ನೆಲದನಿ
ನುಡಿಯ ಒಡಲು – 02 : ಕನ್ನಡವೇ ಸತ್ಯ ಕನ್ನಡವೇ ನಿತ್ಯ..?
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮುನ್ನೋಟ
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬೀ ಕವಿಯ ಮಾತುಗಳು ಬಹುದಿನದಿಂದ ನನ್ನನ್ನು ಕಾಡುತ್ತಿರುವ ಮತ್ತು ಮತ್ತೆ ಮತ್ತೆ ಕೆದಕುತ್ತಿರುವ ಮಾತುಗಳಾಗಿವೆ. ಕನ್ನಡ ನುಡಿ, ಸಂಸ್ಕøತಿ ಕುರಿತು ಕುವೆಂಪು ಅವರಿಗೆ ಇರುವ ನಂಬಿಕೆಯ ಬಗೆಗೆ ನನಗೆ ಯಾವುದೇ ಅನುಮಾನವಿಲ್ಲ.
ಇಪ್ಪತ್ತನೇ ಶತಮಾನದಲ್ಲಿ ಕರ್ನಾಟಕದ ಸಮೂಹಗಳಲ್ಲಿ ಒಂದು ವೈಚಾರಿಕ ತಿರುವನ್ನು ಕಾಣುವುದಾದರೆ, ಅದು ಮೊದಲು ನೆಲೆ ಪಡೆದುಕೊಂಡಿದ್ದು ಕುವೆಂಪು ಅವರ ಬರಹಗಳಲ್ಲಿ ಮಾತ್ರ. ಆದರೆ ಅವರು ತಮ್ಮೀ ಹಾಡಿನಲ್ಲಿ ಬಳಸಿಕೊಂಡಿರುವ ಸತ್ಯ ಮತ್ತು ನಿತ್ಯ ಎಂಬೆರಡೂ ಪದಗಳು ನುಡಿಯರಿಮೆಯ ವಿದ್ಯಾರ್ಥಿಯೊಬ್ಬನನ್ನು ಏಕೆ ಕೆಣಕುತ್ತಿವೆ ಹಾಗೂ ಅಣಕಿಸುತ್ತವೆ ಎಂಬುದನ್ನು ಚರ್ಚಿಸಬೇಕಿದೆ.
ಹೌದು, ಈ ಪದಗಳ ಮೂಲಕ ಕನ್ನಡ ನುಡಿ ಮತ್ತು ಕನ್ನಡ ಮಾತ್ನಾಡುವ ಸಮೂಹಗಳ ನಡುವಣ ನಂಟಸ್ತಿಕೆಯ ದಿಟ ಚಹರೆಗಳನ್ನು ಕಂಡರಿಸುವ ಉದ್ದೇಶವನ್ನು ಕುವೆಂಪು ಅವರಲ್ಲಿ ಕಾಣುತ್ತೇವೆ. ಆದಾಗ್ಯೂ ಈ ಎರಡೂ ಪದಗಳ ಬಗೆಗಿರುವ ನನ್ನ ಅನುಮಾನದಲ್ಲಿ ಯಾವುದೇ ವ್ಯತ್ಯಾಸವನ್ನು ಇಲ್ಲಿ ಗುರುತಿಸಲು ಆಗುವುದಿಲ್ಲ.
ಏಕೆಂದರೆ ಸತ್ಯ ಮತ್ತು ನಿತ್ಯ ಎಂಬೀ ಪದಗಳು ಕನ್ನಡವನ್ನೇ ನಂಬಿ ಬದುಕಿತ್ತಿರುವ ಜನಸಮೂಹಗಳ ಪದಕೋಶದಲ್ಲಿ ನೆಲೆನಿಂತು, ಅವರ ಬದುಕಿನ ವಿನ್ಯಾಸಗಳನ್ನು ವಿವರಿಸುವ ಪರಿಕರಗಳಾಗಿ ಈ ಪದಗಳು ಯಾವ ಕಾಲಕ್ಕೂ ಬಳಕೆಯಾಗಿರುವುದನ್ನು ನೋಡಲು ಆಗುವುದಿಲ್ಲ. ಇರಲಿ ಕುವೆಂಪು ಅವರ ನುಡಿ ಬಗೆಗಿನ ನಿಲುವುಗಳನ್ನು ಕುರಿತು ಒಂದಿಷ್ಟು ಚರ್ಚೆಗಳನ್ನು ಬೆಳೆಸಿ, ನಂತರ ಸತ್ಯ ಮತ್ತು ನಿತ್ಯ ಪದಗಳ ಬಗೆಗಿನ ನನ್ನ ತಕರಾರುಗಳನ್ನು ಕುರಿತು ಮಾತ್ನಾಡುತ್ತೇನೆ.
