ದಿನದ ಸುದ್ದಿ
ದಾವಣಗೆರೆ | 17.50 ಕೋಟಿಯ ಸುಸಜ್ಜಿತ ರೈಲ್ವೆ ನಿಲ್ದಾಣ, ಡಿಸಿಎಂ ಬಡಾವಣೆಯಲ್ಲಿ ಆಧುನಿಕ ರೈಲ್ವೆ ಕೆಳ ಸೇತುವೆ ಹಾಗೂ ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ರೈಲ್ವೆ ನಿಲ್ದಾಣ : ಜಿ.ಎಂ.ಸಿದ್ದೇಶ್ವರ
ಸುದ್ದಿದಿನ,ದಾವಣಗೆರೆ : ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆ ಆದ ಮೇಲೆ ಸ್ಮಾರ್ಟ್ ಸಿಟಿಗೆ ಸರಿಹೊಂದುವ ರೈಲ್ವೆ ನಿಲ್ದಾಣ ಆಗಬೇಕು ಹಾಗೂ ತಿಂಗಳಲ್ಲಿ ಸರಾಸರಿ 1.5 ಕೋಟಿಯಷ್ಟು ವರಮಾನ ಬರುವ ದಾವಣಗೆರೆ ರೈಲ್ವೆ ನಿಲ್ದಾಣ ಅತ್ಯಾಧುನಿಕ ಕಟ್ಟಡ ಹೊಂದಬೇಕು ಎಂಬ ನನ್ನ ಆಶಯ ಇಂದು ಈಡೇರಿದೆ ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಡಿಸಿಎಂ ಬಡಾವಣೆ ಬಳಿಯ ನವೀಕೃತ ರೈಲ್ವೆ ಕೆಳ ಸೇತುವೆ (ಯುಆರ್‍ಬಿ) ಹಾಗೂ ರೈಲ್ವೆ ನಿಲ್ದಾಣದ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನನ್ನ ಲೋಕಸಭಾ ಅವಧಿಯಲ್ಲಿ ನನಗೆ ತೃಪ್ತಿ ನೀಡಿದ ಕೆಲಸಗಳಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವೂ ಕೂಡ ಒಂದು.
ಇದನ್ನೂ ಓದಿ | ಭಾರತದಲ್ಲಿ 89,129 ಹೊಸ ಕೋವಿಡ್ ಪ್ರಕರಣಗಳು ದಾಖಲು
ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕೂಡ ರೈಲ್ವೆ ಇಲಾಖೆಯ ಸಾಮಥ್ರ್ಯ ಸ್ವಲ್ಪವೂ ಕಡಿಮೆಯಾಗಿಲ್ಲ. ಕೋವಿಡ್ ನಿಂದ ಲಾಕ್‍ಡೌನ್ ಆದ ಸಮಯದಲ್ಲಿ ಹಗಲಿರುಳೆನ್ನದೇ ಕಾಯನಿರ್ವಹಿಸಿದ್ದ ರೈಲ್ವೆ ನೌಕರರಿಗೆ ಅಭಿನಂದಿಸಿದರು. ನಗರದಲ್ಲಿ ರೂ. 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನವೀಕೃತ ರೈಲ್ವೆ ನಿಲ್ದಾಣವನ್ನು ಮುಂದಿನ 2 ವರ್ಷಗಳಲ್ಲಿ ಜಿ ಪ್ಲಸ್ 2 ಮಾದರಿ ಕಟ್ಟಡವಾಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ ಎಂದರು.
ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ಇನ್ನೂ ಮುಗಿದಿಲ್ಲ. ಆದರೆ ರೈಲ್ವೆ ನಿಲ್ದಾಣ ಕೈಗೆತ್ತಿಕೊಂಡ ಒಂದು ವರ್ಷದಲ್ಲೇ ಪೂರ್ಣಗೊಳಿಸಲಾಗಿದೆ. ಇದಕ್ಕೆ ಕೇಂದ್ರದ ಮಾಜಿ ಸಚಿವ ಸುರೇಶ್ ಅಂಗಡಿ ಕಾರಣೀಭೂತರು ಎಂದು ಅವರನ್ನು ಸ್ಮರಿಸಿದರು.
ರೈಲ್ವೆ ನಿಲ್ದಾಣವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಫುಟ್‍ಓವರ್ ಬ್ರಿಡ್ಜ್, ವಿಶಾಲವಾದ ಫ್ಲಾಟ್‍ಫಾರ್ಮ್ ಶೆಲ್ಟರ್, ಸ್ಟೇಷನ್ ಕಟ್ಟಡ, ಪಾರ್ಕಿಂಗ್ ಹಾಗೂ ಗಾರ್ಡನ್ ವ್ಯವಸ್ಥೆ, ಲಿಫ್ಟ್, ಪಿ.ಆರ್‍ಎಸ್ ಸೌಲಭ್ಯ, ವಿಐಪಿ ಲಾಡ್ಜ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕಾಯುವ ಸಭಾಂಗಣ, ಅತ್ಯಾಧುನಿಕ ಮಿಸಲಾತಿ ವ್ಯವಸ್ಥೆ, ಬಸ್‍ಬೇ, ವಿಶ್ರಾಂತಿ ಕೊಠಡಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗೂ ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ಅನ್ನು ರೂ.10 ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸೂಚಿಸಿದರು.
ರೈಲ್ವೆ ಕಟ್ಟಡದ ಹೊರಗಡೆ ವಿಶಾಲವಾದ ಆಗಮನ ಮತ್ತು ನಿರ್ಗಮನ ರಸ್ತೆಗಳು, ವಾಹನ ನಿಲುಗಡೆ ಪ್ರದೇಶ, ಸೆಲ್ಪಿ ಪಾಯಿಂಟ್ (ಐ ಲವ್ ಡಿವಿಜಿ), ಆಟೋ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಎದುರಿಗೆ ನಿರ್ಮಿಸಿರುವ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರುತ್ತಿರುವ ಬೃಹತ್ ರಾಷ್ಟ್ರಧ್ವಜ, ಸುಂದರವಾದ ಗೋಡೆ ನಿರ್ಮಾಣ, ಟಿಕೇಟ್ ಕೌಂಟರ್, ಅತ್ಯಧುನಿಕ ಶೌಚಾಲಯ ಸೇರಿದಂತೆ ವಿವಿಧ ಸವಲತ್ತುಗಳು ಪ್ರಯಾಣಿಕರಿಗೆ ಸಂತಸ ತರಲಿದೆ ಎಂದರು.
ರೈಲು ನಿಲ್ದಾಣದ ಆವರಣದಲ್ಲಿ ವಿಮಾನ ನಿಲ್ದಾಣದಲ್ಲಿರುವ ಬೆಳಕು ವಿನ್ಯಾಸ ಮಾದರಿಯಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲಾಗಿದ್ದು, ಇದರಿಂದ ಬಹಳಷ್ಟು ವಿದ್ಯುತ್ ಉಳಿತಾಯವಾಗಲಿದೆ. ಹಾಗೂ ರೈಲು ನಿಲ್ದಾಣದ ನೂತನ ಕಟ್ಟಡದ ಮೇಲೆ ಇನ್ನೊಂದು ಮಹಡಿಯನ್ನು ನಿರ್ಮಿಸಿ, ಅಭಿವೃದ್ಧಿಗೊಳಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ.
ಮುಂಬರುವ ದಿನಗಳಲ್ಲಿ ಅದಕ್ಕೂ ಮಂಜೂರಾತಿ ದೊರೆಯಲಿದೆ. ಕಟ್ಟಡ ನಿರ್ಮಾಣದ ನಂತರ ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸಿ ನಿಲ್ದಾಣಕ್ಕೆ ಅಗತ್ಯ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.ರೈಲು ನಿಲ್ದಾಣದ ಪಕ್ಕದ ಉಪವಿಭಾಗಾಧಿಕಾರಿ ಕಚೇರಿಯ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ.
ಈ ಜಾಗಕ್ಕೆ ಪರ್ಯಾಯವಾಗಿ ರೈಲ್ವೆ ಇಲಾಖೆಯು ದೊಡ್ಡಬಾತಿ ಬಳಿ ಜಾಗ ನೀಡಲಿದೆ. ಉಪವಿಭಾಗಾಧಿಕಾರಿ ಕಚೇರಿ ನಿರ್ಮಿಸಲು ರೂ. 5 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ನೂತನ ಕಚೇರಿಯನ್ನು ನಿರ್ಮಿಸಲಾಗುವುದು. ಈಗಿರುವ ಉಪವಿಭಾಗಾಧಿಕಾರಿ ಕಚೇರಿ ಜಾಗದಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ದ್ವಾರ ನಿರ್ಮಿಸಲಾಗುವುದು. ಜೊತೆಗೆ ಪಾರ್ಕಿಂಗ್ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು.
ಬಾಣಾವರದಿಂದ ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿವರೆಗೆ ರೈಲ್ವೆ ಲೈನ್ ಎಲೆಕ್ಟ್ರಿಫಿಕೇಷನ್ ಗಾಗಿ 160 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ದೇಶದಲ್ಲಿರುವ ಬಹುತೇಕ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ತೆರವುಗೊಳಿಸಲಾಗಿದೆ. ಹಾಗೂ ಆತ್ಮನಿರ್ಭರ ಭಾರತ್ ಇದರ ಉದ್ದೇಶಗಳನ್ನು ಈಡೇರಿಸಲು ರೈಲ್ವೆ ಇಲಾಖೆ ಈಗಲೂ ಬದ್ಧವಾಗಿದೆ ಎಂದರು.
2012-13 ರಲ್ಲಿ ಪ್ರತಿದಿನ 4 ರಿಂದ 5 ಕಿ.ಮೀ ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗ್ತಾ ಇತ್ತು. ಆದರೆ ಈಗ ಪ್ರತಿನಿತ್ಯ ಸರಾಸರಿ 23 ಕಿ.ಮೀ. ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗುತ್ತಿದೆ. ಅಲ್ಲದೇ ಪ್ರಧಾನಮಂತ್ರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 503 ಯೋಜನೆಗಳನ್ನು ಪೂರ್ಣಗೊಳಿಸುವ ಹಂತಕ್ಕೆ ತರಲಾಗಿದೆ.
ಹರಿಹರ ನಗರದ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಹರಿಹರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕೋವಿಡ್ ಕಾರಣಕ್ಕೆ ಉಂಟಾದ ಆರ್ಥಿಕ ಸಂಕಷ್ಟದಿಂದ ಮಂಜೂರಾತಿ ಸಿಗಲು ವಿಳಂಬವಾಗಿದೆ. ಮುಂಬರುವ ದಿನಗಳಲ್ಲಿ ಮಂಜೂರಾತಿ ಸಿಗಲಿದೆ ಎಂದರು.
ಹಾಗೂ ಹರಿಹರದ ಅಮರಾವತಿ ಬಳಿ ರೈಲ್ವೆ ನಿಲ್ದಾಣಕ್ಕೆ 30 ಕೋಟಿ ವೆಚ್ಚದಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.
ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯ ವ್ಯವಸ್ಥೆಯನ್ನು ಈ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಜಿ.ಎಂ.ಐ.ಟಿ ಕಾಲೇಜಿನ ಸಮೀಪದ ಕರೂರಿನಲ್ಲಿನ 203ನೇ ರೈಲ್ವೆ ಗೇಟ್ ಬಳಿ ಜುಲೈನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ರೂ. 15 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಆಧುನೀಕರಣ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ರೂ. 5 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್ (ಚಲಿಸುವ ಮೆಟ್ಟಿಲು) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅದರಲ್ಲೂ ಎಸ್ಕಲೇಟರ್ ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು ಬಿಟ್ಟರೆ ಇನ್ನಿತರ ಯಾವುದೇ ಜಿಲ್ಲೆಗಳಲ್ಲೂ ಇರಲಿಲ್ಲ. ಇದೀಗ ದಾವಣಗೆರೆಯಲ್ಲಿ ಆಗಿರುವುದು ಸಂತಸಕರ ಎಂದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದರುವ ಅಶೋಕ ರೈಲ್ವೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಜಮೀನಿನ ಮಾಲೀಕರೊಂದಿಗೆ ಜಿಲ್ಲಾಡಳಿತ ಮಾತುಕತೆ ನಡೆಸಿದ್ದು, ಶೀಘ್ರವೇ ಪರ್ಯಾಯ ಜಾಗವನ್ನು ಕೊಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹರಿಹರದಲ್ಲಿ 47 ಎಕರೆ ಜಮೀನಿನಲ್ಲಿ ಎಥನಾಲ್ ಘಟಕವು ಶೀಘ್ರದಲ್ಲೆ ಸ್ಥಾಪನೆಯಾಗಲಿದೆ.
ಮಾಯಕೊಂಡದಿಂದ ಹರಿಹರದವರೆಗೆ ಈಗಾಗಲೇ ರೂ.250 ಕೋಟಿ ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಮೆಗಾ ಜವಳಿ ಪಾರ್ಕ್ ನಿರ್ಮಿಸಲು 1038 ಎಕರೆ ಜಮೀನಿನ ಅಗತ್ಯವಿದ್ದು, ಇಲ್ಲಿಯವರೆಗೂ ಜಮೀನು ಸ್ವಾಧೀನ ನಡೆದಿಲ್ಲ. ಯಾವುದೇ ಕಾಮಗಾರಿ, ಯೋಜನೆಗಳನ್ನು ಪರಿಪೂರ್ಣಮಾಡಬೇಕೆಂದರೆ ಜಾಗದ ಕೊರತೆ ಇದೆ ಎಂದ ಅವರು ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ವಿಮಾನ ನಿಲ್ದಾಣ ಆರಂಭಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಪ್ರಪಂಚದಲ್ಲಿಯೇ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್‍ವರ್ಕ್ ಎಂಬ ಖ್ಯಾತಿಯನ್ನು ನಮ್ಮ ಇಂಡಿಯನ್ ರೈಲ್ವೆ ಹೊಂದಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಗೆ ತಕ್ಕ ಹಾಗೆ ಸ್ಮಾರ್ಟ್ ರೈಲ್ವೆ ನಿಲ್ದಾಣ ಆಗಿರುವುದು ಸಂತೋಷವಾಗಿದೆ. ಪ್ರಸ್ತುತ ದೇಶದ ಶೇಕಡ 33 ರಷ್ಟು ಸರಕು ಸಾಗಾಟ ರೈಲ್ವೆ ಮೂಲಕ ನಡೆಯುತ್ತಿದೆ. ಇದನ್ನು 2030 ರ ವೇಳೆಗೆ ಶೇಕಡ 50 ಕ್ಕೆ ಮುಟ್ಟಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಬೇಡಿಕೆಗೆ ಮುಂಚೆಯೇ ಮೂಲಸೌಕರ್ಯ ಸಾಮಥ್ರ್ಯವನ್ನು ಸೃಷ್ಟಿಸುವುದು ರಾಷ್ಟ್ರೀಯ ರೈಲ್ವೆ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 2030 ರೊಳಗೆ ದೇಶಾದ್ಯಂತ ಬ್ರಾಡ್‍ಗೇಜ್‍ನ್ನು ಸಂಪೂರ್ಣ ಎಲೆಕ್ಟ್ರಿಫಿಕೇಷನ್ ಮಾಡುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಈಗಾಗಲೇ ಶೇಕಡ 58 ರಷ್ಟು ಎಲೆಕ್ಟ್ರಿಫಿಕೇಶನ್ ಕಾರ್ಯ ಪೂರ್ಣಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಪೌರರಾದ ಎಸ್.ಟಿ.ವೀರೇಶ್, ದೂಡ ಅಧ್ಯಕ್ಷರಾದ ಶಿವಕುಮಾರ್, ವಿಭಾಗೀಯ ಮುಖ್ಯ ವ್ಯವಸ್ಥಾಪಕರಾದ ರಾಹುಲ್ ಅಗರ್‍ವಾಲ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮುಖಂಡರಾದ ಯಶವಂತರಾವ್ ಜಾದವ್, ವೀರೇಶ್ ಹನಗವಾಡಿ, ಲೋಕಿಕೆರೆ ನಾಗರಾಜ್, ಸುಧಾ ಜಯಪ್ರಕಾಶ್, ಲಿಂಗರಾಜ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

