ದಿನದ ಸುದ್ದಿ
ಜಮೀನು ತೆರವುಗೊಳಿಸುವ ಕಾರ್ಯ ವಿರೋಧಿಸಿ, “ಶಿವಕುಳೆನೂರುನಿಂದ ಚನ್ನಗಿರಿಯವರೆಗೆ ಪಾದಯಾತ್ರೆ ನಡೆಸಲು ಕರ್ನಾಟಕ ರಣಧೀರ ಪಡೆ ನಿರ್ಧಾರ”
ಸುದ್ದಿದಿನ,ಚನ್ನಗಿರಿ : ಶಿವಕುಳೆನೂರು ಗ್ರಾಮದ ರೈತರಿಗೆ ನಾಯ್ಯ ಕೊಡಿಸಲು ಗ್ರಾಮದಿಂದ ಚನ್ನಗಿರಿಯವರೆಗೆ ಬೈಹತ್ ಪಾದಯಾತ್ರೆ ನಡೆಸಲು ಕರ್ನಾಟಕ ರಣಧೀರ ಪಡೆ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧ್ಯಕ್ಷ ರಾಘು ದೊಡ್ಡಮನಿ ಹೇಳಿದರು.
ಸಂತೆಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವಂತಹ ಶಿವಕುಳೆನೂರ ಗ್ರಾಮಕ್ಕೆ ಬೇಟಿ ನೀಡಿ ರೈತರ ಕಷ್ಟಸುಖಗಳನ್ನು ಗಮನಿಸಿ ಬಳಿಕ ಮಾತನಾಡಿದ ಅವರು, ಗ್ರಾಮದ ರೈತರು ಸುಮಾರು 70/80 ವರ್ಷಗಳ ಕಾಲ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಜಮೀನುಗಳನ್ನು ಅಮೃತ್ ಮಹಲ್ ಪಶು ಸಂಗೋಪನೆ ಸಂರ್ವಧನ ಸಮಿತಿಯವರಿಗೆ ಲೋಕಾಯುಕ್ತ ನ್ಯಾಯಾಲಯ ವಶಪಡಿಸಿಕೊಳ್ಳುವಂತೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ನ್ಯಾಯಲಯದ ಆದೇಶದಂತೆ ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಜಮೀನುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದು ಸರಿಯಾದ ಕ್ರಮವಲ್ಲ, ರೈತರ ಕಣ್ಣಿರಿಗಿಂತ ದೊಡ್ಡ ಕಾನೂನು ಯಾವುದು ಇಲ್ಲ, ಒಂದು ವೇಳೆ ಅವರ ಜಮೀನುಗಳನ್ನು ತೆರವುಗೊಳಿಸುವುದಾದರೆ ಮೊದಲು ಪರ್ಯಾಯವಾಗಿ ಅವರಿಗೆ ಭೂಮಿಯನ್ನು ನೀಡಿ ನಂತರ ತಮ್ಮ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ ಎಂದರು.
ಇಲ್ಲವಾದರೆ ಈ ವಾರದ ಅಂತ್ಯದೊಳಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಮಠಾಧೀಶರುಗಳು ಮತ್ತು ಹೋರಾಟಗಾರರುಗಳ ಚರ್ಚೆ ನಡೆಸಿ ಈ ವಾರದಲ್ಲೇ ಶಿವಕುಳೆನೂರು ಗ್ರಾಮದಿಂದ ಚನ್ನಗಿರಿ ತಾಲ್ಲೂಕು ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿ ಬಳಿಕ ತಾಲ್ಲೂಕು ಕಚೇರಿಯನ್ನು ಮುತ್ತಿಗೆ ಹಾಕಲು ನಮ್ಮ ಕರ್ನಾಟಕ ರಣಧೀರ ಪಡೆ ನಿರ್ಣಯ ಮಾಡಿದ್ದು. ಅದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮತ್ತೋಮ್ಮೆ ಸಭೆ ಕರೆದು ಗ್ರಾಮಸ್ಥರಿಗೆ ಅನುಕೂಲವಾಗುಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ತಾಲ್ಲೂಕು ಅದ್ಯಕ್ಷ ಟಿ.ರುದ್ರೇಶ್ ಮಾತನಾಡಿ ಕರ್ನಾಟಕ ರಣಧೀರ ಪಡೆ ಸಂಘಟನೆಯೂ ಶಿವಕುಳೆನೂರು ಗ್ರಾಮದ ರೈತರಿಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಕೈ ಜೋಡಿಸುವತಹ ಕೆಲಸ ಮಾಡಲಿದ್ದು, ಯಾರು ಕೂಡ ಭಯ ಪಡುವ ಅಗತ್ಯವಿಲ್ಲ ಅಧಿಕಾರಿಗಳು ಸೂಕ್ತ ನ್ಯಾಯ ನೀಡದೆ ಹೊದರೆ ನಾವುಗಳು ಕಾನೂನು ಚೌಕಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು, ಮಠಾದೀಶರುಗಳ ಜೊತೆಗೂಡಿ ಬೃಹತ್ ಪಾದಯಾತ್ರೆ ಮಾಡುವ ಮುಖೇನಾ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕುವಂತಹ ಕೆಲಸ ಮಾಡಿದಾಗ ಮೂಲಕ ನ್ಯಾಯ ಪಡೆದುಕೊಳ್ಳೊಣ ಎಂದು ರೈತರಿಗೆ ಧೈರ್ಯ ತುಂಬಿದರು.
ಈ ವೇಳೆ ಗ್ರಾಮಸ್ಥರಾದ ಪ್ರಭು, ಕೃಷ್ಣಪ್ಪ, ಪರುಶುರಾಮ್, ಕುಬೇಂದ್ರಪ್ಪ, ಮಲಾತೇಶ್, ಹನುಮಂತಪ್ಪ, ನೂರಾರು ಮಹಿಳೆಯರು ಸೇರಿದಂತೆ ರಘುಪ್ರಸಾದ್. ಅರುಣ್, ಪ್ರದೀಪ್, ಚೇತನ್ ಸೇರಿದಂತೆ ಕರ್ನಾಟಕ ರಣಧೀರಪಡೆಯ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿಯ ಪಧಾದಿಕಾರಿಗಳು ಪಾಲ್ಗೋಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್‍ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ

ಸುದ್ದಿದಿನ,ದಾವಣಗೆರೆ:ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಬಜೆಟ್‍ನಲ್ಲಿ ಅನುಮೋದನೆ ನೀಡಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಅವರು ಶುಕ್ರವಾರ ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ಸರ್ಕಾರದ ಅನುದಾನ ಸೇರಿ ರೂ.3.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಟೆಕ್ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 13500 ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ಆದರೂ 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ 76 ಸಾವಿರದಷ್ಟು ಶಾಲೆಗಳಿದ್ದು 1.08 ಕೋಟಿ ವಿದ್ಯಾರ್ಥಿಗಳು 1 ರಿಂದ 12 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು ಒಟ್ಟು ನೌಕರರಲ್ಲಿ ಶೇ 37 ರಷ್ಟು ಸಿಬ್ಬಂದಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 57 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯೂ ಇದ್ದು ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ದಾನಿಗಳಿಂದ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಮ್ಮ ಶಾಲೆ, ನಮ್ಮ ಜವಾಬ್ದಾರಿ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ ಎಂದರು.
ಪೌಷ್ಟಿಕತೆ ಹೆಚ್ಚಿಸಲು ಪ್ರತಿನಿತ್ಯ ಮೊಟ್ಟೆ
ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರತಿನಿತ್ಯ ಮೊಟ್ಟೆ ನೀಡಲಾಗುತ್ತಿದೆ. ಇದರಲ್ಲಿ ಆಜೀಂ ಪ್ರೇಂಜೀ ಪೌಂಢೇಷನ್‍ನಿಂದ ನಾಲ್ಕು ದಿನ, ಸರ್ಕಾರದಿಂದ 2 ದಿನ ಮೊಟ್ಟೆ ನೀಡಲಾಗುತ್ತಿದ್ದು ಸ್ಥಳೀಯವಾಗಿ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಎಲ್ಲ ದಿನವೂ ಮೊಟ್ಟೆ ನೀಡಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟ ಅವರು ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಪೋಷಕರೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗದೆ ಶಾಲೆಗೆ ಕಳುಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಪ್ರತಿ ದಿನದ ಹಾಜರಾತಿಗೆ ರೂ.1 ರಂತೆ ಮಕ್ಕಳಿಗೆ ನೀಡಲಾಗುತ್ತಿತ್ತು, ನಂತರ ಮಧ್ಯಾಹ್ನ ಊಟ ನೀಡುತ್ತಾ ಬಂದು ಈಗ ಹಾಲು, ಮೊಟ್ಟೆಯನ್ನು ನೀಡಲಾಗುತ್ತಿದೆ. ಭವಿಷ್ಯದ ಪ್ರಜೆಗಳಾಗುವ ಮಕ್ಕಳು ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಮತ್ತು ಸಂವಿಧಾನ ಉಳಿಯಲು ಎಲ್ಲರೂ ಶಿಕ್ಷಣವಂತರಾಗಬೇಕೆಂದರು.
ಗ್ರಂಥಾಲಯಗಳಿಗೆ ಮಹತ್ವ
ಶಾಲೆಗಳಿಗೆ ನೀಡುವ ಮಹತ್ವವನ್ನು ಗ್ರಂಥಾಲಯಗಳಿಗೆ ನೀಡುವ ಅವಶ್ಯಕತೆ ಇದೆ. ಜಗಳೂರು ಪಟ್ಟಣದಲ್ಲಿ ಮುಖ್ಯಗ್ರಂಥಾಲಯವನ್ನು ಬಹಳ ಸುಸಜ್ಜಿತವಾಗಿ ನಿರ್ಮಾಣ ಮಾಡಿ ನಡೆಸಲಾಗುತ್ತಿದೆ. ಗ್ರಂಥಾಲಯಗಳು ಶಿಕ್ಷಕ ರಹಿತವಾದ ವಿಶ್ವವಿದ್ಯಾನಿಲಯಗಳಿದ್ದಂತೆ, ಗ್ರಂಥಾಲಯಗಳಲ್ಲಿ ಅಧ್ಯಯನ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಓದುಗರನ್ನು ಸಂದರ್ಶಿಸಿದಾಗ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದು ಕೆಎಎಸ್ ಅಧಿಕಾರಿಯಾಗುವ ಆಸೆ ಇದ್ದು ಮುಂದಿನ ದಿನಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಗ್ರಂಥಾಲಯಗಳನ್ನು ಅಭಿವೃದ್ದಿ ಮಾಡುವ ಗುರು ಹೊಂದಲಾಗಿದೆ ಎಂದರು.
8 ನೇ ತರಗತಿವರೆಗೆ ವಿಸ್ತರಣೆ
ಹುಚ್ಚಂಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಮಾತ್ರ ಇದ್ದು ಇದನ್ನು 8 ನೇ ತರಗತಿಯವರೆಗೆ 2025-26 ಶೈಕ್ಷಣಿಕ ವರ್ಷದಿಂದಲೇ ವಿಸ್ತರಣೆ ಮಾಡಲು ಆದೇಶಿಸಲಾಗಿದೆ. 9-10 ನೇ ತರಗತಿಯನ್ನು ಇಲ್ಲಿಯೇ ಮುಂದುವರೆಗೆಸಲು ಮಕ್ಕಳ ಸಂಖ್ಯೆಯನ್ನಾಧರಿಸಿ ಮುಂದಿನ ನಿರ್ಧಾರವನ್ನು ಇಲಾಖೆ ಕೈಗೊಳ್ಳಲಿದೆ, ಶಾಲೆಯ ಅಭಿವೃದ್ದಿಗೆ ರೂ.25 ಲಕ್ಷಗಳನ್ನು ಕೇಳಿದ್ದು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಜಗಳೂರು ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೆಂದ್ರಪ್ಪ ಮಾತನಾಡಿ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಅವರು ತಮ್ಮ ಅನುದಾನದಲ್ಲಿ ಹುಟ್ಟೂರಿನ ಶಾಲೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ, ಇದೇ ಮಾದರಿಯಲ್ಲಿ ಚಿಮ್ಮನಕಟ್ಟೆಯಲ್ಲಿಯು ಹೈಟೆಕ್ ಶಾಲೆ ನಿರ್ಮಾಣ ಮಾಡಲಾಗುತ್ತದೆ.
ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲು ಉದ್ದೇಶಿಸಿದ್ದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಜಗಳೂರಿಗೆ ಬಾಲಕಿಯರ ಪದವಿ ಪೂರ್ವ ಕಾಲೇಜು ಬಹು ದಿನಗಳ ಬೇಡಿಕೆಯಾಗಿದ್ದು ಆರಂಭಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.
ವಿಧಾನಪರಿಷತ್ತಿನ ಸದಸ್ಯರಾದ ರವಿಕುಮಾರ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ಈ ಶಾಲೆಯಲ್ಲಿ ನಾನು ಓದಿದ್ದು ನಮ್ಮ ತಾಯಿಯ ಆಸೆಯಂತೆ ನಮ್ಮೂರಿಗೆ ಶಾಲಾ ಕಟ್ಟಡ ನಿರ್ಮಿಸಲು ಶ್ರಮಿಸಿದ್ದೇನೆ. ಈ ಹಿಂದೆ ನಾಲ್ಕನೇ ತರಗತಿವರೆಗೆ ಮಾತ್ರ ಇದ್ದು ಈಗ 7 ನೇ ತರಗತಿವರಗೆ ಇದೆ. ಇಲ್ಲಿನ ಜನರು ಶ್ರಮ ಜೀವಿಗಳಾಗಿದ್ದು ಕೆಲಸಕ್ಕಾಗಿ ವಲಸ ಹೋಗುತ್ತಾರೆ. ಆದ್ದರಿಂದ ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಮಾರ್ಟ್ ಕ್ಲಾಸ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಶಾಲೆಯಲ್ಲಿ ಕಲ್ಪಿಸಿದ್ದು ಇದಕ್ಕೆ ರಾಜ್ಯಸಭಾ ಸದಸ್ಯರ ಅನುದಾನ ಮತ್ತು ವಿಧಾನ ಪರಿಷತ್‍ರ ನಿಧಿಯಲ್ಲಿ 2.5 ಕೋಟಿ ನೀಡಲಾಗಿದೆ, ಒಟ್ಟು ರೂ.3.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಶಾಲೆ ನಿರ್ಮಿಸಿದ್ದು ಕಂಪ್ಯೂಟರ್ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ಇಲಾಖೆಯಿಂದ ರೂ.25 ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಮಾತನಾಡಿ ಗ್ರಾಮದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕಬಾರದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಪ್ರೊ;ಎಸ್.ವಿ. ಸಂಕನೂರು, ಕೆ.ಎಸ್. ನವೀನ್, ಚಿದಾನಂದಗೌಡ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ದಿದ್ದಿಗಿ ಗ್ರಾ.ಪಂ ಅಧ್ಯಕ್ಷರಾದ ಗುತ್ಯಮ್ಮ ಸಿದ್ದಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಪಿ.ಟಿ.ರಮೇಶ, ದಾನಿಗಳಾದ ಸ್ಪೇಸ್ ಮ್ಯಾನೇಜ್‍ಮೆಂಟ್ ಸಲ್ಯೂಷನ್ ಲಿಮಿಟೆಡ್ ಡಾ.ದಿನೇಶ್, ವೋಲ್ಲೋ ಗ್ರೂಪ್ ಜಿ.ವಿ.ರಾವ್, ಜಿ.ಪಂ.ಉಪಕಾರ್ಯದರ್ಶಿ ಕೃಷ್ಣನಾಯ್ಕ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9989346243

ದಿನದ ಸುದ್ದಿ
ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಸಂಘಟಿತರಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ

ಸುದ್ದಿದಿನ,ದಾವಣಗೆರೆ:ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಬುಧವಾರ(ಫೆ.5) ರಂದು ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತಾನಾಡಿದರು. ಸವಿತಾ ಸಮಾಜದ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು, ಆಗ ಮಾತ್ರ ಶ್ರೀಮಂತ, ಬಡವ, ಮೇಲು ಕೀಳು ಎಂಬ ಮನೋಭಾವನೆ ಬರಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಸಮಾಜದಲ್ಲಿ ಇರುವಂತಹ ತೊಡಕುಗಳನ್ನು ತೊರೆದು ನಡೆದರೆ ಮಾತ್ರ ಅಭಿವೃದ್ದಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ವೃತ್ತಿ ಬದುಕಿಗೆ ಅನುಕೂಲವಾಗಲು ಪರಿಕರಗಳ ಕಿಟ್ ನೀಡಲು ಮತ್ತು ಪಾಲಿಕೆಯಲ್ಲಿರುವ ಮಳಿಗೆಗಳನ್ನು ಇವರಿಗೆ ಕಡಿಮೆ ಬಾಡಿಕೆ ನೀಡಬೇಕು ಎಂದರು. ಹೊಂಡದ ಸರ್ಕಲ್‌ನಲ್ಲಿರುವ ಸಮುದಾಯದ ಭವನದ ಕಟ್ಟಡವನ್ನು ಪೂರ್ಣಗೊಳಿಸಲು ಸಚಿವರೊಂದಿಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ಮಾರ್ಗದರ್ಶಿಯಾಗಿದೆ. ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ. ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ದೂಢಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಪಾಲಿಕೆ ಮಹಾಪೌರರಾದ ಚಮನ್ ಸಾಬ್ ಕೆ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ತಹಶೀಲ್ದಾರ್ ಅಶ್ವಥ್, ಸಂಘದ ಜಿಲ್ಲಾಧ್ಯಕ್ಷರಾದ ಬಾಲರಾಜ್, ವಕೀಲರಾದ ರಂಗಸ್ವಾಮಿ ಹಾಗೂ ಸಮಾಜದ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ನ್ಯಾಕ್ ಗ್ರೇಡ್ ನೀಡಲು ಲಂಚ ಸ್ವೀಕಾರ ; ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ

ಸುದ್ದಿದಿನ,ದಾವಣಗೆರೆ: ಆಂಧ್ರಪ್ರದೇಶದ ಗುಂಟೂರಿನಲ್ಲಿ ಕೆಎಲ್‌ಇಎಫ್ ವಿವಿಗೆ ನ್ಯಾಕ್ ಕಮಿಟಿಯಿಂದ ಎ++ ಗ್ರೇಡ್ ನೀಡುವಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಸೇರಿದಂತೆ 10 ಜನರನ್ನು ಸಿಬಿಐ ಬಂಧಿಸಿದೆ.
ನ್ಯಾಕ್ ತಂಡದ ಅಧ್ಯಕ್ಷರು ಮತ್ತು ಜೆ ಎನ್ ಯು ಪ್ರೊಫೆಸರ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ 10 ಸದಸ್ಯರನ್ನು ಬಂಧಿಸಲಾಗಿದೆ.
ಗಾಯತ್ರಿ ದೇವರಾಜ್ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಂದುವರಿದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವಾಗ, ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ದೇಶಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿತು. ಈ ವೇಳೆ 37 ಲಕ್ಷ ರೂಪಾಯಿ ನಗದು, 6 ಲ್ಯಾಪ್‌ಟಾಪ್‌ಗಳು, ಐಫೋನ್ 16 ಪ್ರೊ, ಚಿನ್ನದ ನಾಣ್ಯ ಸೇರಿದಂತೆ ಹಲವು ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಸಂಘಟಿತರಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ
-
ದಿನದ ಸುದ್ದಿ7 days ago
ಅಂತಾರಾಷ್ಟ್ರೀಯ, ನವೋದಯ ಮಟ್ಟದ ಉತ್ಕೃಷ್ಟ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕು: ಜಿ. ಬಿ. ವಿನಯ್ ಕುಮಾರ್
-
ದಿನದ ಸುದ್ದಿ6 days ago
ನ್ಯಾಕ್ ಗ್ರೇಡ್ ನೀಡಲು ಲಂಚ ಸ್ವೀಕಾರ ; ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ
-
ದಿನದ ಸುದ್ದಿ15 hours ago
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್‍ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