ರಾಜಕೀಯ
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳ ಅಬ್ಬರ..!
ಒಬ್ಬ ಸಣ್ಣ ಹುಡುಗ. ಅವನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ಕು ಕಲ್ಲುಗಳು. ಆ ಫೋಟೋದೊಂದಿಗೆ ರಾರಾಜಿಸುತ್ತಿರುವ ಸಾಲುಗಳು – ‘ನಾನು ರಾಹುಲ್ ಗಾಂಧಿಯನ್ನು ಭೇಟಿ ಮಾಡಬೇಕಿದೆ’. ಫೇಸ್‍ಬುಕ್‍ನಲ್ಲಿ ಈಚೆಗೆ ಕಾಣಿಸಿಕೊಂಡ ಈ ಚಿತ್ರದೊಂದಿಗಿನ ಸಾಲುಗಳು ಭವಿಷ್ಯದ ಪೀಳಿಗೆಯ ಹೆಜ್ಜೆಗಳು ಏನಾಗಬಹುದು ಎಂಬುದರ ಸ್ಪಷ್ಟ ಸುಳಿವನ್ನು ನೀಡುವಂತೆಯೇ ಇವೆ. ಅವುಗಳು ಹಿಂಸೆಯೊಂದಿಗೇ ಗುರುತಿಸಿಕೊಳ್ಳಬೇಕು ಎಂಬ ಕಾರ್ಯಸೂಚಿಯ ಯಶಸ್ಸಿನ ದ್ಯೋತಕವಾಗಿಯೇ ಕಾಣಿಸುತ್ತಿವೆ. ಅಂಬೆಗಾಲಿಟ್ಟು, ಆ ಹಂತವನ್ನು ದಾಟಿಕೊಂಡು ಇದೀಗ ತಾನೆ ನಡೆಯುವುದನ್ನು ಕಲಿತಿರುವ ಅತ್ಯಂತ ಕಿರಿಯ ವಯಸ್ಸಿನ ಸಣ್ಣ ಹುಡುಗನಿಗೆ ಹಿಂಸೆಯ ಭಾಷೆ, ಪರಿಭಾಷೆ ಮತ್ತು ಸ್ವರೂಪವನ್ನು ಪರಿಚಯಿಸುವ ವಿಚಿತ್ರವಾದ ನಡೆಯೊಂದನ್ನು ಸಂಕೇತಿಸುತ್ತಿವೆ.
ಭ್ರಮಾತ್ಮಕ ಚೌಕಟ್ಟುಗಳು
ನಮ್ಮ ದೃಷ್ಟಿಕೋನಗಳು ಈ ಪರಿ ದುರವಸ್ಥೆ ತಲುಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾದದ್ದಾದರೂ ಏಕೆ? ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಯಿತೇ? ಆ ಉದ್ದೇಶದ ಹಿಂದೆ ಕಾರ್ಯೋನ್ಮುಖವಾಗಿರುವ ಶಕ್ತಿಗಳು ಯಾವುವು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಈ ದೇಶದ ರಾಜಕಾರಣ ಮತ್ತು ಆಡಳಿತ ನೆಚ್ಚಿಕೊಂಡ ಹೊಸದನ್ನು ಬಹುಬೇಗ ಸ್ವೀಕರಿಸದ, ಸ್ವೀಕರಿಸಿದರೂ ನಿರಾಕರಣೆಯ ಭಾವವ ಸಾಂಪ್ರದಾಯಿಕತೆಯ ಚೌಕಟ್ಟುಗಳನ್ನು ಗೊತ್ತುಮಾಡಿಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಭಾರತೀಯ ರಾಜಕಾರಣದ ವಿವಿಧ ಮಗ್ಗಲುಗಳು ಪರಿಚಯವಾಗುವುದರೊಂದಿಗೇ ಅಹಿಂಸೆಯ ಆಲೋಚನಾ ಕ್ರಮಗಳು ಹಿಂಸೆಯ ಸಂಕುಚಿತತೆಯೊಂದಿಗೆ ಮುಖಾಮುಖಿಯಾದ ವಿವಿಧ ಸಂದರ್ಭಗಳ ಚಾರಿತ್ರಿಕ ಹಿನ್ನೆಲೆ ಗಮನಕ್ಕೆ ಬರುತ್ತದೆ. ಅಹಿಂಸೆಯ ಮಾರ್ಗವು ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸಹಾಯಕವಾದ ನಂತರ ಭಾರತೀಯ ಆಡಳಿತ ಅಳವಡಿಸಿಕೊಂಡ ನಿರ್ವಹಣೆಯ ಮಾದರಿಗೆ ಸಂಬಂಧಿಸಿದ ಸಂಗತಿಗಳು ತಿಳಿಯುತ್ತವೆ.
