ಬಹಿರಂಗ
‘ಬಾಬಾಸಾಹೇಬ್ ಕಾನ್ಶಿರಾಂ’ ದೇಶ ಕಂಡ ಅಪ್ಪಟ ರಾಜಕೀಯ ಸಿದ್ಧಾಂತಿ..! :
- ಇಂದು ‘ಬಾಬಾಸಾಹೇಬ್ ಕಾನ್ಶಿರಾಮ್’ ಅವರ ಹುಟ್ಟು ಹಬ್ಬದ ಸಂಭ್ರಮ. ಈ ಸಂಭ್ರಮದ ಸಂದರ್ಭದಲ್ಲಿ ಈ ವಿಶೇಷ ಲೇಖನ ನಿಮಗಾಗಿ.
-ಮಹೇಶ್ ಸರಗೂರು
“ನಮಗೊಂದು ಶಕ್ತಿಯಿದೆ. ಅದು ರಾಜಕೀಯ ಶಕ್ತಿ. ಆ ಶಕ್ತಿಯನ್ನು ನಾವು ಗೆಲ್ಲಲೇಬೇಕು. ಆ ಶಕ್ತಿಯನ್ನು ನಾವು ಹೇಗಲಿಗೇರಿಸಿಕೊಂಡರೆ ನಮ್ಮ ಜನರ ಹಿತವನ್ನು ನಾವು ಸುಲಭವಾಗಿ ಕಾಪಾಡಬಹುದು”, “ನಿಮ್ಮ ಬಳಿ ಓಟಿದೆ. ನೀವು ಒಗ್ಗಟ್ಟಾದರೆ ನಿಮ್ಮ ಹಿತವನ್ನು ಕಾಯುವ ಪ್ರತಿನಿಧಿಯನ್ನು ಲೋಕಸಭೆ ಹಾಗೂ ವಿಧಾನಸಭೆಗಳಿಗೆ ನೀವು ಕಳುಹಿಸಬಹುದು. ತಪ್ಪಿದರೆ ನೀವು ನಾಶವಾಗುತ್ತೀರಿ”. ಶೋಷಿತರಿಗೆ ರಾಜಕೀಯ ಅಧಿಕಾರದ ಬಗೆಗಿನ ಮಹತ್ವದ ಕುರಿತು ಹೇಳುವ ಅಂಬೇಡ್ಕರರ ಶ್ರೇಷ್ಠ ಮಾತುಗಳಿವು.
ಬರೀ ಮಾತಾಡಿದ್ದಷ್ಟೆ ಅಲ್ಲ 1936ರಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ ಸ್ಥಾಪಿಸಿ 1937ರಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ, ಸ್ವಾತಂತ್ರಾನಂತರ 1952ರ ಪ್ರಥಮ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟ ಎಂಬ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಮೂಲಕ ಅಂಬೇಡ್ಕರರು ತಮ್ಮ ಆ ರಾಜಕೀಯ ಕನಸನ್ನು ನನಸಾಗಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗೆಯೇ ನಿಧನ ಸಮಯದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಎಂಬ ಹೊಸ ಪಕ್ಷವನ್ನು ಸ್ಥಾಪಿಸುವ ಯೋಜನೆಯನ್ನು ಕೂಡ ಅಂಬೇಡ್ಕರರು ಹಾಕಿದ್ದರು.
ಒಟ್ಟಾರೆ ತಮ್ಮ ಜೀವಿತದ ಅವಧಿಯಲ್ಲಿ ಅಂಬೇಡ್ಕರರು ಶೋಷಿತರಿಗೆ ತಾವು ಇಚ್ಛಿಸಿದಂತಹ ರಾಜಕೀಯ ಯಶಸ್ಸು ದೊರಕುವಂತಾಗಲು ಭದ್ರಬುನಾದಿ ಹಾಕಿದ್ದಾರೆ. ಅಂದಹಾಗೆ ಅಂತಹ ಭದ್ರ ಬುನಾದಿಯ ಮೇಲೆ ದಲಿತರನ್ನು ಆಳಿಸಿಕೊಳ್ಳುವ ವರ್ಗದಿಂದ ಆಳುವ ವರ್ಗಕ್ಕೆ, ಓಟು ಹಾಕುವ ಸಾಮಾನ್ಯ ಮತದಾರನ ಸ್ಥಿತಿಯಿಂದ ಓಟು ಹಾಕಿಸುವ ರಾಷ್ಟ್ರೀಯ ಪಕ್ಷವೊಂದರ ಮುಖಂಡತ್ವಕ್ಕೆ ಹೊಯ್ದದ್ದು ಬೇರಾರು ಅಲ್ಲ. ಕಾನ್ಶಿರಾಂ. ಪ್ರೀತಿಯಿಂದ ಹೇಳುವುದಾದರೆ ದಾದಾ ಸಾಹೇಬ್ ಕಾನ್ಶಿರಾಂ.
