Connect with us

ದಿನದ ಸುದ್ದಿ

ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Published

on

ಸುದ್ದಿದಿನ,ಶಿವಮೊಗ್ಗ: ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಎಲ್ಲಾ ಮುಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಭೀತಿಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ವಿವಿಧ ಅಭಿವೃದ್ದಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರನೇ ಅಲೆ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸರ್ಕಾರ ಡಾ.ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಈಗಾಗಲೇ ರಚಿಸಿದೆ. ಈ ಸಮಿತಿ ಮೂರ್ನಾಲ್ಕು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದು, ಸಮಿತಿಯ ವರದಿಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ವರದಿಗಳಿದ್ದು, ಕೋವಿಡ್‍ನಿಂದ ಮಕ್ಕಳನ್ನು ರಕ್ಷಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 75 ಮಕ್ಕಳ ಐಸಿಯು ಬೆಡ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ,.5ಕ್ಕಿಂತ ಕೆಳಗೆ ಇಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ವೈದ್ಯಕೀಯ ಸೇವೆ ಉತ್ತಮಪಡಿಸಲು ಸರ್ಕಾರ ಹಲವು ದಿಟ್ಟ ಹೆಜ್ಜೆ ಇರಿಸಿದೆ. ಇದೇ ಮೊದಲ ಬಾರಿಗೆ 1780 ವೈದ್ಯರನ್ನು ರಾಜ್ಯದಲ್ಲಿ ನೇರ ನೇಮಕಾತಿ ಮೂಲಕ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಗೆ 83 ವೈದ್ಯರ ನೇಮಕ ಮಾಡಲಾಗಿದ್ದು, ಇದರಲ್ಲಿ 29 ಮಂದಿ ತಜ್ಞ ವೈದ್ಯರಿದ್ದಾರೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸುಧಾರಣೆ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ತಜ್ಞರ ಸಮಿತಿಯಿಂದ ಆಡಿಟ್

ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸಾವುಗಳ ಕುರಿತು ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಆಡಿಟ್ ನಡೆಸಿ ವರದಿಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಾಗಿರಲು ಕಾರಣವನ್ನು ಕಂಡುಕೊಳ್ಳಲು ಬೆಂಗಳೂರಿನಿಂದ ತಜ್ಞರ ಸಮಿತಿಯನ್ನು ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾದ 72ಗಂಟೆಯೊಳಗೆ ಸಾವಿಗೀಡಾದವರ ಪ್ರಮಾಣ ಹೆಚ್ಚಾಗಿದ್ದು, ಈ ಕುರಿತು ಸಮಿತಿ ಪರಿಶೀಲನೆ ನಡೆಸಿ ವರದಿಯನ್ನು ನೀಡಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಸಭೆಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ಗೆ ಅವಕಾಶ ನೀಡದರೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೇ ಪೀಡಿತರಿಗೆ ಚಿಕಿತ್ಸೆ ಒದಗಿಸಬೇಕು. ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇದಕ್ಕೆ ಅನುಗುಣವಾಗಿ ವೈದ್ಯರು ಸೇರಿದಂತೆ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು, ನರ್ಸ್‍ಗಳು ಹಾಗೂ ಡಿ ಗ್ರೂಪ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆಯಿದ್ದು, ಈ ಕುರಿತು ಆದಷ್ಟು ಬೇಗನೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯ ಕೋವಿಡ್ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾಹಿತಿಯನ್ನು ನೀಡಿದರು.

ನಗರಾಭಿವೃದ್ಧಿ ಸಚಿವ ಬಿ.ಬಸವರಾಜು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

Published

on

ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್ ಸೇರಿದಂತೆ ವಿವಿಧ ಅಂಚೆ ಸೇವೆಗಳನ್ನು ಮನೆಯಿಂದಲೇ ಬುಕ್ ಮಾಡುವ ಅವಕಾಶವನ್ನು ಪಡೆಯಬಹುದು. ಇದರ ಮೂಲಕ ಅಂಚೆ ಕಚೇರಿಯಲ್ಲಿ ಸಾಲಿನಲ್ಲಿ ನಿಲುವ ಅನಿವಾರ್ಯತೆ ಕಡಿಮೆಯಾಗುತ್ತದೆ ಹಾಗೂ ಸಮಯದ ಉಳಿತಾಯವಾಗುತ್ತದೆ.

ಸೇವೆಯನ್ನು ಈ ಮೂಲಕ https://app.indiapost.gov.in/customer.selfservice/home ಪೂರ್ಣಗೊಳಿಸಿದ ನಂತರ ಸೃಷ್ಟಿಯಾಗುವ ಲೇಬಲ್, ಕ್ಯೂಆರ್ ಅನ್ನು ಮುದ್ರಿಸಿ ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಸ್ಪೀಡ್ ಫೆÇೀಸ್ಟ್, ಪಾರ್ಸೆಲ್ ಅನ್ನು ಬುಕ್ಕಿಂಗ್ ಸಂಖ್ಯೆಯ ಮೂಲಕ ಹಸ್ತಾಂತರಿಸಬಹುದು. ಸಾರ್ವಜನಿಕರು ಈ ನವೀನ ಡಿಜಿಟಲ್ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 26 ಕೊನೆಯ ದಿನವಾಗಿದೆ.

ವಿಶೇಷ ಘಟಕ ಯೋಜನೆಯಡಿ 12 ತಿಂಗಳ ಅಪ್ರೆಂಟಿಸ್ ತರಬೇತಿಗಾಗಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸಿರುವ ಹಾಗೂ ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರುವ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ನೀಡುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಎಂದು ನಮೂದಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ಆಯ್ಕೆಯಾಗಿ ತರಬೇತಿಗೆ ಹಾಜರಾಗುವ ಸಂದರ್ಭದಲ್ಲಿ ಮೂಲ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಪದವಿಯ ಎಲ್ಲ ವರ್ಷಗಳ ಅಂಕಪಟ್ಟಿಗಳು, ಸ್ನಾತ್ತಕೋತ್ತರ ಪದವಿಯ ಎಲ್ಲ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿಯನ್ನು ನಿರೀಕ್ಷಿಸಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ತರಬೇತಿಯ ಅವಧಿ ವೇಳೆ ಮಾಹೆಯಾನ 15,000 ರೂಗಳ ಶಿಷ್ಯ ವೇತನ ನೀಡಲಾಗುವುದು. ತರಬೇತಿಯು 2026 ರ ಜನವರಿಯಿಂದ ಡಿಸೆಂಬರ್‍ವರೆಗೆ 12 ತಿಂಗಳ ಅವಧಿಯದಾಗಿದ್ದು, ತಾತ್ಕಾಲಿಕವಾಗಿರುತ್ತದೆ. ತರಬೇತಿ ಮುಗಿದ ನಂತರ ಮುಂದುವರೆಸಲು ಅಥವಾ ಖಾಯಂಗೊಳಿಸಲು ಯಾವುದೇ ಅವಕಾಶ ಇರುವುದಿಲ್ಲ.

ತರಬೇತಿಯ ಅವಧಿಯಲ್ಲಿ ತರಬೇತಾರ್ಥಿಗಳು ಬೇರೆ ಉದ್ಯೋಗ ಮಾಡುವಂತಿಲ್ಲ. ತರಬೇತಿಯ ಅವಧಿಯ ಮಧ್ಯದಲ್ಲಿ ಬಿಟ್ಟು ಹೋದರೆ, ಮೂಲ ದಾಖಲಾತಿಗಳನ್ನು ಅವಧಿಗೆ ಮುನ್ನ ಹಿಂದಿರುಗಿಸುವುದಿಲ್ಲ. ಒಮ್ಮೆ ಫಲಾನುಭವಿಯಾದವರನ್ನು ಈ ಯೋಜನೆಯಡಿ ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಅವಕಾಶವಿರುವುದಿಲ್ಲ ಹಾಗೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.

ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಇಲ್ಲಿ, ಮೊ.9480841218 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್‌ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್‌ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending