗೆ ಯಾರೂ ಗೌರವ ಕೊಡುವುದಿಲ್ಲವೆಂಬುದು.
  • ನನ್ನ ಸ್ನೇಹಿತರು ಒಳ್ಳೆಯ ಕೋರ್ಸಿಗೆ ಸೀಟು ಪಡೆಯುತ್ತಾರೆ. ನನ್ನಿಂದ ಇದು ಸಾಧ್ಯನಾ ನಾನು ಹಿಂದೆ ಬೀಳುತ್ತೇನಾ ಎಂಬುದು.
  • ನನಗೆ ಭವಿಷ್ಯವಿಲ್ಲ ನನ್ನ ಪಾಲಕರಿಗೆ ನೋವು- ನಿರಾಶೆ ಇಂತಹ ನಕಾರಾತ್ಮಕ ಚಿಂತನೆಗಳು ಸದಾ ಕಿವಿಯಲ್ಲಿ ಗುನುಗುಡುತ್ತಿರುತ್ತವೆ. ಆಗ ಭಯ ಶುರುವಾಗುತ್ತವೆ.
  • ಮನಸ್ಸು ಸ್ಥಿರವಾಗಿರುವುದಿಲ್ಲ. ಹೃದಯದ ಬಡಿತ ಶುರುವಾಗುತ್ತದೆ.
  • ಹಸಿವು ಹೆಚ್ಚಾಗುವುದಿಲ್ಲ. ಆಹಾರವು ರುಚಿಕರ ಅನ್ನಿಸುವುದಿಲ್ಲ.
  • ನಿದ್ರೆಯಲ್ಲೂ ವ್ಯತ್ಯಾಸ ಕಂಡು ಬರುವುದು ಅಲ್ಲದೇ ಮಂಕು ಆವರಿಸುವುದು.
  • ಆತ್ಮವಿಶ್ವಾಸ ಕಡಿಮೆಯಾಗುತ್ತದೆ.
  • ಪದೇ ಪದೇ ಬಾತ್‍ರೂಂಗೆ ಹೋಗುವ ಮನಸ್ಸು.
  • ಜ್ವರ ಆವರಿಸಬಹುದು.
  • ಕೋಪ, ಸಿಟ್ಟು, ಜಗಳ ಪ್ರಾರಂಭವಾಗಬಹುದು.
  • ಹತಾಶ ಮನಸ್ಥಿತಿ ತಲುಪಬಹುದು.
  • ಒಂಟಿತನ ಇರಲು ಇಷ್ಟಪಡುವುದು.

ಇಂತಹ ಸಂಗತಿಗಳನ್ನು ಪರೀಕ್ಷೆಯ ಹಿಂದಿನ ದಿನದಲ್ಲೂ ಅತಿ ಹೆಚ್ಚು ಕಾಣಬಹುದು.ಆದ್ದರಿಂದ ಪೋಷಕರು, ಶಿಕ್ಷಕರು ಮಾರ್ಗದರ್ಶನ ಹಾಗೂ ಧೈರ್ಯ ತುಂಬಬೇಕಾಗುತ್ತದೆ.

  • ಪ್ರೇರೇಪಣೆ ನೀಡುವುದು

    ನೀನೊಬ್ಬ ಉತ್ತಮ ವಿದ್ಯಾರ್ಥಿ ಹಾಗೂ ನಿರಂತರ ಓದಿ ಅಭ್ಯಾಸ ಮಾಡಿದ್ದೀಯಾ ವರ್ಷಪೂರ್ತಿ ಓದಿದ್ದೀಯಾ ಅದ್ದರಿಂದ ಓದಿದಂತಹ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬರುತ್ತವೆಂಬುದನ್ನು ತಿಳಿಸುವುದು.

  • ಪರೀಕ್ಷೆ ಬರೆಯುವ ಮುನ್ನ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಸಮಾಧಾನ ಚಿತ್ತದಿಂದ ಪರೀಕ್ಷೆ ಎದುರಿಸು. ನಿನಗೆ ಯಶಸ್ಸು ಸಿಗುತ್ತದೆ.
  • ಕನಿಷ್ಠ ಆರು ತಾಸು ನಿದ್ರೆ
  • ಕರಿದ ಪದಾರ್ಥಗಳಿಂದ ದೂರವಿರುವುದು, ಮಾಂಸಹಾರ ಬೇಡ.
  • ಹಸಿ ತರಕಾರಿಗಳನ್ನು ಸೇವಿಸುವುದು.
  • ಪಾಯಸ, ಗಂಜಿ,ಖೀರು ಉತ್ತಮ
  • ಓದುವಾಗ ಆಗಾಗ್ಗೆ ತಣ್ಣೀರು / ಬಿಸಿನೀರು ಮುಖ ತೊಳೆದುಕೊಳ್ಳಿ.

