ಬಹಿರಂಗ
HapPy BiRtHdAy | ಬಹುಜನ ಸಮಾಜದ ‘ಯುಗಪುರುಷ ಕಾನ್ಷಿರಾಮ್’ ಬಗ್ಗೆ ನಿಮಗೆಷ್ಟು ಗೊತ್ತು..!?
“ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಜಾತಿವ್ಯವಸ್ಥೆಯ ಅಸ್ತಿತ್ವವೇ ಕಾರಣ.ಈ ಜಾತಿ ಅಸಮಾನತೆಗೆ ಅಧಿಕಾರ ಹೀನತೆಯೇ ಮೂಲ ಕಾರಣ. ಜಾತಿ ವ್ಯವಸ್ಥೆಯಿಂದಾಗಿ ಬಹುಜನರು ಅಪಮಾನದಿಂದ ಬದುಕುತ್ತಿದ್ದಾರೆ. ಅಧಿಕಾರ ಹೀನತೆಯಿಂದಾಗಿ ಬಡತನದಿಂದ ಬಳಲುತ್ತಿದ್ದಾರೆ. ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದುಕೊಂಡಿರುವ ಬ್ರಾಹ್ಮಣವಾದದ ಬೇರುಗಳನ್ನು ಬುಡ ಸಹಿತ ನಾಶಗೊಳಿಸಿ, ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿಸುವುದು ನನ್ನ ಗುರಿ. ಶೋಷಿತ ಸಮಾಜವು ಆಳುವ ಸಮಾಜವಾಗುವುದರಿಂದ ಮಾತ್ರ ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಬಹುದು.
ಇಂತಹ ಯೋಗ್ಯವಾದ ಗುರಿಯನ್ನು ಸಾಕಾರಗೊಳಿಸುವ ಭಾಗ್ಯ ನನ್ನದಾದರೆ ನನ್ನ ಹುಟ್ಟು ಧನ್ಯ! ಇನ್ನು ಮುಂದೆ ನಾನು ಬದುಕುವುದಾದರೆ ಈ ಧ್ಯೇಯಕ್ಕಾಗಿಯೇ ಬದುಕುತ್ತೇನೆ. ಒಂದು ವೇಳೆ ಸಾಯುವುದಾದರೆ ನಾನು ಈ ಧ್ಯೇಯ ಸಾಧನೆಗಾಗಿಯೇ ಸಾಯುತ್ತೇನೆ. ಬಾಬಾಸಾಹೇಬ್ ಅಂಬೇಡ್ಕರರ ಕನಸನ್ನು ನನಸು ಮಾಡುವ ತನಕ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನನ್ನ ರಕ್ತ ಸಂಬಂಧಿಗಳೊಂದಿಗೆ ನಾನು ಯಾವುದೇ ಭಾವನಾತ್ಮಕ ಸಂಬಂಧಗಳನ್ನು ಇಟ್ಟುಕೊಳ್ಳುವುದಿಲ್ಲ. ನಾನು ಹುಟ್ಟಿ ಬೆಳೆದ ಊರಿಗೆ ಕಾಲಿಡುವುದಿಲ್ಲ. ವೈಯಕ್ತಿಕವಾಗಿ ನಾನು ಯಾವುದೇ ಆಸ್ತಿ-ಪಾಸ್ತಿಯನ್ನು ಹೊಂದುವುದಿಲ್ಲ. ಬಹುಜನ ಸಮಾಜವೇ ನನ್ನ ಕುಟುಂಬ. ಈ ಸಮಾಜದ ಏಳಿಗೆಗಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ. ನನ್ನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ಕೊಡುತ್ತೇನೆ. ಗುಲಾಮ ಸಮಾಜವನ್ನು ಆಳುವ ಸಮಾಜವನ್ನಾಗಿ ರೂಪಿಸಿಯೇ ತೀರುತ್ತೇನೆ. ಅದಕ್ಕಾಗಿ ಇಂದಿನಿಂದ ನಿಮ್ಮೆಲ್ಲರ ಪಾಲಿಗೆ ನಾನು ಸತ್ತು ಹೋಗಿದ್ದೇನೆ”.
ಅಂಬೇಡ್ಕರ್ ವಾದದ ಅನುಷ್ಠಾನಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡ ಸಂತನೊಬ್ಬ ತನ್ನ ಹೆತ್ತ ತಾಯಿಗೆ ಬರೆದ ಸುದೀರ್ಘ 24 ಪುಟಗಳ ಪತ್ರದ ಆಯ್ದ ಸಾರಾಂಶವಿದು..!
ನುಡಿದಂತೆ ನಡೆದು, ಅಸಾಧ್ಯವಾದುದನ್ನು ಸಾಧಿಸಿ, ರಾಜಕೀಯ ಜಗತ್ತೇ ನಿಬ್ಬೆರಗಾಗಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಆ ಅಸಾಧಾರಣ ಸಾಹಸಿಯೇ “ದಾದಾಸಾಹೇಬ್ ಕಾನ್ಷಿರಾಮ್”.
ಅಂಬೇಡ್ಕರ್ ಎಂಬ ಅದ್ವಿತೀಯ ಜ್ಞಾನಿಯ ಮಾತು, ಕೃತಿ, ಚಿಂತನೆಗಳನ್ನು ಆಳವಾಗಿ ಗ್ರಹಿಸಿ, ಮೆದುಳಿಗಿಳಿಸಿಕೊಂಡು ಅದಕ್ಕೆ ರಾಜಕೀಯ ರೂಪ ಕೊಟ್ಟ ಕಾನ್ಷಿರಾಮ್ ರವರದು ಭಾರತದ ರಾಜಕೀಯದಲ್ಲಿ ಮದ್ದಾನೆಯ ಹಾದಿ. ಏಕಾಂಗಿ ಹೋರಾಟ. “ಸಾವಿರಾರು ವರ್ಷಗಳಿಂದ ಶೋಷಿತರಾಗಿರುವ ಎಸ್.ಸಿ, ಎಸ್.ಟಿ, ಒಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಜಕೀಯ ಮುಖ್ಯವಾಹಿನಿಗೆ ತರಬೇಕು. ಅವರನ್ನು ಆಳುವ ದೊರೆಗಳನ್ನಾಗಿ ಮಾಡಬೇಕು”ಎಂದು ಪಣ ತೊಟ್ಟಿದ್ದ ಕಾನ್ಷಿರಾಮ್ ರವರು ಕಾಲಗರ್ಭದಲ್ಲಿ ಅಮೂಲ್ಯ ನಿಧಿಯಾಗಿ ಹುದುಗಿ ಹೋಗಿದ್ದ ಫುಲೆ-ಪೆರಿಯಾರ್-ಶಾಹು-ನಾಲ್ವಡಿ-ನಾರಾಯಣಗುರು ಎಂಬ ಮಾನವಕುಲ ಮರೆಯಬಾರದ ಮಹಾಗುರುಗಳನ್ನು ಇತಿಹಾಸದ ಪುಟಗಳಿಂದ ಹೆಕ್ಕಿ ಹೊರತೆಗೆದು ಬಹುಜನ ಸಮಾಜಕ್ಕೆ ಪರಿಚಯಿಸಿದರು.
ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಕಾನ್ಷಿರಾಮರು ಪಕ್ಷದ ಪ್ರಚಾರ ಸಾಮಗ್ರಿಗಳನ್ನು ಸ್ವತಃ ತಾವೇ ಸ್ವತಃ ಹೊತ್ತು ಲಾರಿಗೆ ಹಾಕುತ್ತಿದ್ದರು. ಅದನ್ನು ದೇಶದ ಮೂಲೆ-ಮೂಲೆಗೂ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದರು. ಕಾರ್ಯಕ್ರಮವಿದ್ದಾಗ ಗೋಡೆಗಳಿಗೆ ಪ್ರಚಾರ ಪತ್ರಗಳನ್ನು ಅಂಟಿಸುತ್ತಿದ್ದರು. ಹಾರೆ-ಗುದ್ದಲಿಗಳನ್ನು ಹಿಡಿದು ವೇದಿಕೆಯನ್ನು ತಯಾರಿಸುತ್ತಿದ್ದರು. ಹೆಗಲಿಗೆ ಮೈಕು ಕಟ್ಟಿಕೊಂಡು ಹೆಸರಾಂತ ನಾಯಕರೊಬ್ಬರು ಸಭೆಗೆ ಬರುತ್ತಿದ್ದಾರೆಂದು ಎಲ್ಲೆಂದರಲ್ಲಿ ಪ್ರಚಾರ ಮಾಡುತ್ತಿದ್ದರು. ಸಮಾರಂಭದ ದಿನ ತಾವೇ ಮುಖ್ಯ ಅತಿಥಿಗಳಾಗಿ ಬಂದು ಅಚ್ಚರಿ ಮೂಡಿಸುತ್ತಿದ್ದರು. ಭಾಷಣದ ಮೂಲಕ ಸಭಿಕರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದರು.
” ಏ ಕಾನ್ಷಿರಾಮ್.. ನೀನೊಬ್ಬ ಹುಚ್ಚ.. ರಾಜಕಾರಣದಲ್ಲಿ ನೀನಿನ್ನೂ ಬಚ್ಛಾ.. ನಿನಗೆ ರಾಜಕಾರಣದ ಮರ್ಮ ತಿಳಿದಿಲ್ಲ. ಬದುಕಿರುವಾಗಲೇ ಅಂಬೇಡ್ಕರ್ ಗೆದ್ದಿಲ್ಲ… ಇನ್ನೂ ಅಂಬೇಡ್ಕರ್ ಹೆಸರೇಳಿಕೊಂಡು, ಈ ಗುಲಾಮರನ್ನು ಕಟ್ಟಿಕೊಂಡು ನೀನು ಏನನ್ನು ಸಾಧಿಸಲು ಸಾಧ್ಯವಿಲ್ಲ.. ಹೋಗಿ ಏನಾದರೂ ಬೇರೆ ಕೆಲಸ ನೋಡಿಕೋ..” ಎನ್ನುವ ಅವಕಾಶವಾದಿ ಅಂಬೇಡ್ಕರ್ ವಾದಿಗಳ ಟೀಕೆ-ಮೂದಲಿಕೆಗಳನ್ನು ಕ್ರೀಡಾಸ್ಫೂರ್ತಿಯಿಂದ ಸವಾಲಾಗಿ ಸ್ವೀಕರಿಸಿ, ಬಾಡಿಗೆ ಸೈಕಲ್ ಗಳಲ್ಲಿ ದಿನವಿಡೀ ಸುತ್ತಾಡುತ್ತಾ, ದ್ವಿತೀಯ ದರ್ಜೆಯ ರೈಲು ಭೋಗಿಗಳಲ್ಲಿ ಗಂಟೆಗಟ್ಟಲೆ ನಿಂತು ಪ್ರಯಾಣ ಮಾಡುತ್ತಾ, ಹಸಿವು, ನಿದ್ರೆ, ನೀರಾಡಿಕೆಗಳನ್ನು ಲೆಕ್ಕಿಸದೆ, ಭಾರತದ ಮೂಲೆ-ಮೂಲೆಗಳಿಗೆ ಸಂಚರಿಸಿ, ಶೋಷಿತ ಸಮುದಾಯಗಳನ್ನು ರಾಜಕೀಯವಾಗಿ ಸಂಘಟಿಸಿ, ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಅತ್ಯಂತ ಸಮರ್ಥವಾಗಿ ಅಧಿಕಾರ ಚಲಾಯಿಸಬಲ್ಲ ಎಂಬ ಸತ್ಯವನ್ನು ಮಾನವ ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮಾನ್ಯಾವಾರ್ ಕಾನ್ಷಿರಾಮ್ ಆಧುನಿಕ ಭಾರತ ಕಂಡ ಪ್ರಜಾಪ್ರಭುತ್ವದ ಪವಾಡ ಪುರುಷ!
“ಭಾರತದಲ್ಲಿ ಒಂದು ಗ್ರಾಮಪಂಚಾಯ್ತಿಯನ್ನೂ ಗೆಲ್ಲದಷ್ಟು ಅಲ್ಪಮತವುಳ್ಳವರಾಗಿರುವ ಬ್ರಾಹ್ಮಣರು, ತಮ್ಮ ಪರಂಪರಾನುಗತ ಹಿತಾಸಕ್ತಿಗಳನ್ನೂ ಕಾಯ್ದುಕೊಳ್ಳುವ ಸಲುವಾಗಿ ನೂರಾರು ತಂತ್ರ-ಕುತಂತ್ರಗಳ ಮೂಲಕ ತಮ್ಮ ರಾಜಕೀಯ ನಡಿಗೆಗಳನ್ನು ಸರಾಗಗೊಳಿಸಿಕೊಂಡಿದ್ದಾರೆ. ಬ್ರಾಹ್ಮನೇತರರಲ್ಲಿ ಸ್ವತಂತ್ರ ರಾಜಕೀಯ ಚಿಂತನೆಗಳು ಮೊಳಕೆಯೊಡೆಯದಂತೆ ಅವರಿಗೆ ಹಣ-ಅಧಿಕಾರದ ಆಮಿಷ ತೋರಿಸಿ ತಮ್ಮ ನಾಯಕತ್ವದ ರಾಜಕೀಯ ಪಕ್ಷಗಳಲ್ಲೇ ಕಾಲಾಳುಗಳಾಗಿಸಿಕೊಂಡಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.15 ಭಾಗವಿರುವ ಬ್ರಾಹ್ಮಣ, ಬನಿಯಾಗಳು ಶೇ. 85 ರಷ್ಟು ದೇಶದ ಆಸ್ತಿ, ಸಂಪತ್ತು ಮತ್ತು ಅಧಿಕಾರವನ್ನು ಹಿಡಿದುಕೊಂಡಿದ್ದಾರೆ. ಬ್ರಾಹ್ಮಣ, ಬನಿಯಾಗಳ ಹಿತಾಸಕ್ತಿಗೆ ಬಲಿಯಾಗಿ ಆರು ಸಾವಿರಕ್ಕಿಂತಲೂ ಅಧಿಕ ಜಾತಿ-ಉಪಜಾತಿಗಳಲ್ಲಿ ಹರಿದು ಹಂಚಿ ಹೋಗಿರುವ ಶೇ. 85 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬಹುಜನರು ಕೇವಲ ಶೇ.15 ರಷ್ಟು ಆಸ್ತಿ, ಸಂಪತ್ತು, ಅಧಿಕಾರವನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಅವರು ಬಡವರಾಗಿ, ಕಡುಬಡವರಾಗಿ ಬಾಳಿ ಬದುಕುತ್ತಿದ್ದಾರೆ. ಬಹುಜನ ಸಮಾಜವನ್ನು ಒಡೆಯುವ ಮೂಲಕ ಬ್ರಾಹ್ಮಣ, ಬನಿಯಾಗಳು ಭಾರತದಲ್ಲಿ ಆಳುವ ಜನರಾಗಿದ್ದಾರೆ. ಒಡೆಯುವುದು ಅವರ ಕೆಲಸ.. ಕೂಡಿಸುವುದು ನನ್ನ ಕೆಲಸ. ಒಡೆದು-ಹಂಚಿ ಹೋಗಿರುವ ಬಹುಜನ ಸಮಾಜವನ್ನು ಕೂಡಿಸಿ, ಪ್ರೀತಿ, ವಿಶ್ವಾಸ ನಂಬಿಕೆಗಳಲ್ಲಿ ಬಂಧಿಸಿ ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿ ಮಾಡುತ್ತೇನೆ”! ಎಂದು ಪ್ರತಿಜ್ಞೆಗೈದ ದಾದಾಸಾಹೇಬ್ ಕಾನ್ಷಿರಾಮ್ ರವರು ಉತ್ತರಪ್ರದೇಶವನ್ನು ತಮ್ಮ ರಾಜಕೀಯ ಪ್ರಯೋಗ ಭೂಮಿಯನ್ನಾಗಿ ಆರಿಸಿಕೊಂಡರು.
