ದಿನದ ಸುದ್ದಿ
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿ :ಡಿ 26 ರಿಂದ ಖರೀದಿ ಕೇಂದ್ರ ಆರಂಭ

ಸುದ್ದಿದಿನ,ದಾವಣಗೆರೆ : ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರುಗಳಿಂದ ರಾಗಿ ಮತ್ತು ಭತ್ತವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಡಿ.20 ರಂದು ನಡೆದ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಭತ್ತ ರೂ.1815, ಎ ಗ್ರೇಡ್ ಭತ್ತ ರೂ.1835 ಹಾಗೂ ರಾಗಿ ರೂ.3150 ನಿಗದಿಪಡಿಸಿದ್ದು ಒಬ್ಬ ರೈತ 40 ಕ್ವಿಂಟಾಲ್ವರೆಗೆ ಭತ್ತವನ್ನು ಹಾಗೂ 75 ಕ್ವಿಂಟಾಲ್ವರೆಗೆ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬಹುದು. ಇಲಾಖೆಯ ಅಧಿಕಾರಿಗಳು ಈ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸುವರು.ಕೃಷಿ ಉತ್ಪನ್ನಗಳನ್ನೂ ಖರೀದಿ ಕೇಂದ್ರಕ್ಕೆ ನೀಡಿದ 3 ದಿನಗಳ ಒಳಗೆ ರೈತರ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು.
ರೈತರು ಪಹಣಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ಡಿ.26 ರಿಂದ 2020 ರ ಜನವರಿ 10 ರೊಳಗೆ ನೋಂದಾಯಿಸಿ ಕೊಳ್ಳಬಹುದಾಗಿದ್ದು, ರೈತರ ಬಯೋಮಿಟ್ರಿಕ್ ತೆಗೆದುಕೊಳ್ಳಲಾಗುವುದು. ಭತ್ತ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯ ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದು, ರೈತರು ಮಾದರಿ(ಸ್ಯಾಂಪಲ್)ಗಳನ್ನು ಮಾತ್ರ ಈ ಕೇಂದ್ರಗಳಲ್ಲಿ ನೀಡಬೇಕು.
ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಹಲ್ಲಿಂಗ್ ವ್ಯವಸ್ಥೆ ಇರುವ ಅಕ್ಕಿ ಗಿರಣಿ ಮಾಲೀಕರು ನೇರವಾಗಿ ರೈತರ ಮನೆಗಳಿಗೆ ಹೋಗಿ ಭತ್ತ ಖರೀದಿಸುತ್ತಾರೆ ಎಂದ ಅವರು ಅಕ್ಕಿ ಗಿರಣಿ ಮಾಲೀಕರು ಡಿ.30 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದರು.
ರಾಗಿ ಖರೀದಿ ಕೇಂದ್ರಗಳನ್ನು ಜಗಳೂರು, ಹೊನ್ನಾಳಿ, ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗುವುದು. ಈ ಬಾರಿ 13925 ಟನ್ ಸಂಗ್ರಹ ನಿರೀಕ್ಷೆ ಇದ್ದು, ಕಳೆದ ಬಾರಿ 14060 ಟನ್ ಖರೀದಿ ಮಾಡಲಾಗಿತ್ತು. ಇಲ್ಲಿ ಖರೀದಿಸುವ ರಾಗಿಯನ್ನು ಪಡಿತರ ವ್ಯವಸ್ಥೆ ಮೂಲಕ ವಿತರಣೆ ಮಾಡಲಾಗುವುದು. ಹಾಗೂ ಖರೀದಿಸಿ ರಾಗಿ ಜಿಲ್ಲೆಯಲ್ಲಿರುವ ವಿವಿಧ ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡಲಾಗುವುದು.
ಖರೀದಿ ಕೇಂದ್ರಗಳಲ್ಲಿ ತೂಕ, ಗುಣಮಟ್ಟದಲ್ಲಿ ರೈತರಿಗೆ ಯಾವುದೇ ಮೋಸವಾಗಬಾರದು. ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ರೇಷ್ಮೆ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದು ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರು ಉತ್ತಮ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಜಿಲ್ಲೆಯ ಯಾವುದೇ ಖರೀದಿ ಕೇಂದ್ರಗಳಿಗೆ ನೀಡಬಹುದಾಗಿದೆ. ರಾಗಿಯನ್ನು ರಾಜ್ಯ ಉಗ್ರಾಣ ನಿಗಮದವರು ಸಂಗ್ರಹಿಸಿ ಇಡಲಿದ್ದಾರೆ. ಸುಮಾರು 31000 ಟನ್ಗಳಷ್ಟ ಧಾನ್ಯ ಸಂಗ್ರಹಿಸುವ ಉಗ್ರಾಣಗಳು ಜಿಲ್ಲೆಯಲ್ಲಿ ಇವೆ ಎಂದು ಮಾಹಿತಿ ನೀಡಿದರು.
ಅರ್ಹ ರೈತರಿಗೆ ಇದರಿಂದ ಪ್ರಯೋಜನವಾಗಬೇಕು. ದಲ್ಲಾಳಿ ಹಾಗೂ ಮಧ್ಯವರ್ತಿಗಳಿಂದ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ಅಂತಹ ಘಟನೆಗಳು ಕಂಡು ಬಂದಲ್ಲಿ ಸಹಿಸುವುದಿಲ್ಲ. ನಾನೇ ಮಾರುವೇಷದಲ್ಲಿ ಬಂದು ಖರೀದಿ ಕೇಂದ್ರಗಳ ಭೇಟಿ ನೀಡಿ ಪರಿಶೀಸುತ್ತೇನೆ ಹಾಗೂ ಖರೀದಿ ಕೇಂದ್ರದ ಪ್ರಕ್ರಿಯೆ ಪರೀಕ್ಷಿಸಲು ನನ್ನ ವತಿಯಿಂದಲೇ ಮಾರುವೇಷದಲ್ಲಿ ವ್ಯಕ್ತಿಗಳನ್ನು ಕಳುಹಿಸುತ್ತೇನೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದರು.
ಸರ್ಕಾರದ ಬೊಕ್ಕಸಕ್ಕೆ ಒಂದು ರೂಪಾಯಿ ಕೂಡ ನಷ್ಟವಾಗದಂತೆ ಕಾರ್ಯ ನಿರ್ವಹಿಸಬೇಕು. ಖರೀದಿ ಕೇಂದ್ರದ ಉಸ್ತುವಾರಿ ನೋಡಿಕೊಳ್ಳಲು ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಇವರು ಪ್ರತಿ ಎರಡು ದಿನಗಳಿಗೆ ಒಮ್ಮೆ ಈ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದೆರು.
ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೆಎಫ್ಸಿಎಸ್ಸಿ ರಾಜ್ಯ ವ್ಯವಸ್ಥಾಪಕ ಜವಳಿ, ಕೆಎಫ್ಸಿಎಸ್ಸಿ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ, ಎಪಿಎಂಸಿ ಸಹಾಯಕ ನಿರ್ದೇಶಕರ ಸೋಮಶೇಖರ್, ಕೃಷಿ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಎಪಿಎಂಸಿ ಕಾರ್ಯದರ್ಶಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಫೆಬ್ರವರಿ 14 ಮತ್ತು 15 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025

ಸುದ್ದಿದಿನ,ಕಲಬುರಗಿ:ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಭವಿಷ್ಯದಲ್ಲಿ ಪತ್ರಕರ್ತರಾಗುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಮೀಡಿಯಾ ಫೆಸ್ಟ್-2025 ಕಾರ್ಯಕ್ರಮ ಆಯೋಜಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ತಿಳಿಸಿದರು.
ಮಂಗಳವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಮಾಧ್ಯಮ ಅಕಾಡೆಮಿ, ಶರಣಬಸವ ವಿಶ್ವವಿದ್ಯಾಲಯ ಹಾಗೂ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರ, ನುರಿತ ಪತ್ರಕರ್ತರಿಂದ ಗೋಷ್ಠಿ, ಸ್ಪರ್ಧೆಗಳು ನಡೆಯಲಿವೆ. ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಶ್ವವಿದ್ಯಾಲಯ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗದ ಸುಮಾರು 200 ವಿದ್ಯಾರ್ಥಿಗಳು ಮತ್ತು ಕಾಲೇಜಿನ ಪ್ರಾಧ್ಯಾಪಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ
ಶರಣಬಸವ ವಿಶ್ವವಿದ್ಯಾಲಯದ ಪತಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿ ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಮಾಧ್ಯಮೋತ್ಸವದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಲಾಗುತ್ತಿದೆ. ಭವಿಷ್ಯದ ಸ್ಪರ್ಧಾತ್ಮಕ ಪತ್ರಕರ್ತರಲ್ಲಿ ಅತ್ಯುತ್ತಮರನ್ನು ಹೊರತರಲು ಹತ್ತು ಹಲವು ಸ್ಪರ್ಧೆಗಳನ್ನು ವಿನ್ಯಾಸಗೊಳಿಸಿದ್ದು, ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದ ವಿವಿಧ ಸ್ಥಳಗಳಲ್ಲಿ ಈ ಸ್ಪರ್ಧೆ ನಡೆಯಲಿವೆ. ಕಾರ್ಯಕ್ರಮ್ಕಕೆ ಆಗಮಿಸುವ ವಿದ್ಯಾರ್ಥಿಗಳಿಗೆ ವಿ.ವಿ.ಯಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಿದ್ದು, ಸ್ಪರ್ಧೇಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಪ್ರವೇಶ ಸಂಪೂರ್ಣ ಉಚಿತ ಇರಲಿದೆ. ಇನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯು ವಿದ್ಯಾರ್ಥಿಗಳ ನೋಂದಣಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವೈಯಕ್ತಿಕ ಸ್ಪರ್ಧೆಗಳು ಮತ್ತು ಗುಂಪು ಸ್ಪರ್ಧೆಗಳು ಎಂದು ಎರಡು ವಿಭಾಗಗಳಾಗಿ ಸ್ಪರ್ಧೇಗಳನ್ನು ವಿಂಗಡಿಸಲಾಗಿದೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ನೇರ ಪತ್ರಿಕಾಗೋಷ್ಠಿ ವರದಿ ಮಾಡುವಿಕೆ, ಪಿಟಿಸಿ ಮತ್ತು ಟಿವಿ ವರದಿ ಮಾಡುವಿಕೆ, ಸ್ಪಾಟ್ ಛಾಯಾಗ್ರಹಣ, ರೇಡಿಯೋ ಜಾಕಿ, ನುಡಿಚಿತ್ರ, ಜಾಹೀರಾತು ಬರವಣಿಗೆ, ಸಾಮಾಜಿಕ ಮಾಧ್ಯಮದ ವರದಿ ಮಾಡುವಿಕೆ ಮತ್ತು ಮುಖ್ಯಾಂಶಗಳನ್ನು ಬರೆಯುವ ಕಲೆ ಸೇರಿವೆ. ಗುಂಪು ಸ್ಪರ್ಧೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ರಸಪ್ರಶ್ನೆ, “ನಮ್ಮೂರ ಭಾಷೆ–ವರವಾ?
ಶಾಪವಾ?”
ಚರ್ಚಾ ಸ್ಪರ್ಧೆ ಸೇರಿದೆ ಎಂದರು.
ಕಲ್ಯಾಣ ಕರ್ನಾಟಕ ಮಾಧ್ಯಮೋತ್ಸವದ ಮತ್ತೊಂದು ವೈಶಿಷ್ಟ್ಯವೆಂದರೆ ಉದಯೋನ್ಮುಖ ಪತ್ರಕರ್ತರ ಕೌಶಲ್ಯಗಳನ್ನು ಉತ್ತಮಗೊಳಿಸುವ ಎರಡು ಕಾರ್ಯಾಗಾರಗಳು ಹಮ್ಮಿಕೊಳ್ಳಲಾಗಿದೆ. ಮೊದಲ ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಹಾಗೂ ನಟ, ನಿರ್ದೇಶಕ ಮತ್ತು ಆಲ್ಮಾ ಮೀಡಿಯಾದ ಸಂಸ್ಥಾಪಕರಾದ ಗೌರೀಶ್ ಅಕ್ಕಿ, ಮಾಧ್ಯಮದ ಸ್ಪರ್ಧಾತ್ಮಕ ಜಗತ್ತನ್ನು ಪ್ರವೇಶಿಸುವ ಹಾಗೂ ಸವಾಲುಗಳನ್ನು ಎದುರಿಸಲು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಸಿದ್ಧಪಡಿಸುವ ಕುರಿತು ಮಾತನಾಡಲಿದ್ದಾರೆ. ಎರಡನೇ ಕಾರ್ಯಾಗಾರದಲ್ಲಿ ನಕಲಿ ಸುದ್ದಿಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಹಿರಿಯ ಪತ್ರಕರ್ತೆ ಹಾಗೂ ಪ್ರಾಧ್ಯಾಪಕಿ ಪ್ರೊ. ಕಾಂಚನ ಕೌರ್ ಮಾತನಾಡಲಿದ್ದಾರೆ ಎಂದು ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದ ಟಿ.ವಿ.ಶಿವಾನಂದನ್ ಅವರು, ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದರು.
ಫೆಬ್ರವರಿ 17 ರಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಮೀಡಿಯಾ ಫೆಸ್ಟ್ ಉದ್ಘಾಟಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಮತ್ತು ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಮ್, ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಬಿ. ಕೆ. ರವಿ, ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅನಿಲ್ಕುಮಾರ್ ಬಿಡವೆ, ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಶ್ರೀರಾಮುಲು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಘಟಕದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮತ್ತು ಇನ್ನಿತರ ಗಣ್ಯರು ಈ ಮಾಧ್ಯಮೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ 18 ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಲಬುರಗಿಯ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ, ಕಲಬುರಗಿಯ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಭವಾನಿ ಸಿಂಗ್, ಕಲಬುರಗಿ ಘಟಕದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ

- ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸುದ್ದಿದಿನ,ಹೊಸಪೇಟೆ:ಕಾರಿನ ಗ್ಲಾಸ್ ಮುಂದೆ ಎಂ.ಎಲ್.ಎ ಕಾರು ಪಾಸು ಇಟ್ಟುಕೊಂಡು ತನ್ನ ಬೆಂಬಲಿಗರು, ಗನ್ ಮ್ಯಾನ್ ನೊಂದಿಗೆ ತಹಶಿಲ್ದಾರರ ಹಾಗೂ ಕೋರ್ಟ್ ಗೆ ಹಾಜರಾಗದ್ದಾಗ ಪ್ರಶ್ನೆ ಕೇಳಲು ಮುಂದಾದ ಪತ್ರಕರ್ತರಿಗೆ .ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ಕೊಲೆ ಬೆದರಿಕೆ ಹಾಕಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ವಿಡಿಯೋ ಮಾಡಿದಕ್ಕೆ ವಾರ್ತಾ ಭಾರತಿಯ ಪತ್ರಿಕೆಯ ಜಿಲ್ಲಾ ವರದಿಗಾರ ಮಹಮ್ಮದ್ ಗೌಸ್ ಮೇಲೆ ಕೆ.ಎಂ.ಎಫ್ ನ ಅಧ್ಯಕ್ಷ ಭೀಮಾ ನಾಯ್ಕ ಹಲ್ಲೆ ಮಾಡಿ, ಕೊಲೆ
ಬೆದರಿಕೆ ಹಾಕಿದ ದುರ್ಘಟನೆ ವಿಜಯನಗರ ಜಿಲ್ಲೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಕರ್ನಾಟಕ ರಾಜ್ಯ ಸರ್ಕಾರದ ಕೆ.ಎಂ.ಎಫ್ ಹಾಲಿ ಅಧ್ಯಕ್ಷ ಭೀಮಾನಾಯ್ಕ್, ತನ್ನ ಕಾರಿಗೆ ಭೀಮಾನಾಯ್ಕ್ , ಹಗರಿಬೊಮ್ಮನಹಳ್ಳಿ ತಾಲೂಕಿನ ಎಂ.ಎಲ್.ಎ ಶಾಸಕರು ಎನ್ನುವ ಪಾಸು ಅಂಟಿಸಿಕೊಂಡು ಹಗರಿಬೊಮ್ಮನಹಳ್ಳಿಯಿಂದ ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರದ ತಹಶಿಲ್ದಾರರ ಕಂದಾಯ ಇಲಾಖೆಗೆ ಹಾಗೂ ಕೋರ್ಟ್ ಗೆ ಆಗಮಿಸಿದ್ದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಹಶಿಲ್ದಾರರ ಕಚೇರಿಗೆ ರಿಜಿಸ್ಟರ್ ಹಾಗೂ ಆಸ್ತಿ ವಿಚಾರವಾಗಿ ಹೊಸಪೇಟೆ ಕೋರ್ಟ್ ಹಾಜರಾದಾಗ ಎರಡು ದಿನಗಳಿಂದ ಭೀಮಾನಾಯ್ಕ್ ಅವರು ಕಾರಿಗೆ ಕೆ.ಎ 41 ಎಂ.ಎಫ್ 4599 ಈ ವಾಹನಕ್ಕೆ ಪಾಸ್ ಸಂಖ್ಯೆ 89, ಕರ್ನಾಟಕ ವಿಧಾನಸಭಾ ಕ್ಷೇತ್ರ, ಭೀಮಮಾಯ್ಕ್ ಎಸ್,ಹಗರಿಬೊಮ್ಮನಹಳ್ಳಿ ಶಾಸಕರು, MLA ಎನ್ನುವ ಹಸಿರಿನ ಪಾಸು ಇಟ್ಟುಕೊಂಡು ಎರಡು ದಿನಗಳಿಂದ ಜಿಲ್ಲೆಯಲ್ಲಿ ಓಡಾಡುತ್ತಿದ್ದೆವೆ ಎನ್ನುವ ಕಾರು ಚಾಲಕ, ಈ ರೀತಿ ಸಂಚಾರ ಮಾಡಿದ್ದು ದುರ್ಘಟನೆ ನಡೆದಿದೆ.
ಇನ್ನು ಈ ವಿಚಾರವಾಗಿ ಏಕೆ ? ತಹಶಿಲ್ದಾರರ ಕಚೇರಿ ಬಂದಿರಾ, ಪತ್ರಕರ್ತರ ವಿಡಿಯೋ ಮಾಡಿ, ಪ್ರಶ್ನೆ ಕೇಳಿದಕ್ಕೆ , ಏಕೆ ? ರೀ ವಿಡಿಯೋ ಮಾಡ್ತಿರಾ ಕಂದಾಯ ಇಲಾಖೆಗೆ ಬರಬಾರದ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.
ಹೊಸಪೇಟೆ ಈಟಿವಿ ಭಾರತ್ ವರದಿಗಾರ ಗಿರೀಶ್ ಕುಮಾರ್ ಗೌಡ ಹಾಗೂ ವಾರ್ತಾ ಭಾರತೀ ಪತ್ರಿಕೆಯ ವರದಿಗಾರರಾದ ಮಹಮ್ಮದ್ ಗೌಸ್ ಅವರು ಭೀಮಾನಾಯ್ಕ್ ಅವರು ಹೊಸಪೇಟೆ ಬಂದ ವಿಚಾರ ಬಗ್ಗೆ ಹಾಗೂ ಇನ್ನಿತರ ಕಾಂಗ್ರೆಸ್ ಪಕ್ಷದ ಬೆಳವಣಿಗೆ ವಿಚಾರವಾಗಿ ಕೇಳಬೇಕೆಂದು ಇದ್ದರೆ ಭೀಮಾನಾಯ್ಕ್ “ನೋ ಕಾಮೆಂಟ್ಸ್’ ಎನ್ನುವ ಉತ್ತರ ನೀಡಿದ್ದರು. ನಂತರ ಕಾರು ಮುಂದಕ್ಕೆ ಹೋಗಿ ನಂತರ ವಾಪಾಸ್ಸು ಬಂದು, ಪತ್ರಕರ್ತರಾದ ವಿಜಯನಗರ ಜಿಲ್ಲೆ ವಾರ್ತಾ ಭಾರತಿ ಜಿಲ್ಲಾ ವರದಿಗಾರ ಮಹಮ್ಮದ್ ಗೌಸ್ ವಿಡಿಯೋ ಮಾಡಿದಕ್ಕೆ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಅವರ ಮೊಬೈಲ್ ಕಳಿಸಿಕೊಂಡು, ಕೈ ಮುರಿದು ಹಲ್ಲೆ ಮಾಡಿದ್ದಾರೆ. ಅವರ ಬೆಂಬಲಿಗರು ನಿಮ್ಮನ್ನ ನೋಡಿ ಕೊಳ್ಳುತ್ತೇವೆ, ಕೊಲೆ ಮಾಡುವ ಬೆದರಿಕೆ ಹಾಗೂ ದಬ್ಬಾಳಿಕೆ ಮಾಡಿದರು. ನಂತರ ಕೋರ್ಟ್ ನಲ್ಲಿ ಇದ್ದ ವಕೀಲರು ಇನ್ನಿತರರು ಆಗಮಿಸಿದ ನಂತರ ಅಲ್ಲಿಂದ ಕಾಲು ಕಿತ್ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಭೀಮಾನಾಯ್ಕ್ ರಿಂದ ನಾಚಿಕೆಗೇಡು
ಇನ್ನು ನಾಚಿಕೆಗೆಡಿನ ಸಂಗತಿಯಾಗಿ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಹಗರಿಬೊಮ್ಮನಹಳ್ಳಿ ಶಾಸಕ ಎಂದು ಪಾಸು ಇಟ್ಟುಕೊಂಡು ಊರೆಲ್ಲಾ ಸುತ್ತಿದ್ದು ಕಾಂಗ್ರೆಸ್ ಪಕ್ಷದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೆಡಿನ ಸಂಗತಿ ಆಗಿದೆ.
ಇನ್ನು ಈ ವಿಚಾರವಾಗಿ ಕೋರ್ಟ್ ನಲ್ಲಿ ಇದ್ದ ಕಾರಿನ ಮೇಲೆ ಪಾಸು ಇರುವ ಬಗ್ಗೆ ವಿಡಿಯೋ ಮಾಡಿದ ನಂತರ ಕಾರು ಚಾಲಕ ಇಲ್ಲ ಸರ್, ಎರಡು ದಿನಗಳಿಂದ ಅದೇ ಪಾಸು ಇಟ್ಟುಕೊಂಡು ಓಡಾಡಿದ್ದೆವೆ. ಈಗ ತೆಗೆದಿದ್ದೆವೆ ವಿಡಿಯೋ ಡಿಲಿಟ್ ಮಾಡಿ ಎಂದರು. ಇನ್ನು ಭೀಮಾನಾಯ್ಕ್ ಗನ್ ಮ್ಯಾನ್ ಹಾಗೂ ಅವರ ಬೆಂಬಲಿಗರು ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ದೌರ್ಜನ್ಯ ಮಾಡಿ, ದಬ್ಬಾಳಿಕೆಯನ್ನು ಮಾಡಿದ್ದಾರೆ. ಅವರದ್ದೆ ತಪ್ಪು ಹಿಡಿದುಕೊಂಡು ಪತ್ರಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಸಂಗತಿ ಇದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೆಡಿನ ಸಂಗತಿಯಾಗಿದೆ.
ಭೀಮಾನಾಯ್ಕ್ ಕಾರಿನ, ಕಾರು ಚಾಲಕನ ಮುಂಭಾಗದ ಗ್ಲಾಸ್ ನಲ್ಲಿ ಪಾಸ್ ಸಂಖ್ಯೆ 89, ಕರ್ನಾಟಕ ವಿಧಾನಸಭಾ ಕ್ಷೇತ್ರ, ಭೀಮಮಾಯ್ಕ್ ಎಸ್,ಹಗರಿಬೊಮ್ಮನಹಳ್ಳಿ ಶಾಸಕರು, MLA ಎನ್ನುವ ಹಸಿರಿನ ಪಾಸು ಇಟ್ಟುಕೊಂಡು ಎರಡು ದಿನಗಳಿಂದ ಜಿಲ್ಲೆಯಲ್ಲಿ ಓಡಾಡುತ್ತಿದ್ದರು. ಭೀಮಾನಾಯ್ಕ್ ಹಾಗೂ ಗನ್ ಮ್ಯಾನ್ ಹಾಗೂ ಬೆಂಬಲಿಗರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಮಾಧ್ಯಮದ ಮಿತ್ರರ ಮೇಲೆ ಹಲ್ಲೆ ಮಾಡೋ ಅಧಿಕಾರ ಇಲ್ಲ, ಮಾಧ್ಯಮದವರು ಪ್ರಶ್ನೆ ಕೇಳಿದರೆ ಉತ್ತರ ಕೊಡಬೇಕು ಇಲ್ಲದಿದ್ದರೆ ಆಮೇಲೆ ಮಾತನಾಡುವೆ ಎಂದು ಹೇಳಬೇಕು. ಅವರ ಮೇಲೆ ಹಲ್ಲೆ ಮಾಡೋದ್ ಒಳ್ಳೆಯದಲ್ಲ. ಭೀಮಾನಾಯ್ಕ್ ಎಸ್, ಶಾಸಕರು, ಎಂ.ಎಲ್.ಎ ಅಂತ ಇಟ್ಟುಕೊಂಡು ಓಡಾಡೋದ್ ಸರಿಯಲ್ಲ ಎಂದರು.
|ನೇಮರಾಜ್ ನಾಯ್ಕ್, ಹಾಲಿ ಶಾಸಕರು ಕ್ಷೇತ್ರ,ವಿಜಯನಗರ ಜಿಲ್ಲೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಸಂಘಟಿತರಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ
-
ದಿನದ ಸುದ್ದಿ12 hours ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ14 hours ago
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ
-
ದಿನದ ಸುದ್ದಿ3 days ago
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ
-
ದಿನದ ಸುದ್ದಿ6 hours ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