ಪರೀಕ್ಷಾ ದಿನ

  • ಕನಿಷ್ಠ ಆರು ಗಂಟೆ ನಿದ್ರೆಯ ನಂತರ ಎದ್ದುಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸುವುದು. ತಂದೆ-ತಾಯಿಗಳ ಆಶೀರ್ವಾದ ಪಡೆದುಕೊಳ್ಳಿ.

    ಪರೀಕ್ಷೆ ಸಲಕರಣೆಗಳನ್ನು ಜೋಡಿಸಿಕೊಳ್ಳಿ.

  • ಹಾಲ್‍ಟಿಕೆಟ್, ಒಳ್ಳೆಯ ಗುಣಮಟ್ಟದ ಎರಡು ಹಗುರವಾದ ಉಪಹಾರ ಇತ್ಯಾದಿ ಮಾಡುವುದು
  • ಪರೀಕ್ಷಾ ಹಾಲ್‍ನಲ್ಲಿ ಅರ್ಧಗಂಟೆ ಮುಂಚಿತವಾಗಿ ಕುಳಿತುಕೊಳ್ಳುವುದು.
  • ಪರೀಕ್ಷಾ ಕೇಂದ್ರಕ್ಕೆ ಹೋಗಿ ಸ್ಥಳವನ್ನು ಗುರುತು ಮಾಡಿಕೊಳ್ಳುವುದು.
  • ವಿಷಯದ ಬಗ್ಗೆ ಚರ್ಚೆ ಬೇಡ ಮನಸ್ಸು ಪ್ರಶಾಂತವಾಗಿರಲಿ.
  • ಪರೀಕ್ಷಾ ಕೇಂದ್ರದಲ್ಲಿ ಅಭ್ಯಾಸ ಬೇಡ
  • ತಮ್ಮ ಜೇಬುಗಳಲ್ಲಿ ಯಾವುದೇ ಚೀಟಿ, ಮೊಬೈಲ್ ಇರಬಾರದು.
  • ಪರೀಕ್ಷೆಗೆ ಹೋಗುವ ಮುನ್ನ ಮೂತ್ರ ವಿಸರ್ಜನೆ ಮಾಡುವುದು.
  • ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಿ. ಉಸಿರಾಟ ನಿಧಾನಗತಿಯಿರಲಿ.
  • ಪ್ರಶ್ನೆ ಪತ್ರಿಕೆ ಬಂದಾಗ ನಿಧಾನವಾಗಿ ಎಲ್ಲಾ ಪ್ರಶ್ನೆಗಳನ್ನು ನಿಧಾನವಾಗಿ ಒಂದೊಂದೇ ಅರ್ಥ ಮಾಡಿಕೊಳ್ಳುತ್ತಾ ಹೋಗಿ.
  • ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ.
  • ಪ್ರಶ್ನೆ ಪತ್ರಿಕೆ ಕೊಟ್ಟಾಗ ಕೆಲವು ಪ್ರಶ್ನೆಗಳನ್ನು ನಿರೀಕ್ಷೆಯಿರುವುದಿಲ್ಲ ಅಂತಹ ಸಂದರ್ಭದಲ್ಲಿ ಗಾಬರಿ ಪಡಬೇಡಿ.
  • ಮೊದಲು ಸಂಪೂರ್ಣವಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
  • ಒಂದು ಪ್ರಶ್ನೆಗೆ ಉತ್ತರ ಬರೆದ ನಂತರ ಪೆನ್ಸಿಲ್‍ನಲ್ಲಿ ಒಂದು ಅಡ್ಡಲಾಗಿ ಗೆರೆ ಹಾಕುವುದು.
  • ಅಕ್ಷರ ಸ್ಫುಟವಾಗಿರಲಿ, ಯೋಚಿಸಿ ಬರೆಯಿರಿ.
  • ಒಂದು ಸಾಲಿಗೂ ಇನ್ನೊಂದು ಸಾಲಿಗೂ ಅಂತರವಿರಲಿ.
  • ಅಲ್ಪ ಸ್ವಲ್ಪ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಕೊನೆಗೆ ಪ್ರಯತ್ನಿಸಿ, ಗೊತ್ತಿರುವ ಅಲ್ಪಸ್ವಲ್ಪ ಉತ್ತರ ಬರೆಯಿರಿ.

ಸಮಯ ಪಾಲನೆ ಮಾಡುವುದು

  • ಯಾವುದೇ ಪ್ರಶ್ನೆಗೆ ಉತ್ತರ ಬರೆಯಲು ಅವಶ್ಯಕತೆಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳಬಾರದು.
  • ಕಡೆಯ ಹತ್ತು ನಿಮಿಷಯದಲ್ಲಿ ಪುನರಾವಲೋಕನ ಮಾಡುವುದು.
  • ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ನಮೂದಿಸುವುದು.
  • ರಿಜಿಸ್ಟರ್ ನಂಬರ್ ಉತ್ತರ ಪತ್ರಿಕೆಗಳ ಕ್ರಮ ಸಂಖ್ಯೆಯನ್ನು ಹಾಕುವುದು.
  • ಇತರರು ಏನು ಮಾಡುತ್ತಿದ್ದಾರೆಂಬುದನ್ನು ಗಮನವಿರಬಾರದು.
  • ಪೂರ್ಣ ಬರೆಯುವವರಿಗೂ ಮುಗಿಯುವವರೆಗೂ ಏಕಾಗ್ರತೆಯಿಂದ ಉತ್ತರಿಸಬೇಕು.
  • ಹೊರ ಬಂದ ನಂತರ ಚರ್ಚೆ ಬೇಡ
  • ಮನೆಗೆ ಹೋಗಿ ವಿರಾಮವನ್ನು ತೆಗೆದುಕೊಳ್ಳುವುದು.

ಲೇಖಕರು : ಹಾಲೇಶ್ ಹೆಚ್.ಎಸ್., ಎಂ.ಎ., ಎಂ.ಇಡಿ, ಎಂ.ಸಿ.ಜೆ. ಡಿ.ಆರ್.ಆರ್. ಹೆಚ್.ಎಸ್., ಪಿ.ಬಿ. ರಸ್ತೆ, ದಾವಣಗೆರೆ 

 

 

 

 

 

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ6 days ago

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,...

ದಿನದ ಸುದ್ದಿ6 days ago

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ...

ದಿನದ ಸುದ್ದಿ6 days ago

ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ

ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು...

ದಿನದ ಸುದ್ದಿ6 days ago

ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಮಕ್ಕಳಿಗೆ ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ...

ದಿನದ ಸುದ್ದಿ2 weeks ago

ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ....

ದಿನದ ಸುದ್ದಿ2 weeks ago

ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ

ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು...

ದಿನದ ಸುದ್ದಿ2 weeks ago

ದಾವಣಗೆರೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: 2022-23ನೇ ಸಾಲಿನ 5054 ವಿಶೇಷ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದಾವಣಗೆರೆ ತಾಲ್ಲೂಕು ಶಾಮನೂರು-ದೇವರಬೆಳಕೆರೆ ರಸ್ತೆಯಿಂದ ದುರ್ಗಾಂಬಿಕ ಕ್ಯಾಂಪ್, ನಾಗಮ್ಮ...

ದಿನದ ಸುದ್ದಿ3 weeks ago

ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಸಿದ್ದತೆ: ಮತದಾರರ ಪಟ್ಟಿ ವೀಕ್ಷಕರಿಂದ ರಾಜಕೀಯ ಪಕ್ಷಗಳೊಂದಿಗೆ ಸಭೆ, ಹಕ್ಕು, ಆಕ್ಷೇಪಣೆಗಳನ್ನು ನಿಗಧಿತ ಅವಧಿಯಲ್ಲಿ ಸಲ್ಲಿಸಲು ಮುಖಂಡರಿಗೆ ಸಲಹೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರ‍್ಯಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವೀಕ್ಷಕರು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮತದಾರರ...

ದಿನದ ಸುದ್ದಿ3 weeks ago

ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ

ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ...

ದಿನದ ಸುದ್ದಿ3 weeks ago

ನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ಕೊಪ್ಪಳ:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ ಇಲ್ಲಿ 2022-23 ರಿಂದ 2024-25ನೇ ಸಾಲಿನ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅರೇ ಸರ್ಕಾರಿ ಖಾತೆಯ ಅನುದಾನದಲ್ಲಿ ನಕಲಿ ಜಿ.ಎಸ್.ಟಿ...

Trending