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಅನುಕೂಲಕರ ವಾತಾವರಣವೇನೂ ಇರಲಿಲ್ಲ. ಯಾಕೆಂದರೆ ಉತ್ತರಪ್ರದೇಶಕ್ಕೆ ಬಹುಜನ ಸಮಾಜ ಪಕ್ಪ ಕಾಲಿರಿಸಿದಾಗ ಕಾಂಗ್ರೆಸ್ ಪಕ್ಷ ದೈತ್ಯಾಕಾರವಾಗಿ ಬೆಳೆದು ನಿಂತಿತ್ತು. ಶೇ.24 ರಷ್ಟು ಪರಿಶಿಷ್ಟ ಮತಗಳಿಂದ, ಶೇ. 15 ರಷ್ಟು ಮುಸ್ಲಿಮರ ಮತಗಳಿಂದ ಹಾಗೂ ಶೇ.10 ರಷ್ಟು ಒಬಿಸಿ ಮತಗಳಿಂದ ಕಾಂಗ್ರೆಸ್ ಉಕ್ಕಿನ ಕೋಟೆಯನ್ನು ಕಟ್ಟಿಕೊಂಡಿತ್ತು. ಇದು ಒಂದು ಕಡೆಗಾದರೆ, ಇನ್ನೊಂದು ಕಡೆಗೆ “ರಾಷ್ಟ್ರೀಯ ಸ್ವಯಂ ಸೇವಕ ಸಂಘ” (RSS) ತನ್ನ ರಾಜಕೀಯ ಕದಂಬ ಬಾಹುವನ್ನು ಅದಾಗಲೇ ವಿಸ್ತರಿಸುತ್ತಿತ್ತು. ಇಂತಹ ಅನಾನುಕೂಲಕರ ಕ್ಲಿಷ್ಟ ರಾಜಕೀಯ ಪರಿಸ್ಥಿತಿಗಳನ್ನು ತಮ್ಮ ಅಸಾಧಾರಣ ಪ್ರತಿಭೆ ಮತ್ತು ಅಪಾರ ಪರಿಶ್ರಮದ ಮೂಲಕ ಜನಾಂದೋಲನ ರೂಪಿಸಿ ಅನುಕೂಲಕರ ವಾತಾವರಣನ್ನಾಗಿಸಿಕೊಂಡು ಉತ್ತರಪ್ರದೇಶದಂತಹ ಬ್ರಾಹ್ಮಣರ ರಾಮಭೂಮಿಯಲ್ಲಿ ಭೀಮರಾಜ್ಯವನ್ನು ಸ್ಥಾಪಿಸಿದ ಹೆಗ್ಗಳಿಕೆ ಯುಗಪುರುಷ ದಾದಾಸಾಹೇಬ್ ಕಾನ್ಷಿರಾಮ್ ರವರಿಗೆ ಸಲ್ಲುತ್ತದೆ.
ಬಹುಜನ ಸಮಾಜ ಪಕ್ಷದ ತೀವ್ರಗತಿಯ ಬೆಳವಣಿಗೆಯಿಂದ 1985 ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಾಗ ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಕಾನ್ಷಿರಾಮ್ ರನ್ನು ಹುಡುಕಿಕೊಂಡು ಬಂದು “ನೀವು ಬಿಎಸ್ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿ.. ನಾವು ನಿಮ್ಮನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತೇವೆ” ಎಂದು ಹೇಳಿದಾಗ “ನನ್ನ ಗುರು ಬಾಬಾಸಾಹೇಬರಿಗೆ ಮೋಸ ಮಾಡಿದ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ನಾಶ ಮಾಡುವುದೇ ನನ್ನ ಗುರಿ” ಎಂದು ದಿಟ್ಟತನದಿಂದ ಹೇಳಿದರು.
“ಬಿಎಸ್ಪಿ ಎಂದೂ ಗೆಲ್ಲುವ ಪಕ್ಷವಾಗುವುದಿಲ್ಲ. ಮತ ವಿಭಜನೆ ಮಾಡಿ ಕೋಮುವಾದಿಗಳಿಗೆ ಸಹಕರಿಸುತ್ತದೆ. ಬಿಎಸ್ಪಿಯಿಂದ ಯಾವ ಕಾಲಕ್ಕೂ ಎಂ.ಎಲ್.ಎ ಗಳಾಗಲೀ, ಎಂ.ಪಿ. ಗಳಾಗಲೀ ಆರಿಸಿ ಬರುವುದಿಲ್ಲ. ಬರೀ ಸೋಲಿಸುವುದಷ್ಟೇ ಅದರ ಪಾತ್ರ” ಎಂದು ಕಂಡ-ಕಂಡಲ್ಲಿ ಅಪಪ್ರಚಾರ ಮಾಡಿಕೊಂಡು ತಿರುಗುತ್ತಿದ್ದ ಕಾಂಗ್ರೆಸ್ ನಾಯಕರೇ ತಲೆ ತಿರುಗಿ ಬೀಳುವಂತೆ ಪಕ್ಷವನ್ನು ಬೆಳೆಸಿ ತೋರಿಸಿದ ಕಾನ್ಷಿರಾಮ್ ರವರು ತಮ್ಮ ಬದುಕಿನವಧಿಯಲ್ಲಿ ಮೂರು ಬಾರಿ ಬಿಎಸ್ಪಿಯನ್ನು ಅಧಿಕಾರಕ್ಕೆ ತಂದರು. ಯಾವ ಕಾಂಗ್ರೆಸ್ಸಿಗರು ತಮ್ಮ ಕುತಂತ್ರಗಳ ಮೂಲಕ ಅಂಬೇಡ್ಕರರನ್ನು ರಾಜಕೀಯವಾಗಿ ಸೋಲಿಸಿ ಮೋಸದ ನಗೆ ಬೀರಿದ್ದರೋ ಅದೇ ಕಾಂಗ್ರೆಸ್ಸನ್ನು ಉತ್ತರ ಪ್ರದೇಶದಲ್ಲಿ ಹೇಳ-ಹೆಸರಿಲ್ಲದೆ ಅಳಿಸಿಹಾಕಿ ಸ್ವಾಭಿಮಾನದ ಮುಗುಳ್ನಗೆ ನಕ್ಕಿದರು.
ಇಂತಹ ಅಸಾಧಾರಣ ಕಾರ್ಯಗಳ ಮೂಲಕ ಕಾನ್ಷಿರಾಮ್ ರವರು ಬಿಎಸ್ಪಿಯನ್ನು ಮೂರನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿಸಿದರು. ತಮಗೆ ಒಲಿದುಬಂದ ರಾಷ್ಟ್ರಪತಿ ಹುದ್ದೆಯನ್ನು, ಉಪಪ್ರಧಾನಿ ಹುದ್ದೆಯನ್ನು ಮತ್ತು ತಾವೇ ಮುಖ್ಯಮಂತ್ರಿಯಾಗಬಹುದಾದ ಸಾವಕಾಶವನ್ನು ತಳ್ಳಿಹಾಕಿ, ಮಾಯಾವತಿಯಂತಹ ಮಹಾನ್ ನಾಯಕಿಯನ್ನು ಸೃಷ್ಟಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೊಟ್ಟ ಮೊದಲ ವ್ಯಕ್ತಿಯನ್ನಾಗಿಸಿದರು. ಕೋಟ್ಯಂತರ ಮಾರಾಟವಾಗದ ಮತದಾರರನ್ನು ಸೃಷ್ಟಿಸಿದರು. ಲಕ್ಷಾಂತರ ಸ್ವಾಭಿಮಾನಿ ಅಂಬೇಡ್ಕರ್ ವಾದಿಗಳನ್ನು ಹುಟ್ಟು ಹಾಕಿದರು. ಇದು ನಾಯಕನೊಬ್ಬನ ನಿಜವಾದ ಲಕ್ಷಣ. ಮಾರ್ಗದಾತನೊಬ್ಬನ ಗುಣ ಲಕ್ಷಣ. ಇಂದು ಈ ಮಹಾನಾಯಕನ ಜನ್ಮದಿನ. ಈ ಅದ್ಬುತ ವಿಮೋಚಕನ ಬದುಕು-ಬರಹ ಮತ್ತು ಹೋರಾಟದ ಹೆಜ್ಜೆ ಗುರುತುಗಳು ದೇಶವಾಳಲು ಸನ್ನದ್ದವಾಗುತ್ತಿರುವ ಬಹುಜನ ಸಮಾಜಕ್ಕೆ ದಾರಿ ದೀಪವಾಗಲಿ. ಇದುವೇ ನಾವು ಆ ಮಹಾಚೇತನಕ್ಕೆ ಸಲ್ಲಿಸಬೇಕಾದ ನಿಜವಾದ ಗೌರವ.
– ಮಹೇಶ್ ಕುಮಾರ್ ಸರಗೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.