ಜನ ಬದುಕಲೆಂದೆ ಹಾಡು..!
“ಜನ ಬದುಕಲೆಂದೆ ಹಾಡು…..” ಎಂಬ ತತ್ವವನ್ನು ನಂಬಿ ಬರೆದ ಕುವೆಂಪು ಅವರು, ಈ ಎರಡೂ ಪದಗಳನ್ನು ಜನರ ಬದುಕಿನ ಸೂಚಕಗಳನ್ನಾಗಿ ಕಾಣಿಸುವ ಇರಾದೆಯಿಂದಲೇ ಬಳಸಿರುತ್ತಾರೆ. ಆದರೆ ಈ ಪದಗಳಿಗೆ ಅಂಟಿದ ಪರಂಪರೆಯ ಸೋಂಕಿನಿಂದ ಇವುಗಳಿಗೆ ಇವತ್ತಿಗೂ ಪಾರಾಗಲು ಸಾಧ್ಯವಾಗಿಲ್ಲ. ಅಂದರೆ ಈ ಪದಗಳ ಸೂಚಿತ ನೆಲೆಗಳು ಈ ಹೊತ್ತಿಗೂ ಸಾಮಾಜಿಕ ಬೇರೆತನವನ್ನೇ [ಸೋಶಿಯಲ್ ಏಲಿನೇಶನ್] ನೆಲೆಗೊಳಿಸುವ ಹುನ್ನಾರವನ್ನು ಮಾಡುತ್ತಿವೆ.
ಪದಗಳಲ್ಲಿ ಹೀಗೆ ಅಂತರ್ನಿತವಾಗಿರುವ ಆಯಾ ಪರಂಪರೆಯ ಸಾಮಾಜಿಕ ನಿಲುವುಗಳು ಸಮೂಹಗಳ ಸಾಂಸ್ಕøತಿಕ ಸೀಳುಗಳಿಗೆ ಕಾರಣವಾಗುತ್ತವೆ. ಅನಾದಿ ಕಾಲದಿಂದಲೂ ಸಮುದಾಯಗಳ ಒಳಗೆ ಹುದುಗಿರುವ ಇಂತಹ ಹುನ್ನಾರಗಳ ವಿನ್ಯಾಸವನ್ನು ಅತ್ಯಂತ ನಿಚ್ಚಳವಾಗಿ ತಮ್ಮ ಒಟ್ಟು ಬರಹಗಳಲ್ಲಿ ಕುವೆಂಪು ಅವರು ತೋರಿಸಿಕೊಟ್ಟಿರುವವರು. ಹಾಗಾಗಿ ನಿತ್ಯ ಮತ್ತು ಸತ್ಯ ಪದಗಳು ಪ್ರತಿನಿಧಿಸುವ ಯಾವುದೇ ಬಗೆಯ ಸಾಮಾಜಿಕ ಯಜಮಾನಿಕೆ ಮತ್ತು ಸಾಂಸ್ಕøತಿಕ ರಾಜಕೀಯ ಹುನ್ನಾರಕ್ಕೆ ಕುವೆಂಪು ಅವರು ಕಾರಣವಲ್ಲ.
ಇಂತಹ ವಿನ್ಯಾಸಗಳನ್ನು ನಿರಚನಗೊಳಿಸುವ ಬಗೆಯೇ ಕುವೆಂಪು ಅವರ ಸಾಹಿತ್ಯದ ಗುರಿಯಾಗಿದೆ. ಆದರೆ ಕನ್ನಡ ನುಡಿಯು ರೂಪಿಸಿಕೊಂಡ ಪದಕೋಶ ಹಾಗೂ ತಿರುಳಿನ ಸಾಮಾಜಿಕ ಚೌಕಟ್ಟುಗಳು ಮಾತ್ರ ಜನಪರವಾದ ನಿಲುವುಗಳನ್ನು ಯಾವತ್ತಿಗೂ ಪಡೆದುಕೊಳ್ಳಲಿಲ್ಲ. ಸಮೂಹಗಳ ಬಗೆಗೆ ಕಾಳಜಿಯನ್ನು ಹೊಂದಿರುವವರು, ಜನಪರವಾದ ತುಡಿತವನ್ನು ಮಾತ್ರ ನಟಿಸುವ ಹುನ್ನಾರವನ್ನು ಮಾಡಿದರೇ ಹೊರತು, ಕನ್ನಡದ ಅಸ್ತಿತ್ವದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವುದು ಇವರಾರಿಗೂ ಮುಖ್ಯವಾಗಲಿಲ್ಲ.
