Connect with us

ದಿನದ ಸುದ್ದಿ

ದಾವಣಗೆರೆ | ಜೂನ್ 14,16,18 ರಂದು ಬೆಳಿಗ್ಗೆ 6 ರಿಂದ 12 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ; ಜೂನ್ 14 ರಿಂದ 21 ರವರೆಗೆ ಲಾಕ್‍ಡೌನ್ ಮುಂದುವರಿಕೆ : ಜಿಲ್ಲಾಧಿಕಾರಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಜೂನ್ 14 ರವರೆಗೆ ಇದ್ದ ಲಾಕ್‍ಡೌನ್ ಅನ್ನು ಜೂನ್ 21 ರ ಬೆಳಿಗ್ಗೆ 6 ರವೆರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಜಿಲ್ಲಾಡಳಿತ ಭವನದಲ್ಲಿ ಇಂದು (ಶನಿವಾರ) ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ಈ ಹಿಂದಿನ ಮಾರ್ಗಸೂಚಿಯಂತೆ ಲಾಕ್‍ಡೌನ್‍ನ ಎಲ್ಲಾ ನಿರ್ಬಂಧಗಳು ಮುಂದುವರೆದಿದ್ದು, ಜೂನ್ 14, 16, 18 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಮದ್ಯದ ಅಂಗಡಿಗಳು, ಕೋವಿಡ್-19 ನಿರ್ವಹಣೆಯ ಸಂಬಂಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಅನುಮತಿಸಲಾಗಿರುತ್ತದೆ.

ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ಕೆಲಸ, ಕಾಮಗಾರಿಗಳು, ಕಟ್ಟಡ ಕಾಮಗಾರಿ ಸಾಮಾಗ್ರಿ ಮತ್ತು ಅಗತ್ಯ ವಸ್ತುಗಳಾದ ಸಿಮೆಂಟ್, ಕಬ್ಬಿಣ, ಪೇಂಟ್ಸ್, ಹಾರ್ಡ್‍ವೇರ್, ಗ್ಲಾಸ್, ಪ್ಲೆ-ವುಡ್, ಸಾಮಿಲ್ಸ್, ಎಲೆಕ್ಟ್ರೀಕಲ್ಸ್, ಟೈಲ್ಸ್ ಅಥವಾ ಮಾರ್ಬಲ್ಸ್, ಸ್ಯಾನಿಟರಿ ವೈರ್ಸ್ ಅಂಗಡಿಗಳ ಚಟುವಟಿಕೆಗಳನ್ನು ನಡೆಸಲು ಜೂನ್ 14, 16, 18 ರ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ಮೂರು ದಿನ ಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜನಪ್ರತಿನಿಧಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು ಈ ಸಾಂಕ್ರಮಿಕವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು 25 ಗ್ರಾಮಗಳಲ್ಲಿ ವರದಿಯಾಗಿದ್ದು, ಆ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ವೈದ್ಯಕೀಯ ತುರ್ತು ಹಾಗೂ ಅಗತ್ಯ ಸೇವೆಗಳ ಹೊರತುಪಡಿಸಿ ಗ್ರಾಮದಿಂದ ಹೊರ ಹಾಗೂ ಒಳ ಸಂಚಾರವನ್ನು ಕಟ್ಟುನಿಟ್ಟಾಗಿ ಬಿಗಿಗೊಳಿಸಲಾಗಿದೆ.

ನರೇಗಾ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದ ದಿನ ಹಾಲು ಮೊಟ್ಟೆ, ಮೆಡಿಕಲ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತರಕಾರಿ ಹಣ್ಣುಗಳನ್ನು ತಳ್ಳುಗಾಡಿ ಮುಖಾಂತರ ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ.

ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು,
6-10 ಪ್ರಕರಣಗಳಿರುವ 64 ಗ್ರಾಮಗಳಲ್ಲಿ ಸರ್ವೇಕ್ಷಣೆಯನ್ನು ತೀವ್ರಗೊಳಿಸಿ ಸ್ಥಳೀಯ ಗ್ರಾಮಪ್ರತಿನಿಧಿಗಳು, ಪಿಡಿಓ ಇವರುಗಳಿಂದ ಜಾಗೃತಿ ಮೂಡಿಸಿ ಟೆಸ್ಟ್ ಗಳನ್ನು ಹೆಚ್ಚು ಮಾಡಲು ನಿರ್ದೇಶಿಸಲಾಗಿದೆ. ಹಾಗೂ ಜಿಲ್ಲೆಯಲ್ಲಿ ಜೂ.1 ರಂದು ಶೇ.23.47, ಜೂ.9 ರಂದು ಶೇ.12.65, ಜೂ.10 ರಂದು ಶೇ.10.23, ಜೂ.11 ರಂದು ಶೇ.6.81 ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿಯಬೇಕು ಎಂದರೆ ನಿರ್ಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು.

ಅನಗತ್ಯವಾಗಿ ಮನೆಯಿಂದ ಯಾರು ಹೊರ ಬರಬಾರದು ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರನ್ನು ನೋಡಿಕೊಳ್ಳುವ ಅಟೆಂಡರ್‍ಗಳು ಸುಮ್ಮಸುಮ್ಮನೆ ಕಾರಣ ಹೇಳಿ ಹೊರಬರಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ರಿಷ್ಯಂತ್ ಮಾತನಾಡಿ, ಜಿಲ್ಲೆಯಲ್ಲಿ 26 ಕಡೆ ಚೆಕ್‍ಪೋಸ್ಟ್ ಇದ್ದು ಅಲ್ಲಿ ಸಿಬ್ಬಂದಿಗಳನ್ನು ಹೆಚ್ಚಳ ಮಾಡಲಾಗುವುದು. ಕೆಲವೆಡೆ ಇಬ್ಬರು ಸಿಬ್ಬಂದಿ ಇದ್ದು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಹಾಗಾಗಿ ಹೋಂ ಗಾರ್ಡ್ ಗಳನ್ನು ಪಡೆದು ಸಿಬ್ಬಂದಿ ನೇಮಕ ಮಾಡಲಾಗುವುದು.

ಹಾಗೂ ನಿಯಾಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಾಗಿಸಲಾಗುವುದು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರನ್ನು ದಂಡ ವಿಧಿಸಿ ವಾಹನಗಳನ್ನು ಸೀಜ್ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಪ್ಯಾಟ್ರೋಲ್ ವಾಹನಗಳಿಂದ ಗಸ್ತು ನಡೆಸಲಾಗುವುದು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರು ಹೆಚ್ಚಾಗಿದ್ದು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಜನದಟ್ಟನೆ ನಿಯಂತ್ರಿಸಲಾಗುವುದು ಎಂದರು.

ಇದನ್ನೂ ಓದಿ | ದಾವಣಗೆರೆ | ಜಿಲ್ಲೆಯ 25 ಗ್ರಾಮಗಳು ನಿಯಂತ್ರಿತ ವಲಯ : ಜಿಲ್ಲಾಧಿಕಾರಿ https://suddidina.com/davanagere-25-villages-in-the-district-controlled-zone-district-collector/

ಜಿ.ಪಂ. ಸಿಇಒ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹಾಗೂ ಪಾಸಿಟಿವ್ ದರ ಕಡಿಮೆಯಾಗುತ್ತಿದೆ. ಸೋಂಕಿತರನ್ನ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲು ತಿಳಿಸಲಾಗುತ್ತಿದೆ ಎಂದರು.

ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಈಗಾಗಲೇ 3,69,925 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಸಭೆಯಲ್ಲಿ ಎಸಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಒ ಡಾ.ನಾಗರಾಜ್, ಯೋಜನಾಧಿಕಾರಿ ನಜ್ಮಾ, ಎಎಸ್‍ಪಿ ರಾಜೀವ್, ಡಾ.ನಟರಾಜ್, ಡಾ.ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

25 ಗ್ರಾಮಗಳು ಕಂಟೆನ್ಮೆಂಟ್ ಜೋನ್ ವ್ಯಾಪ್ತಿಗೆ

ದಾವಣಗೆರೆ ತಾಲ್ಲೂಕಿನ ಅಣಬೇರು, ಕುಕ್ಕುವಾಡ, ಕೈದಾಳೆ, ಕುರ್ಕಿ, ತುರ್ಚಘಟ್ಟ, ಬೇತೂರು, ಕಾಶೀಪುರ, ಮಳಲಕೆರೆ ಗ್ರಾಮಗಳು, ಹರಿಹರ ತಾಲ್ಲೂಕಿನ ಗುತ್ತೂರು, ಕೆ.ಬೇವಿನಹಳ್ಳಿ, ನಂದಿತಾವರೆ, ಭಾನುವಳ್ಳಿ, ಹೊಳೆಸಿರಿಗೆರೆ, ಹಾಲಿವಾಣ ಗ್ರಾಮಗಳು, ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ, ಹನುಮನಹಳ್ಳಿ, ಕೂಲಂಬಿ, ಗೊಲ್ಲರಹಳ್ಳಿ, ಐನೂರು ಗ್ರಾಮಗಳು, ನ್ಯಾಮತಿ ತಾಲ್ಲೂಕಿನ ದಾನಿಹಳ್ಳಿ, ಕುಂಕೊವ, ಫಲವನಹಳ್ಳಿ, ಸುರಹೊನ್ನೆ ಗ್ರಾಮಗಳು, ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮ ಹಾಗೂ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಗ್ರಾಮಗಳನ್ನು ಕಂಟೆನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending