ರಾಜಕೀಯ
ನೀತಿ ನಿರೂಪಣೆಯ ಹೆದ್ದಾರಿ
ಸರ್ಕಾರವನ್ನು ಪ್ರತಿನಿಧಿಸುವವರು ನೀತಿ ನಿರೂಪಣೆ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದರ ಆಧಾರದಲ್ಲಿ ಚುನಾವಣೆಯ ಸಂವಾದಗಳು ನಡೆಯಬೇಕು. ಲೋಕಸಭೆ ಅಥವಾ ವಿಧಾನಸಭೆ ಸೇರಿದಂತೆ ಯಾವುದೇ ಸಂವಿಧಾನಿಕ ಸಂಸ್ಥೆಗಳ ಚುನಾವಣೆ ನಡೆದಾಗ ಅಧಿಕಾರಾವಧಿಯಲ್ಲಿ ರೂಪಿತವಾದ ನೀತಿಗಳು ಎಂಥವು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದಾಗ ಉಂಟಾದ ಪರಿಣಾಮಗಳೇನೇನು ಎಂಬ ಆಯಾಮದಲ್ಲಿ ಚರ್ಚೆಗಳಾಗಬೇಕು. ಆ ತರಹದ ಚರ್ಚೆಗಳಾದಾಗ ಅಧಿಕಾರರೂಢರು ಮತ್ತು ಪ್ರತಿಪಕ್ಷಗಳನ್ನು ಪ್ರತಿನಿಧಿಸುವವರು ಪ್ರಜಾಪ್ರಭುತ್ವ ನಿರೀಕ್ಷಿಸುವ ಗುರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅಂಥ ಗುರಿಯನ್ನೇ ಕೇಂದ್ರೀಕರಿಸಿಕೊಂಡು ಮುನ್ನಡೆಯುವ ಅವರ ನಿಲುವುಗಳ ತಾತ್ವಿಕತೆಯು ಸರಿಯಾದ ಮಾರ್ಗದಲ್ಲಿಯೇ ಅವರು ಹೆಜ್ಜೆಯಿರಿಸುವಂತೆ ಪ್ರೇರಣೆ ನೀಡುತ್ತದೆ. ಈ ರೀತಿಯ ಅವಲೋಕನ ಮತ್ತು ವಿಮರ್ಶಾತ್ಮಕ ಮಾದರಿಯ ನೋಟಗಳು ಚುನಾವಣಾಪೂರ್ವ, ಚುನಾವಣಾ ನಂತರ ಮತ್ತು ಸರ್ಕಾರದ ಅಧಿಕಾರಾವಧಿಯ ಅಷ್ಟೂ ದಿನಗಳ ಕಾಲ ವ್ಯಕ್ತವಾಗುತ್ತಲೇ ಇರಬೇಕಾಗುತ್ತದೆ. ಇವುಗಳನ್ನು ನಿರಂತರವಾಗಿರಿಸುವಂಥ ಬದ್ಧತೆಯನ್ನು ಸರ್ಕಾರವನ್ನು ಪ್ರತಿನಿಧಿಸುವವರು ಮತ್ತು ಪ್ರತಿಪಕ್ಷಗಳಲ್ಲಿರುವವರು ತೋರಬೇಕಾಗುತ್ತದೆ.
