ದಿನದ ಸುದ್ದಿ
ಮೋದಿ ಸರ್ಕಾರದ ಮೂರು ರೈತ ವಿರೋಧಿ ಮರಣಶಾಸನಗಳು
- ಶಿವಸುಂದರ್
ಭಾರತದ ರೈತಾಪಿಯನ್ನು ಕಳೆದ 70 ವರ್ಷಗಳಿಂದ ಬಂಧನದಲ್ಲಿಟ್ಟಿದ್ದ ಎಲ್ಲಾ ಸಂಕೋಲೆಗಳಿಂದ ಬಿಡುಗಡೆ ಮಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಮುಸುಕನ್ನು ಹೊದ್ದಿದ್ದ, ಆದರೆ ಆದರೆ ರೈತ ಬದುಕನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತ ಮೂರು ರೈತ ವಿರೋಧಿ ಸುಗ್ರೀವಾಜ್ನೆಗಳಿಗೆ ಕಳೆದ ವಾರ ಮೋದಿ ಸರ್ಕಾರ ಅತ್ಯಂತ ಅಪ್ರಜಾತಾಂತ್ರಿಕವಾಗಿ ಸದನದ ಎರಡೂ ಮನೆಗಳಲ್ಲಿ ಅನುಮೋದನೆ ದಕ್ಕಿಸಿಕೊಂಡಿದೆ. ಲೋಕಸಭೆಯಲ್ಲಿ ಸಾಮ, ದಾನ, ಬೇಧದ ಉಪಾಯಗಳನ್ನು ಬಳಸಿದರೆ ರಾಜ್ಯಸಭೆಯಲ್ಲಂತೂ ದಂಡೋಪಾಯವನ್ನೂ ಬಳಸಿದೆ.
ಇನ್ನು ನಮ್ಮ ರಾಷ್ಟ್ರಪತಿಯವರಂತೂ ಹೇಗೂ ಮೋದಿ ಸರ್ಕಾರದ ನೀತಿಗಳಿಗೆ ಮಧ್ಯರಾತ್ರಿಯಲ್ಲೂ ನಿದ್ದೆಗಣ್ಣಿನಲ್ಲಿ ಸಹಿಹಾಕಲು ಸಿದ್ದರಿದ್ದೇ ಇರುತ್ತಾರೆ. ಆದ್ದರಿಂದ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ರೈತ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಿದ ಕೀರ್ತಿಯೂ ಸಹ ಮೋದಿ ಸರ್ಕಾರಕ್ಕೆ ದಕ್ಕಲಿದೆ.
ಹಾಗೆ ನೋಡಿದರೆ ಸರ್ಕಾರ ಹೇಳುವ ಪ್ರಕಾರ ಈ ಮಸೂದೆಗಳು ರೈತ ಪರವಾಗಿದ್ದಲ್ಲಿ ಎರಡೂ ಸದನಗಳಲ್ಲಿ ಚರ್ಚೆ ಮಾಡಿ ವಿರೋಧ ಪಕ್ಷಗಳನ್ನು ಬಯಲುಗೊಳಿಸಿ ಇಡೀ ರಾಷ್ಟ್ರಕ್ಕೆ ತಮ್ಮ ಸದಿಂಗಿತವನ್ನು ಸಾಬೀತುಪಡಿಸಬಹುದಾಗಿತ್ತು, ಸರ್ಕಾರ ಅಂತಹ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೂ ಮುಂದಾಗದೆ ಕೋವಿಡ್ ಸಂದರ್ಭವನ್ನು ಬಳಸಿಕೊಂಡು ಪ್ರಜಾತಂತ್ರಕ್ಕೆ ಮಾಸ್ಕ್ ತೊಡಿಸಿ ಈ ಮರಣಶಾಸನಗಳನ್ನು ಜಾರಿ ಮಾಡಿರುವುದು ಸರ್ಕಾರದ ದುಷ್ಟ ಉದ್ದೇಶಗಳಿಗೆ ಒಂದು ಮಹತ್ವದ ಪುರಾವೆಯೇ ಆಗಿದೆ.
ಈ ಮೂರೂ ಶಾಸನಗಳ ಮೇಲ್ನೋಟದ ಓದು ಅನುಮಾನವನ್ನು ಹುಟ್ಟಿಸಿದರೆ ಮಸೂದೆಯ ಪೂರ್ಣ ವಿವರಗಳು ಆತಂಕವನ್ನೇ ಹುಟ್ಟಿಸುತ್ತದೆ. ಮೋದಿ ಸರ್ಕಾರದ ರಾಜಕೀಯಕ್ಕೆ ತಕ್ಕನಾಗಿ ಈ ಮಸೂದೆಗಳ ಒಳತಿರುಳಿಗೆ ತದ್ವಿರುದ್ಧವಾದ ಅರ್ಥವನ್ನು ಸ್ಪುರಿಸುವ ಹೆಸರುಗಳನ್ನು ಈ ಮೂರೂ ಮಸೂದೆಗಳಿಗೆ ಇಡಲಾಗಿದೆ.
ಸರಳವಾಗಿ ಆ ಮೂರು ಮಸೂದೆಗಳನ್ನುAPMC ಯನ್ನು ಬದಿಗೆ ಸರಿಸುವ ಕಾಯಿದೆ .ಕಾಂಟ್ರಾಕ್ಟ್ ಫಾರ್ಮಿಂಗ್ ಜಾರಿ ಮಾಡುವ ಕಾಯಿದೆ.ಬೃಹತ್ ಕೃಷಿ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ ಎಂದು ಹೇಳಬಹುದು.
01. APMC ಯನ್ನು ಮೂಲೆಗುಂಪು ಮಾಡುವ ಮಸೂದೆ
ಸರ್ಕಾರದ ಪರಿಭಾಷೆಯಲ್ಲಿ ಈ ಮಸೂದೆಗೆ Farmers Produce Trade and Commerce (Promotion And Facilitation) Bill 2020 ಎಂದು ಕರೆಯಲಾಗುತ್ತದೆ. ಅಂದರೆ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಮಸೂದೆ ಎಂದರ್ಥ.
ಮೇಲ್ನೋಟಕ್ಕೆ ರೈತಪರ ಧ್ವನಿಯಲ್ಲಿರುವ ಈ ಮಸೂದೆಯು ನಿಜಕ್ಕೂ ರೈತರ ಉತ್ಪನ್ನಗಳ ವಾಣಿಜ್ಯದಲ್ಲಿ ರೈತರಿಗೆ ಸೌಕರ್ಯವನ್ನೂ ಉತ್ತೇಜನವನ್ನೂ ನೀಡಲಿದೆಯೇ?
ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಹಾಗೂ ಖಚಿತವಾದ ಆದಾಯವನ್ನು ಖಾತರಿ ಮಾಡುವ ಸಲುವಾಗಿಯೇ ರೈತರು, ಮಧ್ಯವರ್ತಿ ದಲ್ಲಾಳಿಗಳೂ ಹಾಗೂ ವ್ಯಾಪಾರಿಗಳನ್ನು ಒಳಗೊಂಡ APMC- ಕೃಷಿ ಉತ್ಪನ್ನ ಮಾರಾಟ ಸಮಿತಿಗಳು ರೂಪುಗೊಂಡವು. ಸರ್ಕಾರವು ಈ APMC ಹಾಗೂ ಮಂಡಿಗಳ ಮೂಲಕ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು (MSP)ಯನ್ನು ಕೊಟ್ಟು ಅವರ ಸರಕುಗಳನ್ನು ಖರೀದಿಸುತ್ತಿತ್ತು.
ಹಾಗೆ ರೈತರಿಂದ ಖರೀದಿಸಿದ ಧಾನ್ಯಗಳ ಮೂಲಕವೇ ದೇಶಾದ್ಯಂತ ಬಡಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ಜು ಸರಬರಾಜು ಮಾಡಿ ಈ ದೇಶದ ಜನರ ಆಹಾರ ಭದ್ರತೆಯನ್ನು ಖಾತರಿಗೊಳಿಸುತ್ತಿತ್ತು. 2013ರಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯಿದೆಯ ನಂತರ ಈ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳು ಸಿಗುತ್ತಿರುವುದಕ್ಕೆ ಈ ವ್ಯವಸ್ಥೆಯೇ ಕಾರಣ. APMC ಹಾಗೂ MSP ವ್ಯವಸ್ಥೆಯ ಕಾರಣದಿಂದಾಗಿಯೇ ಈ ದೇಶದ ಕೋಟ್ಯಾಂತರ ರೈತರ ಆದಾಯ ಸುನಿಶ್ಚಿತವಾಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ರೈತರಿಗೆ ಹಲವಾರು ತೊಂದರೆಗಳಿರುವುದು ನಿಜ.
APMC ಯಲ್ಲಿ ರೈತರಿಗಿಂತ ವ್ಯಾಪಾರಿಗಳು ಮತ್ತು ದಲಾಳಿಗಳು ಸಶಕ್ತರಾಗಿದ್ದಾರೆ. ಅವರುಗಳಿಂದ ರೈತರಿಗೆ ತೂಕದಲ್ಲಿ, ಪ್ರಮಾಣದಲ್ಲಿ ಹಾಗೂ ಬೆಲೆಯ ಪಾವತಿಯಲ್ಲಿ ಹಲವಾರು ಬಾರಿ ಮೋಸವಾಗುತ್ತಿದೆ. ಹಾಗೆಯೇ MSP ವ್ಯವಸ್ಥೆಯು ಪಂಜಾಬ್, ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒರಿಸ್ಸಾ ದಂತ ರಾಜ್ಯಗಳನ್ನು ಬಿಟ್ಟರೆ ಎಲಾ ರಾಜ್ಯಗಳ ರೈತರಿಗೂ ಸರಿಸಮನಾಗಿಯೂ ಒದಗುತ್ತಿಲ್ಲ ಹಾಗೂ ಅಕ್ಕಿ, ಗೋಧಿ ಹಾಗೂ ಇನ್ನಿತರ ಇಪ್ಪತ್ತು ರೈತೋತ್ಪನ್ನಗಳನ್ನು ಬಿಟ್ಟರೆ ಬಿಟ್ಟರೆ ರೈತ ಬೆಳೆಯುವ ಎಲ್ಲಾ ಬೆಳೆಗಳು MSP ಅಡಿ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ MSP ಲೆಕ್ಕಾಚಾರದಲ್ಲೇ ರೈತರ ಎಲ್ಲಾ ವೆಚ್ಚಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ದೇಶದ ರೈತರೆಲ್ಲಾ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಹೀಗೆ ಈಗಿರುವ APMC ಹಾಗೂ MSP ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಈವ್ಯವಸ್ಥೆಯಲ್ಲಿ ರೈತಪರ ಸುಧಾರಣೆಗಳ ಅಗತ್ಯವಿದ್ದದ್ದು ನಿಜ. ಹಾಗಿದ್ದಲ್ಲಿ ಮೋದಿ ಸರ್ಕಾರ ತಂದಿರುವ ಈ ಹೊಸ ಮಸೂದೆ/ಕಾಯಿದೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆಯೇ?
-ಮೋದಿ ಸರ್ಕಾರದ ಈ ಕಾಯಿದೆ APMC ಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅದನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿ ಅದರ ಜಾಗದಲ್ಲಿ ರೈತರಿಗೆ ಯಾವ ಪಾತ್ರವೂ ಇಲ್ಲದ ದೊಡ್ದದೊಡ್ಡ ಬಂಡವಾಳಶಾಹಿಗಳ ಒಡೆತನ ಮತ್ತು ನಿಯಂತ್ರಣದಲ್ಲಿರುವ ಖಾಸಗಿ ಮಂಡಿಗಳು ಮತ್ತು ಖಾಸಗಿ APMC ಗಳ ಸ್ಥಾಪನಗೆ ಅವಕಾಶ ಮಾಡಿಕೊಡುತ್ತದೆ.
-ಹಾಲಿ ಇರುವ APMC ಯಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕೊಳ್ಳುವವರ ಹಾಗೂ ಮಾರುವವರ ಮೇಲೆ ಸರ್ಕಾರ ತೆರಿಗೆಯನ್ನು ಮತ್ತು ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಈ ಹೊಸ ಕಾಯಿದೆಯು ಖಾಸಗಿ ಮಂಡಿಗಳಲ್ಲಿ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಆ ಮೂಲಕ ಖಾಸಗಿ ಮಂಡಿಗಳಿಗೆ ಉತ್ತೇಜನ ಕೊಡುತ್ತಾ ಹಾಲಿ ಇರುವ APMC ಯಿಂದಲೂ ವ್ಯಾಪಾರಿಗಳು ಹಾಗೂ ಮಾರಾಟಗಾರು ಖಾಸಗಿ ಮಂಡಿಯತ್ತ ಆಕರ್ಷಿತರಾಗಿ ಹಳೆಯ APMCನಿಧಾನವಾಗಿ ಸಾವನ್ನಪ್ಪುವಂತೆ ಮಾಡುತ್ತವೆ.
-ಎಲ್ಲಕ್ಕಿಂತ ಮುಖ್ಯವಾದ ವಿಷಯವೇನೆಂದರೆ APMC ಇಲ್ಲವಾದರೆ ರೈತರಿಗೆ MSP ದರಗಳು ದಕ್ಕುತ್ತವೆಯೇ ಎಂಬುದು. ವಾಸ್ತವವಾಗಿ ಪ್ರಧಾನಿಗಳು ಪದೇ ಪದೇ MSP ರದ್ದು ಮಾಡುವುದಿಲ್ಲ ಎಂದು ಹೇಳುತ್ತಿರುವುದರಲ್ಲಿ ಅರ್ಧ ಸತ್ಯ ಮಾತ್ರ ಇದೆ. ಹಾಲಿ ಅಸ್ಥಿತ್ವದಲ್ಲಿರುವ APMC ಗಳಲ್ಲಿ MSP ರದ್ದು ಮಾಡಲಾಗುವುದು ಎಂಬ ನಿಯಮವೇನೂ ಕಾಯಿದೆಯಲ್ಲಿಲ್ಲ ಎಂಬುದು ನಿಜ.
ಆದರೆ ಹೊಸದಾಗಿ ಅಸ್ಥಿತ್ವಕ್ಕೆ ಬರಲಿರುವ ಖಾಸಗಿ ಮಂಡಿಗಳಲ್ಲಿ MSP ಯನ್ನು ಖಾತರಿಪಡಿಸುವ ನಿಯಮವೂ ಕಾಯಿದೆಯಲ್ಲಿಲ್ಲ ಎಂಬುದನ್ನು ಪ್ರಧಾನಿಯವರು ರೈತರಿಂದ ಮುಚ್ಚಿಡುತ್ತಿದ್ದಾರೆ.
ಹಾಗೂ ಈ ಹೊಸ ಕಾಯಿದೆಯಿಂದಾಗಿ ಹಳೆಯ APMC ಗಳು ನಿಧಾನವಾಗಿ ರದ್ದಾಗಿ ಕೆಲವು ವರ್ಷಗಳ ನಂತರ ಬಹುಪಾಲು ಖಾಸಗಿ ಮಂಡಿಗಳ ಕಾರ್ಟೆಲ್‌ಗಳೇ ಉಳಿದುಕೊಳ್ಳುವುದರಿಂದ ಸರ್ಕಾರವ ಕಾಲಕ್ರಮೇಣ MSP ಹೊಣೆಗಾರಿಕೆಯಿಂದ ಮುಕ್ತವಾಗಲಿದೆ ಎಮ್ಬುದರಲ್ಲಿ ಯಾವುದೇ ಸಂದೇಹವಿಲ್ಲ.
-ಪ್ರಾರಂಭದಲ್ಲಿ ದೊಡ್ಡ ಕೃಷಿ ಉದ್ದಿಮೆದಾರರು ನಡೆಸುವ ಮಂಡಿಗಳಲ್ಲಿ ರೈತರಿಗೆ ಸ್ವಲ್ಪ ಹೆಚ್ಚಿನ ದರ ದೊರೆತರೂ ಎಲ್ಲಾ ಉದ್ದಿಮೆಗಳಲ್ಲಿ ನಡೆಯುವಂತೆ ಈ ಕ್ಷೇತ್ರದಲ್ಲೂ ಬೃಹತ್ ಕಾರ್ಪೊರೇಟು ಉದ್ದಿಮೆಗಳೇ ಬಹಳ ಬೇಗ ಏಕಸ್ವಾಮ್ಯ ಸಾಧಿಸುತ್ತಾರೆ.
ಈ ವ್ಯವಹಾರಕ್ಕೆ ಈಗಾಗಲೇ ಅಂಬಾನಿ. ಆದಾನಿ ಹಾಗೂ ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಗಳೂ ದಾಳಿ ಇಡಲು ಸಿದ್ಧವಾಗುತ್ತಿವೆ. ಇಂಥಾ ದೊಡ್ಡ ಉದ್ದಿಮೆಗಳ ಮುಂದೆ ಸಣ್ಣಪುಟ್ಟವರ ಮಂಡಿಗಳು ಉಳಿಯಲು ಸಾಧ್ಯವೇ ಇಲ್ಲ. ಅಂಬಾನಿಯ ಜಿಯೋ ಮೊಬೈಲ್ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ನೆನಪಿಸಿಕೊಳ್ಳೋಣ.
ದೊಡ್ಡ ಬಂಡವಾಳಿಗರು ತಮ್ಮ ನಡುವೆ ಕಾರ್ಟೆಲ್ಲುಗಳನ್ನು ಮಾಡಿಕೊಂಡು ದರದ ಯಾವ ಲಾಭವೂ ರೈತರಿಗೆ ಸಿಗದಂತೆ ಮಾಡುತ್ತಾರೆ. ಆಗ ರೈತರು ಬೇರೆ ಯಾವುದೇ ಆಯ್ಕೆ ಇಲ್ಲದೆ ಇದೇ ಕಾರ್ಟೆಲ್ಲುಗಳಿಗೆ ಅವರು ವಿಧಿಸುವ ಬೆಲೆಗೆ ಮಾರಿಕೊಳ್ಳಬೇಕಾಗುತ್ತದೆ.
ಬಿಹಾರದಲ್ಲಿ 2006ರಲ್ಲೇ APMC ಗಳು ರದ್ದಾಗಿದ್ದು ಅಲ್ಲಿ ಯಾವುದೇ ಖಾಸಗಿ ಮಂಡಿಗಳು ರೈತರಿಗೆ ಸ್ಪರ್ಧಾತ್ಮ ದರಗಳನ್ನು ನೀಡುತ್ತಿಲ್ಲ. ವಾಸ್ತವದಲ್ಲಿ ಅಲ್ಲಿನ ರೈತರಿಗೆ ಬಹಳಷ್ಟು ಬಾರಿ ಇತರ ರಾಜ್ಯಗಳ ರೈತರಿಗೆ ಸಿಗುತ್ತಿರುವ MSP ಯ ಮುಕ್ಕಾಲು ಪಾಲೂ ಸಿಗುತ್ತಿಲ್ಲ.
– APMC ಗಳೇ ಇಲ್ಲದಿರುವ ಸಂದರ್ಭದಲ್ಲಿ ಸರ್ಕಾರವು ಪಡಿತರ ವ್ಯವಸ್ಥೆಗಾಗಿ ಆಹಾರ ಖರೀದಿಯನ್ನು ನಿಲ್ಲಿಸುತ್ತದೆ.
ವಾಸ್ತವದಲ್ಲಿ 2015 ರಿಂದಲೂ ಮೋದಿ ಸರ್ಕಾರವು ಪಡಿತರ ಬಿಲ್ಲನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತೊಡಗಿದೆ. 2016ರಲ್ಲಿ ಶಾಂತಕುಮಾರ ಸಮಿತಿಯೂ ಸಹ ಸರ್ಕಾರಕ್ಕೆ ಆಹಾರ ಪಡಿತರ ಸಬ್ಸೀಡಿಯನ್ನು ಶೇ. 50ರಷ್ಟು ಕಡಿತಗೊಳಿಸಬೇಕೆಂದು ಶಿಫಾರಸ್ಸು ಮಾಡಿತ್ತು. 2018 ಮತ್ತು 2020 ರಲ್ಲಿ ಸರ್ಕಾರದ ಕಾರ್ಯದರ್ಶಿಗಳ ಸಮಿತಿಯು ಪಡಿತರ ಸೌಲಭ್ಯವನ್ನು 80 ಕೋಟಿ ಜನರಿಂದ 20 ಕೋಟಿ ಜನರಿಗೆ ಇಳಿಸುವಂತೆ ಮತ್ತು ಪಡಿತರ ದರವನ್ನು ಎರಡು ಪಟ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ.
ಈ APMC ಮೂಲೆಗುಂಪು ಕಾಯಿದೆಯು ಸರ್ಕಾರದ ಈ ಉದ್ದೆಶವನ್ನು ಸುಲಭವಾಗಿ ಈಡೇರುವಂತೆ ಮಾಡಿ ದೇಶದ ಕೋಟ್ಯಾಂತರ ಬಡವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸಲಿದೆ.
ಹೀಗೆ APMC ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಳಸಿಕೊಂಡು ಮೋದಿ ಸರ್ಕಾರ ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಧಣಿಗಳಿಗೆ ವಹಿಸಿ ರೈತರನ್ನು ಅವರ ಗುಲಾಮಗಿರಿಗೆ ದೂಡಲಿದೆ. ಇಂಥಾ ಕಾಯಿದೆಯನ್ನು ಬೆಂಬಲಿಸಲು ಸಾಧ್ಯವೇ?
2. ಕಾಂಟ್ರಾಕ್ಟ್ ಫಾರ್ಮಿಂಗ್ ಮಸೂದೆ
ರೈತ ಹಿಡುವಳಿಗಳು ಸಣ್ಣದಾಗುತ್ತಿರುವಂತೆ ಕೃಷಿ ಲಾಭದಾಯಕವಾಗುವುದಿಲ್ಲ ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ಸಣ್ಣ ರೈತರು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಕಾಯಿದೆ ತರಲು ಸರ್ಕಾರ ಮುಂದಿಡುತ್ತಿರುವ ಕಾರಣ. ಆದರೆ ಕಾಂಟ್ರಾಕ್ಟ್ ಫಾರ್ಮಿಂಗ್ ಈ ಸಮಸ್ಯೆಗೆ ಪರಿಹಾರವೇ?
ಮೋದಿ ಸರ್ಕಾರ ತರುತ್ತಿರುವ ಎರಡನೇ ಮರಣ ಶಾಸನವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಶಾಸನದ ಮೂಲಕ ಸರ್ಕಾರವು ರೈತರ ಹಿಡುವಳಿಗಳನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆಗೆ ಕೊಡಲು ಅನುವು ಮಾಡಿಕೊಡುತ್ತದೆ. ಮಸೂದೆಯ ನಿಜವಾದ ಅರ್ಥವನ್ನು ಬಚ್ಚಿಡಲು ಅದಕ್ಕೆ Farmers (Empowerment And Protection) Price Assurance And Farm Services ಎಂಬ ಉದ್ದನೆಯ ಮತ್ತು ತಪ್ಪು ಅರ್ಥವನ್ನು ಕೊಡುವ ಹೆಸರನ್ನು ಮೋದಿ ಸರ್ಕಾರ ಇಟ್ಟಿದೆ.
ಈ ಮಸೂದೆಯ ಪ್ರಕಾರ ರೈತಾಪಿ ಹಾಗು ದೊಡ್ಡ ಕಾರ್ಪೊರೇಟ್ ಕಂಪನಿಗಳು (ಸರ್ಕಾರದ ಭಾಷೆಯಲ್ಲಿ ಹೇಳುವುದಾದರೆ -Sponsores- ಪ್ರಾಯೋಜಕರು ) ಬೆಲೆ, ಗುಣಮಟ್ಟ ( Grade, Quality and Standards ) ಹಾಗು ಬೆಳೆಗಳ ಬಗ್ಗೆ ಪೂರ್ವಭಾವಿ ಒಪ್ಪಂದಕ್ಕೆ ಬರಬಹುದು.
ಹಾಗೂ ಆ ಒಪ್ಪಂದಗಳಿಗೆ ಸರ್ಕಾರ ರೂಪಿಸಿರುವ ಚೌಕಟ್ಟು ರೈತರ ಪರವಾಗಿದೆ ಮತ್ತು ಅವರನ್ನು ಸಬಲೀಕರಿಸುವುದಕ್ಕೆ ಪೂರಕವಾಗಿದೆ ಎಂದು ಸರ್ಕಾರದ ವಾದ.ಆದರೆ ಸರ್ಕಾರದ ಈ ಭರವಸೆ ಎಷ್ಟು ಸುಳ್ಳು ಎಂಬುದನ್ನು ಆ ಮಸೂದೆಯ ಕೆಳಗಿನ ಮೂರು ಅಂಶಗಳನ್ನು ಮಾತ್ರ ನೋಡಿದರೂ ಅರ್ಥವಾಗುತ್ತದೆ.
- – ಮಸೂದೆಯ 4ನೇ ಸೆಕ್ಷನ್ನಿನ 2ನೇ ಸಬ್ ಕ್ಲಾಸಿನ ಪ್ರಕಾರ :
ರೈತಾಪಿ ಹಾಗು ಪ್ರಾಯೋಜಕರು ಬೆಳೆಯ ಗುಣಮಟ್ಟದ ಬಗ್ಗೆ ಮಾಡಿಕೊಳ್ಳುವ ಒಪ್ಪಂದವು ಸರ್ಕಾರ ಅಥವಾ ಸರ್ಕಾರದಿಂದ ಗುರುತಿಸಲ್ಪಟ್ಟ “ಸ್ವತಂತ್ರ” ಏಜೆನ್ನಿಯು ನಿಗದಿ ಮಾಡುವ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಬದ್ಧವಾಗಿರಬೇಕು
- – ಎಲ್ಲಕ್ಕಿಂತ ಮುಖ್ಯವಾಗಿ ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2ರ ಪ್ರಕಾರ
ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು..ಒಂದು ವೇಳೆ ಪರಿಶೀಲಿಸದೆ ಒಪ್ಪಿಕೊಂಡರೆ ಆ ನಂತರ ಸರಕನ್ನು ತಿರಸ್ಕರಿಸುವಂತಿಲ್ಲ ಎಂದರ್ಥ.
ಕೊನೆಯ ಸಾಲಿನಲ್ಲಿ ರೈತಪರ ಧ್ವನಿ ಕಂಡುಬಂದರೂ ಒಟ್ಟಾರೆ ತಾತ್ಪರ್ಯವೇನು ?
ಒಂದು ವೇಳೆ ಸರಕು ಸ್ವೀಕರಿಸುವ ಮುನ್ನ ಗುಣಮಟ್ಟ ಪರಿಶೀಲಿಸಿದಾಗ ಒಪ್ಪಂದದ ಗುಣಮಟ್ಟಕ್ಕೆ ತಕ್ಕ ಹಾಗೆ ಸರಕಿಲ್ಲ ಎಂದರೆ ಡೆಲಿವರಿಯನ್ನು ತಿರಸ್ಕರಿಸಬಹುದು ಎನ್ನುವುದೇ ಈ ಸಬ್ ಕ್ಲಾಸಿನ ನಿಜವಾದ ತಾತ್ಪರ್ಯ.
ಆಗ ರೈತನಿಗೆ ಇರುವ ದಾರಿಗಳೇನು?
– ಮಸೂದೆಯ 13 ಮತ್ತು 14 ನೇ ಸೆಕ್ಷನ್ನಿನ ಪ್ರಕಾರ ಆಗ ರೈತ ತಾನು ಒಪ್ಪಂದ ಮಾಡಿಕೊಂಡ ಪ್ರಾಯೋಜಕ ದೈತ್ಯ ಕಂಪನಿಯ ಬಗ್ಗೆ ಆ ಪ್ರದೇಶದ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದು .
ಆಗ ತಹಶೀಲ್ದಾರ್ ಪ್ರಾಯೋಜಕ, ರೈತ ಹಾಗು ಮೂರನೇ ವ್ಯಕ್ತಿಗಳು ಇರುವ ಒಂದು ಸಂಧಾನ ಸಮಿತಿ ಮಾಡುತ್ತಾರೆ. ಅದು 30 ದಿನಗಳೊಳಗೆ ಸಂಧಾನ ಕ್ಕೆ ಬರಬೇಕು.
ಅದು ಆಗದಿದ್ದಲ್ಲಿ ತಹಶೀಲ್ದಾರ್ ಮುಂದಿನ 30 ದಿನಗಳೊಳಗೆ ವ್ಯಾಜ್ಯ ಬಗೆಹರಿಸಬೇಕು. ಈ ತೀರ್ಮಾನವು ಸರಿ ಬರಲಿಲ್ಲವೆಂದರೆ ಡಿಸಿ ನೇತೃತ್ವದ ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಬಹುದು .ಅದು ಮುಂದಿನ 30 ದಿನಗಳಲ್ಲಿ ಏನು ತೀರ್ಮಾನ ಕೊಡುತ್ತದೋ ಅದು ಅಖೈರು.
ಎಲ್ಲಾ ಸರ್ಕಾರಗಳೂ ಮತ್ತು ಪಕ್ಷಗಳು ಬಹಿರಂಗವಾಗಿ ಮತ್ತು ಸ್ಪರ್ಧಾತ್ಮಕ ವಾಗಿ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿ ಗೆ ಪರವಾದ ನೀತಿಗಳನ್ನು ಘೋಷಿಸುತ್ತಿರುವಾಗ, ಅವರಡಿ ಕೆಲಸ ಮಾಡುವ ಅಧಿಕಾರಿಗಳ ಕೋರ್ಟುಗಳು ಕಂಪನಿಗಳ ವಿರುದ್ಧ ಸೊಲ್ಲೆತ್ತಬಲ್ಲವೇ?
ಜೊತೆಗೆ, ಈ ಇಡೀ ವ್ಯಾಜ್ಯದ ಅವಧಿಯಲ್ಲಿ ರೈತ ತನ್ನ ಸರಕನ್ನು ಬೇರೆಡೆ ಮಾರುವ ಹಾಗು ಇಲ್ಲ. ಸಂಗ್ರಹಿಸಿಟ್ಟುಕೊಳ್ಳಲು ಸಣ್ಣಪುಟ್ಟ ರೈತರಿಗೆ ಯಾವುದೇ ಸೌಕರ್ಯವೂ ಇರುವುದಿಲ್ಲ.
ನೂರು ದಿನಗಳ ಕಾಲ ಬೆಳೆದ ಬೆಳೆಗೆ ಹಣ ದಕ್ಕಲಿಲ್ಲವೆಂದರೆ ರೈತರಿಗೆ ನೇಣು ಹಾಕಿಕೊಳ್ಳುವುದು ಬಿಟ್ಟು ಬೇರೆ ಪರ್ಯಾಯವು ಇರುವುದಿಲ್ಲ.
ಮತ್ತೊಂದೆಡೆ ಲಕ್ಷ ಕೋಟಿ ವ್ಯವಹಾರ ನಡೆಸುವ ಕಂಪನಿಗಳಿಗೆ ಈ ವ್ಯಾಜ್ಯಗಳಿಂದ ಯಾವ ತೊಂದರೆಯೂ ಆಗುವುದಿಲ್ಲ.
ವಾಸ್ತವದಲ್ಲಿ ಸಣ್ಣ ಹಿಡುವಳಿಗಳ ಸಮಸ್ಯೆಗೆ ಸಹಕಾರಿ ಕೃಷಿ ಅಥವಾ ಅಂಬೇಡ್ಕರ್ ಹೇಳಿದಂತೆ ಕೃಷಿಯ ರಾಷ್ಟ್ರಿಕರಣ ನಿಜವಾದ ಪರಿಹಾರ. ಕೃಷಿಯ ಕಾರ್ಪೊರೇಟೀಕರಣವಲ್ಲ.
3.ಬೃಹತ್ ಕೃಷಿ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ ಅರ್ಥಾತ್ ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ. (Essential Commodities (Amendment) Act):
1955ರಲ್ಲಿ ಈ ಕಾಯಿದೆಯನ್ನು ಜಾರಿಗೆ ತಂದಾಗ ಅದರ ಹಿಂದಿದ್ದ ಉದ್ದೆಶ ಆಹಾರ ಧಾನ್ಯಗಳು ಹಾಗೂ ದೇಶವನ್ನು ಕಟ್ಟಲು ಅತ್ಯಗತ್ಯವಾಗಿರುವ ಕಲ್ಲಿದ್ದಲು, ಕಬ್ಬಿಣ ಇನ್ನಿತ್ಯಾದಿ ಸರಕುಗಳನ್ನು ದೊಡ್ದದೊಡ್ದ ವ್ಯಾಪಾರಿಗಳು ದುರುದ್ದೇಶಪೂರ್ವಕವಾಗಿ ಸಂಗ್ರಹಿಸಿಟ್ಟುಕೊಂಡು, ಕಾಳಸಂತೆ ಹಾಗೂ ಕಳ್ಳದಂಧೆಯನ್ನು ಮಾಡುತಾ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಬಾರದೆಂಬುದಾಗಿತ್ತು.
ಸರ್ಕಾರದ ಪ್ರಕಾರ ಕೃಷಿಯ ಉತ್ಪಾದನೆ, ಮಾರಾಟ, ಸಾಗಾಟ, ಸಂಗ್ರಹ ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳಲ್ಲಿ ಸರ್ಕಾರದ ಮಧ್ಯಪ್ರವೆಶದಿಂದಾಗಿ ಈ ಬಾಬತ್ತುಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಬರುತ್ತಿಲ್ಲ. ಆದ್ದರಿಂದ ಸರ್ಕಾರ ಈ ತಿದ್ದುಪಡಿ ಮಸೂದೆಯ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದುಹಾಕುತ್ತದೆ. ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡದೊಡ್ಡ ಅಗ್ರಿ ಬಿಸಿನೆಸ್ ಕಂಪನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಈ ಕಾಯಿದೆ ಅವಕಾಶ ಕಲ್ಪಿಸಿಕೊಡುತ್ತದೆ.
ಹಾಗಿದ್ದಲ್ಲಿ ದೊಡ್ಡ ದೊಡ್ಡ ಅಗ್ರಿ ಬಿಸಿನೆಸ್ ಕಂಪನಿಗಳು ಅಪಾರ ಆಹಾರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುವುದಿಲ್ಲವೇ?
ಈ ಕಾಯಿದೆಯ ಪ್ರಕಾರ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳ ಆದರೆ ಮಾತ್ರ ಹಾಗೂ ಯುದ್ಧ, ಬರ ಇನ್ನಿತ್ಯಾದಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತದಂತೆ!!
ಅಷ್ಟು ಮಾತ್ರವಲ್ಲ.. ಯುದ್ಧ, ಕ್ಷಾಮ ಬಂದಾಗಲೂ ಕೂಡ ಖಾಸಗಿ ಕಂಪನಿಗಳು ರಫ್ತಿಗಾಗಿ ಹಾಗೂ ಕೈಗಾರಿಕೋತ್ಪಾದನೆಗಾಗಿ ಮಾಡಿಕೊಂಡ ಸಂಗ್ರಹವನ್ನು ಮುಟ್ಟುವುದಿಲ್ಲ ಎಂಬ ಭರವಸೆಯನ್ನು ಈ ಕಾಯಿದೆ ಖುಲ್ಲಂಖುಲ್ಲಾ ನೀಡುತ್ತದೆ.
ಹೀಗೆ ಸಾರಾಂಶದಲ್ಲಿ ಈ ಮೂರೂ ಮಸೂದೆಗಳೂ ದೇಶದ ಹಿತಾಸಕ್ತಿಗಿಂತ ಜನರ ಕಲ್ಯಾಣಕ್ಕಿಂತ ಅಗ್ರಿ ಬಿಸಿನೆಸ್ ಕಂಪನಿಗಳಿಗೆ ಅವಕಾಶ ಮಾಡಿಕೊಡುವ ದೇಶದ್ರೋಹಿ ಮಸೂದೆಗಳೇ ಆಗಿವೆ. ಹೊಟ್ಟೆಗೆ ಅನ್ನ ತಿನ್ನುವ ಯಾರೇ ಆದರೂ ಈ ಮಸೂದೆಯನ್ನು ಬೆಂಬಲಿಸಲು ಸಾಧ್ಯವೇ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.
ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.
ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.
ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;
1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.
3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.
ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ2 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ8 hours agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

