ದಿನದ ಸುದ್ದಿ
ಕೋವಿದ್ 19 | ಆಶಯ ಮತ್ತು ಪ್ರಾರ್ಥನೆಗಳ ನಡುವೆ
- ಮೂಲ : ಅನುರಾಧ ರಮಣ್, ಅನುವಾದ : ನಾ ದಿವಾಕರ
ಆಶಾ ಕಾರ್ಯಕರ್ತೆ ‘ಅನಿತಾ ಶರ್ಮ’ ತಮ್ಮ ಟ್ವಿಟರ್ ಖಾತೆಯನ್ನು ಹೊಂದಿದ್ದರು. ಆಕೆ ಮನಸ್ಸು ಮಾಡಿದ್ದಲ್ಲಿ ತಮ್ಮ ಟ್ವಿಟರ್ ಖಾತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಟ್ಯಾಗ್ ಮಾಡಿ ತಮ್ಮನ್ನು ಹೀಗೆ ಪರಿಚಯಿಸಿಕೊಳ್ಳಬಹುದಿತ್ತು : “ನನ್ನ ಹೆಸರು ಅನಿತಾ, ಕೊರೋನಾ ವೈರಾಣು ವ್ಯಾಪಿಸಿದ ದಿನದಿಂದ ನನ್ನ ನೌಕರಿಯ ಚಿತ್ರಣವೇ ಬದಲಾಗಿಹೋಗಿದೆ. ಇತ್ತೀಚೆಗೆ ನಾನು ದಿನಕ್ಕೆ 12 ಗಂಟೆಗಳ ಕಾಲ ದುಡಿಯುತ್ತೇನೆ. ನನ್ನ ಅಲ್ಪ ವೇತನ ಮಾಸಿಕ 2000 ರೂಗಳು ಮಾತ್ರ. ಕಳೆದ ವರ್ಷ ಇದನ್ನು 4000 ರೂಗಳಿಗೆ ಹೆಚ್ಚಿಸಲಾದರೂ ಇದುವರೆಗೂ ಹೆಚ್ಚುವರಿ ವೇತನ ನೀಡಿಲ್ಲ. ನಿಜ ಹೇಳಬೇಕೆಂದರೆ ಈ ವರ್ಷದ ಫೆಬ್ರವರಿಯಿಂದ ನನಗೆ ವೇತನವನ್ನೇ ನೀಡಲಾಗಿಲ್ಲ .”
ಈ ಟ್ವಿಟರ್ ಸಂದೇಶವೇನಾದರೂ ಕಂಡಿದ್ದಲ್ಲಿ ಸಾಮಾಜಿಕ ಮಾಧ್ಯಮಗಳು ಆಕೆಯ ದನಿಗೆ ಮತ್ತಷ್ಟು ದನಿ ಸೇರಿಸಿ ಆಡಳಿತ ವ್ಯವಸ್ಥೆಯ ಗಮನ ಸೆಳೆಯುತ್ತಿದ್ದವು. ಹಾಗಾಗಿದ್ದಲ್ಲಿ ಕೂಡಲೇ ಅನುಕಂಪ, ಕರುಣೆ, ಮರುಕದ ಸಂದೇಶಗಳ ಮಹಾಪೂರವೇ ಹರಿದುಬರುತ್ತಿತ್ತು. ಈ ಸಂದೇಶದಿಂದ ನಾಗರಿಕ ಸಮಾಜದಲ್ಲಿ ಸೃಷ್ಟಿಯಾಗುತ್ತಿದ್ದ ಆಕ್ರೋಶ ಮತ್ತು ಸಿಗುತ್ತಿದ್ದ ಪ್ರಚಾರದಿಂದ ಆಕೆಯ ವೇತನ ಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿ ಮಾಡುವ ಪ್ರಕ್ರಿಯೆಯನ್ನೂ ನಿರೀಕ್ಷಿಸಬಹುದಿತ್ತು.
ಆದರೆ ಹಾಗಾಗಲಿಲ್ಲ. ಅನಿತಾ ಈಗಲೂ ತಲೆ ತಗ್ಗಿಸಿ ಕೆಲಸ ಮಾಡುತ್ತಲೇ ಇದ್ದಾರೆ. ತಮ್ಮದೇ ಹಳೆಯ ಬಟ್ಟೆಯಿಂದ ಹೊಲಿದ ಮುಖಗವುಸನ್ನು ಧರಿಸಿ ದುಡಿಯುತ್ತಿದ್ದಾರೆ. ಸಾಧ್ಯವಾದಷ್ಟು ಬಾರಿ ತಮ್ಮ ಕೈ ತೊಳೆಯುತ್ತಲೇ ಇರುತ್ತಾರೆ. (ಆಕೆಗೆ ಸರ್ಕಾರ ನೀಡಿರುವ 500 ಮಿಲಿ ಲೀಟರಿನ ಸ್ಯಾನಿಟೈಸರ್ ಖಾಲಿಯಾಗದಂತೆ ಎಚ್ಚರ ವಹಿಸುತ್ತಾರೆ). ಹೀಗೆಯೇ ಹರಿಯಾಣದಲ್ಲಿ ತಮ್ಮ ನಿತ್ಯ ಕಾಯಕದಲ್ಲಿ ತೊಡಗುತ್ತಾರೆ. ಸದಾ ಪ್ರಾರ್ಥನೆ ಮಾಡುತ್ತಲೇ ದುಡಿಮೆಯಲ್ಲಿ ನಿರತರಾಗುತ್ತಾರೆ. “ ನಾವು ಎಲ್ಲ ರೀತಿಯ ಕೆಲಸಗಳನ್ನೂ ನಿರ್ವಹಿಸಬೇಕು ಎಂದು ಅವರು ಅಪೇಕ್ಷಿಸುತ್ತಾರೆ ಆದರೆ ಆದರೆ ನಮಗೆ ಕನಿಷ್ಟ ರಕ್ಷಣೆಯನ್ನೂ ನೀಡುವುದಿಲ್ಲ ” ಎಂದು ಬೇಸರದಿಂದ ಹೇಳುತ್ತಲೇ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ.
ಅನಿತ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಪ್ರತಿನಿತ್ಯ ಮಕ್ಕಳು, ವೃದ್ಧರು, ಮಹಿಳೆಯರು, ವಿಶೇಷವಾಗಿ ಗರ್ಭಿಣಿಯರನ್ನು ತಪಾಸಣೆಗೊಳಪಡಿಸುವುದು ಅವರ ಕಾಯಕ. ಪ್ರತಿನಿತ್ಯ ಸರಾಸರಿ 25 ಮನೆಗಳಿಗೆ ಭೇಟಿ ನೀಡುವ ಅನಿತ ಪ್ರತಿನಿತ್ಯ ಭೇಟಿ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸಿ ಕಚೇರಿಗೆ ಸಲ್ಲಿಸುತ್ತಾರೆ. ಅನೇಕರಿಗೆ ಸಾವು ಬದುಕಿನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಸುವಲ್ಲಿ ಅನಿತ ಯಶಸ್ವಿಯಾಗುತ್ತಾರೆ.
ತಳಮಟ್ಟದ ಕಾಯಕ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರೂಪಿಸುವ ಪ್ರತಿಯೊಂದು ಆರೋಗ್ಯ ಯೋಜನೆಯ ಯಶಸ್ಸಿನ ಹಿಂದೆ ಅನಿತ ಅವರಂತಹ ತಳಮಟ್ಟದ ಕಾರ್ಯಕರ್ತೆಯರ ಪರಿಶ್ರಮ ಮತ್ತು ದುಡಿಮೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಕಬ್ಬಿಣಾಂಶ ಇರುವ ಮಾತ್ರೆ ಕೊಡುವುದರಿಂದ, ಎಳೆ ಮಕ್ಕಳಿಗೆ ಲಸಿಕೆ ಹಾಕುವ ವೇಳಾಪಟ್ಟಿಯನ್ನು ಗಮನಿಸುವುದು, ಗರ್ಭಿಣಿಯರಿಗೆ ಲಸಿಕೆ ನೀಡುವುದು, ಕ್ಷಯರೋಗಿಗಳಿಗೆ ತಪಾಸಣೆ ನಡೆಸುವುದು ಈ ಕೆಲಸಗಳ ಜೊತೆಗೇ ಈಗ ಅನಿತ ಕೋವಿದ್ 19 ಸೋಂಕಿನ ಲಕ್ಷಣಗಳನ್ನು ಗುರುತಿಸಿ ಜನರಿಗೆ ಸಲಹೆ ನೀಡುವ ಕೆಲಸವನ್ನೂ ನಿರ್ವಹಿಸಬೇಕಿದೆ.
ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಂಡು ಸ್ವಗ್ರಾಮಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರ ಬಗ್ಗೆಯೂ ಅನಿತ ಕಾಳಜಿ ವಹಿಸಬೇಕಾಗುತ್ತದೆ. ಈ ವಲಸೆ ಕಾರ್ಮಿಕರು ತಮಗೆ ನಿಗದಿಪಡಿಸಲಾದ ಕೇಂದ್ರಗಳಲ್ಲಿ ಕ್ವಾರಂಟೈನ್ ಅವಧಿಯನ್ನು ಸರಿಯಾಗಿ ಪೂರೈಸುವರೋ ಇಲ್ಲವೋ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಇವೆಲ್ಲ ಕೆಲಸಗಳೊಟ್ಟಿಗೆ ಅನಿತ ತಮ್ಮ ಕುಟುಂಬ ಮತ್ತು ನೆರೆಹೊರೆಯವರಿಗೆ ಕೊರೋನಾ ಸೋಂಕಿನ ಕುರಿತು ಮಾಹಿತಿಯನ್ನು ನೀಡುತ್ತಿರಬೇಕು.
ಕೊರೋನಾ ನಂತರದಲ್ಲಿ ಹೆಚ್ಚಿನ ಒತ್ತಡ ಮತ್ತು ಜವಾಬ್ದಾರಿಯನ್ನು ಎದುರಿಸುತ್ತಿರುವ ಭಾರತದ ಆರೋಗ್ಯ ಸೇವೆಯ ಕ್ಷೇತ್ರದ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ 9 ಲಕ್ಷದಷ್ಟಿದೆ. ಅನಿತಾ ಅವರಂತಹ ಸೇನಾನಿಗಳು, ಯಾವುದೇ ರಕ್ಷಣಾ ಕವಚ ಇಲ್ಲದೆ, ಸಮರ್ಪಕ ವೇತನ ಇಲ್ಲದೆ, ಯಾವುದೇ ಸಂರಕ್ಷಕ ಅಸ್ತ್ರಗಳಿಲ್ಲದೆ, ಸೂಕ್ತ ಮಾನ್ಯತೆಯೂ ಇಲ್ಲದೆ ದುಡಿಯುತ್ತಿದ್ದಾರೆ.
ಅನೇಕ ಆಶಾ ಕಾರ್ಯಕರ್ತೆಯರು ಜನರ ಆಕ್ರೋಶವನ್ನೂ ಎದುರಿಸಬೇಕಾಗಿದೆ. “ಕಲ್ಲಿಕೋಟೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಯಲ್ಲಿ ನೆರೆದಿದ್ದ ಜನರ ಗುಂಪನ್ನು ಚದುರಿಸಲು ಮುಂದಾದಾಗ ಓರ್ವ ಕಾರ್ಯಕರ್ತೆಯ ದ್ವಿಚಕ್ರ ವಾಹನವನ್ನು ಜಖಂಗೊಳಿಸಲಾಗಿದೆ. ಕೆಲವರು, ನಾವೇಕೆ ಒಬ್ಬ ಮಹಿಳೆ ಹೇಳಿದಂತೆ ಕೇಳಬೇಕು ಎನ್ನುತ್ತಾರೆ ” ಎಂದು ವಿಷಾದದಿಂದ ಹೇಳುತ್ತಾರೆ ಕೇರಳದ ಆಶಾ ಕಾರ್ಯಕರ್ತೆ ಪಿ ಪಿ ಪ್ರೇಮ.
ಇನ್ನೂ ಅಘಾತಕಾರಿ ವಿಚಾರ ಎಂದರೆ ಈವರೆಗೂ ದೇಶಾದ್ಯಂತ 20ಕ್ಕೂ ಹೆಚ್ಚು ಆಶಾಕಾರ್ಯಕರ್ತೆಯರು ಕೊರೋನಾಗೆ ಬಲಿಯಾಗಿದ್ದಾರೆ. ಮೇ 13ರಂದು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಬದನಕಟ್ಟೆ ಗ್ರಾಮದಲ್ಲಿ 51 ವರ್ಷದ ಆಶಾ ಕಾರ್ಯಕರ್ತೆ ಭೀಮಕ್ಕ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಮೃತಪಟ್ಟಿದ್ದರು. ಇಡೀ ದಿನ ಆಕೆಯ ಶವವನ್ನು , ಅವರ ಸಂಬಂಧಿಕರು ಆಸ್ಪತ್ರೆಯಲ್ಲೇ ಇಟ್ಟಿದ್ದರು. ಈ ಕೊರೋನಾ ಸೇನಾನಿಗೆ ವಿಮೆ ಸೌಲಭ್ಯ ಒದಗಿಸಬೇಕು ಎನ್ನುವುದು ಅವರ ಆಗ್ರಹವಾಗಿತ್ತು.
ಆದರೆ ವೈದ್ಯರು, ಆಕೆಗೆ ಕೊರೋನಾ ನೆಗಟೀವ್ ಎಂದು ಗುರುತಿಸಲಾಗಿದ್ದು, ಹೃದಯಾಘಾತದಿಂದ ಸತ್ತಿರುವುದರಿಂದ ವಿಮೆ ನೀಡಲಾಗುವುದಿಲ್ಲ ಎಂದು ವಾದಿಸಿದ್ದರು. ಸ್ಥಳೀಯ ಶಾಸಕರು ಮತ್ತು ಇತರ ನಾಯಕರು ಆಕೆಯ ವಿಚಾರವನ್ನು ಮುಖ್ಯಮಂತ್ರಿಯೊಡನೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಆಶ್ವಾಸನೆ ನೀಡಿದ್ದರೂ, ಈವರೆಗೂ ಈಡೇರಿಸಿಲ್ಲ. ಈ ಲೇಖನ ಬರೆಯುವ ವೇಳೆಗೆ ಇಬ್ಬರು ಆಶಾ ಕಾರ್ಯಕರ್ತೆಯರು, ಓರ್ವ ಅಂಗನವಾಡಿ ಕಾರ್ಯಕರ್ತೆ, ಓರ್ವ ಆರೋಗ್ಯ ಸಹಾಯಕಿ ಕೊರೋನಾ ಸೋಂಕಿತರಾಗಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯ ನಂತರ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.
ಕರ್ನಾಟಕದ ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ ಅಂಗನವಾಡಿ ಕಾರ್ಯಕರ್ತೆ ರೇಣುಕಾ ರೇಣುಕೇಗೌಡರ್ ಇತ್ತೀಚೆಗೆ ತಾನೇ ಕೋವಿದ್ 19 ನಿಂದ ಚೇತರಿಸಿಕೊಂಡಿದ್ದಾರೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಸಂಬಂಧಪಟ್ಟ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯೂ ಸಹ ಪ್ರತಿನಿತ್ಯ ಸೋಂಕಿತರ ಮತ್ತಿತರರ ಮನೆಗಳಿಗೆ ಭೇಟಿ ನೀಡಬೇಕು ಎಂಬ ನಿಯಮ ಇದ್ದರೂ ಸಹ ಯಾರೊಬ್ಬರೂ ತಿರುಗಿ ನೋಡುವುದಿಲ್ಲ.
“ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಪ್ರತಿನಿತ್ಯ ಮನೆ ಮನೆ ಸಮೀಕ್ಷೆ ನಡೆಸುವುದು, ಪಾಸಿಟಿವ್ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವುದು, ಪ್ರಾಥಮಿಕ ಮತ್ತು ತರುವಾಯದ ಸೋಂಕು ತಗುಲಿದವರನ್ನು ಪತ್ತೆ ಹಚ್ಚುವುದು, ಕಂಟೈನ್‍ಮೆಂಟ್ ವಲಯಗಳಲ್ಲಿ ಗಸ್ತು ತಿರುಗುವುದು, ಆಹಾರ ಮತ್ತು ಔಷಧ ಪದಾರ್ಥಗಳನ್ನು ವಿತರಿಸುವುದು ಈ ಎಲ್ಲ ಕೆಲಸಗಳನ್ನೂ ನಿರ್ವಹಿಸಬೇಕಾಗುತ್ತದೆ. ಕೆಲವು ಗ್ರಾಮಗಳಲ್ಲಿ ನೆರೆಹೊರೆಯವರು, ಗುಣಮುಖರಾದ ಕೊರೋನಾ ಸೋಂಕಿತರಿಗೆ ಹಾಲು ಮತ್ತಿತರ ಪದಾರ್ಥಗಳನ್ನು ಒದಗಿಸಲು ನಿರಾಕರಿಸಿದಾಗ ಪಕ್ಕದ ಹಳ್ಳಿಯಿಂದ ತಂದು ನೀಡಬೇಕಾಗುತ್ತದೆ ” ಎನ್ನುತ್ತಾರೆ ರೇಣುಕಾ ರೇಣುಕೇಗೌಡರ್.
ಬಹಿಷ್ಕೃತರಾದಾಗ
ರೇಣುಕಾ ಅವರಿಗೆ ಕೊರೋನಾ ಸೋಂಕು ತಗುಲಿದ ಸಂದರ್ಭದಲ್ಲಿ ಆಕೆ 20 ಪಾಸಿಟೀವ್ ಪ್ರಕರಣಗಳಿದ್ದ, ಹೆಚ್ಚಿನ ಅಪಾಯ ಇದ್ದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುಣಮುಖರಾದ ನಂತರ ಮನೆಗೆ ಹಿಂದಿರುಗಿದಾಗ ಗ್ರಾಮಸ್ಥರು ಆಕೆಯನ್ನು ಬಹಿಷ್ಕರಿಸಿದ್ದರು. “ ನನ್ನ ನೆರೆಹೊರೆಯವರು ನನ್ನಿಂದ ಮತ್ತು ನನ್ನ ಮಗಳಿಂದ ದೂರ ಉಳಿದರು, ನಾನು ಕೆಲಸ ಮಾಡುವಲ್ಲಿಯೂ ಸಹ ಕಳಂಕ ಹೊತ್ತುಕೊಂಡೇ ಇರಬೇಕಾಯಿತು, ಈ ರೋಗದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯವಾದ ಭೀತಿ ಆವರಿಸಿದೆ ಹಾಗಾಗಿ ನೀವು ಗುಣಮುಖರಾಗಿದ್ದರೂ ಬಹಳಷ್ಟು ಜನರು ನಿಮ್ಮಿಂದ ದೂರವೇ ಇರುತ್ತಾರೆ ” ಎಂದು ವಿಷಾದದಿಂದ ಹೇಳುತ್ತಾರೆ ರೇಣುಕ.
ರೇಣುಕಾ ಅಂಗನವಾಡಿ ಕಾರ್ಯಕರ್ತೆಯಾಗಿ 19 ವರ್ಷ ಸೇವೆ ಸಲ್ಲಿಸಿದ್ದಾರೆ. ತಿಂಗಳಿಗೆ 500 ರೂ ಸಂಬಳದಿಂದ ಆರಂಭವಾದ ಅವರ ನೌಕರಿಯಲ್ಲಿ ಈಗ ತಿಂಗಳಿಗೆ 10 ಸಾವಿರ ರೂ ವೇತನ ಪಡೆಯುತ್ತಿದ್ದಾರೆ. ಮುಂಚೂಣಿಯಲ್ಲಿ ನಿಂತು ಆರೋಗ್ಯ ಸೇವೆ ಸಲ್ಲಿಸುವ ಸೇನಾನಿಗಳನ್ನು ರಾಜ್ಯ ಸರ್ಕಾರ ಸಂವೇದನೆಯೇ ಇಲ್ಲದೆ ನಿರ್ವಹಿಸುತ್ತಿರುವ ರೀತಿಗೆ ರಾಜ್ಯದ ಕಾರ್ಮಿಕ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿವೆ.
ಈ ಕುರಿತು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹೀಗೆ ಹೇಳುತ್ತಾರೆ ; “ ಭೀಮಕ್ಕ ತಮ್ಮ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಸಾಯಲಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಆಕೆ ಕುಸಿದು ಬಿದ್ದ ಸಂದರ್ಭದಲ್ಲಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದರು. ಇದನ್ನು ಕರ್ತವ್ಯದ ವೇಳೆಯ ಸಾವು ಅಲ್ಲ ಎಂದು ಹೇಗೆ ನಿರ್ಧರಿಸಲು ಸಾಧ್ಯ ? ಎಲ್ಲ ಆಶಾ ಕಾರ್ಯಕರ್ತೆಯರನ್ನು, ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಆರೋಗ್ಯ ಸಹಾಯಕರನ್ನು ಕೂಡಲೇ ಖಾಯಂ ನೌಕರರು ಎಂದು ಘೋಷಿಸಿ ಇತರ ಸರ್ಕಾರಿ ನೌಕರರಿಗೆ ಒದಗಿಸುವ ವೇತನ ಮತ್ತು ವಿಮೆ ಮುಂತಾದ ಸೌಲಭ್ಯಗಳನ್ನು ಒದಗಿಸಲು ನಾವು ಆಗ್ರಹಿಸುತ್ತೇವೆ. ”
ಆಶಾ ಕಾರ್ಯಕರ್ತೆಯರನ್ನು ಪ್ರತಿನಿಧಿಸುವ ಪ್ರಬಲ ಕಾರ್ಮಿಕ ಸಂಘಟನೆಗಳು ಇರುವೆಡೆಯೆಲ್ಲಾ ಅವರ ಆಗ್ರಹಗಳಿಗೆ ಕಿವಿಗೊಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಕಳೆದ ಸೆಪ್ಟಂಬರ್ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನ ಪಾವತಿ ಮಾಡಿರಲಿಲ್ಲ. ಆಶಾ ಕಾರ್ಯಕರ್ತೆಯರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿತ್ತು. ಕೂಡಲೇ ಸ್ಪಂದಿಸಿದ ಸರ್ಕಾರ ವೇತನ ಪಾವತಿಸಲು ಒಪ್ಪಿಕೊಂಡಿತ್ತು. ಆದರೆ ತೆಲಂಗಾಣ ಮತ್ತು ಕೇರಳ ಸರ್ಕಾರದಂತೆ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವುದು ಇನ್ನೂ ಸ್ಪಷ್ಟವಾಗಿಲ್ಲ.
ಕೊರೋನಾ ವ್ಯಾಪಿಸುತ್ತಿರುವುದರಿಂದ ಕಾರ್ಯಕರ್ತೆಯರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿರುವುದನ್ನು ಕಂಡು ಕೇರಳ ಮತ್ತು ತೆಲಂಗಾಣ ಸರ್ಕಾರಗಳು ಆಶಾ ಕಾರ್ಯಕರ್ತೆಯರ ಮಾಸಿಕ ವೇತನವನ್ನು 7000 ರೂಗಳಿಗೆ ಹೆಚ್ಚಿಸಿವೆ. ಕರ್ನಾಟಕದಲ್ಲಿ 10 ಸಾವಿರ ವೇತನ ನೀಡಲಾಗುತ್ತಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲೂ ವೇತನ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 2000 ರೂ ಮತ್ತು ರಾಜ್ಯ ಸರ್ಕಾರಗಳು 2000 ರೂ ವೇತನ ನಿಗದಿಪಡಿಸಿವೆ.
ಘನತೆಯ ಹಕ್ಕು
ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ವರದಿಯೊಂದರ ಪ್ರಕಾರ ಏಪ್ರಿಲ್ 28ರ ವೇಳೆಗೇ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲ ದೇಶಗಳಿಗೂ ಸಂದೇಶವನ್ನು ರವಾನಿಸಿದ್ದು, ಎಲ್ಲ ಸರ್ಕಾರಗಳು, ಉದ್ಯೋಗದಾತರು, ಕಾರ್ಮಿಕ ಸಂಘಟನೆಗಳು ಮತ್ತು ಜಾಗತಿಕ ಸಮುದಾಯದ ಸಂಘ ಸಂಸ್ಥೆಗಳು, ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರ ವೃತ್ತಿಪರ ಆರೋಗ್ಯ ರಕ್ಷಣೆ ಮತ್ತು ಸುಭದ್ರತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ, ಅವರಿಗೆ ಗೌರವಯುತವಾದ ಕಾರ್ಯಕ್ಷೇತ್ರದ ಪರಿಸರವನ್ನು ಒದಗಿಸುವಂತೆಯೂ, ಅವರ ರಕ್ಷಣೆಗಾಗಿ ರಾಷ್ಟ್ರೀಯ ಯೋಜನೆಗಳನ್ನು ರೂಪಿಸುವಂತೆಯೂ ಆಗ್ರಹಿಸಿತ್ತು.
ಈಗ ಕೋವಿದ್ 19 ನಿಯಂತ್ರಣ ತಪ್ಪಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ನಿರೀಕ್ಷೆಯನ್ನೂ ಮೀರಿ ಹೆಚ್ಚಾಗಿದೆ. ಕೋವಿದ್ 19 ಸ್ಥಳೀಯ ಮಟ್ಟದಲ್ಲಿ ಪ್ರಸರಣವಾಗದಂತೆ ತಡೆಗಟ್ಟಲು ರೂಪಿಸಲಾದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾದರಿ ಯೋಜನೆಯ ಅನುಸಾರ, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡುವುದೇ ಅಲ್ಲದೆ ದಿನನಿತ್ಯ ಸೊಂಕು ಲಕ್ಷಣಗಳಿರುವ ಮತ್ತು ಲಕ್ಷಣಗಳಿಲ್ಲದಿರುವವರ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕಾಗುತ್ತದೆ.
ಜನವರಿಯಲ್ಲಿ ದೇಶದ ಪ್ರಪ್ರಥಮ ಕೋವಿದ್ ಪ್ರಕರಣ ದಾಖಲಾದ ಕೇರಳದ ತ್ರಿಸೂರ್ ಜಿಲ್ಲೆಯಲ್ಲಿ ಫೆಬ್ರವರಿಯಿಂದಲೇ ಹೊರ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಬರುವ ಪ್ರಯಾಣಿಕರ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಎಚ್ಚರವಹಿಸಲು ಅಜಿತಾ ರಾಜನ್ ಅವರಂತಹ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.
ಕಲ್ಲಿಕೋಟೆಯಲ್ಲಿ ಸಿಐಟಿಯು ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘದ ಕೇರಳ ರಾಜ್ಯಾಧ್ಯಕ್ಷೆಯಾದ ಪ್ರೇಮ “ ನಾವು ದಿನವಿಡೀ ಕೆಲಸ ಹೊಂದಿರುತ್ತೇವೆ, ಹೊರ ರಾಜ್ಯಗಳಿಂದ ಬರುವವರು ಮಧ್ಯರಾತ್ರಿ ಬಂದರೂ,, ನೆರೆಹೊರೆಯವರು ನಮಗೆ ದೂರವಾಣಿ ಮೂಲಕ ರಾತ್ರಿ ವೇಳೆಯೇ ಮಾಹಿತಿ ನೀಡುತ್ತಾರೆ, ಇದರೊಂದಿಗೆ ಕ್ವಾರಂಟೈನ್‍ನಲ್ಲಿರುವವರಿಗೆ ನಾವು ಸಾಂತ್ವನ ನೀಡುವುದೂ ಅಷ್ಟೇ ಮುಖ್ಯವಾಗಿರುತ್ತದೆ ” ಎಂದು ಹೇಳುತ್ತಾರೆ.
ಕೊಚಿ ನಗರದಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆ ಲತಾ ರಾಜು ಮನೆಯಲ್ಲೇ ಕ್ವಾರಂಟೈನ್ ಆಗಿರುವ ಸೋಂಕಿತರ ಎಲ್ಲ ವಿವರಗಳನ್ನೂ ನೋಟ್ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇವರು ಎಲ್ಲಿ ನೆಲೆಸಿದ್ದಾರೆ, ಎಲ್ಲಿಗೆ ಅಥವಾ ಎಲ್ಲಿಂದ ಪ್ರಯಾಣ ಮಾಡಿದ್ದಾರೆ, ಅವರ ಸಂಪರ್ಕ ಸಂಖ್ಯೆ ಹೀಗೆ ಎಲ್ಲವನ್ನೂ ದಾಖಲಿಸಿ ಹಲವು ಪುಸ್ತಕಗಳನ್ನು ತುಂಬಿಸಿದ್ದಾರೆ.
ಇದರೊಟ್ಟಿಗೆ ಒಂಟಿಯಾಗಿ ಜೀವನ ನಡೆಸುತ್ತಿರುವ ವೃದ್ಧರು, ಈಗಾಗಲೇ ಇತರ ಅನಾರೋಗ್ಯ ಸಮಸ್ಯೆ ಹೊಂದಿರುವವರು, ಗರ್ಭಿಣಿ ಮಹಿಳೆಯರು ಎಲ್ಲರ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಸಂಜೆ ವೇಳೆ ಈ ಅಂಕಿಅಂಶಗಳನ್ನು ಸಾರ್ವಜನಿಕ ಆರೋಗ್ಯ ಶುಶ್ರೂಷಕಿಯರಿಗೆ ಮತ್ತು ಆರೋಗ್ಯ ಪರೀಕ್ಷಕರಿಗೆ ಕಳುಹಿಸುವ ಮೂಲಕ ರಾಜ್ಯ ಮಟ್ಟದ ಮಾಹಿತಿ ಕೋಶಕ್ಕೆ ಲತಾರಾಜು ತಮ್ಮ ಕೊಡುಗೆ ಸಲ್ಲಿಸುತ್ತಾರೆ.
ಕೇರಳದ ಆಶಾ ಕಾರ್ಯಕರ್ತೆಯರು ಅನೇಕರ ಮನೆಗಳಿಗೆ ಆಹಾರ ಪದಾರ್ಥಗಳು, ದವಸ ಧಾನ್ಯಗಳು, ಔಷಧಿಗಳನ್ನು ಮತ್ತು ಸಮುದಾಯ ಅಡುಗೆ ಮನೆಯಿಂದ ಊಟ ತಿಂಡಿಯನ್ನೂ ತಲುಪಿಸುತ್ತಿದ್ದಾರೆ. ಲಕ್ಷಾಂತರ ಜನರು ತಮ್ಮ ಸ್ವಗ್ರಾಮಗಳಿಗೆ , ಮನೆಗಳಿಗೆ ಹಿಂದಿರುಗಲು ಆರಂಭಿಸಿದಾಗ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಾಗಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದವರ ಬಗ್ಗೆ ನಿಗಾವಹಿಸಲು ರೂಪಿಸಲಾಗಿದ್ದ ವಾರ್ಡ್‍ಮಟ್ಟದ ಸಮಿತಿಗಳಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿತ್ತು.
ಸಮಿತಿಯ ಸದಸ್ಯರೊಡನೆ ಕ್ವಾರಂಟೈನ್‍ಗೆ ಒಳಗಾದವರನ್ನು ಭೇಟಿಯಾಗುವುದೇ ಅಲ್ಲದೆ ಅಲ್ಲಿ ಕ್ವಾರಂಟೈನ್ ಮಾಡಲು ಅನುಕೂಲಕರ ಪರಿಸ್ಥಿತಿ ಇದೆಯೇ, ಮನೆಯೊಳಗೆ ಬಚ್ಚಲು ಮತ್ತು ಶೌಚಾಲಯ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಂಡು ವರದಿ ಮಾಡುವುದು ಇವರ ಜವಾಬ್ದಾರಿಯಾಗಿತ್ತು. ನಂತರ ಕುಟುಂಬದ ಇತರ ಸದಸ್ಯರಿಗೆ ಸುರಕ್ಷತಾ ವಿಧಾನಗಳ ಬಗ್ಗೆ ತಿಳುವಳಿಕೆ ನೀಡುವುದೂ ಇವರ ಹೊಣೆಯಾಗಿತ್ತು.
ದುರದೃಷ್ಟಕರ ಸಂಗತಿ ಎಂದರೆ ಅನೇಕ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಖಾಸಗಿ ಸುರಕ್ಷತಾ ಉಪಕರಣಗಳಾದ ಮಾಸ್ಕ್, ಕೈಗವುಸು ಮತ್ತು ಮುಖ ರಕ್ಷಕಗಳನ್ನು ಒದಗಿಸಿಲ್ಲ. ಅನೇಕರು ಮನೆಯಲ್ಲಿ ತಾವೇ ಹೊಲಿದ ಬಟ್ಟೆಯ ಮಾಸ್ಕ್ ಗಳನ್ನು ಧರಿಸುತ್ತಿದ್ದು, ಕೆಲವರು ತಮ್ಮ ದುಪ್ಪಟ್ಟ ಬಳಸುತ್ತಿದ್ದಾರೆ. ಕೇರಳದ ತಿರುವನಂತಪುರಂ, ಪಥನಮತಿಟ್ಟ, ಮಾಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರೇ ಸೋಂಕಿಗೆ ಒಳಗಾದಾಗ ಇವರಲ್ಲೂ ಆತಂಕ ಹೆಚ್ಚಾಗಿದೆ.
“ನಮ್ಮಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿ ಪಾಸಿಟೀವ್ ಕಂಡುಬಂದರೆ ನಮ್ಮ ಸಂಪರ್ಕದಲ್ಲಿರುವವರನ್ನು ಗುರುತಿಸುವ ಪ್ರಕ್ರಿಯೆ ಭೀಕರವಾಗಿರುತ್ತದೆ ” ಎನ್ನುತ್ತಾರೆ ಲತಾ ರಾಜು. ಆಶಾ ಕಾರ್ಯಕರ್ತೆಯರ ಕಾರ್ಯಕ್ಷಮತೆ ಮತ್ತು ಅವರ ವರದಿಗಾರಿಕೆಯೇ ದೇಶದ ಕೋವಿದ್ 19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ನೋಡಿದಾಗ, ಈ ಕಾರ್ಯಕರ್ತೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಆಡಳಿತ ವ್ಯವಸ್ಥೆ ಅಸಡ್ಡೆ ತೋರುತ್ತಿರುವುದು ನಿಜಕ್ಕೂ ದುರದೃಷ್ಟಕರ.
ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಡಾ ಎಮ್ ಎಸ್ ಶೇಷಾದ್ರಿ ಮತ್ತು ಟಿ ಜಾಕಬ್ ಹೇಳುವಂತೆ “ಮುಂಬರುವ ದಿನಗಳಲ್ಲಿ ಆಡಳಿತ ವ್ಯವಸ್ಥೆ ಕೈಗೊಳ್ಳಬೇಕಾದ ಅತ್ಯಂತ ಮುಖ್ಯ ಕ್ರಮ ಎಂದರೆ ನಮ್ಮ ಬಳಿ ಇರುವ ಎಲ್ಲ ಸಾಧನಗಳನ್ನೂ ಬಳಸಿ ಗ್ರಾಮೀಣ ಜನತೆಯಲ್ಲಿ ಜಾಗೃತಿ , ತಿಳುವಳಿಕೆ ಮೂಡಿಸುವುದು. ನಾವು ಅವರಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಬೇಕು ”(ದ ಹಿಂದೂ ಪತ್ರಿಕೆ). ಈ ಮಹತ್ಕಾರ್ಯವನ್ನು ನಿರ್ವಹಿಸಲು ಬಹುಶಃ ದೇಶದ ಯಾವುದೇ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ಹೊರತುಪಡಿಸಿ ಮತ್ತಾರೂ ನೆನಪಾಗುವುದಿಲ್ಲ.
ಏತನ್ಮಧ್ಯೆ ಕೊರೋನಾ ಸೋಂಕು ಪ್ರಕರಣಗಳು ನಿಯಂತ್ರಣವಿಲ್ಲದೆ ಹೆಚ್ಚಾಗುತ್ತಲೇ ಹೋಗುತ್ತಿರುವುದರಿಂದ ಅತಿಯಾದ ಎಚ್ಚರಿಕೆ ವಹಿಸಬೇಕಾದ ಸಂದರ್ಭವನ್ನೂ ಈ ಸೇನಾನಿಗಳು ಎದುರಿಸುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತೆ ಪ್ರೇಮಾ ಹೇಳುವಂತೆ “ ಒಂದು ಸಣ್ಣ ಪ್ರಮಾದ ತಿಂಗಳಗಟ್ಟಳೆ ಮಾಡಿದ ಉತ್ತಮ ಕೆಲಸವನ್ನು ಮಣ್ಣುಪಾಲು ಮಾಡಿಬಿಡುತ್ತದೆ ”. ಹೀಗೆಯೇ ಈ ಸೇನಾನಿ ಪಡೆಗಳು ಶ್ರಮವಹಿಸುತ್ತಲೇ ಇರುತ್ತವೆ.
( ಕೆಲವು ಹೆಸರುಗಳನ್ನು ಗೋಪ್ಯತೆಯ ದೃಷ್ಟಿಯಿಂದ ಬದಲಿಸಲಾಗಿದೆ. ರಿಷಿಕೇಷ್ ಬಹದ್ದೂರ್ ದೇಸಾಯಿ ಮತ್ತು ಅಭಿನಯ ಹರಿಗೋವಿಂದ್ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ)
ಕೃಪೆ: ಜುಲೈ 7 ತಾರೀಖು ‘ದಿ ಹಿಂದೂ’ ಇಂಗ್ಲಿಷ್ ದೈನಿಕ ದಲ್ಲಿ ಪ್ರಖಟವಾದ ಲೇಖನದ ಕನ್ನಡ ಅನುವಾದ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.
ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.
ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.
ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ…
ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.
ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?
ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.
ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.
ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿಮ್ಮದು ದರೋಡೆಕೋರ ಸರಕಾರವಲ್ಲವೇ?
ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..
ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