ಬದ್ಧತೆಗೆ ತದ್ವಿರುದ್ಧದ ವಾತಾವರಣ
ಭಾರತದಲ್ಲಿ ಚುನಾವಣಾ ರಾಜಕಾರಣವು ಅಂಥ ಬದ್ಧತೆಗೆ ತದ್ವಿರುದ್ಧವಾದ ವಾತಾವರಣವನ್ನು ಸೃಷ್ಟಿಸಿದೆ. ಸಂವಾದವನ್ನು ಕಟ್ಟುವುದರ ಬದಲು ಅತಾರ್ಕಿಕ ವಾಗ್ವಾದಗಳನ್ನು ಹುಟ್ಟುಹಾಕುವುದರ ಕಡೆಗೇ ಅದರ ಗಮನವಿದೆ. ಅಧಿಕಾರ ಪಡೆಯಲೇಬೇಕು ಎಂಬ ಹಂಬಲ ಮತ್ತು ಹಠಗಳು ಸಂವಾದದ ಸಾಧ್ಯತೆಗಳನ್ನೇ ಮೊಟಕುಗೊಳಿಸುತ್ತವೆ. ಜನಪರ ನೀತಿ ನಿರೂಪಣೆಯ ಜವಾಬ್ದಾರಿಯುತ ಐಡೆಂಟಿಟಿಗಿಂತಲೂ ಕೀಳು ಅಭಿಪ್ರಾಯಗಳೊಂದಿಗಿನ ಮನಸ್ಥಿತಿಯನ್ನು ಸೃಷ್ಟಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತವೆ. ಹಾಗಾಗಿ ಸದ್ಯದ ಅಗತ್ಯಗಳಿಗೆ ಸ್ಪಂದಿಸುವಂಥ ಮತ್ತು ಆ ಮೂಲಕ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ನೆರವಾಗುವ ನೀತಿಗಳು ರೂಪುಗೊಳ್ಳುವುದೇ ಇಲ್ಲ. ಅಂಥ ನೀತಿಗಳು ರೂಪುಗೊಳ್ಳುವುದಕ್ಕೆ ಬೇಕಾದ ಒತ್ತಡವನ್ನು ಹಾಕಬೇಕಾದ ಜನಸಮೂಹವೂ ಅದೇ ನಿರೀಕ್ಷೆಗಳೊಂದಿಗೆ ಯೋಚಿಸುವುದೇ ಇಲ್ಲ. ಒಂದು ವೇಳೆ ಜನಸಮೂಹ ಯೋಚನೆಯ ಹಾದಿ ತುಳಿದರೂ ರಾಜಕಾರಣ ಎಚ್ಚೆತ್ತುಕೊಂಡು ಅದರ ದಿಕ್ಕನ್ನೇ ಬದಲಿಸಿ ನಿರ್ದಿಷ್ಟ ವಿದ್ಯಮಾನಕೇಂದ್ರಿತ ಅಂಶವನ್ನು ಮುನ್ನೆಲೆಗೆ ತಂದು ತನ್ನ ಸಂಕುಚಿತ ಉದ್ದೇಶವನ್ನು ಈಡೇರಿಸಿಕೊಂಡುಬಿಡುತ್ತದೆ.
ನೀತಿಯ ನಿಖರ ವ್ಯಾಖ್ಯಾನ
ಅಧಿಕಾರರೂಢ ರಾಜಕಾರಣ ಮತ್ತು ಪ್ರತಿಪಕ್ಷಗಳ ರಾಜಕಾರಣ ಇಂಥ ಸಂಕುಚಿತ ಉದ್ದೇಶಗಳನ್ನೇಮುಖ್ಯವಾಗಿಸಿಕೊಳ್ಳುವುದರಿಂದ ದೇಶದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡ ನೀತಿಯ ಕುರಿತಾದ ಸ್ಪಷ್ಟತೆಯನ್ನು ಹೊಂದಿರುವುದಿಲ್ಲ. ನೀತಿಯ ನಿಖರ ವ್ಯಾಖ್ಯಾನವನ್ನು ನೆಚ್ಚಿಕೊಳ್ಳುವುದಿಲ್ಲ. ಯಾವುದೇ ಆಡಳಿತವು ವರ್ತಮಾನಕ್ಕೆ ಸ್ಪಂದಿಸಿ ಭವಿಷ್ಯವನ್ನೂ ಉಜ್ವಲಗೊಳಿಸುವುದಕ್ಕೆ ತನ್ನದೇ ಆದ ನೀತಿ ಮಾದರಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ನೀತಿ ರೂಪಿಸುವ ಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುವ ಆಡಳಿತ ಮತ್ತು ಮೌಲಿಕ ರಾಜಕಾರಣ ಅಸ್ತಿತ್ವದಲ್ಲಿರುವ ಸಮಾಜವು ಸ್ಥಗಿತಗೊಳ್ಳುವುದಿಲ್ಲ. ಅದು ಬದಲಾಗುತ್ತಲೇ ಸಕಾಲಿಕ ನೀತಿಗಳಿಗೆ ಅವಕಾಶಯವೀಯುತ್ತದೆ. ಹೊಸ ಪೀಳಿಗೆಯೂ ನೀತಿನಿರೂಪಣೆಯ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ಚಿಂತನೆಯ ಒರೆಗಲ್ಲಿಗೆ ಹಚ್ಚಿ ಯೋಚಿಸುತ್ತದೆ. ಅದೇ ಚಿಂತನೆಯು ಆಡಳಿತದ್ದೂ ಆಗಬೇಕು ಎಂಬ ನಿರೀಕ್ಷೆಯಲ್ಲಿ ದೇಶದ ಉಜ್ವಲ ಭವಿಷ್ಯಕ್ಕೆ ಬೇಕಾಗುವ ಸಂವಾದದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತದೆ. ಹಾಗಾದಾಗಲೇ ಸರ್ಕಾರ ಮತ್ತು ಪ್ರತಿಪಕ್ಷಗಳವರು ಭಿನ್ನವಾಗಿ ಯೋಚಿಸಲಾರಂಭಿಸುತ್ತಾರೆ. ಬದಲಾವಣೆಯ ಕಡೆಗಿನ ಪ್ರಯಾಣ ಅಧಿಕೃತತೆಯನ್ನು ಪಡೆಯುತ್ತದೆ.
ಹೊಸ ಹಾದಿಯ ನೀತಿಯ ಅಗತ್ಯತೆ
ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣೆ ವೇಳೆ ನಡೆಯುವ ವಿದ್ಯಮಾನಗಳು ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡು ಏರ್ಪಡುವ ಜಗಳ, ಸಂಘರ್ಷಗಳು ಪ್ರಜಾಸತ್ತಾತ್ಮಕವಾದ ನೀತಿ ರೂಪುಗೊಳ್ಳಬಹುದಾದ ಸಂಭಾವ್ಯತೆಯನ್ನೇ ಇಲ್ಲವಾಗಿಸಿಬಿಡುತ್ತವೆ. ದೇಶದ ವಿವಿಧ ವಲಯಗಳಲ್ಲಿ ಆಗಬೇಕಾದ ಬದಲಾವಣೆಗಳೇನೇನು? ಆ ಬದಲಾವಣೆಯು ಯಾವ ಸ್ವರೂಪದ್ದಾಗಿರಬೇಕು? ಮುಂದಿನ ಐವತ್ತು ವರ್ಷಗಳಲ್ಲಿ ಸಮಾಜದ ಗತಿಶೀಲತೆಯ ಸಾಧ್ಯತೆಗಳಿಗೆ ತಕ್ಕಂತೆ ಹೊಸ ಕಾಯ್ದೆಗಳು ರೂಪುಗೊಳ್ಳಬೇಕೇ? ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯವ್ಯಾಪ್ತಿ ಮತ್ತು ಅವುಗಳ ಕಾರ್ಯವೈಖರಿ ಯಾವ ರೀತಿಯಲ್ಲಿ ವಿಮರ್ಶೆಗೊಳಪಡಬೇಕು? ಹೇಗೆ ಅವುಗಳನ್ನು ಬದಲಾವಣೆಯ ಪರಸ್ಪರ ಪೂರಕ ಸಾಂಸ್ಥಿಕ ಶಕ್ತಿಗಳನ್ನಾಗಿ ಮಾರ್ಪಡಿಸಬೇಕು ಎಂಬ ಪ್ರಶ್ನೆಗಳು ಆದ್ಯತಾನುಸಾರ ಚರ್ಚಿಸಲ್ಪಡಬೇಕು. ಹಾಗಾಗುವುದಿಲ್ಲ. ಅದರ ಬದಲು ತಾತ್ಪೂರ್ತಿಕವಾದ, ಸವಕಲು ಎನ್ನಿಸಿರುವ, ಅಪ್ರಸ್ತುತ ಅಭಿಪ್ರಾಯಗಳನ್ನು ರೂಪಿಸುವುದಕ್ಕೇ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತದೆ. ದೇಶದ ಆರ್ಥಿಕತೆ, ಸಾಮಾಜಿಕತೆ, ಶೈಕ್ಷಣಿಕ ವಾಸ್ತವಿಕತೆ, ಮಾನವ ಸಂಪನ್ಮೂಲದ ಆರೋಗ್ಯಕರ ಅಸ್ಮಿತೆ, ಭೌಗೋಳಿಕ ನೈಸರ್ಗಿಕ ವೈಶಿಷ್ಟ್ಯತೆ – ಇವೆಲ್ಲವುಗಳನ್ನು ಸಂವಿಧಾನಿಕ ಆಡಳಿತಾತ್ಮಕ ಅಂಗಗಳು ಗಣನೆಗೆ ತೆಗೆದುಕೊಂಡು ಹೊಸ ಹೆಜ್ಜೆಗಳನ್ನು ಕ್ರಮಿಸುವುದಕ್ಕೆ ಪೂರಕವಾಗುವ ನೀತಿಗಳನ್ನು ರೂಪಿಸಿಕೊಳ್ಳಬೇಕು. ಅಂಥ ವಾತಾವರಣದ ನಿರ್ಮಾಣಕ್ಕೆ ಚುನಾವಣಾಪೂರ್ವ, ಚುನಾವಣಾ ನಂತರದ ಆಡಳಿತಾತ್ಮಕ ಅಧಿಕಾರಾವಧಿಯು ವಿನಿಯೋಗಿಸಲ್ಪಡಬೇಕು.
ರಾಜಕಾರಣದ ನಿರ್ದಯಿ ದಾಹ
ನಿರ್ದಿಷ್ಟ ಆಡಳಿತ ನೀತಿಯು ಅಧಿಕಾರ ರಾಜಕಾರಣದ ನಿರ್ದಯಿ ದಾಹಗಳ ಸೋಂಕನ್ನು ಅಂಟಿಸಿಕೊಳ್ಳಬಾರದು. ಸದ್ಯದಲ್ಲಷ್ಟೇ ಅಲ್ಲದೇ ಯಾವತ್ತೂ ತಾವೇ ಅಧಿಕಾರದಲ್ಲಿರಬೇಕು ಎಂಬ ಹಸಿವು ಸಕಾರಾತ್ಮಕ ಆಲೋಚನಾಕ್ರಮಗಳೊಂದಿಗಿದ್ದರೆ ಸರಿ. ಇಲ್ಲದಿದ್ದರೆ ಆ ಹಸಿವಿಗೆ ಪ್ರಜಾಸತ್ತಾತ್ಮಕ ಅಧಿಕೃತತೆ ದೊರಕುವುದಿಲ್ಲ. ಬದಲಾಗಿ ಆ ಹಸಿವು ಕಂಡವರ ಬದುಕನ್ನು ನಲುಗಿಸುವ, ಎದುರಾಳಿಗಳನ್ನು ಸೃಷ್ಟಿಸಿಕೊಳ್ಳುವ, ಸಂಘರ್ಷಕ್ಕೆ ಕುಮ್ಮಕ್ಕು ನೀಡುವ ವಿಕಾರದದ ಆಯಾಮವನ್ನು ಪಡೆದುಕೊಂಡುಬಿಡುತ್ತದೆ. ಈ ಹಂತದಲ್ಲಿಯೇ ಆಡಳಿತಾತ್ಮಕವಾದ ಸಕಾರತಾತ್ಮಕ ನೀತಿಯೊಂದು ಹುಟ್ಟಿಕೊಳ್ಳುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಪ್ರಭುತ್ವವು ಯಾವುದನ್ನು ಆಡಳಿತ ನೀತಿ ಎಂದುಕೊಳ್ಳುತ್ತದೋ ಅದು ವಾಸ್ತವದಲ್ಲಿ ಕವಲು ಹಾದಿಯನ್ನು ಸಂಕೇತಿಸಿರುತ್ತದೆ. ಇದನ್ನು ಪ್ರಭುತ್ವಕ್ಕೆ ಅರ್ಥಮಾಡಿಸುವ ಪ್ರಯತ್ನಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರತಿಪಕ್ಷ ನಾಯಕರು, ತಜ್ಞರು ಮತ್ತು ಮಾಧ್ಯಮ ಪರಿಣಿತರಿಂದ ಆಗಬೇಕು. ಸಕಾರಾತ್ಮಕವಾದ ನೀತಿಯ ವಿಶಾಲ ಆವರಣವನ್ನು ತೋರ್ಪಡಿಸಬೇಕು.
ಉದ್ದೇಶಪೂರ್ವಕ ತಾಟಸ್ಥ್ಯ
ಆಡಳಿತಾತ್ಮಕ ನೀತಿಯನ್ನು ನಿರ್ದೇಶಿಸುವ ಸ್ಪಷ್ಟ ಮಾನದಂಡಗಳನ್ನು ವಿನ್ಯಾಸಗೊಳಿಸಿಕೊಳ್ಳುವುದರ ಕಡೆಗೆ ಬಹುಮತ ಪಡೆದ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಹಾಗೆ ಆದ್ಯತೆ ನೀಡುವಂಥ ರಚನಾತ್ಮಕ ಸಂವಾದಿ ಆಂದೋಲನವನ್ನು ಪ್ರತಿಪಕ್ಷಗಳೂ ರೂಪಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಅವು ಈ ವಿಷಯದಲ್ಲಿ ತಟಸ್ಥಗೊಳ್ಳುತ್ತವೆ. ಈ ಕಾರಣಕ್ಕಾಗಿಯೇ ದೇಶದ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಸ್ವರೂಪವನ್ನು ಪಡೆದುಕೊಂಡು ಬಿಡಿಸಲಾರದಷ್ಟು ಸಂಕೀರ್ಣಗೊಳ್ಳುತ್ತವೆ. ಒಂದು ಪಕ್ಷ ಅಥವಾ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದ ತಕ್ಷಣ ಸಮಸ್ಯೆಯೊಂದು ಚಿಗುರೊಡೆಯುವ ಕಾಲಕ್ಕೆ ಅದರ ಮುಂದಿನ ಸ್ವರೂಪವನ್ನು ಊಹಿಸಿ ಪರಿಹಾರೋಪಾಯವನ್ನು ನೆಚ್ಚಿಕೊಂಡ ಸಾಂದರ್ಭಿಕವಾದ ಪರ್ಯಾಯ ಚಿಂತನೆ ರೂಪುಗೊಳ್ಳಬೇಕು. ಅದರ ಆಧಾರದಲ್ಲಿಯೇ ಪರಿಹಾರಸೂತ್ರಗಳನ್ನು ಕಂಡುಕೊಳ್ಳಬೇಕು. ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು. ಅವು ಸದ್ಯಕ್ಕಷ್ಟೇ ಅಲ್ಲದೇ ಭವಿಷ್ಯದ ದಿನಗಳಲ್ಲಿಯೂ ಅನುಕೂಲಕರ ಎನ್ನಿಸುವ ಹಾಗೆ ಫ್ಲೆಕ್ಸಿಬಲ್ ಆಗಿರಬೇಕು. ಈ ಸಾಧ್ಯತೆಗಳ ದೂರಗಾಮಿ ಪರಿಣಾಮ ಲೆಕ್ಕಿಸಿಯೇ ಆಡಳಿತ ಕೇಂದ್ರಗಳು ಸಾರ್ವಜನಿಕ ನೀತಿಯನ್ನು ರಚಿಸಿಕೊಳ್ಳಬೇಕಾಗುತ್ತದೆ. ಈಗ ಇದರ ಗೈರು ಹಾಜರಿ ಎದ್ದುಕಾಣುತ್ತಿದೆ. ಇದರಿಂದಾಗಿ ಭಾರತೀಯ ಸಾಮಾಜಿಕತೆಯು ವಿವಿಧ ಸವಾಲುಗಳನ್ನು ಎದುರಿಸುವುದಕ್ಕಾಗಿಯೇ ತನ್ನ ಶಕ್ತಿಯನ್ನು ವ್ಯಯ ಮಾಡಿಕೊಳ್ಳುತ್ತಿದೆ. ಪ್ರಜೆಗಳ ಸಾಮಾಜಿಕತೆ ಮತ್ತು ಮಾನವ ಸಂಪನ್ಮೂಲದ ಸಶಕ್ತತೆಯು ಸಾರ್ವಜನಿಕ ನೀತಿಯ ವ್ಯಾಪ್ತಿಯ ಒಳಗೆ ಅಧಿಕೃತ ಸ್ಥಾನವನ್ನು ಪಡೆಯುತ್ತಲೇ ಇಲ್ಲ. ಈ ದೃಷ್ಟಿಯಿಂದ ಭಾರತದ ಆಡಳಿತಾತ್ಮಕತೆಯು ರಚನಾತ್ಮಕ ಕಾರ್ಯಸೂಚಿಯ ಕಾಯಕಲ್ಪದಿಂದ ವಂಚಿತವಾಗಿದೆ.
ದಿವ್ಯನಿರ್ಲಕ್ಷ್ಯ ಸೃಷ್ಟಿಸುವ ಬಿಕ್ಕಟ್ಟು
ಈ ಕಾರಣಕ್ಕಾಗಿಯೇ ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ, ಕಾಣಿಸಿಕೊಳ್ಳುತ್ತಲೇ ಇರುವ ಸಮಸ್ಯೆಗಳಿಗೆ ಪರಿಹಾರವೇ ಸಾಧ್ಯ ಇಲ್ಲ ಎಂಬ ತಪ್ಪು ಅಭಿಪ್ರಾಯಗಳ ವರ್ತುಲ ಸೃಷ್ಟಿಯಾಗಿದೆ. ಸಮಸ್ಯೆಯೊಂದು ಸೃಷ್ಟಿಯಾದ ತಕ್ಷಣವೇ ಆಡಳಿತವು ಅದರೆಡೆಗಿನ ದಿವ್ಯನಿರ್ಲಕ್ಷ್ಯವನ್ನೇ ತನ್ನ ಅಸ್ತಿತ್ವದ ಮಹತ್ವದ ಗುಣಲಕ್ಷಣವಾಗಿಸಿಕೊಳ್ಳುತ್ತದೆ. ತತ್ಪರಿಣಾಮ ನಿರ್ಲಕ್ಷ್ಯಕ್ಕೀಡಾಗುವ ಸಮಸ್ಯೆಯು ಹಲವು ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ. ಕ್ರಮೇಣ ಜನಸಮುದಾಯವನ್ನು, ತನ್ಮೂಲಕ ಆಡಳಿತದ ವಿವಿಧ ಹಂತಗಳ ಸಹಜ ಕ್ರಿಯೆಯನ್ನು ಮತ್ತಷ್ಟು ಜಡಗೊಳಿಸಿಬಿಡುತ್ತದೆ. ಆಗ ರೈತರ ಆತ್ಮಹತ್ಯೆಯ ಪ್ರಮಾಣ ಹೆಚ್ಚಾದಾಗಲೂ ಆಡಳಿತ ನಿರ್ಲಿಪ್ತತೆಯನ್ನೇ ತನ್ನ ಬಹುದೊಡ್ಡ ಗುಣವಾಗಿಸಿಕೊಳ್ಳುತ್ತದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ನ್ಯಾಯಯುತ ಬೆಲೆ ನಿಗದಿಗೊಳಿಸದೇ ಇದ್ದಾಗ ರೈತ ಸಮುದಾಯ ನಲುಗಿದರೂ ಅದು ನಿರ್ಲಕ್ಷ್ಯ ಧೋರಣೆಯೊಂದಿಗಿನ ಮೌನವನ್ನೇ ಅನುಸರಿಸುತ್ತದೆ. ಜಾತಿ-ಧರ್ಮಗಳ ಸಾಂಪ್ರದಾಯಿಕತೆಯ ಜೊತೆಗೆ ಇಡೀ ಸಮಾಜ ತಳಮಳಕ್ಕೀಡಾದಾಗ ಅದರ ಪ್ರಯೋಜನ ಪಡೆಯುವ ಹುನ್ನಾರದ ಪ್ರಬಲರಿಗೆ ದಾರಿ ಮಾಡಿಕೊಡುತ್ತದೆ. ಹೊಸದೇನನ್ನೂ ಕಲಿಸದೇ ಹಳೆಯದ್ದರ ಆಶ್ರಯದಲ್ಲಿಯೇ ಅಸ್ತಿತ್ವ ಕಂಡುಕೊಳ್ಳಲು ಶಿಕ್ಷಣ ರಂಗವು ಹೆಣಗಾಡುತ್ತಿರುವಾಗಲೂ ಅದನ್ನು ಮತ್ತಷ್ಟು ದುರ್ಬಲಗೊಳಿಸುವುದರ ಕಡೆಗೆ ಅತ್ಯುತ್ಸಾಹ ತೋರುತ್ತದೆ. ಆರೋಗ್ಯ ಕಾಯ್ದುಕೊಳ್ಳಲು ಜನಸಮೂಹಕ್ಕೆ ನೆರವಾಗುವ ಜಾಗೃತಿ ಹೆಜ್ಜೆಗಳ ಬದಲು ದೇಹಗಳನ್ನು