ಸಾರ್ಥಕತೆಯ ಹಾದಿಯ ನೆನಪು
ಬಾಲ್ಯದಲ್ಲಿ ನಮಗೆ ಹಲವು ಮಹನೀಯರ ತ್ಯಾಗದ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಲಭಿಸಿರುವುದನ್ನು ಹಿರಿಯರ ಭಾಷಣಗಳು ಮನವರಿಕೆ ಮಾಡಿಕೊಡುತ್ತಿದ್ದವು. ಗಾಂಧಿ ಸೇರಿದಂತೆ ಹಲವರ ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ್ಯ ನಮ್ಮೊಂದಿಗಿರುವುದನ್ನು ದೃಢೀಕರಿಸುತ್ತಿದ್ದವು. ಆಗ ನಮಗೆ ಹಿಂಸೆಯೇ ಶ್ರೇಷ್ಠ ಎಂಬಂಥ ದಾರಿತಪ್ಪಿಸುವ ದುರ್ಮಾರ್ಗದ ವೈಭವೀಕರಣ ಕಣ್ಣಮುಂದೆ ಬರುತ್ತಲೇ ಇರಲಿಲ್ಲ. ಬದಲಾಗಿ ಎಲ್ಲ ಭಾಷಣಗಳ ಚಿಂತನೆಗಳು ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿಕೊಳ್ಳುವ ಹಾದಿ ಯಾವುದಾಗಿರಬೇಕು ಎಂಬುದನ್ನು ಹೊಳೆಸುವುದರ ಕಡೆಗೇ ಕೇಂದ್ರೀಕೃತವಾಗಿರುತ್ತಿದ್ದವು.ಬಾಲ್ಯದ ಅನುಭವವು ಹಲವು ಪಾಠಗಳನ್ನು ಕಲಿಸುತ್ತಿತ್ತು. ಮಕ್ಕಳು ಹೊಡೆದಾಡಿಕೊಂಡು ಬಂದರೆ ದೊಡ್ಡವರು ಬುದ್ಧಿವಾದ ಹೇಳುತ್ತಿದ್ದರು. ಹೊಡೆದಾಟ ಯಾಕೆ ಸರಿಯಲ್ಲ ಸ್ಪಷ್ಟಪಡಿಸುತ್ತಿದ್ದರು. ಹೊಡೆದವನು ಹೊಡೆತ ತಿಂದವನ ಮುಂದೆ ನಿಂತು ಕ್ಷಮೆ ಕೇಳಬೇಕಾಗುತ್ತಿತ್ತು. ಆ ಕ್ಷಮೆಯ ಪ್ರಸ್ತಾಪದೊಂದಿಗೇ ಇಬ್ಬರ ನಡುವೆ ಸ್ನೇಹ ಮತ್ತೆ ಚಿಗುರೊಡೆಯುತ್ತಿತ್ತು. ಸಣ್ಣ ಭಿನ್ನಾಭಿಪ್ರಾಯದ ಜಾಗವನ್ನು ಆಕ್ರಮಿಸಿಕೊಂಡು ಹೊಡೆದಾಡುವಷ್ಟರ ಮಟ್ಟಿಗೆ ಪ್ರಚೋದಿಸಿದ ದ್ವೇಷದ ದಟ್ಟ ಭಾವನೆಯನ್ನು ಆ ಕ್ಷಣವೇ ಅಳಿಸಿಹಾಕಿಬಿಡುತ್ತಿತ್ತು. ಆಮೇಲಾಮೇಲೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು, ಸಣ್ಣ ಸಣ್ಣ ಜಗಳಗಳು, ಮತ್ತೆ ಒಂದಾಗಿ ಮಾತನಾಡಿಕೊಳ್ಳುವ ಸೊಗಡಿನೊಂದಿಗೇ ಬಾಲ್ಯ ಕಳೆದುಬಿಡುತ್ತಿತ್ತು. ದೊಡ್ಡವರಾಗುತ್ತಿದ್ದಂತೆಯೇ ಸಣ್ಣವರಾಗಿದ್ದಾಗಿನ ಕೆಲವು ಸಣ್ಣತನಗಳ ಪೊರೆಗಳನ್ನು ಕಳಚಿಕೊಳ್ಳುತ್ತಾ ಸಾಗಬೇಕಾಗಿತ್ತು. ಮಕ್ಕಳಾಗಿದ್ದಾಗ ಸಾಧ್ಯವಾಗಿದ್ದ ಈ ವಿವೇಕ ದೊಡ್ಡವರ ಬದುಕಿನೊಳಗೆ ಇಲ್ಲವಾಗುತ್ತದೆ. ಅವಿವೇಕತನದ ಪರಮಾವಧಿಯನ್ನು ಮತ್ತೆ ಮತ್ತೆ ಸಾಬೀತುಪಡಿಸುವ ಹಾಗೆಯೇ ಅವರು ವಿಕೃತಿಗಳೊಂದಿಗೇ ಗುರುತಿಸಿಕೊಳ್ಳುತ್ತಾರೆ. ಈಗಿನ ರಾಜಕಾರಣ ಮತ್ತು ಅದು ಪೋಷಿಸುವ ಆಡಳಿತ ವ್ಯವಸ್ಥೆಯು ಆ ವಿಕೃತಿಗಳನ್ನು ದಟ್ಟವಾಗಿಸುವ ನಕಾರಾತ್ಮಕ ಪಾತ್ರವನ್ನು ಅತ್ಯಂತ ಚಾಣಾಕ್ಷಯುತವಾಗಿ ನಿಭಾಯಿಸುತ್ತಿದೆ.
ಧೀಮಂತಿಕೆಯ ಗೈರುಹಾಜರಿ
ರಾಜಕಾರಣ ಮತ್ತು ಆಡಳಿತ ಒಂದನ್ನೊಂದು ನೆಚ್ಚಿಕೊಂಡಿರುವ ಪರಸ್ಪರ ಪೂರಕವಾದ ಕ್ಷೇತ್ರಗಳು. ಒಂದು ಶಾಸಕಾಂಗಕ್ಕೆ ಬೇಕಾದ ನಾಯಕತ್ವದ ಸಂಪನ್ಮೂಲವನ್ನು ಒದಗಿಸಿಕೊಡುವ ವಲಯವಾದರೆ, ಮತ್ತೊಂದು ಆ ಸಂಪನ್ಮೂಲದ ಆಧಾರದಲ್ಲಿ ಬಹುಮುಖೀ ಪಾತ್ರವನ್ನು ನಿರ್ವಹಿಸುವ ಕ್ರಿಯಾತ್ಮಕ ವ್ಯವಸ್ಥೆ. ಇವೆರಡನ್ನೂ ಪ್ರತಿನಿಧಿಸುವವರು ದೊಡ್ಡವರಾಗಿರಬೇಕು. ಅವರ ದೊಡ್ಡತನವು ಕೇವಲ ವಯಸ್ಸಲ್ಲಷ್ಟೇ ಅಲ್ಲ, ಅವರ ಧೀಮಂತಿಕೆಯ ಮೂಲಕ ಸಾಬೀತಾಗುತ್ತಿರಬೇಕು.ರಾಜಕಾರಣದಲ್ಲಿ ಹಿರಿವಯಸ್ಕ ರಾಜಕಾರಣಿಗಳಿದ್ದಾರೆ. ಆಡಳಿತ ವಲಯದಲ್ಲಿ ಅನುಭವಿ ಅಧಿಕಾರಿಗಳಿದ್ದಾರೆ. ಆದರೆ ಈ ಹಿರಿತನ ಮತ್ತು ಅನುಭವ ಇಡೀ ಸಮಾಜವನ್ನು ಹೊಸ ಹಾದಿಯ ಕಡೆಗೆ ಕೊಂಡೊಯ್ಯುವ ಬದಲು ಹಿಂದಿನ ಅನಾಗರಿಕ ಜಗತ್ತಿನ ಕ್ರೌರ್ಯದ ಕಡೆಗೇ ಹಿಂತಿರುಗಿಸುತ್ತಿದೆಯೇನೋ ಎಂಬ ಆತಂಕ ಆವರಿಸಿಕೊಳ್ಳುತ್ತಿದೆ. ಒಬ್ಬ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯ ಬಗ್ಗೆ ಕೆಟ್ಟದಾಗಿ ಮಾತನಾಡುವಿಕೆ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಭರದಲ್ಲಿ ಹಿಂಸೆಯ ಮನಸ್ಥಿತಿಯನ್ನೇ ಕಾಡಿಸಿಕೊಂಡು ಪ್ರಚೋದಿಸುವ ಬಗೆ – ಇವೆಲ್ಲವೂ ಹಿರಿತನದ ಸಂಕೇತಗಳಾಗುವುದೂ ಇಲ್ಲ. ಅನುಭವ ಶ್ರೇಷ್ಠತೆಯನ್ನೂ ನಿರೂಪಿಸುವುದಿಲ್ಲ.
ನಂಬಿಕೆಯ ನಡಿಗೆ ಮತ್ತು ನಿಜದ ಅರಿವು
ನಂಬಿಕೆಯ ತಂತಿ ಮೇಲಿನ ನಡಿಗೆಯ ಹಾಗೆಯೇ ಸೂಕ್ಷ್ಮಾತಿಸೂಕ್ಷ್ಮ ಸ್ವರೂಪದೊಂದಿಗೆ ಈ ದೇಶದ ಜನರ ತಿಳುವಳಿಕೆಯು ನಿಕಟನಂಟು ಹೊಂದಿದೆ. ಇದು ಅರಿವಿನ ಎತ್ತರ ತಲುಪಿಕೊಳ್ಳುವ ಮುನ್ನವೇ ಇಲ್ಲಿಯ ರಾಜಕಾರಣ ಅವರ ಮನೋಲೋಕವನ್ನುಆವರಿಸಿಕೊಂಡುಬಿಡುತ್ತದೆ. ನಂಬಿಸಿ ಆ ಮೂಲಕ ಸೃಷ್ಟಿಯಾಗುವ ಪರವಾದ ಅಲೆಯ ಮೇಲೆ ಅದು ಯಾವತ್ತೂ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುತ್ತದೆ. ಇಲ್ಲಿಯ ವೈಚಾರಿಕತೆಯು ನಂಬಿಕೆಯೊಂದಿಗೆ ಆರೋಗ್ಯಕರ ಸಂವಾದವನ್ನು ಏರ್ಪಡಿಸಿಕೊಂಡು ಜನಸಮುದಾಯವನ್ನು ಒಂದು ಹೆಜ್ಜೆ ಮುಂದಕ್ಕೆ ಕರೆದೊಯ್ದರೆ, ಅದೇ ನಂಬಿಕೆಯ ಜಗತ್ತನ್ನು ಪ್ರತಿನಿಧಿಸುವ ಧಾರ್ಮಿಕ ಯಜಮಾನಿಕೆಯ ಪ್ರತಿನಿಧಿಗಳು ಮತ್ತು ಅವರೊಂದಿಗೆ ಗುರುತಿಸಿಕೊಂಡ ರಾಜಕೀಯ ಶಕ್ತಿಗಳು ಒಂದು ಹೆಜ್ಜೆ ಹಿಂದಕ್ಕೆ ಕರೆದೊಯ್ಯುತ್ತವೆ.