ಕಾನ್ಶಿರಾಂರವರು ಹುಟ್ಟಿದ್ದು ಪಂಜಾಬ್ನ ರೋಪರ್ ಜಿಲ್ಲೆಯ ಖಾವಸ್ಪುರ ಎಂಬ ಹಳ್ಳಿಯಲ್ಲಿ. ತಂದೆ ಶ್ರೀಹರಿಸಿಂಗ್ ತಾಯಿ ಬಿಷನ್ಕೌರ್ ಅಸ್ಪೃಶ್ಯ ಜಾತಿಯಿಂದ ಮತಾಂತರಗೊಂಡು ಸಿಖ್ ಧರ್ಮಕ್ಕೆ ಸೇರಿದ್ದ ಕಾನ್ಶಿರಾಂರವರು ತಮ್ಮ ಊರಿನಲ್ಲಿ ಅಸ್ಪಶ್ಯತೆಯ ನೋವುಂಡವರೇನಲ್ಲ. ಸಂದೇಶವೊಂದರಲ್ಲಿ ಅವರೇ ಹೇಳಿರುವ ಹಾಗೇ “ಸಿಖ್ ಗುರುಗಳ ಬೋಧನೆ ಸಮಾನತೆಯನ್ನು ಸಾರುವಂತಹದ್ದು. ಆ ಕಾರಣಕ್ಕೆ ಸಿಖ್ ಧರ್ಮಕ್ಕೆ ಮತಾಂತರಗೊಂಡ ಅಸ್ಪೃಶ್ಯರು ಉನ್ನತ ಸ್ಥಾನಕ್ಕೆ ಏರುತ್ತಲೇ ಇದ್ದಾರೆ”. ಅಂದಹಾಗೆ ಅಂತಹ ಉನ್ನತ ಸ್ಥಾನ ಎಂದರೆ ಸಮಾನತೆ!
ಇಂತಹ ಸಮಾನತೆಯ ವಾತಾವರಣದಲ್ಲಿ ಹುಟ್ಟಿದ ಕಾನ್ಶಿರಾಂರವರಿಗೆ ಅಸ್ಪಶ್ಯತೆ ವಿರುದ್ಧ ಹೋರಾಟ ಮಾಡುವ ಅಗತ್ಯ ಖಂಡಿತ ಇರಲಿಲ್ಲ. ಹಾಗೆಯೇ ರಾಷ್ಟ್ರ ರಾಜಕಾರಣದಲ್ಲಿ ಹೊಸ ಛಾಪು ಬೀರುವ ಅಗತ್ಯವೂ ಇರಲಿಲ್ಲ. ಆದರೆ ವಿಧಿಲಿಖಿತ ನಿಯಮ ಬೇರೆಯದೆ ಆಗಿತ್ತು. ಅದೆಂದರೆ ವಿದ್ಯಾಭ್ಯಾಸದಲ್ಲಿ ಬಿಎಸ್ಸಿ ಪದವಿ ಪಡೆದು ರಕ್ಷಣಾ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ ಅವರು ಸೀದಾ ವರದಿ ಮಾಡಿ ಕೊಂಡಿದ್ದು ಮಹಾರಾಷ್ಟ್ರದ ಪೂನಾ ನಗರದ DRDO(Defence Research and Development Organization) ಕಚೇರಿಯಲ್ಲಿ!
ಒಂದರ್ಥದಲ್ಲಿ ದೂರದ ಪಂಜಾಬ್ನ ಕಾನ್ಶಿರಾಂರನ್ನು ಮಹಾರಾಷ್ಟ್ರದ ಅಂಬೇಡ್ಕರ್ರವರು ತಮ್ಮತ್ತ ಸೆಳೆದಿದ್ದರು! ಸೆಳೆದು ಡಿ.ಕೆ.ಕಪರ್ಡೆ ಎಂಬ ತಮ್ಮ ಅನುಯಾಯಿ ಯೋರ್ವರನ್ನು ಕಾನ್ಶಿರಾಂರಿಗೆ ಪರಿಚಯ ಮಾಡಿಕೊಟ್ಟಿದ್ದರು! ಖಂಡಿತ ಕಪರ್ಡೆ ನೀಡಿದ ಅಂಬೇಡ್ಕರರ Aniihilation of Caste ಕೃತಿಯನ್ನು ಒಂದೇ ರಾತ್ರಿ ನಿದ್ರಿಸದೆ ಮೂರು ಬಾರಿ ಓದಿದ ಕಾನ್ಶಿರಾಂರವರು ಅಂಬೇಡ್ಕರ ರನ್ನು ಮತ್ತವರ ಚಿಂತನೆಯನ್ನು ತಮ್ಮ ತಲೆಗೆ ತುಂಬಿಕೊಂಡರು.
ಅಲ್ಲದೆ ಅಂಬೇಡ್ಕರರ ಮತ್ತೊಂದು ಕೃತಿ ‘what congress and Gandhi have done to untouchables?’
ಓದಿದ ಕಾನ್ಶಿರಾಂ ರವರು ದಲಿತರ ರಾಜಕಾರಣದ ದಿಕ್ಕು ಏನಾಗಿರಬೇಕು? ಅವರು ಎತ್ತ ಚಲಿಸಬೇಕು? ಏನು ಮಾಡಬೇಕು? ಇತ್ಯಾದಿ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳುತ್ತಾ ಒಂದು ಮಹಾನ್ ಕಾರ್ಯಕ್ಕೆ ತಮ್ಮನ್ನು ತಾವು ಅಣಿಗೊಳಿಸಿ ಕೊಂಡರು. ಹಾಗೇ ಅಣಿಗೊಳ್ಳಿಸಿಕೊಳ್ಳುತ್ತಾ ತಮ್ಮ ತಾಯಿಗೆ 24 ಪುಟಗಳ ಸುದೀರ್ಘ ಪತ್ರ ಬರೆದ ಕಾನ್ಶಿರಾಂರವರು ಆ ಪತ್ರದಲ್ಲಿ ತಾನು ಮದುವೆ ಮಾಡಿಕೋಳ್ಳುವುದಿಲ್ಲ. ಕುಟುಂಬದವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ.
ವೈಯಕ್ತಿಕವಾಗಿ ಯಾವುದೇ ಆಸ್ತಿ ಸಂಪಾದನೆ ಮಾಡುವುದಿಲ್ಲ. ನನ್ನ ಮುಂದಿನ ಬದುಕು ಶೋಷಿತ ಸಮುದಾಯದ ಏಳಿಗೆಗಾಗಿ ಸಂಪೂರ್ಣ ಮೀಸಲು ಎಂದು ದೃಢವಾಗಿ ತಿಳಿಸುತ್ತಾರೆ. ತನ್ಮೂಲಕ ಒಂದು ಮಹಾನ್ ತ್ಯಾಗಕ್ಕೆ ತಮ್ಮನ್ನೇ ತಾವು ಒಡ್ಡಿಕೊಳ್ಳುತ್ತಾರೆ. ಸಂಶಯ ಬೇಡ, ಕಾನ್ಶಿರಾಂ ನುಡಿದಂತೆ ನಡೆದರು. ಹಾಗೆಯೇ ಬದುಕಿದರು ಕೂಡ. ಈ ನಿಟ್ಟಿನಲ್ಲಿ ಅಂದರೆ ಶೋಷಿತರನ್ನು ವಿಮೋಚನೆಗೊಳಿಸುವ ನಿಟ್ಟಿನಲ್ಲಿ ಪ್ರಪ್ರಥಮವಾಗಿ ವಿದ್ಯಾವಂತ ನೌಕರರ ಸಂಘಟನೆ ಮಾಡಿದ ಕಾನ್ಶಿರಾಂರವರು 1973ರಲ್ಲಿ BAMCEF (Backward and Minorities Communities Employees Federation) ಸ್ಥಾಪಿಸುತ್ತಾರೆ.
