Connect with us

ಲೋಕಾರೂಢಿ

ರಾಜಕಾರಣ ಮನೆಯಂಗಳದಲ್ಲಿರಲಿ, ಮನದಂಗಳದಲ್ಲಲ್ಲ…!

Published

on

Photo courtesy: word info

ಚುನಾವಣೆ ದಿನಾಂಕ ನಿಗದಿಯಾಯಿತು, ಚುನಾವಣಾ ನೀತಿಸಂಹಿತೆ ಜಾರಿಯಾಯಿತು, ಅಭ್ಯರ್ಥಿಗಳು ಘೋಷಣೆಗೊಂಡರು, ಮತಯಾಚನೆ ಆಯಿತು, ಮತದಾನವೂ ಆಯಿತು, ಸೋಲು-ಗೆಲುವು ಲೆಕ್ಕಾಚಾರ ಮುಗಿದು ಫಲಿತಾಂಶವೂ ಬಂತು, ಸರ್ಕಾರ ರಚನೆಯಾಯಿತು, ಉರುಳಿಬಿತ್ತು, ಈಗ ಮತ್ತೊಮ್ಮೆ ರಚನೆಯಾಗಲಿದೆ. ಪ್ರಾರಂಭದಿಂದ ‘ಆ’ ಪಕ್ಷವನ್ನು ಬೆಂಬಲಿಸುತ್ತಾ ಬಂದ ಈರಣ್ಣ, ಪಕ್ಕದ ಮನೆಯ ‘ಈ’ ಪಕ್ಷದ ರಾಮಣ್ಣನನ್ನು ಜನ್ಮಜನ್ಮದ ವೈರಿಯಂತೆ ದ್ವೇಷಿಸಿದ. ಚುನಾವಣೆ ಮುಗಿದು ಕೆಲದಿನಗಳಲ್ಲಿ ಈರಣ್ಣನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣಕ್ಕೆ ಸಹಾಯಕ್ಕೆ ಬಂದವನು ಇದೇ ‘ಈ’ ಪಕ್ಷದ ರಾಮಣ್ಣ. ಆಗ ಯಾವ ಪಕ್ಷವೂ ಈರಣ್ಣನನ್ನು ಏನಾಯಿತೆಂದು ಕೇಳಲಿಲ್ಲ. ಈರಣ್ಣನಿಗೆ ಅದು ಅರ್ಥವೂ ಆಗಲಿಲ್ಲವೆನ್ನಿ. ಇಂತಹ ಈರಣ್ಣರನ್ನು ನಮ್ಮ ಸುತ್ತಮುತ್ತ ಸಾಕಷ್ಟು ಜನರಲ್ಲಿ ಕಂಡಿರುತ್ತೇವೆ ನಾವು. ಅಸಲಿಗೆ ತಾವು ಬೆಂಬಲಿಸಿದ ಪಕ್ಷದಿಂದ ತನಗೆ ಯಾವ ರೀತಿ ಬೆಂಬಲ ದೊರೆಯಬಹುದೆಂಬ ಕನಿಷ್ಟ ಯೋಚನೆಯೂ ಅವರಲ್ಲಿ ಸುಳಿದಿರುವುದಿಲ್ಲ. ಹಾಗೆ ಸುಮ್ಮನೆ ಇಂತಹ ಈರಣ್ಣರನ್ನು ಮಾತನಾಡಿಸಿ ನೋಡಿ ಅವರ ಉತ್ತರದಲ್ಲಿ ಸಿದ್ಧಾಂತ, ಆದರ್ಶ, ಪಕ್ಷದ ಘನತೆ ಮೊದಲಾದವುಗಳಿರುತ್ತವೆ.

ಸಿದ್ಧಾಂತ, ಆದರ್ಶ ಎಲ್ಲವೂ ಒಳ್ಳೆಯದೇ. ಆದರೆ ಅದ್ಯಾವುದೋ ಪಕ್ಷವನ್ನು ಬೆಂಬಲಿಸುವ ಭರದಲ್ಲಿ ನಮ್ಮ ಸುತ್ತಮುತ್ತಲಿನವರೊಡನೆ ದ್ವೇಷ ಕಟ್ಟಿಕೊಳ್ಳುವುದು ಎಷ್ಟು ಸರಿ? ದಿನಬೆಳಗಾದರೆ ನೋಡಬೇಕಾದ, ಬೆರೆಯಬೇಕಾದ ವ್ಯಕ್ತಿಗಳ ಜೊತೆ ಕೇವಲ ರಾಜಕಾರಣದ ವಿಷಯಕ್ಕಾಗಿ ದ್ವೇಷ ಸಾಧಿಸುವವನ್ನು ಮೂರ್ಖ ಎನ್ನದೆ ಇನ್ನೇನು ಹೇಳಲಾದೀತು? ಯಾವ ರಾಜಕಾರಣ ನಮ್ಮ ನಡುವೆ ಸ್ನೇಹ-ಸೌಹಾರ್ದತೆಯನ್ನು ಬೆಳೆಸಬೇಕಿತ್ತೋ, ಯಾವ ರಾಜಕಾರಣ ಮೌಲ್ಯಗಳನ್ನು ಬಿತ್ತಬೇಕಿತ್ತೋ ಅಂತಹ ರಾಜಕಾರಣ ಸಮಾಜದ ಒಡಕಿಗೆ ಕಾರಣವಾಗಿರುವುದು ನಿಜಕ್ಕೂ ವಿಷಾದನೀಯ.ಸಾರ್ವಜನಿಕವಾಗಿ ನೀವು ನಿಮ್ಮ ಮನಸ್ಸಿನಲ್ಲಿರುವುದನ್ನು ಬಿಚ್ಚುನುಡಿಗಳಿಂದ ಹೇಳಿ, ಮರುಕ್ಷಣವೇ ಯಾವುದೋ ಒಂದು ಪಕ್ಷದ ಅಧಿಕೃತ ಏಜೆಂಟ್ ನೀವು ಎಂಬಂತೆ ಬಿಂಬಿಸಲಾಗುತ್ತದೆ. ಮರುಕ್ಷಣವೇ ನಿಮ್ಮ ಮಾತಿನ ಸತ್ಯಾಸತ್ಯತೆಯನ್ನು ಪರೀಕ್ಷಿಸದೇ, ಕೇವಲ ಪಕ್ಷದ ಹೆಸರಿನಿಂದ ನಿಮ್ಮನ್ನು ದ್ವೇಷಿಸುವ ನೂರಾರು ಮಂದಿ ಹುಟ್ಟಿಕೊಂಡುಬಿಡುತ್ತಾರೆ. ಇದು ಇತ್ತೀಚೆಗಿನ ರಾಜಕಾರಣದ ಸಣ್ಣ ಮಟ್ಟದ ಉದಾಹರಣೆಯಷ್ಟೆ.

ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳಲ್ಲಿರುವ ಜನಪ್ರತಿನಿಧಿಗಳು ತಮ್ಮ ಕೆಳಹಂತದ ಕಾರ್ಯಕರ್ತರಿಗೆ ನಿಜವಾದ ಪ್ರೇರಣೆಯಾಗಿರುತ್ತಾರೆ. ಅವರ ನಡೆನುಡಿಗಳನ್ನು ಕೆಳಹಂತದಲ್ಲಿರುವವರು ಅನುಸರಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದಂತೆ ವರ್ತಿಸುವ ಜನಪ್ರತಿನಿಧಿಗಳ ಕನಿಷ್ಟ ವ್ಯಕ್ತಿತ್ವ ಕೆಳಹಂತದಲ್ಲಿ ಪ್ರತಿಫಲಿತವಾಗುತ್ತದೆಯಲ್ಲದೇ ಮತ್ತೇನಿಲ್ಲ. ಜನರ ಮುಗ್ಧತೆ ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ನೋಡಿ, ಮೊನ್ನೆ ಮುಗಿದ ಚುನಾವಣೆ ವೇಳೆ ಗೌರಿಬಿದನೂರಿನಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಕಾಂಗ್ರೆಸ್‍ನ ಕಾರ್ಯಕರ್ತರು ಬರ್ಬರವಾಗಿ ಕೊಂದು ಹಾಕಿದರು ಎಂಬ ವರದಿ ಪತ್ರಿಕೆಗಳಲ್ಲಿ ಬಂದಿತ್ತು. ಆ ಹೊತ್ತು ಕಾಂಗ್ರೆಸ್-ಜೆಡಿಎಸ್ ನಡುವಿನ ಸಿಟ್ಟು-ಸೆಡವು ವ್ಯಕ್ತಿಯೊಬ್ಬನ ಪ್ರಾಣಹರಣದಲ್ಲಿ ಮುಕ್ತಾಯವಾಗಿತ್ತು. ಆದರೆ ವಿಪರ್ಯಾಸ ನೋಡಿ, ಅವೇ ಎರಡು ಪಕ್ಷಗಳು ಸೇರಿ ಇದೀಗ ಸರ್ಕಾರ ರಚಿಸುತ್ತಿವೆ. ಇದರರ್ಥ ಪಕ್ಷಗಳ ನಡುವಿನ ಅತಿರೇಕದ ದ್ವೇಷಗಳು ಮೇಲ್ಮಟ್ಟದ ಜನಪ್ರತಿನಿಧಿಗಳಲ್ಲಿರುವುದಿಲ್ಲ. ಮೇಲಿನ ಹಂತದಲ್ಲಿ ಎಲ್ಲರೂ ಸ್ನೇಹಿತರೇ. ಆದರೆ ಇದನ್ನೇ ಅವರು ಕೆಳಹಂತದವರಿಗೆ ಹೇಳಿಕೊಡುವುದಿಲ್ಲ, ಎಷ್ಟೆಂದರೂ ಇದು ರಾಜಕಾರಣ ನೋಡಿ.

ಒಂದು ಸರ್ಕಾರ ರಚನೆಯಾದಾಗ ಪ್ರತಿಪಕ್ಷಗಳನ್ನು ‘ವಿರೋಧ ಪಕ್ಷ’ ಎಂದು ಕರೆಯುವುದರೊಂದಿಗೆ ಕದನ ಆರಂಭವಾಗುತ್ತದೆ. ಸರ್ಕಾರವನ್ನು ರಚಿಸಿದ ಪಕ್ಷ ಆಡಳಿತ ಪಕ್ಷ ಎಂದಾದಾಗ ಪ್ರತಿಪಕ್ಷಗಳೂ ಸಹ ಆಡಳಿತ ಪಕ್ಷದಷ್ಟೇ ಮಹತ್ತರವಾದ ಜವಾಬ್ದಾರಿ ಹೊಂದಿರುತ್ತವೆ. ಜನರ ಸಮಸ್ಯೆಗಳನ್ನು ಆಡಳಿತ ಪಕ್ಷದ ಗಮನಕ್ಕೆ ತಂದು, ಚರ್ಚಿಸಿ, ತಪ್ಪುಒಪ್ಪುಗಳನ್ನು ವಿಶ್ಲೇಷಿಸಿ ಸರ್ಕಾರ ಸರಿಯಾದ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವಲ್ಲಿ ಪ್ರತಿಪಕ್ಷಗಳ ಜವಾಬ್ದಾರಿ ದೊಡ್ಡದು. ಆದರೆ ಈ ‘ವಿರೋಧ ಪಕ್ಷ’ ಎಂದು ಕರೆಸಿಕೊಳ್ಳುತ್ತಿರುವ ಪ್ರತಿಪಕ್ಷಗಳು ಬರಿ ವಿರೋಧವನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿರುವುದಕ್ಕೆ ಏನನ್ನೋಣ? ಅಲ್ಲಿಂದ ಶುರುವಾದ ವಿರೋಧ ಪಕ್ಷ ಪಕ್ಷಗಳ ನಡುವಿನ ಜಗಳಕ್ಕೆ ಕಾರಣವಾಗುತ್ತದೆ. ಅದರ ಗರಿಷ್ಟ ಮಟ್ಟವನ್ನು ಕೆಳಹಂತದ ರಾಜಕಾರಣದಲ್ಲಿ ಕಾಣಬಹುದು. ಅದರ ಪರಿಣಾಮವೇ ಕಾರ್ಯಕರ್ತರ ಕೊಲೆ, ಹೊಡೆದಾಟ ಮೊದಲಾದವು.

ಪಕ್ಷ ನಿಷ್ಠೆ ಇರಲಿ, ತಪ್ಪೇನಲ್ಲ. ಆದರೆ ಅದಕ್ಕಿಂತಲೂ ಪ್ರಮುಖವಾದದ್ದು ಮನುಷ್ಯತ್ವ, ನಮ್ಮ ನಡುವಿನ ಸಂಬಂಧ. ದಿನ ಬೆಳಗಾದರೆ ನಾವು ಒಡನಾಡುವುದು ನಮ್ಮ ಸುತ್ತಮುತ್ತಲಿನವರೊಡನೆ. ನಮ್ಮ ಕಷ್ಟ-ನಷ್ಟಗಳಿಗಾಗುವವರು ಅವರೇ ಹೊರತು, ನಾವು ನಂಬಿ ನಡೆಯುವ ಪಕ್ಷಗಳಲ್ಲ. ನಮ್ಮ ರಾಜಕಾರಣ ನಮ್ಮ ನಡುವೆ ಅಂತರ ತರುವಂತಿರಬಾರದು. ನಾವು ನಂಬಿದ ಸಿದ್ಧಾಂತ ಆಡಳಿತಕ್ಕೆ ಬಂದರೆ ಒಳ್ಳೆಯದೇ, ಆದರೆ ಅದು ಬರಲಿಲ್ಲವೆಂದು ಬಂದವರನ್ನು ದ್ವೇಷಿಸುವುದು ಸರಿಯಲ್ಲ. ರಾಜಕಾರಣ ಮೌಲ್ಯಯುತವಾಗಿರಲಿ, ನೈತಿಕವಾಗಿರಲಿ. ಒಂದು ಪ್ರಬುದ್ಧ ಸಮಾಜ ರೂಪುಗೊಳ್ಳಲು ಇಂತಹ ಮನಃಸ್ಥಿತಿ ಅತ್ಯವಶ್ಯಕ. ರಾಜಕಾರಣ ನಮ್ಮ ನಡುವೆ ಸ್ನೇಹ ಮೂಡಿಸಲಿ, ಸೌಹಾರ್ದತೆ ಬೆಸೆಯಲಿ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಾಗಲಿ. ಅದಕ್ಕೇ ತಿಳಿದವರು ಹೇಳುವುದು, ರಾಜಕಾರಣ ಮನೆಯಂಗಳದಲ್ಲಿರಲಿ, ಮನದಂಗಳದಲ್ಲಲ್ಲ.

ಬರಹಗಾರ ಕಿರಣ್ ಭೈರುಂಬೆ ಇವರ ಊರು ಶಿರಸಿ ಬಳಿ ಭೈರುಂಬೆ. ಓದಿದ್ದು ತಾಂತ್ರಿಕ ಶಿಕ್ಷಣ. ವೃತ್ತಿಯಲ್ಲಿ ಪತ್ರಕರ್ತ. ಈ ಹಿಂದೆ ಟಿವಿಚಾನೆಲ್ ಗಳಾದ ಜನಶ್ರೀ, ಸುವರ್ಣ, ರಾಜ್ ನ್ಯೂಸ್, ರಾಜ್ ಮ್ಯೂಸಿಕ್ ನಲ್ಲಿ ಕೆಲಸ ಮಾಡಿದ ಅನುಭವ. ಆನಂತರ ಬಾಲ್ಕನಿ.ಕಾಂ ಚೀಫ್ ಎಡಿಟರ್ ಆಗಿ ಹಾಗೂ ಲೈಫ್ 360 ಮ್ಯಾಗಜೀನ್ ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಇವರು. ಪ್ರಸ್ತುತ ಶಿರಸಿ ಯಲ್ಲಿ ವಿದ್ಯುತ್ ಗುತ್ತಿದಾರರಾಗಿ ಕಾಯಕದಲ್ಲಿ ತೊಡಗಿದ್ದಾರೆ. ಮೊಬೈಲ್: 9482133340 ಇಮೇಲ್ : kiranbhat23@gmail.com

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ

Published

on

ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.

ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.

ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ

ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.

ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.

ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.

1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.

ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.

ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’

ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.

ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.

ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.

ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.

ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.

ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.

ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.

ಭವಿಷ್ಯದ ರಾಜಕೀಯ ಪಾತ್ರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.

ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.

ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.

ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ

ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.

ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ

ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.

ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ

ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.

ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ

ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.

ಭವಿಷ್ಯದ ಆಶಯ

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಅಂಕಣ1 hour ago

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ...

ದಿನದ ಸುದ್ದಿ1 day ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ3 days ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

ದಿನದ ಸುದ್ದಿ5 days ago

ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ 

ಸುದ್ದಿದಿನ,ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ...

ದಿನದ ಸುದ್ದಿ5 days ago

ಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ

ಸುದ್ದಿದಿನ,ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ...

ಅಂಕಣ1 week ago

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ....

ದಿನದ ಸುದ್ದಿ1 week ago

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ

ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ...

ದಿನದ ಸುದ್ದಿ1 week ago

ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ

ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ...

ದಿನದ ಸುದ್ದಿ2 weeks ago

ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ ....

ದಿನದ ಸುದ್ದಿ2 weeks ago

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ...

Trending