ಲೈಫ್ ಸ್ಟೈಲ್
ಹೀಗೊಂದು ಹೆಬ್ಬಾವಿನ ಚಿಕಿತ್ಸೆ..!
- ಡಾ.ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು, ವೆಟರ್ನರಿ ಕಾಲೇಜು, ಶಿವಮೊಗ್ಗ
ಅನೇಕ ಸಲ ನಮಗೆ ಹೊಸ ರೀತಿಯ “ಪೇಶಂಟು”ಗಳು ಬಂದು ಅಚ್ಚರಿಗೊಳಿಸುವುದುಂಟು. ಅದರಲ್ಲೂ ಕಾಡಿನಿಂದ ಬರುವ “ರೋಗಿ” ಗಳ ಚಿಕಿತ್ಸೆ ಒಂದು ಸವಾಲು. ಪಶುವೈದ್ಯಕೀಯ ಓದುವಾಗ ಈ ರೀತಿಯ ಯಕ:ಶ್ಚಿತ್ ಹುಳ ಹುಪ್ಪಟೆಗಳಂತ ಪ್ರಾಣಿಗಳನ್ನು ಚಿಕಿತ್ಸೆ ಮಾಡಬೇಕಾಬಹುದಾದ ಸಂದರ್ಭವೆಂದೂ ಬರದು ಎಂದು “ವೈಲ್ಡ್ ಲೈಫ಼್ ಚಿಕಿತ್ಸೆ”ಯ ಪಾಠ ಮಾಡುವಾಗ ದಿವ್ಯ ನಿರ್ಲಕ್ಷ್ಯದಿಂದಿರುವುದು ನಮ್ಮಲ್ಲಿ ಅನೇಕರಿಗೆ ಸಾಮಾನ್ಯವಾಗಿತ್ತು. ಒಂದಿಬ್ಬರು ಸಹೋದ್ಯೋಗಿ ವಿದ್ಯಾರ್ಥಿಗಳು ಈ ರೀತಿಯ ತರಹೇವಾರಿ ಪ್ರಾಣಿಗಳ ಕ್ರಿಮಿಕೀಟಗಳ ಚಿಕಿತ್ಸೆಯಲ್ಲಿ ಆಸಕ್ತಿ ವಹಿಸುವುದು ಬಿಟ್ಟರೆ ಉಳಿದವರ ಆಸಕ್ತಿ ಅಷ್ಟಕ್ಕಷ್ಟೇ. ನಮ್ಮದೇನಿದ್ದರೂ ದನ, ಎಮ್ಮೆ, ಬೆಕ್ಕು, ನಾಯಿ, ಕುದುರೆ, ಕೋಳಿ, ಹಂದಿ ಎಂಬಿತ್ಯಾದಿ ಹಲವು ಹತ್ತು ಸಾಕು ಪ್ರಾಣಿ ಕುಲಕೋಟಿಗಳ ಚಿಕಿತ್ಸೆ ಬಿಟ್ಟರೆ ಉಳಿದ ಪ್ರಾಣಿಗಳ ಗೊಡವೆ ನಮಗ್ಯಾಕೆ ಎಂಬ ದಿವ್ಯ ನಿರ್ಲಕ್ಷ್ಯವಿತ್ತು.
ಆದರೆ ಕೆಲವೊಮ್ಮೆ ಆಮೆ, ಮೊಸಳೆ, ಉಡ,ಕರಡಿ, ಚಿರತೆ, ಕಾಡುಕೋಣ ಇವುಗಳ ಚಿಕಿತ್ಸೆ ದುತ್ತನೇ ಬಂದು ತಲೆ ಕೆರೆದುಕೊಂಡ ಘಟನೆಗಳು ಅನೇಕ. ಆಮೆಯಂತ ಪ್ರಾಣಿಗಳನ್ನು ಸಾಕಿ “ಡಾಕ್ಟ್ರೇ. ನಮ್ಮನೆ ’ಕಣ್ವ’ (ಆಮೆಯ ಹೆಸರು) ಯಾಕೋ ಫುಡ್ಡೇ ತಿಂತಿಲ್ಲ. ಜ್ವರಾ ಬಂದಿದೆ ಅನ್ಸತ್ತೆ. ಸ್ವಲ್ಪ ನೋಡಿ” ಎಂದಾಗ “ಎಲಾ..ಈ ಆಮೆಗೆ ಹ್ಯಾಗೆ ಜ್ವರ ಪರೀಕ್ಷೆ ಮಾಡೋದು?” ಪಾಠ ಮಾಡುವಾಗ ಸ್ವಲ್ಪ ಆಸಕ್ತಿ ವಹಿಸಬೇಕಿತ್ತು” ಎಂದುಕೊಳ್ಳುತ್ತಾ ಇಂಜೆಕ್ಷನ್ ಕೊಡಬೇಕೆಂದು ಅದರ ಕಾಲನ್ನು ಎಳೆದು ಹಿಡಿದು ಸೂಜಿ ಚುಚ್ಚಬೇಕೆಂದುಕೊಂಡರೆ ಇದ್ದಕ್ಕಿದ್ದಂತೆ ಲಬಕ್ಕೆಂದು ತಲೆ ಕಾಲುಗಳನ್ನು ಒಳಗೆಳೆದುಕೊಂಡು ಕೂರ್ಮಾವತಾರ ತಳೆದು ಪಶುವೈದ್ಯ ಜ್ಞಾನ ಅಣಕಿಸಿದ್ದಿದೆ.
ಬಹುಶ: ತೊಂಬತ್ತರ ದಶಕದ ದಿನಗಳಿರಬಹುದು. ಎಂದಿನಂತೆ ಪಶುಚಿಕಿತ್ಸೆಯಲ್ಲಿ ತೊಡಗಿದ್ದೆ. ಸಾಗರದ ಉರಗತಜ್ಞ ಮನ್ಮಥ ಕುಮಾರ್ ಸ್ಥಿರ ದೂರವಾಣಿಗೆ ಕರೆ ಮಾಡಿ “ಡಾಕ್ಟ್ರೇ. ಹೆಬ್ಬಾವಿಗೊಂದು ಚಿಕಿತ್ಸೆ ಆಗಬೇಕಿತ್ತು. ಆಸ್ಪತ್ರೆಯಲ್ಲಿರ್ತಿಲ್ಲಾ. ಬರ್ತಾ ಇರುವೆ” ಎಂದು ಅರ್ಧ ಘಂಟೆಯಲ್ಲಿ ಪ್ರತ್ಯಕ್ಷರಾದರು. ಜೊತೆಯಲ್ಲಿ ಅರಣ್ಯ ಇಲಾಖೆಯ ಖಾಕಿ ಪಡೆಯ ಸಾತ್ ಬೇರೆ. ನನ್ನ ಪೇಶಂಟ್ ಅವರ ಜೀಪಿನಲ್ಲಿಟ್ಟಿದ್ದ ಗೋಣಿಚೀಲದಲ್ಲಿತ್ತು. ಬೆಳಿಗ್ಗೆ ಸೋಮಾರಿತನದಿಂದ ಏಳುವ ಹುಡುಗರಿಗೆ “ಏಯ್. ಹೆಬ್ಬಾವಿನಂತೆ ಬಿದ್ದುಕೊಂಡಿದ್ದೆಯಲ್ಲೋ.. ಎಂದು ಬಯ್ಯುವವರು ನಿಜವಾಗಲೂ ಹೆಬ್ಬಾವಿನ ಸೋಮಾರಿತನ ಗಮನಿಸಬೇಕು. ಈ ಹೆಬ್ಬಾವು ಯಾರದೋ ಮನೆಯಲ್ಲಿ ದೊಡ್ಡ ಹೆಗ್ಗಣ ನುಂಗಿ ಹೊಟ್ಟೆ ಭಾರ ಆಗಿ ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಎಂದು ಯಾರದೋ ಮನೆಯ ಒಳಗೆ ಸೇರಿ ಮಂಚದ ಅಡಿಗೆ ಸೇರಿಕೊಂಡು ಬಿಟ್ಟಿತ್ತಂತೆ.
ಮೊದಲೇ ಸೋಮಾರಿ. ಹೆಗ್ಗಣ ಹೊಟ್ಟೆಯಲ್ಲಿರುವುದರಿಂದ ಇನ್ನೂ ಸೋಮಾರಿಯಾಗಿ ಮಂಚದಡಿ ನಿದ್ದೆ ಹೊಡೆದಿದೆ. ಮನೆಯೊಡತಿ ಸೌತೆಕಾಯಿಯ ಜಾತಿಯ ಮೊಗೆ ಕಾಯಿಯ ಜ್ಯೂಸ್ ಮಾಡೋಣ ಎಂದು ಮಂಚದಡಿ ಒಂದೆರಡು ಹಣ್ಣಾದ ಮೊಗೆಕಾಯಿ(?)ಗಳಿಗಾಗಿ ಹುಡುಕಲು ತಡಕಾಡಿದಾಗ ನಿಧಾನವಾಗಿ ಮಿಸುಕಾಡುವ “ತಣ್ಣನೆ”ಯ ಸರೀಸ್ರಪ ಕೈಗೆ ತಾಗಿ ನಂತರ ಅದು ಹೆಬ್ಬಾವು ಎಂದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಮನೆಯವರು ಮತ್ತು ಸುತ್ತಲೂ ಇರುವ ಜನ ಈ ವಿಶೇಷ ಅತಿಥಿಯ ಬೀಳ್ಕೊಡುಗೆಯ ಸಮಾರಂಭವೇರ್ಪಡಿಸಲು ಪ್ರಯತ್ನ ಪಟ್ಟಿದ್ದಾರೆ. ಹೆಬ್ಬಾವೂ ಸಹ ಗಾಬರಿಗೊಂಡು ಪೆಟ್ಟಿಗೆಯಾಕಾರದ ಮಂಚದ ಗೂಡಿನಲ್ಲಿ ಸೇರಿಕೊಂಡು ಬಿಟ್ಟಿದೆ.
ಕಿರಿದಾದ ಗ್ಯಾಪಿನಿಂದ ಅದನ್ನು ಹೊರತರಲು ಅದರ ಉದ್ದನೆಯ ಬಾಲ ಹಿಡಿದು ಜನರೆಲ್ಲಾ ಸೇರಿ ಎಳೆದಾಗ ಹೆಗ್ಗಣ ಹೊಟ್ಟೆಯೊಳಗಿರುವುದರಿಂದ “ಹೊಟ್ಟೆ ಡುಮ್ಮಣ್ಣ”ನಾಗಿದ್ದರಿಂದ ಮಂಚದ ಸಣ್ಣ ಗ್ಯಾಪಿನಲ್ಲಿ ಸಿಕ್ಕಿ ಹಾಕಿಕೊಂಡು ಅದರ ಚರ್ಮ ಸುಲಿದು ಬಿಡಿಸಿದ ಹಲಸಿನ ಹಣ್ಣಿನ ಪರಿಸ್ಥಿತಿಯಾಗಿದೆ. ಚೀನಾದಲ್ಲಾದರೆ ನಮಗೆ “ಹೋಳಿಗೆಯೇ ಜಾರಿ ತುಪ್ಪಕ್ಕೆ ಬಿದ್ದಹಾಗೇ” ಎಂಬ ಗಾದೆಯ ಹಾಗೇ “ಹಾವು ಅಡಿಗೆ ಮನೆಗೆ ಬಂದಹಾಗೆ” ಎಂಬ ಗಾಧೆ ಅನ್ವರ್ಥವಾಗಿ ಎಲ್ಲರಿಗೂ ಇದೊಂದು ವಿಶೇಷ “ಹೆಬ್ಬಾವಿನ ಹಬ್ಬ”ವಾಗಿ ಅದಕ್ಕೆ ತರತರದ ಮಸಾಲೆ ಹಾಕಿ ವಿವಿಧ ಖಾದ್ಯ ಮಾಡಿ ಹುರಿದು ಮುಕ್ಕುತ್ತಿದ್ದರೇನೋ?. ಅಷ್ಟೊತ್ತಿಗೆ ಜನ ಮನ್ಮಥಕುಮಾರನ್ನು ಕರೆಸಿದಾಗ ಹೆಬ್ಬಾವಿಗೆ ಆದ ಗಾಯ ನೋಡಿ ಅವರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆ ಮಾಡಿದರು.
ಹೆಬ್ಬಾವು ತುಂಬಾ ಗಾಯಗೊಂಡಿತ್ತು. ಐದಾರು ಜನ ಹಿಡಿದು ಎಳೆದ ಹೊಡೆತಕ್ಕೆ ಹೊಟ್ಟೆಯ ಭಾಗದ ಚರ್ಮದ ಮೇಲ್ಪದರ ಹಿಸಿದು ಹೋಗಿ ಅಂಗಾಂಗಗಳೆಲ್ಲಾ ಹೊರಚೆಲ್ಲಿಕೊಂಡು ವಿಕಾರವಾಗಿ ಕಾಣುತ್ತಿದ್ದವು. ಅವೆಲ್ಲಾ ಕೆಸರುಮಯವಾಗಿ ಮೂಲ ಬಣ್ಣವೇನು ಎಂಬುದೇ ಗೊತ್ತಾಗುತ್ತಿರಲಿಲ್ಲ. ಇಷ್ಟಿದ್ದರೂ ಸಹ ಸಹ ಹೆಬ್ಬಾವು ಪಿಳಿ ಪಿಳಿ ಎಂದು ಉದ್ದನೆಯ ನಾಲಿಗೆಯನ್ನು ಹೊರಹಾಕಿ ಒಳಗೆಳೆದುಕೊಂಡು ತನ್ನ ಬದುಕಿರುವಿಕೆಯನ್ನು ನಿರ್ವಿಕಾರವಾಗಿ ತೋರಿಸುತ್ತಿತ್ತು.
ಇದರ ಚಿಕಿತ್ಸೆಗೆ ಸುಮಾರು ಎರಡು ತಾಸು ಸಮಯ ಬೇಕು. ನಮ್ಮ ಆಸ್ಪತ್ರೆಯಲ್ಲಿ ಆಗ ಅಪರೇಷನ್ ಟೇಬಲ್ಲು ಇರಲಿಲ್ಲ. ಎರಡು ಗಂಟೆಗಳ ಕಾಲ ಕುಳಿತು ಈ ಕೈಂಕರ್ಯ ಮಾಡಿದರೆ ಬೆನ್ನು ಸೊಂಟ ಬಿದ್ದು ಹೋಗುತ್ತಿತ್ತು. ಈ ಜೀವಿಯ ಚಿಕಿತ್ಸೆಗೆ ಯಾರನ್ನೇನು ಕೇಳುವುದು ಎಂದು ನನ್ನ ಮನೆಯಲ್ಲಿದ್ದ ಟೀಪಾಯಿಯನ್ನು ತರಿಸಿ ಅದನ್ನೇ ಅಪರೇಷನ್ ಟೇಬಲ್ ಮಾಡಿಕೊಂಡೆ. ಈಗಿನಂತೆ ಮೊಬೈಲು, ವಾಟ್ಸಾಪ್ಪುಗಳಿರದೇ ಇರುವುದರಿಂದ ಯಾರನ್ನು ಕೇಳುವುದು?.
ನನ್ನ ಬಳಿಯಿರುವ ಪಶುವೈದ್ಯಕೀಯ ಗ್ರಂಥಗಳನ್ನು ಕೆದಕಿ ಅಧ್ಯಯನ ಮಾಡಿ ಅವಶ್ಯವಿರುವ ಅರಿವಳಿಕೆಗಳು, ಜೀವನಿರೋಧಕಗಳು, ಹೊಲಿಗೆ ದಾರ, ಸೂಜಿ ಇವನ್ನೆಲ್ಲ್ಲಾ ಸಾಗರದ ಮೆಡಿಕಲ್ಲಿನಿಂದ ತರಿಸಿದೆ. ಮನ್ಮಥಕುಮಾರ್ ಹೆಬ್ಬಾವಿನ ನಿಯಂತ್ರಣ ಸಾಧಿಸಿಕೊಟ್ಟರು. ಯಾವುದೋ ಕಚೇರಿ ಕೆಲಸಕ್ಕೆಂದು ಕಾರ್ಗಲ್ಲಿನಿಂದ ಬಂದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಶ್ರೀ ಪ್ರಭಯ್ಯಮಠ (ಅವರು ಈಗಿಲ್ಲ) ಮತ್ತು ಕೆರೆಯಪ್ಪ ಇವರೂ ಕೈಜೋಡಿಸಿದರು. ಅರಿವಳಿಕೆ ನೀಡಿದ ನಂತರ ಹೆಬ್ಬಾವಿನ ಹೊಟ್ಟೆಯಲ್ಲಿನ ವಿವಿಧ ಜೀವಜಠರಸಾಮ್ಲಗಳ ಸ್ನಾನದಿಂದ ಮಿಂದು ಇನ್ನೇನು ಜೀರ್ಣವಾಗಿ ಹಾವಿನ ರಕ್ತ ಸೇರಬೇಕಾಗಿದ್ದ ಅರೆ ಜೀವವಾಗಿದ್ದ ಹೆಗ್ಗಣವನ್ನು ಹೊರತೆಗೆದು, ಕರುಳಿನಂತಿರುವ ಅನೇಕ ಅಂಗಗಳನ್ನು ಸ್ವಚ್ಚಗೊಳಿಸಿ ಒಳಗೆ ಹಾಕಿ ವಿವಿಧ ಪದರಗಳಿಗೆ ಹೊಲಿಗೆ ಹಾಕಿ ಒಂದೆರಡು ಗಂಟೆಗಳ ಕಾಲದ ಪ್ರಯತ್ನದ ನಂತರ ಶಸ್ತ್ರಚಿಕಿತ್ಸೆ ಮುಗಿಯಿತು.
ಇದಾದ ನಂತರವೇ ಬಂದಿದ್ದು ನಿಜವಾದ ಪಜೀತಿ. ಈ ಉರಗಕ್ಕೆ ದಿನಾ ಜೀವ ನಿರೋಧಕ, ನಂಜುನಿವಾರಕ ಚುಚ್ಚು ಮದ್ದು ಒಂದು ವಾರ ನೀಡಬೇಕಲ್ಲ? ಯಾರು ನೀಡುವವರು? ಎಂಬ ಪ್ರಶ್ನೆ ಬಂತು. ಇಲ್ಲದಿದ್ದರೆ ಹೆಬ್ಬಾವು ನಂಜಾಗಿ ಸತ್ತು ಹೋಗುವ ಸಾಧ್ಯತೆ ಇತ್ತು. ಈ ಜೀವ ಜಂತಿಗೆ ಇಂಜೆಕ್ಷನ್ ಕೊಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ದಿನಾಲೂ ನಮ್ಮ ಆಸ್ಪತ್ರೆಯ ದರ್ಶನ ಮಾಡಿಸಲು ಹೇಳಿದೆ. ಅವರು ಅವರಿಗೆ ಇಂತಹ ಸಹಸ್ರ ಕೆಲಸ ಕಾರ್ಯಗಳಿವೆಯೆಂದೂ, ಕಾಡಿನ ಸಮಸ್ಥ ಜೀವಜಲಚರ ರಕ್ಷಣೆಯ ಭಾರ ಅವರ ಮೇಲಿದೆಯೆಂದೂ, ಸಾಗವಾನಿ, ಬೀಟೆ, ಶ್ರಿಗಂಧ ಇತ್ಯಾದಿ ದುಬಾರಿ ಮರಗಳನ್ನು ಮರಗಳ್ಳರಿಂದ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ಧಾರಿಯಿರುವದರಿಂದ ನಮ್ಮ ಆಸ್ಪತ್ರೆಯಲ್ಲಿಯೇ ಇದನ್ನು “ಒಳರೋಗಿ”ಯಾಗಿ ಸೇರಿಸಿಕೊಂಡು ಚಿಕಿತ್ಸೆ ಮಾಡಬೇಕೆಂದು ಹಾಗೂ ಅವರು ದಿನಾ ಬಂದು ನಮಗೆ ಪೂರ್ಣ ಸಹಕಾರ ಕೊಡುವುದಾಗಿ ಕೋರಿಕೊಂಡರು. ಆಸ್ಪತ್ರೆಗೆ ಹೊಂದಿಕೊಂಡ ಮೊಲ ಸಾಕಣೆ ಕೇಂದ್ರವನ್ನು ಹೆಬ್ಬಾವಿಗೆ “ಒಳರೋಗಿ ಚಿಕಿತ್ಸಾ ಕೇಂದ್ರ” ಮಾಡಿ ಅಲ್ಲೊಂದು ಗೋಣಿಚೀಲ ಹಾಕಿ ಅದರ ಮೇಲಿಟ್ಟೆವು.
ಮೊದ ಮೊದಲು ತಣ್ಣಗೇ ಇರುವ ಈ ಶೀತರಕ್ತದ ಪ್ರಾಣಿಯನ್ನು ಮುಟ್ಟಲೂ ಅಸಹ್ಯಮಾಡಿಕೊಂಡು ಬೇಸರ ಪಟ್ಟುಕೊಂಡ ಕೆರಿಯಪ್ಪ ನಿಧಾನವಾಗಿ ಅದರ ಮೇಲೆ ಮಮತೆ ಬೆಳೆಸಿಕೊಂಡ. ಅದರ ಹಸಿವು ನೀಗಲು ಒಂದೆರಡು ಕಪ್ಪೆಗಳನ್ನು ಹಿಡಿದು ಆ ರೂಮಿನಲ್ಲಿ ಬಿಟ್ಟ. ಈ ಸೋಮಾರಿ ಹೆಬ್ಬಾವು ಚುರುಕಾಗಿರುವ ಕಪ್ಪೆಗಳನ್ನು ಬೆನ್ನು ಹತ್ತಿ ಬೇಟೆ ಮಾಡುವ ಬಗ್ಗೆ ಸಂಪೂರ್ಣ ಸಂಶಯವಿತ್ತು. ಈ ಕಪ್ಪೆಗಳೋ ಅವುಗಳ ಎಂದಿನ ಹುಟ್ಟುಗುಣದಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಎಗರಾಡಿ ಇಡೀ ರೂಮಿನಲ್ಲಿ ಕುಣಿದು ಕುಪ್ಪಳಿಸಿ ಹೆಬ್ಬಾವಿನ ಮೈಮೇಲೆಯೂ ಸವಾರಿ ಮಾಡಿ ಅವು ಅದರ ಆಹಾರವಾಗುವ ನಮ್ಮ ಬಯಕೆಯನ್ನೇ ನಿವಾಳಿಸಿ ಒಗೆದವು.
ಹೆಬ್ಬಾವಿನ ಜಾತಿಯ ಹಾವುಗಳು ಆಹಾರವಿಲ್ಲದೆಯೂ ಅನೇಕ ದಿನ ಬದುಕಬಲ್ಲವು ಮತ್ತು ಇದಕ್ಕೆ ಆಹಾರ ಹಾಕುವ ವ್ಯರ್ಥ ಪ್ರಯತ್ನ ಬೇಡವೆಂದರೂ ಸಹ ಅದರ ನೈಸರ್ಗಿಕ ಅಹಾರವಾದ ಇಲಿಗಳು, ಮೊಟ್ಟೆ ಇತ್ಯಾದಿಗಳನ್ನು ಅದಕ್ಕೆ ತಿನ್ನಿಸುವ ನಿರಂತರ ಪ್ರಯತ್ನ ಕೆರಿಯಪ್ಪನಿಂದ ನಡೆದೇ ಇತ್ತು. ಆಗಾಗ ತನ್ನ ನಾಲಿಗೆಯನ್ನು ಹೊರಚಾಚಿ ಒಳಗೆಳೆದುಕೊಂಡು ತಾನು ಬದುಕಿರುವಿಕೆಯನ್ನು ಹೆಬ್ಬಾವು ಖಚಿತಪಡಿಸುತ್ತಿತ್ತು. ಈಗಾಗಲೇ ಅದು ವಿಷರಹಿತ ಮತ್ತು ಅಪಾಯರಹಿತ ಎಂದು ಗೊತ್ತಾಗಿರುವುದರಿಂದ ಆರಾಮವಾಗಿ ಅದಕ್ಕೆ ಒಂದೈದಾರು ದಿನ ಅವಶ್ಯಕ ಚುಚ್ಚುಮದ್ದು ನೀಡಿದೆವು.
ಚುಚ್ಚು ಮದ್ದಿನ ಮೂಲಕ ಔಷಧಿ ನೀಡದೆಯೇ ಇದಕ್ಕೆ ಗುಳಿಗೆ ತಿನ್ನಿಸಲಾದೀತೇ?. ಹತ್ತು ದಿನಗಳ ನಂತರ ಗಾಯ ವಾಸಿಯಾಗಿದ್ದರಿಂದ ಹಾಕಿದ ಹೊಲಿಗೆಯನ್ನೂ ಬಿಡಿಸಿಯಾಯ್ತು. ಇಷ್ಟಾದರೂ ಕಾಡುಕಾಯುವ ಗುರುತರ ಜವಾಬ್ದಾರಿ ಹೊಂದಿದ ಅರಣ್ಯ ಮತ್ತು ಹೆಬ್ಬಾವು ಹಿಡಿದು ಅದಕ್ಕೆ ಚುಚ್ಚುಮದ್ದು ನೀಡಲು ನಮಗೆ ಸಹಕಾರದ ಮಹಾನ್ ಆಶ್ವಾಸನೆ ನೀಡಿದ ಇಲಾಖೆಯ ಸಿಬ್ಬಂದಿಯ ಪತ್ತೆಯೇ ಇರಲಿಲ್ಲ.
ಹೆಬ್ಬಾವಿಗೆ ಅಪರೇಷನ್ ಮಾಡಿದ ಈ ಸುದ್ಧಿ ಮಾಧ್ಯಮದವರಿಗೆ ಹೇಗೋ ತಿಳಿದು ಅದು ಅನೇಕ ಪೇಪರ್ರುಗಳಲ್ಲಿ ಬಂದು ಸುತ್ತ ಮುತ್ತಲಿನ ಜನ ನಮ್ಮ ವಿಶೇಷ ಒಳರೋಗಿಯನ್ನು ನೋಡಲು ತಂಡೋಪ ತಂಡವಾಗಿ ಬರತೊಡಗಿದರು. ನಮ್ಮ ದಿನ ನಿತ್ಯದ ಕಾಯಕ ಬದಿಗೊತ್ತಿ ಹೆಬ್ಬಾವಿನ ಅಪರೇಶನ್ನಿನ ಕಥೆಯನ್ನೇ ಪ್ರಾರಂಭದಿಂದ ಹೇಳಿ ಹೇಳಿ ಸಾಕಾಗಿ ಹೋಯಿತು. ಶಾಲಾ ಮಕ್ಕಳು ಅಧ್ಯಯನ ಶಿಬಿರದಂತೆ ಬೇಟಿಕೊಡಲಾರಂಭಿಸಿದ್ದರಿಂದ ಹೆಬ್ಬಾವಿಗೂ ಕಿರಿ ಪ್ರಾರಂಭವಾಯಿತೇನೋ?
ಇದು ಪ್ರಾಣ ಬಿಟ್ಟರೆ ಹೆಬ್ಬಾವನ್ನು ಸ್ವರ್ಗಕ್ಕಟ್ಟಿದ ಪಶುವೈದ್ಯ ಸಿಬ್ಬಂದಿ ಇತ್ಯಾದಿ ಚಿತ್ರ ವಿಚಿತ್ರ ತಲೆಬರಹದಲ್ಲಿ ಸುದ್ಧಿ ಬರಬಹುದಾದ ಸಾಧ್ಯತೆ ನೆನೆದು ಅರಣ್ಯ ಇಲಾಖೆಯವರಿಗೆ ಈ ಹೆಬ್ಬಾವನ್ನು ಕೂಡಲೇ ಕಾಡಿಗೆ ಸೇರಿಸಬೇಕೆಂದು ಮೊರೆಯಿಟ್ಟೆ. ನನ್ನ ನಿರಂತರ ಮೊರೆ ಕೇಳಿ ಅವರು ಒಂದು ಶುಭ ದಿನದಂದು ಬಂದು ಅದನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸಮೀಪದ ಅಭಯಾರಣ್ಯದಲ್ಲಿ ಬಿಟ್ಟ ಕೂಡಲೇ ಒಮ್ಮೆಯೂ ತಿರುಗಿ ನೋಡದೇ ಸರಸರನೇ ಹರಿದು ದಟ್ಟ ಕಾಡಿನಲ್ಲಿ ಕಣ್ಮರೆಯಾಯ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

