ಭಾವ ಭೈರಾಗಿ
ನನ್ನ ಕೆನ್ನೆಯಲ್ಲಿ ಗುಳಿಯಿಲ್ಲ ಕ್ಷಮಿಸಿಬಿಡು ಮಾರಾಯ್ತಿ

ಇಪ್ಪತ್ತೈದು ವರ್ಷ ಕಾಯಿಸಿದ್ದು ಸಾಲದೇ ಇನ್ನೂ ಪಕ್ಕದ ಖಾಲಿ ಜೋಕಾಲಿಗೆ ಉತ್ತರಕೊಡಲಾಗುತ್ತಿಲ್ಲ. ಗುಳಿಕೆನ್ನೆಯ ಹುಡಗನಿಗಾಗಿ ಸಾಕಷ್ಟು ಹುಡುಗಿಯರು ಕನಸು ಕಂಡಿರ್ತಾರೆ. ಹಾಗೇ ನೀನು ಕೂಡ ಕಂಡಿರಬಹುದು. ನಿನ್ನಾಣೆ ನಾನೇನು ಬೇಕು ಅಂತ ಕೆನ್ನಯ ಕುಳಿಯನ್ನ ಮುಚ್ಚಿಕೊಂಡವನಲ್ಲ. ಅದು ಪ್ರೊಡಕ್ಷನ್ ಮಿಸ್ಟೇಕು, ಅಪ್ಪ, ಅಮ್ಮನಿಗಿಲ್ಲದ ಕುಳಿ ನನ್ನ ಕೆನ್ನೆಗೆ ಅದೆಲ್ಲಿಂದ ಬಂದೀತು? ಈ ವಿಚಾರದಲ್ಲಿ ನಾನು ನಿಸ್ಸಹಾಯಕ. ಬೇಕಿದ್ರೆ ಒಂದು ಬೊಗಸೆ ಪ್ರೀತಿ ಹೆಚ್ಚಾಗಿ ಕೊಟ್ಟೇನು ಆದರೆ ಇಲ್ಲದ ಕುಳಿಯನ್ನ ಎಲ್ಲಿಂದ ತರಲಿ? ಆ ಕೋಪಕ್ಕೆ ನೀನು ಮುಂದೆ ದಿನಾ ನನ್ನ ಗುಂಡುಕೆನ್ನೆಗೆ ಹೊಡೆದು ಸೇಡು ತೀರಿಸಿಕೊಳ್ಳುವ ಹಟಕ್ಕೆ ಬಿದ್ರೆ ಅನ್ನೋ ಭಯಕ್ಕೆ ಈಗಲೇ ಹೇಳ್ತಿದೀನಿ.
ನನಗೆ ಲಾಲಿ ಹಾಡೋಕೆ ಬರೋಲ್ಲ ಹಾಗಂತ ನೀನು ತೊಡೆ ಮೇಲೆ ಮಲಗಿದಾಗ ನಿನ್ನ ತಲೆಯಲ್ಲಿ ಕೈಯ್ಯಾಡಿಸುತ್ತಾ ನಾಲ್ಕು ಮುದ್ದಮುದ್ದು ಮಾತಾಡದಷ್ಟು ಪೆದ್ದ ಏನಲ್ಲ. ಗುಳಿಕೆನ್ನೆ ಒಂದು ಬಿಟ್ಟು ನೀನು ಕನಸು ಕಂಡಿರಬಹುದಾದ ಎಲ್ಲದಕ್ಕಿಂತ ಒಂದು ಕೈ ಹೆಚ್ಚೇ ಪ್ರೀತಿ ಕೊಡಬಲ್ಲೆ. ಒಂಚೂರು ಜಾಸ್ತಿನೆ ಮುದ್ದು ಮಾಡುವ ಹುಡುಗ ನಾನು ಅದಕ್ಕಾಗಿ ಮೊದಲೇ ಸಾರಿ ಕೇಳಿಬಿಡ್ತೀನಿ. ನಿಮಪ್ಪನಿಗೆ ನನ್ ಪ್ರೀತಿಲಿ ಪಾಲು ಕೊಡು ಅಂತ ನೀನ್ ಮಾತ್ರ ಹಟ ಮಾಡ್ಬಾರ್ದು. ಅವರೇ ನಿನ್ ಫಸ್ಟ್ ಹೀರೋ ನಾನೇನಿದ್ರು ಸೆಕೆಂಡ್ ಅಂತ ನಂಗೊತ್ತು. ಕಳೆದ ಇಪ್ಪತ್ತು ವರ್ಷ ನಿನ್ನ ಪ್ರೀತಿಯಲ್ಲಿ ನಾನೇನು ಭಾಗ ಕೇಳಿದ್ನಾ ಇಲ್ವಲ್ಲಾ ಮುಂದೆ ಅವರು ಕೇಳಿದ್ರೆ ನಾನ್ ಕೊಡಲ್ಲ. ಹಾಗೆ ಕೊಡದೆನೂ ಇರಲ್ಲ. ಪಾಪ ಅಂತ ಒಂದ್ 30% ಕೊಡ್ತಿನಿ ಅದಕ್ಕಿಂತ ಜಾಸ್ತಿ ಪ್ರೀತಿ ಕೇಳಬಾರದು ಓಕೆನಾ..
ನಿಮ್ಮಪ್ಪನ ರೀತಿ ಹೆಗಲಮೇಲೆ ಹೊತ್ತು ಊರು ತಿರುಗಿಸಿ, ಜಾತ್ರೆಲಿ ಫ್ರಾಕು ಕೊಡಿಸೋ ಭಾಗ್ಯ ನನಗಿಲ್ಲ ಯಾಕಂದ್ರೆ ಈಗ ನೀನು ದೊಡ್ಡವಳಾಗಿದಿಯ. ಹಾಗಂತ ನಾನೇನು ಸುಮ್ನಿರಲ್ಲ, ನನ್ ಪಾಲಿಗೆ ನೀನ್ ಯಾವತ್ತೂ ಮಗೂನೆ, ಇರೋ ಬೈಕಲ್ಲೇ ಊರು ಸುತ್ತಿಸುವ, ಮತ್ತು ಈ ತೋಳಲ್ಲೇ ನಿನ್ನ ಹೊತ್ತು ಬೆಟ್ಟ ಹತ್ತುವ ಬೆಚ್ಚಗಿನ ಪ್ರೀತಿಯನ್ನಂತೂ ಕೊಡಬಲ್ಲೆ.
ಜಿಟಿಜಿಟಿ ಮಳೆಯಲ್ಲಿ ಲಾಲ್ ಭಾಗ್ ರಸ್ತೆ ಬದಿ ಒಬ್ಬನೇ ಕೂತು ಕಾಫಿ ಹೀರುವಾಗ ಈ ಎದೆತುಂಬೆಲ್ಲಾ ನಿನ್ನದೇ ನೆನಪು. ಹಾಳಾದ್ ಸಕಲೇಶಪುರದ ರಸ್ತೆ ತುಳಿದರೆ ಸಾಕು ಜೀವ ನಿನ್ನೊಬ್ಬಳನ್ನು ಬಿಟ್ಟು ಮತ್ತೇನನ್ನೂ ನೆನೆಯಲ್ಲ. ನನ್ನ ಬೈಕಿನ ಹಿಂಬದಿ ಸೀಟು ನನ್ನ ನೋಡಿ ಅಣಕಿಸೋದೆ ಅಂಥ ಟೈಮಲ್ಲಿ, ನಿನಗೆ ಕಾರ್ ಡ್ರೈವಿಂಗ್ ಬರದಿದ್ರೂ ಪರವಾಗಿಲ್ಲ, ನಾನ್ ನಿನಗೆ ಬೈಕ್ ರೈಡಿಂಗ್ ಕಲಿಸಿಕೊಡ್ತೇನೆ. ಅದೊಂದಿನ ಸುರಿವ ಮಳೆಯಲ್ಲಿ ಸಕಲೇಶಪುರದ ರಸ್ತೆ ರಸ್ತೆಯಲ್ಲಿ ನಿನ್ ಹಿಂದೆ ಕೂತು ಬೈಕ್ ರೈಡ್ ಮಾಡಿ ಮರ,ಗಿಡ, ರಸ್ತೆಗಳಿಗೆಲ್ಲಾ ಹೊಟ್ಟೆ ಉರಿಸಬೇಕಿದೆ. ಹಾ ಕಳೆದ ಬಾರಿ ಒಬ್ಬೊಂಟಿ ಅಂತ ನನ್ನ ರೇಗಿಸಿದ ಆ ಮರದ ಹನಿಗಳಿಗೂ ತಕ್ಕ ಉತ್ತರ ನೀಡಿಬರೋಣ.
ಅಂದ ಹಾಗೆ ನಮ್ಮಿಬ್ಬರ ಮೊದಲ ಭೇಟಿಯಲ್ಲಿ ಗಡ್ಡ ಬೋಳಿಸು ಮಾರಾಯ ಅಂತ ಮಾತ್ರ ಹೇಳಬೇಡ ಯಾಕಂದ್ರೆ ಈ ಗಡ್ಡ ಇಲ್ಲದಾಗ ಮುದ್ದುಮಾಡೋಕೆ ನೀನಿಲ್ಲ ಅಂತ ಎಷ್ಟು ಹೊಟ್ಟೆ ಉರ್ಕೊಂಡಿದ್ದೆ ಅಂತ ನನಗೆ ಮಾತ್ರ ಗೊತ್ತು. ನೀ ಬರುವ ದಾರಿ ಕಾಯುತ್ತಿದ್ದೇನೆ ಇಪ್ಪತ್ತೈದು ವರ್ಷ ಕಾಯಿಸಿದ್ದು ಸಾಕು ಬಂದುಬಿಡೆ ಪ್ಲೀಸ್,,,,
ಇತಿ
ದಾರಿ ಕಾಯುತ್ತಿರುವ ನಿನ್ನ ರಾಮ

ಭಾವ ಭೈರಾಗಿ
ಕವಿತೆ | ಬುದ್ಧ ನಗುತ್ತಾನೆ..!

- ರಶ್ಮಿಪ್ರಸಾದ್ (ರಾಶಿ)
ಬೋಧಿವೃಕ್ಷದಡಿಯಲಿ ಕುಳಿತು
ಬೋಧನೆಯ ನೆಲೆಯಲಿ ನಿಂತರಷ್ಟೇ
ನಿನ್ನಂತಾಗುವೆವೆಂಬ ಮೌಢ್ಯವ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಸಕಲವೈಭೋಗಗಳನೂ ತ್ಯಜಿಸಿ
ಮೋಹದಾ ಸೆಲೆಯನು ತೊರೆದರಷ್ಟೇ
ನಿನ್ನಂತಾಗುವೆವೆಂಬ ಭ್ರಮೆಯ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಭೋಗ,ರಾಗದ ತತ್ವವಷ್ಟೇ ಅರಿತು
ತ್ಯಾಗ,ವಿರಾಗದ ಮಹತ್ವವನ್ನೇ ಮರೆತು
ನಿನ್ನಂತೆ ನಗುವುದಿಲ್ಲವೆಂಬ ಸತ್ಯವ ಕಂಡು
ಬುದ್ಧ ಇನ್ನೂ ಮುಗುಳ್ನಗುತ್ತಲೇ ಇದ್ದಾನೆ…
ನಿಜಕ್ಕೂ ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ನಿನ್ನ ಹೆಸರಷ್ಟೇ ಉಚ್ಛರಿಸುವೆವು ನಾವು
ನಿನ್ನ ತತ್ವಗಳ ಪಾಲಿಸಲೇ ಇಲ್ಲ ನಾವು
ನಿನ್ನ ಉಪದೇಶವ ಪಠಿಸಲಿಲ್ಲ ನಾವು
ನಿನ್ನ ವೇದಾಂತವೆಂದೂ ಅನುಸರಿಸಲಿಲ್ಲ ನಾವು
ನಿನ್ನಂತೆ ಎಂದಿಗೂ ಆಗಲೇ ಇಲ್ಲ ನಾವು.!
ಮತ್ತೇ ನೀನೇ ಹುಟ್ಟಿಬರಬೇಕು ಬುದ್ಧ
ನಮ್ಮೊಳಗೆ ಜ್ಞಾನೋದಯದ ಬೆಳಕು ಚೆಲ್ಲಲು
ನಮ್ಮೊಳಗೆ ಬೌದ್ಧತ್ವದ ಠಾವು ಮೂಡಲು
ನಮ್ಮೊಳಗೆ ಶಾಂತಿ ಮಂತ್ರದ ತಪನೆಯಾಗಲು
ನಮ್ಮೊಳಗೆ ನಮ್ಮನ್ನೇ ಕಂಡುಕೊಳ್ಳಲು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ನಿನ್ನ ಮಗನ ಕೊಂದರು…

- ಮೂಲ : ಬ್ರೆಕ್ಟ್, ಅನುವಾದ : ಸಿದ್ಧಲಿಂಗಯ್ಯ
“ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿ ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.
ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು
ಬಿಸಿಲೇರದ ಬೆಳಗಿನಲ್ಲಿ ನಿನ್ನ ಮಗನ ಕೊಂದರು
ಬೆವರ ಬಸಿದ ಅವನ ಎದೆಗೆ ಗುರಿಯಿಟ್ಟರು
ಗುಂಡಿಕ್ಕಿದರು.
ಗುಂಡೊಂದು ಕಾಣಲಿಲ್ಲ ಕೊಲೆಗಡುಕರ ಕೆಲಸವೆಲ್ಲ
ಸತ್ತ ಮಗನ ಕಣ್ಣಿನಲ್ಲಿ ಮಿಂಚಿಮಾಯವಾಯಿತು
ಹೊರಗಿನವರು ಕೊಲ್ಲಲಿಲ್ಲ ಎಲ್ಲ ಇವನ ಬಂಧುಬಳಗ
ನೆರೆಹೊರೆಯವರು
ಸುತ್ತಿದಂಥ ಸರಪಳಿಯಲಿ ಧರಧರಧರ ಎಳೆಯುವಾಗ
ಕ್ರಾಂತಿವೀರರೆಲ್ಲ ಬಂದು ಮುತ್ತಿಕೊಂಡರು.
ಗಿಟುಕಾಸಿದ ಗಿರಣಿಗಳು ಚಿಮಣಿ ಹೊತ್ತು ನಿಂತಿದ್ದೊ
ಅವನ ಕಾಲ ಮಿಂಚಿತ್ತು ಹೊಳೆಯಿತೇನೊ ಮನಸಿಗೆ
ಶೂನ್ಯವಾದ ಗಿರಣಿಗಳಲಿ ದಿನದಿನಕ್ಕೂ ಬೆಳೆಯುವಂಥ
ಬೆಟ್ಟದಂಥ ಶಕ್ತಿಯೊಂದು ಕಂಡಿತವನ ಕಣ್ಣಿಗೆ
ತೊಟ್ಟಿಕ್ಕಿತು ಕಣ್ಣೀರು ಹೋದನವನು ಮಣ್ಣಿಗೆ
ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.”
ಸುದ್ದಿದಿನ|ವಾಟ್ಸಾಪ್|9980346243

ಭಾವ ಭೈರಾಗಿ
ಕತೆ | ಮತ್ತೆ ಮಳೆ

- ಜಿ. ಹರೀಶ್ ಬೇದ್ರೆ
ಒಂದು ಊಟ ತಂದುಕೊಡೊಕೆ ಎರಡು ಗುಂಟೆ ಬೇಕಾ?
ಸರ್, ಜೋರಾಗಿ ಮಳೆ ಬರುತ್ತಿದೆ.,. ಹಾಗಾಗಿ…
ಅದಕ್ಕಂತ ಎಕ್ಸ್ಟ್ರಾ ದುಡ್ಡು ತೆಗೆದುಕೊಂಡಿಲ್ವಾ, ತಗೊಂಡ ಮೇಲೆ ಸರಿಯಾದ ಟೈಮಿಗೆ ಬರಬೇಕು.
ಸರಿಯಾಗಿ ಕೆಲಸ ಮಾಡೊ ಯೋಗ್ಯತೆ ಇಲ್ಲದ ಮೇಲೆ ಇಂತ ಕೆಲಸಕ್ಕೆ ಬರಬಾರದು. ಆ ಪಾರ್ಸೆಲ್ ಕೊಡು ಎಂದು ಡೆಲಿವರಿ ಬಾಯ್ ಕೊಡುವ ಮುನ್ನವೇ ಅವನ ಕೈಯಿಂದ ಪಾರ್ಸೆಲ್ ಕಿತ್ತುಕೊಂಡು, ಕೆಟ್ಟದಾಗಿ ಬೈಯುತ್ತಾ ಆ ವ್ಯಕ್ತಿ ಮನೆಯೊಳಗೆ ಹೋದ.
ಗಿರೀಶ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯಾಗಿ ಕೆಲಸಕ್ಕೆ ಸೇರಿಕೊಂಡು ಒಂದು ವರ್ಷದ ಮೇಲಾಗಿದೆ. ಎಲ್ಲೋ ಅಪರೂಪಕ್ಕೆ ಒಮ್ಮೆ ತಡವಾದಾಗ ಯಾಕಪ್ಪಾ ಲೇಟ್ ಎಂದು ಮಾಮೂಲಿಯಂತೆ ಕೇಳಿದ್ದಿದೆ. ಯಾರೂ ಇಂದಿನಂತೆ ಬೈದಿರಲಿಲ್ಲ. ಇದು ಗಿರೀಶನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತಾದರೂ . ಪಾಪ ತುಂಬಾ ಹಸಿದಿದ್ದರೇನೊ ಅದಕ್ಕೆ ಹಾಗೆ ಮಾತನಾಡಿರಬೇಕು ಹೋಗಲಿ ಬಿಡು ಎಂದುಕೊಂಡರೂ ಮನಸ್ಸು ಸಮಾಧಾನವಾಗಲಿಲ್ಲ.
ಶಿವಮೊಗ್ಗದಲ್ಲಿ ಆಷಾಢ ಆರಂಭವಾದ ಮೊದಲನೇ ದಿನದಿಂದಲೇ ಆರಂಭವಾದ ಮಳೆ ಹದಿನೈದು ದಿನಗಳಾದರೂ ಬಿಡದೆ ಸುರಿಯುತ್ತಿತ್ತು. ಈ ದಿನವಂತೂ ವರುಣದೇವ, ಭೂತಾಯಿಯ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸುತ್ತಿರುವ ಮನುಷ್ಯರಿಗೆ ಸರಿಯಾದ ಪಾಠ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದವನಂತೆ ರುದ್ರರೂಪ ತಾಳಿದ್ದ. ಜೋರಾದ ಮಳೆಯ ಜೊತೆಗೆ ಗುಡುಗು ಸಿಡಿಲಿನ ಆರ್ಭಟವೂ ಜಾಸ್ತಿಯಾಗಿತ್ತು. ಬರಿಯ ಮಳೆಯಾಗಿದ್ದರೆ ಗಿರೀಶನಿಗೆ ನಿಗಧಿತ ವೇಳೆಯಲ್ಲಿ ಆರ್ಡರ್ ತಲುಪಿಸಲು ಯಾವ ತೊಂದರೆಯೂ ಇರಲಿಲ್ಲ.
ಆದರೆ ವಿಚಿತ್ರ ಗುಡುಗು ಸಿಡಿಲುಗಳ ಅಬ್ಬರ ಇದ್ದಿದ್ದರಿಂದ ಎರೆಡೆರಡು ಕಡೆ ನಿಂತು ಬರಬೇಕಾಯಿತು. ಊಟದ ಆರ್ಡರ್ ಕೊಟ್ಟ ವ್ಯಕ್ತಿಯ ಮನೆಗೂ ಹೊಟೇಲಿಗೂ ಆರು ಕಿಲೋಮೀಟರ್ ಅಂತರವಿತ್ತು. ಮನೆ ಇದ್ದದ್ದು ಹೊಸ ಬಡಾವಣೆಯಲ್ಲಿ, ಅಲ್ಲಿ ಮನೆಗಳು ವಿರಳ ಹಾಗೂ ನಿಲ್ಲಲು ಎಲ್ಲೂ ಜಾಗ ಇರದ ಕಾರಣ ಒಂದು ಕಡೆ ಸ್ವಲ್ಪ ಜಾಸ್ತಿ ಹೊತ್ತೆ ನಿಂತು ಮಳೆಯ ಆರ್ಭಟ ಕಡಿಮೆಯಾಗಲಿ ಎಂದು ಕಾದಿದ್ದ. ಅದೇ ತಪ್ಪಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳುವಂತಾಯಿತು.
ಇದೇ ಯೋಚನೆಯಲ್ಲಿ ನಿಧಾನವಾಗಿ ಬೈಕ್ ಚಲಿಸುತ್ತಾ ಬರುವಾಗ ಮಳೆ ಜೋರಾಗಿ ಪಕ್ಕದಲ್ಲೇ ಸಿಡಿಲು ಬಡಿದ ಅನುಭವವಾಗಿ ಇಹಲೋಕಕ್ಕೆ ಬಂದು ಹತ್ತಿರದಲ್ಲಿ ಎಲ್ಲಾದರೂ ನಿಲ್ಲಲು ಜಾಗ ಇದೇಯೆ ಎಂದು ನೋಡುತ್ತಾ ಬರುವಾಗ ಚಿಕ್ಕದೊಂದು ಮನೆಯಲ್ಲೇ ಅಂಗಡಿ ಮಾಡಿಕೊಂಡಿರುವುದು ಕಣ್ಣಿಗೆ ಬಿತ್ತು. ಸೀದಾ ಅಲ್ಲಿಗೆ ಬಂದು ನಿಂತ. ಅಂಗಡಿಯ ಮುಂಭಾಗದಲ್ಲಿ ಮಳೆ ಬಿಸಿಲಿಗೆ ಅಡ್ಡವಾಗಿ ಏನೂ ಹಾಕಿರದ ಕಾರಣ ನೆನೆಯುವುದು ತಪ್ಪಲಿಲ್ಲ. ಆದರೂ ಅಲ್ಲೇ ನಿಂತಿದ್ದ, ಅಂಗಡಿಯೊಳಗೆ ಇರಚಲು ಬಡಿಯುತ್ತಿದ್ದರಿಂದ ಹೇಳೋಣವೆಂದು ಬಗ್ಗಿ ನೋಡಿದರೆ ಒಳಗಡೆ ಹೆಂಗಸೊಬ್ಬಳು ಕಂಡಳು. ಇವನು ಇರಚಲು ಬಡಿಯುತ್ತಿದೆ ಎಂದು ಕೂಗಿದನ್ನು ಕೇಳಿ ಹೆಂಗಸು ಯಾರೋ ಏನೋ ಕೊಳ್ಳಲು ಬಂದಿರಬೇಕೆಂದು ಬಂದು ಏನು ಬೇಕು ಎಂದು ಕೇಳಿದಳು. ಇವನು ನನಗೇನು ಬೇಡ, ಮಳೆ ಅಂಗಡಿ ಒಳಗೂ ಬಿದ್ದು ಸಾಮಾನುಗಳು ಹಾಳಾಗುತ್ತಿವೆ ಎಂದು ಹೇಳಲು ಕರೆದೆ ಎಂದ.
ಆಗ ಗಮನಿಸಿದ ಹೆಂಗಸು ಹೌದಲ್ಲವೆ ಎಂದು ಬಾಗಿಲು ಮುಂದೆ ಎಳೆದಳು. ಇವನು ಅಲ್ಲಿಯೇ ನಿಂತಿದ್ದನ್ನು ನೋಡಿ, ಒಳಗೆ ಬನ್ನಿ ಎಂದು ಪಕ್ಷದ ಬಾಗಿಲು ತೆರೆದಳು. ಇವನು ಪರವಾಗಿಲ್ಲ ಎಂದು ಹೇಳಲು ಹೊರಟ ಕ್ಷಣದಲ್ಲೇ ಮತ್ತೊಂದು ಸಿಡಿಲು ಬಡಿಯಿತು. ಆಗ ಏನನ್ನು ಹೇಳದೆ ಒಳಹೋಗಿ ಬಾಗಿಲ ಬಳಿಯೇ ನಿಂತು ಮಳೆಯ ನೋಡತೊಡಗಿದ. ಕಣ್ಣು ಮಳೆ ನೋಡುತ್ತಿದ್ದರೆ, ಮನಸು ಬೈದ ವ್ಯಕ್ತಿಯ ಬಗ್ಗೆ ಯೋಚಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಆ ಅಂಗಡಿಯಾಕೆ ತಿನ್ನಲು ಕಾರಮಂಡಕ್ಕಿ ಕೊಟ್ಟು ಕುಡಿಯಲು ಬಿಸಿಯಾದ ಕಾಫಿ ಕೊಟ್ಟಳು. ಇವನು ಬೇಡ ಎನ್ನದೆ ತಿಂದು, ಕುಡಿದ. ಅಷ್ಟು ಹೊತ್ತಿಗೆ ಮಳೆಯ ರಭಸ ಕಡಿಮೆಯಾದ್ದರಿಂದ ಬರುತ್ತೇನೆ ಎಂದು ಹೇಳಿ ಹೊರಟ.
ಒಂದು ವಾರದ ನಂತರ ಮತ್ತೆ ಅದೇ ಬಡಾವಣೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಗೆ ಹೋಗುವಾಗ, ತಕ್ಷಣ ಆ ದಿನ ಒಳಕರೆದು ಉಪಚರಿಸಿದ ಹೆಂಗಸಿನ ನೆನಪಾಗಿ, ಬರುವಾಗ ಅವಳನ್ನು ಮಾತನಾಡಿಸಿಯೇ ಬರುವುದೆಂದು ತೀರ್ಮಾನಿಸಿದ. ದಾರಿಯುದ್ದಕ್ಕೂ ಹೋಗುವಾಗ ಅವಳ ಬಗ್ಗೆ ನೆನಪಿಸಿಕೊಂಡರೆ ಏನೂ ನೆನಪಾಗಲಿಲ್ಲ. ಅವಳು ಹೇಗಿದ್ದಾಳೆ, ಮುಖ ಹೇಗಿದೆ, ತಾನು ತಿಂದಿದ್ದು ಏನು ಏನೊಂದೂ ನೆನಪಾಗಲಿಲ್ಲ. ಆಗ ಆ ಕ್ಷಣದಲ್ಲಿ ಅವನ ಮನಸ್ಸು ಪೂರ್ತಿ ಬೈದ ವ್ಯಕ್ತಿಯ ಬಗ್ಗೆಯೆ ಗಿರಕಿ ಹೊಡೆಯುತ್ತಿದ್ದರಿಂರ ಬೇರೆ ಕಡೆ ಗಮನ ಹೋಗಿರಲಿಲ್ಲ.
ಇಂದು ಬಂದಾಗ ನೋಡಿದರೆ ಅದೊಂದು ಪುಟ್ಟ ಅಂಗಡಿ. ಅಲ್ಲಿ ಬೀಡಿ ಸಿಗರೇಟು ತಂಬಾಕು, ಎಲೆ ಅಡಿಕೆ, ಸ್ವಲ್ಪ ಕುರುಕಲು ತಿಂಡಿಗಳ ಜೊತೆಗೆ ಕಾರಮಂಡಕ್ಕಿ, ಮಿರ್ಚಿ ಮಾತ್ರ ಸಿಗುತ್ತಿತ್ತು. ಮೂವತ್ತರ ಆಸುಪಾಸಿನ ಮಹಿಳೆ ಅದನ್ನು ನಡೆಸುತ್ತಿದ್ದಳು. ಇವನನ್ನು ನೋಡಿದ ಆ ಮಹಿಳೆ ಹಿಂದಿನ ಗುರುತು ಹಿಡಿಯದೆ ಏನು ಬೇಕು ಎಂದು ಕೇಳಿದಳು. ಅದಕ್ಕೆ ಗಿರೀಶ್ ಅಂದಿನ ಘಟನೆ ವಿವರಿಸಿ, ನೀವೇ ಅಲ್ಲವೇ ಇದ್ದಿದ್ದು ಎಂದ. ಹೌದು, ಆದರೆ ಅವತ್ತು ನೀವು ರೈನ್ ಕೋಟ್, ಹೆಲ್ಮೆಟ್ ಹಾಕಿದ್ದರಿಂದ ಗೊತ್ತಾಗಲಿಲ್ಲ ಎಂದಳು.
ಅವಳ ಹಾಗೂ ಅಂಗಡಿಯ ಪರಿಸ್ಥಿತಿ ನೋಡಿದಾಗ, ಅಂದು ತಾನು ದುಡ್ಡು ಕೊಡದೆ ಹೋಗಿದ್ದು ತಪ್ಪಾಯಿತು ಎನಿಸಿ, ಅವತ್ತು ಯಾವುದೋ ಮೂಡಲ್ಲಿ ಹಣ ಕೊಡಲಿಲ್ಲ, ಎಷ್ಟಾಗಿತ್ತು ಎಂದ. ಅದಕ್ಕವಳು ಬೇಡ ಎಂದು ಹಣ ಪಡೆಯಲಿಲ್ಲ. ಅಂದಿನಿಂದ ಗಿರೀಶ್ ಆ ಕಡೆ ಹೋದಾಗಲೆಲ್ಲಾ ತಪ್ಪದೇ ಈ ಅಂಗಡಿಗೆ ಬಂದು ಹಣ ಕೊಟ್ಟು ಕಾಫಿ ಕುಡಿದು ನಾಲ್ಕು ಮಾತನಾಡಿ ಹೋಗುತ್ತಿದ್ದ. ಯಾವಾಗ ಬಂದರೂ ಅಲ್ಲಿ ಆ ಹೆಂಗಸು ಮತ್ತು ಎರಡು ಮೂರು ವರ್ಷದ ಮಗು ಮಾತ್ರ ಇರುವುದನ್ನು ಗಮನಿಸಿ, ಕುತೂಹಲ ತಡೆಯಲಾರದೆ, ಮನೆಯಲ್ಲಿ ಮತ್ತೆ ಯಾರಿದ್ದಾರೆ ಎಂದು ಕೇಳಿದ. ಅದಕ್ಕವಳು ನಾನು ನನ್ನ ಮಗಳು ಇಬ್ಬರೇ ಎಂದಳು. ಏಕೆ ಎಂದಾಗ, ವರ್ಷದ ಹಿಂದೆ ನನ್ನ ಯಜಮಾನರು ಕೊವಿಡ್ ನಿಂದ ಹೋದರು ಹಾಗಾಗಿ ಎಂದಳು. ಇವನು ಮತ್ತೆ ಏನನ್ನು ಕೇಳಲಿಲ್ಲ.. ನಂತರ ತಿಳಿದಿದ್ದೆಂದರೆ, ಗಂಡ ಇರುವವರೆಗೂ ಅವನ ಕುಟುಂಬದವರೊಂದಿಗೆ ಬದುಕು ಚೆನ್ನಾಗಿಯೇ ಇತ್ತು. ಆತ ಹೋದನಂತರ ಆಸ್ತಿಯ ಸಲುವಾಗಿ, ಇವಳಿಗೆ ಈ ಪುಟ್ಟ ಮನೆ, ನಾಲ್ಕು ಬಿಡಿಗಾಸು ಕೊಟ್ಟು ಹೊರಹಾಕಿದ್ದಾರೆಂದು.
ಇವಳು ತನ್ನ ಮನೆಯವರಿಗೆ ಹೊರೆಯಾಗಬಾರದೆಂದು ಇಲ್ಲಿಗೆ ಮಗಳೊಂದಿಗೆ ಬಂದು ಬದುಕು ಕಟ್ಟೀಕೊಂಡಿದ್ದಾಳೆ ಎಂದು.
ಅದೊಂದು ದಿನ ಗಿರೀಶನಿಗೆ, ಆತನ ತಂದೆಗೆ ಹುಷಾರಿಲ್ಲ ಎಂದು ಕರೆ ಬಂದು ಊರಿಗೆ ಹೋದ. ಅಲ್ಲಿಗೆ ಹೋದ ಎರಡನೆ ದಿನ ತಾಯಿ, ಗಿರೀಶನನ್ನು ಕೂರಿಸಿಕೊಂಡು, ಆದದ್ದು ಆಗಿ ಹೋಯಿತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನೀನೂ ಕೊರಗುತ್ತಾ ನಮಗೂ ಕೊರಗುವಂತೆ ಏಕೆ ಮಾಡ್ತಿಯಾ? ನಿನ್ನ ತಂದೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿರುವುದು ಎಂದು ಹೇಳುವಾಗಲೇ ಗಿರೀಶನ ಗೆಳೆಯನು ಬಂದ.
ಅವನು ಗಿರೀಶನನ್ನು ಹೊರಗೆ ಕರೆದುಕೊಂಡು ಹೋಗಿ, ನೋಡು ನಿನಗೇನು ಮಹಾ ವಯಸ್ಸಾಗಿಲ್ಲ, ಮೊದಲನೇ ಸಂಬಂಧ ಅಲ್ಲದಿದ್ದರೂ ಎರಡನೇ ಸಂಬಂಧವಾದರೂ ನೋಡು. ಅವರಿಗೂ ಒಂದು ಬದುಕು ಸಿಗುತ್ತದೆ, ನಿನ್ನ ಬದುಕಿಗೂ ಆಧಾರ ಸಿಕ್ಕಂತೆ ಆಗುತ್ತದೆ. ಜೊತೆಗೆ ನಿನ್ನ ತಂದೆ ತಾಯಿಗೆ ನೆಮ್ಮದಿ ಸಿಗುತ್ತದೆ ಯೋಚಿಸು ಎಂದ.
ಗಿರೀಶನಿಗೆ ಈಗ ಮೂವತ್ತೈದು ವರ್ಷ, ಅವನಿಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಹರಕೆ ಹೊತ್ತು ತೀರಿಸಲು ತನ್ನ ಊರಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಇರುವ ಮನೆದೇವರಿಗೆ ಬೈಕಿನಲ್ಲಿ ಹೆಂಡತಿಯೊಂದಿಗೆ ಹೋಗುವಾಗ, ಎದುರಿನಿಂದ ವೇಗವಾಗಿ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ಹೋಗಿ, ಬೈಕ್ ಸಮೇತ ಕೆರೆಯಲ್ಲಿ ಬಿದ್ದಿದ್ದರು.
ಅಲ್ಪಸ್ವಲ್ಪ ಈಜು ಬರುತ್ತಿದ್ದ ಗಿರೀಶ್ ಕಷ್ಟಪಟ್ಟು ದಡ ಸೇರಿದ. ಆದರೆ ಆತನ ಹೆಂಡತಿ ಬದುಕಿ ಉಳಿಯಲಿಲ್ಲ. ಊರಲ್ಲೇ ಇದ್ದರೆ ಹೆಂಡತಿಯ ನೆನಪು ಬಹಳ ಕಾಡುತ್ತದೆ, ಅವಳ ಸಾವಿಗೆ ತಾನೇ ಕಾರಣ ಎಂದು ಕೊರಗುವಂತೆ ಆಗುತ್ತದೆ ಎನ್ನುವ ಕಾರಣಕ್ಕೆ ತನ್ನ ಊರು ಬಿಟ್ಟು ಶಿವಮೊಗ್ಗ ಸೇರಿದ್ದ. ಇಷ್ಟು ದಿನ ಯಾರು ಏನೇ ಹೇಳಿದ್ದರೂ ಮರುಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ, ತಂದೆಯ ಅನಾರೋಗ್ಯ, ತಾಯಿಯ ಮಾತು, ಜೊತೆಗೆ ಗೆಳೆಯ, ವಿಧವೆ, ವಿಚ್ಜೇದಿತೆ, ಕೈಲಾಗದವರಿಗೆ ಮದುವೆಯಾಗಿ ಹೊಸ ಬದುಕು ಕೊಡಬಾರದೇಕೆ ಎನ್ನುವ ಮಾತು ಮತ್ತೊಂದು ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿತು.
ಅದಕ್ಕಾಗಿಯೆ ಗಿರೀಶ್, ಅಪ್ಪ ನನಗೆ ಯೋಚಿಸಲು ಸ್ವಲ್ಪ ದಿನ ಅವಕಾಶ ಕೊಡು ಹೇಳುತ್ತೇನೆ ಎಂದು ಶಿವಮೊಗ್ಗಕ್ಕೆ ಬಂದ. ಅದೇ ದಿನ ಹೊಸ ಬಡಾವಣೆಯ ಆರ್ಡರ್ ಸಿಕ್ಕಿತು. ವಾಡಿಕೆಯಂತೆ ಡೆಲಿವರಿ ಕೊಟ್ಟು ಕಾಫಿ ಕುಡಿಯಲು ಬಂದ. ಅದೇನೋ ಗೊತ್ತಿಲ್ಲ, ಆಂದು ಆ ಅಂಗಡಿಯ ಮಹಿಳೆ ಬಹಳ ವಿಶೇಷವಾಗಿ ಕಂಡಳು. ಸಂಜೆ ಮನೆಗೆ ಬಂದವನು ಏನೋ ಯೋಚಸಿ ಗೆಳೆಯನಿಗೆ ಕರೆ ಮಾಡಿ, ಅಂಗಡಿಯ ಮಹಿಳೆಯ ವಿಷಯವನ್ನು ಅವನಿಗೆ ತಿಳಿಸಿ, ಅವಳು ಒಪ್ಪಿದರೆ ಅವಳಿಗೆ ಮದುವೆಯಾಗಿ, ಅವಳ ಮಗುವಿಗೆ ತಂದೆಯಾಗಲು ಬಯಸಿರುವೆ. ಇದಕ್ಕೆ ಅಪ್ಪ ಅಮ್ಮನ ಒಪ್ಪಿಗೆ ಇದೇಯಾ ನೀನೇ ಕೇಳಿ ತಿಳಿಸು. ಆಮೇಲೆ ನಾನು ಅವಳ ಬಳಿ ಮಾತನಾಡುವೆ ಎಂದ ಗಿರೀಶ್. ಸಮಯ ನೋಡಿ ನಿನ್ನ ತಂದೆ ತಾಯಿಯರ ಜೊತೆ ಮಾತನಾಡಿ ತಿಳಿಸುವೆ ಎಂದ ಗೆಳೆಯ. ಗಿರೀಶ್, ಗೆಳೆಯನಿಂದ ಬರುವ ಕರೆಗೆ ಕಾಯುತ್ತಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್5 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ7 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ6 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ5 days ago
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ
-
ದಿನದ ಸುದ್ದಿ5 days ago
ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ
-
ದಿನದ ಸುದ್ದಿ4 days ago
ಗೋ ಹತ್ಯೆ ನಿಷೇಧ ಕಾಯ್ದೆ ; ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ : ಸಿಎಂ ಸಿದ್ದರಾಮಯ್ಯ