ದಿನದ ಸುದ್ದಿ
ಸಾರಿಗೆ ಮುಷ್ಕರ –ಕಾರ್ಮಿಕರ ಬದುಕು ಘನತೆಯ ಪ್ರಶ್ನೆ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2021/04/ksrtc_employee_strike_suddidina.jpg&description=ಸಾರಿಗೆ ಮುಷ್ಕರ –ಕಾರ್ಮಿಕರ ಬದುಕು ಘನತೆಯ ಪ್ರಶ್ನೆ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2021/04/ksrtc_employee_strike_suddidina.jpg&description=ಸಾರಿಗೆ ಮುಷ್ಕರ –ಕಾರ್ಮಿಕರ ಬದುಕು ಘನತೆಯ ಪ್ರಶ್ನೆ', 'pinterestShare', 'width=750,height=350'); return false;" title="Pin This Post">
- ನಾ ದಿವಾಕರ
ಯಾವುದೇ ವಲಯದ ದುಡಿಯುವ ಕೈಗಳಿಗೆ ತಮ್ಮ ವೇತನ ಮತ್ತು ಭತ್ಯೆ, ನಿತ್ಯಜೀವನ ಹಾಗೂ ಜೀವನೋಪಾಯವನ್ನು ನಿರ್ಧರಿಸುವ ಸಾಧನಗಳು. ಗಂಟೆಗಳ ಲೆಕ್ಕದಲ್ಲಿ ಕೂಲಿ ಪಡೆಯುವ ದಿನಗೂಲಿ ನೌಕರನಿಂದ ತಿಂಗಳಿಗೆ ಲಕ್ಷಾಂತರ ರೂ ಸಂಬಳ ಗಳಿಸುವ ಸಾಫ್ಟ್‍ವೇರ್ ಇಂಜಿನಿಯರ್, ಪ್ರೊಫೆಸರ್ ಮತ್ತು ವೈದ್ಯರವರೆಗೂ ದುಡಿಮೆಯ ಹಣವನ್ನು ಹೀಗೆಯೇ ನೋಡಲಾಗುತ್ತದೆ. ಕಾಲಕಾಲಕ್ಕೆ, ಅರ್ಥವ್ಯವಸ್ಥೆಯ ಏರುಪೇರುಗಳೊಂದಿಗೆ, ಮಾರುಕಟ್ಟೆ ವ್ಯತ್ಯಯಗಳೊಂದಿಗೆ ಮತ್ತು ಅವಶ್ಯ ವಸ್ತುಗಳ ಬೆಲೆ ಏರಿಕೆಯೊಂದಿಗೆ ವೇತನ ಮತ್ತು ಭತ್ಯೆಗಳು ಹೆಚ್ಚಾಗದೆ ಹೋದರೆ ದುಡಿಯುವ ಕೈಗಳು ಶಿಥಿಲವಾಗುತ್ತವೆ.
ತಮ್ಮ ಸರಳ ಜೀವನವನ್ನು ತೂಗಿಸಿಕೊಂಡು ಹಿತವಲಯದಲ್ಲಿ ಸುಖ ಕಂಡುಕೊಳ್ಳುವ ಮಟ್ಟಿಗೆ ವೇತನ ಪಡೆಯುವ ಮಧ್ಯಮ ವರ್ಗದ, ಮೇಲ್ ಮಧ್ಯಮ ವರ್ಗದ ವೈಟ್ ಕಾಲರ್ ಎನ್ನಲಾಗುವ ಕಾರ್ಮಿಕರಿಗೆ ಜೀವನದ ನಿತ್ಯ ಬವಣೆ ಹೆಚ್ಚು ಬಾಧಿಸುವುದಿಲ್ಲ. ಬೆಲೆ ಏರಿಕೆಯ ನಡುವೆಯೂ ತಮ್ಮ ಹಿತವಲಯದಲ್ಲೇ ಸಂಭ್ರಮಿಸುವ ಈ ವರ್ಗದ ಕಾರ್ಮಿಕರಿಗೆ ವೇತನ ಹೆಚ್ಚಳ ಎಂದರೆ ಹಿತವಲಯದ ವಿಸ್ತರಣೆಯಷ್ಟೇ ಆಗಿರುತ್ತದೆ. ಈ ವರ್ಗವೇ ಕಳೆದ ಒಂದು ವರ್ಷದಲ್ಲಿ ಸಂಕಷ್ಟಕ್ಕೀಡಾಗಿರುವುದು ಸ್ಪಷ್ಟ.
“ ತೀರಾ ಬಡವರು ಹೇಗೋ ಬದುಕಿಬಿಡುತ್ತಾರೆ, ಶ್ರೀಮಂತರಿಗೆ ಸಮಸ್ಯೆಯೇ ಎದುರಾಗುವುದಿಲ್ಲ, ಮಧ್ಯಮ ವರ್ಗವೇ ಸದಾ ಸಂಕಷ್ಟಕ್ಕೀಡಾಗುವುದು ” ಎನ್ನುವ ಬೀಸು ಹೇಳಿಕೆಗಳ ನಡುವೆಯೇ ಮಧ್ಯಮ ವರ್ಗಗಳು ತಮ್ಮ ಸಂಕಷ್ಟಗಳಿಗೆ ಕಾರಣರಾದವರನ್ನೇ ಅಧಿಕಾರದಲ್ಲಿ ಕೂರಿಸುತ್ತಾ ಸಂಭ್ರಮಿಸುವುದೂ ಹೌದು. ಬ್ಯಾಂಕ್, ವಿಮೆ, ಸಾರ್ವಜನಿಕ ಉದ್ದಿಮೆಗಳ ನೌಕರರು , ಉನ್ನತ ದರ್ಜೆಯ ಸರ್ಕಾರಿ ನೌಕರರು ಮತ್ತು ಆಧುನಿಕ ಸಾಫ್ಟ್‍ವೇರ್ ನೌಕರರು ಈ ವರ್ಗಕ್ಕೆ ಸೇರುತ್ತಾರೆ.
ಈ ದ್ವಂದ್ವದ ನಡುವೆಯೇ ಬದುಕುವ ಮಧ್ಯಮ ವರ್ಗದ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಂಘಟನಾ ಸಾಮರ್ಥ್ಯ ಮತ್ತು ಐಕಮತ್ಯ ಹೊಂದಿರುವುದೂ ಸತ್ಯ. ಈ ಹಿತವಲಯದ ಹೊಸ್ತಿಲಲ್ಲಿರುವ ಒಂದು ಮಧ್ಯಮ ವರ್ಗವೂ ಕಾರ್ಮಿಕರ ನಡುವೆ ಇರುತ್ತದೆ. ಅಷ್ಟೇನೂ ಹಿತಕರವಲ್ಲದ ಒಂದು ಸರಳ ಬದುಕನ್ನು ತಮ್ಮ ಗಳಿಕೆಯ ಇತಿಮಿತಿಯಲ್ಲೇ ಸಾಗಿಸುತ್ತಾ ನಡೆಯುವ ಈ ಕಾರ್ಮಿಕ ವರ್ಗಗಳನ್ನು ಖಾಸಗಿ ಕಾರ್ಖಾನೆಗಳಲ್ಲಿ, ಸಾರಿಗೆ ಸಂಸ್ಥೆಗಳಲ್ಲಿ, ಸರ್ಕಾರಿ ಕಾರ್ಪೋರೇಷನ್ನುಗಳಲ್ಲಿ ಮತ್ತು ಪುರಸಭೆ, ನಗರ ಸಭೆಗಳಲ್ಲಿ ಕಾಣಬಹುದು.
ಈ ಕಾರ್ಮಿಕ ವರ್ಗಗಳ ಸಂಘಟನಾ ಸಾಮರ್ಥ್ಯ ಎಷ್ಟೇ ಇದ್ದರೂ ಹೆಚ್ಚಿನ ಸಂದರ್ಭದಲ್ಲಿ ವಿಘಟಿತವಾಗಿರುತ್ತದೆ. ತಮ್ಮ ಸೇವಾ ವಲಯದ ಸಂಸ್ಥೆಗಳ ಆರ್ಥಿಕ ಸ್ಥಿತ್ಯಂತರಗಳು ತಮ್ಮ ವೇತನ ಭತ್ಯೆಗಳನ್ನೂ ನಿರ್ಧರಿಸುತ್ತವೆ ಎನ್ನುವ ಪರಿವೆ ಈ ಕಾರ್ಮಿಕರಲ್ಲಿ ಇರುತ್ತದೆ. ತಮ್ಮ ಹೆಚ್ಚಿನ ದುಡಿಮೆಗಾಗಿ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯನ್ನೂ ಕಾರ್ಖಾನೆಗಳಲ್ಲಿ ಕಾಣುತ್ತೇವೆ. ಇಲ್ಲಿ ಹೆಚ್ಚುವರಿ ಉತ್ಪಾದನೆ ಮತ್ತು ಲಾಭಾಂಶ ಬಂಡವಾಳಿಗನ, ಅಂದರೆ ಸಂಸ್ಥೆಯ ಮಾಲಿಕರ, ಪಾಲಾದರೆ ಅಲ್ಪಾಂಶವನ್ನು ವೇತನ-ಭತ್ಯೆಯ ರೂಪದಲ್ಲಿ ನೀಡಲಾಗುತ್ತದೆ.
ಈ ಎರಡನೆಯ ವರ್ಗಕ್ಕೆ ಸೇರಿದ ಒಂದು ಕಾರ್ಮಿಕ ವರ್ಗ ಸಾರಿಗೆ ಸಂಸ್ಥೆಯ ನೌಕರರು. ಇವರು ಪೂರ್ಣ ಪ್ರಮಾಣದ ಸರ್ಕಾರಿ ನೌಕರರಲ್ಲ ಆದರೆ ಒಂದು ಸುಭದ್ರ ನೌಕರಿ ಮತ್ತು ನಿಗದಿತ ವೇತನವನ್ನು ಪಡೆಯುವ ಕಾರ್ಮಿಕರು. ಸಾರಿಗೆ ಸಂಸ್ಥೆಯ ಲಾಭ ನಷ್ಟಗಳು ಮತ್ತು ನಿತ್ಯ ಆದಾಯ ಇವರ ವೇತನ-ಭತ್ಯೆಗಳನ್ನೂ ನಿರ್ಧರಿಸುತ್ತದೆ.
ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ ಸಂಸ್ಥೆ ಒಂದು 1,30,000ಕ್ಕೂ ಹೆಚ್ಚು ಕಾರ್ಮಿಕರಿಗೆ ಅನ್ನ ನೀಡುವ ಒಂದು ಬೃಹತ್ ಉದ್ದಿಮೆ. ರಾಷ್ಟ್ರೀಕರಣದ ನಂತರದಲ್ಲಿ ಈ ಸಂಸ್ಥೆ ಇಂದು ವಿಭಾಗೀಯ ಮಟ್ಟದಲ್ಲಿ ಬೆಳೆದಿದ್ದು ಪ್ರತ್ಯೇಕ ಪ್ರಾಂತೀಯ ವಿಭಾಗಗಳಾಗಿ , ನಾಲ್ಕು ಸಾರಿಗೆ ಸಂಸ್ಥೆಗಳಾಗಿ, ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಕೃಪೆಯಿಂದಲೇ ನಡೆಯಬೇಕಾದ ಈ ಸಂಸ್ಥೆಯ ಹಣಕಾಸು ಸ್ಥಿತಿಯನ್ನು ಸಂರಕ್ಷಿಸುವ ಹೊಣೆ ಸರ್ಕಾರದ ಮೇಲಿದ್ದಷ್ಟೇ ಅಲ್ಲಿನ ಕಾರ್ಮಿಕರ ಮೇಲೆಯೂ ಇರುತ್ತದೆ.
ಈ ಸಂಸ್ಥೆಯ ನೌಕರರು ಈಗ ತಮ್ಮ ವೇತನ ಪರಿಷ್ಕರಣೆ, ಸೇವಾ ನಿಯಮಗಳ ಸುಧಾರಣೆಗಾಗಿ ಮುಷ್ಕರ ಹೂಡಿದ್ದಾರೆ. ಎರಡು ತಿಂಗಳ ಹಿಂದೆ ಹಠಾತ್ ಮುಷ್ಕರದ ಮೂಲಕ ತಮ್ಮ ಸಮಸ್ಯೆಗಳನ್ನು ಮುನ್ನೆಲೆಗೆ ತಂದ ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರಂತೆ ಪರಿಗಣಿಸುವ ಪ್ರಮುಖ ಬೇಡಿಕೆಯೊಂದಿಗೆ ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡಿದ್ದರು.
ಸರ್ಕಾರ ಇವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮುಷ್ಕರ ಅಂತ್ಯವಾಗಿತ್ತು. ಈಗ ಮತ್ತೊಮ್ಮೆ ಮುಷ್ಕರ ಹೂಡಿರುವ ಸಾರಿಗೆ ನೌಕರರು ಆರನೆಯ ವೇತನ ಆಯೋಗದ ಅನ್ವಯ ತಮಗೂ ವೇತನ ಪರಿಷ್ಕರಣೆ ಮಾಡುವ ಒತ್ತಾಯವನ್ನು ಸರ್ಕಾರದ ಮುಂದಿರಿಸಿದ್ದಾರೆ. ಇದು ಪ್ರಸ್ತುತ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ.
ಸಾರಿಗೆ ಸಂಸ್ಥೆಯ ರಾಷ್ಟ್ರೀಕರಣವಾದ ದಿನದಿಂದಲೂ ಅಲ್ಲಿನ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಾ, ಅನೇಕ ಏಳು ಬೀಳುಗಳ ನಡುವೆಯೂ ಉತ್ತಮ ವೇತನ ಶ್ರೇಣಿಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸಾರಿಗೆ ನೌಕರರ ಸಂಘಟನೆ (ಎಐಟಿಯುಸಿ ಸಂಯೋಜಿತ ಫೆಡರೇಷನ್) ಯಶಸ್ವಿಯಾಗಿದೆ. ನಿಗದಿತ ಅವಧಿಯಲ್ಲಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ಒಂದು ಶಿಸ್ತನ್ನೂ ಅಳವಡಿಸಲಾಗಿತ್ತು.
ರಾಜ್ಯ ಸಾರಿಗೆ ಮತ್ತು ಬೆಂಗಳೂರು ನಗರ ಸಾರಿಗೆ ಸಂಸ್ಥೆಗಳ ಚಾಲಕರು, ನಿರ್ವಾಹಕರು, ಮೆಕಾನಿಕ್‍ಗಳು ಮತ್ತು ಡಿಪೋಗಳಲ್ಲಿ ಕೆಲಸ ಮಾಡುವ ಅಸಂಖ್ಯಾತ ಕಾರ್ಮಿಕರಿಗೆ ಉತ್ತಮ ಭವಿಷ್ಯ ನಿಧಿ, ಗ್ರಾಚ್ಯುಯಿಟಿ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ಒದಗಿಸುವಲ್ಲಿ ಫೆಡರೇಷನ್ ಮಹತ್ವದ ಪಾತ್ರ ವಹಿಸಿದೆ.
ಆದರೆ ಎಲ್ಲ ಕ್ಷೇತ್ರಗಳಲ್ಲಿ, ವಲಯಗಳಲ್ಲಿ ಆದಂತೆಯೇ ಸಾರಿಗೆ ವಲಯದಲ್ಲೂ 2000ದ ನಂತರದ ಅವಧಿಯಲ್ಲಿ ಆಡಳಿತ ನೀತಿ ಬದಲಾವಣೆಯಾಗುತ್ತಲೇ ಬಂದಿದೆ. ದುಡಿಮೆಗಾರರ ಬೇಡಿಕೆಗಳನ್ನು ನಿರ್ಲಕ್ಷಿಸುವುದು ಅಥವಾ ಕಾರ್ಮಿಕರ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತಲೇ ಸಂಸ್ಥೆಯನ್ನೂ ಶಿಥಿಲಗೊಳಿಸಿ ಕ್ರಮೇಣ ಖಾಸಗೀಕರಣದತ್ತ ತೆವಳುತ್ತಾ ಸಾಗುವ ಒಂದು ವಿಕೃತ ನೀತಿಯನ್ನು ಅನುಸರಿಸುತ್ತಾ ಬರಲಾಗಿದೆ.
ಇದು ದೇಶದ ಸಮಸ್ತ ಸಾರ್ವಜನಿಕ ಉದ್ದಿಮೆಗಳಲ್ಲಿ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ, ಅನುಸರಿಸುತ್ತಾ ಬರಲಾಗಿರುವ ಒಂದು ವಿಕೃತ ನೀತಿ. ಈ ನೀತಿಯ ಜನಕ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ. ಇಂದು ದೇಶದ ಒಂದೊಂದೇ ಸಾರ್ವಜನಿಕ ಉದ್ದಿಮೆಗಳು ಖಾಸಗಿ ಪಾಲಾಗುತ್ತಿದ್ದರೆ ಈ ಸರಪಳಿಯ ಕೊಂಡಿಗಳನ್ನು ಶಿಥಿಲಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ವಾಜಪೇಯಿ ಆಡಳಿತಾವಧಿಯಲ್ಲಿ ಎನ್ನುವುದನ್ನು ಗಮನದಲ್ಲಿಡಬೇಕು.
ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರರೂ ಸಹ 2004ರಿಂದಲೂ ವೇತನ ಪರಿಷ್ಕರಣೆಗಾಗಿ ಹೋರಾಡುತ್ತಲೇ ಬಂದಿದ್ದಾರೆ. 1995ಕ್ಕೂ ಮುಂಚೆ ಇದ್ದಂತೆ ನಿರ್ದಿಷ್ಟ ಅವಧಿಯಲ್ಲಿ ವೇತನ ಪರಿಷ್ಕರಣೆಯನ್ನು ತ್ರಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಿದ್ದರೆ ಇಂದು ಸಮಸ್ಯೆ ಉಲ್ಬಣಿಸುತ್ತಿರಲಿಲ್ಲ. ರಾಜ್ಯ ಕೈಗಾರಿಕಾ ನ್ಯಾಯಾಧೀಕರಣದ ಅದೇಶದ ಅನ್ವಯ ಈಗಲೂ ಸಾರಿಗೆ ಸಂಸ್ಥೆ ನೌಕರರಿಗೆ 2004ರ ಜನವರಿ 1ರಿಂದ ಶೇ 20ರಷ್ಟು ವೇತನ ಹೆಚ್ಚಳ ನೀಡಬೇಕಿದೆ.
ಆದರೆ ಈ ಆದೇಶದ ವಿರುದ್ಧ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ. ಅಷ್ಟೇ ಅಲ್ಲದೆ ಅವಶ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ಎಂಬ ಪೆಡಂಭೂತವನ್ನು ಕಾರ್ಮಿಕರ ಮುಂದಿರಿಸುವ ಮೂಲಕ ವೇತನ ಹೆಚ್ಚಳ ಮತ್ತು ನೌಕರಿಯ ರಕ್ಷಣೆ ಈ ಎರಡೂ ಜೀವನೋಪಾಯದ ಮಾರ್ಗಗಳನ್ನೇ ಮುಖಾಮುಖಿಯಾಗಿರಿಸುತ್ತಾ ಕಾರ್ಮಿಕರ ವೇತನ ಪರಿಷ್ಕರಣೆಯನ್ನು ಮುಂದೂಡುತ್ತಾ ಬರಲಾಗಿದೆ.
ಸದ್ಯಕ್ಕೆ ಇದು ನ್ಯಾಯಾಲಯದ ಕಟಕಟೆಯಲ್ಲಿದ್ದು ಒಂದು ವೇಳೆ ಕಾರ್ಮಿಕ ನ್ಯಾಯಾಲಯದಲ್ಲಿ ತೀರ್ಪು ಕಾರ್ಮಿಕರ ಪರ ಬಂದರೆ, ಸಾರಿಗೆ ನೌಕರರಿಗೆ 2004ರ ಜನವರಿ 1ರಿಂದ ವೇತನ ಹೆಚ್ಚಳ ದೊರೆಯುತ್ತದೆ. ಕನಿಷ್ಟ ಶೇ 20ರಷ್ಟು ಹೆಚ್ಚಳ ನೀಡುವ ಬೇಡಿಕೆಯನ್ನೂ ಫೆಡರೇಷನ್ ಆಡಳಿತ ಮಂಡಲಿಯ ಮುಂದೆ ಇರಿಸಿದೆ.
ಇಂದು ನಡೆಯುತ್ತಿರುವ ಮುಷ್ಕರದ ಮೂಲ ಬೇಡಿಕೆ ಸಾರಿಗೆ ನೌಕರರಿಗೆ ಆರನೆಯ ವೇತನ ಆಯೋಗದ ವೇತನಶ್ರೇಣಿಯನ್ನು ಅನ್ವಯಿಸಬೇಕು ಎಂಬುದಾಗಿದೆ. ಎರಡು ತಿಂಗಳ ಹಿಂದೆ ನಡೆದ ಮುಷ್ಕರದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆ ಪ್ರಧಾನವಾಗಿತ್ತು. ಇಂದು ಈ ಬೇಡಿಕೆ ಹಿಂಬದಿಗೆ ಸರಿದಿದೆ.
ಆರನೆ ವೇತನ ಆಯೋಗದ ವೇತನ ಶ್ರೇಣಿಯನ್ನು ಅನ್ವಯಿಸಬೇಕಾದರೆ ಸಂಸ್ಥೆಗೆ ನಾಲ್ಕು ಸಾವಿರ ಕೋಟಿ ರೂಗಳಷ್ಟು ಹೊರೆಯಾಗುತ್ತದೆ ಎಂದು ಫೆಡರೇಷನ್ ನಾಯಕರು ಹೇಳುತ್ತಾರೆ. ಈಗಾಗಲೇ ಸಾರಿಗೆ ಸಂಸ್ಥೆಗಳು 3750 ಕೋಟಿ ರೂಗಳಷ್ಟು ನಷ್ಟ ಅನುಭವಿಸುತ್ತಿದ್ದು ಕಳೆದ ವರ್ಷದ ಕೊರೋನಾ ಲಾಕ್ ಡೌನ್ ಪರಿಣಾಮ ಇನ್ನೂ ನಾಲ್ಕು ಸಾವಿರ ಕೋಟಿ ರೂ ಹೆಚ್ಚಿನ ನಷ್ಟ ಅನುಭವಿಸಿದೆ.
ಈ ಸನ್ನಿವೇಶದಲ್ಲಿ ಸಾರಿಗೆ ಸಂಸ್ಥೆಗೆ ಜೀವ ತುಂಬುವ ನೈತಿಕ ಹೊಣೆಗಾರಿಕೆ ಸರ್ಕಾರದ ಮೇಲಿರುತ್ತದೆ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಯಾವುದೇ ಸರ್ಕಾರವೂ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಅತಿಹೆಚ್ಚಿನ ತೆರಿಗೆ ಪಾವತಿಸುತ್ತವೆ. ಇತ್ತೀಚೆಗಷ್ಟೇ ಬೆಂಗಳೂರು ನಗರ ಸಾರಿಗೆ ಸಂಸ್ಥೆಗೆ ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ರಾಜ್ಯ ಸರ್ಕಾರ ತನ್ನ ವಾರ್ಷಿಕ ಆಯವ್ಯಯದಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ನಿರ್ವಹಣೆಗೆ ಕನಿಷ್ಟ 1000 ಕೋಟಿ ರೂ ಮೀಸಲಿಡುವ ಕಾರ್ಮಿಕ ಸಂಘಟನೆಯ ಬೇಡಿಕೆಗೆ ಈವರೆಗೂ ಮನ್ನಣೆ ನೀಡದಿರುವುದು ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಈ ಮುಷ್ಕರದ ಹಿನ್ನೆಲೆಯಲ್ಲಿ ನೋಡಿದಾಗ ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಆದರೆ ಆರನೆ ವೇತನ ಆಯೋಗದ ವೇತನಶ್ರೇಣಿಗಾಗಿ ಪಟ್ಟುಹಿಡಿಯುವುದು ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯವೇನೂ ಅಲ್ಲ. ಹತ್ತು ವರ್ಷಕ್ಕೊಮ್ಮೆ ಪರಿಷ್ಕರಣೆಯಾಗುವ ವೇತನ ಆಯೋಗಕ್ಕಿಂತಲೂ ನಾಲ್ಕು ವರ್ಷಕ್ಕೊಮ್ಮೆ ಪರಿಷ್ಕರಿಸಲಾಗುವ ಉದ್ಯಮದ ಆಂತರಿಕ ಒಪ್ಪಂದಕ್ಕೆ ಸಾರಿಗೆ ಸಂಸ್ಥೆ ಮತ್ತು ಸರ್ಕಾರ ಮನ್ನಣೆ ನೀಡಿದರೂ ಸಾರಿಗೆ ನೌಕರರಿಗೆ ಸಾಕಷ್ಟು ವೇತನ ಹೆಚ್ಚಳ ಲಭ್ಯವಾಗುತ್ತದೆ.
ಬಸ್ ಚಾಲಕರು ಮತ್ತು ನಿರ್ವಾಹಕರ ಸೇವಾ ದಕ್ಷತೆ ಮತ್ತು ಉತ್ತಮ ನಿರ್ವಹಣೆಯ ಪರಿಣಾಮವಾಗಿಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಲವು ಬಾರಿ ವಿಶ್ವ ಮಾನ್ಯತೆ ಪಡೆದಿದೆ. ಸಾರ್ವಜನಿಕ ವಲಯದಲ್ಲೂ ಸಹ ಸಾರಿಗೆ ಸಂಸ್ಥೆಯ ಬಸ್ಸುಗಳೇ ಹೆಚ್ಚು ಸುರಕ್ಷಿತ ಎನ್ನುವ ಭಾವನೆ ಮೂಡಿದ್ದರೆ ಅದಕ್ಕೆ ಸಾರಿಗೆ ನೌಕರರ ದಕ್ಷತೆ ಮತ್ತು ಬದ್ಧತೆಯೇ ಕಾರಣವಲ್ಲವೇ ?
ಸಂಸ್ಥೆ ನಷ್ಟ ಅನುಭವಿಸುತ್ತಿದ್ದರೆ ಅದಕ್ಕೆ ಇತರ ಹಲವು ಕಾರಣಗಳಿವೆ. ಕೆಳಹಂತದ ಚಾಲಕರು, ನಿರ್ವಾಹಕರು, ಮೆಕಾನಿಕ್‍ಗಳು ಮತ್ತಿತರ ಕಾರ್ಮಿಕರು ಈ ನಷ್ಟಕ್ಕೆ ಹೊಣೆಗಾರರಾಗುವುದಿಲ್ಲ. ಭ್ರಷ್ಟಾಚಾರದ ಸೋಂಕಿನಿಂದ ಸಾರಿಗೆ ನೌಕರರು ಸಂಪೂರ್ಣ ಮುಕ್ತರಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ಆದರೆ ಸಂಸ್ಥೆಯ ನಷ್ಟಕ್ಕೆ ಮೇಲಧಿಕಾರಿಗಳ ಭ್ರಷ್ಟಾಚಾರವೂ ಅಷ್ಟೇ ಕಾರಣ ಎನ್ನುವುದನ್ನೂ ಅಲ್ಲಗಳೆಯಲಾಗುವುದಿಲ್ಲ.
ಕೋವಿದ್ ಸಂದರ್ಭದಲ್ಲಿ ತಮ್ಮ ಜೀವ ಒತ್ತೆ ಇಟ್ಟು ಕಾರ್ಯನಿರ್ವಹಿಸಿದ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಮಾನ್ಯ ಮಾಡಿ ಈಡೇರಿಸುವುದು ಒಂದು ಜವಾಬ್ದಾರಿಯುತ ಸರ್ಕಾರದ ನೈತಿಕ ಜವಾಬ್ದಾರಿಯೂ ಆಗಿರುತ್ತದೆ. ಕೋವಿದ್ ಸಂದರ್ಭದಲ್ಲಿ ಮಡಿದ ಸಿಬ್ಬಂದಿಗೆ ಪರಿಹಾರ ನಿಧಿಯನ್ನೂ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರು ಧರಣಿ, ಮುಷ್ಕರ, ಕಾನೂನು ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈಗ ಹೋರಾಟದ ರಂಗ ಪ್ರವೇಶಿಸಿರುವ ರೈತ ನಾಯಕರು ಒಂದು ಕಾರ್ಮಿಕ ವರ್ಗವನ್ನು ಮುನ್ನಡೆಸುವಾಗ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಕೊಂಚ ಯೋಚಿಸುವುದು ಒಳಿತು. ಸಂಸ್ಥೆಯ ಉಳಿವು ಮತ್ತು ಕಾರ್ಮಿಕರ ಹಿತಾಸಕ್ತಿ ಎರಡನ್ನೂ ಗಮನದಲ್ಲಿಟ್ಟುಕೊಂಡು ಹೋರಾಟಗಳನ್ನು ರೂಪಿಸುವುದು ಇಂದಿನ ತುರ್ತು.
ಏಕೆಂದರೆ ಸಾರಿಗೆ ವಲಯವನ್ನು ಖಾಸಗೀಕರಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಎಸ್ಮಾ ಕಾಯ್ದೆ ಜಾರಿಗೊಳಿಸಿದರೆ ನೂರಾರು ಕಾರ್ಮಿಕರು ತೊಂದರೆಗೊಳಗಾಗುತ್ತಾರೆ, ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಇವರನ್ನು ಕಾನೂನು ಹೋರಾಟಗಳ ಮೂಲಕ ರಕ್ಷಿಸುವ ಪರಿಕರಗಳನ್ನು ನೂತನ ಸಂಘಟನೆ ಹೊಂದಿದೆಯೇ ಎಂಬ ಗಹನವಾದ ಪ್ರಶ್ನೆಯೂ ಕಾಡುತ್ತದೆ.
ನೋಂದಾಯಿತ ಸಂಘಟನೆಯಾದ ಮಾತ್ರಕ್ಕೆ ಸಂಸ್ಥೆಯಲ್ಲಿ ಯಾವುದೇ ಆಂತರಿಕ ಚುನಾವಣೆಯನ್ನು ಎದುರಿಸದೆ, ಕಾರ್ಮಿಕರಿಂದ ಪ್ರಜಾಸತ್ತಾತ್ಮಕ ಚುನಾವಣೆಗಳ ಮೂಲಕ ಚುನಾಯಿತರಾಗದೆ, ಸಂಸ್ಥೆಯ ಮಾನ್ಯತೆ ಪಡೆಯದಿರುವ ಒಂದು ಸಂಘಟನೆ ಹಠಾತ್ತನೆ ತಾನು ಸಮಸ್ತ ಸಾರಿಗೆ ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ಮುಂದಾಗುವುದು ಆತ್ಮಹತ್ಯಾ ಪ್ರವೃತ್ತಿಯಾಗಿಯೂ ಪರಿಣಮಿಸಬಹುದು.
ಎಐಟಿಯುಸಿ ಆಗಲೀ, ಸಿಐಟಿಯು ಆಗಲಿ, ಎಡಪಕ್ಷಗಳೇ ಆಗಲಿ ಅಥವಾ ಫೆಡರೇಷನ್ ಆಗಲೀ ಕಾರ್ಮಿಕ ಹೋರಾಟವನ್ನು ಮುನ್ನಡೆಸುವ ಜೀವಿತಕಾಲದ ಗುತ್ತಿಗೆಯನ್ನೇನೂ ಪಡೆದಿಲ್ಲ, ಹಾಗೆಂದು ಪ್ರತಿಪಾದಿಸುವುದೂ ಇಲ್ಲ. ಆದರೆ ಒಂದು ಹೋರಾಟ ರೂಪಿಸುವ ಮುನ್ನ ಸಾಧಕ ಬಾಧಕಗಳನ್ನು ಪರಾಮರ್ಶಿಸಿ ಕಾರ್ಮಿಕರ ಭವಿಷ್ಯದ ಹಾದಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಯೋಚಿಸುವುದು ಯಾವುದೇ ಕಾರ್ಮಿಕ ಸಂಘಟನೆಯ ನೈತಿಕ ಜವಾಬ್ದಾರಿ.
ಲಾಭದಾಯಕವಾಗಿದ್ದ ಸಾರಿಗೆ ಸಂಸ್ಥೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ 1995ರಿಂದಲೂ ಸರ್ಕಾರಗಳು ಸಾರಿಗೆ ಸಂಸ್ಥೆಯ ಮೇಲೆ ಸವಾರಿ ಮಾಡುತ್ತಾ ಖಾಸಗಿ ಬಸ್ ಮಾರ್ಗಗಳಿಗೆ ಅನುಕೂಲ ಮಾಡಿಕೊಡುತ್ತಿವೆ. ದೀರ್ಘಪ್ರಯಾಣದ ಲಾಭದಾಯಕ ಮಾರ್ಗಗಳಲ್ಲಿ ಖಾಸಗಿ ಬಸ್ಸುಗಳಿಗೆ ಅವಕಾಶ ಮಾಡಿಕೊಟ್ಟಿರುವುದೇ ಅಲ್ಲದೆ ಸಾರಿಗೆ ಬಸ್ಸುಗಳಿಗೆ ಡೀಸೆಲ್ ದರದಲ್ಲೂ ರಿಯಾಯಿತಿ ನೀಡದೆ ಸಂಸ್ಥೆ ಸೊರಗಿಹೋಗುವಂತೆ ಮಾಡುತ್ತಿವೆ.
ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಇತರ ನೌಕರ ವರ್ಗಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಬಸ್ ಪಾಸ್‍ಗಳಿಂದ ರಾಜ್ಯದ ಕೋಟ್ಯಂತರ ಜನತೆ ಅನುಕೂಲ ಪಡೆಯುತ್ತಿದ್ದಾರೆ. ಈ ಹೊರೆಯನ್ನು ಸಂಸ್ಥೆಯೇ ಹೊರುತ್ತಿದೆಯೇ ಹೊರತು, ಸರ್ಕಾರ ಭರಿಸುತ್ತಿಲ್ಲ. ಇದು ಹೊಣೆಗೇಡಿತನವಲ್ಲವೇ ? ಇವೆಲ್ಲದರ ಪರಿವೆ ನೂತನ ರೈತ ಕಾರ್ಮಿಕ ನಾಯಕರಿಗೆ ಇರಬೇಕಾಗುತ್ತದೆ.
ಖಾಸಗೀಕರಣದ ಕತ್ತಿ ಸದಾ ತಲೆಯ ಮೇಲೆ ತೂಗಾಡುತ್ತಿರುವ ಸನ್ನಿವೇಶದಲ್ಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ಸಂಸ್ಥೆಯ ಕಾರ್ಮಿಕರಲ್ಲಿ ಈ ಜಾಗೃತಿ ಮೂಡಿಸುವುದೂ ಮುಖ್ಯ. ಈ ಮುಷ್ಕರದ ಪರಿಣಾಮ ಈಗಾಗಲೇ, ಸಾರಿಗೆ ಸಂಸ್ಥೆಯ ನಿಲ್ದಾಣದ ಆಸುಪಾಸಿನಲ್ಲೂ ಸುಳಿಯದಿದ್ದ ಖಾಸಗಿ ಬಸ್ಸುಗಳು ಈಗ ನಿಲ್ದಾಣಗಳನ್ನು ಪ್ರವೇಶಿಸಿವೆ.
ಮುಷ್ಕರದ ಪರಿಣಾಮ ಜನಸಾಮಾನ್ಯರ ಬವಣೆ ಹೆಚ್ಚಾಗಿದೆ ಎಂಬ ಒಂದೇ ಕಾರಣಕ್ಕೆ ಸರ್ಕಾರ ಖಾಸಗೀಕರಣಕ್ಕೆ ಮುಂದಾಗುವುದನ್ನೂ ಇಂದಿನ ಸಂದರ್ಭದಲ್ಲಿ ಅಲ್ಲಗಳೆಯಲಾಗುವುದಿಲ್ಲ. ಮುಷ್ಕರನಿರತ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿರುವ ಸಚಿವ ಆರ್ ಅಶೋಕ್ ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ಮುಳುಗಿರುವ ಹಡಗುಗಳು ಎಂದು ಹೇಳಿರುವುದು ವರದಿಯಾಗಿದೆ. ಇದಕ್ಕೆ ಕಾರಣ ಸರ್ಕಾರವೇ ಅಲ್ಲವೇ ?
ಇವು ಮುಳುಗಿಸಲಾಗಿರುವ ಹಡಗುಗಳು ಎಂದು ಇತಿಹಾಸ ಸಾರಿ ಹೇಳುತ್ತದೆ. ಈಗ ತೇಲುತ್ತಿರುವ ನೌಕೆಯನ್ನೂ ಸಂಪೂರ್ಣವಾಗಿ ಮುಳುಗಿಸಿ ಮತ್ತೊಬ್ಬ ಕಾರ್ಪೋರೇಟ್ ಉದ್ಯಮಿಗೆ ಪರಭಾರೆ ಮಾಡಲು ಸರ್ಕಾರ ತುದಿಗಾಲಲ್ಲಿ ನಿಂತಿರುವುದು ಸತ್ಯ. “ ವ್ಯಾಪಾರ ವ್ಯವಹಾರ ಸರ್ಕಾರದ ಕೆಲಸ ಅಲ್ಲ ” ಎಂದು ಪ್ರಧಾನಿ ಮೋದಿಯವರು ಹೇಳಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈಗ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ವ್ಯಾಪಾರ ವ್ಯವಹಾರದ ಚೌಕಟ್ಟಿಗೆ ಒಳಪಡುವುದಿಲ್ಲ ಎಂದು ನಾವೂ ನಂಬಬೇಕಿದೆ.
ಈ ಸಂದರ್ಭದಲ್ಲೇ ಸಾರಿಗೆ ನೌಕರರು ಮುಷ್ಕರ ಹೂಡಿದ್ದಾರೆ. ಈ ಶ್ರಮಜೀವಿಗಳ ಮುಖ್ಯ ಬೇಡಿಕೆಗಳನ್ನು, ವೇತನ ಪರಿಷ್ಕರಣೆಯನ್ನೂ ಸೇರಿದಂತೆ, ಕೂಡಲೇ ಈಡೇರಿಸಿ, ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದು ಸರ್ಕಾರದ ಮತ್ತು ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳ ಆದ್ಯತೆಯಾಗಬೇಕಿದೆ.
ಸಂಕಷ್ಟದಲ್ಲಿರುವ ಕಾರ್ಮಿಕರ ಬದುಕನ್ನು ಹಸನಾಗಿಸಿದರೆ ಕಡಲ ತಳದಲ್ಲಿರುವ ಹಡಗನ್ನೂ ಮೇಲೆ ತರುವ ಶಕ್ತಿ ಸಾಮರ್ಥ್ಯ ಅವರಲ್ಲಿ ಮೂಡುತ್ತದೆ. ಇದು ಸಾರಿಗೆ ಕಾರ್ಮಿಕರ ಬದುಕಿನ ಪ್ರಶ್ನೆ ಮತ್ತು ಘನತೆಯ ಪ್ರಶ್ನೆ. ಸರ್ಕಾರಕ್ಕೆ ಈ ಪರಿಜ್ಞಾನ ಇದ್ದರೆ ಸಮಸ್ಯೆ ಸುಲಭವಾಗಿ ಪರಿಹರಿಸಬಹುದು.
ಕೊನೆಯದಾಗಿ ಒಂದು ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಾಲ್ಕೂವರೆ ದಶಕಗಳ ಕಾಲ ಸತತ ಹೋರಾಟಗಳ ಮೂಲಕ ರಾಜ್ಯವ್ಯಾಪಿ ಸಂಚರಿಸಿ, ಹಲವಾರು ರೀತಿಯ ತ್ಯಾಗ ಬಲಿದಾನಗಳ ಮೂಲಕ ಕಟ್ಟಿ ಬೆಳೆಸಿದ ಒಂದು ಕಾರ್ಮಿಕ ಸಂಘಟನೆಯ ಸದಸ್ಯರು ಇಂದು ರಾತ್ರೋರಾತ್ರಿ ಉಗಮಿಸಿದ ಒಂದು ಹೊಸ ಸಂಘಟನೆಯ ಹಿಂದೆ ಒತ್ತಾಸೆಯಾಗಿ ನಿಂತಿರುವುದು ಯೋಚಿಸಬೇಕಾದ ವಿಚಾರ.
ಕಾರ್ಮಿಕ ಹೋರಾಟದ ಅಥವಾ ಸಂಘಟನೆಯ ಹೆಜ್ಜೆ ಗುರುತುಗಳನ್ನೇ ಕಾಣದ ಒಂದು ಹೊಸ ಸಂಘಟನೆ ಮತ್ತು ನಾಯಕತ್ವ ಹೇಗೆ ಇಷ್ಟು ದೊಡ್ಡ ಸಂಘಟನೆಯ ಕಾರ್ಮಿಕರನ್ನು ಸೆಳೆಯಲು ಸಾಧ್ಯ ಎನ್ನುವ ಪ್ರಶ್ನೆಯೂ ನಮ್ಮನ್ನು ಕಾಡಬೇಕಿದೆ. ಇದು ಕಾರ್ಮಿಕರ ಐಕ್ಯತೆ ಮತ್ತು ಐಕಮತ್ಯವನ್ನು ಭಂಗಗೊಳಿಸುವ ಹುನ್ನಾರ ಎಂದರೂ ತಪ್ಪಾಗುವುದಿಲ್ಲ. ಕಾರ್ಮಿಕರಲ್ಲಿನ ಹತಾಶೆ, ಅನಿವಾರ್ಯತೆ, ಅಸಹಾಯಕತೆ ಮತ್ತು ಕಾರ್ಯಸಾಧನೆಯ ಹಪಹಪಿ ಇವೆಲ್ಲವನ್ನೂ ಮೀರಿದ ಒಂದು ಆಯಾಮವನ್ನೂ ಈ ಬೆಳವಣಿಗೆಯಲ್ಲಿ ಕಾಣುವುದಾದರೆ ಆತ್ಮಾವಲೋಕನಕ್ಕೆ ಅವಕಾಶ ಇರಲು ಸಾಧ್ಯ.
ಕೃಪೆ : ಬೆವರಹನಿ ಪತ್ರಿಕೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.
ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.
ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.
ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್ನ ನಷ್ಟ ಅಪಾರ. ಲೆಬನಾನ್ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್ಎಚ್ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್ನ ಮಕ್ಕಳ ಸಾವುಗಳು, ಇಸ್ರೇಲ್ನ ಗಾಯಗೊಂಡ ಕುಟುಂಬಗಳು, ಗಲ್ಫ್ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ…
ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.
ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?
ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.
ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.
ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿಮ್ಮದು ದರೋಡೆಕೋರ ಸರಕಾರವಲ್ಲವೇ?
ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..
ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ4 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ3 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ3 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

