Connect with us

ಭಾವ ಭೈರಾಗಿ

ಸ್ಮರಣೆ | ‘ವೈಣಿಕ‌ ಶಿಖಾಮಣಿ’ ವೀಣೆ ಶೇಷಣ್ಣ

Published

on

ವಿದ್ಯೆ ಸಾಧಕನ ಸೊತ್ತೆ, ಹೊರತು ಸೋಮಾರಿಗಳ ಸ್ವತ್ತಲ್ಲ. ಎಂಬ ದಿವ್ಯ ವಾಣಿಯ ಮೂಲಕ ಸಾಮಾನ್ಯರೂ ಕೂಡಾ ನಿರಂತರವಾದ ಅಭ್ಯಾಸದಿಂದ ಏನಾದರೂ ಸಾಧಿಸಬಹುದು ಎಂಬುದನ್ನು ಸಾರಿದವರು ನಮ್ಮ ವೀಣೆ ಶೇಷಣ್ಣನವರು.

‘ವೀಣೆ’, ಇದರ ಇನ್ನೊಂದು ಅನ್ವರ್ಥನಾಮವೇ ಶೇಷಣ್ಣನವರು. ಮೈಸೂರು ಬಾನಿಯ ಪ್ರಮುಖ ಪ್ರವರ್ತಕರಾದ ಶೇಷಣ್ಣನವರು ಆದಪ್ಪಯ್ಯನವರ ವಂಶದ ಇಪ್ಪತ್ತನಾಲ್ಕನೇ ತಲೆ. ಇವರ ತಂದೆ ಭಕ್ಷಿ ಚಿಕ್ಕರಾಮಪ್ಪನವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರು. 1852ರಲ್ಲಿ ಜನಿಸಿದ ಶೇಷಣ್ಣನವರು ಏಳು ವರ್ಷದ ಹುಡುಗನಾಗಿದ್ದಾಗಲೇ ಆಸ್ಥಾನದಲ್ಲಿ ಹಾಡಿ ಮಹಾರಾಜರಿಂದ ಕಂಠೀಹಾರವನ್ನು ಪಡೆದ ಬಾಲಪ್ರತಿಭೆ. ಎಳೆಯವಯಸ್ಸಿನಿಂದಲೇ ತಂದೆಯವರಿಂದ ಶಿಕ್ಷಣ ಪಡೆದರೂ ಬಾಲ್ಯದಲ್ಲೇ ತೀರ್ಥರೂಪುರವನ್ನು ಕಳೆದುಕೊಂಡಿದ್ದರಿಂದ ದೊಡ್ಡ ಶೇಷಣ್ಣನವರಲ್ಲಿ ವೀಣಾಭ್ಯಾಸ ಮುಂದುವರಿಸಿದರು. ಪ್ರತಿದಿನ ನಾಲ್ಕಾರು ಪಲ್ಲವಿಗಳು, ವಿವಿಧ ಬಗೆಯ ತಾನಗಳನ್ನು ಎಂಟು ಗಂಟೆಗಳ ಕಾಲ ಸಾಧನೆ ಮಾಡುತ್ತಿದ್ದ ಶೇಷಣ್ಣನವರ ಶ್ರದ್ಧೆ, ಏಕಾಗ್ರತೆ ಹಾಗೂ ತಲ್ಲೀನತೆಗಳು ಅಪೂರ್ವವಾದುವು. ಅವರ ಸಾಧನೆಗೆ ಅಕ್ಕ ವೆಂಕಮ್ಮನವರೇ ಪ್ರೇರಕ ಶಕ್ತಿ. ಸಾಧನೆ-ಕೇಳ್ಮೆ ಹಾಗೂ ಪ್ರತಿಭೆಗಳಿಂದ ಶೇಷಣ್ಣನವರು ವೀಣೆಯ ಮೇಲೆ ಅಸಾಧ್ಯ ಪ್ರಭುತ್ವ, ಮಧುರ ನಾದ ಹಾಗೂ ಎಣೆ ಇಲ್ಲದ ಮನೋಧರ್ಮ ಗಳಿಸಿಕೊಂಡರು. ಜೊತೆಗೆ ಮೈಸೂರು ಸದಾಶಿವರಾಯರಲ್ಲಿ ಗಾಯನದ ಅಭ್ಯಾಸವನ್ನೂ ಮುಂದುವರೆಸಿದರು. ರಾಯರು ತ್ಯಾಗರಾಜರ ಪ್ರಶಿಷ್ಯರು. ಹೀಗಾಗಿ, ಶೇಷಣ್ಣನವರು ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರುತ್ತಾರೆ. ಗಾಯನ ಹಾಗೂ ವೀಣಾಭ್ಯಾಸ ಎರಡರಲ್ಲೂ ವೀಣೆ ಸುಬ್ಬಣ್ಣನವರು ಶೇಷಣ್ಣನವರ ಸಹಪಾಠಿಗಳು.

ಶೇಷಣ್ಣನವರು ಪ್ರವರ್ಧಮಾನಕ್ಕೆ ಬರುವ ಕಾಲದಲ್ಲಿ ಮೈಸೂರನ್ನು ಚಾಮರಾಜ ಒಡೆಯರು ಆಳುತ್ತಿದ್ದರು. ಅವರು ಶೇಷಣ್ಣನವರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿದರು. ಪ್ರಭು ಚಾಮರಾಜ ಒಡೆಯರ ಪಿಟೀಲು, ಸುಬ್ಬಣ್ಣನವರ ಗಾಯನ ಹಾಗೂ ಶೇಷಣ್ಣನವರ ವೀಣೆ ಒಂದು ಅಪರೂಪ ಮೇಳ. ಪ್ರಭು ಆಸ್ಥಾನಿಕರ ಸಂಬಂಧವನ್ನು ಮೀರಿದ ಸ್ನೇಹ, ಆತ್ಮೀಯತೆಗಳು ಮಹಾರಾಜರು ಮತ್ತು ಶೇಷಣ್ಣನವರಲ್ಲಿ ಬೆಳೆಯಿತು.

ಕನ್ಯಾಕುಮಾರಿಯಿಂದ ದೆಹಲಿಯವರೆಗೆ ವಿವಿಧ ಪ್ರಾಂತ್ಯ, ಅರಮನೆ, ಉತ್ಸವಗಳಲ್ಲಿ ಶೇಷಣ್ಣನವರ ವಿನಿಕೆ ನಡೆಯುತ್ತಿದ್ದವು. ಅವರ ಕಚೇರಿಯನ್ನು ಏರ್ಪಡಿಸುವುದು ಪ್ರತಿಷ್ಠೆ-ಗೌರವದ ಸಂಕೇತವಾಗಿತ್ತು. ರಾಮನಾಥಪುರಂ, ಅಂದಿನ ಪರಿಚಿತ ಸಂಸ್ಥಾನವಲ್ಲದೆ, ಒಂದು ಪ್ರಮುಖ ಸಂಗೀತ ಕೇಂದ್ರವೂ ಆಗಿತ್ತು. ಸ್ವತಃ ಮಹಾರಾಜರೇ ಸಂಗೀತಗಾರರಾಗಿದ್ದುದರಿಂದ ಸಂಗೀತ ಕಲೆಗೆ ವ್ಯಾಪಕ ಪ್ರೋತ್ಸಾಹ ಕೊಡುತ್ತಿದ್ದರು. ಅಂದಿನ ಮಹಾರಾಜ ಭಾಸ್ಕರ ಸೇತುಪತಿ ಅವರು ನವರಾತ್ರಿಯ ವಿಶೇಷ ದರ್ಬಾರಿನಲ್ಲಿ ಒಮ್ಮೆ ಶೇಷಣ್ಣನವರ ಕಚೇರಿಯನ್ನುಏರ್ಪಡಿಸಿದರು. ಶೇಷಣ್ಣನವರ ವಿನಿಕೆಗೆ ರಾಜರ ಹೃದಯ ಮಿಡಿಯಿತು. ಮರುದಿನವೂ ಅವರದೇ ವೀಣಾ ಕಚೇರಿ ಏರ್ಪಾಡಾಯಿತು. ಅಂದೂ ವೀಣೆಯ ದಿವ್ಯಾನುಭವದ, ಅಮೃತದ ಸವಿ. ಹೀಗೇ ನವರಾತ್ರಿಯ ಒಂಬತ್ತು ದಿನಗಳೂ ಶೇಷಣ್ಣನವರದೇ ವೀಣಾ ಕಚೇರಿ. ಅರಮನೆಯಲ್ಲೆಲ್ಲಾ ವೀಣಾ ಝೇಂಕಾರ. ಶೇಷಣ್ಣನವರಿಗೆ ಮಹಾರಾಜರು ಕನಕಾಭಿಷೇಕ ಮಾಡಿ ಆನೆಯ ಮೇಲೆ ಕೂಡಿಸಿ ಅಂಬಾರಿಯಲ್ಲಿ ಮೆರವಣಿಗೆ ಮಾಡಿಸಿದರು. ಅಲ್ಲಿಂದ ಮುಂದೆ ಶೇಷಣ್ಣನವರ ಕಚೇರಿ ರಾಮನಾಥಪುರಂ ಆಸ್ಥಾನದಲ್ಲಿ ಪ್ರತಿವರ್ಷವೂ ನಡೆಯತೊಡಗಿತು.

ಉತ್ತರ ಭಾರತದ ಬರೋಡಾ ಸಂಸ್ಥಾನವು ಸಂಗೀತ ಪ್ರೋತ್ಸಾಹಕ್ಕೂ ಸಂಗೀತಗಾರರ ಪೋಷಣೆಗೂ ಪ್ರಸಿದ್ಧವಾದುದು. ಮೈಸೂರು ಮತ್ತು ಬರೋಡಾ ಅರಮನೆಗಳ ಆಸ್ಥಾನಿಕರಲ್ಲಿ ಪರಸ್ಪರ ಮೈತ್ರಿ, ವಿನಿಮಯ, ಸನ್ಮಾನಗಳು ನಡೆಯುತ್ತಿದ್ದವು. ಶೇಷಣ್ಣನವರ ಖ್ಯಾತಿಯನ್ನು ಕೇಳಿದ ಬರೋಡ ಮಹಾರಾಜ ಸಯ್ಯಾಜೀರಾವ್‌ ಗಾಯಕವಾಡರು ‘ವೈಣಿಕ ಶಿಖಾಮಣಿ’ಯನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದರು. ಏರ್ಪಾಡಾಗಿದ್ದ ಒಂದು ದಿನದ ಬದಲು ಮೂರು ದಿನ ಕಚೇರಿ ನಡೆಯಿತು. ಸರಸ್ವತಿಯೇ ಪುರುಷರೂಪದಲ್ಲಿ ಬಂದು ನುಡಿಸುತ್ತಿದ್ದಂತೆ ಭಾಸವಾಯಿತು. ಈ ಅಪೂರ್ವ ಅನುಭವದಿಂದ ಮಹಾರಾಜರು ಪ್ರೇರಿತರಾಗಿ ಮಹಾರಾಣಿಯವರು ಸ್ವತಃ ಉಪಯೋಗುಸುತ್ತಿದ್ದ, ಸುಂದರವಾದ ಮೇನಾವನ್ನು ಶೇಷಣ್ಣನವರಿಗೆ ನೀಡಿದರು. ಈ ಸುದ್ದಿ ಕ್ಷಿಪ್ರದಲ್ಲೇ ಮೈಸೂರು ಮುಟ್ಟಿತು. ತಮ್ಮ ಆಸ್ಥಾನಿಕರಿಗೆ ಬೇರೊಂದು ಸಂಸ್ಥಾನದಲ್ಲಿ ದೊರೆತ ಈ ಸನ್ಮಾನದಿಂದ ಮಹಾರಾಜರಿಗೆ ಸಂತೋಷ ಹೆಮ್ಮೆ ಆದುದು ಸಹಜವೇ. ದೊರೆಗಳ ಅಪ್ಪಣೆಯಂತೆ ಶೇಷಣ್ಣನವರನ್ನು ಆ ಮೇನೆಯಲ್ಲಿ ಕುಳ್ಳಿರಿಸಿ ಅರಮನೆಯ ಧ್ವಜಪತಾಕೆ, ರಾಜಲಾಂಛನ, ಜೋಡಿಸುತ್ತು ದಿಂಡುಹಾರಗಳ ಮರ್ಯಾದೆ ಸಹಿತ ಮೆರವಣಿಗೆ ಮಾಡಲು ಸಿದ್ಧತೆಗಳಾದವು. ಆದರೆ, ‘ಈ ಗೌರವವೆಲ್ಲಾ ಸರಸ್ವತಿಗೆ ಸಲ್ಲಬೇಕು, ತಮಗೆ ಅಲ್ಲ’ ಎಂದು ಭಾವಿಸಿದ ಶೇಷಣ್ಣನವರು ವೀಣೆಯನ್ನು ಪಲ್ಲಕ್ಕಿಯಲ್ಲಿಟ್ಟು ವಾಗ್ದೇವಿಗೆ ನಮಿಸಿದರು. ಮೇನಾದ ಮುಂದೆ ಬರಿಗಾಲಿನಲ್ಲಿ ಕೈಜೋಡಿಸಿ ನಡೆದರು. ಹೀಗೆ ಶೇಷಣ್ಣನವರು ‘ವೈಣಿಕ ಶಿಖಾಮಣಿ’ ಮಾತ್ರವಲ್ಲ “ಗುಣಶಿಖಾಮಣಿ”ಯೂ ಆಗಿ ಬೆಳಗಿದವರು.

ಶೇಷಣ್ಣನವರ ವೀಣಾವಾದನ ಕಚೇರಿಗಳು ಸಾಮಾನ್ಯವಾಗಿ ನಾಲ್ಕು ಗಂಟೆಗಳ ಅವಧಿಯವು. ಕೃತಿಗಳು ಕಡಿಮೆ. ಪ್ರಧಾನವಾಗಿ ರಾಗ, ಮಧ್ಯಮಕಾಲ ಮತ್ತು ಪಲ್ಲವಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ಒಂದೇ ರಾಗವನ್ನು ಹತ್ತು ಸಲ ನುಡಿಸಿದರೂ ಪ್ರತಿಭಾರಿ ಆ ರಾಗಕ್ಕೆ ಹೊಸಬಣ್ಣ, ಹೊಸಾಕಾರ, ಹೊಸರುಚಿ. ಹೀಗಾಗಿ ರಾಗದ ಶಕ್ತಿಗಳನ್ನು ಅರಿತು ಹಂತಹಂತವಾಗಿ ರಾಗಪುಷ್ಪವನ್ನು ಅರಳಿಸಿ, ಸಂಗೀತದ ಕಂಪನ್ನು ಬೀರುತ್ತಿದ್ದರು. ಕಚೇರಿಯ ಕೊನೆಯಲ್ಲಿ ಜಾವಳಿ, ತಿಲ್ಲಾನಗಳ ಮೇಲೋಗರ. ಕರ್ಕಶತೆಗಳಿಲ್ಲದ ಮೃದುವಾದ ಮೀಟು. ನಾದ ಭಾವಕ್ಕೆ ಗಮನ ಕೊಡುತ್ತಿದ್ದರೇ ಹೊರತು ವಾದ್ಯ ತಂತ್ರಕ್ಕೆ ಅಲ್ಲ. ವೀಣೆಯು ಶೇಷಣ್ಣನವರಿಗೆ ಕೇವಲ ಒಂದು ವಾದ್ಯವಾಗಿರದೆ ಒಂದು ಉಪಾಸನೆಯಾಗಿತ್ತು. ‘ನಮ್ಮ ಶಕ್ತಿಗೆ ಒಳಪಟ್ಟು ನುಡಿಸುತ್ತೇವೆಯೇ ಹೊರತು ವೀಣೆಯ ಸಾಮರ್ಥ್ಯಕ್ಕೆ ತಕ್ಕಂತೆ ನುಡಿಸಲು ಸಾಧ್ಯವೇ?’ ಎಂಬ ಶೇಷಣ್ಣನವರ ಮಾತು ಕೇವಲ ಸೌಜನ್ಯದ್ದಲ್ಲ ಗಾಢ ಚಿಂತನೆಗೂ ಅರ್ಹವಾದ ಅಭಿಪ್ರಾಯ. ಯಾರು ಹೋಗಿ ಕೇಳಿದರೂ ವೀಣೆ ನುಡಿಸುತ್ತಿದ್ದ ಅವರ ಸ್ವಭಾವ ಆದರ್ಶಪ್ರಾಯವಾದುದು. ತಮ್ಮ ಕೊನೆಯ ದಿನಗಳಲ್ಲಿ ವೀಣೆ ನುಡಿಸಲು ಅಶಕ್ತರಾದಾಗ ‘ಸಾಯಲು ನನಗೆ ಅಂಜಿಕೆ ಇಲ್ಲ; ಆದರೆ, ವೀಣೆಯನ್ನು ಬಿಟ್ಟುಹೋಗಲು ನೋವಾಗುತ್ತದೆ’ ಎನ್ನುತ್ತಿದ್ದರು.

ಶೇಷಣ್ಣನವರು ಇಪ್ಪತ್ತನೆಯ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ತಿರುಪತಿ ಶ್ರೀನಿವಾಸ, ಸರಸ್ವತೀ, ಲಕ್ಷ್ಮೀ, ಚಾಮುಂಡೇಶ್ವರಿ ಮುಂತಾದ ದೇವರುಗಳ ಮೇಲೆ ಶೇಷಣ್ಣನವರು ಕನ್ನಡ ಪದಗಳನ್ನು ರಚಿಸಿದ್ದಾರೆ. ಶೇಷ, ಶೇಷದಾಸ ಎಂಬ ಅಂಕಿತದಲ್ಲಿ ಬಹುತೇಕ ರಚನೆಗಳಿದ್ದರೂ ತಿಲ್ಲಾನಗಳನ್ನು ತಮ್ಮ ಪ್ರಭುಗಳ ಮೇಲೆ (ಚಾಮರಾಜ ಒಡೆಯರು ಮತ್ತು ಕೃಷ್ಣರಾಜ ಒಡೆಯರ) ನಾಮಾಂಕಿತ ಮಾಡಿದ್ದಾರೆ. ಹಿಂದುಸ್ತಾನಿ ಶೈಲಿಯಲ್ಲಿ ಒಂದು ಜಾವಡಿಯೂ ಉಂಟು. ಶೇಷಣ್ಣನವರ ಮನೋಧರ್ಮದ ಒಂದು ಝಳಕನ್ನು ಅವರ ಕೃತಿಗಳಲ್ಲಿ ಕಾಣಬಹುದು. ವಿಶೇಷವಾಗಿ ದಾಟುಸ್ವರ ಪ್ರಯೋಗಗಳು ಆಕರ್ಷಕವಾಗಿವೆ.

ಶೇಷಣ್ಣನವರು ಒಂದು ದೊಡ್ಡ ಶಿಷ್ಯವರ್ಗವನ್ನೇ ತರಬೇತುಗೊಳಿಸಿ ಮೈಸೂರು ವೀಣಾ ಪರಂಪರೆ ಅವ್ಯಾಹತವಾಗಿ ಮುಂದುವರಿಯುವಂತೆ ಮಾಡಿದ್ದಾರೆ. ಅವರಲ್ಲಿ ಪ್ರಮುಖರು ವೆಂಕಟಗಿರಿಯಪ್ಪ, ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರೀ, ಭೈರವಿ ಲಕ್ಷ್ಮೀನಾರಾಯಣಪ್ಪ, ಚಿತ್ರಶಿಲ್ಪಿ ವೆಂಕಟಪ್ಪ, ವಿ. ನಾರಾಯಣ ಅಯ್ಯರ್‌, ತಿರುಮಲೆ ರಾಜಮ್ಮ, ಎಂ.ಎಸ್‌. ಭೀಮರಾವ್‌ ಹಾಗೂ ಶೇಷಣ್ಣನವರ ಅಣ್ಣನ ಮೊಮ್ಮಗ ಎ.ಎಸ್‌. ಚಂದ್ರಶೇಖರಯ್ಯ ಮತ್ತು ಮೊಮ್ಮಗ ವಿ.ಎನ್‌. ರಾವ್‌(ಸ್ವರಮೂರ್ತಿ). ಸುಬ್ಬಣ್ಣನವರೂ ಅವರಲ್ಲಿ ಕೆಲಕಾಲ ಕಲಿತದ್ದಲ್ಲದೆ, ಬಿಡಾರಂ ಕೃಷ್ಣಪ್ಪನವರೂ ಶಿಷ್ಯರಾಗಿಯೇ ವರ್ತಿಸಿದರು. ಮೈಸೂರು ಪ್ರಾಂತ್ಯದ ಬಹುಮಂದಿ ಕಲಾವಿದರು ಈ ತ್ರಿಮೂರ್ತಿಗಳಾದ ಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪನವರ ಪರಂಪರೆಗೆ ಸೇರಿದವರೇ. ಹೀಗಾಗಿ ರಾಜ್ಯದ ಮುಂದಿನ ಬಹುತೇಕ ಹಿರಿಯ ವೈಣಿಕರುಗಳು ಶೇಷಣ್ಣನವರ ಶಿಷ್ಯ ಪರಂಪರೆಗೆ ಸೇರುತ್ತಾರೆ.

ಬರೋಡಾ ಆಸ್ಥಾನದಿಂದ ಮೌಲಾಭಕ್ಷ್‌ಎಂಬ ವಿದ್ವಾಂಸರು ಚಾಮರಾಜ ಒಡೆಯರ ಆಸ್ಥಾನಕ್ಕೆ ಆಗಮಿಸಿದರು. ಅವರ ಜಲತರಂಗ್‌ವಾದನ (ಹಿಂದುಸ್ತಾನಿ) ಅರಮನೆಯಲ್ಲಿ ನಡೆಯಿತು. ಆ ವಾದ್ಯದ ಕಿಣ ಕಿಣ ನಾದಕ್ಕೆ ಮಹಾರಾಜರು ಆಕರ್ಷಿತರಾದರು. ಇದರಿಂದ ಪ್ರೇರಿತರಾಗಿ ಶೇಷಣ್ಣನವರು ಆ ವಾದ್ಯವನ್ನು ಅತಿ ಕ್ಷಿಪ್ರದಲ್ಲೇ ಕರಗತ ಮಾಡಿಕೊಂಡರು. ಅಲ್ಲಿಂದ ಮುಂದೆ ವೀಣೆಯ ಜೊತೆ ಶೇಷಣ್ಣನವರ ಜಲತರಂಗ್‌ ಕಚೇರಿಗಳು ಸಹಾ ಎಲ್ಲ ಕಡೆ ನಡೆಯತೊಡಗಿದವು. ಕರ್ನಾಟಕ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಜಲತರಂಗ ವಾದ್ಯಕ್ಕೆ ಒಂದು ಗೌರವಾನ್ವಿತ ಸ್ಥಾನ ತಂದುಕೊಟ್ಟವರು ಶೇಷಣ್ಣನವರೇ. ಇದಲ್ಲದೆ ಶೇಷಣ್ಣನವರು, ಪಿಟೀಲು, ಸ್ವರಬತ್‌, ಪಿಯಾನೋ ಮುಂತಾದ ವಾದ್ಯಗಳಲ್ಲೂ ಪ್ರಾವೀಣ್ಯತೆ ಪಡೆದಿದ್ದರು.

ಸುಪ್ರಸಿದ್ಧ ಥಿಯೊಸೊಫಿಸ್ಟರಾದ ಡಾ. ಕಸಿನ್ಸ್‌, ಎ.ಎಚ್‌. ಫಾಕ್ಸ್‌ ಸ್ಟ್ರಾಂಗ್ವೇಸ್‌, ಸರ್ ಈವಾನ್‌ ಮೆಕಾಂಜೆ ಮುಂತಾದವರು ಶೇಷಣ್ಣನವರ ವಿನಿಕೆ ತಮ್ಮ ಮೇಲೆ ಮಾಡಿದ ಪ್ರಭಾವವನ್ನು ದಾಖಲೆಗೊಳಿಸಿದ್ದಾರೆ. ‘ದಿ ಮ್ಯೂಸಿಕ್‌ ಆಫ್‌ ಒರಿಯೆಂಟ್‌ ಅಂಡ್‌ ಆಕ್ಸಿಡೆಂಟ್‌’ ಗ್ರಂಥದಲ್ಲಿ ಮಾರ್ಗರೇಟ್‌ ಕಸಿನ್ಸ್‌ರವರು ಶೇಷಣ್ಣನವರನ್ನು ‘ದಿ ಕಿಂಗ್ ಆಫ್ ವೀಣಾ ಪ್ಲೇಯರ್ಸ್’ ಎಂದು ಕರೆದಿದ್ದಾರೆ. ‘ಮ್ಯೂಸಿಕ್‌ ಆಫ್‌ ಹಿಂದೂಸ್ತಾನ್‌’ ಗ್ರಂಥದಲ್ಲಿ ಶೇಷಣ್ಣನವರ ಅಸಾಧ್ಯ ಪ್ರತಿಭೆ, ಎಣೆ ಇಲ್ಲದ ಮನೋಧರ್ಮಗಳನ್ನು ಕೊಂಡಾಡಿದ್ದಾರೆ. ದೇವುಡು, ಡಾ. ಡಿ.ವಿ. ಗುಂಡಪ್ಪ, ಡಾ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ, ಡಾ. ವಿ.ಸೀತಾರಾಮಯ್ಯ, ತಿರುಮಲೆ ರಾಜಮ್ಮ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪ್ರೊ.ಎ.ಎನ್‌. ಮೂರ್ತಿರಾವ್‌, ಸ್ವರಮೂರ್ತಿ ವಿ. ಎನ್‌. ರಾವ್‌ ಮುಂತಾದವರುಗಳು ಶೇಷಣ್ಣನವರ ಜೀವನ ಸಾಧನೆಗಳನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಶೇಷಣ್ಣನವರ ಎಲ್ಲ ರಚನೆಗಳನ್ನು ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾದವರು ಪ್ರಕಟಿಸಿದ್ದಾರೆ, ಅಲ್ಲದೆ, ಭವನುತ, ಶ್ರೀ ರಘುವರ, ರಘುನಾಯಕ ಮುಂತಾದ ಕೆಲ ಕೀರ್ತನೆಗಳಿಗೆ ಚಿಟ್ಟೇ ಸ್ವರವನ್ನೂ ಹೆಣೆದಿದ್ದಾರೆ. ಬ್ರಿಟಿಷ್‌ ಚಕ್ರವರ್ತಿ ಐದನೇ ಜಾರ್ಜ್‌ರವರು ದೆಹಲಿಯಲ್ಲಿ ಒಂದು ರಾಜಸಭೆ ನಡೆಸಿದರು. ಅಲ್ಲಿ ಸಂಗೀತ ಕಚೇರಿ ಮಾಡಿದ ದಕ್ಷಿಣ ಭಾರತದ ಏಕೈಕ ಕಲಾವಿದರು ಶೇಷಣ್ಣನವರು! ಅವರ ವಿನಿಕೆ ಪಾಶ್ಚಾತ್ಯ ದೊರೆಯ ಮೇಲೆ ಗಾಢ ಪ್ರಭಾವವನ್ನು ಬೀರಿತು. ಆ ನಾದ ಸವಿಯನ್ನು ಸದಾ ಹಸಿರಾಗಿ ಇಟ್ಟುಕೊಳ್ಳಲು ಶೇಷಣ್ಣನವರ ಒಂದು ಭಾವಚಿತ್ರವನ್ನು ಜಾರ್ಜ್ ದೊರೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಅಲಂಕರಿಸಿದರು.

1924ರಲ್ಲಿ ಬೆಳಗಾಂನಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯಿತು. ಮಹಾತ್ಮಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವಿದು. ಆ ಸಂದರ್ಭದಲ್ಲಿ ವೀಣೆ ಶೇಷಣ್ಣನವರ ಸಂಗೀತವನ್ನು ತಲ್ಲೀನರಾಗಿ ಸವಿದ ಮಾಹಾತ್ಮರು ‘ಇದು ದೇವಗಾನ! ಇದನ್ನು ಕೇಳಿದ ನಾವೇ ಧನ್ಯರು!’ ಎಂದು ಉದ್ಗರಿಸಿದರು.

ತಂಜಾವೂರಿನ ಕೃಷ್ಣಸ್ವಾಮಿನಾಯಕರ ಮನೆಯಲ್ಲಿ ಒಂದು ಸಂಗೀತ ಗೋಷ್ಠಿ. ಕರ್ನಾಟಕ ಸಂಗೀತದ ಪ್ರಸಿದ್ಧ ವಿದ್ವಾಂಸರುಗಳಾದ ಮಹಾ ವೈದ್ಯನಾಥ ಅಯ್ಯರ್‌, ಶರಭ ಶಾಸ್ತ್ರಿ, ತಿರುಕ್ಕೋಡಿ ಕಾವಲ್‌ಕೃಷ್ಣಯ್ಯರ್‌, ವೀಣೆ ಶೇಷಣ್ಣ, ನಾರಾಯಣಸ್ವಾಮಪ್ಪ ಮುಂತಾದ ದಿಗ್ಗಜಗಳು ಸೇರಿದ್ದ ಅಪರೂಪ ಸಭೆ. ಈ ಹಿರಿಯರನ್ನು ಉದ್ದೇಶಿಸಿ ಕೃಷ್ಣಸ್ವಾಮಿ ನಾಯಕರು. “ತಾವೆಲ್ಲ ವಿದ್ವಾಂಸರುಗಳಿದ್ದೀರಿ! ತಮ್ಮಲ್ಲೇ ಶ್ರೇಷ್ಠರು ಯಾರು? ಎಂದು ತಾವುಗಳೇ ನಿರ್ಧರಿಸಬೇಕು. ತಾವುಗಳೇ ನಿರ್ಧರಿಸಿದ ಅಗ್ರರಲ್ಲಿ ಅಗ್ರಗಣ್ಯರಾದ ಕಲಾವಿದರಿಗೆ ಈ ಸೀಮೆ ಕಮಲದ ಉಂಗುರವನ್ನು ಪ್ರಧಾನ ಮಾಡಬೇಕು” ಎಂದು ಅರಿಕೆ ಮಾಡಿಕೊಂಡರು. ಕಚೇರಿ ಪ್ರಾರಂಭವಾಯಿತು. ಪೈಪೋಟಿಯಂತಿದ್ದ ವಿದ್ವತ್ಪೂರ್ಣ ಕಚೇರಿಗಳು! ಒಬ್ಬರನ್ನು ಮೀರಿಸಿದ ಪ್ರತಿಭೆ ಇನ್ನೊಬ್ಬರದು. ಪಾಂಡಿತ್ಯ, ಪ್ರತಿಭೆ, ಸೃಜನಶೀಲತೆಗಳು ಮುಪ್ಪರಿಗೊಂಡ ವಿದ್ವಾಂಸರುಗಳು!. ಅವರಲ್ಲಿ ಪ್ರಶಸ್ತಿಗೆ ಚುನಾಯಿಸುವುದು ತೀರಾ ಕಷ್ಟದ ಕೆಲಸವಾಗಿ ಕಂಡಿತು. ಆಗ, ಮಹಾವೈದ್ಯನಾಥ ಅಯ್ಯರ್‌ಅವರು ಎದ್ದುನಿಂತು. “ನಾವೆಲ್ಲಾ ಹಿರಿಯ ಕಲಾವಿದರೇ, ಪಾಂಡಿತ್ಯಪೂರ್ಣವಾಗಿ ಹಾಡಿ-ನುಡಿಸಿದ್ದೇವೆ. ಆದರೆ, ಒಬ್ಬ ವಿದ್ವಾಂಸರನ್ನು ಮಾತ್ರ ಯಾರೂ ಮೀರಿಸಲಾಗಲಿಲ್ಲ. ಆ ಅದ್ವಿತೀಯ ಕಲಾವಿದರೇ ವೀಣೆ ಶೇಷಣ್ಣನವರು! ಅವರ ನಾದ ಮಾಧುರ್ಯ, ಎಣೆ ಇಲ್ಲದ ಮನೋಧರ್ಮ, ಸುಖವಾದ ವಿನಿಕೆ. ಅದ್ಭುತವಾದುದು. ಆದ್ದರಿಂದ ಈ ಪ್ರಶಸ್ತಿ ಅವರಿಗೇ ಸಲ್ಲಬೇಕು” ಎಂದರು. ಈ ಅಭಿಪ್ರಾಯವನ್ನು ತಿರುಕ್ಕೋಡಿವಲ್‌ ಕೃಷ್ಣಯ್ಯರ್‌ ಅವರು ಅನುಮೋದಿಸಿ, ಶೇಷಣ್ಣನವರನ್ನು “ಪುರುಷ ಸರಸ್ವತಿ” ಎಂದು ಕರೆದರು. ಸಭೆ ಈ ಅಭಿಪ್ರಾಯವನ್ನು ಒಪ್ಪಿ ಅನುಮೋದಿಸಿತು. ಹೀಗೆ ಶೇಷಣ್ಣನವರು ತಮ್ಮ ಸಮಕಾಲೀನ ಕಲಾ ಪ್ರಪಂಚದಲ್ಲೇ ಗೌರವಾನ್ವಿತರಾಗಿ “ವಿದ್ವಾಂಸರ ವಿದ್ವಾಂಸರಾಗಿ” ಬೆಳಗಿದರು.

ಶೇಷಣ್ಣನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರು 1902ರಲ್ಲಿ ನೀಡಿದ ‘ವೈಣಿಕ ಶಿಖಾಮಣಿ’ ಬಿರುದು ಅನ್ವರ್ಥವಾಯಿತು. ಮಹಾರಾಜರ ಸಮ್ಮುಖದಲ್ಲಿ ಕಚೇರಿ ಮಾಡಬಯಸುವವರು ಮೊದಲು ಶೇಷಣ್ಣನವರ ಮುಂದೆ ಹಾಡಬೇಕಿತ್ತು. ಅರ್ಹರಾದ ಕಲಾವಿದರನ್ನು ಶೇಷಣ್ಣನವರು ಅರಮನೆಗೆ ಶಿಫಾರ್ಸು ಮಾಡುತ್ತಿದ್ದರು. ಕಲಾವಿದರ ಎಲ್ಲ ಒಳ್ಳೆಯ ಸಂಗತಿಗಳಿಗೆ ತಲೆದೂಗಿ ಶಹಭಾಸ್‌ಗಿರಿ ಹೇಳಿ ಪ್ರೋತ್ಸಾಹಿಸುತ್ತಿದ್ದರು. “ಸುನಾದ ನನ್ನ ಕೈನಲ್ಲಿ ಬಂದರೇನು? ಇನ್ನೊಬ್ಬರ ಕೈಯಲ್ಲಿ ಬಂದರೇನು” ಎಂಬ ಅವರ ಮಾತು ಒಬ್ಬ ನಾದೋಪಾಸಕನಿಗೆ ತಕ್ಕುದಾದುದು. 1926ರ ಜುಲೈ 25ರಂದು ಶೇಷಣ್ಣನವರು ಸರಸ್ವತಿಯ ಪಾದಾರವಿಂದವನ್ನು ಸೇರಿದರು. ಆಗ ಎ.ಆರ್‌.ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕದ ಸಂಪಾದಕೀಯದಲ್ಲಿ “ಸರಸ್ವತಿಯ ಮನೆಯಲ್ಲಿ ಕಳುವಾಯಿತು” ಎಂದು ಬರೆದುದು ಎಷ್ಟು ಅರ್ಥಪೂರ್ಣ! ಸಂಗೀತ ಕ್ಷೇತ್ರದ ಧ್ರುವತಾರೆಗಳಲ್ಲಿ ಒಬ್ಬರಾದ ಶೇಷಣ್ಣನವರು ಎಂದೂ ಪ್ರಾತಃ ಸ್ಮರಣೀಯರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಕೃಪೆ: ಮೈಸೂರು ವಿ. ಸುಬ್ರಹ್ಮಣ್ಯ ಅವರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಾದ ‘ಕಲಾ ಚೇತನ’ದಲ್ಲಿನ ಲೇಖನದ ಸಂಕ್ಷಿಪ್ತ ರೂಪ)

ಭಾವ ಭೈರಾಗಿ

ಕವಿತೆ | ಬುದ್ಧ ನಗುತ್ತಾನೆ..!

Published

on

  • ರಶ್ಮಿಪ್ರಸಾದ್ (ರಾಶಿ)

ಬೋಧಿವೃಕ್ಷದಡಿಯಲಿ ಕುಳಿತು
ಬೋಧನೆಯ ನೆಲೆಯಲಿ ನಿಂತರಷ್ಟೇ
ನಿನ್ನಂತಾಗುವೆವೆಂಬ ಮೌಢ್ಯವ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!

ಸಕಲವೈಭೋಗಗಳನೂ ತ್ಯಜಿಸಿ
ಮೋಹದಾ ಸೆಲೆಯನು ತೊರೆದರಷ್ಟೇ
ನಿನ್ನಂತಾಗುವೆವೆಂಬ ಭ್ರಮೆಯ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!

ಭೋಗ,ರಾಗದ ತತ್ವವಷ್ಟೇ ಅರಿತು
ತ್ಯಾಗ,ವಿರಾಗದ ಮಹತ್ವವನ್ನೇ ಮರೆತು
ನಿನ್ನಂತೆ ನಗುವುದಿಲ್ಲವೆಂಬ ಸತ್ಯವ ಕಂಡು
ಬುದ್ಧ ಇನ್ನೂ ಮುಗುಳ್ನಗುತ್ತಲೇ ಇದ್ದಾನೆ…
ನಿಜಕ್ಕೂ ನಮ್ಮೊಳಗೆಂದೂ ನೀನಿಲ್ಲ ಬುದ್ಧ.!

ನಿನ್ನ ಹೆಸರಷ್ಟೇ ಉಚ್ಛರಿಸುವೆವು ನಾವು
ನಿನ್ನ ತತ್ವಗಳ ಪಾಲಿಸಲೇ ಇಲ್ಲ ನಾವು
ನಿನ್ನ ಉಪದೇಶವ ಪಠಿಸಲಿಲ್ಲ ನಾವು
ನಿನ್ನ ವೇದಾಂತವೆಂದೂ ಅನುಸರಿಸಲಿಲ್ಲ ನಾವು
ನಿನ್ನಂತೆ ಎಂದಿಗೂ ಆಗಲೇ ಇಲ್ಲ ನಾವು.!

ಮತ್ತೇ ನೀನೇ ಹುಟ್ಟಿಬರಬೇಕು ಬುದ್ಧ
ನಮ್ಮೊಳಗೆ ಜ್ಞಾನೋದಯದ ಬೆಳಕು ಚೆಲ್ಲಲು
ನಮ್ಮೊಳಗೆ ಬೌದ್ಧತ್ವದ ಠಾವು ಮೂಡಲು
ನಮ್ಮೊಳಗೆ ಶಾಂತಿ ಮಂತ್ರದ ತಪನೆಯಾಗಲು
ನಮ್ಮೊಳಗೆ ನಮ್ಮನ್ನೇ ಕಂಡುಕೊಳ್ಳಲು.!

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಭಾವ ಭೈರಾಗಿ

ಕವಿತೆ | ನಿನ್ನ ಮಗನ ಕೊಂದರು…

Published

on

  • ಮೂಲ : ಬ್ರೆಕ್ಟ್, ಅನುವಾದ : ಸಿದ್ಧಲಿಂಗಯ್ಯ

ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿ ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.

ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು
ಬಿಸಿಲೇರದ ಬೆಳಗಿನಲ್ಲಿ ನಿನ್ನ ಮಗನ ಕೊಂದರು
ಬೆವರ ಬಸಿದ ಅವನ ಎದೆಗೆ ಗುರಿಯಿಟ್ಟರು
ಗುಂಡಿಕ್ಕಿದರು.

ಗುಂಡೊಂದು ಕಾಣಲಿಲ್ಲ ಕೊಲೆಗಡುಕರ ಕೆಲಸವೆಲ್ಲ
ಸತ್ತ ಮಗನ ಕಣ್ಣಿನಲ್ಲಿ ಮಿಂಚಿಮಾಯವಾಯಿತು
ಹೊರಗಿನವರು ಕೊಲ್ಲಲಿಲ್ಲ ಎಲ್ಲ ಇವನ ಬಂಧುಬಳಗ
ನೆರೆಹೊರೆಯವರು

ಸುತ್ತಿದಂಥ ಸರಪಳಿಯಲಿ ಧರಧರಧರ ಎಳೆಯುವಾಗ
ಕ್ರಾಂತಿವೀರರೆಲ್ಲ ಬಂದು ಮುತ್ತಿಕೊಂಡರು.
ಗಿಟುಕಾಸಿದ ಗಿರಣಿಗಳು ಚಿಮಣಿ ಹೊತ್ತು ನಿಂತಿದ್ದೊ
ಅವನ ಕಾಲ ಮಿಂಚಿತ್ತು ಹೊಳೆಯಿತೇನೊ ಮನಸಿಗೆ
ಶೂನ್ಯವಾದ ಗಿರಣಿಗಳಲಿ ದಿನದಿನಕ್ಕೂ ಬೆಳೆಯುವಂಥ
ಬೆಟ್ಟದಂಥ ಶಕ್ತಿಯೊಂದು ಕಂಡಿತವನ ಕಣ್ಣಿಗೆ
ತೊಟ್ಟಿಕ್ಕಿತು ಕಣ್ಣೀರು ಹೋದನವನು ಮಣ್ಣಿಗೆ

ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.”

ಸುದ್ದಿದಿನ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕತೆ | ಮತ್ತೆ ಮಳೆ

Published

on

ಹರೀಶ್ ಬೇದ್ರೆ
  • ಜಿ. ಹರೀಶ್ ಬೇದ್ರೆ

ಒಂದು ಊಟ ತಂದುಕೊಡೊಕೆ ಎರಡು ಗುಂಟೆ ಬೇಕಾ?
ಸರ್, ಜೋರಾಗಿ ಮಳೆ ಬರುತ್ತಿದೆ.,. ಹಾಗಾಗಿ…
ಅದಕ್ಕಂತ ಎಕ್ಸ್ಟ್ರಾ ದುಡ್ಡು ತೆಗೆದುಕೊಂಡಿಲ್ವಾ, ತಗೊಂಡ ಮೇಲೆ ಸರಿಯಾದ ಟೈಮಿಗೆ ಬರಬೇಕು.

ಸರಿಯಾಗಿ ಕೆಲಸ ಮಾಡೊ ಯೋಗ್ಯತೆ ಇಲ್ಲದ ಮೇಲೆ ಇಂತ ಕೆಲಸಕ್ಕೆ ಬರಬಾರದು. ಆ ಪಾರ್ಸೆಲ್ ಕೊಡು ಎಂದು ಡೆಲಿವರಿ ಬಾಯ್ ಕೊಡುವ ಮುನ್ನವೇ ಅವನ ಕೈಯಿಂದ ಪಾರ್ಸೆಲ್ ಕಿತ್ತುಕೊಂಡು, ಕೆಟ್ಟದಾಗಿ ಬೈಯುತ್ತಾ ಆ ವ್ಯಕ್ತಿ ಮನೆಯೊಳಗೆ ಹೋದ.

ಗಿರೀಶ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯಾಗಿ ಕೆಲಸಕ್ಕೆ ಸೇರಿಕೊಂಡು ಒಂದು ವರ್ಷದ ಮೇಲಾಗಿದೆ. ಎಲ್ಲೋ ಅಪರೂಪಕ್ಕೆ ಒಮ್ಮೆ ತಡವಾದಾಗ ಯಾಕಪ್ಪಾ ಲೇಟ್ ಎಂದು ಮಾಮೂಲಿಯಂತೆ ಕೇಳಿದ್ದಿದೆ. ಯಾರೂ ಇಂದಿನಂತೆ ಬೈದಿರಲಿಲ್ಲ. ಇದು ಗಿರೀಶನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತಾದರೂ . ಪಾಪ ತುಂಬಾ ಹಸಿದಿದ್ದರೇನೊ ಅದಕ್ಕೆ ಹಾಗೆ ಮಾತನಾಡಿರಬೇಕು ಹೋಗಲಿ ಬಿಡು ಎಂದುಕೊಂಡರೂ ಮನಸ್ಸು ಸಮಾಧಾನವಾಗಲಿಲ್ಲ.

ಶಿವಮೊಗ್ಗದಲ್ಲಿ ಆಷಾಢ ಆರಂಭವಾದ ಮೊದಲನೇ ದಿನದಿಂದಲೇ ಆರಂಭವಾದ ಮಳೆ ಹದಿನೈದು ದಿನಗಳಾದರೂ ಬಿಡದೆ ಸುರಿಯುತ್ತಿತ್ತು. ಈ ದಿನವಂತೂ ವರುಣದೇವ, ಭೂತಾಯಿಯ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸುತ್ತಿರುವ ಮನುಷ್ಯರಿಗೆ ಸರಿಯಾದ ಪಾಠ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದವನಂತೆ ರುದ್ರರೂಪ ತಾಳಿದ್ದ. ಜೋರಾದ ಮಳೆಯ ಜೊತೆಗೆ ಗುಡುಗು ಸಿಡಿಲಿನ ಆರ್ಭಟವೂ ಜಾಸ್ತಿಯಾಗಿತ್ತು. ಬರಿಯ ಮಳೆಯಾಗಿದ್ದರೆ ಗಿರೀಶನಿಗೆ ನಿಗಧಿತ ವೇಳೆಯಲ್ಲಿ ಆರ್ಡರ್ ತಲುಪಿಸಲು ಯಾವ ತೊಂದರೆಯೂ ಇರಲಿಲ್ಲ.

ಆದರೆ ವಿಚಿತ್ರ ಗುಡುಗು ಸಿಡಿಲುಗಳ ಅಬ್ಬರ ಇದ್ದಿದ್ದರಿಂದ ಎರೆಡೆರಡು ಕಡೆ ನಿಂತು ಬರಬೇಕಾಯಿತು. ಊಟದ ಆರ್ಡರ್ ಕೊಟ್ಟ ವ್ಯಕ್ತಿಯ ಮನೆಗೂ ಹೊಟೇಲಿಗೂ ಆರು ಕಿಲೋಮೀಟರ್ ಅಂತರವಿತ್ತು. ಮನೆ ಇದ್ದದ್ದು ಹೊಸ ಬಡಾವಣೆಯಲ್ಲಿ, ಅಲ್ಲಿ ಮನೆಗಳು ವಿರಳ ಹಾಗೂ ನಿಲ್ಲಲು ಎಲ್ಲೂ ಜಾಗ ಇರದ ಕಾರಣ ಒಂದು ಕಡೆ ಸ್ವಲ್ಪ ಜಾಸ್ತಿ ಹೊತ್ತೆ ನಿಂತು ಮಳೆಯ ಆರ್ಭಟ ಕಡಿಮೆಯಾಗಲಿ ಎಂದು ಕಾದಿದ್ದ. ಅದೇ ತಪ್ಪಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳುವಂತಾಯಿತು.

ಇದೇ ಯೋಚನೆಯಲ್ಲಿ ನಿಧಾನವಾಗಿ ಬೈಕ್ ಚಲಿಸುತ್ತಾ ಬರುವಾಗ ಮಳೆ ಜೋರಾಗಿ ಪಕ್ಕದಲ್ಲೇ ಸಿಡಿಲು ಬಡಿದ ಅನುಭವವಾಗಿ ಇಹಲೋಕಕ್ಕೆ ಬಂದು ಹತ್ತಿರದಲ್ಲಿ ಎಲ್ಲಾದರೂ ನಿಲ್ಲಲು ಜಾಗ ಇದೇಯೆ ಎಂದು ನೋಡುತ್ತಾ ಬರುವಾಗ ಚಿಕ್ಕದೊಂದು ಮನೆಯಲ್ಲೇ ಅಂಗಡಿ ಮಾಡಿಕೊಂಡಿರುವುದು ಕಣ್ಣಿಗೆ ಬಿತ್ತು. ಸೀದಾ ಅಲ್ಲಿಗೆ ಬಂದು ನಿಂತ. ಅಂಗಡಿಯ ಮುಂಭಾಗದಲ್ಲಿ ಮಳೆ ಬಿಸಿಲಿಗೆ ಅಡ್ಡವಾಗಿ ಏನೂ ಹಾಕಿರದ ಕಾರಣ ನೆನೆಯುವುದು ತಪ್ಪಲಿಲ್ಲ. ಆದರೂ ಅಲ್ಲೇ ನಿಂತಿದ್ದ, ಅಂಗಡಿಯೊಳಗೆ ಇರಚಲು ಬಡಿಯುತ್ತಿದ್ದರಿಂದ ಹೇಳೋಣವೆಂದು ಬಗ್ಗಿ ನೋಡಿದರೆ ಒಳಗಡೆ ಹೆಂಗಸೊಬ್ಬಳು ಕಂಡಳು. ಇವನು ಇರಚಲು ಬಡಿಯುತ್ತಿದೆ ಎಂದು ಕೂಗಿದನ್ನು ಕೇಳಿ ಹೆಂಗಸು ಯಾರೋ ಏನೋ ಕೊಳ್ಳಲು ಬಂದಿರಬೇಕೆಂದು ಬಂದು ಏನು ಬೇಕು ಎಂದು ಕೇಳಿದಳು. ಇವನು ನನಗೇನು ಬೇಡ, ಮಳೆ ಅಂಗಡಿ ಒಳಗೂ ಬಿದ್ದು ಸಾಮಾನುಗಳು ಹಾಳಾಗುತ್ತಿವೆ ಎಂದು ಹೇಳಲು ಕರೆದೆ ಎಂದ.

ಆಗ ಗಮನಿಸಿದ ಹೆಂಗಸು ಹೌದಲ್ಲವೆ ಎಂದು ಬಾಗಿಲು ಮುಂದೆ ಎಳೆದಳು. ಇವನು ಅಲ್ಲಿಯೇ ನಿಂತಿದ್ದನ್ನು ನೋಡಿ, ಒಳಗೆ ಬನ್ನಿ ಎಂದು ಪಕ್ಷದ ಬಾಗಿಲು ತೆರೆದಳು. ಇವನು ಪರವಾಗಿಲ್ಲ ಎಂದು ಹೇಳಲು ಹೊರಟ ಕ್ಷಣದಲ್ಲೇ ಮತ್ತೊಂದು ಸಿಡಿಲು ಬಡಿಯಿತು. ಆಗ ಏನನ್ನು ಹೇಳದೆ ಒಳಹೋಗಿ ಬಾಗಿಲ ಬಳಿಯೇ ನಿಂತು ಮಳೆಯ ನೋಡತೊಡಗಿದ. ಕಣ್ಣು ಮಳೆ ನೋಡುತ್ತಿದ್ದರೆ, ಮನಸು ಬೈದ ವ್ಯಕ್ತಿಯ ಬಗ್ಗೆ ಯೋಚಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಆ ಅಂಗಡಿಯಾಕೆ ತಿನ್ನಲು ಕಾರಮಂಡಕ್ಕಿ ಕೊಟ್ಟು ಕುಡಿಯಲು ಬಿಸಿಯಾದ ಕಾಫಿ ಕೊಟ್ಟಳು. ಇವನು ಬೇಡ ಎನ್ನದೆ ತಿಂದು, ಕುಡಿದ. ಅಷ್ಟು ಹೊತ್ತಿಗೆ ಮಳೆಯ ರಭಸ ಕಡಿಮೆಯಾದ್ದರಿಂದ ಬರುತ್ತೇನೆ ಎಂದು ಹೇಳಿ ಹೊರಟ.

ಒಂದು ವಾರದ ನಂತರ ಮತ್ತೆ ಅದೇ ಬಡಾವಣೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಗೆ ಹೋಗುವಾಗ, ತಕ್ಷಣ ಆ ದಿನ ಒಳಕರೆದು ಉಪಚರಿಸಿದ ಹೆಂಗಸಿನ ನೆನಪಾಗಿ, ಬರುವಾಗ ಅವಳನ್ನು ಮಾತನಾಡಿಸಿಯೇ ಬರುವುದೆಂದು ತೀರ್ಮಾನಿಸಿದ. ದಾರಿಯುದ್ದಕ್ಕೂ ಹೋಗುವಾಗ ಅವಳ ಬಗ್ಗೆ ನೆನಪಿಸಿಕೊಂಡರೆ ಏನೂ ನೆನಪಾಗಲಿಲ್ಲ. ಅವಳು ಹೇಗಿದ್ದಾಳೆ, ಮುಖ ಹೇಗಿದೆ, ತಾನು ತಿಂದಿದ್ದು ಏನು ಏನೊಂದೂ ನೆನಪಾಗಲಿಲ್ಲ. ಆಗ ಆ ಕ್ಷಣದಲ್ಲಿ ಅವನ ಮನಸ್ಸು ಪೂರ್ತಿ ಬೈದ ವ್ಯಕ್ತಿಯ ಬಗ್ಗೆಯೆ ಗಿರಕಿ ಹೊಡೆಯುತ್ತಿದ್ದರಿಂರ ಬೇರೆ ಕಡೆ ಗಮನ ಹೋಗಿರಲಿಲ್ಲ.

ಇಂದು ಬಂದಾಗ ನೋಡಿದರೆ ಅದೊಂದು ಪುಟ್ಟ ಅಂಗಡಿ. ಅಲ್ಲಿ ಬೀಡಿ ಸಿಗರೇಟು ತಂಬಾಕು, ಎಲೆ ಅಡಿಕೆ, ಸ್ವಲ್ಪ ಕುರುಕಲು ತಿಂಡಿಗಳ ಜೊತೆಗೆ ಕಾರಮಂಡಕ್ಕಿ, ಮಿರ್ಚಿ ಮಾತ್ರ ಸಿಗುತ್ತಿತ್ತು. ಮೂವತ್ತರ ಆಸುಪಾಸಿನ ಮಹಿಳೆ ಅದನ್ನು ನಡೆಸುತ್ತಿದ್ದಳು. ಇವನನ್ನು ನೋಡಿದ ಆ ಮಹಿಳೆ ಹಿಂದಿನ ಗುರುತು ಹಿಡಿಯದೆ ಏನು ಬೇಕು ಎಂದು ಕೇಳಿದಳು. ಅದಕ್ಕೆ ಗಿರೀಶ್ ಅಂದಿನ ಘಟನೆ ವಿವರಿಸಿ, ನೀವೇ ಅಲ್ಲವೇ ಇದ್ದಿದ್ದು ಎಂದ. ಹೌದು, ಆದರೆ ಅವತ್ತು ನೀವು ರೈನ್ ಕೋಟ್, ಹೆಲ್ಮೆಟ್ ಹಾಕಿದ್ದರಿಂದ ಗೊತ್ತಾಗಲಿಲ್ಲ ಎಂದಳು.

ಅವಳ ಹಾಗೂ ಅಂಗಡಿಯ ಪರಿಸ್ಥಿತಿ ನೋಡಿದಾಗ, ಅಂದು ತಾನು ದುಡ್ಡು ಕೊಡದೆ ಹೋಗಿದ್ದು ತಪ್ಪಾಯಿತು ಎನಿಸಿ, ಅವತ್ತು ಯಾವುದೋ ಮೂಡಲ್ಲಿ ಹಣ ಕೊಡಲಿಲ್ಲ, ಎಷ್ಟಾಗಿತ್ತು ಎಂದ. ಅದಕ್ಕವಳು ಬೇಡ ಎಂದು ಹಣ ಪಡೆಯಲಿಲ್ಲ. ಅಂದಿನಿಂದ ಗಿರೀಶ್ ಆ ಕಡೆ ಹೋದಾಗಲೆಲ್ಲಾ ತಪ್ಪದೇ ಈ ಅಂಗಡಿಗೆ ಬಂದು ಹಣ ಕೊಟ್ಟು ಕಾಫಿ ಕುಡಿದು ನಾಲ್ಕು ಮಾತನಾಡಿ ಹೋಗುತ್ತಿದ್ದ. ಯಾವಾಗ ಬಂದರೂ ಅಲ್ಲಿ ಆ ಹೆಂಗಸು ಮತ್ತು ಎರಡು ಮೂರು ವರ್ಷದ ಮಗು ಮಾತ್ರ ಇರುವುದನ್ನು ಗಮನಿಸಿ, ಕುತೂಹಲ ತಡೆಯಲಾರದೆ, ಮನೆಯಲ್ಲಿ ಮತ್ತೆ ಯಾರಿದ್ದಾರೆ ಎಂದು ಕೇಳಿದ. ಅದಕ್ಕವಳು ನಾನು ನನ್ನ ಮಗಳು ಇಬ್ಬರೇ ಎಂದಳು. ಏಕೆ ಎಂದಾಗ, ವರ್ಷದ ಹಿಂದೆ ನನ್ನ ಯಜಮಾನರು ಕೊವಿಡ್ ನಿಂದ ಹೋದರು ಹಾಗಾಗಿ ಎಂದಳು. ಇವನು ಮತ್ತೆ ಏನನ್ನು ಕೇಳಲಿಲ್ಲ.. ನಂತರ ತಿಳಿದಿದ್ದೆಂದರೆ, ಗಂಡ ಇರುವವರೆಗೂ ಅವನ ಕುಟುಂಬದವರೊಂದಿಗೆ ಬದುಕು ಚೆನ್ನಾಗಿಯೇ ಇತ್ತು. ಆತ ಹೋದನಂತರ ಆಸ್ತಿಯ ಸಲುವಾಗಿ, ಇವಳಿಗೆ ಈ ಪುಟ್ಟ ಮನೆ, ನಾಲ್ಕು ಬಿಡಿಗಾಸು ಕೊಟ್ಟು ಹೊರಹಾಕಿದ್ದಾರೆಂದು.

ಇವಳು ತನ್ನ ಮನೆಯವರಿಗೆ ಹೊರೆಯಾಗಬಾರದೆಂದು ಇಲ್ಲಿಗೆ ಮಗಳೊಂದಿಗೆ ಬಂದು ಬದುಕು ಕಟ್ಟೀಕೊಂಡಿದ್ದಾಳೆ ಎಂದು.
ಅದೊಂದು ದಿನ ಗಿರೀಶನಿಗೆ, ಆತನ ತಂದೆಗೆ ಹುಷಾರಿಲ್ಲ ಎಂದು ಕರೆ ಬಂದು ಊರಿಗೆ ಹೋದ. ಅಲ್ಲಿಗೆ ಹೋದ ಎರಡನೆ ದಿನ ತಾಯಿ, ಗಿರೀಶನನ್ನು ಕೂರಿಸಿಕೊಂಡು, ಆದದ್ದು ಆಗಿ ಹೋಯಿತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನೀನೂ ಕೊರಗುತ್ತಾ ನಮಗೂ ಕೊರಗುವಂತೆ ಏಕೆ ಮಾಡ್ತಿಯಾ? ನಿನ್ನ ತಂದೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿರುವುದು ಎಂದು ಹೇಳುವಾಗಲೇ ಗಿರೀಶನ ಗೆಳೆಯನು ಬಂದ.

ಅವನು ಗಿರೀಶನನ್ನು ಹೊರಗೆ ಕರೆದುಕೊಂಡು ಹೋಗಿ, ನೋಡು ನಿನಗೇನು ಮಹಾ ವಯಸ್ಸಾಗಿಲ್ಲ, ಮೊದಲನೇ ಸಂಬಂಧ ಅಲ್ಲದಿದ್ದರೂ ಎರಡನೇ ಸಂಬಂಧವಾದರೂ ನೋಡು. ಅವರಿಗೂ ಒಂದು ಬದುಕು ಸಿಗುತ್ತದೆ, ನಿನ್ನ ಬದುಕಿಗೂ ಆಧಾರ ಸಿಕ್ಕಂತೆ ಆಗುತ್ತದೆ. ಜೊತೆಗೆ ನಿನ್ನ ತಂದೆ ತಾಯಿಗೆ ನೆಮ್ಮದಿ ಸಿಗುತ್ತದೆ ಯೋಚಿಸು ಎಂದ.
ಗಿರೀಶನಿಗೆ ಈಗ ಮೂವತ್ತೈದು ವರ್ಷ, ಅವನಿಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಹರಕೆ ಹೊತ್ತು ತೀರಿಸಲು ತನ್ನ ಊರಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಇರುವ ಮನೆದೇವರಿಗೆ ಬೈಕಿನಲ್ಲಿ ಹೆಂಡತಿಯೊಂದಿಗೆ ಹೋಗುವಾಗ, ಎದುರಿನಿಂದ ವೇಗವಾಗಿ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ಹೋಗಿ, ಬೈಕ್ ಸಮೇತ ಕೆರೆಯಲ್ಲಿ ಬಿದ್ದಿದ್ದರು.

ಅಲ್ಪಸ್ವಲ್ಪ ಈಜು ಬರುತ್ತಿದ್ದ ಗಿರೀಶ್ ಕಷ್ಟಪಟ್ಟು ದಡ ಸೇರಿದ. ಆದರೆ ಆತನ ಹೆಂಡತಿ ಬದುಕಿ ಉಳಿಯಲಿಲ್ಲ. ಊರಲ್ಲೇ ಇದ್ದರೆ ಹೆಂಡತಿಯ ನೆನಪು ಬಹಳ ಕಾಡುತ್ತದೆ, ಅವಳ ಸಾವಿಗೆ ತಾನೇ ಕಾರಣ ಎಂದು ಕೊರಗುವಂತೆ ಆಗುತ್ತದೆ ಎನ್ನುವ ಕಾರಣಕ್ಕೆ ತನ್ನ ಊರು ಬಿಟ್ಟು ಶಿವಮೊಗ್ಗ ಸೇರಿದ್ದ. ಇಷ್ಟು ದಿನ ಯಾರು ಏನೇ ಹೇಳಿದ್ದರೂ ಮರುಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ, ತಂದೆಯ ಅನಾರೋಗ್ಯ, ತಾಯಿಯ ಮಾತು, ಜೊತೆಗೆ ಗೆಳೆಯ, ವಿಧವೆ, ವಿಚ್ಜೇದಿತೆ, ಕೈಲಾಗದವರಿಗೆ ಮದುವೆಯಾಗಿ ಹೊಸ ಬದುಕು ಕೊಡಬಾರದೇಕೆ ಎನ್ನುವ ಮಾತು ಮತ್ತೊಂದು ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿತು.

ಅದಕ್ಕಾಗಿಯೆ ಗಿರೀಶ್, ಅಪ್ಪ ನನಗೆ ಯೋಚಿಸಲು ಸ್ವಲ್ಪ ದಿನ ಅವಕಾಶ ಕೊಡು ಹೇಳುತ್ತೇನೆ ಎಂದು ಶಿವಮೊಗ್ಗಕ್ಕೆ ಬಂದ. ಅದೇ ದಿನ ಹೊಸ ಬಡಾವಣೆಯ ಆರ್ಡರ್ ಸಿಕ್ಕಿತು. ವಾಡಿಕೆಯಂತೆ ಡೆಲಿವರಿ ಕೊಟ್ಟು ಕಾಫಿ ಕುಡಿಯಲು ಬಂದ. ಅದೇನೋ ಗೊತ್ತಿಲ್ಲ, ಆಂದು ಆ ಅಂಗಡಿಯ ಮಹಿಳೆ ಬಹಳ ವಿಶೇಷವಾಗಿ ಕಂಡಳು. ಸಂಜೆ ಮನೆಗೆ ಬಂದವನು ಏನೋ ಯೋಚಸಿ ಗೆಳೆಯನಿಗೆ ಕರೆ ಮಾಡಿ, ಅಂಗಡಿಯ ಮಹಿಳೆಯ ವಿಷಯವನ್ನು ಅವನಿಗೆ ತಿಳಿಸಿ, ಅವಳು ಒಪ್ಪಿದರೆ ಅವಳಿಗೆ ಮದುವೆಯಾಗಿ, ಅವಳ ಮಗುವಿಗೆ ತಂದೆಯಾಗಲು ಬಯಸಿರುವೆ. ಇದಕ್ಕೆ ಅಪ್ಪ ಅಮ್ಮನ ಒಪ್ಪಿಗೆ ಇದೇಯಾ ನೀನೇ ಕೇಳಿ ತಿಳಿಸು. ಆಮೇಲೆ ನಾನು ಅವಳ ಬಳಿ ಮಾತನಾಡುವೆ ಎಂದ ಗಿರೀಶ್. ಸಮಯ ನೋಡಿ ನಿನ್ನ ತಂದೆ ತಾಯಿಯರ ಜೊತೆ ಮಾತನಾಡಿ ತಿಳಿಸುವೆ ಎಂದ ಗೆಳೆಯ. ಗಿರೀಶ್, ಗೆಳೆಯನಿಂದ ಬರುವ ಕರೆಗೆ ಕಾಯುತ್ತಿದ್ದಾನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading
Advertisement

Title

ದಿನದ ಸುದ್ದಿ2 hours ago

ಗೃಹಜ್ಯೋತಿ ಆಗಸ್ಟ್ 1 ರಂದು ಜಾರಿಗೆ ಸಿದ್ಧತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ’ಗೃಹಜ್ಯೋತಿ’ ಯೋಜನೆ ಆಗಸ್ಟ್ 1 ರಂದು ಹಾಗೂ ಮನೆ ಯಜಮಾನಿಗೆ 2ಸಾವಿರ ರೂಪಾಯಿ ಅವರ ಖಾತೆಗೆ...

ದಿನದ ಸುದ್ದಿ13 hours ago

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ; ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಉಚಿತ ಪ್ರಯಾಣ

ಸುದ್ದಿದಿನ ಡೆಸ್ಕ್ : ಇದೇ 12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ...

ದಿನದ ಸುದ್ದಿ15 hours ago

ಕನ್ನಡ ಸಾಹಿತ್ಯ ಪರಿಷತ್ | ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟ

ಸುದ್ದಿದಿನ, ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಲ್ಲಿ ಒಂದಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರಕಟವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ...

ದಿನದ ಸುದ್ದಿ23 hours ago

ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ಸುದ್ದಿದಿನ ಡೆಸ್ಕ್ : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಚಿವ...

ದಿನದ ಸುದ್ದಿ23 hours ago

ವಿದ್ಯುತ್ ಬಳಕೆ ಶುಲ್ಕ ಹೆಚ್ಚಳವನ್ನು ಮುಂದೂಡಲು ಒತ್ತಾಯ

ಸುದ್ದಿದಿನ ಡೆಸ್ಕ್ : ಆರ್ಥಿಕತೆಯಲ್ಲಿ ಸಾಮಾನ್ಯ ಸ್ಥಿತಿ ಮರಳುವವರೆಗೆ ವಿದ್ಯುತ್ ಬಳಕೆ ಶುಲ್ಕ ಹೆಚ್ಚಳವನ್ನು ಮುಂದೂಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸರ್ಕಾರವನ್ನು ಒತ್ತಾಯಿಸಿದೆ. ಪ್ರಸ್ತುತ...

ದಿನದ ಸುದ್ದಿ23 hours ago

ಗೃಹಜ್ಯೋತಿ ಯೋಜನೆ | ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೂ ಅನ್ವಯ : ಸಚಿವ ಕೆ.ಜೆ. ಜಾರ್ಜ್

ಸುದ್ದಿದಿನ, ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೂ ಅನ್ವಯಿಸಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ....

ದಿನದ ಸುದ್ದಿ1 day ago

ಪದವಿ ಮತ್ತು ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

ಸುದ್ದಿದಿನ,ದಾವಣಗೆರೆ : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಮನ್ ಸಂಶೋಧನಾ ಸಂಸ್ಥೆಯ 75 ನೇ ವಾರ್ಷಿಕೋತ್ಸದ ಅಂಗವಾಗಿ...

ದಿನದ ಸುದ್ದಿ2 days ago

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ

ಸುದ್ದಿದಿನ ಡೆಸ್ಕ್ : ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಹಾಗೂ ಲಕ್ಷ್ಮಣ್ ಸವದಿ, ರಾಜೀನಾಮೆಯಿಂದ ತೆರವಾಗಿದ್ದ ಮೂರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ...

ದಿನದ ಸುದ್ದಿ2 days ago

ಮೀಸಲಾತಿ ಹೆಚ್ಚಳ ; ಸಂವಿಧಾನದ 9ನೇ ಶೆಡ್ಯುಲ್‌ನಲ್ಲಿ ಸೇರಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಶೆಡ್ಯಲ್‌ನಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ...

ದಿನದ ಸುದ್ದಿ3 days ago

ನೈತಿಕ ಪೊಲೀಸ್‍ಗಿರಿಗೆ ಅವಕಾಶ ಇಲ್ಲ ; ಸಿ.ಎಂ. ಸಿದ್ದರಾಮಯ್ಯ ಎಚ್ಚರಿಕೆ

ಸುದ್ದಿದಿನ,ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಜನರೇ ಮಾಲಿಕರಾಗಿದ್ದು ಜನರ ಆಶೋತ್ತರಗಳಿಗೆ ಸ್ಪಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸೂಚನೆ ನೀಡಿದರು. ಅವರು ಸೋಮವಾರ ದಾವಣಗೆರೆ ಜಿಲ್ಲಾ ಪಂಚಾಯಿತಿ...

Trending