Connect with us

ನೆಲದನಿ

ಮಾಗಿದ ಕಾಲದಲ್ಲಿ ಸಾಹಿತ್ಯ ಕೃಷಿಗೆ ನಿಂತ ಪ್ರೊ.ಜಿ.ಪರಮೇಶ್ವರಪ್ಪ ಅವರ ಸಾಹಿತ್ಯ ಪಯಣ

Published

on

  • ಡಾ.ಕೆ.ಎ.ಓಬಳೇಶ್

ಭಾರತದಂತಹ ವಿಶಿಷ್ಟ ಸಾಂಸ್ಕೃತಿಕ ನಾಡಿನಲ್ಲಿ ವಿಭಿನ್ನ ಪ್ರಕಾರದ ಕಲೆಗಳು ಜನ್ಮತಳೆದಿವೆ. ಈ ಎಲ್ಲಾ ವಿಭಿನ್ನ ಕಲಾ ಪ್ರಕಾರಗಳು ಈ ನೆಲದ ಬಹುತ್ವವನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿವೆ. ಇಂತಹ ಬಹುತ್ವವೇ ಭಾರತದ ಸೌಹಾರ್ದತೆಗೆ ಸಾಕ್ಷಿಯಾಗಿರುವುದು ಈ ನೆಲದ ಹೆಮ್ಮೆಯ ಪ್ರತೀಕ.

ಇದಕ್ಕೆ ಪೂರಕವೆಂಬಂತೆ ಕನ್ನಡ ನಾಡಿನಲ್ಲಿ ಹಲವಾರು ಸಾಹಿತಿಗಳು ಈ ನೆಲದ ವಿವಿಧತೆಯನ್ನು ಅನಾವರಣಗೊಳಿಸುವ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇಂತಹ ದೇಶಿ ಸೊಗಡನ್ನು ಸಾಹಿತ್ಯದ ಮೂಲಕ ಸೆರೆಹಿಡಿಯುತ್ತ ಬಂದಿರುವ ಸಾಹಿತಿಗಳಲ್ಲಿ ಪ್ರೊ.ಜಿ.ಪರಮೇಶ್ವರಪ್ಪನವರು ಒಬ್ಬರಾಗಿದ್ದಾರೆ.

ಮಧ್ಯ ಕರ್ನಾಟಕದ ಐತಿಹಾಸಿಕ ನಗರವಾಗಿರುವ ಚಿತ್ರದುರ್ಗ ಪ್ರಾಂತ್ಯವು ಕರ್ನಾಟಕದ ಸಾಂಸ್ಕೃತಿಕ ಹಿರಿಮೆ ಮತ್ತು ಗರಿಮೆಗೆ ತನ್ನದೇ ಆದ ವಿಶಿಷ್ಟ ಕಾಣಿಕೆಯನ್ನು ನೀಡಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಂಸ್ಕೃತಿಕ ಶ್ರೀಮಂತ ನೆಲದಲ್ಲಿ ಹುಟ್ಟಿ ಬೆಳೆದು, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಗತವಾಗಿರುವ ಸಾಹಿತ್ಯದ ದೇಶೀಯತೆ ಹಾಗೂ ಅದರ ವೈಶಿಷ್ಟ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗೆ ತೊಡಗಿಸಿಕೊಂಡ ಜಿ.ಪರಮೇಶ್ವರಪ್ಪನವರ ಬದುಕಿನ ಸುತ್ತ ಒಂದು ಕೀರುನೋಟ ಬೀರುವುದು ಪ್ರಸ್ತುತ ಲೇಖನದ ಆಶಯವಾಗಿದೆ.

ಶ್ರೀಯುತ ಜಿ.ಪರಮೇಶ್ವರಪ್ಪನವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು ಹರ್ತಿಕೋಟೆ ಸಮೀಪದ ಕಪಿಲೆಹಟ್ಟಿ ಗ್ರಾಮದಲ್ಲಿ ದಿನಾಂಕ 15 ನವಂಬರ್1950ರಲ್ಲಿ ಜಡಿಯಪ್ಪ ಹಾಗೂ ಸಕ್ರಮ್ಮ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರ್ತಿಕೋಟೆಯಲ್ಲಿ, ಪ್ರೌಢ ಶಿಕ್ಷಣವನ್ನು ಐಮಂಗಳದಲ್ಲಿ, ಪದವಿಪೂರ್ವ ಶಿಕ್ಷಣವನ್ನು ಚಿತ್ರದುರ್ಗದಲ್ಲಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪಡೆದರು.

ಕನ್ನಡ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಂತರದ ದಿನಮಾನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಾದ ಬೀದರ್, ಅಥಣಿ, ಮಾಯಕೊಂಡ, ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ 1980 ರಿಂದ 2020 ರವರೆಗೆ ಸುಮಾರು 30 ವರ್ಷಗಳ ಕಾಲ ಬೋಧಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.

ಬಾಲ್ಯದ ದಿನಗಳಿಂದಲೂ ಗ್ರಾಮೀಣ ಬದುಕಿನೊಂದಿಗೆ ನಂಟನ್ನು ಹೊಂದಿದ್ದ ಇವರಿಗೆ ಜಾನಪದ ಕಲೆ ಹಾಗೂ ಸಾಹಿತ್ಯದೊಂದಿಗೆ ಬೆರೆತು ಹೋಗಿದ್ದರು. ಹಾಗೆಯೇ ಸಾಹಿತ್ಯದ ವಿದ್ಯಾರ್ಥಿಯಾದ ಇವರಿಗೆ ಕನ್ನಡ ಸಾಹಿತ್ಯ ಹಾಗೂ ಹಲವಾರು ಕನ್ನಡ ಸಾಹಿತಿಗಳಿಗೆ ಮಾರುಹೋಗಿದ್ದರು. ಆದರೆ ಸಾಹಿತ್ಯದ ಬರವಣಿಗೆಯ ಬಗ್ಗೆ ಇವರಿಗೆ ಒಂದಷ್ಟು ಭಯವನ್ನು ಕಟ್ಟಿಕೊಂಡ ಕಾರಣ ತಮ್ಮ ಬೋಧನಾ ಅವಧಿಯುದ್ದಕ್ಕೂ ಬರವಣಿಗೆಯಿಂದ ದೂರವೇ ಉಳಿದಿದ್ದರು.

ಶ್ರೀಯುತರು ಬರವಣಿಗೆಯಿಂದ ದೂರ ಉಳಿದಿದ್ದರೂ ಬೋಧನೆಯೊಂದಿಗೆ ಸಾಹಿತ್ಯ ಪ್ರೀತಿಯನ್ನು ಸದಾ ಕಾಪಾಡಿಕೊಂಡಿದ್ದರು. ಪಂಪ, ರನ್ನ, ಕುಮಾರವ್ಯಾಸರಂತಹ ಪ್ರಾಚೀನ ಕವಿಗಳು ಹಾಗೆಯೇ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ್, ಸಿ.ಪಿ.ಕೃಷ್ಣಮೂರ್ತಿ, ಜಿ.ಎಚ್.ನಾಯಕರಂತಹ ಆಧುನಿಕ ಸಾಹಿತಿಗಳ ಬರಹಗಳು ಇವರ ಮೇಲೆ ಸಾಕಷ್ಟು ಪ್ರೇರಣೆ ಮತ್ತು ಪ್ರಭಾವವನ್ನು ಬೀರಿದ್ದವು.

ಇಂತಹ ಸಾಹಿತ್ಯ ಪರಂಪರೆಯಿಂದ ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡಿರುವ ಜಿ.ಪರಮೇಶ್ವರಪ್ಪನವರು ತಮ್ಮ ವಿದ್ಯಾರ್ಥಿಗಳಿಗೂ ಸಾಹಿತ್ಯಾಸಕ್ತಿಯನ್ನು ಮೂಡಿರುವ ಕಾಯಕದಲ್ಲಿ ತಮ್ಮ ಬೋಧನಾ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದವರು. ಹಾಗೆಯೇ ಹಳಗನ್ನಡ, ವ್ಯಾಕರಣ, ಛಂದಸ್ಸಿನಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿದ್ದ ಇವರು, ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಬೋಧನೆ ಮಾಡಿ, ಇವುಗಳನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಕನ್ನಡ ಸಾಹಿತ್ಯದ ಛಂದೋ ಪ್ರಕಾರದ ತಾಳ, ಲಯವನ್ನು ಸ್ಪಷ್ಟವಾಗಿ ಅರಿತವರಾಗಿದ್ದರು. ಇದು ಮುಂದೆ ಶ್ರೀಯುತರ ಸಾಹಿತ್ಯ ಚಟುವಟಿಕೆಗೆ ವರವಾಗಿ ಪರಿಣಮಿಸಿತು.

ಶ್ರೀಯುತ ಜಿ.ಪರಮೇಶ್ವರಪ್ಪನವರು ತಮ್ಮ ವೃತ್ತಿ ಬದುಕಿನ ಅವಧಿಯಲ್ಲಿ ಸಾಹಿತ್ಯ ರಚನೆಗೆ ತೊಡಗಿದ್ದು ತೀರಾ ವಿರಳ. ಕೆಲವು ಸ್ನೇಹಿತರ ಒತ್ತಡ, ಸಭೆ ಸಮಾರಂಭಗಳಲ್ಲಿ ಉಪನ್ಯಾಸ ನೀಡುವುದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು ಹಾಗೂ ವಿಶೇಷ ದಿನಗಳಿಗಾಗಿ ಪತ್ರಿಕೆಗಳಿಗೆ ಕೆಲವೊಂದು ಲೇಖನಗಳನ್ನು ಬರೆದಿರುವುದನ್ನು ಬಿಟ್ಟರೆ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಈ ಎಲ್ಲಾ ಲೇಖನಗಳನ್ನು ಸಂಗ್ರಹಿಸಿ ‘ಚದುರಿದ ಚಿಂತನೆಗಳು’ ಎಂಬ ಕೃತಿಯನ್ನು 2020ರಲ್ಲಿ ಹೊರತಂದಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಜಾನಪದ, ಹಳಗನ್ನಡ ಸಾಹಿತ್ಯ, ವಚನಸಾಹಿತ್ಯ ಹಾಗೂ ವೈಚಾರಿಕ ಚಿಂತನೆಗಳ ಮೇಲೆ ಬೆಳಕು ಚೆಲ್ಲಿರುವುದು ಕಂಡುಬರುತ್ತದೆ. ಈ ಕೃತಿಯು ಅವರ ಓದಿನ ವಿಸ್ತಾರ ಹಾಗೂ ಅವರಿಗಿದ್ದ ಸಾಹಿತ್ಯದ ತುಡಿತವನ್ನು ಅನಾವರಣಗೊಳಿಸುತ್ತದೆ. ಆದರೆ ಪರಮೇಶ್ವರಪ್ಪನವರಿಗೆ ಸವಾಲಾಗಿ ಪರಿಣಮಿಸಿದ್ದು ಮಾತ್ರ ಶಾಸ್ತçಬದ್ಧವಾದ ಸಾಹಿತ್ಯ ರಚನೆಗೆ ಮುಂದಾದ ಸಂದರ್ಭ. ತಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಪರಿಸರದಲ್ಲಿ ತಲಾತಲಾಂತರದಿಂದ ಬಾಯಿಂದ ಬಾಯಿಗೆ ಹರಿದು ಬಂದು, ಜನಜೀವನದಲ್ಲಿ ಬೆರೆತು ಹೋಗಿದ್ದ ಜಾನಪದೀಯ ಮಹಾಕಾವ್ಯವಾದ ‘ಪಾರ್ಥಲಿಂಗ ಚಾರಿತಾಮೃತ’ ಎಂಬ ಕೃತಿಯನ್ನು ಸಂಪಾದಿಸುವುದಕ್ಕೆ ತೊಡಗಿಸಿಕೊಂಡರು.

ಈ ಸಂದರ್ಭದಲ್ಲಿ ಗದ್ಯ ಪ್ರಕಾರದಲ್ಲಿಯೇ ಸಾಹಿತ್ಯ ರಚನೆಗೆ ಮುಂದಾದರು. ಆಗ ಅಲ್ಲಿನ ವಕ್ತೃ ಹಾಗೂ ಪಾರ್ಥಲಿಂಗ ಭಕ್ತರ ಅಭಿಲಾಷೆಯು ಇದನ್ನು ಭಾಮಿನಿ ಷಟ್ಟದಿಯಲ್ಲಿಯೇ ರಚಿಸಬೇಕು ಎಂಬುದಾಗಿತ್ತು. ಇದಕ್ಕೆ ಕಾರಣ ಗದ್ಯದಲ್ಲಿ ಪಾರ್ಥಲಿಂಗನ ಕಾವ್ಯವನ್ನು ಬರೆದರೆ ಯಾರೋ ಓದು ಬರಹ ಕಲಿತವರು ಓದಿ ಸುಮ್ಮನಾಗುತ್ತಾರೆ. ಆದರೆ ರಾಗ, ತಾಳ, ಲಯಬದ್ಧವಾದ ಭಾಮಿನಿ ಛಂದೋ ಪ್ರಕಾರದಲ್ಲಿ ರಚಿಸಿದರೆ ಯಾರೋ ಒಬ್ಬ ಹಾಡಿದರೆ ಅಕ್ಷರ ಬಲ್ಲವರು ಹಾಗೂ ಅಕ್ಷರ ವಂಚಿತರೆಲ್ಲ ಆಸಕ್ತಿಯಿಂದ ಕುಳಿತು ಕೇಳಿ ಆಸ್ವಾದಿಸುತ್ತಾರೆ ಎಂಬುದು ಅವರ ನಿಲುವಾಗಿತ್ತು.