ಮತ್ತಷ್ಟು ಜಡಗೊಳಿಸಿ ಮೆಡಿಸಿನ್‍ಗಳಿಗೆ ಒಗ್ಗಿಕೊಳ್ಳುವಂಥ ಮನಸ್ಥಿತಿ ರೂಪಿಸುವ ಔದ್ಯಮಿಕ ಒತ್ತಡಗಳಿಗೆ ಈಡಾಗುತ್ತದೆ. ಈ ಹಂತದಲ್ಲಿಯೇ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮ ಸಾಂಸ್ಥಿಕ ಶಕ್ತಿಯನ್ನು ವಿಸ್ತರಿಸಿಕೊಳ್ಳುವ ಬದಲು ಯಥಾಸ್ಥಿತಿಗಳನ್ನು ಖಾಯಂ ಆಗಿರಿಸುವ ದೌರ್ಬಲ್ಯದ ಮಿತಿಗಳನ್ನು ತಮ್ಮ ಗುಣಗಳನ್ನಾಗಿಸಿಕೊಳ್ಳುತ್ತವೆ.
ಸಮಗ್ರ ನೀತಿಯ ಅಲೆಯ ಪ್ರಾಧಾನ್ಯತೆ
ಆ ದೌರ್ಬಲ್ಯವು ದೇಶದ ಉಜ್ವಲ ಭವಿಷ್ಯದ ಸಂಭಾವ್ಯತೆಯನ್ನು ತಡೆದುಬಿಡುತ್ತದೆ. ಅಲ್ಲದೇ ಪೀಳಿಗೆಗಳನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಮುಂದಿನ ಹೆಜ್ಜೆಗಳ ಬದಲು ಹಿಂದಿನ ಜಡತೆಗೇ ಜೋತುಬೀಳುವ ಅವಲಂಬನೆಯ ಸ್ವಭಾವವನ್ನು ಸಾಮಾಜಿಕವಾಗಿ ನೆಲೆಗೊಳಿಸಿಬಿಡುತ್ತದೆ. ಇಂಥ ಅಪಾಯದಿಂದ ಪಾರಾಗಬೇಕಾದರೆ ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಸ್ಥೆಗಳು, ವಿವಿಧ ಜನವರ್ಗಗಳು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಪ್ರತಿಸ್ಪಂದಿಸುವ ಆಡಳಿತಾತ್ಮಕ ಸಮಗ್ರ ನೀತಿಗಳ ಅವಶ್ಯಕತೆಯನ್ನು ಮನಗಂಡು ಅವುಗಳ ಪರವಾದ ವ್ಯಾಪಕ ಅಲೆಯನ್ನು ನಿರ್ಮಿಸಬೇಕು. ಹಾಗಾದಾಗ ಮಾತ್ರ ಚುನಾವಣೆ ಇರಲಿ, ಇಲ್ಲದಿರಲಿ ಎಲ್ಲರೂ ರಚನಾತ್ಮಕ ನೀತಿಗಳನ್ನು ಗಮನದಲ್ಲಿರಿಸಿಕೊಂಡು ಮೌಲಿಕ ಸಂವಾದ ಏರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅನಗತ್ಯ ವಿವಾದಗಳ ವೈಭವೀಕರಣ ತಾನಾಗಿಯೇ ನಿಂತು ಸಾರ್ವಜನಿಕ ಆಡಳಿತವು ಸಂವಿಧಾನಾತ್ಮಕ ಮೌಲ್ಯವನ್ನು ತಂದುಕೊಳ್ಳುತ್ತದೆ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ


