ರಾಜಕೀಯ
ಬದುಕಲು ಕಲಿಯುವುದೆಂದರೆ ಸಾವಿಗೆ ವಿಮುಖರಾಗುವುದೇ- ಕೊರೋನಾ ಕೇಳುತ್ತಿದೆ
- ನಾ ದಿವಾಕರ
“ಕೊರೋನಾದೊಂದಿಗೆ ಬದುಕುವುದನ್ನು ಕಲಿಯಿರಿ ”. ಇದು ಭಾರತದ ಆಡಳಿತ ವ್ಯವಸ್ಥೆಯ ಆತ್ಮನಿರ್ಭರ ಮಂತ್ರವಾಗಿ ಪರಿಣಮಿಸಿದೆ. ಬಹುಶಃ ಇನ್ನು ಒಂದು ವರ್ಷದ ನಂತರ ಭಾರತದ ಜನಸಾಮಾನ್ಯರು ಏನೇ ಸಮಸ್ಯೆ ಎದುರಿಸಿದರೂ ಆತ್ಮನಿರ್ಭರತೆ ಎನ್ನುವ ಉತ್ತೇಜಕ ಪದ ಹಾಗೂ ಬದುಕಲು ಕಲಿಯಿರಿ ಎನ್ನುವ ಉಪನ್ಯಾಸ ಆಳುವ ವರ್ಗಗಳ ವೇದಮಂತ್ರದಂತಾಗಿಬಿಡುತ್ತದೆ.
ಇಂದು ಕರ್ನಾಟಕದ ಸಚಿವ ಎಸ್ ಟಿ ಸೋಮಶೇಖರ್ ಸಹ, ಕೊರೋನಾದೊಂದಿಗೆ ಬದುಕಲು ಕಲಿಯಿರಿ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕೊರೋನಾಗೆ ಹೆದರಿ ಯಾರೋಬ್ಬರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಏನರ್ಥ. ನಾವು, ಭಾರತೀಯರು, ಕೊರೋನಾದೊಂದಿಗೆ ಬದುಕಲು ಕಲಿತಿದ್ದೇವೆ ಎಂದೇ ಅಲ್ಲವೇ ?
ನಾವು ಕಲಿಯಬೇಕಿರುವುದು ಸಾವಿನೊಂದಿಗೆ ಬದುಕುವುದನ್ನು. ಇದನ್ನು ಆಡಳಿತ ವ್ಯವಸ್ಥೆ ಹೇಳುವುದಿಲ್ಲ. ಏಕೆಂದರೆ ಸಾವಿನೊಂದಿಗೆ ಬದುಕುವುದೂ ನಮಗೆ ಹೊಸತೇನಲ್ಲ. ಕೊರೋನಾ ನಡುವೆಯೂ ಮಳವಳ್ಳಿ ತಾಲ್ಲೂಕಿನ ಬನ್ನೂರಿನಲ್ಲಿ ಒಬ್ಬ ಪೌರಕಾರ್ಮಿಕ ಮಲಗುಂಡಿಯಲ್ಲಿ ಸಿಲುಕಿ ಸತ್ತಿದ್ದಾನೆ. ಹೇಗೆ ಸತ್ತರು, ಏಕೆ ಸತ್ತರು ಎಂದೂ ಲೆಕ್ಕಿಸದೆ, ಸಾವಿರಾರು ಸಾವುಗಳ ನಡುವೆ ಬದುಕಿ ಮುನ್ನಡೆದಿರುವ ಸಮಾಜದಲ್ಲಿ ನಾವಿದ್ದೇವೆ.
ಅಪೌಷ್ಟಿಕತೆ, ಸಾಂಕ್ರಾಮಿಕ ಪಿಡುಗು, ಜಾತಿ ಸೋಂಕು, ಜಾತಿ ವೈಷಮ್ಯದ ವೈರಾಣು, ಮತಾಂಧತೆಯ ಕ್ರಿಮಿ, ದಾರಿದ್ರ್ಯ, ಬಡತನ, ನಿರುದ್ಯೋಗ ಹೀಗೆ ಸಾವಿನ ಮನೆಗಳನ್ನು ನಿರ್ಮಿಸುತ್ತಲೇ ಇರುವ ಈ ಎಲ್ಲ ವಿದ್ಯಮಾನಗಳೊಡನೆ ನಾವು ಬದುಕಲು ಕಲಿತಿದ್ದೇವೆ. ಏಕೆಂದರೆ ನಾವು ಸಾವನ್ನು ಲೆಕ್ಕಿಸುವುದಿಲ್ಲ.
ಟಿ ವಿ ಸಂದರ್ಶನವೊಂದರಲ್ಲಿ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ ಟಿ ರವಿ “ಕೊರೋನಾದಿಂದ ಜನಗಳಿಗಿಂತಲೂ ಹೆಚ್ಚು ತೊಂದರೆಗೊಳಗಾಗಿರುವುದು ಆರ್ಥಿಕತೆ ” ಎಂದು ಹೇಳುತ್ತಾರೆ. ಮೇಲ್ನೋಟಕ್ಕೆ ಇದು ಹೌದು ಎನಿಸಬಹುದು. ಆದರೆ ಮನುಷ್ಯರನ್ನು ಒಳಗೊಳ್ಳದ ಆರ್ಥಿಕತೆ ಇದೆಯೇ ? ಈ ಪ್ರಶ್ನೆ ಕೇಳಲು ಬಿ ಟಿವಿ ಸಂದರ್ಶಕರಿಗೆ ಹೊಳೆಯುವುದಿಲ್ಲ.
“ ಕೋವಿದ್19 ನಿಂದ ಸತ್ತಿರುವವರ ಸಂಖ್ಯೆ ಬಹಳ ಕಡಿಮೆ, ಮಲೇರಿಯಾ, ಕಾಲರಾ ರೋಗಗಳಿಂದ, ಅಪಘಾತಗಳಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಜನ ಸತ್ತಿದ್ದಾರೆ ” ಎಂದು ಹೇಳುವ ಮೂಲಕ ಕೊರೋನಾ ಗಂಭೀರ ಸಮಸ್ಯೆಯೇನಲ್ಲ ಎನ್ನುವಂತೆ ಮಾತನಾಡುತ್ತಾರೆ. ನಿಜ, ಅಂಕಿಅಂಶಗಳೇ ನಮ್ಮ ಸಾಮಾಜಿಕ-ಸಾರ್ವಜನಿಕ ಸಂಕಥನಗಳಿಗೆ ಆಧಾರವಾದರೆ ಇದನ್ನು ನಿರಾಕರಿಸಲಾಗುವುದಿಲ್ಲ. ಆದರೆ ಒಂದು ಆಡಳಿತ ವ್ಯವಸ್ಥೆಯ ವಕ್ತಾರರು ಈ ರೀತಿ ಹೇಳುವಾಗ, ಜನಸಾಮಾನ್ಯರ ಸಾವು ಎಷ್ಟು ನಿರ್ಲಕ್ಷಿತ ಎನ್ನುವುದು ತಿಳಿಯುತ್ತದೆ.
ಮನುಷ್ಯರಿಗಿಂತಲೂ ಆರ್ಥಿಕತೆಗೆ ಹೆಚ್ಚು ಪೆಟ್ಟುಬಿದ್ದಿದೆ ಎನ್ನುವ ಹೇಳಿಕೆಯಲ್ಲಿ ನಾವು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಆಳುತ್ತಿರುವ ಬಂಡವಾಳಶಾಹಿಯ ಅಂತರಾತ್ಮವನ್ನು ಅರ್ಥಮಾಡಿಕೊಳ್ಳಬಹುದು. ಶ್ರಮಿಕರಿಲ್ಲದ ಔದ್ಯಮಿಕ ಪ್ರಗತಿ, ಶ್ರಮವಿಲ್ಲದ ಡಿಜಿಟಲೀಕರಣ ಇದನ್ನೇ ಸೂಚಿಸುತ್ತದೆ.
ಸರಕು ಮತ್ತು ಪದಾರ್ಥಗಳ ಉತ್ಪಾದನೆ, ಸಂಸ್ಕರಣ, ಸರಕು ಮಾರಾಟ ಮತ್ತು ವಿನಿಮಯ, ಸರಕು ವಿತರಣೆ ಮತ್ತು ಶೇಖರಣೆ, ಇದಕ್ಕೆ ಪೂರಕವಾದ ಸೇವಾ ವಲಯ, ಬಂಡವಾಳದ ಕ್ರೋಢೀಕರಣ ಮತ್ತು ಪ್ರಸರಣ ಹಾಗೂ ಮಾರುಕಟ್ಟೆಯ ಲಾಭ ನಷ್ಟ ಈ ಸರಪಳಿಯಲ್ಲಿ ಮನುಷ್ಯ ನಗಣ್ಯನಾಗುವುದು ಅಚ್ಚರಿಯೇನಲ್ಲ. ಇದು ಬಂಡವಾಳ ವ್ಯವಸ್ಥೆಯ ಮೂಲಮಂತ್ರವೂ ಹೌದು. ಹಾಗಾಗಿಯೇ ಕೋಟ್ಯಂತರ ವಲಸೆ ಕಾರ್ಮಿಕರು ಗಣನೆಗೆ ಬಾರದೆ ಹೋಗುತ್ತಾರೆ. ಆರ್ಥಿಕತೆಯ ವ್ಯಾಖ್ಯಾನದಲ್ಲಿ ಜನತೆ ನಗಣ್ಯವಾಗುತ್ತಾರೆ.
