ದಿನದ ಸುದ್ದಿ
ಸಿದ್ದರಾಮಯ್ಯ ಬುಲೆಟ್ ನಂತಹ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಯಡಿಯೂರಪ್ಪ..? ಏನವು ಪ್ರಶ್ನೆಗಳು..?

- ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರಿಗೆ ಪ್ರಶ್ನೆಗಳ ಸುರಿಮಳೆಗೈಯ್ದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಪ್ರಶ್ನೆಗಳನ್ನು ಅವರು ಹಂಚಿಕೊಂಡಿದ್ದಾರೆ.
ಸುದ್ದಿದಿನ ಡೆಸ್ಕ್ : ಯಡಿಯೂರಪ್ಪನವರು (yeddyurappa) ಇತ್ತೀಚೆಗೆ ಜನಸಂಕಲ್ಪ ಯಾತ್ರೆಯೊಂದರಲ್ಲಿ ಮೋದಿಯವರನ್ನು ( Modi ) ಟೀಕಿಸುವವರ ವಿರುದ್ಧ ಆ ಕ್ಷಣದಲ್ಲಿಯೆ ಪ್ರತಿಭಟಿಸಿ ಎಂದು ಕಾರ್ಯಕರ್ತರಿಗೆ ಆಜ್ಞೆ ಹೊರಡಿಸುವ ಧ್ವನಿಯಲ್ಲಿ ಹೇಳಿದ್ದಾರೆ. ಮಾನ್ಯ ಯಡಿಯೂರಪ್ಪನವರಿಗೆ ಈ ಕೆಳಕಂಡ ಪ್ರಶ್ನೆಗಳನ್ನು ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾದ ನಾನು ಕೇಳಬಯಸುತ್ತೇನೆ.
2014ಕ್ಕೂ ಮೊದಲು ಮನಮೋಹನ್ ಸಿಂಗ್ ಸರ್ಕಾರ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಿತ್ತು? ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಎಷ್ಟು ಸಾಲವನ್ನು ಮನ್ನಾ ಮಾಡಲಾಗಿತ್ತು? ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯಾರ್ಯಾರ ಎಷ್ಟು ಸಾಲವನ್ನು ಮನ್ನಾ ಮಾಡಿದ್ದಾರೆ?
ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆ ಎಷ್ಟು? ಕಾರ್ಪೊರೇಟ್ ಬಂಡವಾಳಿಗರು ಪಾವತಿಸುತ್ತಿದ್ದ ತೆರಿಗೆ ಎಷ್ಟಿತ್ತು? ಈಗ ಎಷ್ಟಿದೆ? ಜನರ ಮೇಲಿನ ತೆರಿಗೆ ಹೆಚ್ಚಿಸಿ ಅದಾನಿ, ಅಂಬಾನಿ ಮುಂತಾದವರ ಮೇಲಿದ್ದ ತೆರಿಗೆಯನ್ನು ಶೇ.8 ರಷ್ಟು ಇಳಿಸಿದ್ದು ಏಕೆ?
2014 ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‍ಗಳ ಮೇಲೆ ವಿಧಿಸುತ್ತಿದ್ದ ಸೆಸ್‍ಗಳೆಷ್ಟು? ಮೋದಿಯವರು ವಿಧಿಸುತ್ತಿರುವ ಸೆಸ್‍ಗಳ ಪ್ರಮಾಣವೆಷ್ಟು?
ಇದರಿಂದಾಗಿ ಪೆಟ್ರೋಲ್, ಡೀಸೆಲ್‍ಗಳ ಬೆಲೆ ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ? 2014 ರ ಮೊದಲು 10 ವರ್ಷಗಳ ಕಚ್ಛಾ ತೈಲದ ಸರಾಸರಿ ಬೆಲೆಗಳು ಎಷ್ಟಿತ್ತು? 2014 ರಿಂದ ಇದುವರೆಗೆ ಕಚ್ಛಾ ತೈಲದ ಸರಾಸರಿ ಬೆಲೆಗಳು ಎಷ್ಟು?
2014 ಕ್ಕೆ ಮೊದಲು ದೇಶದಲ್ಲಿ ನಿರುದ್ಯೋಗದ ಪ್ರಮಾಣ ಎಷ್ಟಿತ್ತು? ಈಗ ಎಷ್ಟಿದೆ?
2014ಕ್ಕೆ ಮೊದಲು ರೈತರ ತಲೆಯ ಮೇಲೆ, ದೇಶದ ಜನರ ತಲೆಯ ಮೇಲೆ ಇದ್ದ ಸಾಲವೆಷ್ಟು? ಈಗ ಎಷ್ಟಿದೆ? ರೈತರ ಹಾಗೂ ಇತರೆ ಜನಸಮುದಾಯಗಳ ಆದಾಯ ಎಷ್ಟಿತ್ತು? ಈಗ ಎಷ್ಟಿದೆ?
2014ಕ್ಕಿಂತ ಮೊದಲು ಮಹಿಳಾ ಕಾರ್ಮಿಕರ ಪ್ರಮಾಣ ಶೇ.32 ಇದ್ದದ್ದು ಈಗ ಶೇ.21 ಕ್ಕೆ ಇಳಿಯಲು ಮೋದಿ ಸರ್ಕಾರದ ಮಹಿಳಾ ವಿರೋಧಿ ನೀತಿಗಳು ಕಾರಣವಲ್ಲವೆ?
2014ಕ್ಕಿಂತ ಮೊದಲು ದೇಶದ ಮೇಲೆ 53 ಲಕ್ಷ ಕೋಟಿ ಇದ್ದದ್ದು, ಈಗ 155 ಲಕ್ಷ ಕೋಟಿಗೆ ಏರಿಸಿ ದೇಶವನ್ನು ದಿವಾಳಿ ಮಾಡಿದ್ದು ಮೋದಿಯವರಲ್ಲವೆ?
2018 ಕ್ಕೆ ಮೊದಲು 2.42 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು ಈ ವರ್ಷದ ಕೊನೆಯ ಹೊತ್ತಿಗೆ 5.30 ರಿಂದ 5.40 ಲಕ್ಷ ಕೋಟಿಗಳವರೆಗೆ ಏರಿಕೆಯಾಗಲು ಕಾರಣವೇನು?
2014 ಕ್ಕಿಂತ ಮೊದಲು ಕೇಂದ್ರವು ಕರ್ನಾಟಕದಿಂದ ವಿವಿಧ ಬಾಬತ್ತುಗಳಿಂದ ಸಂಗ್ರಹಿಸುತ್ತಿದ್ದ ತೆರಿಗೆಗಳು, ಸೆಸ್ಸುಗಳು, ಅಡಿಷನಲ್ ಎಕ್ಸೈಜ್ ಡ್ಯೂಟಿಗಳೆಷ್ಟು? ಈಗ ಎಷ್ಟು ಸಂಗ್ರಹಿಸುತ್ತಿದ್ದಾರೆ? ಕರ್ನಾಟಕಕ್ಕೆ ಎಷ್ಟು ಹಂಚಿಕೆ ಮಾಡುತ್ತಿದ್ದಾರೆ? ಕರ್ನಾಟಕದಿಂದ ಪ್ರತಿ ವರ್ಷ 3.5 ಲಕ್ಷ ಕೋಟಿಗಳವರೆಗೆ ದೋಚಿಕೊಂಡು ನಮಗೆ ಕೇವಲ 30 ಸಾವಿರ ಕೋಟಿ ತೆರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇದನ್ನು ನ್ಯಾಯ ಎನ್ನಬೇಕೆ? ಇದರಿಂದಾಗಿ 2018-19 ಮತ್ತು 2019-20 ಕ್ಕೆ ಹೋಲಿಸಿದರೆ ರಾಜ್ಯವು ಈ ವರ್ಷ ಕನಿಷ್ಟ 60 ಸಾವಿರ ಕೋಟಿ ಕಳೆದುಕೊಳ್ಳುತ್ತಿದೆ.
2014 ಕ್ಕಿಂತ ಮೊದಲು ಕೇಂದ್ರ ಸರ್ಕಾರ ಅಡುಗೆ ಸಿಲಿಂಡರಿನ ಮೇಲೆ ನೀಡುತ್ತಿದ್ದ ಸಬ್ಸಿಡಿಗಳೆಷ್ಟು? ಈಗ ಎಷ್ಟು ಸಬ್ಸಿಡಿಗಳನ್ನು ನೀಡಲಾಗುತ್ತಿದೆ?
1947 ರಿಂದ 2014 ರವರೆಗೆ ಕೇಂದ್ರ ಸರ್ಕಾರವು ಸ್ಥಾಪಿಸಿದ್ದ ಸಾರ್ವಜನಿಕ ವಲಯದ ಕಂಪೆನಿ/ ಸಂಸ್ಥೆ/ಉದ್ದಿಮೆಗಳೆಷ್ಟು? ಹಿಂದಿನವರು ಸ್ಥಾಪಿಸಿದವುಗಳನ್ನು ಖಾಸಗೀಕರಿಸಿದ್ದೆಷ್ಟು?
2014ರ ನಂತರ ಮೋದಿಯವರು ಒಂದು ಕಂಪೆನಿ/ ಸಂಸ್ಥೆಯನ್ನೂ ಸ್ಥಾಪಿಸದೆ ಎಲ್ಲವುಗಳನ್ನೂ ಮಾರಾಟ ಮಾಡುತ್ತಿರುವುದನ್ನು ಒಳ್ಳೆಯ ಆಡಳಿತವೆನ್ನುತ್ತಾರೊ ಅಥವಾ ದಾರಿದ್ರ್ಯಾವಸ್ಥೆ ತಲುಪಿದ ಆಡಳಿತವೆನ್ನುತ್ತಾರೊ ಎಂದು ಯಡಿಯೂರಪ್ಪನವರು ಹೇಳಬೇಕು.
ಸರ್ಕಾರಿ ಸಂಸ್ಥೆಗಳನ್ನು ಮುಚ್ಚುತ್ತಿರುವುದರಿಂದ ದಲಿತರು, ಹಿಂದುಳಿದವರಿಗೆ ಮೀಸಲಾತಿ ಅವಕಾಶಗಳು ಮುಚ್ಚಿ ಹೋಗುತ್ತಿವೆ. ಮೀಸಲಾತಿ ಹೊರಟು ಹೋಗಲಿ ಎಂದು ಭಾವಿಸಿಯೆ ಖಾಸಗೀಕರಣ ಮಾಡುತ್ತಿರುವಂತಿದೆ. ಇದನ್ನು ಮನುವಾದಿ ಸಿದ್ಧಾಂತದ ಮೌನ ಅನುಷ್ಠಾನದ ವಿಧಾನ ಎನ್ನದೆ ಬೇರೆ ದಾರಿ ಇದೆಯೆ?
2014ಕ್ಕೆ ಮೊದಲು ರಾಜ್ಯದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನದ ಪಾಲೆಷ್ಟು? 2014 ರ ನಂತರ ನೀಡುತ್ತಿರುವ ಪಾಲು ಎಷ್ಟು?
2014 ಕ್ಕೆ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಸರಾಸರಿ ಜಿಡಿಪಿ ಬೆಳವಣಿಗೆ ಎಷ್ಟು? ಕಳೆದ 8 ವರ್ಷಗಳ ಸರಾಸರಿ ಬೆಳವಣಿಗೆ ಎಷ್ಟು?
2004-05 ರಿಂದ 2013-14 ರವರೆಗೆ ಕೇಂದ್ರ ಸರ್ಕಾರವು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನೀಡಿದ ಬೆಂಬಲ ಬೆಲೆಗಳ ಪ್ರಮಾಣ ಎಷ್ಟು? 2014 ರಿಂದ 2021-22 ರವರೆಗೆ ನೀಡಿದ ಬೆಂಬಲ ಬೆಲೆಗಳೆಷ್ಟು?
2014 ಕ್ಕಿಂತ ಮೊದಲು ದೇಶದ ವ್ಯಾಪಾರದ ಕೊರತೆ ಎಷ್ಟಿತ್ತು? ಈಗ ಎಷ್ಟಿದೆ? ಮೇಕ್ ಇಂಡಿಯಾ ಎಂದವರು ಯಾರು? ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದು ಏಕೆ?
2014 ಕ್ಕಿಂತ ಮೊದಲು ರೂಪಾಯಿಯ ಮೌಲ್ಯ ಡಾಲರಿನ ಎದುರು ಸರಾಸರಿ 58 ರೂ ಇದ್ದದ್ದು ಎಷ್ಟಿತ್ತು? ಈಗ 82.5 ರೂಗಳಿಗೆ ಬೀಳಿಸಿದ್ದನ್ನು ಮೋದಿಯವರ ಜಗಮೆಚ್ಚುವ ಕೆಲಸ ಎನ್ನಬೇಕೆ?
2014 ಕ್ಕಿಂತ ಮೊದಲು ಭಾರತ ಹಸಿವು ಮತ್ತು ಬಡತನದ ಸೂಚ್ಯಂಕಗಳಲ್ಲಿ ಯಾವ ಸ್ಥಾನದಲ್ಲಿತ್ತು? ಈಗ ಯಾವ ಸ್ಥಾನದಲ್ಲಿದೆ?
2015 ಕ್ಕಿಂತ ಮೊದಲು ಭಾರತೀಯರ ಸ್ವಾತಂತ್ರ್ಯ ಸೂಚ್ಯಂಕವು 75 ನೇ ಸ್ಥಾನದಲ್ಲಿದ್ದದ್ದು 2020ರ ವೇಳೆಗೆ 111 ನೇ ಸ್ಥಾನಕ್ಕೆ ಕುಸಿಯಲು ಮೋದಿ ಕಾರಣರಲ್ಲವೆ?
2013-2019 ರವರೆಗೆ ಮೋದಿಯವರು ಎಷ್ಟು ಭರವಸೆಗಳನ್ನು ದೇಶದ ಜನರಿಗೆ ನೀಡಿದ್ದರು? ಅವುಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ?
ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಭಾರತದ ಸ್ಥಾನ 2013 ರಲ್ಲಿ 40 ರ‌್ಯಾಂಕ್ ಇದ್ದದ್ದು 2021 ರ ಹೊತ್ತಿಗೆ 43 ಕ್ಕೆ ಸ್ಥಾನಕ್ಕೆ ಕುಸಿಯಲು ಕಾರಣವೇನು?
ವಿಶ್ವ ಸಂಸ್ಥೆಯ ಸಮೀಕ್ಷೆಯಲ್ಲಿ ಭಾರತೀಯರ ಸಂತೋಷದ ಸೂಚ್ಯಂಕವು 2015 ರಲ್ಲಿ 117 ನೇ ಸ್ಥಾನದಲ್ಲಿದ್ದದ್ದು 2021 ರ ಹೊತ್ತಿಗೆ 139 ಸ್ಥಾನಕ್ಕೆ ಕುಸಿದದ್ದು ಯಾಕೆ? ಇದಕ್ಕೆ ಯಾರು ಕಾರಣ?
ಜಾಗತಿಕ ಆರ್ಥಿಕ ಸ್ವಾತಂತ್ರ್ಯದಲ್ಲಿ ಭಾರತದ ಸ್ಥಾನವು 2015 ರಲ್ಲಿ 95 ಸ್ಥಾನದಲ್ಲಿದ್ದದ್ದು 2020 ರ ಹೊತ್ತಿಗೆ 105 ನೇ ಸ್ಥಾನಕ್ಕೆ ಕುಸಿದಿದ್ದು ಯಾಕೆ?
ಟ್ರಾನ್ಸಪೆರೆನ್ಸಿ ಇಂಟರ್ ನ್ಯಾಷನಲ್ ಗ್ಲೋಬಲ್ ಕರಪ್ಷನ್ ಇಂಡೆಕ್ಸ್‌ನಲ್ಲಿ 2014 ರಲ್ಲಿ 85ನೇ ಸ್ಥಾನದಲ್ಲಿದ್ದ ಭಾರತ 2020 ರ ವೇಳೆಗೆ 86 ನೆ ಸ್ಥಾನಕ್ಕೆ ಕುಸಿಯಲು ಕಾರಣವೇನು? ಇದರ ಹೊಣೆಯನ್ನು ಮೋದಿಯವರೆ ಹೊರಬೇಕಲ್ಲವೆ?
ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಜಾಗತಿಕ ಜೆಂಡರ್ ಗ್ಯಾಪ್‍ನ ಸೂಚ್ಯಂಕದಲ್ಲಿ 2014 ರಲ್ಲಿ 114 ನೇ ಸ್ಥಾನದಲ್ಲಿದ್ದ ಭಾರತ 2021 ರಲ್ಲಿ ತೀವ್ರ ಕುಸಿತ ಕಾಣಲು ಕಾರಣ ಯಾರು?
ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕತೆಯಲ್ಲಿ 2017 ರಲ್ಲಿ ಭಾರತವು 40 ನೇ ರ‌್ಯಾಂಕ್ ನಲ್ಲಿದ್ದದ್ದು 2020 ರ ವೇಳೆಗೆ 68 ನೇ ಸ್ಥಾನಕ್ಕೆ ಕುಸಿಯಲು ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕಾರಣವಲ್ಲವೆ?
ಪಾಸ್ ಪೋರ್ಟ್ ಇಂಡೆಕ್ಸ್‍ನಲ್ಲಿ 2013ರಲ್ಲಿ 74ನೇ ಸ್ಥಾನದಲ್ಲಿದ್ದ ಭಾರತವು 2021ರ ವೇಳೆಗೆ 85 ನೇ ಸ್ಥಾನಕ್ಕೆ ಕುಸಿಯಲು ಕಾರಣ ಯಾರು? ಇದರಿಂದ ಭಾರತೀಯರ ಘನತೆ ಕಡಿಮೆಯಾಗಲು ಮೋದಿಯವರ ಆಡಳಿತ ಕಾರಣವಲ್ಲವೆ?
ವಿಶ್ವ ಆರ್ಥಿಕ ವೇದಿಕೆಯ ಬಂಡವಾಳ ಸೂಚ್ಯಂಕದಲ್ಲಿ 78ನೇ ಸ್ಥಾನದಲ್ಲಿದ್ದ ಭಾರತವು 2017 ರ ವೇಳೆಗೆ 103 ನೇ ಸ್ಥಾನಕ್ಕೆ ಕುಸಿಯಲು ಮೋದಿಯವರು ಕಾರಣರಲ್ಲವೆ?
ಬ್ಲೂಮ್‍ಬರ್ಗ್ ಸಮೀಕ್ಷೆಗಳ ಪ್ರಕಾರ ಭಾರತದ ಆರೋಗ್ಯ ಕ್ಷೇತ್ರದ ಸೂಚ್ಯಂಕವು 2015 ರಲ್ಲಿ 103 ನೇ ಸ್ಥಾನದಲ್ಲಿದ್ದದ್ದು 2020 ರ ವೇಳೆಗೆ 120 ನೇ ಸ್ಥಾನಕ್ಕೆ ಕುಸಿಯಲು ಕಾರಣ ಯಾರು?
ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ 2016 ರಲ್ಲಿ 110 ನೇ ಸ್ಥಾನದಲ್ಲಿದ್ದ ಭಾರತವು 2021 ರ ವೇಳೆಗೆ 120 ನೇ ಸ್ಥಾನಕ್ಕೆ, ಬಾಂಗ್ಲಾ, ನೇಪಾಳ, ಶ್ರೀ ಲಂಕಾ, ಭೂತಾನ್ ಗಳಿಗಿಂತ ಕೆಳಕ್ಕೆ ಕುಸಿದು ಬೀಳಲು ಕಾರಣ ಮೋದಿಯವರಲ್ಲವೆ?
ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿ ದೇಶದ ಜನರನ್ನು ಸಾವಿನ ಸಮುದ್ರದಲ್ಲಿ ಮುಳುಗಿಸಿದವರು ಮೋದಿಯವರಲ್ಲವೆ? ಜಾಗತಿಕವಾಗಿ ಕೋವಿಡ್ಡನ್ನು ಅತಿ ಕೆಟ್ಟದಾಗಿ ನಿಭಾಯಿಸಿದ 5 ಕೆಟ್ಟ ನಾಯಕರಲ್ಲಿ ಮೋದಿಯವರೂ ಒಬ್ಬರೆಂದು ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳು ವರದಿ ಮಾಡಿದ್ದನ್ನು ದೇಶ ಮರೆತಿದೆಯೆ? ನಿಮಗೂ ಮರೆತು ಹೋಗಿದೆಯೆ ಯಡಿಯೂರಪ್ಪನವರೆ?
2014 ಕ್ಕಿಂತ ಮೊದಲು ಇದ್ದ ಸಣ್ಣ, ಮಧ್ಯಮ, ಗುಡಿ ಕೈಗಾರಿಕೆಗಳೆಷ್ಟು? ಈಗ ಎಷ್ಟಿವೆ? ಶೇ. 60 ರಷ್ಟು ಕಂಪೆನಿಗಳು ಮುಚ್ಚಲು, ಮುಚ್ಚುವ ಹಂತಕ್ಕೆ ಬರಲು ಕಾರಣ ಯಾರು?
ಮನೆಗೆ ಮಾರಿ ಪರರಿಗೆ ಉಪಕಾರಿಯಂತೆ ವರ್ತಿಸುವ ಪ್ರಧಾನಿ ನರೇಂದ್ರ ಮೋದಿವರಿಂದಾಗಿಯೆ ದೇಶ ದುರವಸ್ಥೆಗೆ ಸಿಲುಕಿಕೊಂಡಿದೆ. ಆದರೂ ಅವರನ್ನು ಟೀಕಿಸಬೇಡಿ ಎಂದು ಆಜ್ಞೆ ಹೊರಡಿಸುವ ಯಡಿಯೂರಪ್ಪನವರನ್ನು, ಬೊಮ್ಮಾಯಿಯವರನ್ನು ಹಾಗೂ ಬಿಜೆಪಿಯವರನ್ನು ಏನೆಂದು ಕರೆಯಬೇಕು?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರವಾಸೋದ್ಯಮ ಇಲಾಖೆ | ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಆಹಾರ ಕರಕುಶಲ ಸಂಸ್ಥೆ ಮೈಸೂರು ( Food Craft Institute ) ಮತ್ತು ಹೋಟೆಲ್ ನಿರ್ವಹಣಾ ಸಂಸ್ಥೆ ಬೆಂಗಳೂರು (Institute Of Hotel Management ) ಇವರ ಸಹಯೋಗದಲ್ಲಿ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲ್ಟಿ ಕ್ಯೂಸಿನ್ ಕುಕ್ ( Multi Cusine Cook ) ಮತ್ತು ಫುಡ್ ಅಂಡ್ ಬೇವರೇಜ್ ಸರ್ವಿಸ್ ಸ್ಟೇವಾರ್ಡ್ ( Food And Beverage Service Steward ) ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಜಿಲ್ಲೆಯ ಅಭ್ಯರ್ಥಿಗಳು ಮಾ.25 ರಿಂದ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ ಏಪ್ರಿಲ್ 3 ರೊಳಗೆ ನೇರವಾಗಿ ಇಲಾಖೆಗೆ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಕಾವ್ಯ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ

ಸುದ್ದಿದಿನ,ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ, ಹಿರಿಯ ಸಾಹಿತಿ, ಯಕ್ಷಗಾನ ವಿದ್ವಾಂಸರು, ತಾಳಮದ್ದಳೆಯ ಅರ್ಥಧಾರಿಗಳಾದ ಜಯಲಕ್ಷ್ಮಿ ಕಾರಂತ್‌ರವರಿಗೆ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಭಂಟರ ಭವನದಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್ ಹಮ್ಮಿಕೊಳ್ಳಲಾದ ಮಹಿಳಾ ಘಟಕದ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ “ಯಕ್ಷ ಧ್ರುವ” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಎಂದು ಕಲಾಕುಂಚ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯ, ಕಿರಿಯ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ಮದ್ದಳೆ ತರಬೇತಿ, ಮಹಾಭಾರತ, ರಾಮಾಯಣ ಪರಂಪರೆಯ ಪೌರಾಣಿಕ ಪ್ರಸಂಗಗಳ ರಚನೆ, ನಿವೃತ್ತಿ ಶಿಕ್ಷಕಿಯಾದರೂ ಶೈಕ್ಷಣಿಕ ಕಾಳಜಿಯ ಸ್ವಯಂ ಸೇವೆಯೊಂದಿಗೆ, ಕಲೆ, ಸಾಹಿತ್ಯ, ಸಂಗೀತ, ಭಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರನ್ನು ಮಹತ್ವಪೂರ್ಣ ಈ ಪ್ರಶಸ್ತಿಗೆ ಭಾಜನಾಗಿದ್ದು ಕಲಾಕುಂಚ ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ7 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ6 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು
-
ಅಂಕಣ6 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ6 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
-
ಅಂಕಣ3 days ago
ಕವಿತೆ | ಅಲರ್ಟ್..!
-
ದಿನದ ಸುದ್ದಿ1 day ago
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