ಆಗ ಕುಮಾರವ್ಯಾಸ ಮಾಡಿದ ಅಂತಹ ಸಾಧನೆಯು ನನ್ನಿಂದ ಸಾಧ್ಯವೇ ಎಂಬ ಅನುಮಾನ ಲೇಖಕರಲ್ಲಿ ಮೂಡಿತು. ಆಗ ಹಳಗನ್ನಡದ ಜನಪ್ರಿಯ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ಷಟ್ಪದಿಯ ಭಾಮಿನಿ ಛಂದೋ ಪ್ರಕಾರದಲ್ಲಿಯೇ ಈ ಕಾವ್ಯವನ್ನು ರಚಿಸಬೇಕು ಎಂದು ಮುಂದಾದ ಸಂದರ್ಭದಲ್ಲಿ ಇದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿತು. ಸುಮಾರು ಆರು ತಿಂಗಳ ಕಾಲ ನಿರಂತರವಾದ ಪ್ರಯತ್ನ ಮಾಡುತ್ತ ಬರೆಯುವ, ಹರಿಯುವ ಕಾಯಕದಲ್ಲಿ ನಿರತರಾದರು.

ಆಗ ಇದು ಭಾಮಿನಿ ಷಟ್ಪದಿಯ ಪಾಠ ಮತ್ತು ಪ್ರವಚನದಷ್ಟು ಸುಲಭವಾಗಿ ಛಂದೋ ಪ್ರಕಾರದ ಸಾಹಿತ್ಯ ರಚನೆ ಮಾಡಲಾಗದು ಎಂಬ ಅನುಭವವಾಯಿತು. ಈ ಯೋಜನೆಯಿಂದ ದೂರ ಉಳಿದು, ಇದು ನನ್ನಿಂದ ಸಾಧ್ಯವಾಗದ ಕೆಲಸವೆಂದು ಕೈಚೆಲ್ಲಿ ಕುಳಿತರು. ಇಂತಹ ಸಂದರ್ಭದಲ್ಲಿ ಪಾಥಲಿಂಗ ದೈವದ ಭಕ್ತರು ಹಾಗೂ ಕಾವ್ಯವನ್ನು ಹಾಡುವ ವಕ್ತೃಗಳು ಇದು ನಿಮ್ಮಿಂದ ಮಾತ್ರ ಸಾಧ್ಯ. ಪಾರ್ಥಲಿಂದ ದೈವವು ಕೂಡ ಅದು ನಿಮ್ಮಿಂದ ಮಾತ್ರವೇ ಸಾಧ್ಯವಾಗುವ ಕೆಲಸವೆಂದು ಅಪ್ಪಣೆ ನೀಡಿದೆ ಎಂದು ಒತ್ತಡ ಹಾಕಿದಾಗ, ಅವರ ದೈವಕೇಂದ್ರಿತವಾದ ನಂಬಿಕೆಗೆ ಕಟ್ಟುಬಿದ್ದು ಮತ್ತೇ ಛಂದೋಬದ್ಧ ಸಾಹಿತ್ಯ ಪ್ರಯೋಗದಲ್ಲಿ ತಮ್ಮನ್ನು ದುಡಿಮೆಗಚ್ಚಿದರು.

ಪಾರ್ಥಲಿಂಗನ ಭಕ್ತಾಧಿಗಳ ಒತ್ತಡ ಹಾಗೂ ಅವರ ಪ್ರೀತಿಯ ಹಠಕ್ಕೆ ಮಣಿದು, ಕವಿ ಕುಮಾರವ್ಯಾಸ ಹರಿ ಸ್ಮರಣೆಯಿಂದ ಕಾವ್ಯ ರಚನೆಗೆ ಮುಂದಾದಂತೆ ಶ್ರೀಯುತ ಜಿ.ಪರಮೇಶ್ವರಪ್ಪನವರು ಪಾರ್ಥಲಿಂಗನ ಸ್ಮರಣೆಯೊಂದಿಗೆ ಕಾವ್ಯಾಭ್ಯಾಸದ ಗರಡಿಯಲ್ಲಿ ಗಟ್ಟಿಗರಾಗಿ ನಿಂತರು. ಹೀಗೆ ಸಂಪ್ರದಾಯ ಬದ್ಧವಾಗಿ ಮೂಡಿ ಬಂದ ಛಂದೋ ಪ್ರಕಾರದಲ್ಲಿ ಸಾಹಿತ್ಯ ರಚನೆಗೆ ಮುಂದಾದ ಶ್ರೀಯುತರು ಪ್ರಸ್ತುತ ಕಥೆ ರಚನೆಯ ಕುರಿತಾದ ತಮ್ಮ ನಿಲುವನ್ನು ಕುಮಾರವ್ಯಾಸನಂತೆಯೇ ಹಂಚಿಕೊಂಡಿದ್ದಾರೆ;

ಬಾಯಿ ಮಾತಲಿ ಬಸವ ಹೇಳಿದ ತಾಯಿ ಭೂಮಿಯ ಜನರ ಕಿವಿಯಲಿ ಮಾಯೆಯಿಲ್ಲದ ನಿಗಮ ಗೋಚರನಾ ಪುರಾಣವನು ದಾಯಕನೊಲಿದು ಬರೆಸಿದ ಜನಪದೀಯರಾಡುವ ಪಾರ್ಥಕಥೆಯನು ಶಾಯಿಯಿಂದಲಿ ಕೃತಿ ರಚಿಸಿದೆನು ವಿಮಲ ಮನಸಿನಲಿ

ಇಲ್ಲಿ ಲೇಖಕರು ಕುಮಾರವ್ಯಾಸನಂತೆ ತನ್ನನ್ನು ಕೇವಲ ಲಿಪಿಕಾರ ಎಂಬುದಾಗಿ ಬಿಂಬಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿ ತಾನೊಬ್ಬ ಕವಿಯೆಂಬುದನ್ನು ಕೂಡ ಕುಮಾರವ್ಯಾಸನಂತೆ ಛಂದೋ ನೆಲೆಯಲ್ಲಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದಾಗಿದೆ.

ವೇದ ಶಾಸ್ತ್ರಾಗಮ ಪುರಾಣಗಳೋದಿ ತಲೆಗಳು ಚಿಟ್ಟು ಹಿಡಿದಿವೆ ವಾದ ಗೈವರಿಗೋದು ಬರದವರಿಗೆಡೆಯಿಲ್ಲಲ್ಲಿ ಓದು ಬರದವರಿಲ್ಲಿ ತಿಳಿವುದು ವಾದ ಮಾಡುವರಿಲ್ಲಿ ಬರಬಹು ದೋದಿ ಕುಣಿಸುವನಿಲ್ಲಿ ಕವಿ ಪರಮೇಶ್ವರೆಂಬುವನು

ಹೀಗೆ ತನ್ನನ್ನು ಪರಮೇಶ್ವರ ಕವಿ ಎಂಬುದಾಗಿ ಗುರುತಿಸಿಕೊಂಡು ಪಾರ್ಥಲಿಂಗ ಸ್ಮರಣೆಯ ಮೂಲಕವೇ ಕಾವ್ಯ ರಚನೆಗೆ ಗಟ್ಟಿಯಾಗಿ ನಿಂತರು. ಇಂತಹ ಗಟ್ಟಿತನದ ಪ್ರತೀಕವಾಗಿ ಆರಂಭಿಕ ದಿನಗಳಲ್ಲಿ ದಿನಕ್ಕೊಂದು ಕಾವ್ಯವನ್ನು ಛಂದೋಬದ್ಧವಾಗಿ ರೂಪಿಸುವಲ್ಲಿ ಯಶಸ್ವಿಯಾದರು.

ಹೀಗೆ ಅಳುಕಿನಿಂದಲೇ ಆರಂಭವಾದ ಛಂದೋಬದ್ಧ ಸಾಹಿತ್ಯ ಕೃಷಿಯನ್ನು ಕರಗತ ಮಾಡಿಕೊಂಡು ಸುಮಾರು 497 ಪದ್ಯಗಳಿಂದ ಕೂಡಿದ ಒಟ್ಟು ಏಳು ಅಧ್ಯಾಯಗಳ ‘ಶ್ರೀ ಪಾರ್ಥಲಿಂಗ ಚರಿತಾಮೃತ’ ಎಂಬ ಭಾಮಿನಿ ಷಟ್ಪದಿ ಕಾವ್ಯ ಕೃತಿಯನ್ನು ಛಂದೋ ವಿನ್ಯಾಸಕ್ಕೆ ಚ್ಯುತಿಯಾಗದಂತೆ ಬರೆದು ಮುಗಿಸಿದ ಕೀರ್ತಿ ಕವಿ ಜಿ.ಪರಮೇಶ್ವರಪ್ಪ ಅವರಿಗೆ ಸಲ್ಲುತ್ತದೆ. ‘ಕನ್ನಡದಲ್ಲಿ ಮಹಾಕಾವ್ಯಗಳ ಕಾಲ ಮುಗಿಯಿತು.

ಛಂದೋಬದ್ಧವಾದ ರಚನೆಗಳ ಕಾಲ ಮುಗಿಯಿತು ಎಂಬ ಮಾತುಗಳು ಹುಸಿಯಾಗಿವೆ’ ಎಂಬ ಡಾ.ಬಿ.ವಿ.ವಸಂತಕುಮಾರ್ ಅವರ ಮಾತುಗಳಿಗೆ ಜಿ.ಪರಮೇಶ್ವರಪ್ಪ ಅವರು ರಚಿಸಿರುವ ಛಂದೋಬದ್ಧ ‘ಪಾರ್ಥಲಿಂಗ ಚರಿತಾಮೃತ’ ಸಾಕ್ಷಿಯಾಗಿ ನಿಲ್ಲುತ್ತದೆ.

ಪ್ರಸ್ತುತ ಕೃತಿಯು ಶ್ರೀಯುತ ಜಿ.ಪರಮೇಶ್ವರಪ್ಪನವರಿಗೆ ಸಾಹಿತಿ ಎಂಬ ಬಿರುದಾವಳಿಯನ್ನು ಮಾತ್ರವಲ್ಲದೆ, ಅವರನ್ನು ಪಾರ್ಥಲಿಂಗ ಚರಿತಾಮೃತದ ಕವಿಯೆಂದು ಗುರುತಿಸುವಷ್ಟು ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.

ಹಾಗೆಯೇ ಈ ಕೃತಿಯು ಸಾಕಷ್ಟು ಜನಮಾನಸದಲ್ಲಿ ಬೆರೆತು ಹೋಗಿದ್ದು, ಈಗಾಗಲೇ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಠನ ಮಾಡಲಾಗಿದೆ. ಇದು ಕವಿಗಳ ಶ್ರಮಕ್ಕೆ ಸಿಕ್ಕ ನಿಜವಾದ ಪ್ರತಿಫಲ. ಕವಿಯಾದವನು ಇದರಾಚೆ ಏನನ್ನು ನಿರೀಕ್ಷಿಸಲಾರ.

ಅಳುಕಿನಿಂದಲೇ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಜಿ.ಪರಮೇಶ್ವರಪ್ಪನವರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಮೊದಲ ಯಶಸ್ಸು ಗಳಿಸಿದ ತರುವಾಯ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯನ್ನು ಇದೇ ಛಂದೋ ವಿನ್ಯಾಸದಲ್ಲಿ ರಚನೆಗೆ ಮುಂದಾಗಿದ್ದು, ಇದನ್ನು ಒಂದೇ ವರ್ಷದಲ್ಲಿ ಮುಗಿಸುವಷ್ಟು ಛಂದೋಬದ್ಧ ಸಾಹಿತ್ಯ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಕೃತಿಯು ಕೂಡ ದೈವ ಕೇಂದ್ರಿತವಾದ ಪುರಾಣ ನೆಲೆಯಿಂದ ಕೂಡಿದ್ದು, ಜನಪದರ ಬದುಕಿನೊಳಗೆ ಬೆರೆತು ಹೋದ ಮೌಖಿಕ ಕಥನವೊಂದನ್ನು ಛಂದೋಬದ್ಧ ಹಾಡುಗಬ್ಬವಾಗಿ ರೂಪಿಸುವ ಮಹತ್ತರ ಕಾರ್ಯವೊಂದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಶ್ರೀಯುತ ಪರಮೇಶ್ವರಪ್ಪನವರ ಎರಡನೇ ಕೃತಿಯಾಗಿರುವ ‘ವದ್ದಿಕೆರೆ ಸಿದ್ಧೇಶ್ವರ ಚರಿತೆ’ಯು ಹರಿಹರನ ‘ಶಿವಶರಣರ ರಗಳೆ’ಯ ಕಥನ ಮಾದರಿಯಿಂದ ಪ್ರಭಾವಿತಗೊಂಡಂತಿದೆ.

ಇದನ್ನೂ ಓದಿ |ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

ಈ ಕೃತಿಯು ಒಟ್ಟು 311ಷಟ್ಪದಿ ಪದ್ಯಗಳಿಂದ ಕೂಡಿದೆ. ಇಲ್ಲಿಯೂ ಕೂಡ ಕವಿಗಳು ಪ್ರಾಚೀನ ಕಾವ್ಯ ಪರಂಪರೆಯ ಮುಂದುವರಿಕೆಯ ಭಾಗವೆಂಬಂತೆ ದೈವ ಸ್ತುತಿಯೊಂದಿಗೆ ಕಾವ್ಯಾರಂಭಕ್ಕೆ ಮುಂದಾಗಿರುವುದನ್ನು ಕಾಣಬಹುದಾಗಿದೆ.

ಶುದ್ಧಮನದಲಿ ಖುದ್ದು ಹೇಳುವೆ ಸಿದ್ಧ ಪುರುಷನ ಸಿದ್ಧ ಕಥೆಯನು ಬುದ್ಧ ಜನಗಳು ಮೆಚ್ಚುವಂದದಿ ಹಾಡುಗಬ್ಬದಲಿ ಬಿದ್ದು ಗಂಗೆಯಲೆದ್ದು ಬಂದಂತೆದ್ದು ಹೋಗುವವಿದ್ದ ರುಜಿನಗ ಳೆದ್ದು ಬರುವಾ ಜನ್ಮ ಚಕ್ರವನೊದ್ದು ಹೋಗುವುದು

ಹೀಗೆ ಪ್ರಾಚೀನ ಕಾವ್ಯ ಪರಂಪರೆಯ ತಂತ್ರವನ್ನು ಅನುಸರಿಸುತ್ತಲೇ ಜಾನಪದೀಯ ಕಥನವನ್ನು ಶಿಷ್ಟ ಸಾಹಿತ್ಯದ ಚೌಕಟ್ಟಿಗೆ ಒಳಪಡಿಸುವ ಮೂಲಕ ಛಂದೋಬದ್ಧಗೊಳಿಸುವಲ್ಲಿ ಕವಿ ಜಿ.ಪರಮೇಶ್ವರಪ್ಪನವರ ಪಾತ್ರ ಮಹತ್ವದ್ದಾಗಿದೆ. ಜನಪದರ ಸಾಂಸ್ಕೃತಿಕ ಬದುಕಿನಲ್ಲಿ ಬೆರೆತುಕೊಂಡಿರುವ ಮೌಖಿಕ ಕಥನವನ್ನು ಶಿಷ್ಟ ಪರಂಪರೆಯೊಂದಿಗೆ ಅನುಸಂಧಾನಗೊಳಿಸುವ ಮೂಲಕ ಹಾಡುಗಬ್ಬಗೊಳಿಸಿದ ಕವಿಯ ತಂತ್ರಗಾರಿಕೆಯ ಹಿಂದೆ ನೆಲಮೂಲದ ತುಡಿತ-ಮಿಡಿತವಿದೆ.

ಜನಪದ ಮತ್ತು ಶಿಷ್ಟ ಪರಂಪರೆಯ ನಡುವಿನ ಬೇಲಿ ಹಾಗೂ ಅಂತರವನ್ನು ಕಡಿದು ಹಾಕಿ ಇವೆರಡ ನಡುವೆ ಸಂಕರವನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಇವರು ನಮ್ಮ ಮುಂದಿನ ಅಪರೂಪದ ಸಾಹಿತಿಗಳಲ್ಲಿ ಒಬ್ಬರಾಗಿ ಕಂಡುಬರುತ್ತಾರೆ.
ಶ್ರೀಯುತರ ಈ ಛಂದೋಬದ್ಧ ಕಾವ್ಯದ ದುಡಿಮೆಯ ಹಿಂದೆ ಒಂದು ಪ್ರಾಮಾಣಿಕ ಪ್ರಯತ್ನವಿದೆ. ಈ ಪ್ರಯತ್ನ ಕಾಯಕ ಪ್ರಧಾನತೆಯಿಂದ ಕೂಡಿದೆ. ಇಂತಹ ಕಾಯಕ ಪ್ರಧಾನ ಕೃಷಿಯು ಇವರ ಸತತ ಪ್ರಯತ್ನವೆಂಬ ತಪಸ್ಸಿನ ಪ್ರತೀಕವಾಗಿ ಕಂಡುಬರುತ್ತದೆ.

ಇಂತಹ ತಪದ ಪ್ರತೀಕ ಹಾಗೂ ಬಾಲ್ಯದ ದಿನಗಳಿಂದ ಮೈಮನಗಳಲ್ಲಿ ಬೆರತು ಹೋದ ಜನಪದ ಸೊಗಡು, ಅಧ್ಯಯನದೊಂದಿಗೆ ಆಸಕ್ತಿಯಾಗಿ ವಿಷಯವಾಗಿ ಪ್ರಭಾವ ಬೀರಿದ ಸಾಹಿತ್ಯಾಭಿರುಚಿ, ಸುದೀರ್ಘವಾದ ಬೋಧನಾನುಭವ ಹಾಗೂ ನಿವೃತ್ತಿಯ ಸಮಯದಲ್ಲಿನ ಸಾಹಿತ್ಯಾಸಕ್ತ ಸಮಾನ ಮನಸ್ಕರ ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಕನ್ನಡ ಸಾರಸ್ವತ ಲೋಕಕ್ಕೆ ‘ಪಾರ್ಥಲಿಂಗ ಚರಿತಾಮೃತ’, ವದ್ದಿಕೆರೆ ಸಿದ್ಧೇಶ್ವರ ಚರಿತೆ’, ‘ವೀರ ಕರಿಯಣ್ಣ’, ‘ಚಿತ್ತಯ್ಯ-ಕಾಟಯ್ಯ’ ಎಂಬ ಛಂದೋ ವಿನ್ಯಾಸದ ಮೌಲ್ಯಯುತ ಷಟ್ಪದಿ ಕೃತಿಗಳನ್ನು ಹಾಗೂ ‘ಚದುರಿದ ಚಿಂತನೆಗಳು’ ಎಂಬ ವೈಚಾರಿಕ ಕೃತಿಯನ್ನು ನೀಡಿದ ಕವಿ, ಸಾಹಿತಿ, ಚಿಂತಕರಾಗಿರುವ ಶ್ರೀಯುತ ಜಿ.ಪರಮೇಶ್ವರಪ್ಪ ಅವರಿಂದ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದು ನಮ್ಮ ಹಾರೈಕೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..

Published

on

  • ರುದ್ರಪ್ಪ ಹನಗವಾಡಿ

ಮಧ್ಯೆ ನಂಜನಗೂಡು ಪಕ್ಕದ ತಾಲ್ಲೂಕಾದ ಗುಂಡ್ಲುಪೇಟೆಯಿಂದ ರಾಜಕಾರಣಿಯಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ತೆಗೆಸಿ ಗ್ರಾಮೀಣ ಜನರಿಗೆ ಸ್ವಚ್ಛ ಕುಡಿಯುವ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು. ಜನಪರ ಮಂತ್ರಿಗಳೂ ಆಗಿದ್ದರು.

ಗುಂಡ್ಲುಪೇಟೆಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ತಮ್ಮ ಸಂಬಂಧಿಕರೊಬ್ಬರ ಜಮೀನಿಗೆ ತಿರುಗಾಡಲು ದಾರಿಗಾಗಿ ಭೂಸ್ವಾಧೀನಪಡಿಸಲು ಹಿಂದಿನ ಎಸಿ ಅವರ ಅಳಿಯಂದಿರೇ ಆಗಿದ್ದ ಎಸ್.ಎ. ಸಾದಿಕ್ ಅವರು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ರ‍್ಕಾರಕ್ಕೆ ಸಲ್ಲಿಸಿದ್ದರು. ಆದರೆ ಪುನಃ ಅದು ವಿಚಾರಣೆಗೆ ಬಂದಾಗ ಈ ಭೂಸ್ವಾಧೀನವು ಸಾರ‍್ವಜನಿಕರ ಹಿತ ಕಾಯುತ್ತಿಲ್ಲವೆಂದು ಮದನ್ ಗೋಪಾಲ್ ಅವರು ಆ ಪ್ರಸ್ತಾವನೆಯನ್ನು ರದ್ದುಗೊಳಿಸಲು ಸರ‍್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಭೂಸ್ವಾಧೀನ ಪ್ರಕರಣವನ್ನು ಮಂತ್ರಿಗಳ ಸಲಹೆ ಮೇರೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ನಂತರ ಅದನ್ನು ಕೈಬಿಟ್ಟ ಬಗ್ಗೆ ನಜೀರ್ ಸಾಬ್ ಅವರು ಎಸಿ ಮದನ್ ಗೋಪಾಲ್ ಮೇಲೆ ಕೆಂಡಾಮಂಡಲವಾಗಿದ್ದರು. ಎಷ್ಟೇ ಅನುಭವೀ, ನಿಸ್ಪೃಹ ರಾಜಕಾರಣಿಯಾಗಿದ್ದರೂ ನಜೀರ್ ಸಾಬ್ ಅವರು ತಾವು ಹೇಳಿದ ಕೆಲಸ ಮಾಡದ ನೌಕರ ಎಸಿ ಮದನ್ ಗೋಪಾಲ್ ಮೇಲೆ ಕಂದಾಯ ಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿ ಕೂಗಾಡಿದ್ದರು.

ಇದೇ ಕಾರಣಕ್ಕಾಗಿ ಮದನ್ ಗೋಪಾಲ್ ಅವರನ್ನು ಕೆಲವೇ ದಿನಗಳಲ್ಲಿ ನಂಜನಗೂಡು ಉಪ ವಿಭಾಗದಿಂದ ಬೇರೆಡೆಗೆ ರ‍್ಗಾವಣೆ ಕೂಡ ಮಾಡಲಾಗಿತ್ತು. ಅವರ ವರ್ಗಾವಣೆಯನ್ನು ವಿರೋಧಿಸಿ ಸರ‍್ವಜನಿಕರು, ನಂಜಗೂಡು, ಗುಂಡ್ಲುಪೇಟೆಗಳಲ್ಲಿ ಯಶಸ್ವಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಅವರ ವರ‍್ಗಾವಣೆ ಆಗಿ ನಂತರ ಮೂರು ತಿಂಗಳಲ್ಲಿ ಯೋಗೇಂದ್ರ ತ್ರಿಪಾಠಿ ಬಂದರು. ಈ ನಡುವೆ ನಾನು, ನಂತರ ಮಂಜುನಾಥ್ ನಾಯಕ್ ಹಾಗೂ ಶಿಕ್ಷಣರ‍್ಥಿ ಎಸಿಯಾಗಿದ್ದ ಕೆ. ಶಿವರಾಂ ಅವರು ಸುಮಾರು ಮೂರು ತಿಂಗಳ ಕಾಲ ಚಾರ್ಜ್ನಲ್ಲಿದ್ದೆವು. ಮದನ್ ಗೋಪಾಲ್ ಅವರು ವೈಯಕ್ತಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳ ಜೊತೆ ಅತಿರೇಕದ ನೇರ ನೇರ ಹಣಾಹಣಿ ಮಾಡಿಕೊಂಡು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಹಿನ್ನೆಲೆಗೆ ಸರಿಯುತ್ತಿದ್ದವು.