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳು
ಈಗ ಏನಾಗಿದೆ ಎಂದರೆ ನಮ್ಮನ್ನು ಮುನ್ನಡೆಸುವ ಬೌದ್ಧಿಕ ಚಲನೆಯ ಜಂಗಮ ಶಕ್ತಿಗಳಿಗಿಂತ ನಮ್ಮನ್ನು ಹಿಂದೆಯೇ ಉಳಿಸಿ ತಟಸ್ಥವಾಗಿ ಉಳಿಸಿ ಸ್ಥಾವರಗೊಳಿಸುವ ಧ್ವನಿಗಳ ಅಬ್ಬರದ ಕಡೆಗಿನ ವ್ಯಾಮೋಹವೇ ಸಾಮೂಹಿಕ ಕಾಯಿಲೆಯಾಗಿ ಸಾರ್ವಜನಿಕ ವಲಯದಲ್ಲಿ ಬೇರೂರಿಬಿಟ್ಟಿದೆ. ಈ ಊನದ ಕಾರಣಕ್ಕಾಗಿಯೇ ಅರಿವಿನ ಆಂದೋಲನದ ಬದಲು ಇಲ್ಲೀಗ ಹಿಂಸೆಯ ದೃಷ್ಟಿಕೋನಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿವೆ. ಯಾರೊಳಗೂ ತಿಳಿದುಕೊಳ್ಳುವ ಸಂಯಮವಿಲ್ಲ. ಸಹನೆಯಿಂದ ಯೋಚಿಸುವ ತಾಳ್ಮೆಯಿಲ್ಲ. ತಕ್ಷಣವೇ ಪ್ರತಿಕ್ರಿಯಿಸುವ, ಹಾಗೆ ಪ್ರತಿಕ್ರಿಯಿಸುತ್ತಲೇ ಕ್ರೌರ್ಯ ಮೆರೆಯುವ ಪ್ರಚೋದಕ ಉತ್ಸಾಹ ಎಲ್ಲೆಲ್ಲೂ ಕಂಡುಬರುತ್ತಿದೆ. ಇದರ ಭಾಗವಾಗಿಯೇ ಸಣ್ಣ ಮಗುವಿನ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟು ‘ನಾನು ರಾಹುಲ್ ಗಾಂಧಿಯನ್ನು ಭೇಟಿಯಾಗಲು ಇಚ್ಛಿಸುತ್ತಿದ್ದೇನೆ’ ಎಂಬ ಒಕ್ಕಣೆಯ ಫೋಟೋ ಫೇಸ್‍ಬುಕ್‍ನ ಆವರಣದಲ್ಲಿ ಕಾಣಿಸಿಕೊಳ್ಳುತ್ತದೆ. ದಿಢೀರನೆ ಅದು ಹಂಚಲ್ಪಡುತ್ತದೆ. ನಾಳಿನ ಪೀಳಿಗೆಯನ್ನು ಪ್ರತಿನಿಧಿಸುವ ಪೋರನ ಹಿಂಸಾಪರ ಫೋಟೋಕ್ಕೆ ಅಸಂಖ್ಯಾತ ಲೈಕ್‍ಗಳು ಹರಿದುಬರುತ್ತವೆ. ಇದು ಅರಿವನ್ನು ಎತ್ತರಿಸಿಕೊಳ್ಳುವ ಲಕ್ಷಣವಲ್ಲ. ಬದಲಾಗಿ ಜನರ ಸ್ವಯಂತಿಳುವಳಿಕೆಯ ಶಕ್ತಿಯ ಮೇಲೆ ತಣ್ಣಗೆ ಆಗುವ ಗದಾಪ್ರಹಾರ.
ರೂಢಿಗತ ಸಂಕುಚಿತ ವಿಧಾನ
ನಂಬಿಕೆಯ ಜಗತ್ತು ಆಧ್ಯಾತ್ಮಿಕ ತಾತ್ವಿಕತೆಯ ಪ್ರಖರತೆಯನ್ನು ತೀವ್ರಗೊಳಿಸುವುದು ಒಂದು ಸಾಧ್ಯತೆ. ಆದರೆ, ಇದೇ ಜಗತ್ತು ದೈವಿಕ ಮತ್ತು ಧಾರ್ಮಿಕ ಮೌಢ್ಯವನ್ನು ಪ್ರತಿಷ್ಠಾಪಿಸುವುದಕ್ಕೆ ಸಹಾಯಕವಾಗುತ್ತದೆ. ಅಷ್ಟೇ ಅಲ್ಲ, ರಾಜಕೀಯದ ಸ್ವರೂಪವನ್ನು ನಿರ್ಧರಿಸುವಷ್ಟರ ಮಟ್ಟಿಗೆ ತನ್ನ ಪ್ರಭಾವವನ್ನು ಪ್ರಬಲವಾಗಿ ಬೇರೂರಿಸಿಬಿಡುತ್ತದೆ. ಇದರ ಪರಿಣಾಮವು ಜನರ ಮನೋಧರ್ಮದ ಮೇಲಾಗುತ್ತದೆ. ಅಧಿಕಾರದಲ್ಲಿರುವ ಮತ್ತು ಅಧಿಕಾರದಲ್ಲಿ ಇಲ್ಲದೇ ಇರುವ ನಾಯಕರೆನ್ನಿಸಿಕೊಂಡವರನ್ನು ಗ್ರಹಿಸುವ ಸಂಕುಚಿತ ವಿಧಾನವನ್ನೂ ರೂಢಿಸಿಬಿಡುತ್ತದೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕಿದೆ ಎನ್ನುವ ಪುಟ್ಟ ಪೋರನ ಕೈಯಲ್ಲಿನ ದೊಡ್ಡ ದೊಡ್ಡ ಕಲ್ಲುಗಳ ಫೋಟೋ ಈ ವಿಧಾನ ಎಂಥದ್ದು ಎಂಬುದನ್ನು ನಿರೂಪಿಸಿದೆ. ಲೋಕಸಭೆಯಲ್ಲಿ ನಿರರ್ಗಳವಾಗಿ ಮಾತನಾಡಿ ಭಾಷಿಕ ಪ್ರೌಢಿಮೆ ಮೆರೆದು ಅಧಿಕಾರದಲ್ಲಿರುವವರ ಊನಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ನಡೆಯನ್ನು ಪ್ರದರ್ಶಿಸುವವರು ಉತ್ತಮ ಸಂಸದೀಯ ಪಟು ಎಂಬ ಹಿರಿಮೆ ಪಾತ್ರರಾಗುವ ಪರಂಪರೆ ಇದೆ. ಆದರೆ, ಇದಕ್ಕೆ ತದ್ವಿರುದ್ಧವಾದ ನಡೆಗಳೊಂದಿಗಿನ ಹೀನ ಸಂಪ್ರದಾಯವನ್ನು ರಾಜಕಾರಣಿಗಳು ಈಗಾಗಲೇ ಆರಂಭಿಸಿಬಿಟ್ಟಿದ್ದಾರೆ. ಅಷ್ಟಕ್ಕೇ ಅವರು ಸಮಾಧಾನಗೊಳ್ಳದೇ, ಸಾಮಾಜಿಕ ಜಾಲತಾಣಗಳ ವೇದಿಕೆಯ ತಾರ್ಕಿಕ ಸಾಧ್ಯತೆಗಳ ಆಯಾಮಕ್ಕೇ ಧಕ್ಕೆಯೊದಗಿಸುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸದ್ಯದ ಮತ್ತು ಭವಿಷ್ಯದ ಹಿಂಸಾಪ್ರವೃತ್ತಿಗಳ ವಾತಾವರಣ ಸೃಷ್ಟಿಗೆ ಹೊಸ ಪೀಳಿಗೆಯ ಎಳೆ ಜೀವಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಿಂಬಗಳು ನಕಾರಾತ್ಮಕ ಸಂದೇಶವನ್ನು ಸಾರುತ್ತಿವೆ.
ದ್ವೇಷದ ವಿಷ
ಒಬ್ಬರನ್ನೊಬ್ಬರು ಹಿಂಸಿಸಿಕೊಳ್ಳುವ, ದ್ವೇಷ ಸಾಧಿಸುವ, ಆ ಮೂಲಕ ನೆಮ್ಮದಿಯನ್ನು ತಂದುಕೊಳ್ಳುವ ಭ್ರಮಾತ್ಮಕತೆಯೇ ಶ್ರೇಷ್ಠ ಎಂದು ನಂಬಿಸುವ ಆಟ ಈಗೀಗ ಅಧಿಕೃತತೆಯನ್ನು ಪಡೆದುಕೊಂಡಿದೆ. ಈ ಆಟದ ಓಟವು ಹಲವು ಜೀವಗಳ ಬಲಿಬೇಡುತ್ತದೆ ಎಂಬ ಸತ್ಯದ ಕಡೆಗೆ ಯಾರ ಗಮನವೂ ಇಲ್ಲ. ಅದು ನಮ್ಮನ್ನು ಯಾವ ಕೂಪಕ್ಕೆ ತಳ್ಳುತ್ತದೆ ಎಂಬ ಪರಿಜ್ಞಾನವಿಲ್ಲದೇ ದ್ವೇಷಕ್ಕೆ ಮನಸ್ಸನ್ನು ತಿರುಗಿಸಿಕೊಳ್ಳುವ ರಣೋತ್ಸಾಹವು ಪೀಳಿಗೆಯನ್ನು ಸರ್ವನಾಶದ ಕಡೆಗೆ ಕೊಂಡೊಯ್ಯುತ್ತಿದೆ. ನಮ್ಮ ನಾಯಕರ ಕುರಿತು ಅಸಮಾಧಾನಗೊಳ್ಳುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಆ ಮೂಲಕ ಅವರು ನಮ್ಮ ಅಗತ್ಯಗಳೇನೇನು ಎಂಬುದರ ಬಗ್ಗೆ ಆಲೋಚಿಸುವಂತೆ ಒತ್ತಡ ಹಾಕುವುದರ ಬದಲು ವಿರೋಧ ಪಕ್ಷಗಳವರ ಬಗ್ಗೆ ದ್ವೇಷ ಹುಟ್ಟುಹಾಕುವಂಥ ವಿಷದ ಬೀಜಗಳನ್ನು ಬಿತ್ತುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳ ಮೂಲಕ ಮುನ್ನೆಲೆಗೆ ಬರುತ್ತಿರುವುದು ಭವಿಷ್ಯದ ಕರಾಳತೆಯ ಬಗ್ಗೆ ಮುನ್ಸೂಚನೆ ನೀಡುತ್ತಿವೆ.
ನಮಗೆ ಅಧಿಕಾರದಲ್ಲಿರುವವರೂ ಮುಖ್ಯ. ಅವರನ್ನು ಪ್ರಶ್ನಿಸುವ ವಿರೋಧ ಪಕ್ಷಗಳವರೂ ಮುಖ್ಯ. ಜೊತೆಗೆ ತಾರ್ಕಿಕವಾಗಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ವೈಚಾರಿಕ ಚಿಂತಕರೂ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ಈ ಮೂರೂ ವಲಯಗಳವರನ್ನೂ ಪರಸ್ಪರ ದ್ವೇಷದ ನೆಲೆಗಳಲ್ಲಿ ನೋಡುವಂತೆ ಪ್ರಚೋದಿಸುವ ಸಣ್ಣತನದ ರಾಜಕಾರಣ ತನ್ನ ವ್ಯತಿರಿಕ್ತತೆಯನ್ನು ಈಗಾಗಲೇ ಪ್ರದರ್ಶಿಸುತ್ತಿದೆ. ಅಧಿಕಾರ, ಹಣ ಮತ್ತು ಅದಕ್ಕನುಗುಣವಾದ ಎಲ್ಲ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವುದರಲ್ಲಿ ಒಂದಾಗುವ ಅಧಿಕಾರರೂಢರು ಮತ್ತು ವಿರೋಧ ಪಕ್ಷಗಳವರಿಗೆ ನಾವು ಸ್ಪಷ್ಟ ಸಂದೇಶ ರವಾನಿಸಬೇಕಿದೆ. ನೀವಿಬ್ಬರೂ ಈ ದೇಶದ ನಿಜವಾದ ಬೆಳವಣಿಗೆಯ ಬಗ್ಗೆ ಆಲೋಚಿಸಿ ಎಂದು ದಿಟ್ಟವಾಗಿ ಕಿವಿಮಾತು ಹೇಳಬೇಕಿದೆ. ಒಬ್ಬರಿಗೊಬ್ಬರು ಹೇಳಿಕೆಗಳ ಮೂಲಕ ಕಚ್ಚಾಡುತ್ತಾ, ಆ ಮೂಲಕವೇ ಹಿಂಸೆಗೆ ಪ್ರಚೋದನೆ ನೀಡುತ್ತಾ, ಬೀದಿಬದಿಯಲ್ಲಿ ಅಮಾಯಕ ಜೀವಗಳ ಮಾರಣಹೋಮಕ್ಕೆ ಕಾರಣವಾಗುವ ರಾಜಕೀಯ ಪ್ರವೃತ್ತಿಗಳನ್ನು ಗಟ್ಟಿದನಿಯಲ್ಲಿ ಖಂಡಿಸಬೇಕಿದೆ. ಹಾಗಾಗದಿದ್ದರೆ ನಮ್ಮ ದೇಶ ಮಹಾನ್ ಆಗುವುದಿಲ್ಲ. ಸಮೃದ್ಧ ಭಾರತದ ಕನಸುಗಳೂ ಸಾಕಾರಗೊಳ್ಳುವುದಿಲ್ಲ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್‌ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್‌ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್‌ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್‌ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ22 hours agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


