ದಿನದ ಸುದ್ದಿ
ಪ್ಲೀಸ್ ಸಿದ್ದರಾಮೋತ್ಸವ ಅನ್ನಬೇಡಿ : ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವ ಇದು
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಆಗಸ್ಟ್ 3ರಂದು ಏರ್ಪಡಿಸಿರುವುದು ಸಿದ್ದರಾಮೋತ್ಸವ ಅಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75 ನೇ ಜನುಮದಿನದ ಅಮೃತ ಮಹೋತ್ಸವ. ನಾವು ಯಾರೂ ಸಿದ್ದರಾಮೋತ್ಸವವೆಂದು ಎಲ್ಲಿಯೂ ಹೇಳಿಲ್ಲ. ಇಂಥ ಐತಿಹಾಸಿಕ ಸಮಾರಂಭದ ಬಗ್ಗೆ ಏನೆನೆಲ್ಲಾ ಬರುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದು, ಅಮೃತ ಮಹೋತ್ಸವದ ಸಮಯ. ಸಿದ್ದರಾಮಯ್ಯರು ಈ ನಾಡು ಕಂಡ ಶ್ರೇಷ್ಠ ರಾಜಕಾರಣಿ. ಇಲ್ಲಸಲ್ಲದ ವದಂತಿ ಹಬ್ಬಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ನಾಯಕರಾದ ಹೆಚ್. ಸಿ. ಮಹಾದೇವಪ್ಪ, ಬಸವರಾಜ ರಾಯರೆಡ್ಡಿ, ಬಿ. ಎಲ್. ಶಂಕರ್, ಕೆ. ಎನ್. ರಾಜಣ್ಣ, ಎಸ್. ಎಸ್.
ಮಲ್ಲಿಕಾರ್ಜುನ್, ಹನುಮಂತರಾಯ ಸೇರಿದಂತೆ ಬಹುತೇಕ ನಾಯಕರು ಇದು ಪಕ್ಷದ ವತಿಯಿಂದ ಏರ್ಪಡಿಸಿರುವ ಕಾರ್ಯಕ್ರಮ ಅಲ್ವೇ ಅಲ್ಲ. ಆಗಸ್ಟ್ 3 ರಂದು ದಾವಣಗೆರೆ – ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ
ಶಾಮನೂರು ಶಿವಶಂಕರಪ್ಪರ ಒಡೆತನದ ಸುಮಾರು 50 ಎಕರೆ ಜಾಗವಾದ ಶಾಮನೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉದ್ಘಾಟನೆ
ನೆರವೇರಿಸಲಿದ್ದಾರೆ. ಸುಮಾರು ಆರರಿಂದ ಏಳು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬಿ. ಎಲ್. ಶಂಕರ್ ಮಾತನಾಡಿ ಸಿದ್ದರಾಮಯ್ಯರ ಹುಟ್ಟು ಹಬ್ಬ ನೆಪವಾಗಿದ್ದರೂ, ಕಾಂಗ್ರೆಸ್ ಪಕ್ಷವು ದೇಶಕ್ಕೆ ನೀಡಿರುವ ಕೊಡುಗೆ, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ನೀಡಿರುವ ಕೊಡುಗೆಗೆಳು, ಜಾತ್ಯಾತೀತತೆಗೆ ಬಂದ
ಅಪಾಯ, ಸಂವಿಧಾನ ಅಡಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗ, ಸಂವಿಧಾನಕ್ಕೆ ಆಗುತ್ತಿರುವ ಅಪಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಬೃಹತ್ ಸಮಾವೇಶದಲ್ಲಿ ಚಿಂಥನ ಮಂಥನ ನಡೆಯಲಿದೆ. ಪಕ್ಷದ ಬಾವುಟ ಇರುವುದಿಲ್ಲ. ಆದ್ರೆ, ಶೇಕಡಾ 90 ರಷ್ಟು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬರಲಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಯಾವುದೇ
ಗೊಂದಲ ಇಲ್ಲ. ಇನ್ನೆರಡು ದಿನಗಳಲ್ಲಿ ನಾವೆಲ್ಲರೂ ಸೇರಿ ಶಿವಕುಮಾರ್ ಅವರಿಗೆ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯರ 75 ನೇ ಅಮೃತ ಮಹೋತ್ಸವ ಬೇರೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವುದಿಲ್ಲ. ವ್ಯಕ್ತಿ ವೈಭವೀಕರಣ, ವಿಜೃಂಭಣೆ ಮಾಡುವ ಉದ್ದೇಶ ಇಲ್ಲ. ಸುಮಾರು 40 ವರ್ಷಗಳ ಕಾಲ ರಾಜಕಾರಣದಲ್ಲಿ
ಅನುಭವ ಹೊಂದಿರುವ ಸಿದ್ದರಾಮಯ್ಯರು ನೀಡಿರುವ ಕೊಡುಗೆ ಅಪಾರ. ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಜನಪರ ಕಾರ್ಯಕ್ರಮಗಳು, ಸಾಧನೆಗಳು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ
ವರ್ಗದವರಿಗೆ ನ್ಯಾಯ ನೀಡಿದ ಶ್ರೇಯ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇನ್ನು ಸಮಿತಿಯ ಅಧ್ಯಕ್ಷ ಕೆ. ಎನ್. ರಾಜಣ್ಣ ಮಾತನಾಡಿ, ಸಿದ್ದರಾಮಯ್ಯರು ಎಂದಿಗೂ ಅದ್ಧೂರಿಯಾಗಿ ಜನುಮದಿನ ಆಚರಿಸಿಕೊಂಡವರಲ್ಲ. ಶುಭ ಸಂದರ್ಭದಲ್ಲಿ ಪಕ್ಷದ ಯಶಸ್ಸು, ಅವರ ಯಶಸ್ಸಿಗಾಗಿ ಕಾರ್ಯಕ್ರಮ
ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ಜೆವಾಲಾ, ಕೆ. ಸಿ. ವೇಣುಗೋಪಾಲ್, ಹರಿಪ್ರಸಾದ್ ಅವರು ಭಾಗವಹಿಸಲಿದ್ದಾರೆ ಎಂದು
ಹೇಳಿದರು.
ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕಿಂಗ್ಸ್ ಕೋರ್ಟ್ ನಲ್ಲಿ ಸಮಿತಿಯ ಗೌರವಾಧ್ಯಕ್ಷ ಆರ್. ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದೇವೆ. ಈ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರನ್ನು ಆಹ್ವಾನ ಮಾಡಿದ್ದೇವೆ. ಈ ಸಭೆಯಲ್ಲಿ ಸಿದ್ದರಾಮಯ್ಯ, ಬಿ. ಕೆ. ಹರಿಪ್ರಸಾದ್, ಶಿವಕುಮಾರ್ ಸೇರಿದಂತೆ ಎಲ್ಲರೂ ಉಪಸ್ಥಿತರಿರಲಿದ್ದಾರೆ. ಯಶಸ್ಸಿಗೆ ಮತ್ತು ಯಾವ ರೀತಿ ಇರಬೇಕು ಎಂಬ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ಮಾಡುತ್ತಿದ್ದೇವೆ. ಸಿದ್ದರಾಮೋತ್ಸವ ಎಂಬುದು ಮಾಧ್ಯಮದ, ಇನ್ನೊಬ್ಬರು ಮಾಡಿರುವುದು ಎಂದರು.
ಬಸವರಾಜ ರಾಯರೆಡ್ಡಿ ಮಾತನಾಡಿ, ಇದು ವ್ಯಕ್ತಿ ಪೂಜೆ ಅಲ್ಲ, ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದರೆ ಅದನ್ನು ಯಾರೂ ನಂಬಬಾರದು. 60 ವರ್ಷ ಆದರೆ ಷಷ್ಠಾಬ್ದಿ ಅಂತಾ ಕರೆಯುತ್ತಾರೆ. ಸಿದ್ದರಾಮಯ್ಯರ
ಆತ್ಮೀಯ ಸ್ನೇಹಿತರು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ. ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜನಪರವಾದ ನಾಯಕ. ಎಲ್ಲಾ ವರ್ಗದವರು ಅಭಿಮಾನಿಗಳಿದ್ದಾರೆ. ಕೆಲ ವರ್ಗದವರು, ಜನರು ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದರು. ಅದಕ್ಕೆ ನಾವೇ ಬೇಡ ಎಂದೆವು. ಎಲ್ಲಾ ವರ್ಗದ ಜನನಾಯಕ ಆದ ಕಾರಣ ಎಲ್ಲಾ ಸಮುದಾಯದವರೂ ಸೇರಿಕೊಂಡಿದ್ದೇವೆ. ಅಭಿಮಾನದಿಂದ ಮಾಡುತ್ತಿದ್ದೇವೆ. ಆರ್. ವಿ. ದೇಶಪಾಂಡೆ ಅವರು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಮಹಾದೇವಪ್ಪ ಅವರು ಸ್ವಾಗತ ಸಮಿತಿ ಅಧ್ಯಕ್ಷ, ಕಾರ್ಯಾಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವರು ಇದ್ದಾರೆ ಎಂದು ವಿವರಿಸಿದರು.
ಹೆಚ್. ಸಿ. ಮಹಾದೇವಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಒಬ್ಬ ನಾಯಕನ ಹುಟ್ಟುಹಬ್ಬ ಆಚರಣೆ ಮಾಡಿದ ನಿದರ್ಶನ ಇಲ್ಲ. ಸಾರ್ವಜನಿಕ ಜೀವನಕ್ಕೆ ಬರುವ ಮೊದಲೇ ಯುವಜನ ಸಮಾಜವಾದಿ ಸಮಾಜದ ರಾಜ್ಯ
ಮುಖಂಡರಾಗಿ, ಸಮಾಜವಾದದ ಸಿದ್ಧಾಂತವನ್ನು ಜನರಲ್ಲಿ ಬಿತ್ತಲು ಶ್ರಮಿಸಿದರು. ಪ್ರೊ. ನಂಜುಂಡಸ್ವಾಮಿ ಅವರ ಜೊತೆ ರೈತ ಚಳವಳಿಯಲ್ಲಿ ಪಾಲ್ಗೊಂಡವರು. ಸಮಗ್ರ ಬದಲಾವಣೆಗೆ ಕರೆಕೊಟ್ಟ ಜಯಪ್ರಕಾಶ್ ನಾರಾಯಣ್ ರ
ಜೊತೆ ಸಕ್ರಿಯವಾಗಿ ಭಾಗಿಯಾದವರು. ಸಮಸಮಾಜದ ನಿರ್ಮಾಣ ಮಾಡಿ ಸಮೃದ್ಧ ಕರ್ನಾಟಕ ಕಟ್ಟಲು ಹೋರಾಡಿದವರು. ಸಾಮಾಜಿಕ ಕಾಳಜಿ ಮೂಲಕ ಎಲ್ಲರ ಜನಪ್ರಿಯ ನಾಯಕರಾದವರು ಸಿದ್ದರಾಮಯ್ಯ ಅವರು ಎಂದು ಹೇಳಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಸಿದ್ದರಾಮಯ್ಯರ 75 ನೇ ವರ್ಷದ ಅಮೃತ ಮಹೋತ್ಸವದ ಯಶಸ್ಸಿಗೆ ಮಾಜಿ ಸಚಿವರು, ರಾಜ್ಯಮಟ್ಟದ ನಾಯಕರೆಲ್ಲರೂ ಸೇರಿ ಈ ಸಮಾರಂಭ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲ. ಅವರಿಗೆ ಸಲ್ಲಬೇಕಾದ ನಮ್ಮ ಕಡೆಯ ಸಣ್ಣದಾದ ಕೆಲಸ. ಸಿಎಂ ಆದಾಗ ಮತ್ತು ಇದಕ್ಕಿಂತ ಮುಂಚೆ ಯಾವ ರೀತಿಯ ರಾಜಕೀಯ ಮಾಡಬೇಕೆಂದು ತೋರಿಸಿಕೊಟ್ಟವರು. ಎಲ್ಲಾ ವರ್ಗದವರ ಏಳಿಗೆಗೆ ಶ್ರಮಿಸಿದ ನಾಯಕ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