ಯೋಗೇಂದ್ರ ತ್ರಿಪಾಠಿಯವರು ಬರುವ ವೇಳೆಗಾಗಲೇ ನನ್ನ ನಂಜನಗೂಡು ತಾಲ್ಲೂಕ್ ಆಡಳಿತದಲ್ಲಿ ಒಂದು ವರ‍್ಷಕ್ಕೂ ಹೆಚ್ಚು ಸಮಯ ಕಳೆದಿದ್ದೆ. ಹಾಗಾಗಿ ತ್ರಿಪಾಠಿಯವರ ಜೊತೆ ಕೆಲಸ ಕಾರ‍್ಯಗಳು ಸಲೀಸಾಗಿ ಸಾಗುತ್ತಿದ್ದವು. ಈ ಮೊದಲು ಎಸಿ ಶಿಕ್ಷಣರ‍್ಥಿಯಾಗಿದ್ದ ಕೆ. ಶಿವರಾಂ ಅವರು ಅನೇಕ ಮೌಖಿಕ ಆದೇಶಗಳನ್ನು ಹೇಳಿ ಮಾಡುವಂತೆ ನನಗೆ ನಿರ‍್ದೇಶನ ನೀಡುತ್ತಿದ್ದರು. ನಾನು ಖುದ್ದು ಭೇಟಿ ಮಾಡಿ ಅವರು ಹೇಳಿದ ಕೆಲಸಗಳನ್ನು ಮಾಡಲಿಕ್ಕಾಗದ ಕಾರಣದ ವಿವರ ನೀಡಿದರೂ ಸಮಾಧಾನಗೊಳ್ಳದೆ, ಜನರೆದುರಿಗೆ ಎಸಿ ಮಾಡಲು ಹೇಳಿದರೂ ತಹಸೀಲ್ದಾರ್ ಮಾಡದೆ ತಮ್ಮ ವಿರುದ್ಧವಿದ್ದಾರೆಂಬ ಆಭಾವನೆ ಬರುವಂತೆ ನಡೆದುಕೊಳ್ಳುತಿದ್ದರು. ಅವರಿನ್ನೂ ಶಿಕ್ಷಣರ‍್ಥಿಗಳಾಗಿದ್ದರೂ ಆಗಲೇ ತನಗೆಲ್ಲ ಗೊತ್ತು ಎಂಬ ಅಹಂನಿಂದ ವರ‍್ತಿಸುತ್ತಿದ್ದ ಕಾರಣ ಬಹುಬೇಗ ನನ್ನ ಅವರ ನಡುವೆ ವಿಶ್ವಾಸದ ಕೊರತೆಯಾಗಿ, ಏನಾದರೂ ಮಾಡಬೇಕೆಂದರೆ ಲಿಖಿತ ಆದೇಶ ಕಳಿಸಲು ಅವರ ಮ್ಯಾನೇಜರ್ ಅವರಿಗೆ ನಾನು ದೂರವಾಣಿ ಮುಖಾಂತರ ಹೇಳುತ್ತಿದ್ದೆ. ಆ ನಂತರ ಮತ್ತೆ ಕೆಲವು ದಿನಗಳಲ್ಲಿ ಅವರನ್ನು ಬೇರೆ ತಾಲ್ಲೂಕಿಗೆ ತರಬೇತಿಗಾಗಿ ಕಳಿಸಿದ ಕಾರಣ ನನ್ನ ಮನಸ್ತಾಪ ಅಲ್ಲಿಗೆ ಮುಗಿದಿತ್ತು. ಆದರೆ ಮುಂದೆ ಅನೇಕ ಬಾರಿ ಅವರೊಡನೆ ಒಡನಾಡುವ ಸಂರ‍್ಭದಲ್ಲಿ ಇದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸರಳವಾಗಿ ನಡೆಸಿಕೊಂಡ ಕಾರಣದಿಂದಾಗಿ ಅವರ ಬಗ್ಗೆ ನನ್ನಲ್ಲಿದ್ದ ಕಹಿ ಕರಗಿ ಸಹಜತೆ ಮೂಡಿದೆ.

ನನ್ನ ಕಛೇರಿ ಕೆಲಸಗಳ ಜೊತೆ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಮೈಸೂರಿನ ಸಮಾಜವಾದಿ ಗೆಳೆಯರ ಜೊತೆ ಚರ್ಚಿಸಿ ಡಾ. ಎಲ್. ಬಸವರಾಜ್, ಸುಜನಾ, ಕೆ.ಎಸ್. ಭಗವಾನ್, ಕೆ. ರಾಮದಾಸ್ ಅವರನ್ನು ಕರೆಸಿ ನಮ್ಮ ತಾಲ್ಲೂಕಿನಲ್ಲಿ ಭಾಷಣ ಮಾಡಿಸುತ್ತಿದ್ದೆ. ಡಿಎಸ್‌ಎಸ್, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಅನೇಕ ಮಿತ್ರರು ನನ್ನ ಒಡನಾಟದಲ್ಲಿದ್ದರು.

ಈಗ ಹೆಸರಾಂತ ಸಾಹಿತಿ ಮತ್ತು ನನ್ನ ಮಿತ್ರನಾಗಿದ್ದ ಮಾದೇವನ ಊರಾದ ದೇವನೂರಿಗೂ ಹೋದಾಗ ಅವರ ಮನೆಗೂ ಹೋಗಿ ಬಂದಿದ್ದೆ. ಕೃಷ್ಣಪ್ಪ – ಇಂದಿರಾ ಅವರು ಮಕ್ಕಳಾದ ಶಾಲಿನಿ, ಸೀಮಾ ಅವರುಗಳ ಜೊತೆ ನಂಜನಗೂಡಿಗೆ ಬಂದು ಉಳಿದು ನಂಜುಂಡೇಶ್ವರ ದೇವಸ್ಥಾನದ ಹಬ್ಬದಲ್ಲಿ ಭಾಗವಹಿಸಿದ ನೆನಪು ಈಗಲೂ ಹಸಿರಾಗಿದೆ.

ಡಿಎಸ್‌ಎಸ್‌ನ ರಾಜ್ಯ ಮಟ್ಟದ ಕಲಿಕಾ ಸಮಾವೇಶವನ್ನು (study camp ) ನಂಜನಗೂಡು ತಾಲ್ಲೂಕಿನಲ್ಲಿನ ವಿದ್ಯಾಪೀಠದಲ್ಲಿ ಕೃಷ್ಣಪ್ಪನವರು ಸುಮಾರು ಒಂದು ವಾರದ ಕಾಲ ನಡೆಸಿದ್ದರು. ಆಗ ರಾಜ್ಯದ ಮೂಲೆಮೂಲೆಗಳಿಂದ ಬಂದು ಡಿಎಸ್‌ಎಸ್‌ನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದುದನ್ನು ನಾನು ಭಾಗವಹಿಸದಿದ್ದರೂ ತಿಳಿದುಕೊಳ್ಳುತ್ತಿದ್ದೆ.

ಡಿಎಸ್‌ಎಸ್‌ನ ಅಂದಿನ ಬಹುತೇಕ ರ‍್ಚೆಗಳು ರ‍್ಕಾರದ ನಿಷ್ಕಿçಯತೆ, ದಲಿತ ಶಾಸಕರುಗಳ ಗುಲಾಮಿತನ, ದಲಿತರ ಮೇಲಿನ ದರ‍್ಜನ್ಯ, ದಲಿತರ ಕರ‍್ಯಕ್ರಮಗಳಲ್ಲಿನ ನಿಧಾನಗತಿ ಅನುಷ್ಠಾನ, ಇಂತಹವೇ ರ‍್ಚೆಯಾಗುತ್ತಿದ್ದವು. ಅಂತಹ ಸಂಘಟನೆಗೆ ತಹಸೀಲ್ದಾರನಾಗಿ ಭಾಗಿಯಾಗುವುದು, ಸಹಕಾರ ನೀಡುವುದು ಸರಿಯಲ್ಲವೆಂದು ನನಗೆ ನಮ್ಮ ಹಿರಿಯ ಸಿಬ್ಬಂದಿ ಹೇಳುತ್ತಿದ್ದರೂ ನಾನು ನನ್ನ ಇತರೆ ಸಾಮಾನ್ಯ ಕೆಲಸಗಳಲ್ಲಿ ಹಿಂದೆ ಬೀಳದೆ ಮತ್ತು ಇತರೆ ಸಾರ‍್ವಜನಿಕರಲ್ಲೂ ಯಾವುದೇ ತಗಾದೆ ಬಾರದಂತೆ ಕೆಲಸ ನಿರ‍್ವಹಿಸಿದ್ದರಿಂದ ಬೇರಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಗ ನಂಜನಗೂಡಿನವರೇ ಆಗಿದ್ದ ಡಿಎಸ್‌ಎಸ್‌ನಲ್ಲಿ ಇದ್ದವನೊಬ್ಬ ಮಾದೇವ, ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ದ್ವೇಷಿಸುವ ಮನಸ್ಸಿನ ವ್ಯಕ್ತಿ. ನಮ್ಮ ಕಛೇರಿಯ ಸರ‍್ವೆಯರ್ ನೌಕರನನ್ನು ಸಹಾಯ ಪಡೆದು, ನಮ್ಮ ಕಛೇರಿಯ ಬಗ್ಗೆ ಕರಪತ್ರ ಹಾಕಿ `ಭ್ರಷ್ಟಾಚಾರದ ಕೂಪ ತಾಲ್ಲೂಕು ಕಛೇರಿ’ ಎಂದೆಲ್ಲ ದೂರಿದ್ದರು. ಆದರೆ ಅದಕ್ಕೆಲ್ಲ ಕುಮ್ಮಕ್ಕು ಕೊಟ್ಟವನು ನನ್ನ ಕಛೇರಿಯ ಸರ‍್ವೆಯರ್ ಸಂಬಂಧಿ ಡಿ.ಎಸ್.ಎಸ್.ನಲ್ಲಿಯೇ ಇದ್ದವನೊಬ್ಬ ಎಂದು ನನಗೆ ತಿಳಿದು ಬಂತು.

ಜೊತೆಗೆ ನಮ್ಮ ಕಚೇರಿಯ ರ‍್ವೇಯರ್ ದೈನಂದಿನ ಕೆಲಸದಲ್ಲಿ ನಿರ‍್ಲಕ್ಷ್ಯ ತೋರುತ್ತಿದ್ದ ಕಾರಣದಿಂದ ನಾನು ಮೊದಲೇ ಅವನನ್ನು ಅಮಾನತ್ತುಗೊಳಿಸಿದ್ದೆ. ಆ ಕಾರಣ ಅವನು ನನ್ನ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ. ನಂತರದ ದಿನಗಳಲ್ಲಿ ನಾನೇನೂ ಹೇಳದಿದ್ದರೂ ಕರಪತ್ರ ಹಾಕಿದ ಬಗ್ಗೆ ಬಂದು ತನ್ನ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ಇದಕ್ಕೆಲ್ಲ ತನ್ನ ಭಾವ ಡಿಎಸ್‌ಎಸ್‌ನಲ್ಲಿರುವವನು ಕಾರಣ ಎಂದು ಹೇಳಿ ನನಗೆ ದಂಗುಬಡಿಸಿದ್ದ. ಇಂತಹ ವಿಷಯಗಳನ್ನೆಲ್ಲ ನಿಭಾಯಿಸುವ ಅನುಭವ ನನಗೆ ಇದ್ದುದರಿಂದ ಮತ್ತೇನು ಅದು ಬೆಳೆಯಲಿಲ್ಲ.

ನಂಜನಗೂಡಿನಲ್ಲಿ ನಾನಿರುವಾಗ ಪೋಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಪಿ.ಹೆಚ್. ರಾಣೆ, ಇಬ್ಬರು ಇನ್ಸ್ಪೆಕ್ಟರ್ ಮತ್ತು ನಾಲ್ಕು-ಐದು ಜನ ಸಬ್ ಇನ್ಸ್ಪೆಕ್ಟರ್‌ಗಳು ಇದ್ದರು. ನಾವೆಲ್ಲ ಊರಿನಲ್ಲಿರುವ ಯಾವುದೇ ಪ್ರತಿಷ್ಠಿತ ಮನರಂಜನೆಯ ಕ್ಲಬ್‌ಗಳಿಗೆ ಹೋಗುತ್ತಿರಲಿಲ್ಲ. ಅದರ ಬದಲು, ಪೋಲೀಸ್ ಸ್ಟೇಷನ್ ಬಳಿ ಇದ್ದ ವಿಶಾಲವಾದ ಮೈದಾನದಲ್ಲಿ ಬೆಳಗಿನ ಜಾವದಲ್ಲಿ ಬ್ಯಾಟ್‌ಮಿಂಟನ್, ಷಟಲ್ ಕಾಕ್ ಆಟ ಪ್ರಾರಂಭಿಸಿದ್ದೆವು. ಅಲ್ಲಿಗೆ ಕಂದಾಯ ಇಲಾಖೆಯಲ್ಲಿನ ವಿಎ, RI & ಸಬ್ ಇನ್ಸ್ಸ್ಪೆಕ್ರ‍್ಸ್ ಮತ್ತು ನನ್ನ ಬಿ.ಎ. ತರಗತಿಯ ಕ್ಲಾಸ್ ಮೇಟ್ ಆಗಿದ್ದ ನರಸಿಂಹಸ್ವಾಮಿ ಸೇರಿ ಒಂದೆರಡು ಘಂಟೆಗಳ ಕಾಲ ಆಟದಲ್ಲಿ ಕಳೆಯುತ್ತಿದ್ದೆವು. ಆಗಲೇ ತಾಲ್ಲೂಕಿನಲ್ಲಿನ ಸಮಸ್ಯೆಗಳನ್ನು ಸಾಂಧರ‍್ಭಿಕವಾಗಿ ಚರ‍್ಚಿಸಿ, ಶಾಂತಿ ಕಾಪಾಡಲು ಬೇಕಾದ ಕ್ರಮವಾಗಿ ಕೆಲವರನ್ನು ಒಂದೆರಡು ವಾರಗಳ ಕಾಲ ಸಬ್ ಜೈಲಿಗೆ ಕಳಿಸಲು ಕೋರುತ್ತಿದ್ದರು. ಇಲ್ಲವೇ ಪ್ರತಿ ವಾರವೂ ಹಾಜರಿರಲು ನೋಟಿಸ್ ನೀಡಿ ಬಾರದಿದ್ದಾಗ ದಸ್ತಗಿರಿ ಮಾಡಿ ತರಲು ನನ್ನಿಂದ ಅದೇಶ ಪಡೆದು ಕರೆತರುತ್ತಿದ್ದರು. ನಂತರ ವಿಚಾರಣೆ ಮಾಡಿ, ಒಳ್ಳೆಯ ನಡೆವಳಿಕೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೆವು. ಇನ್ನು ಕೆಲವು ಭಾರಿ ಈ ಎಲ್ಲ ಅಖPಅ 107 ಪ್ರಕರಣದಲ್ಲಿದ್ದ ಆಪಾದಿತರನ್ನು, ಗ್ರಾಮ ಸಹಾಯಕರನ್ನು ಒಟ್ಟುಗೂಡಿಸಿ ನಮ್ಮ ಕಛೇರಿಯ ಆವರಣದಲ್ಲಿದ್ದ ಜಾಗದಲ್ಲಿ ಗಿಡ ನೆಡಲು ಬೇಕಾದ ಗುಂಡಿ ತೆಗೆಯಲು ತೊಡಗಿಸಿ ದಿನದ ಕೊನೆಯಲ್ಲಿ ಕೇಸು ಕರೆದು ಕೇಸನ್ನು ಮುಂದೂಡುತ್ತಿದ್ದೆನು. ಹೀಗಾಗಿ ತಾಲ್ಲೂಕಿನಲ್ಲಿ, ಜಾತಿ ಜಗಳಗಳಾಗಲೀ, ದೊಂಬಿಗಳಾಗಲೀ ಮಾಡಲು ಪುಂಡ ಪೋಕರಿಗಳಿಗೆ ಅವಕಾಶವಿರುತ್ತಿರಲಿಲ್ಲ.

ತಾಲ್ಲೂಕು ಮಟ್ಟದ ನಾಯಕರು

1986ರ ನಂತರ ಶಾಸಕರುಗಳ ಜೊತೆ ಜಿಲ್ಲಾ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ತಾಲ್ಲೂಕುಮಟ್ಟದಲ್ಲಿ ಹೆಜ್ಜಿಗೆ ರಾಮಯ್ಯ, ದೇವನೂರ ಸಿದ್ದಪ್ಪ, ಬಸವರಾಜ್, ಕಳಲೆ ಸಿದ್ದ ನಾಯಕ್, ಶಶಿಕಲಾ ನಾಗರಾಜ್ ಮತ್ತು ಶಶಿಕಲಾ ಬಾಲರಾಜ್ ಜೊತೆಗೆ ನಂಜನಗೂಡು ಟೌನ್‌ನಲ್ಲಿ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರೂ ಇರುತ್ತಿದ್ದರು. ಇವರೆಲ್ಲ ಸಣ್ಣಪುಟ್ಟ ಕೆಲಸಗಳಿಗೆ ಶಿಫಾರಸ್ಸು ಮಾಡಲು ತಾಲ್ಲೂಕು ಕಛೇರಿಗೆ ಬರುತ್ತಿದ್ದರು. ಆಗುವ ಕೆಲಸ ಮಾಡುವುದರಲ್ಲಿ ವಿಳಂಬವಾಗದಂತೆ, ಆಗದಿರುವ ಕೆಲಸಗಳಿಗೂ ನನ್ನ ಮಟ್ಟದಲ್ಲೇ ಅವರಿಗೆ ವಿವರಿಸಿ ಹೇಳುತ್ತಿದ್ದೆ. ಅವರುಗಳು ಒಮ್ಮೊಮ್ಮೆ ಅದೇ ವಿಷಯಗಳನ್ನು ಶಾಸಕರುಗಳ ಹತ್ತಿರವೂ ಪ್ರಸ್ತಾಪಿಸಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ನನ್ನ ವಿವರಣೆ ಶಾಸಕರುಗಳಿಗೂ ಅದೇ ಆಗಿರುತ್ತಿತ್ತು. ಹಾಗಾಗಿ ಆಗುವ ಕೆಲಸಗಳಿಗೆ ಯಾವ ಶಿಫಾರಸ್ಸು ತಂದರೂ ಆಗುವುದಿಲ್ಲ ಎಂಬ ನಂಬಿಕೆ ಅವರಿಗೆಲ್ಲ ತಿಳಿದು ಬಂದಿತ್ತು.

ಗೃಹಮಂತ್ರಿಯಾಗಿದ್ದ ರಾಚಯ್ಯನವರು ಕರ‍್ನಾಟಕ ಕಂಡ ಹಿರಿಯ ಸಜ್ಜನ ರಾಜಕಾರಣಿ. ಅವರು ತಾಲ್ಲೂಕಿನಲ್ಲಿ ಪ್ರವಾಸ ಇರುವಾಗ, `ಇತರೆ ಇಬ್ಬರು ಶಾಸಕರುಗಳು ಯುವಕರಾಗಿದ್ದ ಕಾರಣ ಏನಾದರೂ ನಿನ್ನಿಂದ ತಪ್ಪು ಮಾಡಿಸಿ, ಮುಂದೆ ನೀನಿನ್ನು ಎಸಿ, ಡಿಸಿ ಆಗಬೇಕಾದವನು, ಎಚ್ಚರದಿಂದ ಕೆಲಸ ನರ‍್ವಹಿಸಬೇಕೆಂದು’ ಸಲಹೆ ನೀಡುತ್ತಿದ್ದರು. ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಸುಮಾರು 20 ವರ‍್ಷಗಳ ಅಂತರವಿದ್ದ ಅವರ ಮಾತು ನನಗೆ ನಿಜವಾದ ಕಳಕಳಿಯಿಂದ ಕೂಡಿದ ಮಾತಾಗಿತ್ತು. ಅವರಿಗೆ ಜನರಿಗೆ ಒಳ್ಳೆಯ ಆಡಳಿತ ನೀಡಿದರೆ ಸಾಕಾಗಿತ್ತು. ಮತ್ತಾವ ಒಳ ಒಪ್ಪಂದಗಳ ಮಾತು ಅವರ ಆಡಳಿತದಲ್ಲಿ ಸುಳಿಯುತ್ತಿರಲಿಲ್ಲ.

ಕಂದಾಯ ನೌಕರರ ದಿನಾಚರಣೆ

ವಿಧಾನಸಭೆ ಚುನಾವಣೆ ಆಗಿ ಮೂರು ರ‍್ಷವಾಗಿತ್ತು. ಜಿಲ್ಲಾ ಪರಿಷತ್ ಆಗತಾನೆ ಚುನಾವಣೆಗಳಾಗಿ ಹೊಸ ಸದಸ್ಯರುಗಳು ಆಯ್ಕೆಯಾಗಿದ್ದರು. ಮಾಮೂಲಿ ಕಂದಾಯ ಮತ್ತು ತಾಲ್ಲೂಕು ದಂಡಾಧಿಕಾರಿಯ ಕೆಲಸಗಳನ್ನು ಬಿಟ್ಟರೆ ಮತ್ತಾವ ಒತ್ತಡದ ಕೆಲಸಗಳು ಇರಲಿಲ್ಲ. ಹೀಗಿರುವಾಗ ಕಂದಾಯ ಅಧಿಕಾರಿಗಳು ರ‍್ಷಪರ‍್ತಿ ದುಡಿತದಲ್ಲೇ ಇದ್ದು, ಕಲೆ ಸಂಸ್ಕೃತಿ, ಸಂಗೀತದ ಬಗ್ಗೆ ಮುಖ ಮಾಡುವುದೇ ಇಲ್ಲ. ಈ ಬಗ್ಗೆ ನಾವ್ಯಾಕೆ ಇಡೀ ಜಿಲ್ಲೆಯ ನೌಕರರನ್ನು ಒಳಗೊಂಡಂತೆ 1-2ದಿನ ನಮ್ಮ ಕಂದಾಯ ನೌಕರರ ದಿನಾಚರಣೆ ಆಚರಿಸಬಾರದು ಎಂದು ನಮ್ಮ ಎಸಿ ತ್ರಿಪಾಠಿಯವರ ಜೊತೆ ಚರ‍್ಚಿಸಿ, ನಂತರ ಡಿಸಿಗೂ ಹೇಳಿದೆ.

ಎಲ್ಲ ತಹಸೀಲ್ದಾರ್ ಮಿತ್ರರೊಡನೆ ಕೂಡ ಮೌಖಿಕವಾಗಿ ಚರ‍್ಚಿಸಿ ಅವರ ಸಹಕಾರವನ್ನು ಕೋರಿದೆ. ಅದರಂತೆ, ವಿವಿಧ ಆಟಗಳ ಸ್ಪರ್ಧೆ, ಹಾಡುಗಾರಿಕೆ, ಕೊನೆಯ ದಿನದಲ್ಲಿ ಮಹಾಭಾರತದ ಕುರುಕ್ಷೇತ್ರದ ನಾಟಕ ಎಂದೆಲ್ಲ ತಯಾರಿಗಳು ನಡೆದವು. ಹುಣಸೂರು, ಮೈಸೂರು ಮತ್ತು ನಂಜನಗೂಡು ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿಎ, ಆರ್‌ಐ ಹಾಗೂ ಕಛೇರಿ ಸಿಬ್ಬಂದಿ ಎಲ್ಲರೂ ಎಲ್ಲ ಆಟ ಪಾಠಗಳಲ್ಲಿ ಭಾಗವಹಿಸಿದ್ದರು. ಆಟಗಳಲ್ಲಿ ಕಬಡ್ಡಿ, ಬ್ಯಾಟ್ ಮಿಂಟನ್, ಷಟಲ್ ಕಾಕ್, ವಾಲಿಬಾಲ್, ಚೆಸ್ ಹೀಗೆಲ್ಲ ಸ್ರ‍್ಧೆಗಳನ್ನು ನರ‍್ವಹಿಸಲು ಎಇಓ ಅವರನ್ನು ಸಂರ‍್ಕಿಸಿ ಒಬ್ಬ ಕ್ರೀಡಾ ಅಧಿಕಾರಿಯನ್ನು ಕೋರಿದ್ದೆ. ಅವರು ಎಲ್ಲಾ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ, ಆಡಿಸಿ ಬಹುಮಾನಿತರ ಪಟ್ಟಿ ನೀಡಿದ್ದರು. ನಿಯಮಿತ ಅಭ್ಯಾಸಗಳು ಇಲ್ಲದ ಆಟಗಾರರೊಬ್ಬರು ಕಬ್ಬಡಿ ಆಟದಲ್ಲಿ ಬಿದ್ದು ಅವರ ಕೈ ಮುರಿದಿತ್ತು. ಸದ್ಯ ಅವರನ್ನು ನಂಜನಗೂಡಿನಲ್ಲಿಯೇ ಉಪಚರಿಸಿ ಸುಧಾರಿಸುವಂತಾಯಿತು.

