ಭಾವ ಭೈರಾಗಿ
ಬಾಳು ಕೊಟ್ಟೆ ಎಂದವನು ಪರಮಪಾಪಿಯಂತೆ ಕಾಣುತ್ತಾನೆ

ಇನ್ನು ಚೆಂದ ಅಂದ್ರೆ ನಿನ್ನ ಹೇಗ್ ನೋಡ್ಕೊಳೋದು, ಯಾವತ್ತಾದರೂ ನಾನು ಗಂಡ ಅನ್ನೋ ಅಧಿಕಾರ ಚಲಾಯಿಸಿದ್ದೇನಾ? ಇಲ್ಲ, ಪಕ್ಕದ ಮನೆಯವನಂತೆ ದಿನಾ ಕುಡಿದು ಬಂದು ಬಡಿಯುತ್ತೇನಾ? ಸಿಗರೇಟಿನಿಂದ ಸುಟ್ಟಿದ್ದೇನಾ? ಮನೇಲಿ ಕೂಡಿಹಾಕಿ ಹಿಂಸೆಕೊಟ್ಟಿದ್ದೇನಾ? ಹೋಗಲಿ ಯಾವತ್ತಾದರೂ ವರದಕ್ಷಿಣೆ ಅಂತ ಮಾತಾಡಿದ್ದೇನಾ? ಯಾವುದೂ ಇಲ್ಲ. ಆದರೂ ನೀನು ಯಾಕ್ ಹೀಗಾಡ್ತಿದಿಯೋ ಅರ್ಥವಾಗ್ತಿಲ್ಲ. ಇನ್ನು ಹೇಗೆ ನೋಡ್ಕೋಬೇಕು ನಿನ್ನ?
ಹೀಗೆ ಕೇಳುವ ಗಂಡ ಅದೆಷ್ಟು ಒಳ್ಳೆಯವನು ಅಂತ ನಿಮಗನ್ನಿಸುತ್ತಾ.. ನನಗಂತೂ ಖಂಡಿತಾ ಅನಿಸಲ್ಲ. ಬದಲಿಗೆ ಅವನ ಬುದ್ದಿಮಟ್ಟ ಇಷ್ಟೇನಾ ಅಂತ ಅನುಮಾನ ಕಾಡಲಾರಂಭಿಸುತ್ತೆ. ಯಾಕಂದ್ರೆ ಇಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿನೋಡಿದರೆ ಆತ ಮಾಡಿರುವ ಅಥವಾ ಮಾಡಬೇಕಿರುವ ಯಾವುದೇ ಒಳ್ಳೆಯ ಕೆಲಸದ ಬಗ್ಗೆ ಮಾತಾಡ್ತಿಲ್ಲ, ಬದಲಾಗಿ ತಾನು ಮಾಡಬಹುದಾಗಿರುವ ಕೆಟ್ಟತನಗಳನ್ನು ಮಾಡಿಲ್ಲ ಹೀಗಾಗಿ ತಾನೊಬ್ಬ ಸಭ್ಯಸ್ಥ ಎಂದು ಸರ್ಟಿಫಿಕೇಟು ಕೊಟ್ಟುಕೊಳ್ತಿದಾನೆ. ಅಂದರೆ ಅವೆಲ್ಲ ಕೆಲಸಗಳನ್ನೂ ಮಾಡುವ ಅವಕಾಶ ನನಗಿದೆ ಮನಸು ಮಾಡಿದರೆ ನಾನು ಅವೆಲ್ಲವನ್ನೂ ಮಾಡಬಹುದಿತ್ತು ಆದರೆ ಅವನ್ನು ಮಾಡದೇ ಇರುವ ಕಾರಣಕ್ಕಾಗಿ ನೀನು ನನಗೆ ಕೃತಜ್ಞಳಾಗಿರಬೇಕು ಎಂಬುದು ಆತನ ಮಾತಿನ ಅರ್ಥ ಅಲ್ವಾ?
ಅಂಗವಿಕಲೆಯೊಬ್ಬಳನ್ನು ಪ್ರೀತಿಸಿ ಮದುವೆಯಾದಾತ ಕೊನೆಗೊಂದು ದಿನ ‘ನಾನು ಅಂಗವಿಕಲೆಯೊಬ್ಬಳಿಗೆ ಬಾಳು ಕೊಟ್ಟೆ ಎಂದು ಹೇಳಿ ಮೈಲೇಜ್ ತೆಗೆದುಕೊಂಡದ್ದೇ ಆದರೆ ಆತನ ಇಡೀ ಪ್ರೀತಿ ಮಣ್ಣುಪಾಲಾದಂತೆ. ಮತ್ತೊಬ್ಬರು ಈತನನ್ನು ಹಾಗೆ ಹೊಗಳುವಾಗ ಮಿಣಮಿಣ ಕಣ್ಣುಬಿಡುತ್ತಾ ತ್ಯಾಗಮಯಿಯಂತೆ ಪೋಸ್ ಕೊಟ್ಟರೂ ಆತನೊಳಗೆ ಅಂಥ ಒಂದು ಆಲೋಚನೆಯಿದೆ ಎಂದೇ ನಾನು ಭಾವಿಸುತ್ತೇನೆ. ಅಸಲಿಗೆ ಆತ ಇದನ್ನು ತ್ಯಾಗ ಅಥವಾ ಉಪಕಾರ ಎಂದು ಭಾವಿಸುವುದಾದರೆ ಆಕೆಯನ್ನು ಮದುವೆಯಾಗದೇ ಸುಮ್ಮನಿರುವುದೇ ಲೇಸು. ಮದುವೆಯಾದ ನಂತರ ಹೀಗೆ ಮಾತನಾಡಿ ಆಕೆಗೆ ಭಯಂಕರ ಗಿಲ್ಟ್ ಬರುವಂತೆಯೋ ಅಥವಾ ಜೀವನವಿಡೀ ಕೃತಜ್ಞಳಾಗಿರುವಂತೆಯೋ ಮಾಡಿಬಿಟ್ಟರೆ ನನ್ನ ಕಣ್ಣಿಗವನು ಪರಮಪಾಪಿಯಂತೆ ಕಾಣುತ್ತಾನೆ.
ಹೀಗೆ ಮಾತನಾಡುವ ಬಹಳಷ್ಟು ಜನರನ್ನ ನಾನು ನೀವು ಆಗಾಗ ಭೇಟಿಯಾಗಿರ್ತೇವೆ. ಕೆಲಸ ಮಾಡಿಸಿಕೊಂಡ ಬಾಸು ‘ನಿಮಗೆ ತಿಂಗಳಿಗೆ ಸರಿಯಾಗಿ ಸಂಬಳ ಕೊಡ್ತೇನೆ ಆ ಕೃತಜ್ಞತೆ ನಿಮಗಿರಲಿ’ ಅಂದಾಗ ಇದೇ ಮಾತು ಮತ್ತೆ ನೆನಪಾಗುತ್ತೆ. ಕೆಲಸ ಮಾಡಿಸಿಕೊಂಡವನು ಸಂಬಳ ಕೊಡಲೇಬೇಕಾದುದು ಕರ್ತವ್ಯ ಅಲ್ವಾ, ಅದನ್ನೇ ತಾನು ಮಾಡುತ್ತಿರುವ ಮಹದುಪಕಾರ ಅಂತ ಹೇಳಿದರೆ ಹೇಗಿರುತ್ತೆ? ಯಾವುದೇ ಸಾಧನೆಯಿಲ್ಲದ, ಉತ್ತಮ ಕೆಲಸವೊಂದನ್ನೂ ಮಾಡದ, ಯಾರಿಗೂ ಉಪಕಾರಿಯಲ್ಲದ ಒಬ್ಬ ವ್ಯಕ್ತಿಯನ್ನು ಕರೆತಂದು ಈತ ಯಾರಿಗೂ ಮೋಸ ಮಾಡಿಲ್ಲ ಅಂತ ಸನ್ಮಾನ ಮಾಡಲಾದೀತೆ, ಇದೂ ಹಾಗೆ ಅಲ್ಲವಾ?
ಹೆಂಡತಿಗೆ ನಾನು ಬಡಿಯುವುದಿಲ್ಲ ಎಂಬುದೊಂದು ಹೆಗ್ಗಳಿಕೆಯಾ? ಅಸಲಿಗೆ ಬಡಿಯುವಂಥ ಕ್ರೂರ ಮೃಗ ನೀನಾಗಲು ಸಾಧ್ಯವಾ, ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವ ಮನುಷ್ಯ ಎಷ್ಟು ಮೂರ್ಖನೋ, ವರದಕ್ಷಿಣೆ ಕೇಳಿಲ್ಲದ್ದಕ್ಕೆ ಬಡಾಯಿ ಕೊಚ್ಚಿಕೊಳ್ಳುವವನೂ ಅಷ್ಟೇ ಮೂರ್ಖನಾಗಿರುತ್ತಾನೆ. ಹೆಂಡತಿಯನ್ನು ಹಿಡಿದು ಬಡಿಯುವವನಂತೆಯೇ, ತಾನು ಬಡಿಯುವುದಿಲ್ಲವೆಂದು ಹೇಳಿಕೊಳ್ಳುವವನೂ ಸಣ್ಣವನಾಗುತ್ತಾನೆ. ನಮ್ಮನ್ನು ನಾವು ಯಾರೊಂದಿಗೆ ಹೋಲಿಸಿಕೊಳ್ಳುತ್ತೇವೆ ಎಂಬುದೂ ಬಹಳಷ್ಟು ಬಾರಿ ನಮ್ಮ ಯೋಗ್ಯತೆಗಳನ್ನು ನಿರ್ಧರಿಸುತ್ತವೆ.
(-ದರ್ಶನ್ ಆರಾಧ್ಯ, ಪತ್ರಕರ್ತರು, ಬೆಂಗಳೂರು)

ಭಾವ ಭೈರಾಗಿ
ಕವಿತೆ | ಯುಗಾದಿ ಪುರುಷ

- ಡಾ.ಕೆ.ಎ.ಓಬಳೇಶ್
ಯುಗ ಯುಗದಾಚೆಗಿನ
ಬಂಧನದ ಬದುಕಿಗೆ
ಬಿಡುಗಡೆಯ ಹಾದಿ ತೋರಿ
ಹೊಸ ಯುಗದತ್ತ ಕೊಂಡೊಯ್ದ
ಯುಗಪುರುಷ ನೀನಾದೆ.
ಯುಗ ಯುಗದಾದಿಯಾಗಿ
ಸಾಗುತ್ತಲೆ ಇತ್ತು
ಸ್ವಾಭಿಮಾನವಿರದ ಯುಗಾದಿ
ನಿಮ್ಮ ಜ್ಞಾನವೇ ನಮಗಾಯ್ತು
ಹೊಸ ಸಂವತ್ಸರಕೆ ನಾಂದಿ.
ಸ್ವಾಭಿಮಾನಿ ಹೋರಾಟದಲಿ
ಕಹಿಯ ತಾನುಂಡು
ಸಿಹಿಯ ನಮಗಂಚಿ
ನಮಗೊಂದು ಹೊಸ ಯುಗವ
ಕರುಣಿಸಿದ ಕರುಣಾಳು ನೀನಾದೆ.
ನಿಮ್ಮ ಹೊರತು ಸ್ವಾಭಿಮಾನದ ಯುಗವೇ ಇಲ್ಲ
ನೀವೆ ಈ ಜಗದ ಹಾದಿ
ನೀವೆ ಯುಗದ ಆದಿ
ನೀವೆ ನಮ್ಮ ಯುಗಾದಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!

- ಪದ್ಮಶ್ರೀ ಗೋವಿಂದರಾಜು,ಭದ್ರಾವತಿ
ಹುಂ!!
ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು
ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ
ಹಗಲು ರಾತ್ರಿಯೇನ್ನದೆ ಕಾಯುವಳು
ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ
ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!!
ಚಿತೆಯ ಅಗ್ನಿ ಸ್ಪರ್ಶ ಮಾಡಿ ತಿರುಗಿ
ನೋಡದೆ ಹೋದ ನೆಂಟರು,
ಉಳಿಸಿ ಹೋದ ಬೆಂಕಿಯ
ಅರದಂತೆ ಉರಿಸುವಳು ಅವಳು.
ಮಕ್ಕಳು ಮರಿಯ ಸಂಸಾರವೇ
ಇಲ್ಲದ ಅವಳಿಗೆ ಆಗಾಗ ಬರುವ
ದೇಹಗಳ ಜೊತೆ ಬಂದ ಜನರು
ನಡೆದಾಡುವ ಶವಗಳಂತೆ ಕಾಣುವರು
ಕಾರಣ
ಮಸಣವೊಂದೇ ಕೊನೆಯ ಮನೆ
ಆಕೆ ಅರಿತಿದ್ದಾಳೆ
ಅದಕೇ
ಆಕೆ ಮಸಣ ಕಾಯುವ ಪಾರ್ವತಿ!!
(ಸುಮಾರು ವರ್ಷಗಳಿಂದ ಶಿವಮೊಗ್ಗ ಸ್ಮಶಾನ ಕಾಯುವುದು ಒಬ್ಬ ಹೆಣ್ಣು.
ಆಕೆಯ ಛಲದ ಬದುಕಿಗೆ ಒಂದು ಪ್ರಣಾಮ )
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಭಾವ ಭೈರಾಗಿ
ಕಾದಂಬರಿ ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

- ಸಿಂಪಲ್ ಸಿಂಚು
ಇತ್ತೀಚಿಗಷ್ಟೇ ಕರುನಾಡ ಹಣತೆ ಕವಿ ಬಳಗದ ಮೂಲಕ ಪರಿಚಿತರಾದ ಕೆ.ಸಿರಿ (ಗ್ರಾಮ ಲೆಕ್ಕಿಗರು) ಚಾಮರಾಜನಗರ. ಇವರು ಪರಿಚಯವಾದ ಹತ್ತು ನಿಮಿಷದಲ್ಲಿಯೇ ಇವರ ಕಾದಂಬರಿ ನನ್ನ ಕೈಗೆ ತಲುಪಿತು. “ಸ್ವಪ್ನದಲ್ಲಿ ಸೊರಗಿದ ಪ್ರೀತಿ”. ಅತ್ಯದ್ಭುತವಾದ ಶೀರ್ಷಿಕೆ ಹೊಂದಿದೆ. ನಾನು ಒಬ್ಬಳು ಬರಹಗಾರ್ತಿಯಾಗಿ ಶೀರ್ಷಿಕೆ ನೋಡಿ ನನ್ನದೇ ಆದಂತಹ ಒಂದು ಕಲ್ಪನೆಯಲ್ಲಿ ನಾನು ಮುಳುಗಿದಾಗ.
ಪ್ರೀತಿಯೆಂದರೆ, ಪ್ರೇಮ ಅಷ್ಟೇ ಅಂದುಕೊಂಡಿದ್ದೆ ಆದರೆ ಕುತೂಹಲದಿಂದ ಕಾದಂಬರಿಯನ್ನು ಓದುತ್ತಿರುವಾಗ ಅರ್ಥವಾಯಿತು, ಪ್ರೀತಿಯೆಂದರೆ ಹೆಸರು ಹಾಗೆಯೇ ಪ್ರೇಮ ಅನ್ನೋದು ಕೂಡ ಹೆಸರು, ಅಂತ. ಸಮಾಜದಲ್ಲಿ ಪ್ರೇಮ ನಿವೇದನೆಯನ್ನು ಮೊದಲಿಗೆ ಹುಡುಗರು ಮಾಡಬೇಕು, ಅದಕ್ಕೂ ಮೊದಲು ಪ್ರೇಮ ನಿವೇದನೆಯನ್ನು ಹುಡುಗಿ ಮಾಡಿದರೆ ತಪ್ಪು.
ಎಂಬುದು ವಿಶ್ವವಿಖ್ಯಾತಿ ಅಭಿಪ್ರಾಯ. ಅದು ಇನ್ನು ಹಲವಾರು ಜನರ ಅಭಿಪ್ರಾಯವೂ ಹೌದು. ಹೆಣ್ಣಾದವಳು ತನ್ನೊಳಗಿನ ಭಾವನೆಗಳನ್ನು, ನನ್ನೊಳಗಿನ ತಲ್ಲಣಗಳನ್ನು ಹೊರಹಾಕಲು ಸಮಾಜದಲ್ಲಿ ಸರಿಯಾದ ರೀತಿಯ ಸ್ವತಂತ್ರ ಕೂಡ ಇಲ್ಲ ಅಂತಹ ಕಟ್ಟುಪಾಡುಗಳಿಗೆ ಸ್ವಪ್ನದಲ್ಲಿ ಸೊರಗಿದ ಪ್ರೀತಿಯು ಪರಿಹಾರವಾಗಿದೆ.
ಇದನ್ನೂ ಓದಿ | ಪುಸ್ತಕ ವಿಮರ್ಶೆ | ಮೋಹದ ಮೋಡಗಳು
ಈ ಕಾದಂಬರಿಯನ್ನೂ ಪೂರ್ತಿಯಾಗಿ ಇದರಲ್ಲಿ ಮುಳುಗಿ ಓದಿದಾಗ ಮಧ್ಯದಿಂದ ಹಿಡಿದು ಕೊನೆಯವರೆಗೂ ದುಃಖ ನನ್ನನ್ನು ಅವರಿಸುತ್ತದೆ. ಪ್ರೀತಿ ಪ್ರೇಮ್ ಎಂಬ ಹೆಸರಿನ ಹೊಂದಾಣಿಕೆ ತುಂಬಾ ಅದ್ಭುತವಾಗಿದೆ. ಪ್ರೀತಿ ಪ್ರೇಮ್ ನಾ ಹುಟ್ಟಿದ ದಿನ, ಕೆಂಪುಬಣ್ಣದ ಅಭಿರುಚಿ, ಪ್ರೀತಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದಂತಹ ಪದ್ಧತಿ.
ಎಲ್ಲವೂ ಕೂಡ ತುಂಬಾ ಮನಸ್ಸಿಗೆ ಇಷ್ಟವಾಯಿತು. ಹಾಗೆಯೇ ಪ್ರೀತಿ ಎಷ್ಟು ವರ್ಷಗಳ ಕಾಲವಾದರೂ ತನ್ನ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ರೀತಿ. ನಮ್ಮಂತಹ ಹೂಮನಸ್ಸಿಗರಿಗೆ ಸ್ಫೂರ್ತಿದಾಯಕವಾಗಿದೆ. ಈ ಕಾದಂಬರಿಯಲ್ಲಿ ಹುಚ್ಚುಕೋಡಿ ಮನಸ್ಸಿನ ಚಿತ್ರಣವನ್ನು ಮತ್ತು ನಿಯಂತ್ರಣವನ್ನು, ಪ್ರೇಮ್ನಾ ಮೂಲಕ ಬಣ್ಣಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮವೆಂದು ಆವೇಶ ಪಟ್ಟು ಆತ್ಮಹತ್ಯೆ, ಸಾವಿನ ಕೃತ್ಯಗಳನ್ನು ಕೈಗೊಳ್ಳುವ ಯುವಜನರಿಗೆ ಜೀವನದ ಗುರಿ ಮುಖ್ಯ ಎಂಬುದನ್ನು ತಿಳಿಸುತ್ತದೆ. ಮುಂದುವರೆದು ಕನ್ನಡ ದೇಸಿ ಪದಗಳ ಸಂಭಾಷಣೆ, ನಿರ್ಗಳತೆಯಿಂದ ಕಾದಂಬರಿ ಓದುವವರಿಗೆ ಪ್ರಯಾಣದಲ್ಲಿ ನಿಲ್ದಾಣಗಳಂತೆ ಸರಳವಾಗಿ ಅರ್ಥವಾಗುವ ಕವನಗಳು ಕಾದಂಬರಿಯ ವಿಶೇಷತೆಯಾಗಿದೆ.
ಅಪ್ಪ-ಅಮ್ಮನ ಮಾತಿಗೆ ಬೆಲೆ ಕೊಡದಿರುವ ಯುವಜನಾಂಗಕ್ಕೆ ಮಾದರಿ ಪ್ರೇಮ್ ಒಂದೆಡೆ ಆದರೆ, ಇನ್ನೊಂದೆಡೆ ಅದೇ ಪ್ರೇಮ್ ಪ್ರೀತಿಯ ಪ್ರೀತಿಯನ್ನು ನಿಭಾಯಿಸಲು ಬರದೆ, ತನಗೆ ತಾನು ಮೋಸ ಮಾಡಿಕೊಂಡಿದ್ದು ತುಂಬಾ ದುಃಖಕರ ವಿಚಾರ. ಅತಿ ಹೆಚ್ಚು ಭಾವುಕರಾದ ಕ್ಷಣ ಪ್ರೇಮ್ ತನ್ನ ಅಪ್ಪನನ್ನು ಪ್ರೀತಿಯ ಗೋರಿಯ ಹತ್ತಿರ ಕರೆದುಕೊಂಡು ಹೋಗಿ.
ತನ್ನ ದುಃಖವನ್ನು ಹೇಳಿಕೊಂಡು ಅಪ್ಪ-ಮಗ ಇಬ್ಬರೂ ಪಶ್ಚತಾಪ ಪಡುವ ಕ್ಷಣ.ಪ್ರೀತಿಯ ಬದಲಿಗೆ ಪಾರ್ವತಿ ಬಂದಾಗ, ಪ್ರೀತಿಯನ್ನು ಪಾರ್ವತಿಯಲ್ಲಿ ಕಾಣುವುದು!! ಇಲ್ಲದಿರುವ ವ್ಯಕ್ತಿಗಳನ್ನು ಇರುವ ವ್ಯಕ್ತಿಗಳೊಂದಿಗೆ ಕಲ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂತಹ ಸಂದರ್ಭವನ್ನು ತುಂಬಾ ಸೂಕ್ಷ್ಮವಾಗಿ ವರ್ಣಿಸಿದ್ದಾರೆ.
ನಾನು ಪಿಯುಸಿ ನಲ್ಲಿರುವಾಗ ವಿನಿತ್ ಎಂಬ ಹುಡುಗ ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪ್ರೇಮ ನಿವೇದನೆಯನ್ನು ತನ್ನ ಗೆಳೆಯರೊಂದಿಗೆ ಹೇಳಿಕಳಿಸಿದ್ದ ನಾನು ಮೊದಲು ಪರೀಕ್ಷೆ ಬರೆದು ಪಾಸ್ ಆಗಲಿಕ್ಕೆ ಹೇಳು ಎಂದು ಬೈದು ಕಳಿಸಿದ ಕ್ಷಣ ನೆನಪಾಗಿ ನಕ್ಕಿದೆ.
ಈ ಕಾದಂಬರಿಯನ್ನು ಓದಿದ ಕ್ಷಣಗಳು ನನ್ನನ್ನು ತುಂಬಾ ಯೋಚನೆ, ತುಂಬಾ ಭ್ರಮೆಗಳಿಗೆ, ತುಂಬಾ ಪ್ರಶ್ನೆಗಳಿಗೆ ಅನುವು ಮಾಡಿ ಎಲ್ಲದಕ್ಕೂ ಕೊನೆಯಲ್ಲಿ ಉತ್ತರ ಹುಡುಕುವಲ್ಲಿ ವಿಶಾಲವಾದ ಮನಸ್ಥಿತಿಯನ್ನು ತಂದುಕೊಟ್ಟಂತಹ “ಕೆ. ಸಿರಿಯವರ ಸ್ವಪ್ನದಲ್ಲಿ ಸೊರಗಿದ ಪ್ರೀತಿಗೆ ಸದಾಕಾಲ ಚಿರಋಣಿ”. ಶುಭವಾಗಲಿ ಶ್ರೀಧರ್ ಸರ್. ಇನ್ನು ಹಲವಾರು ವಿಶೇಷ ವಿಭಿನ್ನ ಕಾದಂಬರಿಗಾಳಿಗಾಗಿ ಕಾಯುತ್ತಿರುವ ಆಶಾ ಜೀವಿ ನಿಮ್ಮ ಅನುಯಾಯಿ. ಸಿಂಪಲ್ ಸಿಂಚು. ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ನಿಶ್ಚಿತಾರ್ಥ ಸಂಭವ! ಶನಿವಾರ- ರಾಶಿ ಭವಿಷ್ಯ ಏಪ್ರಿಲ್-17,2021
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ಸಂಜೆಯೊಳಗೆ ಒಂದು ಖುಷಿ ಸಂದೇಶ! ಭಾನುವಾರ- ರಾಶಿ ಭವಿಷ್ಯ ಏಪ್ರಿಲ್-18,2021
-
ದಿನದ ಸುದ್ದಿ5 days ago
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ
-
ದಿನದ ಸುದ್ದಿ5 days ago
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
-
ದಿನದ ಸುದ್ದಿ3 days ago
ಹಳೇ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ ಕೆಲಸಗಳು ಉತ್ತಮ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್
-
ದಿನದ ಸುದ್ದಿ5 days ago
ಡೀಲರ್ಶಿಪ್ಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ದಾವಣಗೆರೆ | ಮೇ 04 ರವರೆಗೆ ರಾತ್ರಿ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂ ಘೋಷಣೆ