ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | 11ನೇ ಘಟಿಕೋತ್ಸವ :ದೀಪ್ತಿಗೆ ಐದು ; ಸಿಂಧುಬಾಯಿಗೆ ಮೂರು ಚಿನ್ನದ ಪದಕ
ಸುದ್ದಿದಿನ,ದಾವಣಗೆರೆ: ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,357ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಲಯದ ಹನ್ನೊಂದನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. 45ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರೆ, 64 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆಯಲಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಮಾತನಾಡಿ, ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ (5 ಚಿನ್ನದ ಪದಕ) ಮತ್ತು ಸ್ನಾತಕ ಪದವಿಯಲ್ಲಿ ಹೊನ್ನಾಳಿಯ ಎಸ್.ಎಂ.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಸ್.ಸಿಂಧುಬಾಯಿ (3 ಚಿನ್ನದ ಪದಕ) ಅತ್ಯುತ್ತಮ ಸಾಧನೆ ಮಾಡಿ ಅತಿ ಹೆಚ್ಚು ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.
ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ವಿಶ್ವವಿದ್ಯಾನಿಲಯದ ಗೌರವಾನ್ವಿತ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ಉಪಸ್ಥಿತರಿರುವರು. ಇಸ್ರೊ ಮಾಜಿ ಅಧ್ಯಕ್ಷರಾದ ಎ.ಎಸ್.ಕಿರಣಕುಮಾರ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಕಳೆದ ವರ್ಷ ಬಿಎ, ಬಿಕಾಂ, ಬಿಎಸ್ಸಿ, ಬಿಎಡ್, ಬಿಪಿಎಡ್, ಬಿವಿಎ ಸೇರಿದಂತೆ ಸ್ನಾತಕ ಪದವಿಯಲ್ಲಿ ಒಟ್ಟು 16,140ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 12,265 ವಿದ್ಯಾರ್ಥಿಗಳು (ಶೇ.75.99) ಉತ್ತೀರ್ಣರಾಗಿದ್ದಾರೆ. ಇವರಲ್ಲಿ 4977ಪುರುಷ ಮತ್ತು 7288 ಮಹಿಳಾ ವಿದ್ಯಾರ್ಥಿಗಳಿದ್ದಾರೆ.
ಒಟ್ಟು 9 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದಿದ್ದರೆ, 12ವಿದ್ಯಾರ್ಥಿಗಳು ಚಿನ್ನದ ಪಕದ ಗಳಿಸಿದ್ದಾರೆ. 20 ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ವಿವರಿಸಿದರು.
ಸ್ನಾತಕೋತ್ತರ ಪದವಿ ಪರೀಕ್ಷೆಗೆ ಒಟ್ಟು 2177 ವಿದ್ಯಾರ್ಥಿಗಳು ಹಾಜರಾಗಿದ್ದು, 2092ವಿದ್ಯಾರ್ಥಿಗಳು (ಶೇ.96.09) ತೇರ್ಗಡೆಯಾಗಿದ್ದಾರೆ. ಇವರಲ್ಲಿ 778ವಿದ್ಯಾರ್ಥಿಗಳು ಮತ್ತು 1314 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಸ್ನಾತಕೋತ್ತರ ಪದವಿಗೆ ಭಾಜನರಾಗಿದ್ದಾರೆ.
ಒಟ್ಟು 30 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಗಳಿಸಿದರೆ, 33 ವಿದ್ಯಾರ್ಥಿಗಳು ಸ್ವರ್ಣ ಪದಕ ಪಡೆದಿದ್ದಾರೆ. 51ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ರ‍್ಯಾಂಕ್ ಪಡೆಯಲಿದ್ದಾರೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆಗೆ ಆದ್ಯತೆ ನೀಡಿದ್ದು, ಈ ಬಾರಿ ತಲಾ 32 ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸೇರಿದಂತೆ ದಾಖಲೆಯ 64 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆಯಲಿದ್ದಾರೆ. ಆ ಮೂಲಕ ರಾಷ್ಟಿçÃಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತೊಂದು ಸಾಧನೆಯನ್ನು ಮೆರೆಯಲು ಸಾಧ್ಯವಾಗಿದೆ ಎಂದು ಪ್ರೊ.ಕುಂಬಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ ತಮ್ಮನಗೌಡ್ರ, ವಿವಿಧ ನಿಕಾಯಗಳ ಡೀನರಾದ ಪ್ರೊ.ಯು.ಎಸ್.ಮಹಾಬಲೇಶ್ವರ, ಪ್ರೊ.ಆರ್.ಶಶಿಧರ, ಪ್ರೊ.ಕೆ.ವೆಂಕಟೇಶ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.
ಚಿನ್ನದ ಪದಕ ; ಮಹಿಳೆಯರೇ ಮೇಲುಗೈ
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿಯೂ ಮಹಿಳೆಯರೇ ಉತ್ತಮ ಶೈಕ್ಷಣಿಕ ಸಾಧನೆಯ ಮೂಲಕ ಅತಿ ಹೆಚ್ಚು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ್ 5 ಪದಕಗಳೊಂದಿಗೆ ಈ ವರ್ಷ ದಾವಣಗೆರೆ ವಿಶ್ವವಿದ್ಯಾನಿಲಯದ ಚಿನ್ನದ ರಾಣಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ನಾತಕ ಪದವಿಯಲ್ಲಿ ಹೊನ್ನಾಳಿಯ ಎಸ್.ಸಿಂಧುಬಾಯಿ ಮೂರು ಚಿನ್ನದ ಪದಕ ಗಳಿಸಿದ್ದಾರೆ.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟು 79 ಚಿನ್ನದ ಪದಕಗಳನ್ನು 45 ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ. ಇವರಲ್ಲಿ 39 ಮಹಿಳೆಯರಿದ್ದರೆ, ಕೇವಲ ೬ ಪುರುಷ ವಿದ್ಯಾರ್ಥಿಗಳಿದ್ದಾರೆ.
ಸ್ನಾತಕ ಪದವಿಯಲ್ಲಿ 10 ಮಹಿಳೆಯರು ಮತ್ತು 2 ಪುರುಷ ವಿದ್ಯಾರ್ಥಿಗಳು 20 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 29 ವಿದ್ಯಾರ್ಥಿನಿಯರು ಮತ್ತು 4 ಪುರುಷರು 59 ಸ್ವರ್ಣ ಪದಕಗಳನ್ನು ಗಳಿಸಿದ್ದಾರೆ.
ಚಿನ್ನದ ರಾಣಿ ದೀಪ್ತಿ ಜೆ.ಗೌಡರ್ ಅವರು ಶ್ರೀಮತಿ ವೀರಮ್ಮ ಶಾಂತವೀರಪ್ಪ ಅಥಣಿ, ಶ್ರೀಮತಿ ಲೇ. ಚನ್ನಬಸಮ್ಮ ಮುರಿಗೆಪ್ಪ ದೇವರಮನೆ, ಶ್ರೀ ಚಿಕ್ಕಣ್ಣ ಕಂಪಲಾಪುರ, ಕಣಿವೆ ಜೋಗಿಹಳ್ಳಿ ಶ್ರೀಮತಿ ರಾಮಕ್ಕ ಗೌಡರ ತಿಮ್ಮಪ್ಪ, ಲೇ.ಶ್ರೀಮತಿ ಶ್ರೀ ಜಿ.ಎಸ್.ಕಮಲಮ್ಮ ಬಿ.ನರಸಿಂಹಪ್ಪ ಸ್ಮಾರಕ ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸ್ನಾತಕ ಕಲಾ ಪದವಿಯಲ್ಲಿ ಹೊನ್ನಾಳಿಯ ಎಸ್.ಎಂ.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಎಸ್.ಸಿಂಧುಬಾಯಿ ಮೂರು ಚಿನ್ನದ ಪದಕ ಪಡೆದಿದ್ದಾರೆ. ಇವರು ಶ್ರೀ ತರಳುಬಾಳು ಬೃಹನ್ಮಠ ಸಿರಿಗೆರೆಯ ಲಿಂಗೈಕ್ಯ ಹಿರಿಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾಯ ಮಹಾಸ್ವಾಮಿಗಳು, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಹಾಗೂ ಶ್ರೀಮತಿ ಸುಧಾ ಮತ್ತು ಕಟೀಲ್ ಪದ್ಮನಾಭ ಭಟ್ ಸ್ಮಾರಕ ಸ್ವರ್ಣ ಪದಕಗಳನ್ನು ಪಡೆದರು.
ಇವರಲ್ಲದೆ ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ವಿಭಾಗದ ಎಂ.ವೈ.ಚಂದನ, ಇಂಗ್ಲಿಷ್ ವಿಭಾಗದ ಜಿ.ಕೆ.ಮೋನಿಕಾ, ಬಿಎಡ್. ಪದವಿಯ ಟಿ.ಎನ್.ಕಾವ್ಯಾ, ಜೀವರಾಸಾಯನಶಾಸ್ತ್ರ ವಿಭಾಗದ ಎಂ.ರಂಗಸ್ವಾಮಿ, ಗಣಿತಶಾಸ್ತ್ರ ವಿಭಾಗದ ಸಾನಿಯಾ ಅಂಜು, ಜೀವಶಾಸ್ತ್ರ ವಿಭಾಗದ ಫರಾನಾ ಸುರನ್ ಅವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸ್ನಾತಕೋತ್ತರ ಕನ್ನಡ ವಿಭಾಗದ ಡಿ.ರೇವಣಸಿದ್ದಪ್ಪ, ಪತ್ರಿಕೋದ್ಯಮ ವಿಭಾಗದ ಬಿ.ಮೀನಾಕ್ಷಿ, ರಾಜ್ಯಶಾಸ್ತ್ರ ವಿಭಾಗದ ಆರ್.ಕೆ.ಪೂಜಾ, ಬಿವಿಎ ವಿಭಾಗದ ಜಯಲಕ್ಷ್ಮಿ ಅನಂತಾಚಾರ್ಯ ಉಪಾಧ್ಯೆ, ಎಂಬಿಎ ವಿಭಾಗ ವೈ.ಶಾಝಿಯಾ ಮತ್ತು ಟಿ.ಕೃತಿಕಾ, ಎಂ.ಪಿ.ಎಡ್ ವಿಭಾಗದ ಎನ್.ಕಿರಣಕುಮಾರ, ರಾಸಾಯನಶಾಸ್ತ್ರ ವಿಭಾಗ ಐ.ಕೆ.ಸಂಗೀತಾ, ಸಸ್ಯಶಾಸ್ತ್ರ ವಿಭಾಗದ ಎಸ್.ಜೆ.ಜಯಶ್ರೀ, ಕಂಪ್ಯೂಟರ್ ವಿಜ್ಞಾನ ವಿಭಾಗದ ಎಂ.ಅಂಬಿಕಾ, ಆಹಾರ ತಂತ್ರಜ್ಞಾನ ವಿಭಾಗದ ಎಚ್.ಎ.ದೀಪಿಕಾ, ಅಣುಜೀವಿಶಾಸ್ತ ವಿಭಾಗದ ಎಸ್.ದಿವ್ಯಶ್ರೀ, ಭೌತಶಾಸ್ತ್ರ ವಿಭಾಗದ ಕೆ.ಯಶೋದಾ ತಲಾ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಸ್ನಾತಕ ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಸಿ.ಎಸ್.ಪೂಜಾ ಮತ್ತು ಸ್ನಾತಕ ಕಂಪ್ಯೂಟರ್ ಅಪ್ಲಿಕೇಶನ್ ಪದವಿಯಲ್ಲಿ ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಕಾಲೇಜಿನ ವಿದ್ಯಾರ್ಥಿನಿ ಜಿ.ಎಂ. ಸುಮತಿ ಅವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
64 ಜನರಿಗೆ ಪಿಎಚ್.ಡಿ. ಪದವಿ
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಒಟ್ಟು 14 ಅಧ್ಯಯನ ವಿಭಾಗಗಳ 64ಸಂಶೋಧಕರು ಪಿಎಚ್.ಡಿ. ಪದವಿಯನ್ನು ಪಡೆಯಲಿದ್ದಾರೆ.
ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ ತಲಾ 13ಜನ ಪಿಎಚ್.ಡಿ. ಪದವಿ ಗಳಿಸಿದರೆ, ಗಣಿತಶಾಸ್ತ್ರ ಅಧ್ಯಯನ ವಿಭಾಗದಲ್ಲಿ 9 ಹಾಗೂ ಶಿಕ್ಷಣಶಾಸ್ತç ಅಧ್ಯಯನ ವಿಭಾಗದಲ್ಲಿ 6 ವಿದ್ಯಾರ್ಥಿಗಳು ಡಾಕ್ಟೊರೇಟ್ ಪದವಿ ಪಡೆದಿದ್ದಾರೆ.
ಆಡಳಿತ ನಿರ್ವಹಣೆ ವಿಭಾಗ, ಅಣುಜೀವಿ ವಿಜ್ಞಾನ, ಆಹಾರ ತಂತ್ರಜ್ಞಾನ, ಜೀವರಾಸಾಯನ ವಿಜ್ಞಾನದಲ್ಲಿ ತಲಾ ಮೂವರು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಮಾಜ ಸೇವೆ ಅಧ್ಯಯನ ವಿಭಾಗ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವತಂತ್ರಜ್ಞಾನ ವಿಭಾಗದಲ್ಲಿ ತಲಾ ಇಬ್ಬರು ಹಾಗೂ ಇಂಗ್ಲಿಷ್ ಅಧ್ಯಯನ ವಿಭಾಗದಿಂದ ಒಬ್ಬರು ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ4 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ1 day agoಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ1 day ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ


