Connect with us

ದಿನದ ಸುದ್ದಿ

ಕೊರೊನ ಮೂರನೇ ಅಲೆ ಸಂಭವ ಮುನ್ನೆಚ್ಚರಿಕೆ ಅಗತ್ಯ : ಡಿಸಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ: ಪಕ್ಕದ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅತೀ ಹೆಚ್ಚು ಕೊರೊನ ಪ್ರಕರಣಗಳು ದಾಖಲಾಗುತ್ತಿದ್ದು, ಈ ರಾಜ್ಯಗಳೊಂದಿಗೆ ನಮ್ಮ ರಾಜ್ಯ ಗಡಿ ಹಂಚಿಕೊಂಡಿರುವುದರಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಇದು ಮೂರನೇ ಅಲೆಯ ಮುನ್ಸೂಚನೆಯಾಗಿದ್ದು ಎಚ್ಚರದಿಂದಿರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ನಿಯಂತ್ರಣ ಹಾಗೂ ಮೂರನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗೆಗೆ ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈಗಾಗಲೇ ಹೋಮ್ ಐಸೋಲೆಷನ್ ಸಂಪೂರ್ಣವಾಗಿ ನಿಲ್ಲಿಸಿದ್ದು ವರದಿಯಾಗುವ ಪ್ರಕರಣಗಳನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವಿರೋಧ ವ್ಯಕ್ತಪಡಿಸುತ್ತಾರೆ. ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಒಂದು ಕೋವಿಡ್ ಕೇರ್ ಸೆಂಟರ್ ತೆಗೆದು ಅವರುಗಳನ್ನು ಈ ಸೆಂಟರ್‍ಗಳಲ್ಲಿ ಉಪಚರಿಸಲಾಗುವುದು ಎಂದರು.

ಕೋವಿಡ್-19 ನಿಯಂತ್ರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಭಾವ್ಯ ಮೂರನೇ ಅಲೆ ಎದುರಾದಲ್ಲಿ ಅದನ್ನು ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಕೋವಿಡ್ ಕರ್ತವ್ಯದ ವೈದ್ಯರು ಸಿಬ್ಬಂದಿಗೆ ತರಬೇತಿ ನೀಡಿ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿಸಬೇಕು. ಜಿಲ್ಲಾಡಳಿತ, ಇಲಾಖೆಗಳ ಸಮನ್ವಯತೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮಕ್ಕಳಿಗೆ ಬರಬಹುದಾದ ಸೋಂಕನ್ನು ತಡೆಗಟ್ಟಲು ಸಜ್ಜಾಗಬೇಕು ಹಾಗೂ ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳನ್ನು ಮುಂಜಾಗ್ರತವಾಗಿ ಸಿದ್ಧಮಾಡಿಟ್ಟುಕೊಳ್ಳಬೇಕು ಎಂದರು.

ಇದನ್ನೂ ಓದಿ | ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಸಾಹೀರಾಬಾನು ಫಾರೂಕಿ

ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಬರದಂತೆ ತಡೆಗಟ್ಟಬೇಕಾದ ಜವಾಬ್ದಾರಿ ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳದ್ದಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ದಂಡ ವಿಧಿಸದಿರುವ ಕಾರಣ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು, ಧಾರ್ಮಿಕ ಸ್ಥಳಗಳಲ್ಲಿ ದರ್ಶನದ ಜೊತೆಗೆ ಸೇವೆ ಸಲ್ಲಿಸುವುದು ಹೀಗೆ ಬೇಜವ್ದಾರಿಯಿಂದ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದರಿಂದ 3ನೇ ಅಲೆಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ದಂಡ ವಿಧಿಸಬೇಕು ಎಂದು ತಿಳಿಸಿದರು.

ಮೊದಲನೇ ಅಲೆಯಲ್ಲಿ 1800 ಮಕ್ಕಳ ಪ್ರಕರಣಗಳು, 2ನೇ ಹಂತದಲ್ಲಿ 2,600 ಪ್ರಕರಣಗಳು ವರದಿಯಾಗಿದ್ದು, 3ನೇ ಅಲೆಯಲ್ಲಿ 4 ಸಾವಿರ ಮಕ್ಕಳ ಕೋವಿಡ್ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಿದ್ದು, ಈ ಪೈಕಿ 200 ಮಕ್ಕಳು ಆಸ್ಪತ್ರೆಗೆ ದಾಖಲಾಗಬಹುದು ಹಾಗೂ 40 ಮಕ್ಕಳು ಐಸಿಯುನಲ್ಲಿ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಐಸಿಯುನಲ್ಲಿ ದಾಖಲಾಗುವ ಮಕ್ಕಳಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಸ್ಪತ್ರೆಯಲ್ಲಿ 30 ಕ್ಕಿಂತ ಹೆಚ್ಚು ಬೆಡ್‍ಗಳು, 36 ಐಸಿಯು ಪೆಡಿಯಾಟ್ರಿಕ್ ಬೆಡ್‍ಗಳಿವೆ. ಅಗತ್ಯವಿರುವ ವೆಂಟಿಲೇಟರ್ಸ್, ಐಸಿಯು ಬೆಡ್ಸ್, ಮಲ್ಟಿಪ್ಯಾರಾ ಮಾನಿಟರ್ ಮತ್ತು ಇನ್ನುಳಿದವುಗಳನ್ನು ತರಿಸಲು ಈಗಾಗಲೇ ಏಜೆನ್ಸಿ ಗುರುತಿಸಿದ್ದು 10 ದಿನದೊಳಗಾಗಿ ತರಿಸಲಾಗುವುದು ಎಂದರು.

ನಗರ ಪ್ರದೇಶದಲ್ಲಿ ನಡೆಯುವ ಸಂತೆ ಜಾತ್ರೆಗಳಲ್ಲಿ ಬಿಗಿ ಕ್ರಮ ಅನುಸರಿಸಿ ಕೋವಿಡ್ ನಿಯಮಾ ಪಾಲಿಸಲು ತಿಳಿಸಬೇಕು. ಒಂದು ವೇಳೆ ವಿರೋಧಿಸಿದರೆ ಪೊಲೀಸರ ಸಹಾಯದಿಂದ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು. ನಿನ್ನೆ ಜಿಲ್ಲೆಯಲ್ಲಿ ಕೇವಲ 4 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದರಿಂದ ಕೋವಿಡ್ ಇಲ್ಲವೆಂದು ಮೈಮರೆಯುವುದು ಬೇಡ. ಒಮ್ಮೆಲೆ ಹೆಚ್ಚು ಪ್ರಕರಣಗಳು ಬಂದಿರುವ ಉದಾಹರಣೆಗಳು ನಮ್ಮ ಮುಂದಿದೆ ಎಂದರು.

ದುರ್ಬಲ ವರ್ಗದ 17 ಸಾವಿರ ಅಪೌಷ್ಠಿಕ ಮಕ್ಕಳಪಟ್ಟಿ ನಮ್ಮಲ್ಲಿದ್ದು ಇವರಲ್ಲಿ 10 ಸಾವಿರ ಮಕ್ಕಳ ಪೋಷಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದ 7 ಸಾವಿರ ಮಕ್ಕಳ ಪೋಷಕರಿಗೂ 15 ದಿನದೊಳಗಾಗಿ ಆದ್ಯತೆಯ ಮೇಲೆ ಲಸಿಕೆ ನೀಡಲು ಕ್ರಮ ವಹಿಸಲು ಸೂಚಿಸಿದರು. ಕೈಗಾರಿಕ ವಲಯಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಅಂತರಾಜ್ಯದಿಂದ ಬರುವ ಲಾರಿ ಚಾಲಕ ಹಾಗೂ ನಿರ್ವಾಹಕರಿಗೆ ಅಗತ್ಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ರಾಜ್ಯದಲ್ಲಿ 3ನೇ ಅಲೆಯ ಮುನ್ಸೂಚನೆ ಕಂಡು ಬಂದಿದ್ದು ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರಲಿದೆ. ಇದಕ್ಕಾಗಿ ಪೋಷಕರು ಮಕ್ಕಳನ್ನು ಬಹಳ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕಾಗಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಕ್ಕಳ ಪೋಷಕರಿಗೆ ಸೋಂಕು ಹಾಗೂ ಲಸಿಕೆಯ ಬಗ್ಗೆ ಜಾಗೃತಿ ನೀಡಿ ಲಸಿಕೆ ಪಡೆಯಲು ಮನವೊಲಿಸಬೇಕು ಎಂದರು.

ಪ್ರತಿಯೊಂದು ತಾಲ್ಲೂಕು, ಗ್ರಾಮದ ವ್ಯಾಪ್ತಿಯ ಅಂಗನವಾಡಿಗೆ ಬರುವ ಪ್ರತಿಯೊಂದು ಮಗುವಿಗೂ ಹಾಗೂ ಮಕ್ಕಳ ಪೋಷಕರಿಗೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಬೇಕು. ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯವನ್ನು ಪಡೆದುಕೊಂಡು ಮನೆ-ಮನೆಗೆ ಭೇಟಿ ನೀಡಿ ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ನಡೆಯುವ ಸಭೆ ಸಮಾರಂಭ, ಮದುವೆ ಕಾರ್ಯಗಳಲ್ಲಿ ಸರ್ಕಾರದ ಆದೇಶದಂತೆ 100 ಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡಿರುವುದು ಕಂಡು ಬಂದಲ್ಲಿ ಕೂಡಲೆ ದಂಡ ವಿಧಿಸಿ ಪ್ರಕರಣ ದಾಖಲಿಸಿಬೇಕು. ಹಾಗೂ ಮದುವೆ ಕಾರ್ಯಕ್ರಮದಲ್ಲಿ ಚಿತ್ರೀಕರಿಸಲಾದ ವಿಡಿಯೋವನ್ನು ಸಂಬಂಧಿಸಿದ ಅಧಿಕಾರಿಗಳು ವೀಕ್ಷಿಸಿ ನಿಗದಿಗಿಂತ ಹೆಚ್ಚು ಜನ ಸೇರಿದಲ್ಲಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.

ಸಾರ್ವಜನಿಕ ಸ್ಥಳಗಳಾದ ದಿನಸಿ ಅಂಗಡಿ, ಹಾಲಿನ ಡೈರಿ, ಮಾರುಕಟ್ಟೆ, ಹಾಗೂ ದೇವಸ್ಥಾನಗಳಲ್ಲಿ ಜನರು ಗುಂಪಿನಲ್ಲಿ ಸೇರುತ್ತಿದ್ದು, ಅದರಲ್ಲೂ ಶ್ರಾವಣ ಮಾಸದಲ್ಲಿ ಜನರು ದೇವಸ್ಥಾನಗಳಿಗೆ ಹೋಗುವುದು ಹೆಚ್ಚು. ಜನರು ಆದಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದರೆ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಜನರು ಬೇಜವಾಬ್ದಾರಿಯಾಗಿ ವರ್ತಿಸಬಾರದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, 3ನೇ ಅಲೆ ಬಂದೆ ಬರುತ್ತದೆ ಎಂಬುದು ಖಾತರಿಯಾಗಿದ್ದು, ಮಕ್ಕಳಿಗೆ ಬಂದರೆ ಪೋಷಕರು ಬಹಳಷ್ಟು ಆತಂಕಕ್ಕೊಳಗಾಗುತ್ತಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಅವರಲ್ಲಿ ಸೋಂಕು ತಗುಲಿದರೆ ಅದರೊಂದಿಗೆ ಹೋರಾಡುವಷ್ಟು ಶಕ್ತಿ ಅವರಲ್ಲಿ ಇರುವುದಿಲ್ಲ, ಇದರಿಂದಾಗಿ ಪೋಷಕರು ಬಹಳಷ್ಟು ಭಯಭೀತರಾಗುತ್ತಾರೆ. ಆದ್ದರಿಂದ ಆದಷ್ಟು ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮಹಾನಗರಪಾಲಿಕೆಯ ಗಾಡಿಗಳಲ್ಲಿ ಹಾಗೂ ಪೊಲೀಸ್ ಗಸ್ತು ವಾಹನಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿ ವರ್ಧಕಗಳ ಮೂಲಕ ಅರಿವು ಮೂಡಿಸಬೇಕು ಎಂದರು.

ಈ ಬಗೆಗೆ ಅರಿವು ಮೂಡಿಸಿದ ನಂತರವೂ ಜನರು ಕ್ರಮಗಳನ್ನು ಉಲ್ಲಂಘಿಸಿದರೆ ಅವರಿಗೆ ದಂಡ ವಿಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಹಾಗೂ ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು-ಗುಂಪಿನಲ್ಲಿ ಜನರು ಸೇರಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಬಳಸಬೇಕು ಎಂದ ಅವರು, ಹೆಚ್ಚು ಜನಜಂಗುಳಿ ಸೇರುವ ಮಾಹಿತಿಯನ್ನು ಮೊದಲೇ ಪಡೆದು ಆ ಸ್ಥಳಗಳಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಕೋವಿಡ್ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಬಡ್ತಿಯೊಂದಿಗೆ ವರ್ಗಾವಣೆ ಹೊಂದಿರುವ ಪ್ರಮೋದ್ ನಾಯಕ್ ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಆರ್‍ಸಿಹೆಚ್ ಡಾ.ಮೀನಾಕ್ಷಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


  • ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಉಳಿದ ಸೇವೆಗಳಿಗೆ ಅನುಮತಿಯಿಲ್ಲದಿದ್ದರು ಹೆಚ್ಚು ಜನ ಸೇರುವ ವರದಿಯಿದ್ದು, ಸಂಬಂಧಿಸಿದ ಪೂಜಾ ಸ್ಥಳಗಳ ಮುಖ್ಯಸ್ಥರು ಜನಜಂಗುಳಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಎರಡು ಮೂರು ದಿನಗಳ ಗಡುವು ನೀಡಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ದೇವಸ್ಥಾನಗಳನ್ನು ಬಂದ್ ಮಾಡಿಸಲು ಆದೇಶ ಮಾಡಲಾಗುತ್ತದೆ.

| ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ


  • ಈಗಾಗಲೇ ಉತ್ತಮ ಮಳೆಯಾಗುತ್ತಿದ್ದು, ಮಳೆಯ ನಂತರ ಚಿಕನ್‍ಗುನ್ಯ, ಡೆಂಗ್ಯುನಂತಹ ಸಾಂಕ್ರಾಮಿಕ ರೋಗಗಳು ಹರಡುವ ಹಿನ್ನೆಲೆಯಲ್ಲಿ ನೀರು ನಿಲ್ಲುವ ಸ್ಥಳಗಳ ಸ್ವಚ್ಚತೆ, ಡಿಡಿಟಿ ಸಿಂಪರಣೆ ಮಾಡಲು ಸ್ಥಳೀಯ ಆಡಳಿತಗಳು ಗಮನಹರಿಸಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು.

| ಸಿಇಓ ವಿಜಯ ಮಹಾಂತೇಶ ದಾನಮ್ಮನವರ್


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಯೋಜನೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲು ಸೂಚನೆ ; ಅಪರ ಜಿಲ್ಲಾಧಿಕಾರಿ ಪಿ.ಎನ್.ಲೊಕೇಶ್

Published

on

ಸುದ್ದಿದಿನ,ದಾವಣಗೆರೆ:ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಯೋಜನೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೊಕೇಶ್ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು (ಅ.3) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ. ಪರಿಶಿಷ್ಟ. ಜಾತಿ ಹಾಗೂ ಬುಡಕಟ್ಟು ಉಪಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಯೋಜನೆಯಲ್ಲಿ ಬರುವ ವಿವಿಧ ಇಲಾಖೆಗಳು ಯಾವುದೇ ಫಲಾನುಭವಿ ಆಯ್ಕೆಯಲ್ಲಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ಮಾಡದೆ ಕಾರ್ಯನಿರ್ವಹಿಸಬೇಕು ತಿಳಿಸಿದರು.

ಪ್ರಸಕ್ತ ಸಾಲಿನ ವಿವಿಧ ಇಲಾಖೆಗಳು ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿಯಲ್ಲಿ ಎಸ್.ಸಿ.ಎಸ್.ಪಿ ಶೇ. 83.44 ಹಾಗೂ ಟಿ.ಎಸ್.ಪಿ ಶೇ.82.96 ರಷ್ಟು ಆಗಿದ್ದು. ಇದನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನ ಆಗಬೇಕು ಎಂದು ತಿಳಿಸಿದರು.

ಎಸ್.ಸಿ.ಪಿ.ಯಡಿ 240.88 ಕೋಟಿ ಹಂಚಿಕೆಯಾಗಿ 89.98 ಕೋಟಿ ಬಿಡುಗಡೆ ಮಾಡಲಾಗಿದೆ, ಇದರಲ್ಲಿ 74.56 ವೆಚ್ಚ ಮಾಡಲಾಗಿದೆ. ಟಿಎಸ್‍ಪಿಯಡಿ 108.10 ಕೋಟಿ ಹಂಚಿಕೆಯಾಗಿದ್ದು 53.68 ಕೋಟಿ ಬಿಡುಗಡೆಯಾಗಿದ್ದು 44.10 ಕೋಟಿ ವೆಚ್ಚ ಮಾಡಲಾಗಿದೆ. ಈ ವರ್ಷದ ಅಂತ್ಯಕ್ಕೆ ಶೇ 100 ರಷ್ಟು ಸಾಧನೆಯನ್ನು ಎಲ್ಲಾ ಇಲಾಖೆಗಳು ಮಾಡಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಯ್ಕ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಕರಾದ ನಾಗರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಪೂಜಿ ಪ್ರಬಂಧ ಸ್ಪರ್ಧೆ ; ಸಚಿವರಿಂದ ವಿಜೇತರಿಗೆ ನಗದು ಬಹುಮಾನ ವಿತರಣೆ

Published

on

ಸುದ್ದಿದಿನ,ತುಮಕೂರು: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಮಾಡಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಿನ್ನೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಹಾಗೂ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ನಂತರ ಬಹುಮಾನ ವಿತರಣೆ ಮಾಡಿದರು.

ಪ್ರೌಢ ಶಾಲಾ ವಿಭಾಗದಲ್ಲಿ ಹನುಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದೀಕ್ಷಿತ ಪ್ರಥಮ, ಅಮೃತೂರು ಕೆ.ಪಿ.ಎಸ್ ವಿದ್ಯಾರ್ಥಿ ಎನ್.ಎನ್. ಹಿಮಾನಿ ದ್ವಿತೀಯ, ಅಂಕಸಂದ್ರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎ. ಪಿ. ಅಶ್ವಿನಿ ತೃತೀಯ ಸ್ಥಾನ; ಪದವಿ ಪೂರ್ವ ಕಾಲೇಜು ವಿಭಾಗದಿಂದ ಸಿರಾ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ಎಸ್.ಎಂ. ಗುಣಶ್ರೀ ಪ್ರಥಮ, ತುರುವೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್.ಎನ್. ಇಂಚರ ದ್ವೀತಿಯ, ತುಮಕೂರು ದಿ ಮಾಸ್ಟರ್ಸ್ ಪದವಿ ಪೂರ್ವ ಕಾಲೇಜಿನ ಆರ್. ವೆಂಕಟ್ ತೇಜ್ ತೃತೀಯ ಸ್ಥಾನ; ಪದವಿ ವಿಭಾಗದಿಂದ ತುಮಕೂರು ವಿಶ್ವವಿದ್ಯಾಲಯದ ಎಂ. ಎ ಪ್ರಥಮ ವರ್ಷದ ಶರಣಪ್ಪ ಪ್ರಥಮ, ಎಸ್. ಕೆ. ಸುಪ್ರೀತ ದ್ವಿತೀಯ, ಹೆಚ್.ಡಿ. ಸಂತೋಷ್ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಚಿವರು ನಗದು ಬಹುಮಾನ, ಪ್ರಮಾಣಪತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ , ವಾರ್ತಾ ಇಲಾಖೆಯ ಅಧಿಕಾರಿ ಹಿಮಂತರಾಜು.ಜಿ, ಸೇರಿದಂತೆ ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭ ; 2027 ಕ್ಕೆ ಜನವರಿಯೊಳಗೆ ರೈಲು ಸಂಚಾರಕ್ಕೆ ಕ್ರಮ : ಸಚಿವರಾದ ವಿ.ಸೋಮಣ್ಣ

Published

on

ಸುದ್ದಿದಿನ,ದಾವಣಗೆರೆ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು ಮುಂದಿನ ನಾಲ್ಕೈದು ತಿಂಗಳು ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಹಲವು ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನೇರ ರೈಲು ಮಾರ್ಗವು ನಿಧಾನಗತಿಯಲ್ಲಿ ಸಾಗುತ್ತಿದ್ದು ಕಳೆದ ಎರಡೂವರೆಗೆ ತಿಂಗಳಿಂದ ಇದರ ಪ್ರಗತಿ ವೇಗ ಹೆಚ್ಚಿಸಲಾಗಿದೆ. ಒಟ್ಟು ಈ ಯೋಜನೆಗೆ 2406.73 ಎಕರೆ ಭೂಮಿ ಬೇಕಾಗಿದ್ದು ಈಗಾಗಲೇ 2119.16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 287.54 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು ದಾವಣಗೆರೆ ಜಿಲ್ಲೆಯಲ್ಲಿ ಹಾದುಹೋಗುವ 263.78 ಎಕರೆ ಜಮೀನಿನಲ್ಲಿ 246.20 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು 17.58 ಎಕರೆಯ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ ಎಂದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದ್ದು 2027 ರ ಜನವರಿಯೊಳಗಾಗಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದೆ. ರೈಲ್ವೆ ಕಾಮಗಾರಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅಭಿವೃದ್ದಿ ಮಾಡಲಾಗುತ್ತದೆ. ಇದೇ ಆರ್ಥಿಕ ವರ್ಷದ ಕೊನೆಯಾಗುವ ವೇಳೆಗೆ ಕನಿಷ್ಠ 4 ರಿಂದ 5 ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಒಟ್ಟು 21 ರೈಲ್ವೆ ಯೋಜನೆಗಳು ನಡೆಯುತ್ತಿದ್ದು ಇದಕ್ಕಾಗಿ 43 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ರಾಜ್ಯವನ್ನು ರೈಲ್ವೆ ಸೌಕರ್ಯ ಹೊಂದಿದ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಯೋಜನೆಗೆ ಈಗಾಗಲೇ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 115.11.08 ಎಕರೆ ಜಮೀನು ಸ್ವಾಧೀನ ಮಾಡಲಾಗಿದೆ ಎಂದರು.

ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ; ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಕಡೆ ರೈಲ್ವೆ ಇಲಾಖೆಯಿಂದಲೇ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ದಾವಣಗೆರೆ ನಗರದ ಅಶೋಕ ಟಾಕೀಸ್ ಹತ್ತಿರ ರೈಲ್ವೆ ಲೈನ್ ಕೆಳಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣದ ಭೂ ನೇರ ಖರೀದಿಗೆ ರೂ.23.09 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಆದಷ್ಟು ಬೇಗ ಈ ಕಾಮಗಾರಿ ಮಾಡಲು ಅನುವು ಮಾಡಿಕೊಡಲಾಗುತ್ತದೆ ಎಂದರು.

ರೈಲ್ವೆ ವೇಗ ಹೆಚ್ಚಿಸಲು ಕ್ರಮ; ರೈಲ್ವೆ ಇಂಜಿನ್‍ಗಳು ಬಹುತೇಕ ಶೇ 98 ರಷ್ಟು ವಿದ್ಯುತ್ ಚಾಲಿತವಾಗಿದ್ದು ಶೇ 2 ರಷ್ಟು ಮಾತ್ರ ಡೀಸೆಲ್ ಇಂಜಿನ್‍ಗಳಿವೆ. ರೈಲ್ವೆ ಪ್ರಯಾಣದ ವೇಗ ಪ್ರಸ್ತುತ 110 ಕಿ.ಮೀ ಇದ್ದು ಇದನ್ನು 135 ಕಿ.ಮೀ ವರೆಗೆ ವೇಗ ಹೆಚ್ಚಿಸುವ ಗುರಿಯೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮಾಡಲಾಗುತ್ತಿದೆ. ವಂದೇ ಭಾರತ್ ರೈಲು ಬಡುವರು, ಮಧ್ಯಮ ವರ್ಗದವರಿಗೆ ತುರ್ತು ಪ್ರಯಾಣಕ್ಕಾಗಿ ಕೈಗೆಟಕುವ ದರದಲ್ಲಿ ಟಿಕೆಟ್ ಇದ್ದು ಇದರಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಅರಿಯಲು ಪ್ರಯಾಣಿಸಬೇಕೆಂದರು.

ಕನ್ನಡದಲ್ಲೆ ರೈಲ್ವೆ ಪರೀಕ್ಷೆ; ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು 15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿ ಇರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಖಾಲಿ ಇರುವ 46 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.

ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಸಭೆಯಲ್ಲಿ ಮಾತನಾಡಿ ದಾವಣಗೆರೆ ನಗರದಲ್ಲಿನ ಮೀನು ಮಾರುಕಟ್ಟೆ ಬಳಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ಅಗತ್ಯವಾಗಿದೆ. ಅಶೋಕ ಟಾಕೀಸ್ ಹತ್ತಿರ ರಸ್ತೆ ಕಿರಿದಾಗಿದ್ದು ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು, ಲಿಂಗೇಶ್ವರ ದೇವಸ್ಥಾನದ ಹತ್ತಿರ ಪಾದಚಾರಿ ಮಾರ್ಗ ನಿರ್ಮಿಸಲು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ಮಾರ್ಗದಲ್ಲಿ ಸೂರಗೊಂಡನಕೊಪ್ಪ ಅಥವಾ ನ್ಯಾಮತಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಅವಕಾಶ ಮಾಡಲು, ಹರಿಹರದಲ್ಲಿನ ರೈಲ್ವೆ ಆಸ್ಪತ್ರೆ, ಸ್ಕೂಲ್ ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.

ಹರಿಹರ ಶಾಸಕರಾದ ಬಿ.ಪಿ.ಹರೀಶ್ ಹೊಸಪೇಟೆ ಹೋಗುವ ಹೆದ್ದಾರಿಯಲ್ಲಿ ಒಂದೇ ರೈಲ್ವೆ ಸೇತುವೆ ಇದ್ದು ಮತ್ತೊಂದು ಬ್ರಿಡ್ಜ್ ನಿರ್ಮಾಣ ಮಾಡಬೇಕು, ಮಳೆ ಬಂದಾಗ ಈ ಮಾರ್ಗದ ವಾಹನಗಳಿಗೆ ತೊಂದರೆಯಾಗುವುದರಿಂದ ರೈಲ್ವೆ ಸೇತುವೆಯ ಅವಶ್ಯಕತೆ ಇದೆ ಎಂದರು.

ಸಭೆಯಲ್ಲಿ ಮೇಯರ್ ಚಮನ್ ಸಾಬ್, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ರೈಲ್ವೆ ಹಿರಿಯ ಅಧಿಕಾರಿ ಶರ್ಮಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending