ರಾಜಕೀಯ
ಭಾರತದಲ್ಲಿ ಟ್ರಂಪ್ : ಮೋದಿ ಸರಕಾರದ ಅಡಿಯಾಳುತನದ ಪ್ರದರ್ಶನ
- ಈ ಟ್ರಂಪ್ ಭೇಟಿ, ಭಾರತವನ್ನು ಅಮೆರಿಕಾದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹಕ್ಕೆ ಸಂಪೂರ್ಣವಾಗಿ ಲಗತ್ತಿಸಿ ಮೋದಿ ಭಾರತದ ಎಲ್ಲ ಹಿತಾಸಕ್ತಿಗಳನ್ನು ಆ ಗುರಿ ಸಾಧನೆಗೆ ಅಡಿಯಾಳಾಗಿಸಿದ್ದನ್ನು ತೋರಿಸಿಕೊಟ್ಟಿದೆ. ಭೇಟಿಯ ಕೊನೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇದು ಚೆನ್ನಾಗಿ ಬಿಂಬಿತವಾಗಿದೆ. ಅಮೆರಿಕಾದ ಪ್ರಾಥಮಿಕ ಗುರಿ ಭಾರತವನ್ನು ಒಂದು ನಂಬಿಕಸ್ಥ ವ್ಯೂಹಾತ್ಮಕ ಮತ್ತು ಮಿಲಿಟರಿ ಮಿತ್ರನಾಗಿ ಮಾಡುವುದು ಎಂಬುದು ಭಾರತ-ಅಮೆರಿಕ ಪರಮಾಣು ವ್ಯವಹಾರಕ್ಕೆ ಸಹಿ ಹಾಕಿದಂದಿನಿಂದಲೇ ಸ್ಪಷ್ಟವಾಗಿತ್ತು. ಅಮೆರಿಕಾಕ್ಕೆ ಎದುರಾಗಿ ಭಾರತದ ಹಿತಗಳಿಗೆ ಅತ್ಯಗತ್ಯವಾದ ಒಂದು ವ್ಯಾಪಾರ, ವಾಣಿಜ್ಯ, ದತ್ತಾಂಶ ಸ್ಥಳೀಯಕರಣ ಅಥವ ಬೇರೆ ಯಾವುದೇ ವಿಷಯದಲ್ಲಿ ಮಾತುಕತೆಗಳಿಗೆ ಮೋದಿ ಸರಕಾರಕ್ಕೆ ಯಾವುದೇ ಅವಕಾಶ ಉಳಿದಿಲ್ಲ.
-ಪ್ರಕಾಶ ಕಾರಟ್
ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಭಾರತ ಭೇಟಿ ಇತ್ತೀಚಿನ ಸಮಯದಲ್ಲಿ ಯಾವುದೇ ಅಮೆರಿಕನ್ ಅಧ್ಯಕ್ಷರ ಭೇಟಿಯಂತಿರಲಿಲ್ಲ. ಇದೊಂದು ಅಧಿಕೃತ ಭೇಟಿಯಾದರೂ, ಅಹಮದಾಬಾದಿನ ಮೊಟೆರ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಇವೆಂಟ್ ಈ ಭೇಟಿಯ ಪ್ರಧಾನ ಸಂಗತಿಯಾಗಿತ್ತು. ಇಲ್ಲಿ ನರೇಂದ್ರ ಮೋದಿ ಕಳೆದ ವರ್ಷ ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿಯ ಭಾರತೀಯ ಆವೃತ್ತಿಯನ್ನು ಪ್ರದರ್ಶಿಸಿದರು. ಆದರೆ ಈ ಪ್ರದರ್ಶನವನ್ನು ಕೇವಲ ಒಂದು ತಮಾಷೆ ಎಂದು ತಳ್ಳಿ ಹಾಕುವಂತಿಲ್ಲ. ಇದು ಮೋದಿಯ ಭಾರತ ಟ್ರಂಪ್‌ನ ಅಮೆರಿಕಾಕ್ಕೆ ಸಂಪೂರ್ಣ ನಿಷ್ಠೆಯನ್ನು-ತಾತ್ವಿಕವಾಗಿ, ರಾಜಕೀಯವಾಗಿ, ವ್ಯೂಹಾತ್ಮಕವಾಗಿ ಮತ್ತು ಸಾಮರಿಕವಾಗಿ- ಘೋಷಿಸಿರುವ ಪರಿ. ಹಿಂದೆಂದೂ ಬಲಪಂಥೀಯ ರಾಜಕೀಯ ಮತ್ತು ಸಿದ್ಧಾಂತ ಇಂದಿನಷ್ಟು ಭಾರತ-ಅಮೆರಿಕ ಸಂಬಂಧಗಳನ್ನು ಜೋಡಿಸುವ ಅಂಟು ಆಗಿರಲಿಲ್ಲ. ಮೋದಿ ಈ ನಮಸ್ತೆ ಟ್ರಂಪ್ನ್ನು ನವಂಬರ್ ತಿಂಗಳ ಅಧ್ಯಕ್ಷೀಯ ಚುನಾವಣೆಗಲ್ಲಿ ತನ್ನ ಗೆಳೆಯ ಟ್ರಂಪ್‌ರವರ ಪ್ರಚಾರಕ್ಕೆಂದೇ ರೂಪಿಸಿದಂತಿದೆ.