ಅದಕ್ಕಾಗಿಯೇ, ಕನ್ನಡ ನುಡಿಯ ಪದಕೋಶ ಮತ್ತು ಸಮುದಾಯಗಳ ನಡುವಣ ಬಿಕ್ಕಟ್ಟುಗಳನ್ನು ಬಗೆಹರಿಸುವ ತುಡಿತದಿಂದ ಕುವೆಂಪು ಅವರು ಭಾಷಿಕ ಎಲ್ಲೆಗಳನ್ನು ಮೀರಿ ಹೊಸಗನ್ನಡದ ಪದಕೋಶವನ್ನು ರೂಪಿಸಿರುವುದನ್ನು ನೋಡಬಹುದು. ಇಂತಹ ಭಾಷಿಕ ಪ್ರಕ್ರಿಯೆಯಲ್ಲಿ ಕುವೆಂಪು ಅವರ ನಿಗಾಯಿರುವುದು ಕೇವಲ ಕನ್ನಡನುಡಿ ಚಹರೆಗಳನ್ನು ನೆಲೆಗೊಳ್ಳಿಸುವುದು ಮಾತ್ರವಲ್ಲ.
ಬದಲಾಗಿ ಕನ್ನಡ ನುಡಿ ಸಮೂಹಗಳಿಗೆ ಬೇಕಿರುವ ಜ್ಞಾನಶಿಸ್ತೀಯ [ಎಪಿಸ್ಟಿಮಾಲಜಿ] ನೆಲೆಗಳನ್ನು ಕನ್ನಡದ ಮೂಲಕವೇ ಸಜ್ಜುಗೊಳಿಸುವ ಬಗೆಗಳನ್ನು ಹುಟ್ಟು ಹಾಕುವುದಾಗಿತ್ತು. ಹಾಗಾಗಿಯೇ ಇವರು ತಮ್ಮ ಸಾಹಿತ್ಯದ ನಿರೂಪಣೆಯಲ್ಲಿ ಹಲವು ಬಗೆಯ ಪರಿಭಾಷೆಗಳನ್ನು [ರೆಜಿಸ್ಟರ್ಸ್] ರೂಪಿಸಿಕೊಂಡು ಬಳಸಿದರು. ಕಾಲ ದೇಶಗಳ ಹಂಗು ಮೀರಿದ ಕನ್ನಡದ ಪದಕೋಶ ಮತ್ತು ಪದಕಟ್ಟೋಣವನ್ನು ಕುವೆಂಪು ಅವರಲ್ಲಿ ಕಾಣಬಹುದು.
ಹಾಗಾಗಿ ಹಳಗನ್ನಡ, ಒಳನುಡಿ, ಕನ್ನಡ ರಚನೆಯೊಳಗೆ ಸಂಸ್ಕøತ ರೂಪಗಳನ್ನು ಬಳಸಿಕೊಂಡದ್ದು [ಇಂತಹ ಪ್ರಯೋಗಗಳನ್ನು ಸಂಸ್ಕ್ರುತಭೂವಿಷ್ಠವೆಂದೂ ಆರೋಪಿಸಲಾಗುತ್ತದೆ] ಮುಂತಾದ ಬಗೆಗಳಲ್ಲಿ ಇವರ ನುಡಿ ನಿರೂಪಣೆಗಳಲ್ಲಿ ನೋಡಬಹುದು. ಇದು ಕೇವಲ ಸಾಹಿತ್ಯ ಸೃಷ್ಟಿಯಲ್ಲಿ ನಡೆದ ಪ್ರಾಯೋಗಿಕ ನೆಲೆ ಮಾತ್ರವಲ್ಲ. ನುಡಿಯೊಂದರ ದಿಟ ಕಸುವನ್ನು ಬಳಸಿಕೊಂಡು ಜ್ಞಾನಶಿಸ್ತುಗಳನ್ನು ಕಟ್ಟುವ ಬಗೆಗಳನ್ನು ರುಜುಪಡಿಸುವ ರೀತಿಯಾಗಿದೆ.
