ದಿನದ ಸುದ್ದಿ
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
- ಡಾ॥ ಶ್ರೀನಿವಾಸ ಕಕ್ಕಿಲ್ಲಾಯ,ಡಾ॥ ಬಾಲಸರಸ್ವತಿ,
ಮಂಗಳೂರು
ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು ಏನು ಎಂದು ತಿಳಿದುಕೊಂಡರೆ ಹೆದರಿಕೊಳ್ಳುವ ಅಗತ್ಯವೇ ಬರುವುದಿಲ್ಲ.
ಮತ್ತೆ ಕೊರೋನ ಹರಡುತ್ತಿರುವುದೇಕೆ?
ಒಮ್ಮೆ ಕೊರೋನ ಸೋಂಕು ತಗಲಿ, ರೋಗಲಕ್ಷಣಗಳನ್ನು ಹೊಂದಿದ್ದು, ರೋಗ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡವರಿಗೆ ಮತ್ತೊಮ್ಮೆ ಕೊರೋನ ಸೋಂಕು ತಗಲುವುದಿಲ್ಲ. ಆದ್ದರಿಂದ ಈ ಹಿಂದೆ ಯಾರಿಗೆ ಸೋಂಕು ತಗಲಿಲ್ಲವೋ, ಅಂಥವರು ಈಗ ಸೋಂಕಿತರಾಗುತ್ತಿದ್ದಾರೆ. ನಗರಗಳಲ್ಲೇ ಈ ಸೋಂಕುಗಳು ಹೆಚ್ಚು ಸಂಭವಿಸುತ್ತಿವೆಯಾದರೂ, ಹಳ್ಳಿಗಳಲ್ಲೂ ಕಂಡುಬರುತ್ತಿವೆ.
ಕಳೆದ ಒಂದು ವರ್ಷದಿಂದ ಮನೆಯೊಳಗೇ ಇದ್ದ ಅನೇಕ ಹಿರಿಯ ವಯಸ್ಕರು ಮತ್ತು ವಸತಿ ಸಮುಚ್ಚಯಗಳ ನಿವಾಸಿಗಳು ಈಗ ಹೊರಬರುತ್ತಿರುವುದರಿಂದ, ಲಾಕ್‌ಡೌನ್ ಕಾರಣಕ್ಕೆ ತಮ್ಮ ಹಳ್ಳಿಗಳಿಗೆ ತೆರಳಿದ್ದವರು ಈಗ ಮತ್ತೆ ನಗರಕ್ಕೆ ಮರಳುತ್ತಿರುವುದರಿಂದ, ಮತ್ತೆ ಆರಂಭವಾಗಿರುವ ಸಭೆ, ಸಮಾರಂಭಗಳಲ್ಲಿ ಜನರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗುತ್ತಿರುವುದರಿಂದ ಒಮ್ಮಿಂದೊಮ್ಮೆಗೇ ಸೋಂಕು ಹರಡುವುದಕ್ಕೆ ಕಾರಣವಾಗುತ್ತಿವೆ. ಮಾರ್ಚ್ ತಿಂಗಳಿಂದ ಲಸಿಕೆಗಳನ್ನು ಪಡೆಯುವುದಕ್ಕೆಂದು ಹೊರಬಂದವರಲ್ಲಿ ಕೆಲವರೂ ಸೋಂಕಿಗೀಡಾಗುತ್ತಿದ್ದಾರೆ.
ಕೊರೋನ ಹರಡುವಿಕೆ ಕಡಿಮೆಯಾಯಿತೆಂದು ವೈದ್ಯರೂ, ಆಸ್ಪತ್ರೆಗಳೂ ಕೊರೋನ ಸೋಂಕಿತರನ್ನು ಪ್ರತ್ಯೇಕವಾಗಿ ಪರೀಕ್ಷಿಸುವ ವ್ಯವಸ್ಥೆಯನ್ನು ಬಿಟ್ಟು ಮೊದಲಿನಂತೆಯೇ ಎಲ್ಲರನ್ನೂ ಜೊತೆಯಾಗಿ ಇರಲು ಅವಕಾಶ ಮಾಡಿಕೊಟ್ಟಿರುವ ಸಾಧ್ಯತೆಗಳೂ ಇವೆ. ಈ ಕೊರೋನ ವೈರಸ್ ಶಾಶ್ವತವಾಗಿ ಇಲ್ಲಿರಲಿದೆ, ಎಷ್ಟೇ ಲಾಕ್ ಡೌನ್ ಇತ್ಯಾದಿ ಮಾಡಿದರೂ ಅದು ಹರಡದಂತೆ ತಡೆಯುವುದು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ.
ಕೊರೋನ ಮತ್ತೆ ಹರಡುತ್ತಿರುವಾಗ ಹಲವರಲ್ಲಿ ರೂಪಾಂತರಿತ ಬಗೆಗಳು ಕಂಡುಬರುತ್ತಿವೆ ಎನ್ನುವುದು ನಿಜವಿದ್ದರೂ, ಕೊರೋನ ವೈರಸ್‌ನಲ್ಲಿ ರೂಪಾಂತರಗಳಾಗುವುದು ನಿತ್ಯದ ಕ್ರಿಯೆಯಾಗಿರುವುದರಿಂದ ಆ ಬಗ್ಗೆ ಅಚ್ಚರಿ ಪಡಬೇಕಾಗಿಲ್ಲ, ಮಾತ್ರವಲ್ಲ, ಇವುಗಳಿಂದ ಕೊರೋನ ಹೆಚ್ಚು ಅಪಾಯಕಾರಿಯಾಗಿದೆ ಎನ್ನುವುದಕ್ಕೂ ಆಧಾರಗಳಿಲ್ಲ. ಆದ್ದರಿಂದ ಇದಕ್ಕೆ ವಿಶೇಷವಾದ ಮಹತ್ವವನ್ನು ನೀಡುವ ಅಗತ್ಯವಿಲ್ಲ.
ಒಟ್ಟಿನಲ್ಲಿ, ಕಳೆದ ಬಾರಿ ಸೋಂಕಿತರಾಗದೆ ಇದ್ದವರಲ್ಲಿ ಹಲವರು ಈಗ ಒಮ್ಮೆಗೇ ಸೋಂಕಿತರಾಗುತ್ತಿದ್ದಾರೆ, ಅದರಿಂದಾಗಿ ಸಮಸ್ಯೆಗೀಡಾಗುವವರ ಸಂಖ್ಯೆಯೂ ಒಮ್ಮೆಗೇ ಏರುತ್ತಿದೆ, ಆಸ್ಪತ್ರೆಗಳಲ್ಲಿ ಸ್ಥಳವಿಲ್ಲದೆ ಚಿಕಿತ್ಸೆಗೆ ಸಮಸ್ಯೆಗಳಾಗುತ್ತಿವೆ. ಆದರೆ ಅಷ್ಟೇ ಬೇಗನೆ, ಒಂದೆರಡು ತಿಂಗಳೊಳಗೆ, ಈ ಅಲೆಯು ಇಳಿಯುವ ಎಲ್ಲಾ ಸಾಧ್ಯತೆಗಳೂ ಇವೆ; ಈಗಾಗಲೇ ಇಂಥ ಏರಿಕೆಯನ್ನು ಅನುಭವಿಸಿರುವ ದೇಶಗಳಲ್ಲೂ ಹಾಗೆಯೇ ಆಗಿದೆ. ಈಗ ಸೋಂಕು ಮೊದಲಿಗಿಂತ ಹೆಚ್ಚು ಮಾರಕವಾಗಿರುತ್ತದೆ ಎಂಬ ಭಯವೂ ಅಗತ್ಯವಿಲ್ಲ; ಈ ಒಂದು ವರ್ಷದಲ್ಲಿ ನಮ್ಮ ದೇಶದಲ್ಲಿ ಕೊರೋನ ಸೋಂಕು ಹೇಗೆ ವರ್ತಿಸಿತ್ತೋ, ಯಾವ ವರ್ಗದ ಜನರಲ್ಲಿ ಸಮಸ್ಯೆಗಳನ್ನುಂಟು ಮಾಡಿತ್ತೋ, ಈ ಬಾರಿಯೂ ಹಾಗೆಯೇ ಅದು ವರ್ತಿಸಲಿದೆ.
ಈಗ ಕೊರೋನ ಸೋಂಕನ್ನು ಎದುರಿಸುವುದು ಹೇಗೆ?
ಜನರ ಜವಾಬ್ದಾರಿ: ವೈಯಕ್ತಿಕ ಎಚ್ಚರಿಕೆಯಿಂದ ಸೋಂಕು ಹರಡದಂತೆ ತಡೆಯುವುದು, ಸೋಂಕು ಉಲ್ಬಣಿಸದಂತೆ ತಡೆಯುವುದು, ಉಲ್ಬಣಿಸಿದರೆ ತಡ ಮಾಡದೆ ಚಿಕಿತ್ಸೆಗೆ ತೆರಳುವುದು.
ಸರಕಾರದ ಜವಾಬ್ದಾರಿ: ಜನರಿಗೆ ಧೈರ್ಯ ತುಂಬುವುದು, ಗಂಭೀರ ಸಮಸ್ಯೆಗಳಾದವರ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು, ಕಷ್ಟದಲ್ಲಿರುವವರಿಗೆ ನೆರವಾಗುವುದು
ಮಾಧ್ಯಮಗಳ ಜವಾಬ್ದಾರಿ: ವಸ್ತುನಿಷ್ಠ ಮಾಹಿತಿಯೊದಗಿಸಿ ಜನರಿಗೆ ಧೈರ್ಯ ತುಂಬುವುದು, ನೆರವಾಗುವುದು ಆದರೆ ಇಂದು ಆಗುತ್ತಿರುವುದು ಇದಕ್ಕೆ ತೀರಾ ವ್ಯತಿರಿಕ್ತ.
ಜನರು ಸೋಂಕಿನ ಬಗ್ಗೆ, ಅದನ್ನು ನಿಭಾಯಿಸುವ ಬಗ್ಗೆ ಸ್ಪಷ್ಟ ಅರಿವಿಲ್ಲದೆ ಭೀತಿ, ಗೊಂದಲ, ಹತಾಶೆಯಲ್ಲಿದ್ದಾರೆ;
ಸರಕಾರವು ಕೊರೋನ ನಿಯಂತ್ರಿಸುವುದಕ್ಕೆಂದು ಜನರನ್ನು ನಿಯಂತ್ರಿಸಲು ನಿಯಮಗಳನ್ನು ಮಾಡುತ್ತಿದೆ;
ಮಾಧ್ಯಮಗಳು ಎಲ್ಲವನ್ನೂ ಅತಿರಂಜಿತಗೊಳಿಸಿ ಭೀತಿ, ಗೊಂದಲಗಳನ್ನು ಹೆಚ್ಚಿಸುತ್ತಿವೆ.
ಕಳೆದ ವರ್ಷದಲ್ಲಿ ರಾಜ್ಯದಲ್ಲೇ ಮೂರು-ನಾಲ್ಕು ಕೋಟಿ ಜನರಿಗೆ ಕೊರೋನ ತಗಲಿದ್ದಾಗ ದೊರೆತಿದ್ದ ಅನುಭವವನ್ನು ಜಾಣ್ಮೆಯಿಂದ ಬಳಸಿಕೊಳ್ಳುವ ಬದಲಿಗೆ ಆಗ ಮಾಡಿರುವ ಎಲ್ಲಾ ತಪ್ಪುಗಳನ್ನು ಮತ್ತೆ ಮಾಡಲು ಈಗಾಗಲೇ ಹೊರಟಾಗಿದೆ. ಆದರೆ ಇನ್ನಷ್ಟು ತಪ್ಪುಗಳನ್ನು ಮಾಡುವ ಮುನ್ನ ಈ ಕೆಳಗಿನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೊಳ್ಳೆಯದು:
-ಕೊರೋನ ಇಲ್ಲಿ ಶಾಶ್ವತ, ಅದರ ಹರಡುವಿಕೆಯನ್ನು ತಡೆಯುವುದು ಅಸಾಧ್ಯ. ಕೊರೋನ ನೆಪದಲ್ಲಿ ನಿತ್ಯಜೀವನವನ್ನು ಶಾಶ್ವತವಾಗಿ ಸ್ತಬ್ಧಗೊಳಿಸಲು ಸಾಧ್ಯವಿಲ್ಲ.
-ಒಂದು ವರ್ಷ ಕಾಲ ಬಗೆಬಗೆಯ ನಿರ್ಬಂಧಗಳನ್ನೂ, ಅನಿಶ್ಚಿತತೆಯನ್ನೂ ಹೇರಿದ್ದರಿಂದಾಗಿ ಮತ್ತು ಜನರಿಗೆ ಯಾವ ರೀತಿಯಲ್ಲೂ ನೆರವು ನೀಡದ್ದರಿಂದಾಗಿ ಜನರು ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದಾರೆ. ಆದ್ದರಿಂದ ಈ ಬಾರಿ ಕೊರೋನದಿಂದ ತೀವ್ರ ಸಮಸ್ಯೆಗೀಡಾಗುವವರು ಇನ್ನಷ್ಟು ಕಷ್ಟಕ್ಕೀಡಾಗಲಿದ್ದಾರೆ.
-ಒಂದು ವರ್ಷದ ಅನುಭವದಿಂದ ಕಲಿತು ಕೊರೋನ ಚಿಕಿತ್ಸೆಗೆಂದು ವಿಶೇಷ ಸೌಲಭ್ಯಗಳನ್ನು ಮಾಡಬೇಕಿತ್ತು, ಆದರೆ ಅದಾಗಲಿಲ್ಲ. ಕಳೆದ ಬಾರಿ ಕೊರೋನ ಆರೈಕೆ ಕೇಂದ್ರಗಳನ್ನು ಮಾಡಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ 50% ಹಾಸಿಗೆ ಕಾದಿರಿಸಿದ್ದು ಹೆಚ್ಚೇನೂ ನೆರವಾಗಲಿಲ್ಲ.
-ಕೊರೋನ ತೊಡಗಿ ಒಂದು ವರ್ಷವಾದರೂ ಅದರ ಚಿಕಿತ್ಸೆಗೆ ವೈಜ್ಞಾನಿಕವಾದ ಮಾರ್ಗಸೂಚಿಯನ್ನು ಇನ್ನೂ ಸಿದ್ಧಪಡಿಸಿಯೇ ಇಲ್ಲ.
ಆದ್ಯತೆಗಳೇನಿರಬೇಕು?
1. ಕೊರೋನ ಸೋಂಕನ್ನು ನಿಯಂತ್ರಿಸುವುದು ಕಷ್ಟ ಎನ್ನುವುದನ್ನು ಒಪ್ಪಿಕೊಳ್ಳಬೇಕು
2. ಕೊರೋನ ಸೋಂಕಿತರು ಎಲ್ಲಿ, ಎಷ್ಟು ಯಾರು ಇದ್ದಾರೆ ಎಂದು ಬೆಂಬತ್ತುವ ಬದಲು ಕೊರೋನದಿಂದ ತೀವ್ರ ಸಮಸ್ಯೆಗಳಾಗದಂತೆ ತಡೆಯಲು, ತೊಂದರೆಗಳಾದವರನ್ನು ಕೂಡಲೇ ಗುರುತಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು.
3. ಯಾರಲ್ಲೇ ಆದರೂ ಯಾವುದೇ ಕೊರೋನ ರೋಗಲಕ್ಷಣಗಳು (ತಲೆ ನೋವು, ಮೈಕೈ ನೋವು, ಗಂಟಲು-ಮೂಗು ಕೆರೆತ, ಕೆಮ್ಮು, ವಾಸನೆ ತಿಳಿಯದಾಗುವುದು, ಭೇದಿ) ತೊಡಗಿದರೆ ಅದನ್ನು ಕೊರೋನ ಸೋಂಕೆಂದೇ ಪರಿಗಣಿಸಬೇಕು; ಅಂಥವರಲ್ಲಿ ಮತ್ತವರ ಸಂಪರ್ಕಿತರೆಲ್ಲರಲ್ಲಿ ಕೊರೋನ ಆರ್‌ಟಿಪಿಸಿಆರ್ ಅಥವಾ ಆರ್‌ಎಟಿ ಮಾಡಿಸುವ ಅಗತ್ಯವಿಲ್ಲ; ಯಾರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೋ ಅವರಿಗಷ್ಟೇ ಈ ಪರೀಕ್ಷೆ ಮಾಡಿಸಿದರೆ ಸಾಕು.
4. ಶೇ.99ಕ್ಕೂ ಹೆಚ್ಚು ಸೋಂಕಿತರಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲವಾದ್ದರಿಂದ, ಮತ್ತು ಸಮಸ್ಯೆಗಳಾಗುವುದಿದ್ದರೂ 7-10 ದಿನಗಳಲ್ಲಾಗುವುದರಿಂದ, ಎಲ್ಲಾ ಸೋಂಕಿತರನ್ನು ಅವರವರ ಮನೆಗಳಲ್ಲೇ ಉಳಿದು ನಿಗಾ ವಹಿಸುವಂತೆ ಮಾಡಬೇಕು. ಯಾವುದೇ ಸಮಸ್ಯೆಗಳಿಲ್ಲದವರು ಆಸ್ಪತ್ರೆಗಳಿಗೆ ಪರೀಕ್ಷೆಗಾಗಿ ಹೋದರೆ, ಅಥವಾ ದಾಖಲಾದರೆ, ಯಾರಿಗೆ ಅಗತ್ಯವೋ ಅವರಿಗೆ ಆಸ್ಪತ್ರೆ ಸೌಲಭ್ಯಗಳು ದೊರೆಯದಂತಾಗುತ್ತದೆ.
5. ತೀವ್ರ ಸಮಸ್ಯೆಗಳಾಗುವ ಲಕ್ಷಣಗಳು ತೊಡಗಿದೊಡನೆ ತಡ ಮಾಡದೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಹೇಳಬೇಕು.
ಜನರೇನು ಮಾಡಬೇಕು?
ಸೋಂಕಿನ ಲಕ್ಷಣಗಳಿದ್ದವರು ಮಾಡಬೇಕಾದದ್ದು:
1. ಹೆಚ್ಚಿನವರಲ್ಲಿ ಕೊರೋನ ಸೋಂಕು ಗಾಳಿಯ ಮೂಲಕ, ಪರಸ್ಪರ ಹತ್ತಿರ, ಎದುರುಬದುರಾಗಿ, ಮಾತಾಡುವುದರಿಂದಲೇ (ಅಥವಾ ಕೆಮ್ಮು, ಸೀನುಗಳಿಂದ) ಹರಡುತ್ತದೆ, ಯಾವುದೇ ವಸ್ತುಗಳಿಂದ ಹರಡುವುದಿಲ್ಲ.
2. ಕೊರೋನ ಹರಡುವುದನ್ನು ತಡೆಯುವ ಪ್ರಾಥಮಿಕ ಜವಾಬ್ದಾರಿ ಸೋಂಕಿತರದ್ದೇ ಆಗಿದೆ. ಸೋಂಕಿನ ಲಕ್ಷಣಗಳಿರುವವರು ಆ ಕೂಡಲೇ (ತಲೆ ನೋವು ಇತ್ಯಾದಿ ತೊಡಗಿದೊಡನೆ) ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು; ಮಾತಾಡುವುದನ್ನು ಕಡಿಮೆ ಮಾಡಬೇಕು, ಮೆತ್ತಗೆ ಮಾತಾಡಬೇಕು, ಮಾತಾಡುವಾಗ ಕನಿಷ್ಠ ಆರಡಿ ದೂರದಲ್ಲಿರಬೇಕು, ಅದು ಸಾಧ್ಯವಿಲ್ಲದಿದ್ದರೆ ಮಾಸ್ಕ್ ಧರಿಸಬೇಕು; ಆದರೆ ಅಂತರವನ್ನು ಕಾಯದೆ ಮಾಸ್ಕ್ ಮಾತ್ರ ಧರಿಸುವುದರಿಂದ ಸೋಂಕು ಹರಡುವುದನ್ನು ತಡೆಯುವುದಕ್ಕೆ ಸಾಧ್ಯವಾಗದು. ಕೆಮ್ಮುವಾಗ, ಸೀನುವಾಗ ತಮ್ಮ ತೋಳಿನಿಂದ ಮುಖವನ್ನು ಮುಚ್ಚಬೇಕು.
3. ಸೋಂಕಿನ ಲಕ್ಷಣಗಳಿರುವವರು ಕನಿಷ್ಠ 6-7 ದಿನ ತಮ್ಮ ಮನೆಗಳಲ್ಲಿ ಅಥವಾ ಕೊಠಡಿಗಳಲ್ಲಿ ಉಳಿಯಬೇಕು; ಕೆಲಸಕ್ಕೆ, ವೈದ್ಯರಲ್ಲಿಗೆ, ಆಸ್ಪತ್ರೆಗೆ, ಲ್ಯಾಬ್‌ಗೆ, ಔಷಧದ ಅಂಗಡಿಗೆ ಹೋಗಬಾರದು. ಸಾರ್ವಜನಿಕ ಸ್ಥಳಗಳಿಗೆ, ಸಭೆ-ಸಮಾರಂಭಗಳಿಗೆ ಹೋಗಲೇಬಾರದು.
4. ಮನೆಯಲ್ಲಿ ಉಳಿದಾಗ ತಮ್ಮ ವೈದ್ಯರಿಗೆ ಅಥವಾ ಸರಕಾರದ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು.
5. ಮನೆಯಲ್ಲಿ ಯಾ ಕೊಠಡಿಯಲ್ಲಿ ಇತರರಿಂದ ಆರಡಿ ದೂರವನ್ನು ಸದಾ ಪಾಲಿಸಬೇಕು, ಮೇಲೆ ಹೇಳಿದ ಕ್ರಮಗಳನ್ನು ಪಾಲಿಸಬೇಕು. ಮನೆಯಲ್ಲಿ ಹಿರಿಯ ವಯಸ್ಕರು ಅಥವಾ ಅನ್ಯ ರೋಗಗಳುಳ್ಳವರು ಇದ್ದರೆ ಅವರನ್ನು ಪ್ರತ್ಯೇಕಿಸಬೇಕು.
6. ಸೋಂಕಿತರು ತಮ್ಮ ದೇಹಸ್ಥಿತಿಯ ಮೇಲೆ ನಿಗಾವಹಿಸಬೇಕು. ಕೊರೋನ ರೋಗವು ನಿಧಾನವಾಗಿ ಏಳೆಂಟು ದಿನಗಳಲ್ಲಿ ಉಲ್ಬಣಿಸುತ್ತದೆ, 10-12 ದಿನಗಳಲ್ಲಿ ತೀವ್ರಗೊಳ್ಳುತ್ತದೆ. ರೋಗಲಕ್ಷಣಗಳು ಹೆಚ್ಚುತ್ತಿದ್ದರೆ, ಬಳಲಿಕೆ, ಕೆಮ್ಮು ಹೆಚ್ಚಿ, ಉಸಿರಾಟದ ಸಮಸ್ಯೆಗಳು ತೊಡಗಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಎಲ್ಲರೂ ಪಲ್ಸ್ ಆಕ್ಸಿಮೀಟರ್ ಬಳಸಿ 2 ವಾರಗಳ ವರೆಗೆ ತಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು ನೋಡಿಕೊಳ್ಳುತ್ತಿರಬೇಕು, ಅದು 95%ಕ್ಕಿಂತ ಕೆಳಗಿಳಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಲು ಸಿದ್ಧರಾಗಬೇಕು.
7. ಕೊರೋನ ಸೋಂಕು ಯಾವುದೇ ಚಿಕಿತ್ಸೆಯಿಲ್ಲದೆ ತಾನಾಗಿ ವಾಸಿಯಾಗುವುದರಿಂದ ರೋಗವು ಉಲ್ಬಣಗೊಂಡರಷ್ಟೇ ಆಸ್ಪತ್ರೆಗೆ ಹೋದರೆ ಸಾಕಾಗುತ್ತದೆ, ಸಮಸ್ಯೆಗಳಾಗದವರು ಮನೆಯಲ್ಲೇ ಇದ್ದು ಗುಣ ಹೊಂದಬಹುದು.
ಇತರರು ವಹಿಸಬೇಕಾದ ಎಚ್ಚರಿಕೆಗಳು
1. ಕೊರೋನ ಸೋಂಕಿತರ ಮನೆಯವರು ಅವರಿಂದ ಆರಡಿ ಅಂತರವನ್ನು ಕಾಯ್ದುಕೊಳ್ಳಬೇಕು, ಮಾತುಕತೆಯನ್ನು ಕನಿಷ್ಠಗೊಳಿಸಬೇಕು.
2. ಬೇರೆಯವರ ಜೊತೆ ಮಾತಾಡುವಾಗಲೂ ಆರಡಿ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.
3. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವಾಗಲೂ ಬೇರೆಯವರೊಡನೆ ಮಾತಾಡುವಾಗ ಅಂತರವನ್ನು ಕಾಯ್ದುಕೊಳ್ಳಬೇಕು; ಅಲ್ಲಿಂದ ಮನೆಗೆ ಮರಳಿದ ಬಳಿಕ ಕನಿಷ್ಠ ಐದು ದಿನಗಳ ಕಾಲ ತಲೆ ನೋವು, ಮೈಕೈ ನೋವು ಇತ್ಯಾದಿಗಳ ಬಗ್ಗೆ ನಿಗಾ ವಹಿಸಬೇಕು, ಮತ್ತು ಮನೆಯಲ್ಲಿ ಹಿರಿಯರು ಅಥವಾ ಅನ್ಯ ರೋಗಗಳುಳ್ಳವರು ಇದ್ದರೆ ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು.
4. ಎಲ್ಲೇ ಆಗಲಿ, ಕೊರೋನ ಸೋಂಕಿತರ ಸಂಪರ್ಕಕ್ಕೆ ಬಂದರೆ ಆ ಬಳಿಕ ರೋಗಲಕ್ಷಣಗಳು ಆರಂಭವಾಗುವುದನ್ನು ಸೂಕ್ಷವಾಗಿ ಗಮನಿಸಬೇಕು, ಇತರರಿಗೆ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಎಚ್ಚರಿಕೆಗಳನ್ನು ಪಾಲಿಸಬೇಕು.
5. ಕಳೆದ ಬಾರಿ ಕೊರೋನ ಸೋಂಕಿತರಾದವರು ಈ ಬಾರಿ ಮತ್ತೆ ಸೋಂಕಿತರಾಗುವ ಸಾಧ್ಯತೆಗಳು ಅತ್ಯಂತ ಅಪರೂಪ ಅಥವಾ ಇಲ್ಲವೆಂದೇ ಹೇಳಬಹುದು. ಆದ್ದರಿಂದ ಅಂಥವರು ಈ ಮೊದಲೇ ಪಲ್ಸ್ ಆಕ್ಸಿಮೀಟರ್ ಖರೀದಿಸಿದ್ದರೆ ಅವನ್ನು ಇತರರಿಗೆ ನೀಡಿ ನೆರವಾಗಬಹುದು. ಹಾಗೆಯೇ, ಸೋಂಕಿತರಿಗೆ ಅನ್ಯ ಸಹಾಯವನ್ನು ನೀಡುವುದಕ್ಕೂ ಮುಂದೆ ಬರಬಹುದು.
ಕೊರೋನ ರೋಗವು ಉಲ್ಬಣಿಸುವುದಕ್ಕೆ ದೇಹದ ರೋಗರಕ್ಷಣಾ ವ್ಯವಸ್ಥೆಯ ಅಪನಿಯಂತ್ರಣವೇ ಕಾರಣವಾಗಿದ್ದು, ಇಂದಿನ ಆಧುನಿಕ ಆಹಾರ ಮತ್ತು ವ್ಯಾಯಾಮಗಳೇ ಇಲ್ಲದ ಜೀವನ ಶೈಲಿಗಳೇ ಅದಕ್ಕೆ ಮುಖ್ಯ ಕಾರಣಗಳಾಗಿವೆ. ಆದ್ದರಿಂದ ಈ ಬಗ್ಗೆ ಜನರಿಗೆ ಮಾಹಿತಿಯೊದಗಿಸುವುದು ಅತ್ಯಗತ್ಯವಾಗಿದೆ.
ಸಕ್ಕರೆ, ಎಲ್ಲಾ ಸಿಹಿತಿನಿಸುಗಳು, ಹಣ್ಣುಗಳು ಮತ್ತು ಹಣ್ಣಿನ ರಸಗಳು, ಮೈದಾ, ಬ್ರೆಡ್, ಬಿಸ್ಕತ್ತು, ನೂಡಲ್ಸ್ ಇತ್ಯಾದಿ ಸಂಸ್ಕರಿತ ಆಹಾರಗಳನ್ನು ಮತ್ತು ಮದ್ಯಪಾನ ಹಾಗೂ ಧೂಮಪಾನಗಳನ್ನು ವರ್ಜಿಸುವಂತೆ ಅಥವಾ ಬಹಳಷ್ಟು ಕಡಿತಗೊಳಿಸುವಂತೆ ಜನರಿಗೆ ಹೇಳಲೇಬೇಕಾದ ಅಗತ್ಯವಿದೆ. ಈ ಕ್ರಮಗಳನ್ನು ಪಾಲಿಸಿದರೆ ಕೆಲವೇ ದಿನಗಳಲ್ಲಿ ದೇಹದ ಉರಿಯೂತವು ಇಳಿದು, ರೋಗರಕ್ಷಣಾ ವ್ಯವಸ್ಥೆಯ ನಿಯಂತ್ರಣವು ಸುಲಲಿತವಾಗುತ್ತದೆ.
ಹಾಗೆಯೇ ನಿಯತವಾದ ವ್ಯಾಯಾಮವೂ ಅಗತ್ಯವಾಗಿದ್ದು, ಲಾಕ್ ಡೌನ್ ಮತ್ತಿತರ ಕ್ರಮಗಳಿಂದ ಜನರನ್ನು ಮನೆಗಳೊಳಗೇ ಬಂಧಿಸಿಡುವುದರಿಂದ, ಕ್ರೀಡಾಂಗಣಗಳು, ಈಜು ಕೊಳಗಳು, ಜಿಮ್ ಮುಂತಾದ ವ್ಯಾಯಾಮ ಸೌಲಭ್ಯಗಳನ್ನು ಮುಚ್ಚುವುದರಿಂದ ವ್ಯಾಯಾಮಕ್ಕೆ ಅವಕಾಶವೇ ಇಲ್ಲವಾಗಿ ಕೊರೋನ ಉಲ್ಬಣಗೊಳ್ಳುವಂತಾಗುತ್ತದೆ ಎಂದು ಇದೀಗ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ (2021;0:1-8) ನಲ್ಲಿ ಪ್ರಕಟವಾದ ದೊಡ್ಡ ಅಧ್ಯಯನವೊಂದರ ವರದಿಯಲ್ಲಿ ಹೇಳಲಾಗಿದೆ. ಸಂತುಲಿತವಾದ, ಸಕ್ಕರೆ-ಸಿಹಿರಹಿತವಾದ ಪಾರಂಪರಿಕ ಆಹಾರ ಹಾಗೂ ನಿಯತವಾದ ವ್ಯಾಯಾಮಗಳು ಕೊರೋನ ಸಮಸ್ಯೆಗಳ ವಿರುದ್ಧ ಅತ್ಯುತ್ತಮ ಲಸಿಕೆಗಳಾಗಿವೆ!
ಸರಕಾರವೇನು ಮಾಡಬೇಕು?
1. ಸರಕಾರವು ತಾನೇ ಕೊರೋನ ನಿಯಂತ್ರಿಸುತ್ತೇನೆ, ಎಲ್ಲರೂ ತಾನು ಹೇಳಿದ್ದನ್ನು ಪಾಲಿಸಬೇಕು ಎಂಬ ಧೋರಣೆಯನ್ನು ಬಿಡಬೇಕು. ಕೊರೋನ ಸೋಂಕು ವ್ಯಕ್ತಿಗಳೊಳಗೆ, ಪರಸ್ಪರ ಮಾತಾಡುವಾಗ, ಹೆಚ್ಚಾಗಿ ಮನೆಯೊಳಗೆಯೇ ಹರಡುವ ಸೋಂಕಾಗಿದ್ದು, ಅದನ್ನು ಸರಕಾರವು ನಿಯಂತ್ರಿಸಲು ಸಾಧ್ಯವಿಲ್ಲ. ಕೊರೋನ ಸೋಂಕು ಈಗ ಮನೆಮನೆಗಳನ್ನೂ, ಕೇರಿಕೇರಿಗಳನ್ನೂ ತಲುಪಿಯಾಗಿದೆ, ಮನೆಗಳೊಳಗೆ, ನೆರೆಹೊರೆಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಲಾಕ್‌ಡೌನ್, ಮಳಿಗೆ, ಶಾಲೆ-ಕಾಲೇಜುಗಳ ಮುಚ್ಚುವಿಕೆಯಿಂದ ಕೊರೋನ ತಡೆಯಲು ಸಾಧ್ಯವೇ ಇಲ್ಲ ಎನ್ನುವುದು ಕೂಡ ಎಲ್ಲೆಡೆಯೂ ಸಾಬೀತಾಗಿದೆ. ಆದ್ದರಿಂದ ಅಂಥ ಕ್ರಮಗಳನ್ನು ಹೇರಿ ಮತ್ತಷ್ಟು ಕಷ್ಟ-ನಷ್ಟಗಳಿಗೆ ಕಾರಣವಾಗಬಾರದು.
2. ತೆರೆದೆಡೆಗಳ ಗಾಳಿಯಲ್ಲಿ, ರಸ್ತೆಯಲ್ಲಿ, ಕಾರಿನೊಳಗೆ ಕೊರೋನ ಸೋಂಕು ಹರಡುವುದಿಲ್ಲ, ಪರಸ್ಪರ ಎದುರುಬದುರಾಗಿ ಮಾತಾಡುವಾಗಲಷ್ಟೇ ಹರಡುತ್ತದೆ. ಎಲ್ಲೆಡೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ, ಇಲ್ಲದಿದ್ದರೆ ದಂಡ ವಿಧಿಸುವುದರಿಂದ ಕೊರೋನ ನಿಯಂತ್ರಿಸಲು ಸಾಧ್ಯವಿಲ್ಲ. ಇಂಥ ಕ್ರಮಗಳು ಜನರಲ್ಲಿ ಗೊಂದಲವನ್ನೇ ಮೂಡಿಸಬಹುದಲ್ಲದೆ ಸೋಂಕನ್ನು ತಡೆಯಲು ನಿಜಕ್ಕೂ ಮಾಡಬೇಕಾದದ್ದು ಏನು ಎನ್ನುವುದನ್ನು ಮುಚ್ಚಿ ಹಾಕುತ್ತವೆ. ಆದ್ದರಿಂದ ಜನರಿಗೆ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಸಿ, ಅವರ ಸಹಕಾರದಿಂದ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಬಹುದೇ ಹೊರತು ಜನರನ್ನು 1897ರ ಕಾನೂನನ್ನು ತೋರಿಸಿ ಬೆದರಿಸುವುದರಿಂದಲ್ಲ.
3. ಕೊರೋನ ಸೋಂಕಿನ ಲಕ್ಷಣಗಳಿರುವ ಎಲ್ಲರಲ್ಲೂ, ಅವರ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ, ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸುವ, ಸೋಂಕಿತರು ಮತ್ತು ಸಂಪರ್ಕಿತರ ಬೆನ್ನು ಹತ್ತುವ ಕೆಲಸಗಳಿಂದಲೂ (ಟೆಸ್ಟ್, ಟ್ರಾಕ್) ಈ ಹಂತದಲ್ಲಿ ಯಾವ ಉಪಯೋಗವೂ ಆಗದು. ಕೊರೋನ ಸೋಂಕಿಗೆ ಯಾವ ಚಿಕಿತ್ಸೆಯೂ ಲಭ್ಯವಿಲ್ಲ, ಅಗತ್ಯವೂ ಇಲ್ಲ; ಆದ್ದರಿಂದ ಟ್ರೀಟ್ ಎನ್ನುವುದೂ ಅರ್ಥಹೀನವೇ ಆಗುತ್ತದೆ. ಇವೆಲ್ಲ ಕಾರಣಗಳಿಂದ ಈ ಟೆಸ್ಟ್, ಟ್ರಾಕ್, ಟ್ರೀಟ್ ಎಂಬ ಕಾರ್ಯಯೋಜನೆಯನ್ನು ಈ ಕೂಡಲೇ ನಿಲ್ಲಿಸಬೇಕು.
4. ಕೊರೋನ ಸೋಂಕಿನ ನಿಭಾವಣೆಯಲ್ಲಿ ನಿಜಕ್ಕೂ ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ ರೋಗವು ಉಲ್ಬಣಗೊಳ್ಳದಂತೆ ತಡೆಯುವುದು ಮತ್ತು ರೋಗವು ಉಲ್ಬಣಿಸಿದವರನ್ನು ಕೂಡಲೇ ಗುರುತಿಸಿ ತಕ್ಷಣವೇ ಸೂಕ್ತವಾದ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸುವುದು. ಅಂದರೆ ಕೊರೋನ ಸೋಂಕಿತರನ್ನು ಹುಡುಕುವುದರ ಬದಲಾಗಿ, ಕೊರೋನದಿಂದ ಸಮಸ್ಯೆಗಳಾಗದಂತೆ, ಸಾವುಗಳಾಗದಂತೆ ರಕ್ಷಿಸುವುದಕ್ಕಷ್ಟೇ ಆದ್ಯತೆಯನ್ನು ನೀಡಬೇಕು. ಜೊತೆಗೆ, ಕೊರೋನೇತರ ಕಾಯಿಲೆಗಳಿಗೆ, ಮತ್ತು ಉಳಿದೆಲ್ಲಾ ಆರೋಗ್ಯ ರಕ್ಷಣಾ ಕಾರ್ಯಗಳಿಗೆ ಆರೋಗ್ಯ ಸೇವೆಗಳು ಅಬಾಧಿತವಾಗಿ ಲಭ್ಯವಿರುವಂತೆ ಖಾತರಿ ಪಡಿಸಲೇ ಬೇಕು.
i. ಮೇಲೆ ಹೇಳಿದಂತೆ ಸೋಂಕಿನ ಲಕ್ಷಣಗಳಿರುವವರೆಲ್ಲರೂ ಮನೆಯಲ್ಲೇ ಉಳಿದು ಸಹಾಯವಾಣಿಗೆ ಕರೆ ಮಾಡುವಂತೆ ಮತ್ತು ಮೇಲೆ ಹೇಳಿದ ಕ್ರಮಗಳನ್ನು ಪಾಲಿಸುವಂತೆ ಪ್ರಚಾರ ಮಾಡುವುದು.
ii. ಸೋಂಕು ಬಿಗಡಾಯಿಸುವ ಸಾಧ್ಯತೆಗಳುಳ್ಳವರು ತಮ್ಮ ದೇಹಸ್ಥಿತಿಯ ಮೇಲೆ ನಿಗಾ ವಹಿಸುವಂತೆ ಉತ್ತೇಜಿಸುವುದು, ಅಗತ್ಯವಿದ್ದವರಿಗೆ ಅದಕ್ಕಾಗಿ ಪಲ್ಸ್ ಆಕ್ಸಿಮೀಟರ್ ಒದಗಿಸುವುದು.
iii. ಸೋಂಕಿತರನ್ನು, ಅದರಲ್ಲೂ ರೋಗವು ಉಲ್ಬಣಿಸಬಲ್ಲವರನ್ನು, ಅವರವರ ಮನೆಗಳಲ್ಲೇ ಪರೀಕ್ಷಿಸಲು ಸಂಚಾರಿ ಘಟಕಗಳನ್ನು ಏರ್ಪಡಿಸುವುದು; ಅವುಗಳಲ್ಲಿ ಆರೋಗ್ಯ ಕಾರ್ಯಕರ್ತರಿದ್ದು, ಪಲ್ಸ್ ಆಕ್ಸಿಮೀಟರ್ ಮತ್ತು ರಕ್ತದೊತ್ತಡ ಅಳೆಯುವ ಉಪಕರಣಗಳ ನೆರವಿನಿಂದ ಸಮಸ್ಯೆಗಳುಳ್ಳವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.
iv. ರಕ್ತದಲ್ಲಿ ಆಮ್ಲಜನಕದ ಮಟ್ಟವು 95% ಕ್ಕಿಂತ ಕೆಳಗಿಳಿಯುವುದು, ವಿಪರೀತ ಬಳಲಿಕೆ, ಉಸಿರಾಟದ ಕಷ್ಟಗಳಿರುವವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಅಂಥವರಲ್ಲೂ ಹೆಚ್ಚಿನವರಿಗೆ ಕೇವಲ ಆಮ್ಲಜನಕದ ವ್ಯವಸ್ಥೆ ಮಾಡಿದರಷ್ಟೇ ಸಾಕಾಗುತ್ತದೆ. ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಯಾವುದಾದರೂ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯನ್ನು ಮಾಡಬಹುದು.
ಹೆಚ್ಚಿನವರಿಗೆ ಇದಷ್ಟೇ ಸಾಕಾಗುವುದರಿಂದ, ಹೀಗೆ ವ್ಯವಸ್ಥೆ ಮಾಡಿದರೆ ಉನ್ನತ ಆಸ್ಪತ್ರೆಗಳ ಮೇಲೆ ಹೊರೆಯಾಗದಂತೆ ತಡೆಯಬಹುದು. ಆದರೆ ಇಂಥ ಕೇಂದ್ರಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆಯಾಗುವುದನ್ನು ಖಾತರಿಪಡಿಸಬೇಕು. ಈ ಸೌಲಭ್ಯಗಳಲ್ಲಿ ದಾಖಲಾದವರಲ್ಲಿ ರೋಗವು ಬಿಗಡಾಯಿಸಿದರೆ ಕೂಡಲೇ ಉನ್ನತ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.
v. ಗಂಭೀರ ಸ್ಥಿತಿಯಲ್ಲಿರುವವರನ್ನು ತೀವ್ರ ನಿಗಾ ಘಟಕ ಹಾಗೂ ಕೃತಕ ಉಸಿರಾಟದ ಸೌಲಭ್ಯಗಳುಳ್ಳ ಉನ್ನತ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಈ ರೋಗಿಗಳನ್ನು ಇತರ ರೋಗಿಗಳ ಜೊತೆಗಿರಿಸಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲದಿರುವುದರಿಂದ ಪ್ರತ್ಯೇಕ ಐಸಿಯು ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಹೆಚ್ಚು ಆಸ್ಪತ್ರೆಗಳನ್ನು ವಿಶೇಷವಾಗಿ ಸಜ್ಜುಗೊಳಿಸಬೇಕು.
ಕೊರೋನ ರೋಗವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಒದಗಿಸಲು ಸಾಧ್ಯವಿರುವ ಖಾಸಗಿ ಆಸ್ಪತ್ರೆಗಳಲ್ಲಷ್ಟೇ ಅಂಥ ವ್ಯವಸ್ಥೆಯನ್ನು ಮಾಡಬೇಕಲ್ಲದೆ, ಎಲ್ಲಾ ಆಸ್ಪತ್ರೆಗಳಲ್ಲಿ 50% ಹಾಸಿಗೆಗಳನ್ನು ಒದಗಿಸುವುದರಿಂದ ಕೊರೋನ ರೋಗಿಗಳಿಗೆ ಪ್ರಯೋಜನವಾಗದು, ಇತರ ರೋಗಿಗಳಿಗೂ ಸಮಸ್ಯೆಯಾಗುತ್ತದೆ. ಕೊರೋನ ತೀವ್ರ ನಿಗಾ ಘಟಕಗಳ ಲಭ್ಯತೆಯ ಮಾಹಿತಿಯು ಕೇಂದ್ರೀಕೃತವಾಗಿ ದೊರೆತರೆ ಒಳ್ಳೆಯದು.
vi. ಸರಕಾರಿ ಆಸ್ಪತ್ರೆಗಳನ್ನು ಕೊರೋನ ಸೋಂಕಿತರಿಗಷ್ಟೇ ಮೀಸಲಿಟ್ಟರೆ ಇತರೆಲ್ಲಾ ಬಡ ರೋಗಿಗಳಿಗೆ ಬೇರಾವ ಸಮಸ್ಯೆಗೂ ಚಿಕಿತ್ಸೆ ದೊರೆಯದಂತಾಗಿ ಅನ್ಯಾಯವಾಗುತ್ತದೆ. ಆದ್ದರಿಂದ ಯಾವುದಾದರೂ ಖಾಸಗಿ ಆಸ್ಪತ್ರೆಯನ್ನು ಸರಕಾರವೇ ವಹಿಸಿಕೊಂಡು ಕೊರೋನ ಆರೈಕೆಗೆ ಒದಗಿಸಬೇಕು.
vii. ಕೊರೋನ ಸೋಂಕಿನ ಚಿಕಿತ್ಸಾ ಕ್ರಮಗಳ ಬಗ್ಗೆ ಕಳೆದ ಮೇ ತಿಂಗಳಲ್ಲಿ, ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ, ರಾಜ್ಯ ಸರಕಾರವು ಪ್ರಕಟಿಸಿರುವ ಮಾರ್ಗಸೂಚಿಯು ಸಂಪೂರ್ಣವಾಗಿ ದೋಷಯುಕ್ತವಾಗಿದ್ದು, ಎಲ್ಲಾ ಸೋಂಕಿತರಲ್ಲಿ ಅನಗತ್ಯವಾದ ಪರೀಕ್ಷೆ ಹಾಗೂ ಔಷಧಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಈಗ ಕೊರೋನ ಸೋಂಕಿಗೆ ಯಾವ ಔಷಧವೂ ಉಪಯುಕ್ತವಲ್ಲ ಎನ್ನುವುದು ಸಾಬೀತಾಗಿ, ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ಹಾಗೂ ಬ್ರಿಟಿಷ್ ಆರೋಗ್ಯ ಸೇವೆಗಳು ಆ ಬಗ್ಗೆ ಸ್ಪಷ್ಟವಾದ ಹೇಳಿಕೆಗಳನ್ನು ಪ್ರಕಟಿಸಿದ್ದರೂ ನಮ್ಮಲ್ಲಿ ಅದೇ ಆಧಾರರಹಿತವಾದ ಚಿಕಿತ್ಸಾ ಕ್ರಮವನ್ನು ಈಗಲೂ ಸೂಚಿಸಲಾಗುತ್ತಿದೆ.
ಈ ದೋಷಯುಕ್ತ ಮಾರ್ಗಸೂಚಿಯನ್ನು ಈ ಕೂಡಲೇ ಹಿಂಪಡೆದು, ಬ್ರಿಟಿಷ್ ಹಾಗೂ ಅಮೆರಿಕದ ಆರೋಗ್ಯ ಸೇವೆಗಳ ಮಾರ್ಗಸೂಚಿಯನ್ನೇ ಇಲ್ಲೂ ಅಳವಡಿಸಿಕೊಳ್ಳಬೇಕು. ಅದರನುಸಾರ, ತೀವ್ರ ಸಮಸ್ಯೆಗಳಾದವರಿಗೆ ಕೃತಕ ಉಸಿರಾಟ ಮತ್ತು ಇತರ ನೆರವನ್ನು ನೀಡುವ ಚಿಕಿತ್ಸೆ ಬಿಟ್ಟರೆ ಬೇರಾವ ಆಧಾರಹಿತವಾದ, ಅಪ್ರಯೋಜಕವಾದ ಚಿಕಿತ್ಸೆಗೂ ಅವಕಾಶವಿರಕೂಡದು. ಕ್ಲೋರೋಕ್ವಿನ್, ಅಜಿಥ್ರೋಮೈಸಿನ್, ಡಾಕ್ಸಿಸೈಕ್ಲಿನ್, ಫಾವಿಪಿರಾವಿರ್, ಒಸೆಲ್ಟಾಮಿವಿರ್, ಜಿಂಕ್, ವಿಟಮಿನ್ ಸಿ, ಕೋಲ್ಚಿಸಿನ್, ಐವರ್‌ಮೆಕ್ಟಿನ್ ಮುಂತಾದ ಯಾವ ಔಷಧಗಳೂ ಕೊರೋನ ವಿರುದ್ಧ ನೆರವಾಗುವುದಿಲ್ಲ.
ಎಲ್ಲರಿಗೂ ರೆಂಡಿಸಿವಿರ್ ನೀಡುವ ಅಗತ್ಯವೇ ಇಲ್ಲ; ಅದರ ಬಳಕೆಯನ್ನು ವೈಜ್ಞಾನಿಕ ಮಾರ್ಗಸೂಚಿಗಳಿಗನುಗುಣವಾಗಿ ನಿಯಂತ್ರಿಸಬೇಕು. ತೀವ್ರವಾದ ಸಮಸ್ಯೆಗಳಿದ್ದವರನ್ನು ಬಿಟ್ಟರೆ ಬೇರೆ ಯಾರಲ್ಲೂ ಸ್ಟೀರಾಯ್ಡ್ ಬಳಸಬಾರದು. ಯಾವುದೇ ಕಾರಣಕ್ಕೂ ಆಯುರ್ವೇದ, ಯುನಾನಿ, ಹೋಮಿಯೋಪತಿ ಇತ್ಯಾದಿ ಬದಲಿ ಚಿಕಿತ್ಸೆಗಳನ್ನು ಮುಂದೊತ್ತಿ ಮೋಸ ಮಾಡುವುದಕ್ಕೆ ಅವಕಾಶ ನೀಡಬಾರದು.
viii. ಮೃತ ದೇಹಗಳಿಂದ ಕೊರೋನ ಹರಡುವುದಿಲ್ಲ, ಕುಟುಂಬದವರಿಗೆ ಮೃತ ದೇಹಗಳನ್ನು ನೀಡುವುದಕ್ಕೆ ಯಾವುದೇ ತೊಡಕುಗಳಿಲ್ಲ ಎನ್ನುವುದು ಈಗ ಸುಸ್ಪಷ್ಟವಾಗಿದ್ದರೂ, ಅನೇಕ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ಕಷ್ಟಕ್ಕೀಡು ಮಾಡಲಾಗುತ್ತಿದೆ. ಮೃತಪಟ್ಟ ಸಂದರ್ಭಗಳಲ್ಲಿ ಕೊರೋನ ಪರೀಕ್ಷೆಯ ವರದಿಯು ಕೇವಲ ಸಾವಿನ ಕಾರಣವನ್ನು ದಾಖಲಿಸುವುದಕ್ಕಷ್ಟೇ ಅಗತ್ಯವೇ ಹೊರತು ಅಂತ್ಯಕ್ರಿಯೆಗಳ ವಿಧಿವಿಧಾನಗಳಲ್ಲಿ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ.
ಆದ್ದರಿಂದ, ಮೃತದೇಹಗಳ ಬಗ್ಗೆ ವಹಿಸಬೇಕಾದ ಸರಳ ಜಾಗರೂಕತೆಗಳನ್ನು ತಿಳಿಸಿಕೊಟ್ಟು, ವರದಿಗಾಗಿ ಕಾಯದೆ, ಅವನ್ನು ಮನೆಯವರಿಗೆ ನೀಡುವಂತಾಗಬೇಕು. ಎಲ್ಲಾ ಮೃತರ ಅಂತ್ಯಕ್ರಿಯೆಗಳನ್ನು ಮನೆಮಂದಿಯೇ ನಡೆಸಬಹುದಾಗಿದ್ದು, ಸರಕಾರವು ಆ ಕೆಲಸವನ್ನು ವಹಿಸಿಕೊಳ್ಳುವ ಅಗತ್ಯವೇ ಇಲ್ಲ. ಕೊರೋನದಿಂದ ಮೃತರಾದವರ ಅಂತ್ಯಕ್ರಿಯೆಗಳಿಗೆ 30-35 ಸಾವಿರ ವಿಧಿಸುತ್ತಿರುವ ಬಗ್ಗೆ ವರದಿಗಳಾಗಿದ್ದು, ಈ ದುರಿತ ಕಾಲದಲ್ಲಿ ಇಂಥ ಅನ್ಯಾಯಗಳಿಗೆ ಅವಕಾಶ ನೀಡಬಾರದು. ಬದಲಿಗೆ, ಎಲ್ಲಾ ಸ್ಮಶಾನಗಳಲ್ಲೂ, ಚಿತಾಗಾರಗಳಲ್ಲೂ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ, ನೆರವನ್ನೂ ಸರಕಾರವೇ ಒದಗಿಸಬೇಕು.
ಮಾಧ್ಯಮಗಳೇನು ಮಾಡಬೇಕು?
ಈ ಒಂದು ವರ್ಷದಲ್ಲಿ ಕೊರೋನ ಬಗ್ಗೆ ಇಲ್ಲಸಲ್ಲದ ಭಯವನ್ನು ಹುಟ್ಟಿಸಿ, ಸಾಮಾಜಿಕ ಚಟುವಟಿಕೆಗಳನ್ನೂ, ಶಾಲೆ-ಕಾಲೇಜುಗಳನ್ನೂ ಮುಚ್ಚುವಂತೆ ಬೊಬ್ಬಿಟ್ಟು, ಚಿಕಿತ್ಸೆಯ ಬಗ್ಗೆ ಗೊಂದಲಗಳನ್ನು ಹರಡಿದ ಮಾಧ್ಯಮಗಳು ಇನ್ನಾದರೂ ತಮ್ಮ ಹೊಣೆಯರಿತು ವರ್ತಿಸಬೇಕಾಗಿದೆ. ಕೊರೋನ ಬಗ್ಗೆ ಜನರಿಗೆ ವಸ್ತುನಿಷ್ಠ ಮಾಹಿತಿಯನ್ನು ನೀಡುವುದು, ಆಯಾ ಊರುಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆಯು ಲಭ್ಯವಾಗುವಂತೆ ನೆರವಾಗುವುದು, ಅಂತ್ಯಕ್ರಿಯೆಗಳನ್ನು ನಡೆಸುವುದಕ್ಕೆ ನೆರವಾಗುವುದು ಇವೇ ಮೊದಲಾದ ಜನಪರ ಕೆಲಸಗಳನ್ನು ಅವು ಮಾಡಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ; ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ
ಸುದ್ದಿದಿನ,ದಾವಣಗೆರೆ:ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಗೆ ಪ್ರೊತ್ಸಾಹಧನ ನೀಡಲು ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಸಕ್ತ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖಾ www.sw.kar.nic.in ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಹಾಕಿದ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ದೃಢೀಕರಣದೊಂದಿಗೆ ಆಯಾ ತಾಲ್ಲೂಕಿನ ಇಲಾಖೆ ಕಚೇರಿಗೆ ಸಲ್ಲಿಸಲು ಜಂಟಿ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭ ; ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ
ಸುದ್ದಿದಿನ,ದಾವಣಗೆರೆ: ಖಾಸಗಿ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದು ಈ ಬಸ್ ನಿಲ್ದಾಣವು ಸುಸಜ್ಜಿತ ಹಾಗೂ ಹಲವು ಸೌಲಭ್ಯಗಳನ್ನು ಹೊಂದಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಅವರು (07) ರಂದು ಪಿ.ಬಿ ರಸ್ತೆಯಲ್ಲಿನ ಡಾ. ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಬಸ್ ನಿಲ್ದಾಣ ಸ್ಮಾರ್ಟ್ ಸಿಟಿ’ ಯೋಜನೆಯಡಿ 20 ಕೋಟಿ ವೆಚ್ಚದಲ್ಲಿ ಸಿದ್ದಗೊಂಡು, ಈಚೆಗಷ್ಟೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಈ ಬಸ್ ನಿಲ್ದಾಣವು ಸುಸಜ್ಜಿತವಾಗಿದ್ದು, ಹತ್ತಾರು ಸೌಲಭ್ಯಗಳನ್ನು ಹೊಂದಿದೆ. 84 ಮಳಿಗೆ ಹಾಗೂ ಏಕಾಲಕ್ಕೆ 16 ಬಸ್ ನಿಲ್ಲಿಸಬಹುದಾಗಿದೆ. 200 ದ್ವೀಚಕ್ರ ವಾಹನ ನಿಲುಗಡೆಗೆ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸುಸಜ್ಜಿತ ಬಸ್ ನಿಲ್ದಾಣವನ್ನು ದಾವಣಗೆರೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಯಿತು. ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್, ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪಮೇಯರ್ ಸೋಗಿ ಶಾಂತಕುಮಾರ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಮಲ್ಲೇಶಪ್ಪ, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷರಾದ ಉಮೇಶ್‍ರಾವ್ ಸಾಳಂಕಿ, ಹಾಗೂ ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಏಜೆಂಟ್ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಕೋರ್ಸುಗಳಾದ ದ್ವಿತೀಯ ಪಿ.ಯು.ಸಿ. ಮತ್ತು ಪದವಿ ,ಸ್ನಾತಕೋತ್ತರ ಪದವಿ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಗೆ ಪ್ರೊತ್ಸಾಹಧನ ನೀಡಲು ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಸಕ್ತ ಅಭ್ಯರ್ಥಿಗಳು ಸಮಾಜ ಕಲ್ಯಾಣ ಇಲಾಖಾ www.sw.kar.nic.in ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಹಾಕಿದ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಪ್ರಾಂಶುಪಾಲರ ದೃಢೀಕರಣದೊಂದಿಗೆ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಜಂಟಿ ನಿರ್ದೇಶಕಾರಾದ ನಾಗರಾಜ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಎಂಬ್ರಾಯ್ಡರಿ ಮತ್ತು ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಗನ್ ಮಿಸ್ ಫೈರ್ | ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
-
ದಿನದ ಸುದ್ದಿ7 days ago
ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
-
ದಿನದ ಸುದ್ದಿ7 days ago
ದಿವಾಕರ. ಡಿ ಮಂಡ್ಯ ಅವರಿಗೆ ಪಿ ಎಚ್ ಡಿ ಪದವಿ
-
ದಿನದ ಸುದ್ದಿ6 days ago
ನಾಲ್ಕನೇ ಮದುವೆಗೆ ಸಜ್ಜಾದ್ರು ನಟಿ ವನಿತಾ ವಿಜಯಕುಮಾರ್
-
ದಿನದ ಸುದ್ದಿ6 days ago
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಜನ್ಮದಿನ ; ದೇಶದೆಲ್ಲೆಡೆ ಸ್ಮರಣೆ
-
ದಿನದ ಸುದ್ದಿ7 days ago
ಚಿನ್ನದ ಬೆಲೆ ಇಳಿಕೆ