ತನ್ಮೂಲಕ ‘ಸಮಾಜಕ್ಕೆ ಮರಳಿಕೊಡು’ (Pay back to Society) ಸಿದ್ಧಾಂತ ಜಾರಿಗೊಳಿಸುತ್ತಾರೆ. ಅದೇನೆಂದರೆ ‘ಮೀಸಲಾತಿಯಡಿ ಸವಲತ್ತನ್ನು ಪಡೆದ ವ್ಯಕ್ತಿಯೊಬ್ಬ ತನ್ನ ಸಮುದಾಯದ ಏಳಿಗೆಗಾಗಿ ತಾನು ಗಳಿಸಿದ್ದರಲ್ಲಿ ಸ್ವಲ್ಪಭಾಗ ವಾಪಸ್ ಕೊಡುವುದು ಎಂದರ್ಥ’. ಖಂಡಿತ ಕಾನ್ಶಿರಾಂರ ಈ ಫಾರ್ಮುಲಾ ಕೆಲಸ ಮಾಡಿತು. ಈ ದಿಸೆಯಲ್ಲಿ 1978ರ ವೇಳೆಗೆ ಕಾನ್ಶಿರಾಂರವರು ಇಡೀ ದೇಶಾದ್ಯಂತ BAMCEFನ ಅಡಿಯಲ್ಲಿ 17ಲಕ್ಷ ನೌಕರರನ್ನು ಸಂಘಟಿಸಿದ್ದರೆಂದರೆ ಅವರ ಸಂಘಟನಾ ಸಾಮರ್ಥ್ಯವನ್ನು ಯಾರಾದರೂ ಊಹಿಸಬಹುದು.
ಈ ಸಂದರ್ಭದಲ್ಲಿ ಅವರು 1977ರಲ್ಲಿ IASಗೆ ತಯಾರಿ ನಡೆಸುತ್ತಿದ್ದ 21ರ ಹರೆಯದ ಶಾಲಾ ಶಿಕ್ಷಕಿ ಮಾಯಾವತಿಯವರನ್ನು ತಮ್ಮ ಸಂಘಟನೆಗೆ (BAMCEF) ಸೇರಿಸಿಕೊಂಡರು. ಮಾಯಾವತಿ ಎಂದ ಮೇಲೆ ಕಾನ್ಶಿರಾಂರ ಬಗ್ಗೆ ಹೇಳುವುದೇ ಬೇಡ. ರಾಷ್ಟ್ರ ರಾಜಕಾರಣದಲ್ಲಿ ಅವರಿಬ್ಬರು ಮುಟ್ಟಿದೆಲ್ಲ ಚಿನ್ನ. BAMCEFನ ಯಶಸ್ಸಿನಿಂದ ಪ್ರೇರಣೆಗೊಂಡ ಕಾನ್ಶಿರಾಂ ಜನಸಮಾನ್ಯರನ್ನು ಇಂತಹ ಹೋರಾಟದ ತೆಕ್ಕೆಯಲ್ಲಿ ಒಳಗೊಳ್ಳುವ ನಿಟ್ಟಿನಿಂದ DS4 (ದಲಿತ ಶೋಷಿತ ಸಂಘರ್ಷ ಸಮಿತಿ) ಹುಟ್ಟುಹಾಕಿದರು.
ಅಂದಹಾಗೆ ದಲಿತರು ಯಾರು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾನ್ಶಿರಾಂ ಕೊಟ್ಟ ಉತ್ತರ ‘ಠಾಕೂರ್, ಬ್ರಾಹ್ಮಣ್, ಬನಿಯಾ ಚೋಡ್, ಬಾಕಿ ಸಬ್ ಹೈ DS4 ಎಂಬುದಾಗಿತ್ತು. ಒಂದಂತು ನಿಜ, DS4 ಮೂಲಕ ಕಾನ್ಶಿರಾಂ ಚುನಾವಣಾ ರಾಜಕಾರಣಕ್ಕೆ ಅದ್ಭುತ ಎಂಟ್ರಿ ಕೊಟ್ಟರು. ಯಾಕೆಂದರೆ 1982ರಲ್ಲಿ DS4 ವತಿಯಿಂದ ಹರ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ 46 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾನ್ಶಿರಾಂ, 1983ರ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತನ್ನ ಗುರಿ ಯಾವುದೆಂದು ಸಂದೇಶ ರವಾನಿಸಿದರು. ಸಂದೇಹ ಬೇಡ, ಕಾನ್ಶಿರಾಂ ಗುರಿ ಶೋಷಿತರಿಗೆ ರಾಜ್ಯಾಧಿಕಾರ ದೊರಕಿಸಿ ಕೊಡುವುದಾಗಿತ್ತು.
1984 ಎಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಬಿಎಸ್ಪಿ (ಬಹುಜನ ಸಮಾಜ ಪಕ್ಷ) ಸ್ಥಾಪಿಸಿದ ಕಾನ್ಶಿರಾಂ “ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಮಾಜದ ಶೇ.85ರಷ್ಟಿದ್ದಾರೆ. ಇವರು ಬಹುಜನರು. ಉಳಿದ ಶೇ.15ರಷ್ಟು ಮೇಲ್ಜಾತಿಗಳು ಮನುವಾದಿಗಳು.ಇವರು ಎಂದಿಗೂ ಬಹುಜನರ ಉದ್ಧಾರ ಮಾಡುವುದು ಸಾಧ್ಯವಿಲ್ಲ” ಎಂದು ತಮ್ಮ ರಾಜಕೀಯ ಸಿದ್ಧಾಂತ ತೇಲಿಬಿಟ್ಟರು. ಈ ನಿಟ್ಟಿನಲ್ಲಿ ಬಿಎಸ್ಪಿಯ ಯಶೋಗಾಥೆ ಎಲ್ಲರಿಗೂ ತಿಳಿದದ್ದೆ. 1984ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಚಂಬಲ್ ಕ್ಷೇತ್ರದಿಂದ ಕಣಕ್ಕಿಳಿದ ಕಾನ್ಶಿರಾಂ ಮುಂದೆ ಹಿಂದಿರುಗಿ ನೋಡಲೇ ಇಲ್ಲ.
ತಮ್ಮ ಪಕ್ಷದ ಮೂಲಕ ಒಂದಾದ ಮೇಲೊಂದರಂತೆ ಚುನಾವಣಾ ಯಶಸ್ಸು ಪಡೆದ ಅವರು ಬಹುಜನ ಸಮಾಜ ಪಕ್ಷವನ್ನು ಈ ದೇಶದ ಮೂರನೇ ಅತಿ ದೊಡ್ಡ ಪಕ್ಷವನ್ನಾಗಿ ಮಾಡಿದರು. ತಮ್ಮ ಶಿಷ್ಯೆ ಮಾಯಾವತಿಯವರನ್ನು ದೇಶದ ಬೃಹತ್ ರಾಜ್ಯವಾದ ಉತ್ತರಪ್ರದೇಶದಲ್ಲಿ ಒಂದಲ್ಲ, ಎರಡಲ್ಲ 3 ಬಾರಿ ಮುಖ್ಯಮಂತ್ರಿ ಮಾಡಿದರು. 1995 ಮಾಯಾವತಿಯವರು ಬಿಜೆಪಿಯ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದಾಗ ಮಾಧ್ಯಮಗಳು ಅದನ್ನು ‘ಪ್ರಜಾಪ್ರಭುತ್ವದ ಅದ್ಭುತ’ ಎಂದು ಬಣ್ಣಿಸಿದ್ದವು. ಖಂಡಿತ ಅಂತಹ ಅದ್ಭುತದ ಹಿಂದೆ ಕಾನ್ಶಿರಾಂ, ಎಂಬ ಮಾಂತ್ರಿಕನ ಕೈವಾಡವಿತ್ತು.
ಸ್ವತಃ 1992ರಲ್ಲಿ ಉತ್ತರಪ್ರದೇಶದಲ್ಲಿ ಇಟವಾ ಲೋಕಸಭಾ ಸಾಮಾನ್ಯ ಕ್ಷೇತ್ರದಿಂದ 19,000 ಮತಗಳಿಂದ ಚುನಾವಣೆ ಜಯಿಸಿದ ಕಾನ್ಶಿರಾಂ ದಲಿತರು ಬರೀ ಮೀಸಲು ಕ್ಷೇತ್ರಗಳಿಂದಷ್ಟೆ ಗೆಲ್ಲುತ್ತಾರೆ, ಅಲ್ಲಿ ಸ್ಪರ್ಧಿಸಲಷ್ಟೆ ಅರ್ಹರು ಎಂಬ ಮಿಥ್ಅನ್ನು ಚಿತ್ ಮಾಡಿದರು. 1997 ಮತ್ತು 2002ರಲ್ಲಿ ಮತ್ತದೇ ಬಿಜೆಪಿಯ ಬೆಂಬಲದಿಂದಲೇ ಮಾಯಾವತಿಯವರನ್ನು ಅಧಿಕಾರಕ್ಕೆ ತಂದ ಕಾನ್ಶಿರಾಂ ಹಂತಹಂತದಲ್ಲಿ ತಮ್ಮ ಚಾಕಚಕ್ಯತೆ ತೋರುತ್ತಾ ಹೋದರು.
ಯಾಕೆಂದರೆ ಒಂದು ಕಾಲದಲ್ಲಿ ದಲಿತರು ಎಂದರೆ ಬರೀ ಬೇರೆ ಪಕ್ಷಗಳಲ್ಲಿ ಗುಲಾಮಗಿರಿ ಮಾಡಲಷ್ಟೆ ಆಯ್ಕೆಯಾಗುತ್ತಾರೆ ಎಂಬ ನೀತಿ ಚಾಲ್ತಿಯಲ್ಲಿತ್ತು. ಆದರೆ ಕಾನ್ಶಿರಾಂ ಅಂತಹ ನೀತಿಯನ್ನು ‘ಚಮಚಾಗಿರಿ’ ಎಂದು ಜರೆದು ಅದರ ನಿರ್ಮೂಲನೆಗಾಗಿ ‘ಚಮಚಾಯುಗ’ ಎಂಬ ಪುಸ್ತಕ ಬರೆದು ಈ ದೇಶದ ಶೋಷಿತರ ಕಣ್ತೆರೆಸಿದರು. ‘ಚಮಚಾ ಎಂಬುದು ಒಂದು ಸಾಧನ. ಅದು ದಲಿತರ ನಿಜವಾದ ಹೋರಾಟಗಾರನನ್ನು ಹತ್ತಿಕ್ಕಲು ದಲಿತರಲ್ಲೇ ಮತ್ತೊಬ್ಬ ಏಜೆಂಟ್ನನ್ನು ಸೃಷ್ಟಿಸುವ ಮೇಲ್ಜಾತಿ ಪಕ್ಷಗಳ ಆಟ’ ಎಂದು ತಮ್ಮ ಚಮಚಾಗಿರಿ ಪದಕ್ಕೆ ವಿವರಣೆ ಕೊಟ್ಟರು.
ಈ ವಿವರಣೆ ದೇಶದಾದ್ಯಂತ ಕೆಲಸ ಮಾಡಿದೆ. ಅದು ಇಂದು ಶೋಷಿತರಲ್ಲಿ ಸ್ವಲ್ಪಮಟ್ಟಿಗಾದರೂ ರಾಜಕೀಯ ಸ್ವಾಭಿಮಾನವನ್ನು ಸೃಷ್ಟಿಸಿದೆ. ಯಾಕೆಂದರೆ ಒಂದು ಕಾಲದಲ್ಲಿ ಶೋಷಿತರ ಮತ ಬರೀ ಖರೀದಿಗಾಗಿ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ಶೋಷಿತರೂ ತಮ್ಮ ನೇತೃತ್ವದಲ್ಲಿ ಒಂದು ಪಾರ್ಟಿ ಕಟ್ಟಿಕೊಳ್ಳಬಹುದು, ಅದರ ಅಡಿಯಲ್ಲಿ ಚುನಾವಣೆಗಳಲ್ಲಿ ಗೆಲ್ಲಬಹುದು, ಗೆದ್ದು ಗದ್ದುಗೆ ಹಿಡಿಯಬಹುದು ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು DRDOದ ಮಾಜಿ ವಿಜ್ಞಾನಿ ಕಾನ್ಶಿರಾಂ. ಇಂತಹ ಕಾನ್ಶಿರಾಂ 2006 ಅಕ್ಟೋಬರ್ ೯ರಂದು ನಮ್ಮನ್ನೆಲ್ಲ ತಬ್ಬಲಿಗಳನ್ನಾಗಿಸಿದರು.
ದಾದಾಸಾಹೇಬ್ ಕಾನ್ಶಿರಾಂ ಪ್ರಾಯೋಗಿಕತೆ ಬಯಸಿದ ಈ ದೇಶ ಕಂಡ ಅಪ್ಪಟ ರಾಜಕೀಯ ಸಿದ್ಧಾಂತಿ. ಅದರಲ್ಲೂ ಅಂತಹ ಅದ್ಭುತ ಚೇತನ ಶೋಷಿತ ಸಮುದಾಯದ ನಡುವೆ ಹುಟ್ಟಿತ್ತಲ್ಲ ಎಂಬುದೇ ಒಂದು ಸುಂದರ ಕನಸ್ಸಿನ ಮಾದರಿಯದ್ದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ1 day agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