ಕೋವಿದ್19 ನಿಂದ ಉಂಟಾಗಿರುವ ಸಾವು ಭಾರತದ ಜನಸಂಖ್ಯೆಗೆ ಹೋಲಿಸಿದರೆ ಅತಿ ಕಡಿಮೆ ಎನ್ನುವ ವಾದವೂ ಕೇಳಿಬರುತ್ತಿದೆ. ಭಾರತದಲ್ಲಿ 7200 ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಿ 70 ಸಾವು ಸಂಭವಿಸಿವೆ. ನಿಜ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣವೂ ಕಡಿಮೆ. ಹೆಚ್ಚು ಜನರು ಗುಣಮುಖರಾಗುತ್ತಿದ್ದಾರೆ.
ಆದರೆ ಸೋಂಕು ಉಲ್ಬಣಿಸುತ್ತಿರುವ ಪ್ರಮಾಣ ದಿನೇದಿನೇ ಹೆಚ್ಚಾಗುತ್ತಿದೆ. ಮೇ 17ರ ನಾಲ್ಕನೆಯ ಲಾಕ್ ಡೌನ್ ನಂತರದಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷ ಅರವತ್ತು ಸಾವಿರ ಏರಿಕೆಯಾಗಿದೆ. ಈಗ ಲಾಕ್ ಡೌನ್ ಸಡಿಲಿಕೆಯ ಸಂದರ್ಭದಲ್ಲಿದ್ದೇವೆ. ಜೂನ್ ತಿಂಗಳಲ್ಲಿ ಲಾಕ್ ಡೌನ್ ಸಡಿಲಿಕೆಯ ನಂತರದಲ್ಲಿ 70 ಸಾವಿರಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ.
ಈ ಸೋಂಕಿತರ ನಡುವೆ ನಾವು ಬದುಕುವುದನ್ನು ಕಲಿಯಬೇಕೆಂದು ಆಡಳಿತ ವ್ಯವಸ್ಥೆ ನಿರೀಕ್ಷಿಸುತ್ತದೆ. ಇದು ವಾಸ್ತವವೂ ಹೌದು. ಏಕೆಂದರೆ ಇಡೀ ಸಮಾಜ ಸಹಜ ಸ್ಥಿತಿಗೆ ಬಂದಿದೆ. ಎಲ್ಲವೂ ಎಲ್ಲೆಡೆಯೂ ಮೊದಲಿನಂತೆಯೇ ದೊರೆಯುತ್ತದೆ. ದೇವ ದೇವತೆಗಳೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು ದರ್ಶನಕ್ಕೆ ಸಿದ್ಧತೆ ನಡೆದಿದೆ. ಸಿನೆಮಾ ಮತ್ತು ಶಾಲೆ ಹೊರತುಪಡಿಸಿ ಉಳಿದೆಲ್ಲವೂ ಮುಕ್ತವಾಗಿದೆ. ಮಾರುಕಟ್ಟೆ ಚುರುಕಾಗುತ್ತಿದೆ.
ಈ ನಡುವೆ ವಲಸೆ ಕಾರ್ಮಿಕರ ಮೂಲಭೂತ ಸಮಸ್ಯೆಗಳು ಮೂಲೆಗೆ ಸರಿದು ಕೊರೋನಾ ಇಡೀ ವಲಸೆ ಕಾರ್ಮಿಕ ಸಮುದಾಯವನ್ನೇ ಆವರಿಸಿಬಿಟ್ಟಿದೆ. ವಲಸೆ ಕಾರ್ಮಿಕರಲ್ಲಿ ಶ್ರಮಿಕರನ್ನು ಎಂದೂ ಕಾಣದವರು “ ನಮ್ಮವರ ಅಸ್ಮಿತೆ ”ಯನ್ನಾದರೂ ಕಾಣುತ್ತಿದ್ದರು. ಈಗ ಧರ್ಮಸ್ಥಳದ ಹೆಗಡೆ ಸಹ ಅವರಿಗೆ ನಿಷೇಧ ಹೇರುತ್ತಿದ್ದಾರೆ. ಏಕೆಂದರೆ ವಲಸೆ ಕಾರ್ಮಿಕರೇ ಸಮಸ್ಯೆಯಾಗಿ ಕಾಣುತ್ತಿದ್ದಾರೆ.
ಏಳುಜನ್ಮಗಳ ಕಾಯಿಲೆ-ಕಸಾಲೆ ಇದ್ದರೂ ಒಮ್ಮೆ ದರ್ಶನ ಭಾಗ್ಯ ಪಡೆದರೆ ಸಕಲ ರೋಗಗಳೂ ಪರಿಹಾರವಾಗುತ್ತವೆ ಎಂದು ಜಗಜ್ಜಾಹೀರು ಮಾಡುತ್ತಿದ್ದ ದೈವೀಕ ಕ್ಷೇತ್ರಗಳು, ಕೇವಲ ಒಂದು ವೈರಾಣು ಸೋಂಕಿಗೆ ಒಳಗಾದವರನ್ನು ನಮ್ಮಲ್ಲಿಗೆ ಬರಬೇಡಿ ಎನ್ನುವಂತಾಗಿದೆ. ಇದು ದೈವತ್ವದ ಅವಸಾನವೋ ಅಥವಾ ದೈವತ್ವದ ಗುತ್ತಿಗೆ ಪಡೆದ ಉದ್ಯಮಿಗಳ ನೈತಿಕ ಅಧಃಪತನವೋ ಊಹೆಗೆ ಬಿಟ್ಟ ವಿಚಾರ.
ಈಗ ದೇವಾಲಯದ ತೀರ್ಥ ವ್ಯರ್ಜ್ಯ ಎನಿಸುತ್ತದೆ. ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಅತ್ಯಗತ್ಯ ಎನಿಸುತ್ತದೆ. ಇಷ್ಟಾದರೂ ಕೊರೋನಾ ಪೀಡಿತರಿಗೆ, ಕೊರೋನಾದಿಂದ ಬಾಧಿತರಾಗಿರುವ ಅಸಂಖ್ಯಾತ ವಲಸೆ ಕಾರ್ಮಿಕರಿಗೆ ಧರ್ಮ ಕೇಂದ್ರಗಳು, ಅಧ್ಯಾತ್ಮ ಕೇಂದ್ರಗಳು, ಮಠೋದ್ಯಮಿಗಳು ತಮ್ಮ ಬಾಹುಗಳನ್ನು ತೆರೆದಿಲ್ಲ ಎಂದರೆ, ಬಂಡವಾಳ ವ್ಯವಸ್ಥೆ ಹೇಗೆ ಮಾನವ ಸಮಾಜದ ಅತಿ ಸೂಕ್ಷ್ಮ ವಲಯಗಳನ್ನೂ ಆಕ್ರಮಿಸಿದೆ ಎನ್ನುವುದು ಅರ್ಥವಾಗುತ್ತದೆ. ಪರಿಹಾರ ನಿಧಿಗೆ ದೇಣಿಗೆ ನೀಡುವುದಕ್ಕೂ ನೊಂದ ಜೀವಗಳಿಗೆ ನೆಲೆ ನೀಡುವುದಕ್ಕೂ ವ್ಯತ್ಯಾಸ ಇರುವುದನ್ನು ಇಲ್ಲಿ ಗಮನಿಸಬೇಕು.
ಕೊರೋನಾ ಭಾರತಕ್ಕೆ ಕಾಲಿಟ್ಟ ಜನವರಿ 30 ರಿಂದ ಎರಡನೆ ಲಾಕ್ ಡೌನ್ ಮುಗಿದ ಮೇ 3ರ ಅವಧಿಯಲ್ಲಿ ಭಾರತದಲ್ಲಿ ಮಲೇರಿಯಾದಿಂದ 45 ಸಾವಿರ, ಕ್ಷಯರೋಗದಿಂದ 93 ಸಾವಿರ, ಅತಿಸಾರದಿಂದ 1 ಲಕ್ಷ 28 ಸಾವಿರ, ಕ್ಯಾನ್ಸರ್ ನಿಂದ 1 ಲಕ್ಷ 37 ಸಾವಿರ, ಒಂದು ಲಕ್ಷ ಮಕ್ಕಳು ಹುಟ್ಟಿದ ಒಂದು ತಿಂಗಳ ಒಳಗೆ, ಆರು ಸಾವಿರ ಗರ್ಭಿಣಿಯರು ಸಾವನ್ನಪ್ಪಿದ್ದಾರೆ.
ಇಷ್ಟೆಲ್ಲಾ ಸಾವುಗಳ ನಡುವೆ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ಗೌಣ ಎಂದು ಭಾವಿಸುವುದು ಸಹಜ. ಕೊರೋನಾಗೆ ಭಯಪಡಬೇಕಿಲ್ಲ ಎಂದು ಭರವಸೆ ನೀಡಲು ಈ ಅಂಕಿಅಂಶಗಳು ನೆರವಾಗಬಹುದು. ಅದರೆ ಒಂದು ಆಡಳಿತ ವ್ಯವಸ್ಥೆ ಈ ಅಂಕಿಅಂಶಗಳನ್ನು ಮುಂದಿಟ್ಟು, ಕೊರೋನಾ ಬಗ್ಗೆ ಚಿಂತಿಸಬೇಕಿಲ್ಲ ಎಂದು ಹೇಳುವುದು ಹೊಣೆಗೇಡಿತನದ ಪರಮಾವಧಿ ಎನಿಸುತ್ತದೆ.
ಕೊರೋನಾ ಇತ್ತೀಚಿನ ವಿದ್ಯಮಾನ. ಭಾರತದಲ್ಲಿ ಮೇಲೆ ಉಲ್ಲೇಖಿಸಿದ ಆರೋಗ್ಯ ಸಮಸ್ಯೆಗಳಿಂದ ಮತ್ತು ಹಸಿವು ಬಡತನದಿಂದ ಲಕ್ಷಾಂತರ ಮಕ್ಕಳು ಸಾಯುತ್ತಲೇ ಇದ್ದಾರೆ. “ ಅಷ್ಟೊಂದು ಸಾವುಗಳು ಸಂಭವಿಸುತ್ತಿವೆ ಕೊರೋನಾ ಸಾವಿಗೆ ಏಕೆ ಅಷ್ಟೊಂದು ಆತಂಕ ” ಎನ್ನುವ ಧೋರಣೆಯೇ ಆಡಳಿತ ವ್ಯವಸ್ಥೆಯ ಅಮಾನುಷ ದೃಷ್ಟಿಕೋನವನ್ನು ಸೂಚಿಸುತ್ತದೆ.
ಅಸಹಜ ಸಾವು ಎಷ್ಟು ಸಂಭವಿಸುತ್ತಿದೆ ಎನ್ನುವುದಕ್ಕಿಂತಲೂ ಏಕೆ ಸಂಭವಿಸುತ್ತಿದೆ ಎಂದು ಯೋಚಿಸುವುದು ಸಂವೇದನಾಶೀಲ ಧೋರಣೆಯಾಗುತ್ತದೆ. ಕೊರೋನಾ ಸಂದರ್ಭದಲ್ಲೂ ಇದೇ ಧೋರಣೆ ನಮ್ಮಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಇರಬೇಕಿತ್ತು. ಆದರೆ ನಾವು ಕೊರೋನಾ ಎಲ್ಲಿಂದ ಹರಡುತ್ತಿದೆ ಎಂದಷ್ಟೇ ಯೋಚಿಸುತ್ತಿರುವುದರಿಂದ ಸೋಂಕಿತರ ಬಗ್ಗೆ ಕಾಳಜಿ ಕ್ಷೀಣಿಸುತ್ತಿದೆ.
ಈ ನಡುವೆ ನಾವು ಬದುಕಲು ಕಲಿಯಬೇಕೆಂದರೆ ಈ ಸಾವುಗಳ ನಡುವೆಯೋ ಅಥವಾ ಉಲ್ಬಣಿಸುತ್ತಿರುವ ರೋಗಗಳ ನಡುವೆಯೋ ? ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವವರಿಗೆ ಈ ಕನಿಷ್ಠ ಪ್ರಜ್ಞೆ ಇರಬೇಕಲ್ಲವೇ ? ಇಷ್ಟೊಂದು ಅಸಹಜ ಎನಿಸಬಹುದಾದ ಸಾವುಗಳು ಏಕೆ ಸಂಭವಿಸುತ್ತಿವೆ ? ನಮ್ಮಲ್ಲಿ ಇಂದಿಗೂ ಸಾರ್ವತ್ರಿಕ ಆರೋಗ್ಯ ಮತ್ತು ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಸ್ಥಿತಿಯಲ್ಲಿಲ್ಲ ಅಲ್ಲವೇ ? ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವ ವ್ಯವಧಾನವನ್ನೂ ಕಳೆದುಕೊಂಡಿರುವ ಆಡಳಿತ ವ್ಯವಸ್ಥೆ ಕೊರೋನಾ ವೈರಾಣುವಿನ ಸಮುದಾಯ ಪ್ರಸರಣ ಹೆಚ್ಚಾಗುತ್ತಿದ್ದರೂ ಲೆಕ್ಕಿಸದೆ ಇರುವುದು ದುರಂತ.
ಈ ಕುರಿತು ಎಚ್ಚರಿಸುವ, ಕೊರೋನಾ ನಿಯಂತ್ರಣದಲ್ಲಿನ ವೈಫಲ್ಯವನ್ನು ಎತ್ತಿತೋರುವ ವೈದ್ಯರನ್ನು, ತಜ್ಞರನ್ನು ನಿರ್ಲಕ್ಷಿಸುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕ್ವಾರಂಟೈನ್ ಕೇಂದ್ರಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಸೊಲ್ಲೆತ್ತುವವರನ್ನು ದೇಶದ್ರೋಹಿಗಳಂತೆ ಕಾಣಲಾಗುತ್ತಿದೆ. ತಮ್ಮ ಅಮೂಲ್ಯ ಸಲಹೆಗಳನ್ನು ಸರ್ಕಾರ ಗಮನಿಸುತ್ತಿಲ್ಲ ಎಂದು ವೈದ್ಯಲೋಕ ಕೂಗಿಕೂಗಿ ಹೇಳುತ್ತಲೇ ಇದೆ.
ಮಾರುಕಟ್ಟೆ ಶಕ್ತಿಗಳ ಕೂಗಿಗೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಅಧಿಕಾರಸ್ಥರು ವೈದ್ಯಲೋಕದ ಕೂಗನ್ನು ಏಕೆ ನಿರ್ಲಕ್ಷಿಸುತ್ತದೆ ? ಸಚಿವ ಸಿ ಟಿ ರವಿ ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತಾರೆ “ ಜನಗಳಿಗಿಂತಲೂ ಹೆಚ್ಚು ಬಾಧಿತವಾಗಿರುವುದು ಆರ್ಥಿಕತೆ ”. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಜೀವಬೆಲೆ ಇರುವುದಿಲ್ಲ. ಏಕೆಂದರೆ ಜೀವ ಬಿಕರಿಯಾಗುವುದಿಲ್ಲ.
ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳಲ್ಲಿ ರೂಪಿಸಲಾದ ಸ್ವಾವಲಂಬಿ ಭಾರತವನ್ನು ನಂತರದ ಮೂರು ದಶಕಗಳಲ್ಲಿ ವ್ಯವಸ್ಥಿತವಾಗಿ ಶಿಥಿಲಗೊಳಿಸಿದ ಆಡಳಿತ ವ್ಯವಸ್ಥೆಯೇ ಇಂದು ಆತ್ಮನಿರ್ಭರತೆಗಾಗಿ ಹಾತೊರೆಯುತ್ತಿದೆ. ಈ ಮೂರು ದಶಕಗಳ ಅವಧಿಯಲ್ಲಿ ತನ್ನ ನೆಲೆಯನ್ನೇ ಕಳೆದುಕೊಂಡಿರುವ ದೇಶದ ಸಾರ್ವತ್ರಿಕ-ಪ್ರಾಥಮಿಕ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ನೀಡಲು ಇಂದಿಗೂ ನಾವು ತಯಾರಾಗದಿದ್ದರೆ ಬಹುಶಃ ನಮ್ಮ ದೇಶಕ್ಕೆ ಕೊರೋನಾ ಅವಶ್ಯಕತೆಯೇ ಕಾಣುವುದಿಲ್ಲ.
ಖಾಸಗಿ ವೈದ್ಯಕೀಯ ಉದ್ಯಮ ಲೋಕ ಸಾವಿನ ಅಂಚಿನಲ್ಲಿರುವವರಿಗೆ ಮರುಜೀವ ನೀಡಲು ಹರಾಜುಕಟ್ಟೆಗಳನ್ನು ನಿರ್ಮಿಸುತ್ತಿದೆ. ಸತ್ತವರನ್ನೂ ಬದುಕಿಸುವ ಆಶ್ವಾಸನೆಯೊಂದಿಗೆ ತಮ್ಮ ಐಷಾರಾಮಿ ಚಿಕಿತ್ಸಾ ನೆಲೆಗಳನ್ನು ಸಿದ್ಧಪಡಿಸಿರುವ ಈ ಗಂಧರ್ವ ಲೋಕದ ಪ್ರಜೆಗಳಿಗೆ ಕೊರೋನಾ ಸೋಂಕಿತರು ಮನುಷ್ಯರಾಗಿ ಕಾಣಲೇ ಇಲ್ಲ ಎನ್ನುವುದು ದುರಂತ ಅಲ್ಲವೇ ? ಈ ಅಸಹಾಯಕ ಪ್ರಜೆಗಳತ್ತ ಒಮ್ಮೆ ತಿರುಗಿ ನೋಡ್ರಪ್ಪಾ ಎಂದು ಹೇಳುವ ಆತ್ಮಸ್ಥೈರ್ಯವೂ ಆತ್ಮನಿರ್ಭರತೆಯ ಪ್ರತಿಪಾದಕರಿಗೆ ಇಲ್ಲ. ಕಾರಣ ಇದು ಮಾರುಕಟ್ಟೆ. ಜನಸಾಮಾನ್ಯರಿಗೆ ಮಾನ್ಯತೆ ಇಲ್ಲದ ಆರ್ಥಿಕತೆಯ ಒಂದು ಲಾಭದಾಯಕ ವೇದಿಕೆ.
ಈ ವೇದಿಕೆಯ, ಈ ವ್ಯವಸ್ಥೆಯ ಪುನಶ್ಚೇತನಕ್ಕೆ ಪಣತೊಟ್ಟು ಯುದ್ಧೋನ್ಮಾದದಲ್ಲಿ ಮುನ್ನಡೆದಿರುವ ಸರ್ಕಾರಗಳಿಗೆ ಕೊರೋನಾ ವೈರಾಣು ಸಹ ಮಾರುಕಟ್ಟೆಯ ತ್ಯಾಜ್ಯದಂತೆ ಕಾಣುತ್ತಿರಬಹುದು. ಆದರೆ ಮಾರುಕಟ್ಟೆ ಆವರಣದಲ್ಲಿ ತಂತಾನೇ ಕೊಳೆತುಹೋಗುವ ತ್ಯಾಜ್ಯದಂತೆ ಕೊರೋನಾ ಕೊಳೆಯುವುದಿಲ್ಲ. ಅದು ಜನಸಮುದಾಯಗಳ ನಡುವೆ ಹರಡುತ್ತದೆ.
ಈ ಹರಡುವಿಕೆಯ ನಡುವೆ ಜನಸಾಮಾನ್ಯರು ಬದುಕು ಕಲಿಯುವುದೆಂದರೆ ಅರ್ಥವೇನು ? ಅನ್ಯರ ಸಾವನ್ನು ಲೆಕ್ಕಿಸದೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದೇ ? ಪಕ್ಕದ ಮನೆಯಲ್ಲಿ ಹೆಣ ಎತ್ತಿದರೆ ಸಾಕು ನಾವು ಸ್ನಾನ ಮಾಡಿ ಊಟ ಮಾಡಬಹುದು ಎನ್ನುವ ಸೂತಕ ಮನೋಭಾವ ಇರುವ ಸಮಾಜ ನಮ್ಮದು. ಈ ಸಮಾಜದಲ್ಲಿ ಅನ್ಯರ ಸಾವು ನಮ್ಮನ್ನು ವಿಚಲಿತಗೊಳಿಸಲು ಸಾಧ್ಯವೇ ?
ಆದರೆ ಸರ್ಕಾರ ವಿಚಲಿತವಾಗಲೇಬೇಕಲ್ಲವೇ ? “ ಲಕ್ಷಾಂತರ ಸಾವಿನ ನಡುವೆಯೇ ಬದುಕುತ್ತಿದ್ದೇವೆ ಸಾವಿರಗಳಿಗೇಕೆ ಚಿಂತೆ ” ಎನ್ನುವ ಧೋರಣೆ ಮಾನವೀಯ ಮೌಲ್ಯಗಳಿಗೆ ನಿಲುಕುವಂತಹುದಲ್ಲ. ಇದು ಸಾರ್ವತ್ರಿಕ ಆರೋಗ್ಯದ ಪ್ರಶ್ನೆ. ಕೊರೋನಾ ನಮ್ಮ ನಡುವೆಯೇ ಇರುತ್ತದೆ ನಿಜ, ಆದರೆ ಸಾವು ಬದುಕಿನ ಸಂಘರ್ಷದಲ್ಲಿ ಕೊರೋನಾ ಮಾನದಂಡವಾಗಕೂಡದು ಅಲ್ಲವೇ ?
ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದು ಅಸಹಜ ಸಾವಿಗೂ ನೈತಿಕ ಹೊಣೆ ಹೊರುವ ಮಾನವೀಯ ಆಡಳಿತ ವ್ಯವಸ್ಥೆ ನಮಗೆ ಬೇಕಿದೆ. ಇಂತಹ ವ್ಯವಸ್ಥೆಯನ್ನು ನಾವು ರೂಪಿಸಿದ್ದಿದ್ದರೆ ಸೂಕ್ತ ಚಿಕಿತ್ಸೆ ದೊರೆಯಲಾರದೆ ಜನರು ಸಾಯುತ್ತಿರಲಿಲ್ಲ. ಆಕರ್ಷಕ ಪದಪುಂಜಗಳು, ಘೋಷಣೆಗಳು ತಾತ್ಕಾಲಿಕ ಶಮನ ನೀಡುತ್ತವೆ. ಶಾಶ್ವತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.
ಭಾರತದ ಜನಸಮುದಾಯಗಳಿಗೆ ಬದುಕುವುದನ್ನು ಕಲಿಸಬೇಕಿಲ್ಲ. ನೋವು, ಅಪಮಾನ, ಹಿಂಸೆ, ಚಿತ್ರಹಿಂಸೆ, ಸಂಕಷ್ಟ ಮತ್ತು ರೋಗ ರುಜಿನಗಳ ನಡುವೆ ಬದುಕಿರುವುದನ್ನು ನೋಡಿದ್ದೇವೆ. ತಮ್ಮ ಅಸ್ಮಿತೆಯೇ ಸಾವಿಗೆ ಆಹ್ವಾನ ನೀಡುವ ಪರಿಸ್ಥಿತಿಯನ್ನೂ ದಿಟ್ಟತನದಿಂದ ಎದುರಿಸಿ ಬದುಕಿರುವುದನ್ನು ನೋಡಿದ್ದೇವೆ. ಕೊರೋನಾ ಅಸ್ಮಿತೆಯನ್ನು ಪ್ರಶ್ನಿಸುವುದಿಲ್ಲ.
ಆದರೆ ಕೊರೋನಾ ನಿಯಂತ್ರಿಸಬೇಕಾದ ಆಡಳಿತ ವ್ಯವಸ್ಥೆಗೆ ಅಸ್ಮಿತೆ ಮುಖ್ಯವಾಗುತ್ತದೆ. ಮಾರುಕಟ್ಟೆ ಮತ್ತು ಪ್ರಜೆ ಎರಡರ ನಡುವೆ ಒಂದನ್ನು ಆಯ್ಕೆ ಮಾಡುವ ನೆಲೆಯಲ್ಲಿ ಮಾರುಕಟ್ಟೆಯ ಅಸ್ಮಿತೆ ಮೇಲುಗೈ ಸಾಧಿಸುತ್ತದೆ. ಹಾಗಾಗಿಯೇ ಎಲ್ಲವೂ ಮುಕ್ತ – ಬದುಕುವುದು ನಿಮ್ಮಿಷ್ಟ ಎನ್ನುವ ಧೋರಣೆಯನ್ನು ಅನುಸರಿಸಲಾಗುತ್ತಿದೆ.
ಈ ದೇಶದ ಸಾರ್ವಭೌಮ ಪ್ರಜೆಗಳು ಆಡಳಿತ ವ್ಯವಸ್ಥೆಗೆ ಮಾಡಬಹುದಾದ ವಿನಂತಿ ಎಂದರೆ “ ಸ್ವಾಮಿ, ನಾವು ಬದುಕಲು ಕಲಿಯಬೇಕಿಲ್ಲ, ಸಾವಿನೊಂದಿಗೂ ಬದುಕಿ ನಿರೂಪಿಸಿದ್ದೇವೆ. ಆದರೆ ನೀವು ಸಾವುಗಳತ್ತ ಗಮನ ಹರಿಸಿ. ಮಾರುಕಟ್ಟೆ ವ್ಯವಸ್ಥೆ ಆರೋಗ್ಯವಂತರನ್ನೂ ಕೊಲ್ಲುತ್ತದೆ. ಈ ದೇಶದ ವಲಸೆ ಕಾರ್ಮಿಕರೇ ಇದಕ್ಕೆ ಸಾಕ್ಷಿ. ಮಾರುಕಟ್ಟೆ ಪುನಶ್ಚೇತನಗೊಂಡರೂ ಈ ಸಾವುಗಳು ನಿಲ್ಲುವುದಿಲ್ಲ. ಕನಿಷ್ಠ ಪಕ್ಷ ಕೊರೋನಾದಿಂದಾದರೂ ಜನರನ್ನು ರಕ್ಷಿಸಿ. ನಮಗೆ ಮಾತನಾಡಲು ಅವಕಾಶ ಕೊಡಿ ”. ಕೊರೋನಾಗೆ ಕಣ್ಣು ಕಿವಿ ಇಲ್ಲ, ಸರ್ಕಾರಕ್ಕೆ ಇರಲೇಬೇಕಲ್ಲವೇ..?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರ ಉದ್ಘಾಟನೆಗಳು
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ
ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪ್ರಾಂಶುಪಾಲರು, ಮೇಲ್ವಿಚಾರಕರು, ವೀಕ್ಷಕರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು .ಮತ್ತು ಪರೀಕ್ಷಾ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಎಲ್ಲಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಬಂದು ಪರೀಕ್ಷಾ ಕೊಠಡಿಯಲ್ಲಿ ವರದಿ ಸಿದ್ದಪಡಿಸಿಕೊಳ್ಳಬೇಕು. ಹಾಗೂ ಪರೀಕ್ಷೆ ನಡೆಯುವ ಕೊಠಡಿಯ ಒಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ್ಲ. ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು. ಕೊಠಡಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಿಸಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಮಾತನಾಡಿ, ಜ.25 ರಂದು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 18 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.
ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವೆರೆಗೆ ಪತ್ರಿಕೆ-2 ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರನ್ನೆ ಸಂಪರ್ಕಿಸಿ, ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ಅವಶ್ಯವಿರುವಷ್ಟು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಜಾಮರ್ (Jamar) ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಪ್ರತಿ ಕೇಂದ್ರಕ್ಕೆ ಅಗತ್ಯವಿರುವಷ್ಟು ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಬೇಕು. ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಪ್ರತಿ ಕೇಂದ್ರಕ್ಕೆ ಎರಡು ಹ್ಯಾಂಡ್ ಮೆಟಲ್ ಡಿಟೆಕ್ಟರ್‍ಗಳನ್ನು ಒದಗಿಸಲಾಗುವುದು.
ಕಾಲೇಜಿನ ಪ್ರಾಂಶುಪಾಲರನ್ನು ಆಯಾ ಕಾಲೇಜಿಗೆ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