ಈ ಸಮಾರಂಭಕ್ಕೆ ಮೊದಲ ದಿನ ಎಲ್ಲಾ ಸ್ಪರ್ಧೆಗಳನ್ನು ನಡೆಸಿ ಎರಡನೇ ದಿನ ಸಮಾರೋಪ ಸಮಾರಂಭ ಮತ್ತು ನಾಟಕವಿತ್ತು. ಆಗ ಮೈಸೂರು ವಿಭಾಗಕ್ಕೆ ವಿಭಾಗಾಧಿಕಾರಿಗಳಾಗಿದ್ದ ನೀಲಕಂಠರಾಜು, ಡಿಸಿ ವಿ.ಪಿ. ಬಳಿಗಾರ್, ಹುಣಸೂರು ಎಸಿಯಾಗಿದ್ದ ಶಿವಲಿಂಗಮರ‍್ತಿ, ಮೈಸೂರು ಎಸಿ ಈಶ್ವರ್ ನಮ್ಮ ಎಸಿ ಯೋಗೇಂದ್ರ ತ್ರಿಪಾಠಿ ಎಲ್ಲ ಸಂತೋಷದಿಂದ ಭಾಗವಹಿಸಿದ್ದರು. ನಮ್ಮಲ್ಲಿದ್ದ 80 ಜನ ಗ್ರಾಮ ಸಹಾಯಕರಿಗೆ ವಿಶೇಷವಾದ ಸಮವಸ್ತ್ರ ಹೊಲಿಸಿ ಹೊಸ ಬೂಟುಗಳನ್ನು ಕೊಡಿಸಿ, ಅವರಿಗೆ ಪೋಲೀಸ್ ಪೇದೆಗಳಂತೆ ತರಬೇತಿಯನ್ನು ನೀಡಲು ನಮಲ್ಲಿಯೇ ಇದ್ದ ಕಸಬಾ ವಿಎ – ರಾಧಾಕೃಷ್ಣನಿಗೆ ಜವಾಬ್ದಾರಿ ನೀಡಿದ್ದೆ. ರಾಧಾಕೃಷ್ಣ VA ಆಗಿದ್ದರೂ ಒಬ್ಬ DSPಯಂತೆ ಪೊಲೀಸ್ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ. ಅವನ ಕೆಳಗೆ ತರಬೇತಿಗೊಂಡ ನಮ್ಮ ಗ್ರಾಮ ಸಹಾಯಕರು ಶಿಸ್ತಿನ ಪೊಲೀಸ್ ಪೇದೆಗಳಂತೆ ನಡೆದುಕೊಳ್ಳುತ್ತಿದ್ದರು.

ಸಮಾರಂಭ ಪ್ರಾರಂಭವಾಗುವ ಮುನ್ನ ನಮ್ಮ ಗ್ರಾಮ ಸಹಾಯಕರೆಲ್ಲ ಒಟ್ಟಿಗೆ ಸಮವಸ್ತ್ರದಲ್ಲಿದ್ದು, ಪೋಲೀಸ್ ಇಲಾಖೆ ನೀಡುವ ‘ಗಾರ್ಡ್ ಆಫ್ ಆನರ್’ನಂತೆ ಎಲ್ಲ ಅತಿಥಿಗಳಿಗೂ ಗೌರವ ವಂದನೆ ನೀಡಿದಾಗ ‘you have summoned police personnel also here’ ಎಂದು ಡಿವಿಸಿ ಉದ್ಘಾರ ತೆಗೆದರು. ‘ನೋ ಸರ್, ಇವರೆಲ್ಲ ನಮ್ಮ ತಾಲ್ಲೂಕಿನ ಗ್ರಾಮ ಸಹಾಯಕರು’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿ, ಪ್ರಶಂಸೆ ಕೂಡ ಮಾಡಿದ್ದರು. ಇಂತಹ ಕಂದಾಯ ದಿನಾಚರಣೆಯನ್ನು ನಾನು ಆಯೋಜಿಸಲು ಮುಂದಾಗಿದ್ದಕ್ಕೆ, ನರ‍್ವಹಿಸಿದ್ದಕ್ಕೆ ಡಿವಿಸಿ ಮೊದಲ್ಗೊಂಡು ಎಲ್ಲರೂ ಆಗ ನನ್ನನ್ನು ಪ್ರಶಂಸಿದರು.

ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮ ಎಸಿ ಯಾಗಿದ್ದ ತ್ರಿಪಾಠಿ ಅವರು ತುಂಬಾ ಖುಷಿಯಲ್ಲಿದ್ದರು. ಜೊತೆಗೆ ನಮ್ಮ ತಾಲ್ಲೂಕಿನ ಎಲ್ಲಾ ಸಿಬ್ಬಂದಿ ನಾವೆಲ್ಲ ಒಂದು ಕುಟುಂಬ ಎಂಬ ಭಾವನೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಸದ್ಭಾವನೆ ಮೂಡುವಂತಾಗಿತ್ತು. ಕೊನೆಯಲ್ಲಿ ಕಲಿತು ಪ್ರರ‍್ಶಿಸಿದ ನಾಟಕದ ಪ್ರಥಮ ದೃಶ್ಯದಲ್ಲಿ ನಾನು ಕೃಷ್ಣನ ಪಾತ್ರಧಾರಿಯಾಗಿ ಹಾಡೊಂದನ್ನು ಹಾಡಿ ಪ್ರಾರಂಭವಾಗುವಂತೆ ನಾಟಕದ ನರ‍್ದೇಶನ ಮಾಡಿದ್ದ ಮೇಷ್ಟರು ವ್ಯವಸ್ಥೆ ಮಾಡಿದ್ದರು. ನಾನು ಕೃಷ್ಣನ ಪಾತ್ರದ ಪೋಷಾಕಿನಲ್ಲಿ ಹಾಡಿ ಸಂತೋಷಪಟ್ಟಿದ್ದು ಈಗ 35 ವರ‍್ಷಗಳ ನಂತರವೂ ಹಸಿರಾಗಿದೆ.(ಬರಹ:ರುದ್ರಪ್ಪ ಹನಗವಾಡಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು

Published

on

ಶ್ರೀಮತಿ ಕಾಟಮ್ಮ
  • ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ದಾವಣಗೆರೆ ಜಿಲ್ಲೆಯ ಜಗಳೂರು ಸೀಮೆ ಬುಡಕಟ್ಟು ಸಮುದಾಯಗಳ ನೆಲೆವೀಡು, ತಾಜಾ ಜಾನಪದ ಸಂಸ್ಕೃತಿಯು ಹಾಸು ಹೊಕ್ಕಾದ ಸಮೃದ್ಧ ಹೊನ್ನ ಕಣಜ.

ಜಗಳೂರು ತಾಲೂಕಿನ ಹೆಗ್ಗುರುತಿನ ಊರಾದ ತೋರಣಗಟ್ಟೆಯ ಗೌಡ್ರ ಚಿಕ್ಕಪ್ಪ ಮತ್ತು ಗೌರಮ್ಮ ಇವರ ಪುತ್ರಿಯಾದ ಕಾಟಮ್ಮ ತನ್ನ ಬಾಲ್ಯದಲ್ಲೇ ಊರಿನ ಪರಿಸರಕ್ಕನುಗುಣವಾಗಿ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಊರ ದೇವರುಗಳ ಪರುವು ಉತ್ಸವಗಳನ್ನು ಕಣ್ಣುತುಂಬಿಸಿಕೊಳ್ಳುವಾಗ ವಾರಗಟ್ಟಲೆ ಜರುಗುತಿದ್ದ ಮದುವೆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವಾಗ ಊರಿನ ಹಿರಿಯರು ಹಾಡುತಿದ್ದ ಸೋಬಾನೆ ಪದಗಳು ದೇವರ ಪದಗಳು ಕುಣಿತ ಮಣಿತಗಳ ಪದಗಳನ್ನು ಚಿತ್ತವಿಟ್ಟು ಆಲಿಸುತ್ತಲೇ ತಾನೂ ಅವುಗಳನ್ನು ಅಸ್ವಾದಿಸಿಕೊಂಡು ಸಹವರ್ತಿಯಾಗಿ ದನಿ ಸೇರಿಸಲು ಆರಂಭಿಸಿದರು.

ಹುಟ್ಟಿದ ಊರಿನಲ್ಲಿಯೇ ಬಾಲಪ್ಪನವರನ್ನು ವಿವಾಹವಾದ ಕಾಟಮ್ಮ ನಾಲ್ಕು ಮಕ್ಕಳ ತಾಯಿಯಾಗಿ ತುಂಬು ಸಂಸಾರವನ್ನು ನಿರ್ವಹಿಸುತ್ತಲೇ ತನ್ನ ಎದೆಯೊಳಗಿನ ಪದಗಳಿಗೆ ದನಿಯಾಗುತ್ತಾ ಬಂದರು. ತನ್ನ ಸೋದರಿ ಶಾಂತ ವೀರಮ್ಮ ಹಾಗೂ ಸಮೀಪದ ಬಂದುಗಳಾದ ಬಾಲಮ್ಮ, ಬಡಮ್ಮ ಮುಂತಾದವರ ತಂಡ ಕಟ್ಟಿಕೊಂಡು ಮದ್ಯ ಕರ್ನಾಟಕದ ಪ್ರಸಿದ್ಧ ಜಾನಪದ ಸಾಂಸ್ಕೃತಿಕ ವೀರರಾದ ಕಾಟಣ್ಣ, ದೊಡ್ಡಣ್ಣ, ಬಡಣ್ಣ, ಚಿಕ್ಕಣ್ಣ ಇವರ ಬಗ್ಗೆ ಸುದೀರ್ಘ ಕಥನ ಕಾವ್ಯಗಳನ್ನು ಕಟ್ಟಿ ನಿರರ್ಗಳವಾಗಿ ಹಾಡಬಲ್ಲವರಾಗಿದ್ದಾರೆ. ವಿಶೇಷವಾಗಿ ದಾವಣಗೆರೆ ಸೀಮೆಯಲ್ಲಿ ‘ಮಳೆ ಮಲ್ಲಪ್ಪ’ ನೆಂದೇ ಖ್ಯಾತನಾಮರಾಗಿ ಆರಾಧನೆಗೆ ಒಳಗಾಗಿರುವ ಅವಧೂತ ಪರಂಪರೆಯ ‘ಮೆಲ್ಲಜ್ಜಿ’ ನ ಬಗ್ಗೆ ಈ ತಾಯಿ ಕಟ್ಟಿಕೊಡುವ ಪದಗಳು ಬಹು ಪ್ರಸಿದ್ದಿ ಪಡೆದಿವೆ.

ಮೆಲ್ಲಜ್ಜ ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ತೋರಣಗಟ್ಟೆಯಲ್ಲಿ ಎಲ್ಲರಂತೆ ಬದುಕಿ ಬಾಳಿದ ವ್ಯಕ್ತಿ. ಆದರೆ ತನ್ನ ವಿಶಿಷ್ಟ ಆಧ್ಯಾತ್ಮಿಕ ಮನೋಪ್ರವೃತ್ತಿಯ ಅವಧೂತನಾಗಿ, ಹವಮಾನ ತಜ್ಞನಾಗಿ ‘ ಮಳೆ ಮೆಲ್ಲಜ್ಜ ‘ ಎಂದು ಪ್ರಸಿದ್ದಿ ಪಡೆದು ಮರಣೋತ್ತರದಲ್ಲಿ ಜನ ಸಮುದಾಯದಿಂದ ಸಂಗತಿಯಾಗಿದೆ.ಗಾಗುತ್ತಾನೆ. ಇಂತಹ ಅಸಾಮಾನ್ಯ ವ್ಯಕ್ತಿತ್ವದ ಮೆಲ್ಲಜ್ಜನ ಕುರಿತಂತೆ ಪದಗಾತಿ ಕಾಟಮ್ಮ ಸುಧೀರ್ಘವಾಗಿ ಕಥನ ಕಟ್ಟಿ ಹಾಡುವ ಸೋಪಜ್ಞ ಕಲೆಗಾರಿಕೆಯನ್ನು ಹೊಂದಿದವರಾಗಿದ್ದಾರೆ. ಜಗಳೂರು ಸೀಮೆಯಲ್ಲಿ ಈ ಕಥನ ಮನೆಮಾತಾಗಿದೆ.

ಜಗಳೂರು ಸೀಮೆಯಲ್ಲಿ ಯಾರದೇ ಮದುವೆ ಸಂಬಂದಿತ ಕಾರ್ಯಗಳಲ್ಲಿ ಶ್ರೀಮತಿ ಕಾಟಮ್ಮ ನವರ ಉಪಸ್ಥಿತಿ, ಸೋಬಾನೆ ಪದಗಾರಿಕೆ ಇರಲೇಬೇಕು. ಅಷ್ಟರಮಟ್ಟಿಗೆ ಇವರು ಸುಪ್ರಸಿದ್ಧರಾಗಿದ್ದಾರೆ.

ಮದುವೆಯ ಹಸೆ ಚಿತ್ತಾರ ಬಿಡಿಸುವಲ್ಲಿ ಸಿದ್ಧ ಹಸ್ತರು. ಬುಡಕಟ್ಟು ಸಮುದಾಯಗಳ ಮದುವೆಗಳಲ್ಲಿ ಹಾಕಲಾಗುವ ಹಾಲಸ್ತ್ರ ಹಸೆ, ಒಳ್ಳಕ್ಕಿ ಹಸೆ, ದೇವರ ಹಸೆ, ಬೂವದ ಹಸೆ . ಅರಿಣಿ ಹಸೆ . ಅಂದ್ರದ ಹಸೆ ಮುಂತಾದ ಹಸೆಗಳನ್ನು ಕರಿಕಂಬಳಿಹಾಸು ಮೇಲೆ ತಾನೇ ಬಿಡಿಸಿ ಆಯಾ ಸಂದರ್ಭಗಳನ್ನು ಮಧುರವಾಗಿ ಹಾಡುವ ನಿಪುಣೆಯಾಗಿದ್ದಾರೆ.

ಸಾಮಾನ್ಯವಾಗಿ ಹಸೆ ಬಿಡಿಸುವವರಿಗೆ ಹಾಡಲು ಬರುವುದಿಲ್ಲ. ಹಾಡುವವರು ಹಸೆ ಬಿಡಿಸುವುದಿಲ್ಲ. ಆದರೆ ಕಾಟಮ್ಮ ಇದಕ್ಕೆ ಭಿನ್ನ. ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾಚತುರೆ. ಸುದೀರ್ಘ ನಲವತ್ತು ವರ್ಷಗಳಿಂದ ನಿರಂತರವಾಗಿ ಪದಗಂಗೆಯನ್ನು ಹರಿಸುತ್ತಿರುವ ಎಲೆಮರೆಯ ಪ್ರತಿಭೆ ಕಾಟಮ್ಮನವರನ್ನು ಯಾವ ಸಂಘ ಸಂಸ್ಥೆಗಳು ಗುರುತಿಸದೆಹೋದ ಈ ಹೊತ್ತಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ(ಬರಹ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಅನಾಗರಿಕ ಆಚರಣೆಯ ವಿರುದ್ಧ

Published

on

  • ರುದ್ರಪ್ಪ ಹನಗವಾಡಿ

ಸೊರಬ ತಾಲ್ಲೂಕಿನಲ್ಲಿ ಇನ್ನೊಂದು ಮುಖ್ಯ ಘಟನೆಯನ್ನು ಹೇಳಿ ಮುಂದೆ ಹೋಗುತ್ತೇನೆ. ಸೊರಬ ತಾಲ್ಲೂಕಿನಲ್ಲಿ ತಹಸೀಲ್ದಾರರಾಗಿ ರಾಮನಾಥ್ ಎಂಬ ಹಿರಿಯರಿದ್ದರು. ಅವರು ತಾಲ್ಲೂಕಿನಲ್ಲಿ ಎಲ್ಲಾ ಆಡಳಿತ ನೋಡಿಕೊಳ್ಳುತ್ತಿದ್ದರು.

ವಿಶೇಷ ತಹಸೀಲ್ದಾರರು ಸಾಮಾನ್ಯವಾಗಿ ಯಾವ ಉದ್ದೇಶಕ್ಕೆ ನಿಯೋಜಿಸಿದ್ದರೋ ಅದನ್ನು ಬಿಟ್ಟು ಇತರೆ ಸಾಮಾನ್ಯ ವಿಷಯಗಳಲ್ಲಿ ಅವರಿಗೆ ಸಂಬಂಧಿಸಿರುವುದಿಲ್ಲ. ಹಾಗಾಗಿ ನಾನು ನನ್ನ ಕೆಲಸಗಳನ್ನು ಬಿಟ್ಟು ತಾಲ್ಲೂಕು ಕಛೇರಿ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಜಾತ್ರೆಯ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವಿಶೇಷ ಸಭೆ ನಡೆಸಿ ಅಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಆಚರಣೆಯನ್ನು ತಡೆಯಲು ಸೂಚನೆ ನೀಡಿತ್ತು.

ಬೆತ್ತಲೆಸೇವೆಯ ಈ ಅನಾಗರಿಕ ಆಚರಣೆಯ ಬಗ್ಗೆ ಪ್ರೊ. ಬಿ. ಕೃಷ್ಣಪ್ಪನವರು, ನಾನು ಸೊರಬಕ್ಕೆ ಬರುವ ಒಂದು ವರ್ಷ ಮುಂಚಿನಿAದ ಬೆತ್ತಲೆ ಸೇವೆಯ ಆಚರಣೆ ಒಂದು ಅನಾಗರಿಕ ಆಚರಣೆ ಎನ್ನುವ ಬಗ್ಗೆ ಅನೇಕ ಲೇಖನಗಳನ್ನು ಬರೆದು ಇದನ್ನು ತಡೆಗಟ್ಟಬೇಕೆಂದು ಅಂದಿನ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವ ಪತ್ರ ಬರೆದು ಈ ವಿಷಯಗಳೆಲ್ಲಾ ದಿನಪತ್ರಿಕೆ ಮತ್ತು ಆಗ ಜಾಣಜಾಣೆಯರ ಪತ್ರಿಕೆ ಎಂದು ಹೇಳಿ ತರುತ್ತಿದ್ದ ಲಂಕೇಶ್ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು.

1986ರ ಜಾತ್ರೆ ಸಮಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ತಂಗರಾಜ್ ಅವರು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆ ನಡೆಸಿ ಬೆತ್ತಲೆ ಹೋಗುವ ಜನರನ್ನು ಜಾಗೃತಗೊಳಿಸಿ ತಡೆಯಬೇಕೆಂದು ಜಿಲ್ಲಾಡಳಿತ ತೀರ್ಮಾನಿಸಿತ್ತು. ಕೃಷ್ಣಪ್ಪನವರ ಡಿಎಸ್‌ಎಸ್ ಸಂಘಟನೆಯ ಹೋರಾಟದ ಜೊತೆಗೆ ಶಿವಮೊಗ್ಗ-ಸಾಗರ-ಸೊರಬದಲ್ಲಿನ ಎಲ್ಲ ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘ, ಪ್ರಗತಿಪರ ಮಹಿಳಾ ಲೇಖಕಿಯರ ಸಂಘಟನೆಗಳು ಕೈಜೋಡಿಸಿದ್ದವು. ಭದ್ರಾವತಿಯಿಂದ ಪ್ರೊ. ಚಂದ್ರಶೇಖರಯ್ಯ, ಡಿಎಸ್‌ಎಸ್ ಚಂದ್ರು, ತೋರಣಗಟ್ಟಿ ಚಂದ್ರಶೇಖರ್, ಬಿದರಳ್ಳಿ ನರಸಿಂಹಮೂರ್ತಿ, ಇನ್ನೂ ಅನೇಕ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು.

ನಾನು ಸರ್ಕಾರದ ಭಾಗವಾಗಿ ಸಂಜೆ ಹಳ್ಳಿಗಳಿಗೆ ಕರಪತ್ರಗಳನ್ನು ಹಂಚಿ, ‘ಯಾವ ದೇವರಿಗೂ ಬೆತ್ತಲೆ ಪೂಜೆ ಸಲ್ಲಿಸುವುದು ಇಷ್ಟವಾಗದು. ಇದೆಲ್ಲ ಹಿಂದುಳಿದವರನ್ನೂ, ದಲಿತರನ್ನೂ ಶೋಷಣೆ ಮಾಡುವ ಕ್ರೂರ ಪದ್ಧತಿ, ಇವನ್ನು ನಿವಾರಣೆಮಾಡಬೇಕೆಂದು ಭಾಷಣ ಮಾಡುತ್ತಾ ತಾಲ್ಲೂಕು ಕಛೇರಿಯ ಸಿಬ್ಬಂದಿಯನ್ನು ಹಲವು ತಂಡಗಳಾಗಿ ಮಾಡಿಕೊಂಡು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ಸರ್ಕಾರದ ನಿರ್ದೇಶನವಿದ್ದುದರ ಜೊತೆಗೆ ಈ ವಿಷಯಗಳು ನನಗೆ ಇಷ್ಟವಾದ ಕೆಲಸವಾಗಿದ್ದರಿಂದ ಹೆಚ್ಚಿನ ಆಸಕ್ತಿಯಿಂದ ಬೆತ್ತಲೆ ಸೇವೆ ವಿರುದ್ಧ ಪ್ರಚಾರ ಮಾಡುತ್ತಿದ್ದೆವು. ಹೀಗೆ ಎಲ್ಲಾ ಕಡೆ ಪ್ರಚಾರ ಮಾಡಿದ ಮೇಲೆ ಪ್ರೊ.ಬಿ.ಕೆ ಮತ್ತು ಶಿವಪ್ಪ ಮಾಸ್ತರು ಇನ್ನು ಕೆಲವು ಗೆಳೆಯರು ನಮ್ಮಲ್ಲಿ ಊಟ ಉಪಚಾರ ಮಾಡಿ ಹೋಗುತ್ತಿದ್ದರು. ಇದರ ಸಂಪೂರ್ಣ ಘಟನೆಯ ವಿವರವನ್ನು ಈಗಾಗಲೇ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ 2010ರಲ್ಲಿ ಪ್ರಕಟಿಸಿರುವ ‘ಬಯಲು.. ಬೆತ್ತಲೆ..ಚಂದ್ರಗುತ್ತಿ’ ಎಂಬ ಪುಸ್ತಕದಲ್ಲಿನ ಮಾಹಿತಿಯನ್ನು ಇಲ್ಲಿ ಮುಂದುವರೆಸಲಾಗಿದೆ.

ಬೆತ್ತಲೆ ಸೇವೆ ನಡೆಯುವ ಒಂದು ವಾರ ಮುಂಚಿತವಾಗಿಯೇ ಕೃಷ್ಣಪ್ಪನವರ ನೇತೃತ್ವದಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳೊಡನೆ ಸಂಜೆ ಹಳ್ಳಿಗಳಿಗೆ ಹೋಗಿ ಭಾಷಣಗಳ ಮುಖಾಂತರ ಬೆತ್ತಲೆ ಸೇವೆಯನ್ನು ವಿರೋಧಿಸುವ ಪ್ರಚಾರದಲ್ಲಿ ನಾನೂ ತೊಡಗಿಸಿಕೊಂಡಿದ್ದೆ. ಚಂದ್ರಗುತ್ತಿ ದೇವಸ್ಥಾನ ಸಮಿತಿಯ ಸಂಚಾಲಕರಾಗಿದ್ದ ಈಡೂರು ಪರಶುರಾಮಪ್ಪ ಮತ್ತು ಅವರ ಸ್ನೇಹಿತರು ವೈಯಕ್ತಿಕವಾಗಿ ಬೆತ್ತಲೆ ಸೇವೆಯನ್ನು ವಿರೋಧಿಸುವ ಹೋರಾಟಕ್ಕೆ ನಮ್ಮ ಬಳಿ ಸಮ್ಮತಿಸಿದ್ದರೂ ಇದನ್ನು ವಿರೋಧಿಸುವುದು ಹೇಗೆ ಎಂಬುದರ ಬಗ್ಗೆ ಅವರಲ್ಲಿ ದುಗುಡ ತುಂಬಿತ್ತು. ಆಗಿನ ಜನಪ್ರತಿನಿಧಿಗಳು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಇದೊಂದು ಅತಿ ಸೂಕ್ಷ್ಮ ವಿಚಾರವೆಂದೂ- ಏನಾದರೂ ಮಾತನಾಡಿದರೆ ಜನರಿಂದ ದೂರ ಆಗುವ ಆತಂಕ ರಾಜಕಾರಣಿಗಳ ಒಳ ಇಂಗಿತವಾಗಿತ್ತು. ಚುನಾವಣಾ ರಾಜಕೀಯದ ದೃಷ್ಟಿಯಿಂದ ಅವರಿಗೆ ಇದೆಲ್ಲ ಬೇಡದ ವಿಚಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಬೆತ್ತಲೆಸೇವೆ ನಡೆಸುವ ಮೊದಲ ದಿನ ಸರ್ಕಾರವು ಸೂಚಿಸಿದಂತೆ ಡಿ.ಎಸ್.ಎಸ್. ಮತ್ತು ಇತರೆ ಸಂಘಟನೆಯ ಕಾರ್ಯಕರ್ತರು- ಬೆತ್ತಲೆ ಹೋಗುತ್ತಿದ್ದವರನ್ನು ತಡೆದು ಅವರಿಗಾಗಿ ಹೊಸ ಬಟ್ಟೆ ತಂದಿದ್ದ ಮಹಿಳಾ ಕಾರ್ಯಕರ್ತರು ಅವರಿಗೆ ಸುತ್ತಿ- ಕಳುಹಿಸುತ್ತಿದ್ದರು. ಅವರು ಸುತ್ತಿಕೊಂಡು ಮುಂದೆ ಹೋಗುತ್ತಿದ್ದಾಗ ಮತ್ತೆ ಬಿಚ್ಚಿಕೊಂಡು ಓಡುತ್ತಿದ್ದುದು ನಡೆಯುತ್ತಲೂ ಇತ್ತು. ಮೊದಲ ದಿನದ ಈ ಕರ‍್ಯ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಿತು. ಸರ್ಕಾರ ಮತ್ತು ಡಿಎಸ್‌ಎಸ್ ಕರ‍್ಯಕರ್ತರು ಕೂಡ ಇದು ಸಂಪೂರ್ಣ ಯಶಸ್ವಿಯಾಯಿತೆಂದೇ ಭಾವಿಸಿದೆವು.

ಆದರೆ ಎರಡನೇ ದಿನ ಅಂದರೆ, 20-3-1986ರಂದು ಬೆಳಿಗ್ಗೆಯಿಂದಲೇ ಜನಸಾಗರ ವಿವಿಧ ಕಡೆಗಳಿಂದ ಹರಿದು ಬರುತ್ತಿತ್ತು. ನಾನು ನನ್ನ ಸಿಬ್ಬಂದಿಯೊಡನೆ ಮಾಮೂಲಿನಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಬೆತ್ತಲೆ ಸೇವೆ ಮಾಡೋ ಹೆಂಗಸಿನ ಫೋಟೋ ತೆಗೆಯುತ್ತಿದ್ದ ಇನ್ನೊಬ್ಬ ಮಹಿಳಾ ಫೋಟೋಗ್ರಾಫರ್‌ನನ್ನು ನಮ್ಮ ಎದುರಿಗೆ ಅಡ್ಡಹಾಕಿ ಅವಳು ತೆಗೆದಿದ್ದ ಫೋಟೋ ರೀಲುಗಳನ್ನು ಹೊರತೆಗೆದು ಅವಳನ್ನು ನಮ್ಮ ಎದುರಿಗೆ ಥಳಿಸಲು ಮುಂದಾಗಿ, ಅವಳನ್ನು ನಗ್ನಗೊಳಿಸಿದರು. ಆಗ ಜೋಗಿತಿಯರನ್ನು ನಾನು ತಡೆಯಲು ಹೋದಾಗ ವಾಗ್ವಾದ-ತಳ್ಳಾಟ ಪ್ರಾರಂಭವಾಯಿತು.

ಸರ್ಕಾರ ಮತ್ತು ವಿವಿಧ ಸಂಘಟನೆಗಳನ್ನು ಜೋಗತಿಯರು ಎದುರು ಹಾಕಿಕೊಳ್ಳುವುದನ್ನು ಊಹಿಸದಿದ್ದ ನಮಗೆ ಇದೆಲ್ಲ ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಜನರು ಅಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರನ್ನ ಹೊಡೆದರಂತೆ. ಇಲ್ಲಿ ಬಟ್ಟೆ ಬಿಚ್ಚಿದರಂತೆ, ಎಂಬ ವದಂತಿಗಳನ್ನ ಹಬ್ಬಿಸಿ ಸರ್ಕಾರದ ವ್ಯವಸ್ಥೆಯಲ್ಲಾಗಲೀ, ಡಿಎಸ್ ಎಸ್ ಮತ್ತಿತರ ಹೋರಾಟಗಾರರಾಗಲೀ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಏನೂ ತಿಳಿಯದಂತಾಗಿದ್ದರು. ನನ್ನೊಡನೆ ಇದ್ದ ಸಿಬ್ಬಂದಿ ಚದುರಿ ಹೋಗಿ ನಾನು ರಕ್ಷಣೆಗಾಗಿ ಪೋಲೀಸ್ ವ್ಯಾನಿಗೆ ಹತ್ತಿಕೊಂಡಿದ್ದೆ. ನಾವು ತಂದಿದ್ದ ಜೀಪಿಗೆ ಬೆಂಕಿ ಹಚ್ಚಿಟ್ಟು ಜೋಗತಿಯರು ಅಟ್ಟಹಾಸ ಮೆರೆದಿದ್ದರು. ನಾವು ವ್ಯಾನಿನ ಒಳಗೆ ಇದ್ದು, ಇನ್ನು ಮುಂದೆ ಏನಾಗುವುದೋ ಅನ್ನೋ ಆತಂಕದಲ್ಲಿದ್ದಾಗ ನನಗೆ ಪರಿಚಿತ ವ್ಯಕ್ತಿಯೊಬ್ಬ ಓಡಿಬಂದು ನನ್ನ ಪರಿಚಯ ಗುರುತು ಸಿಗದಂತೆ ಭಂಡಾರ ಹಾಕಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಪಂಚೆ ನೀಡಿ ಪ್ಯಾಂಟ್ ಷರಟು ತೆಗೆಸಿ ನಾನು ಯಾರೋ ಅನ್ನೋ ರೀತಿ ಮಾಡಿಕೊಂಡು ತನ್ನ ರಾಜದೂತ್ ಮೋಟಾರ್‌ಬೈಕ್‌ನಲ್ಲಿ ಸೊರಬಕ್ಕೆ ತಂದುಬಿಟ್ಟರು.

ಅಲ್ಲಿಂದ ಎಲ್ಲರಿಗೂ ಫೋನ್ ಮಾಡಿ ಆಗಿದ್ದ ಅನಾಹುತವನ್ನು ತಿಳಿಸಿದೆ. ಇದು ಸುಮಾರು ಮಧ್ಯಾಹ್ನ 3.00 ಘಂಟೆಯ ತನಕ ಜೋಗತಿಯರ ಅಟ್ಟಹಾಸಕ್ಕೆ ಗುರಿಯಾದ ಡಿ.ಎಸ್.ಎಸ್. ಮತ್ತು ಇತರೆ ಕರ‍್ಯಕರ್ತರು ತಮಗೆ ಸಿಕ್ಕ ಸಿಕ್ಕ ಕಡೆ ಚದುರಿ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಪರಾರಿಯಾದರು. ಈ ಸಂದರ್ಭದಲ್ಲಿ ಕೃಷ್ಣಪ್ಪನವರೇನಾದರೂ ಈ ಜೋಗತಿಯರ ಕೈಗೆ ಸಿಕ್ಕಿದ್ದರೆ ಬಹುಶಃ ಅಂದೇ ಅವರ ಕೊಲೆ ಮಾಡಲು ಹೇಸುತ್ತಿರಲಿಲ್ಲ.

ಸುಮಾರು 4.00 ಘಂಟೆಯ ಸುಮಾರಿಗೆ ಹೆಚ್ಚಿನ ಪೋಲೀಸ್ ಬಂದು ಇಡೀ ಜೋಗತಿಯರ ಸಮೂಹವನ್ನು ಬೆತ್ತಲೆಯಾಗಿಯೇ ಅರೆಸ್ಟ್ ಮಾಡಿ ಸೊರಬ ಪೋಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ಸುಮಾರು 5-6 ಘಂಟೆಯ ಸುಮಾರಿಗೆ ಪೋಲೀಸ್ ಬಂದು ಇವರಲ್ಲಿ ಯಾರು ನಿಮ್ಮ ಮೇಲೆ ಹಲ್ಲೆ ಮಾಡಿದರು ಗುರ್ತಿಸಿ ಎಂದು ಹೇಳಿದರು.

ಪೊಲೀಸರೊಡನೆ ಹೋಗಿ ನೋಡುತ್ತೇನೆ, ಅದೊಂದು ಭಯಂಕರ ದೃಶ್ಯ. ಪೀಚಲು ದೇಹಗಳ ಅನಾರೋಗ್ಯವೇ ಮೂರ್ತಿವೆತ್ತ- ಕುಡಿತದ ಅಮಲಿನಲ್ಲಿದ್ದ ಅವರಿಗೆ ತಾವೇನು ಮಾಡಿದ್ದೆವು ಅನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಯಾವುದೋ ಕಾಡಿನ ಪ್ರಾಣಿಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತಾ ಆ ರೂಮಿಗೆ ಬಂದವರನ್ನು ನೋಡುತ್ತಿದ್ದರು. ನನಗೆ `ಯಾರು ಏನು ಮಾಡಿದರು ಎನ್ನುವುದನ್ನ ಯಾರ ಮೇಲೆ ಹೇಳಲಿ’ ಎನ್ನುತ್ತಾ ಈಚೆಗೆ ಬಂದೆ. ಆದರೆ ಈ ಜೋಗತಿಯರು ಅಂತಹ ಸ್ಥಿತಿಯಲ್ಲೂ ತಮ್ಮ ಬಳಿ ಬೆಳಗಿನಿಂದ ದೋಚಿದ ಒಡವೆಗಳು ಮತ್ತು ಹಣ ಇರುವುದು ಸಣ್ಣ ಸಣ್ಣ ಚೀಲಗಳಲ್ಲಿರುವುದು ಪರಿಶೀಲಿಸಿದಾಗ ಕಂಡು ಬಂತು.

ಈ ಘಟನೆಯ ನಂತರ ಆದ ಮಾರನೇ ದಿನ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಗಳು ಪ್ರಕಟಗೊಂಡವು. ನಾನು ಆತಂಕದಿAದ ನನ್ನ ಹೆಂಡತಿಗೆ ‘I ಚಿm Sಚಿಜಿe’ ಎಂದು ತಂತಿ ನೀಡಿದಾಗ ಅವಳು ಗಲಿಬಿಲಿಗೊಂಡು ಫೋನ್ ಮಾಡಿದಳು. ಇತ್ತ ನನ್ನ ಹಳ್ಳಿ ಹನಗವಾಡಿಯಿಂದ ಬಂದಿದ್ದ ಜೋಗತಿಯರಿಂದಲೇ ರೋಚಕವಾಗಿ ತಲುಪಿದ್ದ ಸುದ್ದಿಯಿಂದ, ವರದಿಗಳನ್ನು ಕೇಳಿಕೊಂಡ ನಮ್ಮ ಊರಿನ ಜನರು ಮತ್ತು ನಮ್ಮ ಅವ್ವ, ಅಣ್ಣ-ತಮ್ಮಂದಿರು ಮತ್ತು ಮಿತ್ರರ ದಂಡು ಸೊರಬಕ್ಕೆ ನನ್ನನ್ನು ನೋಡಲು ಬಂದಿದ್ದರು. ಅವರು ನಾನು ಮಾಮೂಲಿನಂತೆ ಇದ್ದುದನ್ನು ನೋಡಿ ನೆಮ್ಮದಿಗೊಂಡರು. ನನ್ನ ತಮ್ಮನೊಬ್ಬ ನಿನ್ನನ್ನು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಸಮೇತ ನೋಡುವ ಕಲ್ಪನೆಯಲ್ಲಿಯೆ ಓಡಿ ಬಂದೆವು ಎಂದಾಗ ನಾನು ಕೂದಲೆಳೆಯಲ್ಲಿ ಸಾವು ತಪ್ಪಿದ್ದನ್ನು ವಿವರಿಸಲಿಲ್ಲ.

ನಾನು ತಹಶೀಲ್ದಾರನಾಗಿ ಹೊಸದರಲ್ಲಿ ಆಗಿದ್ದ ಈ ಘಟನೆ ಇಂದಿಗೂ ನನಗೆ ಎಚ್ಚರಿಕೆಯ ಮಾರ್ಗ ಸೂಚಿಯಾಗಿದೆ. ಒಂದು ವಿಷಾದದ ಸಂಗತಿಯೆAದರೆ ನಮ್ಮ ಪೋಲೀಸರು ಇಂದಿಗೂ ಯಥಾಸ್ಥಿತಿಯ ರಕ್ಷಕರಾಗಿಯೇ ಉಳಿದಿದ್ದಾರೆ. ಅವರನ್ನು ಬದಲಾಗುತ್ತಿರುವ ಕಾಲಮಾನದ ಜೊತೆಗೆ ಬದಲಾವಣೆಯ ರೂವಾರಿಗಳಾಗುವಂತೆ ತರಬೇತಿ ನೀಡುವಲ್ಲಿ ಸರ್ಕಾರವು ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ.

ಈ ಘಟನೆಯ ನಂತರದ ಆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಮಹತ್ತರ ಬದಲಾವಣೆ ಆ ಪ್ರದೇಶದಲ್ಲಿ ಆಗಿದೆ. ಬೆತ್ತಲೆ ಸೇವೆಯನ್ನು ಸರ್ಕಾರ ನಿಷೇಧಿಸಿದೆ. ಅದರೊಟ್ಟಿಗೆ ಅನೇಕ ಸಾಮಾಜಿಕ ಅನಿಷ್ಟಗಳ ಬಗ್ಗೆ ಸಾಮಾನ್ಯ ಜನರ ಮಧ್ಯದಲ್ಲಿ ಚರ್ಚೆಗಳಾಗಿವೆ. ಕೃಷ್ಣಪ್ಪನವರ ಹೋರಾಟ ಹೊಸ ದಿಕ್ಕಿನೆಡೆಗೆ ಸಮಾಜವನ್ನು ಮುಖ ಮಾಡಿಸಿದೆ. ಇದು ಅವರ ಆತ್ಮಕ್ಕೆ ನೆಮ್ಮದಿಯನ್ನು ನೀಡಿದೆ ಎಂದರೆ ತಪ್ಪಾಗಲಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending