ರಾಜಕೀಯ
ಬಿಜೆಪಿ ಅಭ್ಯರ್ಥಿಯಾಗಿ ಭಯೋತ್ಪಾದನಾ ಆರೋಪಿ-ಒಂದು ಕೇಡಿನ ಪ್ರತೀಕ
- ಚುನಾವಣಾ ಅಭ್ಯರ್ಥಿಯಾಗಿ ಪ್ರಜ್ಞಾ ಠಾಕುರ್ ಆಯ್ಕೆ ಮತದಾರರಲ್ಲಿ ಧ್ರುವೀಕರಣ ತರುವ ಉದ್ದೆಶದಿಂದ ಕೋಮುವಾದವೇ ಮುಖ್ಯ ಒತ್ತು ಹಾಕಿರುವ ಬಿಜೆಪಿಯ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಂದಿದೆ. ಇಂತಹ ಒಂದು ವಿಭಜನಕಾರೀ ಪ್ರಚಾರದಲ್ಲಿ, ಒಬ್ಬ ಕಾವಿಧಾರಿ ಭಯೋತ್ಪಾದನಾ-ಆರೋಪಿ ಮತ್ತು ಮುಸ್ಲಿಂ-ದ್ವೇಷಿ ಬಿಜೆಪಿಯ ಚುನಾವಣಾ ಅಜೆಂಡಾದ ಒಂದು ಪ್ರತೀಕವಾಗಿದ್ದಾರೆ. ಇದು ಕೂಡ ಬಹಳ ಹೊಸದೇನಲ್ಲ. ಇನ್ನೊಬ್ಬ ಮುಸ್ಲಿಂರ ವಿರುದ್ಧ ದ್ವೇಷ ಕಾರುವ, ಕಾವಿಧಾರಿ, ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲಾಗಿದೆ ತಾನೇ?
ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಜ್ಞಾ ಸಿಂಗ್ ಠಾಕುರ್ ನಾಮಕರಣ 17ನೇ ಲೋಕಸಭಾ ಚುನಾವಣೆಗಳಲ್ಲಿ ಒಂದು ಮಹತ್ವದ, ಅಶುಭಕಾರೀ ಕ್ಷಣ. ಬಿಜೆಪಿಯ ಈ ನಿರ್ಧಾರ ಈ ಚುನಾವಣೆಯಲ್ಲಿ ಅದರ ನಿಜವಾದ ವೇದಿಕೆ ಏನೆಂಬುದರ ಒಂದು ಘೋಷಣೆಯಾಗಿದೆ. ಯಾವುದೇ ಮುಲಾಜಿಲ್ಲದ ಉಗ್ರ ಹಿಂದುತ್ವ, ಮತ್ತು ಅದರೊಂದಿಗೆ ಅದರ ಎಲ್ಲ ನಕಾರಾತ್ಮಕ ತೊಡಕುಗಳು-ಇದೇ ಆ ವೇದಿಕೆ.
ಪ್ರಜ್ಞಾ ಠಾಕುರ್ 2008ರ ಮಾಲೆಗಾಂವ್ ಸ್ಫೋಟದ ಒಬ್ಬ ಆರೋಪಿ. ಈ ಸ್ಫೊಟವನ್ನು ಸಂಘಟಿಸಿದ ಗುಂಪಿನ ಸೂತ್ರಧಾರಳು ಎಂಬ ಆಪಾದನೆ ಆಕೆಯ ಮೇಲಿದೆ. ಈ ಮೊಕದ್ದಮೆಯ ಆರೋಪ ಪತ್ರ ಆರು ಜನಗಳನ್ನು ಸಾಯಿಸಿದ ಈ ಸ್ಫೋಟವನ್ನು ಉಂಟು ಮಾಡುವಲ್ಲಿ ಬಳಸಿದ ಸ್ಫೋಟಕಗಳಿಂದ ತುಂಬಿದ್ದ ಮೋಟಾರ್ ಸೈಕಲ್ ಆಕೆಯದ್ದು ಎಂದು ಹೊರಗೆಡಹಿದೆ.
ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಆಕೆಯ ವಿರುದ್ಧ ಇದ್ದ ಮೊಕದ್ದಮೆಯನ್ನು ವಿಫಲಗೊಳಿಸಲು ಸಕಲ ಪ್ರಯತ್ನಗಳೂ ನಡೆದವು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಆಕೆಯ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತು. ಆದರೆ ನ್ಯಾಯಾಲಯ ಅದನ್ನು ಒಪ್ಪದೆ ಆಕೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲಿ ಆರೋಪಿಯಾಗಿಸಿದೆ. ಈಗ ಆಕೆ ವಿಚಾರಣೆಯ ನಡುವೆ ಜಾಮೀನಿನಲ್ಲಿ ಹೊರಗಿದ್ದಾರೆ.
ಇಂತಹ ಒಬ್ಬ ಭಯೋತ್ಪಾದನಾ ಆರೋಪಿಯನ್ನು ಭೋಪಾಲದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಮಾಡಿದೆ. ಈ ಎಲ್ಲ ವರ್ಷಗಳಲ್ಲಿ ಆಕೆ ತನ್ನ ಉನ್ಮತ್ತ ಹಿಂದುತ್ವ ಮತ್ತು ಮುಸ್ಲಿಂ-ದ್ವೇಷಿ ಅಭಿಪ್ರಾಯಗಳನ್ನು ಎಂದೂ ಗುಟ್ಟಾಗಿ ಇಟ್ಟಿಲ್ಲ.
ನಾಮಪತ್ರ ಸಲ್ಲಿಸಿದ ಕೂಡಲೇ ಆಕೆ ಮಹಾರಾಷ್ಟ್ರ ಪೋಲೀಸ್ ಪಡೆಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಮುಖ್ಯಸ್ಥರಾಗಿದ್ದ ದಿವಂಗತ ಹೇಮಂತ ಕರ್ಕರೆ ಮೇಲೆ ಎರಗಿದರು. ಕರ್ಕರೆ ಮಾಲೆಗಾಂವ್ ಸ್ಫೋಟದ ತನಿಖೆ ಮಾಡಿದ್ದ, ಮತ್ತು ಪ್ರಜ್ಞಾ ಠಾಕುರ್ ಮತ್ತು ಆಕೆಯ ಸಹಯೋಗಿಗಳನ್ನು ಬಂಧಿಸಿದ್ದ ಪೋಲೀಸ್ ಅಧಿಕಾರಿ. ತಾನು ಕರ್ಕರೆಗೆ ಶಾಪ ಹಾಕಿದ್ದೆ, ಅದರಿಂದಾಗಿ ೪೫ ದಿನಗಳೊಳಗೆ ಆತ ಭಯೋತ್ಪಾದಕ ಗುಂಡಿಗೆ ಬಲಿಯಾಗಿ ಸತ್ತರು ಎಂದು ಆಕೆ ಹೇಳಿದಳು. ಹೇಮಂತ ಕರ್ಕರೆ ಒಬ್ಬ ಧೀರ ಪೋಲೀಸ್ ಅಧಿಕಾರಿಯಾಗಿದ್ದು, ನವಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರು. ಇಂತಹ ಒಂದು ಆಘಾತಕಾರಿ ಹೇಳಿಕೆಯ ನಂತರವೂ, ಬಿಜೆಪಿ ಅದನ್ನು ಖಂಡಿಸುವ ಆಶಯವನ್ನು ತೋರಲಿಲ್ಲ, ಅದು ಆಕೆಯ ವೈಯಕ್ತಿಕ ಅಭಿಪ್ರಾಯವಷ್ಟೇ, ಬಹುಶಃ ಪೋಲೀಸರಿಂದ ಆಕೆ ಅನುಭವಿಸಿದ ಚಿತ್ರಹಿಂಸೆಯಿಂದಾಗಿ ಇರಬಹುದು ಎಂದಷ್ಟೇ ಹೇಳಿತು.
ಈ ಬಗ್ಗೆ ಬಂದ ಟೀಕೆಯಿಂದ ವಿಚಲಿತಳಾಗದ ಪ್ರಜ್ಞಾ ಠಾಕುರ್ ಇನ್ನೂ ಮುಂದೆ ಹೋಗಿ ಬಾಬ್ರಿ ಮಸೀದಿಯ ಧ್ವಂಸ ನಡೆಯುತ್ತಿದ್ದಾಗ ತಾನು ಗುಮ್ಮಟದ ತುದಿಯಲ್ಲಿದ್ದೆ, ಆ ಸ್ಥಳದಲ್ಲಿ ರಾಮ ದೇವಸ್ಥಾನ ಕಟ್ಟುವಾಗಲೂ ಆ ಸ್ಥಳದಲ್ಲಿ ಇರುತ್ತೇನೆ ಎಂದರು.
ಪ್ರಜ್ಞಾ ಠಾಕುರ್‌ನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದು ಒಂದು ಬಹಳ ಯೋಚನೆ ಮಾಡಿ ನಿರ್ಧರಿಸಿದ್ದ ನಡೆ ಎಂಬುದು ನರೇಂದ್ರ ಮೋದಿ ಅದನ್ನು ಸಮರ್ಥಿಸಿಕೊಂಡ ರೀತಿಯಲ್ಲೇ ಕಾಣುತ್ತದೆ. ಆಕೆ ಅಭ್ಯರ್ಥಿಯಾಗಿರುವುದು ವಸುಧೈವ ಕುಟುಂಬಕಮ್ ನಲ್ಲಿ ನಂಬಿಕೆಯಿರುವ 5000 ವರ್ಷಗಳಷ್ಟು ಹಳೆಯ ನಾಗರಿಕತೆಯ ಹೆಸರುಗೆಡಿಸುವವರಿಗೆ, ಭಯೋತ್ಪಾದಕರು ಎಂದು ಕರೆದವರಿಗೆ ನೀಡಿರುವ ಒಂದು ಉತ್ತರ ಎಂದು ಅವರು ಹೇಳಿದ್ದಾರೆ. ಇದಕ್ಕೆ ಮೊದಲು ಎಪ್ರಿಲ್ 1 ರಂದು ವರ್ಧಾದಲ್ಲಿ ಮಾತಾಡುತ್ತ ಮೋದಿ, ಹಿಂದು ಭಯೋತ್ಪಾದನೆಯ ಮಾತಾಡುವವರು ಇಡೀ ಹಿಂದೂ ಸಮುದಾಯವನ್ನು ಅವಮಾನ ಮಾಡುತ್ತಾರೆ ಎಂದು ಹೇಳಿದ್ದರು.
ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂ ಭಯೋತ್ಪಾದನೆಯ ಕೃತ್ಯವನ್ನು ತೋರಿಸುವ ಒಂದೇ ಒಂದು ಘಟನೆ ನಡೆದಿಲ್ಲ ಎಂದು ಅವರು ಸಾರಿದರು. ಇದು ಎಲ್ಲ ತರ್ಕಗಳನ್ನೂ ಹುಸಿಯಾಗಿಸಿರುವ ಅಸಂಬದ್ಧ ಹೇಳಿಕೆ. ನಾಥುರಾಂ ಗೋಡ್ಸೆಯಿಂದ ಹಿಡಿದು 2002ರ ಗುಜರಾತ್ ಹತ್ಯಾಕಾಂಡದ ವರೆಗೆ, ನಂತರ ದಭೋಲ್ಕರ್, ಪನ್ಸರೆ, ಕಲ್ಬುರ್ಗಿ, ಗೌರಿ ಹತ್ಯೆಗಳ ವರೆಗೆ ಹಿಂದುತ್ವ ಭಯೋತ್ಪಾದನೆಯ ಒಂದು ದೊಡ್ಡ ಸಾಲೇ ಇದೆ. ಈ ಎಲ್ಲ ಹೇಳಿಕೆಗಳ ಹಿಂದೆ ಇರುವ ತಿಳುವಳಿಕೆಯೆಂದರೆ, ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವಿಲ್ಲ, ಕೇವಲ ಮುಸ್ಲಿಮರು ಮಾತ್ರವೇ ಹಾಗಾಗಲು ಸಾಧ್ಯ.
ಪ್ರಜ್ಞಾ ಠಾಕುರ್ ಒಬ್ಬ ಅಮಾಯಕ ಸಾಧ್ವಿ, ಆಕೆಯನ್ನು ಒಂದು ಸುಳ್ಳು ಕೇಸಿನಲ್ಲಿ ಸಿಗಿಸಲಾಗಿದೆ ಎಂಬುದು ಅಮಿತ್ ಷಾ ಮತ್ತು ಬಿಜೆಪಿಯ ನಿಲುವು. ಆದರೆ, ಅದೇ ವೇಳೆಗೆ, ಸಂಘ ಪಡೆಗಳು ಆಕೆ ಹಿಂದೂಗಳನ್ನು ಸಾಯಿಸಿದ್ದಕ್ಕೆ ಪ್ರತೀಕಾರ ತೀರಿಸಿರುವ ಧೀರೆ ಎಂದು ವೈಭವೀಕರಿಸುತ್ತಿವೆ.
ಚುನಾವಣಾ ಅಭ್ಯರ್ಥಿಯಾಗಿ ಪ್ರಜ್ಞಾ ಠಾಕುರ್ ಆಯ್ಕೆ ಮತದಾರರಲ್ಲಿ ಧ್ರುವೀಕರಣ ತರುವ ಉದ್ದೆಶದಿಂದ ಕೋಮುವಾದವೇ ಮುಖ್ಯ ಒತ್ತಾಗಿರುವ ಬಿಜೆಪಿಯ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಬಂದಿದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾ ರಿಂದ ಹಿಡಿದು ಎಲ್ಲ ಬಿಜೆಪಿ ಮುಖಂಡರುಗಳ ಭಾಷಣಗಳು ದಿನಗಳೆದಂತೆ ಹೆಚ್ಚೆಚ್ಚು ಕರ್ಕಶಗೊಳ್ಳುತ್ತಿವೆ. ಹಿಂದೂಗಳಿಗೆ ಹೊರಗಿನ ಮತ್ತು ಒಳಗಿನ ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂಬ ಕರೆ ನೀಡಲಾಗುತ್ತಿದೆ; ಅಲ್ಪಸಂಖ್ಯಾತರು ಬುಡಮೇಲು ಪಾತ್ರ ವಹಿಸುತ್ತಿದ್ದಾರೆ ಎಂದು ಸಾಕಷ್ಟು ಬಹಿರಂಗವಾಗಿಯೇ ಬೆದರಿಕೆ ಹಾಕಲಾಗುತ್ತಿದೆ; ತಮ್ಮ ರಾಷ್ಟ್ರೋನ್ಮಾದದ ಅಪಪ್ರಚಾರಕ್ಕೆ ಸಶಸ್ತ್ರ ಪಡೆಗಳ ಹೆಸರನ್ನು ಬಳಸಲಾಗುತ್ತಿದೆ; ಮತ್ತು ನಾಗರಿಕತ್ವ(ತಿದ್ದುಪಡಿ) ಮಸೂದೆ ಹಾಗೂ ರಾಷ್ಟ್ರೀಯ ನಾಗರಿಕರ ದಾಖಲೆ(ಎನ್‌ಆರ್‌ಸಿ) ಹೊರಗಿನವರನ್ನು ಹೊರಹಾಕುವ ಸಾಧನಗಳು ಎಂದು ಬಿಂಬಿಸಲಾಗುತ್ತಿದೆ.
ಇಂತಹ ಒಂದು ವಿಭಜನಕಾರೀ ಪ್ರಚಾರದಲ್ಲಿ, ಒಬ್ಬ ಕಾವಿಧಾರಿ ಭಯೋತ್ಪಾದನಾ-ಆರೋಪಿ ಮತ್ತು ಮುಸ್ಲಿಂ-ದ್ವೇಷಿ ಬಿಜೆಪಿಯ ಚುನಾವಣಾ ಅಜೆಂಡಾದ ಒಂದು ಪ್ರತೀಕವಾಗಿದ್ದಾರೆ. ಇದು ಕೂಡ ಬಹಳ ಹೊಸದೇನಲ್ಲ. ಇನ್ನೊಬ್ಬ ಮುಸ್ಲಿಂರ ವಿರುದ್ಧ ದ್ವೇಷ ಕಾರುವ, ಕಾವಿಧಾರಿ, ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲಾಗಿದೆ ತಾನೇ?
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯನ್ನು ನಿಜವಾಗಿಯೂ ಬಿಟ್ಟೇ ಬಿಡಲಾಗಿದೆ. ಅದರ ಜಾಗದಲ್ಲಿ ಒಂದು ಬಹಿರಂಗ ಹಿಂದುತ್ವ ಕೋಮುವಾದಿ-ಮಿಲಿಟರಿಶಾಹಿಮಾದರಿ-ಸಂಕುಚಿತವಾದೀ ಮನವಿ ಬಂದಿದೆ. ಇದು, ಮೋದಿ ವಿಕಾಸದ ಮಾತಾಡುವವರು ಎಂಬ ನಂಬಿಕೆಗೆ ಜೋತು ಬಿದ್ದಿರುವವರನ್ನೂ ಬೆಚ್ಚಿ ಬೀಳಿಸುವಂತದ್ದು. ಇಂತಹ ಭ್ರಮೆಗಳಿಗೆ ಈಗ ಯಾವ ಅವಕಾಶವೂ ಉಳಿದಿಲ್ಲ. ದೇಶವನ್ನು ಉಳಿಸುವ ಏಕೈಕ ದಾರಿಯೆಂದರೆ, ಬಿಜೆಪಿ ಮತ್ತು ಮೋದಿ ಸೋಲುವಂತೆ ಮಾಡುವುದು.
( ಈ ವಾರದ ಜನಶಕ್ತಿವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
–ಪ್ರಕಾಶ ಕಾರಟ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್‌ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್‌ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ1 day agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ1 day ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