ಈ ಟ್ರಂಪ್ ಭೇಟಿ, ಭಾರತವನ್ನು ಅಮೆರಿಕಾದ ಭೌಗೋಳಿಕ-ರಾಜಕೀಯ ಕಾರ್ಯವ್ಯೂಹಕ್ಕೆ ಸಂಪೂರ್ಣವಾಗಿ ಲಗತ್ತಿಸಿ ಮೋದಿ ಭಾರತದ ಎಲ್ಲ ಹಿತಾಸಕ್ತಿಗಳನ್ನು ಆ ಗುರಿ ಸಾಧನೆಗೆ ಅಡಿಯಾಳಾಗಿಸಿದ್ದನ್ನು ತೋರಿಸಿಕೊಟ್ಟಿದೆ.
ಭೇಟಿಯ ಕೊನೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಇದು ಚೆನ್ನಾಗಿ ಬಿಂಬಿತವಾಗಿದೆ. ಸಮಗ್ರ ಭೌಗೋಳಿಕ-ವ್ಯೂಹಾತ್ಮಕ ಭಾಗೀದಾರಿಕೆ ಎಂದು ಅದರಲ್ಲಿ ಪ್ರಕಟಿಸಿರುವಂತದ್ದು ಭಾರತವು ಅಮೆರಿಕ ಸಂಯುಕ್ತ ಸಂಸ್ಥಾನಗಳ ವ್ಯೂಹಾತ್ಮಕ, ರಕ್ಷಣಾ ಮತ್ತು ಭದ್ರತಾ ಹಿತಾಸಕ್ತಿಗಳೊಂದಿಗೆ ತನ್ನನ್ನು ಏಕೀಭವಿಸಿಕೊಂಡಿದೆ ಎಂಬ ಘೊಷಣೆಯಲ್ಲದೆ ಬೇರೇನೂ ಅಲ್ಲ.
ಅಮರಿಕಾದ ಪ್ರಾಥಮಿಕ ಗುರಿ ಭಾರತವನ್ನು ಒಂದು ನಂಬಿಕಸ್ಥ ವ್ಯೂಹಾತ್ಮಕ ಮತ್ತು ಮಿಲಿಟರಿ ಮಿತ್ರನಾಗಿ ಮಾಡುವುದು ಎಂಬುದು ಭಾರತ-ಅಮೆರಿಕ ಪರಮಾಣು ವ್ಯವಹಾರಕ್ಕೆ ಸಹಿ ಹಾಕಿದಂದಿನಿಂದಲೇ ಸ್ಪಷ್ಟವಾಗಿತ್ತು. ಅಧ್ಯಕ್ಷ ಟ್ರಂಪ್ ತನ್ನ ಅಹಮದಾಬಾದ್ ಭಾಷಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಭಾರತದ ಪ್ರಧಾನ ರಕ್ಷಣಾ ಭಾಗೀದಾರನಾಗಬೇಕು ಎಂಬುದು ನನ್ನ ನಂಬಿಕೆ, ಆ ರೀತಿಯಲ್ಲಿ ಅದು ಕೆಲಸ ಮಾಡುತ್ತಿದೆ ಎಂದರು.
ಭಾರತ ಈಗಾಗಲೇ ಕಳೆದ ಒಂದು ದಶಕದಲ್ಲಿ ಅಮೆರಿಕಾದಿಂದ 15ರಿಂದ 18 ಬಿಲಿಯ ಡಾಲರುಗಳ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಉಪಕರಣಗಳನ್ನು ಖರೀದಿಸಿದೆ. ಅಮೆರಿಕಾದೊಡನೆ ಭಾರತ ವ್ಯಾಪಾರದಲ್ಲಿ ಸರಿಯಾದ ರೀತಿಯಲ್ಲಿ ವ್ಯವಹರಿಸುತ್ತಿಲ್ಲ ಎಂಬ ಟ್ರಂಪ್ ಮಾತಿನ ಹಿಂದೆ ಇರುವುದು ಭಾರತ ಅಮೆರಿಕನ್ ಶಸ್ತಾಸ್ತ್ರ ಉತ್ಪಾದಕರಿಂದ ಹೆಚ್ಚೆಚ್ಚು ವೆಚ್ಚದಾಯಕ ಶಸ್ತ್ರಾಸ್ತೃಗಳನ್ನು ಖರೀದಿಸಬೇಕು ಎಂಬ ಒತ್ತಡವೇ. ಈ ಭೇಟಿ ಕಾಲದಲ್ಲಿ 3 ಬಿಲಿಯ ಡಾಲರುಗಳ ಮೌಲ್ಯದ 24 ಎಂಹೆಚ್ 60 ಆರ್ ನಾವಿಕ ಹೆಲಿಕಾಪ್ಟರ್‌ಗಳನ್ನು ಮತ್ತು ಆರು ಅಪಾಚೆ ಹೆಲಿಕಾಪ್ಟರುಗಳನ್ನು ಖರೀದಿಸುವ ಒಪ್ಪಂದವನ್ನು ಪ್ರಕಟಿಸಲಾಯಿತು.
ಬುನಾದಿ ಮಿಲಿಟರಿ ಒಪ್ಪಂದಗಳು ಎನ್ನಲಾದ ಮೂರು ಒಪ್ಪಂದಗಳಲ್ಲಿ ಎರಡಕ್ಕೆ ಸಹಿ ಹಾಕಿದ ಮೇಲೆ ಮೂರನೇ ಒಪ್ಪಂದ, ಮೂಲ ವಿನಿಮಯ ಸಹಕಾರ ಒಪ್ಪಂದ ಎಂಬುದನ್ನು ಬೇಗನೇ ಪೂರ್ಣಗೊಳಿಸಲಾಗುವುದು ಎಂದು ಜಂಟಿ ಹೇಳಿಕೆ ಸೂಚಿಸುತ್ತದೆ. ಈ ತ್ರಿವಳಿ ಒಪ್ಪಂದಗಳೊಂದಿಗೆ, ಭಾರತದ ಸಶಸ್ತ್ರ ಪಡೆಗಳು ಅಂತರ್ನಿರ್ವಹಣೆ ಮತ್ತು ಜಂಟಿ ಚಟುವಟಿಕೆಗಳ ರೂಪದಲ್ಲಿ ಏಷ್ಯಾದಲ್ಲಿ ಅಮೆರಿಕಾದ ಮಿತ್ರರುಗಳ, ಅಂದರೆ ಜಪಾನ್ ಮತ್ತು ದಕ್ಷಿಣ ಕೊರಿಯಾದ ಸಶಸ್ತ್ರ ಪಡೆಗಳಾಗಿ ಬಿಡುತ್ತವೆ.
ಈ ಜಂಟಿ ಹೇಳಿಕೆ, ಮೋದಿ ಸರಕಾರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಭಾರತ-ಶಾಂತಸಾಗರ ಕಾರ್ಯವ್ಯೂಹದೊಂದಿಗೆ ತನ್ನನ್ನು ಸಂಪೂರ್ಣವಾಗಿ ಹೊಂದಿಸಿಕೊಂಡಿದೆ ಎಂಬುದನ್ನು ಬಿಂಬಿಸುತ್ತದೆ. ಅದು ಅಮೆರಿಕ-ಭಾರತ-ಜಪಾನ್ ತ್ರಿಪಕ್ಷೀಯ ಶೃಂಗ ಮತ್ತು ಅಮೆರಿಕ, ಜಪಾನ್ಮ ಆಸ್ಟ್ರೇಲಿಯ ಮತ್ತು ಭಾರತ ಇರುವ ಚತುರ್ಪಕ್ಷೀಯ ವೇದಿಕೆಯನ್ನು ಬಲಪಡಿಸುವ ಮಾತಾಡುತ್ತದೆ.
ಆಂತರಿಕ ಭದ್ರತಾ ರಂಗದಲ್ಲಿ ಭಾರತ ಅಮೆರಿಕಾದ ಆಂತರಿಕ ಭದ್ರತಾ ಇಲಾಖೆಯೊಂದಿಗೆ ಸಹಕಾರವನ್ನು ಬೆಳೆಸುತ್ತದೆ, ಅಂದರೆ ನಾವು ಅಮೆರಿಕನ್ ಭದ್ರತಾ ಏಜೆಂಸಿಗಳು ಭಾರತದ ಆಂತರಿಕ ಭದ್ರತಾ ವ್ಯವಹಾರಗಳಲ್ಲಿ ಹೆಚ್ಚಿನ ಪಾತ್ರವಹಿಸುವುದನ್ನು ನಿರೀಕ್ಷಿಸಬಹುದು.
ಈಗ ಭಾರತ-ಅಮೆರಿಕಾ ಸಂಬಂಧಗಳನ್ನು ಬಾಧಿಸುತ್ತಿರುವ ಪ್ರಶ್ನೆಯೆಂದರೆ, ವ್ಯಾಪಾರ ಸಂಬಂಧಗಳು. ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವುದು, ಭಾರತದ ಸಾಮಾನ್ಯೀಕೃತ ವ್ಯಾಪಾರ ಆದ್ಯತೆಗಳ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವುದು ಮುಂತಾದ ಟ್ರಂಪ್ ಆಡಳಿತದ ವೈಷಮ್ಯಭರಿತ ನಡೆಗಳ ನಂತರ, ಅಮೆರಿಕ ಡಬ್ಲ್ಯುಟಿಒ ದಲ್ಲಿ ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆಂದು ವರ್ಗೀಕರಿಸಬಾರದು ಎಂದು ಹೇಳುವವರ ನೇತೃತ್ವವನ್ನು ವಹಿಸಿಕೊಂಡಿದೆ.
ಒಂದು ಸಮತ್ವಹೀನ ಇ-ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಭಾರತದ ಮೇಲೆ ಅಮೆರಿಕಾ ಒತ್ತಡ ಹೇರುತ್ತಿದೆ, ಮತ್ತು ವೈದ್ಯಕೀಯ ಉಪಕರಣಗಳ ಮೇಲೆ ಬೆಲೆ ನಿಯಂತ್ರಣ ಹಾಕುವ ಭಾರತದ ಧೋರಣೆಯನ್ನು ವಿರೋಧಿಸುತ್ತಿದೆ. ಇವೆಲ್ಲವನ್ನು ಕುರಿತಂತೆ ಭಾರತದ ಯಾವೊಂದೂ ನಿಲುವನ್ನು ಅಮೆರಿಕಾ ಒಪ್ಪುವಂತೆ ಮಾಡಲು ಸಾಧ್ಯವಾಗಿಲ್ಲ ಎಂಬುದು ಭೇಟಿ ಕಾಲದಲ್ಲಿನ ಹೇಳಿಕೆಗಳಿಂದ ಸ್ವಯಂವೇದ್ಯವಾಗುತ್ತದೆ. ಜಂಟಿ ಹೇಳಿಕೆ ಒಂದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಸ್ತಾವಿತ ಮೊದಲ ಹಂತದ ಬಗ್ಗೆ ಮಾತುಕತೆಗಳ ಬಗ್ಗೆಯಷ್ಟೇ ಹೇಳುತ್ತದೆ.
ಅಮೆರಿಕಾಕ್ಕೆ ಎದುರಾಗಿ ಭಾರತದ ಹಿತಗಳಿಗೆ ಅತ್ಯಗತ್ಯವಾದ ಒಂದು ವ್ಯಾಪಾರ, ವಾಣಿಜ್ಯ, ದತ್ತಾಂಶ ಸ್ಥಳೀಯಕರಣ ಅಥವ ಬೇರೆ ಯಾವುದೇ ವಿಷಯದಲ್ಲಿ ಮಾತುಕತೆಗಳಿಗೆ ಮೋದಿ ಸರಕಾರಕ್ಕೆ ಯಾವುದೇ ಅವಕಾಶ ಉಳಿದಿಲ್ಲ.
ಭಾರತದ ವ್ಯೂಹಾತ್ಮಕ ಸ್ವಾಯತ್ತತೆ ಮತ್ತು ಒಂದು ಸ್ವತಂತ್ರ ವಿದೇಶಾಂಗ ಧೋರಣೆಯನ್ನು ಅನುಸರಿಸುವ ಸಾಮರ್ಥ್ಯವನ್ನು ತೀವ್ರವಾಗಿ ಸೀಮಿತಗೊಳಿಸುವಂತಹ ಒಂದು ಹಂತವನ್ನು ಭಾರತ-ಅಮೇರಿಕ ವ್ಯೂಹಾತ್ಮಕ ಸಂಬಂಧಗಳಲ್ಲಿ ತಲುಪಿಯಾಗಿದೆ. ಇತ್ತೀಚೆಗೆ, ಅಮೆರಿಕ ಇರಾನಿನ ಉನ್ನತ ಸೇನಾಧಿಕಾರಿ ಸುಲೆಮಾನ್‌ರ ಹತ್ಯೆ ಮಾಡಿದಾಗ ಭಾರತ ಅದನ್ನು ಖಂಡಿಸಲಿಲ್ಲ. ಈ ಮೊದಲು, ಇರಾನಿನಿಂದ ತೈಲ ಆಮದು ಮಾಡಿ ಕೊಳ್ಳಬಾರದು ಎಂದು ಆಗ್ರಹಿಸಿದಾಗ ಮೋದಿ ಸರಕಾರ ತಕ್ಷಣವೇ ಅದನ್ನು ಪಾಲಿಸಿತು.
ಇದರ ಬದಲು ಈಗ ಭಾರತ ಅಮೆರಿಕಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವ ಒತ್ತಡಕ್ಕೆ ಒಳಗಾಗಿದೆ, ಮೋದಿ ಸರಕಾರ ಇದನ್ನೇ ಒಂದು ಸಾಧನೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಪೂರ್ಣವಾಗಿ ಏಕಪಕ್ಷೀಯವಾದ ಶಾಂತಿಯ ಪ್ರಸ್ತಾವವನ್ನು ಭಾರತ ಟೀಕಿಸಲೂ ಇಲ್ಲ. ಈ ಪ್ರಸ್ತಾವದ ಪ್ರಕಾರ ಇಸ್ರೇಲ್ ಸುಮಾರಾಗಿ ಎಲ್ಲ ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಕ್ಕೆ ಪಡೆಯಬಹುದು. ಆಘಾತಕಾರಿ ಸಂಗತಿಯೆಂದರೆ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗೆ ಈ ಟ್ರಂಪ್ ಶಾಂತಿ ಪ್ರಸ್ತಾವವನ್ನು ಪರಿಶೀಲಿಸಬೇಕು ಎಂದು ಹೇಳಿದೆ.
ಭಾರತ ಈ ರೀತಿಯಲ್ಲಿ ಒಂದು ಗಿರಾಕಿ ಸ್ಥಾನಮಾನಕ್ಕೆ ಇಳಿಸಲ್ಪಟ್ಟಿದ್ದರೂ, ಈ ದಿಕ್ಕಿನಲ್ಲಿ ಮೋದಿ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಭಾರತಕ್ಕೆ ಒಂದು ಮಹಾಮುನ್ನಡೆ ಎಂದು ಆಳುವ ವಲಯಗಳು ಮತ್ತು ಕಾರ್ಪೊರೇಟ್ ಮಾಧ್ಯಮಗಳು ಹಾಡಿ ಹೊಗಳುತ್ತಿರುವುದು ಈಗಿನ ಕಾಲಾವಧಿಯ ಲಕ್ಷಣ. ಟ್ರಂಪ್‌ಗೆ ಅಡಿಯಾಳುತನದ ಮೋದಿ ನಿಲುವು ಭಾರತಕ್ಕೆ ಮಾಡಿರುವ ಅನಾಹುತ ಅಪಾರ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇಂದು ಕರೆಂಟ್ ಇರಲ್ಲ
ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್‌ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್‌ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.
ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.
‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.
ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.
ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.
ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ7 days agoಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
-
ದಿನದ ಸುದ್ದಿ4 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ಅಂಕಣ4 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ3 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
-
ದಿನದ ಸುದ್ದಿ5 days agoಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
-
ದಿನದ ಸುದ್ದಿ7 hours agoದಾವಣಗೆರೆ | ಇಂದು ಕರೆಂಟ್ ಇರಲ್ಲ