ಕುವೆಂಪು ಅವರಿಗೆ ಪದಗಳು ಕೇವಲ ಪದಗಳಲ್ಲ, ಅವುಗಳನ್ನು ಪರಿಕಲ್ಪನೆಗಳನ್ನಾಗಿ ಹಾಗೂ ಸಾಂಸ್ಕøತಿಕ ವಿದ್ಯಮಾನದ ಸೂಚಕಗಳನ್ನಾಗಿ ಬಳಸುತ್ತಾರೆ. ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂಬ ಕುವೆಂಪು ಅವರ ಭಾಷಿಕ ಪರಿಕಲ್ಪನೆಗಳೇ ಇದಕ್ಕೆ ಸಾಕ್ಷಿಯಾಗಿವೆ.
ಕುವೆಂಪು ಅವರ ಕನ್ನಡತನ
ಕುವೆಂಪು ಅವರ ಕಣ್ನೋಟದಲ್ಲಿ ಕನ್ನಡತನ ಎಂಬುದು ಕೇವಲ ನುಡಿ ಬಗೆಗಿನ ಒಲವು ಮಾತ್ರವಲ್ಲ. ದೇಶ ಕಾಲಗಳ ಹಂಗು ಮೀರಿ ಕರ್ನಾಟಕದ ಸಮೂಹಗಳ ಬದುಕಿನ ಒಟ್ಟು ವಿನ್ಯಾಸವನ್ನು ನಿರಂತರಗೊಳಿಸುವ ಬಗೆಯೇ ಕನ್ನಡತನವಾಗಿದೆ. ಬದುಕಿನ ಎಲ್ಲಾ ವಲಯಗಳಲ್ಲಿ ನಡೆಯುವ ಕ್ರಿಯೆ ಮತ್ತು ಪ್ರಕ್ರಿಯೆಗಳು ಕನ್ನಡದ ಮೂಲಕ ನೆಲೆಪಡೆಯುವ ಬಗೆಯೂ ಇದಾಗಿರುತ್ತದೆ.
ಅಂದರೆ ಸಾಮಾಜಿಕ-ಮಾನಸಿಕ ಗ್ರಹಿಕೆಯ ಮಾದರಿಗಳು ರೂಪುಗೊಳ್ಳುವುದು ನುಡಿಯ ಮೂಲಕ. ಕನ್ನಡವನ್ನೆ ನೆಮ್ಮಿ ಬದುಕುವ ಕರ್ನಾಟಕದ ಸಮೂಹಗಳ ಈ ಮಾದರಿಗಳು ಕನ್ನಡದ ಮೂಲಕವೇ ಅಸ್ತಿತ್ವಕ್ಕೆ ಬರುತ್ತವೆ. ಬದುಕು ಮತ್ತು ನುಡಿಯ ನಡುವಣ ಹೊಂದಾಣಿಕೆಯ ಈ ವಿನ್ಯಾಸಗಳನ್ನೇ ಕನ್ನಡತನ ಎಂದು ಹೇಳಬಹುದು. ಈ ಬಗೆಯ ಕನ್ನಡತನದ ಚಹರೆಗಳು ನೆಲೆನಿಲ್ಲುವ ಸ್ವರೂಪವನ್ನು ಕುವೆಂಪು ಅವರು ಸತ್ಯ ಮತ್ತು ನಿತ್ಯ ಎಂಬ ಪರಿಕಲ್ಪನೆಗಳ ಮೂಲಕ ನಿಚ್ಚಳಗೊಳಿಸಿದ್ದಾರೆ.
ಇಪ್ಪತ್ತನೆಯ ಶತಮಾನದಲ್ಲಿ ಕನ್ನಡವನ್ನು ಒಂದು ಸಾಂಸ್ಕøತಿಕ ವಿದ್ಯಮಾನವನ್ನಾಗಿ ರೂಪಿಸುವಲ್ಲಿ ಕುವೆಂಪು ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಕನ್ನಡ ಜಗತ್ತನ್ನು ಮುನ್ನೆಡೆಸುವ ಹೊಣೆಯನ್ನು ಹೊತ್ತವರು, ಕುವೆಂಪು ಅವರು ನಿಲುವುಗಳನ್ನು ಪರಿಗಣಿಸಲೆಯಿಲ್ಲ. ನುಡಿ ಬಗೆಗಿನ ಕುವೆಂಪು ಅವರ ನಿಲುವುಗಳನ್ನು ಕೇವಲ ಸಾಹಿತ್ಯಕ ಪ್ರಯೋಗಗಳನ್ನಾಗಿ ಗುರುತಿಸಲಾಗಿದೆ. ಇಂತಹ ಪ್ರಯೋಗಗಳನ್ನು ಬಹುತೇಕವಾಗಿ ನೆಗಟಿವ್ ನಿಲುವುಗಳನ್ನಾಗಿಯೇ ಆ ಹೊತ್ತಿನ ಕನ್ನಡ ತಿಳಿವಿನ ಲೋಕ ಪರಿಗಣಿಸಿರುವುದನ್ನು ಇಲ್ಲಿ ಗಮನಿಸಬಹುದು.
ಕನ್ನಡದ ಬೆಳವಣಿಗೆ ಇಲ್ಲವೇ ಏಳ್ಗೆ ಎಂಬುದನ್ನು ಒಂದು ಭಾವನಾತ್ಮಕ ನೆಲೆಯನ್ನಾಗಿಸುವುದೇ ಕನ್ನಡತನದ ನಿಲುವಾಗಿತ್ತು. ಕನ್ನಡತನವೆನ್ನುವುದು ಭಾವನೆಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ ಅದು ಬದುಕಿಗೆ ಸಂಬಂಧಿಸಿದ ವಿದ್ಯಮಾನವಾಗಿದೆ. ಅಂದರೆ ಬದುಕನ್ನು ನಿರ್ವಹಿಸುವ ಬಗೆಗಗಳು ಆಯಾ ಸಮುದಾಯದ ಒಡಲಲ್ಲಿ ಹುದುಗಿರುತ್ತವೆ. ಇಂತಹ ರಾಚನಿಕ ಸಂಗತಿಗಳನ್ನು ಅಯಾ ಸಮೂಹಗಳ ನುಡಿಯು ಜೋಪಾನ ಮಾಡಿಕೊಂಡು ಬಂದಿರುತ್ತದೆ. ಆಯಾ ಸಮುದಾಯಗಳ ನುಡಿ ಬೆಳವಣಿಗೆಯೇ, ಅವರವರ ಬದುಕಿನ ಏಳ್ಗೆಯನ್ನು ಸೂಚಿಸುವ ಸೂಚಕವಾಗಿರುತ್ತದೆ.
ಕನ್ನಡ ನುಡಿಯು ಹಲವು ಶತಮಾನಗಳಿಂದ ಎಷ್ಟೊಂದು ತಲೆಮಾರುಗಳ ಬದುಕುಗಳನ್ನು ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ನೆನಪಿಸಿಕೊಂಡರೆ, ಕನ್ನಡ ಜಗತ್ತಿನ ವಿವೇಕದ ಹರವು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ವಿವೇಕದ ನಿರಂತರತೆ, ಬೆಳವಣಿಗೆ ಮತ್ತು ಬದುಕಿನ ಬಹುಳತೆಯ ಮಾದರಿಗಳನ್ನು ಮುನ್ನೆಡೆಸಿಕೊಂಡು, ಆಯಾ ಹೊತ್ತಿನ ಬಾಳಿಗೆ ಬೇಕಾಗುವ ಎಲ್ಲ ರೀತಿಯ ಅಗತ್ಯಗಳನ್ನು ಪೊರೈಸಿಕೊಳ್ಳುವುದೆ ಕನ್ನಡತನವಾಗಿದೆ.
ಜನರ ಇಂತಹ ನಿಲುವುಗಳನ್ನೆ ಸಾಕಾರಗೊಳಿಸುವ ನುಡಿಯಾಗಿರುವ ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯವೆಂದು ಕುವೆಂಪು ಅವರು ಹೇಳಿರುವರು. ಇದನ್ನು ಕೇವಲ ಒಂದು ರಾಜಕೀಯ ಸ್ಲೋಗನ್ನಿನ ನೆಲೆಗೆ ತಂದಿರಿಸಲಾಗಿದೆ. ಇದೊಂದು ಚಾರಿತ್ರಿಕ ವಿಪರ್ಯಾಸವೇ ಸರಿ. ಕುವೆಂಪು ಮಂಡಿಸುವ ಕನ್ನಡತನದ ಈ ನಿಲುವುಗಳನ್ನು ಬರೀ ಹುಸಿಕಲ್ಪನೆಗಳನ್ನಾಗಿ ಬಿಂಬಿಸಲಾಗಿದೆ. ಹಾಗಾಗಿಯೇ ಇಂಗ್ಲಿಶು ಮತ್ತು ಸಂಸ್ಕøತ ನುಡಿಗಳು ಕನ್ನಡ ನುಡಿ ಸಮುದಾಯದೊಳಗೆ ಹೆಚ್ಚು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆ.
ಈ ನುಡಿಗಳ ಎದುರಿಗೆ ಕನ್ನಡದ ಕಸುವು ಮತ್ತು ಚಲನಶೀಲತೆಯನ್ನು ಕುಂದಿಸುವ ಹುನ್ನಾರವು ಇದಾಗಿದೆ. ಕನ್ನಡವೆಂದರೆ ಅದೊಂದು ಪಾಳುಬಿದ್ದ ನೆಲ ಎನ್ನುವ ಧೋರಣೆಗೂ ಈ ಹುನ್ನಾರವು ಕಾರಣವಾಗುತ್ತದೆ. ಕನ್ನಡವನ್ನೇ ನೆಮ್ಮಿದ ಸಮೂಹಗಳು ಒಂದು ಬಗೆಯ ಅತಂತ್ರ ನೆಲೆಗೆ ಸಿಕ್ಕುಬಿದ್ದು ನರಳುತ್ತವೆ. ಶಿಕ್ಷಣ ಮಾಧ್ಯಮ ಕುರಿತಾದ ನಿಲುವುಗಳನ್ನು ನಿಗಾಯಿಟ್ಟು ಪತ್ತೆಹಚ್ಚಿದರೆ ಇಂತಹವೇ ಕಾರಣಗಳು ಅಲ್ಲಿ ಮುಂಚೂಣೆಯಲ್ಲಿರುತ್ತವೆ. ಏಕೆಂದರೆ ಕನ್ನಡದ ಬಗೆಗಿನ ಅಪನಂಬಿಕೆಯನ್ನು ಈ ನಿಲುವುಗಳು ಮತ್ತಷ್ಟು ತೀವ್ರಗೊಳಿಸುತ್ತವೆ.
ಆದ್ದರಿಂದ ಕನ್ನಡಿಗರಿಗೆ ಮಾಧ್ಯಮದ ಪ್ರಶ್ನೆ ಎದುರಾದಗೆಲ್ಲ, ಕನ್ನಡ ಮತ್ತು ಇಂಗ್ಲಿಶು ನುಡಿಗಳ ನಡುವೆ ಹೋಲಿಕೆ ಇರುತ್ತದೆ. ಈ ಹೋಲಿಕೆಯಲ್ಲಿ ಇಂಗ್ಲಿಶು ಯಾವತ್ತಿಗೂ ಗೆಲ್ಲುವ ಕುದುರೆಯಾಗಿಯೇ ಕಾಣುತ್ತದೆ. ಸಹಜವಾಗಿ ಕನ್ನಡವೆಂದರೆ ಅದೊಂದು ಊನಗೊಂಡ ಕುದುರೆಯಾಗಿ ತೋರುತ್ತದೆ. ಈ ಕಾರಣಗಳಿಗಾಗಿಯೇ ಕನ್ನಡವೆನ್ನುವುದು ನಮ್ಮ ಸಮೂಹಗಳ ಬದುಕಿಗೆ ಹೊರೆಯಾಗಿ ಪರಿಣಮಿಸುತ್ತದೆ.
ತನ್ನ ಮತ್ತು ಬೇರೆತನದ ಡೈಕಾಟಮಿ
ಮತ್ತೊಂದು ಬಗೆಯ ಹುನ್ನಾರದ ಮಾದರಿ ಯಾವುದೆಂದರೆ, ಕನ್ನಡದ ಗುರುತು ಇಲ್ಲವೇ ಅಸ್ಮಿತೆಯನ್ನು ನೆಲೆಗೊಳಿಸಲು, ಅಧಿಕಾರ ಮತ್ತು ನೈತಿಕತೆಯ ಸವಾಲುಗಳನ್ನು ಎದುರಿಗೆ ಇಡಲಾಗುತ್ತದೆ. ಕನ್ನಡ ತನಗಿರುವ ಅಧಿಕಾರದ ನೆಲೆಗಳನ್ನು ತನ್ನ [ಸೆಲ್ಫ್] ಮತ್ತು ಬೇರೆ [ಅದರ್] ಎಂಬ ವಿಂಗಡನೆಯ ಮೂಲಕ ತನ್ನ ನುಡಿ ಸಮುದಾಯವನ್ನು ನಿರೂಪಿಸುತ್ತದೆ.
ಈ ಅಧಿಕಾರವನ್ನು ಮರುಸಂಪಾದಿಸಲು ಗಡಿಗಳು ಮತ್ತು ಸಮುದಾಯಗಳ ಗಾತ್ರವನ್ನು ವ್ಯಾಖ್ಯಾನಿಸುತ್ತಲೇ ಇರುತ್ತದೆ. ಪರಿಣಾಮವಾಗಿ ಆಯಿಕಟ್ಟಿನ ಜಾಗಗಳನ್ನು [ಸ್ಟ್ರ್ಯಾಟಜಿಕ್ ಲೋಕೇಶನ್ಸ್] ಗೊತ್ತುಪಡಿಸಿಕೊಂಡು, ಅವುಗಳನ್ನೇ ಕನ್ನಡದ ಗುರುತುಗಳನ್ನಾಗಿ ರೂಪಿಸಲಾಗುತ್ತದೆ. ಆಯಾ ನುಡಿ ಸಮುದಾಯದೊಳಗಿರುವ ಕೆಲವು ಪ್ರಬಲ ಸಮೂಹಗಳು ಕನ್ನಡದ ನೈತಿಕತೆಯ ಸವಾಲುಗಳನ್ನು ಹುಟ್ಟುಹಾಕುತ್ತವೆ. ಕಾರಣವೇನೆಂದರೆ ಇಂತಹ ನಿಲುವುಗಳ ಮೂಲಕ ಕನ್ನಡದ ಬಗೆಗಿನ ತಮ್ಮ ಹುಸಿ ಅಭಿಮಾನವನ್ನು ಗಟ್ಟಿಗೊಳಿಸುವ ಹುನ್ನಾವಾಗಿರುತ್ತದೆ.
ಹಾಗಾಗಿ ಈ ಸವಾಲುಗಳನ್ನು ಹೊರ ಮತ್ತು ಒಳ ನುಡಿಗುಂಪುಗಳಿಂದ ನೈತಿಕ ಅನುಕಂಪ [ಮಾರಲ್ ಸಿಂಪಥಿ]ವನ್ನು ಪ್ರಚುರಪಡಿಸುವ ಮೂಲಕ ತಮ್ಮೀ ಹುನ್ನಾರವನ್ನು ಮುಂಚೂಣೆಗೆ ತರುತ್ತವೆ. ಇಂತಹ ಹುನ್ನಾರದ ತುಡಿತವೇನೆಂದರೆ, ನುಡಿಯೊಂದಕ್ಕೆ ಹುಸಿಮನ್ನಣೆಯನ್ನು ರೂಪಿಸುವುದಾಗಿರುತ್ತದೆ. ಇದನ್ನು ಸಾಕಾರಗೊಳಿಸಲು ಮಾನವ ಹಕ್ಕಿನ ಪ್ರಶ್ನೆಯನ್ನು ಮುಂದಿಡಲಾಗುತ್ತದೆ. ಈ ಮಾನವ ಹಕ್ಕುಗಳ ಸವಾಲು ಇಲ್ಲಿ ಎದುರಾಗುವುದು ಬದುಕಿನ ಆಶೋತ್ತರಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಬದಲಾಗಿ ಹುಸಿಕನ್ನಡತನದ ಸ್ಥಿತಿಯನ್ನು ಎಚ್ಚರಿಸುವ ನೆಪ ಮಾತ್ರವಾಗಿರುತ್ತದೆ.
ಈ ಹಕ್ಕುಗಳ ಸ್ವರೂಪವನ್ನು ಮನಗಾಣುವ ಯಾವುದೇ ಉದ್ದೇಶ ಇಲ್ಲವೇ ಗುರಿಯನ್ನೂ ಇಲ್ಲಿ ಕಾಣಲು ಸಾಧ್ಯವಿಲ್ಲ. ಅಂದರೆ ಹಕ್ಕುವೆಂಬುದು ನಮ್ಮೊಳಗೆಯೇ ಅಂತರ್ಗತ [ಇನ್‍ಹೆರೆಂಟ್ ರೈಟ್ಸ್]ವಾಗಿದೋ? ಇಲ್ಲವೇ ಅದನ್ನು ಹೊರಗಿನ ಮೂಲಗಳಿಂದ ಪಡೆಯ [ಅರ್ನೆಡ್ ರೈಟ್ಸ್]ಬಹುದಾಗಿದೋ? ಎಂಬುದು ಕೂಡ ನುಡಿ ಬಗೆಗಿನ ತೀರ್ಮಾನಗಳಲ್ಲಿ ಗೊಂದಲವನ್ನುಂಟು ಮಾಡುತ್ತದೆ.
ಹಾಗಾಗಿ ಕನ್ನಡ ನುಡಿ ಕುರಿತಾದ ಯಾವುದೇ ನಿಲುವು ರಾಜಕೀಯೇತರವಾದದ್ದಲ್ಲ. ಆದ್ದರಿಂದ ಕುವೆಂಪು ಅವರ ನಿಲುವುಗಳು ಇಂತಹ ರಾಜಕೀಯ ಪ್ರೇರಿತವಾದ ನಂಬಿಕೆಗಳನ್ನು ಹುಸಿಗೊಳಿಸಿ, ದಿಟ ಕನ್ನಡತನವನ್ನು ನೆಲೆಗೊಳಿಸುವ ಕಾರಣ ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯವೆಂಬ ಮೂಲತತ್ವವನ್ನು ಇವರು ಹುಟ್ಟುಹಾಕಿರುತ್ತಾರೆ.
ಸಾಮಾಜಿಕ ಒಡಕಿನ ಬಗೆಗಳು
ಸಮೂಹಗಳ ಬದುಕಿನ ನಂಟಿನ ನೆಲೆಗಳನ್ನು ಹಾಗೂ ನಂಬಿಕೆಯ ನಿಲುವುಗಳನ್ನು ಗಟ್ಟಿಗೊಳಿಸುವ ಬದಲಾಗಿ, ಅವುಗಳನ್ನು ಹುಸಿಗೊಳಿಸುವ ಬಗೆಯಾಗಿ ಪದವೊಂದು ಅಂತಸ್ಥಗೊಂಡರೆ, ಅದರಿಂದ ಸಾಮಾಜಿಕ ಒಡಕು ಇನ್ನಷ್ಟು ಬಿಗಡಾಯಿಸುತ್ತದೆ ಎಂಬುದನ್ನು ಈ ಮೇಲಿನ ಚರ್ಚೆಗಳು ತಿಳಿಸುತ್ತವೆ. ಕನ್ನಡ ಜನಪರ ನಂಬಿಕೆಯ ಲೋಕದೊಳಗೆ ಸತ್ಯ ಮತ್ತು ನಿತ್ಯ ಪದಗಳು ನೆಲೆ ಪಡೆಯಲಿಲ್ಲ.
ಹೊಸಗಾಲದ ಕನ್ನಡವನ್ನು ಮುನ್ನೆಡೆಸುವ ಮುಂದಾಳುಗಳು ಕನ್ನಡದ್ದೇ ಜನಪರ ನಂಬಿಕೆಯ ಲೋಕವನ್ನು ಬೆಳೆಸುವ ಇಲ್ಲವೇ ಈಗಾಗಲೇ ನೆಲೆನಿಂತ ಕನ್ನಡೇತರ ಪರಂಪರೆಗೆ ಪರ್ಯಾಯ ಪರಂಪರೆಯೊಂದನ್ನು ಕಟ್ಟುವ ನಿಟ್ಟಿನಲ್ಲಿ ಇವರು ನಿಗಾವಹಿಸಲಿಲ್ಲ. ಹಾಗಾಗಿ ಕನ್ನಡ ನುಡಿಯ ಸಾಮಾಜಿಕ ನೆಲೆಗಳನ್ನು ಅನ್ಯಗೊಳಿಸುವ ತುಡಿತವೇ ಇಲ್ಲಿ ಮೇಲುಗೈ ಪಡೆದಿರುವುದನ್ನು ನೋಡಬಹುದು.
ಕುವೆಂಪು ಅವರು ಪರನುಡಿಗಳಿಂದ ಪದಗಳನ್ನು ಕಡ ತಂದರೂ, ಕನ್ನಡ ನುಡಿ ಸಮುದಾಯಗಳ ಏಳ್ಗೆಗೆ ಬೇಕಾಗುವ ದಾರಿಗಳನ್ನು ಕಟ್ಟುವ ಬಗೆಯಾಗಿರುತ್ತದೆ. ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯ ಎಂಬುದು ಕೇವಲ ಮಂತ್ರಪಠಣವಾಗದೇ, ಬದುಕಿನ ನಂಬಿಕೆಯಾಗಬೇಕಿದೆ. ಕನ್ನಡದ ಮುಂದಾಳುತನವನ್ನು ವಹಿಸುವವರು ಕುವೆಂಪು ಅವರು ರೂಪಿಸಿದ ನುಡಿತತ್ವಗಳನ್ನು ಆಚರಣೆಗೆ ತರುವ ಅನಿವಾರ್ಯವನ್ನು ಅರಿಯಬೇಕಿದೆ. ಕನ್ನಡತನ ಎನ್ನುವುದು ಅದು ಬರೀ ಹಕ್ಕಲ್ಲ, ಮಂತ್ರವು ಅಲ್ಲ, ತಂತ್ರವೂ ಅಲ್ಲ. ಅದು ಬದುಕು ಹಾಗೂ ಬದುಕಿಗೆ ಬೇಕಾಗುವ ಅಪ್ಪಟ ನಂಬಿಕೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ3 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ4 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ3 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ4 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ4 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ4 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ

