Connect with us

ನೆಲದನಿ

ಅಂದಿನ ಬಾಯಾರಿಕೆ ಮತ್ತು ಇಂದಿನ ದಾಹ

Published

on

  • ದೇವನೂರ ಮಹಾದೇವ

ನಾನು ಇಲ್ಲಿಗೆ ಬಂದದ್ದೇ ಸಾಯಿನಾಥ್‍ರನ್ನು ನೋಡಲು, ಅವರ ಮಾತು ಕೇಳಲು. ಹಾಗಾಗಿ ಕೆಲ ನಿಮಿಷಗಳಲ್ಲೆ ಮಾತು ಮುಗಿಸುತ್ತೇನೆ. ನಾನು ಈ ಪತ್ರಿಕಾ ಕ್ಷೇತ್ರದ ಕೌಂಟರ್ ಮೀಡಿಯಾ ಪ್ರಶಸ್ತಿ ಪ್ರದಾನ ಮಾಡಲು ಯಾವ ರೀತಿ ಅರ್ಹನೊ ಗೊತ್ತಿಲ್ಲ. ಪ್ರಜಾವಾಣಿಗೆ ನಾನು ಒಂದು ದಿನದ ಸಂಪಾದಕನಾಗಿದ್ದೇ ಕಾರಣವಾಗಿರಬಹುದು. ಆ ಸಂದರ್ಭದಲ್ಲಿ ದಿನೇಶ್ ಅಮೀನಮಟ್ಟು ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ- ಪತ್ರಿಕೆಗಳು ಸಾಯಿನಾಥ್ ಪ್ರವೃತ್ತಿ ಇರುವಂಥಹ ಎಳೆಯರನ್ನು ಹುಡುಕಬೇಕಲ್ಲವೆ? ಅಂತ.

ಆಗ ಒತ್ತಡದಲ್ಲಿ ಮಾತು ಮುಂದುವರಿಯಲಿಲ್ಲ. ತಮ್ಮ ಬರವಣಿಗೆಯೊಂದರಲ್ಲಿ, ಜಿ.ಎನ್. ಮೋಹನ್ ಅವರು ಸಾಯಿನಾಥ್ ಹೆಜ್ಜೆಯಲ್ಲೆ ಅಷ್ಟೊ ಇಷ್ಟೊ ಹೆಜ್ಜೆ ಇಡುತ್ತಿರುವ ಎಳೆಯ ಪತ್ರಕರ್ತರನ್ನು ಉದಾಹರಿಸುತ್ತಾರೆ. ಈಗ ಅಂಥವರಿಗೆ ಸಾಯಿನಾಥ್ ಕೌಂಟರ್ ಮೀಡಿಯಾ ಪ್ರಶಸ್ತಿ ಕೊಡುತ್ತಿರುವುದು ಪತ್ರಿಕಾ ಕ್ಷೇತ್ರದಲ್ಲಿ ಕನಸು ಬಿತ್ತುವ ಬಿತ್ತನೆ ಬೀಜದಂತೆ ಕಾಣಿಸುತ್ತದೆ.

ಪತ್ರಕರ್ತರು ವರ್ತಮಾನವನ್ನು ಹಿಡಿಯುವವರು. ಓಡುತ್ತಿರುವ ಕಾಲವನ್ನು ಒಂದು ಟೆಲಿವಿಷನ್ ಜಾಹೀರಾತು ತುಂಬಾ ಚೆನ್ನಾಗಿ ಕಟ್ಟಿಕೊಡುತ್ತದೆ. ಆ ಜಾಹೀರಾತು ಸ್ಪ್ರೈಟ್ ಡ್ರಿಂಕ್ಸು ಅಂತಾರಲ್ಲ ಆ ಕುಡಿತದ್ದು. ಆ ಜಾಹೀರಾತಿನ ಹೆಸರು ‘ಚತುರ ಕಾಗೆ’ ಅಂತ. ಮೊದಲು ನಾನು ಓದಿದ್ದ ತಿಳಿದಿದ್ದ ಕಾಗೆ ಪರದೆ ಮೇಲೆ ಬರುತ್ತದೆ. ಕಾಗೆಗೆ ಬಾಯಾರಿಕೆ. ಆದರೆ ಒಂದು ಬಾಟಲ್‍ನಲ್ಲಿ ಅರ್ಧದಷ್ಟು ನೀರು ಇರುತ್ತದೆ. ಅದು ಕೊಕ್ಕಿಗೆ ಎಟುಕುತ್ತಿರುವುದಿಲ್ಲ.

ಅದು ಸುತ್ತಮುತ್ತಲಿದ್ದ ಕಲ್ಲುಗಳನ್ನು ಹೆಕ್ಕಿ ತಂದು ನೀರನ್ನು ಮೇಲಕ್ಕೆ ಬರಿಸಲು ಪ್ರಯತ್ನಿಸಿ ಸುಸ್ತಾಗಿ ಕೈಚೆಲ್ಲಿ ಕೂರುತ್ತದೆ. ಆಗ ಇನ್ನೊಂದು ಚಿನ್ನದ ಸರದ ಶ್ರೀಮಂತ ದೈತ್ಯ ಕಾಗೆ ಧೂಮಕೇತುವಿನಂತೆ ನೀರಿನ ಬಾಟಲಿ ಹತ್ತಿರ ಬರುತ್ತದೆ. ಅದಕ್ಕೋ ದಾಹ. ಅದು ಪಕ್ಕದಲ್ಲಿದ್ದ ಕಲ್ಲಲ್ಲಿ ಕೊಕ್ಕನ್ನು ಮಸೆದುಕೊಳ್ಳುತ್ತದೆ. ನಂತರ ಅಲ್ಲಿದ್ದ ಸ್ಪ್ರೈಟ್ ಬಾಟಲನ್ನೆ ಕುಕ್ಕಿ ತೂತು ಮಾಡಿ, ಚಿಮ್ಮಿದ ಆ ಡ್ರಿಂಕ್ಸ್ ಕುಡಿದು ಗರ್ವದಿಂದ ಹಾರಿ ಹೋಗುತ್ತದೆ. ಇದು ಈ ಕಾಲದ ಜಾಹೀರಾತು.

ನಾನು ಚಿಕ್ಕವನಾಗಿದ್ದಾಗ ಮೊದಲ ಕಾಗೆಯ ಪಾಠವಿತ್ತು. ಆ ಕಾಗೆಗೂ ನೀರು ಸಿಕ್ಕಿ ಅದು ಕಾಗೆಯ ಜಾಣತನ, ಕಾಗೆಯ ವಿವೇಕ ಎಂಬ ನೀತಿಗೆ ಆ ಕತೆ ಹೆಸರಾಗಿತ್ತು. ಇಂದು ಆ ಜಾಣತನ ವಿವೇಕ ಧ್ವಂಸಗೊಂಡಿವೆ. ಕಾರ್ಪೋರೇಟ್, ಖಾಸಗೀ ದೈತ್ಯ ಕಾಗೆಗಳ ದಾಹ, ನಾಳೆಗೆ ಉಳಿಯದಂತೆ ಯಾವುದನ್ನು ಧ್ವಂಸ ಮಾಡಿಲ್ಲ? ಭೂಮಿ, ಆ ಭೂಮಿಯ ಒಳ ಹೊರಗಿನ ನೀರು, ಕಾಡು, ಅದಿರು, ಬೆಳೆ ಬೆಳೆಯುವ ಹೊಲಗದ್ದೆ, ಕೊನೆಗೆ ಗಾಳಿ ಯಾವುದು ಉಳಿದಿದೆ? ಭಿಕ್ಷುಕರನ್ನು ಇಲ್ಲಿ ಮೇಲೆತ್ತಲಾಗಿದೆ, ಬಡತನ ರೇಖೆಯನ್ನೇ ಕೆಳಕ್ಕಿಳಿಸಿ ಭಿಕ್ಷುಕರನ್ನು ಇಲ್ಲಿ ಮೇಲೆತ್ತಲಾಗಿದೆ!

ಹೀಗಿದ್ದೂ ನಮ್ಮ ಉಳಿವಿಗೆ, ಇಂದು ಬಿಡುಗಡೆಯಾದ ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಸಾಯಿನಾಥ್‍ರವರು ಹೇಳಿರುವ “ಭಾರತದ ಬಡತನದ ಸ್ಥಿತಿಯನ್ನು ಒಂದು ‘ಪ್ರಕರಣ’ವಾಗಲ್ಲ; ಬದಲಿಗೆ ಒಂದು ‘ಪ್ರಕ್ರಿಯೆ’ಯಾಗಿ ನೋಡಬೇಕು” ಎಂಬ ಒಂದು ಮಾತೂ ದಾರಿ ತೋರಿಸಬಹುದು. ಈ ದೃಷ್ಟಿ ನಮ್ಮ ಕಣ್ಣಿಗೆ ಬಂದರೆ, ಮುಖ್ಯವಾಗಿ ಪತ್ರಿಕೋದ್ಯಮಕ್ಕೆ ಬಂದರೆ, ಉದ್ಯಮಕ್ಕೆ ಕಷ್ಟವೇನೋ ಆದರೆ ಒಂದಿಷ್ಟು ಪತ್ರಕರ್ತರಿಗಾದರೂ ಬಂದರೂ ಕೂಡ ಆಗುವ ಬದಲಾವಣೆ ಅಷ್ಟಿಷ್ಟಲ್ಲ.

ಆಗ ಟಾಲ್‍ಸ್ಟಾಯ್‍ಗೆ ಕಂಡಂತೆ ನಮಗೂ ಕಾಣಿಸಬಹುದು. ಟಾಲ್‍ಸ್ಟಾಯ್ ಹೇಳಿದ್ದು: ಒಬ್ಬನ ಭುಜದ ಮೇಲೆ ಇನ್ನೊಬ್ಬ ಕೂತಿದ್ದಾನೆ. ಮೇಲೆ ಕೂತಿರುವವನು ತನ್ನನ್ನು ಹೊತ್ತವನ ಭಾರವನ್ನು ತಾನೇ ಹೊತ್ತಿರುವುದು ಎಂದು ಆ ಭಾರ ಹೊತ್ತವನಿಗೇ ನಂಬಿಸುತ್ತಿದ್ದಾನೆ! ದುರಂತವೆಂದರೆ ಅದನ್ನೆ ತಾನೂ ನಂಬುತ್ತಿದ್ದಾನೆ!! -ಹೀಗೆ ಟಾಲ್‍ಸ್ಟಾಯ್ ಕಂಡಂತೆ ಹೀಗೆ ನಮಗೂ ಸುಲಿಗೆಯ ಲಕ್ಷಣಗಳು ಗೋಚರಿಸಬಹುದು.

ಆಗ ಒಂದಿಷ್ಟು ದಾರಿಗಳೂ ಕಾಣಬಹುದು.ಇಂದು ಅಸಮಾನತೆಯ ಧಾಳಿಗೆ ಚುನಾವಣಾ ವ್ಯವಸ್ಥೆಯು ತನ್ನನ್ನು ಬಿಕರಿಗೆ ಇಟ್ಟುಕೊಂಡು ಅಳಿವಿನ ಅಂಚಿನಲ್ಲಿದೆ. ಇಲ್ಲಿ ಸರಿಯಾದ ಚುನಾವಣಾ ಪದ್ಧತಿಯೊಂದನ್ನು ರೂಪುಗೊಳಿಸುವುದನ್ನು ಪತ್ರಿಕೆಗಳು ತನ್ನ ಕೆಲಸ ಅಂದುಕೊಳ್ಳಬಹುದು, ಇದಾಗುವುದು ತಾನು ‘ಸ್ಥಿತಿಯ’ ವರದಿಗಾರ ಎಂದು ತನ್ನನ್ನು ಭಾವಿಸದೆ, ವಿದ್ಯಮಾನಗಳನ್ನು ‘ಪ್ರಕ್ರಿಯೆ’ ಎಂದು ನೋಡಿದಾಗ ಸಾಧ್ಯವಾಗಬಹುದು. ಹಾಗೆಯೇ ಭಾರತದ ಛಿದ್ರ ಸಮಾಜದಲ್ಲಿ ಎಲ್ಲಾ ಜಾತಿಮತ ಅಂತಸ್ತುಗಳ ಎಳೆಯ ಮಕ್ಕಳು ಒಂದು ಕಡೆ ಸೇರಿ ಒಡನಾಡಿ ಶಾಲೆಯಲ್ಲಿ ಕಲಿಯುವುದೇ, ಈ ಸೇರಿ ಒಡನಾಡುವ ಕ್ರಿಯೆಯೇ ಬಲುದೊಡ್ಡ ಶಿಕ್ಷಣ ಎಂದೂ ಕಾಣಿಸಬಹುದು.

ಅದಕ್ಕಾಗಿ ಎಳೆಯ ಮಕ್ಕಳ ಶಿಕ್ಷಣದಲ್ಲಾದರೂ ತಾರತಮ್ಯ ಪಂಚವರ್ಣ ಶಿಕ್ಷಣ ಪದ್ಧತಿಯನ್ನು ಕೈಬಿಟ್ಟು ಏಕರೂಪ ಸಮಾನ ಶಿಕ್ಷಣಕ್ಕಾಗಿ ಇಡೀ ಸಮಾಜ ಹಾತೊರೆಯುವಂತೆ ಅದಕ್ಕಾಗಿ ಕೂಗುವಂತೆ ಪತ್ರಿಕೆಗಳು ಅಭಿಪ್ರಾಯ ರೂಪಿಸಬಹುದು. ನೋಡುವ ಕ್ರಮ ಬದಲಾಗುವುದಾದರೆ, ಬದಲಾವಣೆಯ ದಾರಿಗಳೂ ತಂತಾನೆ ತೆರೆದುಕೊಳ್ಳಬಹುದು. ಆಗ ಪತ್ರಿಕೆಗಳು ಜೀವಂತ ಪತ್ರಿಕೆ ಆಗಿಬಿಡುತ್ತದೆ. ಇದಾಗಲು, ಸಾಯಿನಾಥ್ ಸಂತಾನ ಇಂದು ಹೆಚ್ಚಬೇಕಾಗಿದೆ.

(‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಒಂದು ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ಪಠ್ಯೇತರ ಚಟುವಟಿಕೆಗಳು

Published

on

  • ರುದ್ರಪ್ಪ ಹನಗವಾಡಿ

ಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ಅದರ ಅಧ್ಯಕ್ಷನಾಗಿದ್ದ ಕಾರಣ ಇಡೀ ಕೇಂದ್ರದ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮತ್ತು ಅರ್ಥಮಾಡಿಕೊಳ್ಳುವಂತಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ, ಚರ್ಚೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ಸಂಘಟಿತ ಕಾರ್ಯಕ್ರಮಗಳಾದ ಸಂಗೀತ, ನಾಟಕ, ಏಕಪಾತ್ರಾಭಿನಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಿತ್ತು.

ಪಠ್ಯೇತರ ಚಟುವಟಿಕೆಯ ಸಂಘದ ಉದ್ಘಾಟನಾ ಸಮಾರಂಭದ ನೆಪದಲ್ಲಿ ನಮ್ಮ ಕೇಂದ್ರಕ್ಕೆ ಆಗಿನ ವಿದ್ಯಾ ಮಂತ್ರಿಗಳಾಗಿದ್ದ ಎ. ಆರ್. ಬದರಿ ನಾರಾಯಣ, ಪಿಡಬ್ಲೂಡಿ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಉಪಕುಲಪತಿಗಳಾಗಿದ್ದ ಕೆ.ಎಸ್. ಹೆಗ್ಗಡೆಯವರಂತವರನ್ನು ಆಹ್ವಾನಿಸಿ, ಇಲ್ಲಿನ ಅನಾನುಕೂಲತೆಗಳನ್ನು ಅವರಿಗೆ ವಿವರಿಸಿ, ಅದರ ಅಭಿವೃದ್ಧಿಗಾಗಿ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದೆವು. ಮತ್ತು ಇದೇ ಸಂಘಟನೆಯನ್ನು ಉಪಯೋಗಿಸಿಕೊಂಡು ನಮ್ಮ ಕೇಂದ್ರಕ್ಕೆ ಹಿರಿಯ ಸಾಹಿತಿಗಳಾಗಿದ್ದ ಚಂಪಾ, ಸುಜನಾ ಮತ್ತು ಆಗಿನ್ನು ಹಾಡುವ ಉತ್ಸಾಹದಲ್ಲಿದ್ದ ಜಾನಪದ ಹಾಡುಗಾರ ಬಾನಂದೂರು ಕೆಂಪಯ್ಯ, ಶಿವಮೊಗ್ಗದ ಜನಪದ ಹಾಡುಗಾರರಾಗಿದ್ದ ಯುವರಾಜ ಹೀಗೆ ಅನೇಕರನ್ನು ಸಮಾರಂಭಗಳಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು.

ನಮ್ಮಲ್ಲಿನ ಕೊರತೆಗಳನ್ನು ಅರುಹುತ್ತಾ ಸರ್ಕಾರ ಮತ್ತು ವಿಶ್ವವಿದ್ಯಾಲಯ ನಮ್ಮ ಕೇಂದ್ರದ ಬೆಳವಣಿಗೆಗೆ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದ್ದವು. ಇದೇ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ಚಂದ್ರಶೇಖರ ಪಾಟೀಲರ `ಕುಂಟ ಕುಂಟ ಕುರುವತ್ತಿ’, `ಕೊಡೆಗಳು’, ಚಂದ್ರಶೇಖರ ಕಂಬಾರರ ‘ಸಂಗ್ಯಾ-ಬಾಳ್ಯಾ’, ಪೂರ್ಣಚಂದ್ರ ತೇಜಸ್ವಿಯವರ ‘ಯಮಳ ಪ್ರಶ್ನೆ’, ನಾಟಕಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೆಲ್ಲ ಸೇರಿ ಪ್ರದರ್ಶನ ಮಾಡುತ್ತಿದ್ದೆವು. ನಾಟಕದ ನಿರ್ದೇಶನವನ್ನು ನಾನೇ ಮಾಡುತ್ತಿದ್ದೆ. ಈ ಸಮಾರಂಭಗಳು ನಡೆದಾಗ ವಿಶೇಷವಾಗಿ ವಿದ್ಯಾರ್ಥಿಗಳಲ್ಲದೆ, ಕೇಂದ್ರದ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಬಿ.ಆರ್.ಪಿ. ಯಲ್ಲಿ ಇದ್ದ ವಿದ್ಯುತ್ ನಿಗಮದ ಹಿರಿಯ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ನೌಕರರು ಹಾಗೂ ಹತ್ತಿರದಲ್ಲಿದ್ದ ಮೀನುಗಾರಿಕಾ ಇಲಾಖೆಯ ನೌಕರರು ಕೂಡಾ ಬರುತ್ತಿದ್ದರು. ನಮ್ಮ ಪಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ನಮ್ಮ ಕೇಂದ್ರದ ಅಸ್ತಿತ್ವಕ್ಕೆ ಒಂದು ರೀತಿಯ ಮನ್ನಣೆ ದೊರೆತಂತಾಗಿತ್ತು. ಇಂತಹ ಎಲ್ಲಾ ಸಭೆ ಸಮಾರಂಭಗಳಲ್ಲಿ ಹಿರಿಯರಾಗಿದ್ದ ಕನ್ನಡ ವಿಭಾಗದ ಡಾ. ಹೆಚ್. ತಿಪ್ಪೇರುದ್ರ ಸ್ವಾಮಿ ಅವರು ಅಧ್ಯಕ್ಷತೆ ವಹಿಸುತ್ತಿದ್ದರು. ಇತರೆ ಎಲ್ಲಾ ಆಧ್ಯಾಪಕರು ಕೂಡಾ ಏಕಮನಸ್ಸಿನಿಂದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು.

ನಮ್ಮ ಅರ್ಥಶಾಸ್ತ್ರ ವಿಭಾಗದ ಯೋಜನಾ ವೇದಿಕೆಯೂ ಕೂಡ ಕ್ರಿಯಾಶೀಲವಾಗಿತ್ತು. ಸಾಮಾನ್ಯ ಅರ್ಥಶಾಸ್ತçಕ್ಕೂ ಒಳಪಡುವ ರಾಷ್ಟç ಮತ್ತು ರಾಜ್ಯ ಯೋಜನೆಗಳ ರ‍್ಯಾವಲೋಚನೆ, ವಾರ್ಷಿಕ ಬಜೆಟ್ ಮೇಲಿನ ಚರ್ಚೆ ಇವೇ
ಮುಂತಾದ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಇದಕ್ಕಾಗಿ ಮೈಸೂರಿನಿಂದ ಹಿರಿಯ ಅಧ್ಯಾಪಕರಾಗಿದ್ದ ಡಾ. ಮಾದಯ್ಯ, ಡಾ. ಎಸ್. ನಾಗರಾಜು, ಡಾ. ಎಸ್.ಎಂ. ವೀರರಾಘವಾಚಾರ್ ಅವರುಗಳನ್ನು ಜೊತೆಗೆ ಆಡಳಿತಾಧಿ ಕಾರಿಗಳಾಗಿದ್ದ ತರಿಕೆರೆ ಉಪ ವಿಭಾಗದಲ್ಲಿದ್ದ ಎಸ್.ಎಂ. ಜಾಮಾದಾರ್ ಅವರನ್ನು ಕರೆಸಿ ನಮ್ಮ ವಿದ್ಯಾರ್ಥಿಗಳಿಗೆ ಅವರಿಂದ ಉಪನ್ಯಾಸ ಮತ್ತು ಆಡಳಿತದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡುತ್ತಿದ್ದೆವು.

ನಮ್ಮ ಕೇಂದ್ರದ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ ಸುಮಾರು 10 ದಿನಗಳಿಗೂ ಹೆಚ್ಚು ಕಾಲ ಇಡೀ ಸ್ನಾತಕೋತ್ತರ ಕೇಂದ್ರವನ್ನು ಬಂದ್ ಮಾಡಿ ಪ್ರತಿಭಟಿಸಿದ್ದೆವು. ಈ ಕೇಂದ್ರ ಪ್ರಾರಂಭವಾಗಿ 6-7 ವರ್ಷಗಳಾದರೂ ಖಾಯಂ ಅಧ್ಯಾಪಕರ ಕೊರತೆ ನೀಗಿಸಲು ಸರಿಯಾದ ಲೈಬ್ರರಿ ವ್ಯವಸ್ಥೆ, ಹಾಸ್ಟೆಲ್‌ನಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಒಂದು ಕರಪತ್ರ ಮುದ್ರಿಸಿ ಧರಣಿ ನಡೆಸಿದ್ದೊಂದು ದೊಡ್ಡ ಇತಿಹಾಸ.

ನೇರವಾಗಿ ಅಧ್ಯಾಪಕರು ಭಾಗವಹಿಸಿಲ್ಲವಾದರೂ ವಿದ್ಯಾರ್ಥಿಗಳು ದಿನನಿತ್ಯದ ಬೆಳವಣಿಗೆಯನ್ನೆಲ್ಲ ಗಮನಿಸುತ್ತಾ ಈ ಧರಣಿಯ ವಿಷಯಗಳು ವಿಶ್ವವಿದ್ಯಾಲಯ ಮತ್ತು ಸರ್ಕಾರಕ್ಕೆ ಮುಟ್ಟುವಂತೆ ಮಾಡಲು ಶಿವಮೊಗ್ಗದಲ್ಲಿದ್ದ ಪತ್ರಕರ್ತರಿಗೂ ಸಂಪರ್ಕಿಸಿ ಎಲ್ಲಾ ಪತ್ರಿಕೆಗಳಲ್ಲಿ ಬರುವಂತೆ ಮಾಡಿದ್ದೆವು. ಅದರ ಪರಿಣಾಮವೋ ಎನ್ನುವಂತೆ, ವಿಶ್ವವಿದ್ಯಾಲಯದಿಂದ ಹಿರಿಯ ಅಧಿಕಾರಿಗಳು ಬಂದು ಅಲ್ಲಿನ ಸಮಸ್ಯೆಗಳ ಬಗ್ಗೆ ತುರ್ತು ಗಮನ ಹರಿಸುವ ಬಗ್ಗೆ ಭರವಸೆ ನೀಡಿದ್ದು, ಅದರ ಭಾಗವಾಗಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಅಧ್ಯಾಪಕರಲ್ಲಿ ನನ್ನನ್ನು ಒಳಗೊಂಡAತೆ ಅನೇಕರಿಗೆ ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾದವು. ಲೈಬ್ರರಿ ಶಾಖೆಗೆ ಪೂರ್ಣ ಪ್ರಮಾಣದ ಲೈಬ್ರರಿಯನ್ ಆಗಿ ಮೈಸೂರಿನಿಂದ ರಾಮಕೃಷ್ಣ ಗೌಡ ಬಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿಭಾಗಗಳಿಗೆ ಹೊಸ ಪುಸ್ತಕಗಳನ್ನು, ನಿಯತಕಾಲಿಕಗಳನ್ನು ಕೇಂದ್ರಕ್ಕೆ ತರಿಸುವ ವ್ಯವಸ್ಥೆಯಾಯಿತು.

ಈ ನಡುವೆ ನಾನು ಪಿಹೆಚ್.ಡಿ., ಮಾಡಲು ಹೊಸ ವಿಷಯವೊಂದರ ಹುಡುಕಾಟ ಮತ್ತು ನನಗೆ ಗೈಡ್ ಮಾಡಲು ಈಗಾಗಲೇ ಪ್ರಾಧ್ಯಾಪಕರಾಗಿದ್ದವರನ್ನು ನಿಗದಿಗೊಳಿಸಿಕೊಳ್ಳುವ ತಯಾರಿಯಲ್ಲಿದ್ದೆ. ಗಂಗೋತ್ರಿಯಲ್ಲಿ ಪ್ರೊ. ಮಾದಯ್ಯನವರನ್ನು ಈ ಬಗ್ಗೆ ವಿಚಾರಿಸಿದೆ. ಅವರ ಬಳಿ ಈಗಾಗಲೇ ಸಂಶೋಧನೆ ಮಾಡುವ ಹೆಚ್ಚಿನ ವಿದ್ಯಾರ್ಥಿಗಳಿರುವ ಕಾರಣ ನೀಡಿ, ಸಾಧ್ಯವಾಗುವುದಿಲ್ಲ ಎಂದರು. ಹಿರಿಯ ಪ್ರಾಧ್ಯಾಪಕರಾಗಿದ್ದ ಎಪಿಎಸ್ ಮತ್ತು ಎಸ್.ಎಂ.ವಿ. ಅವರು ನಿವೃತ್ತಿ ಅಂಚಿನಲ್ಲಿದ್ದು ಅವರೂ ಕೂಡ ನನಗೆ ಮಾರ್ಗದರ್ಶನ ಮಾಡುವ ಆಸಕ್ತಿ ತೋರಲಿಲ್ಲ. ಇದೇ ಯೋಚನೆಯಲ್ಲಿ ನಾನು ಬೆಂಗಳೂರು ವಿಕೆಆರ್‌ವಿ. ಇನ್ಸಿಟಿಟ್ಯೂಟ್‌ನಲ್ಲಿ ಅಂದು ಪ್ರಾಧ್ಯಾಪಕರಾಗಿದ್ದ ಡಾ. ಅಬ್ದುಲ್ ಅಜೀಜ್ ಅವರನ್ನು ಭೇಟಿ ಮಾಡಿ ನನ್ನ ಸಂಶೋಧನಾ ಆಸಕ್ತಿಯನ್ನು ವಿವರಿಸಿ ತಾವು ಗೈಡ್ ಆಗಬೇಕೆಂದು ಕೇಳಿದೆ. ಅದಕ್ಕವರು ಇಲ್ಲ, ನೀವು ನಿಮ್ಮ ವಿಶ್ವವಿದ್ಯಾಲಯದಲ್ಲೇ ಇರುವ ಪ್ರಾಧ್ಯಾಪಕರಲ್ಲಿ ಸಂಶೋಧನೆ ಮಾಡುವುದು ಸೂಕ್ತ.

ಮುಂದೆ ಅನೇಕ ಸಂದರ್ಭಗಳಲ್ಲಿ ನಿಮ್ಮ ವಿಭಾಗದ ಮುಖ್ಯಸ್ಥರ ಶಿಫಾರಸ್ಸುಗಳು ನಿಮಗೆ ಬೇಕಾಗುತ್ತದೆ. ನೀವು ಬೇರೊಂದು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಪ್ರಾರಂಭಿಸಿದರೆ ಮುಂದೆ ನಿಮಗೆ ವಿಭಾಗ ಮಟ್ಟದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿ ನಿಮಗೆ ಸಂಶೋಧನೆಯಲ್ಲಿ ಆಸಕ್ತಿ ಬರದಂತಹ ಸನ್ನಿವೇಶ ಬರಬಹುದೆಂದು ಅವರು ತಿಳಿ ಹೇಳಿದರು. ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅರ್ಹತೆಗಳನ್ನು ಪಡೆಯದೆ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದುವರಿಯುವುದು ನ್ಯಾಯ ಸಮ್ಮತವಲ್ಲವೆಂದು ನನ್ನೊಳಗಿನ ಒಳ ಮನಸ್ಸು ಕೂಡ ಜಾಗೃತವಾಗಿ ಹೇಳುತ್ತಲೇ ಇತ್ತು. ಅದರ ಒತ್ತಾಸೆಯಂತೆ ಮುಂದೆ ನಾನು ನನ್ನ ಹುದ್ದೆಯನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಭದ್ರಾವತಿಯಲ್ಲಿ ಮತ್ತೆ ಪ್ರೊ.ಬಿ. ಕೃಷ್ಣಪ್ಪನವರ ಭೇಟಿ

Published

on

  • ರುದ್ರಪ್ಪ ಹನಗವಾಡಿ

1968ರಲ್ಲಿ ಕೃಷ್ಣಪ್ಪ ಅವರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪಿಯುಸಿ ಓದುವಾಗ ಕಂಡಿದ್ದ ನಾನು ಅವರನ್ನು ಮತ್ತೆ ಭೇಟಿಯಾಗಿದ್ದು, ನಾನು ಮೈಸೂರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದಾಗ ಈ ಸಮಯದಲ್ಲಿ ಸಮಾಜವಾದಿ ಯುವಜನ ಸಭಾ ಮತ್ತು ಜಾತಿ ವಿನಾಶ ಸಮ್ಮೇಳನ ಮತ್ತು ಬೂಸಾ ಗಲಾಟೆ ಸಂದರ್ಭದಲ್ಲಿ ಅವರು ಮೈಸೂರಿಗೆ ಬಂದಾಗ ಸಿಗುತ್ತಿದ್ದೆ.

ಮಾದೇವ, ರಾಜಶೇಖರ ಕೋಟಿ, ನೆಲಮನೆ ದೇವೇಗೌಡ, ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್ ಇನ್ನು ಅನೇಕರು ಸೇರಿ ಜಾತಿ ವಿನಾಶ, ಸಮಾಜವಾದ, ರೈತ ಸಂಘ ಆ ಕಾಲದಲ್ಲಿನ ಸಾರ್ವಜನಿಕ ಜೀವನದಲ್ಲಿದ್ದ ಭ್ರಷ್ಟಾಚಾರ, ವಿಶ್ವವಿದ್ಯಾಲಯದಲ್ಲಿನ ಜಾತೀಯತೆ ಎಲ್ಲವೂ ಚರ್ಚೆಗೆ ಬರುತ್ತಿದ್ದವು. ಮಹೇಶ, ನಾನು, ಭಕ್ತ, ಅರ್ಕೇಶ ಸಾಮಾನ್ಯವಾಗಿ ಕೇಳುಗರಾಗಿರುತ್ತಿದ್ದೆವು. ಮತ್ತೆ ಆ ಕ್ಷಣದಲ್ಲಿ ಆ ಸಂಘಟನೆಗಳ ಸಮಿತಿಯವರು ವಹಿಸಿದ ಕೆಲಸಗಳಿಗೆ ಸಜ್ಜಾಗಿರುತ್ತಿದ್ದೆವು.

ನಾನು ಬಿಆರ್‌ಪಿಗೆ ಬಂದಾಗ ಕೃಷ್ಣಪ್ಪನವರು ಅದಾಗಲೇ ಭದ್ರಾವತಿಯಲ್ಲಿದ್ದು, ತಮ್ಮ ಅಂತರ್‌ಜಾತಿ ಮದುವೆಯ ಕಾರಣದಿಂದಲೂ, ಸಮಾಜವಾದಿ ಹೋರಾಟಗಳಿಂದಲೂ, ವಿಶ್ವವಿದ್ಯಾಲಯ ಮತ್ತು ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಪರಿಚಿತರಾಗಿದ್ದರು ಕೃಷ್ಣಪ್ಪ ಅವರ ಜೊತೆ, ಸಮಾಜವಾದಿಗಳಾಗಿದ್ದ ಶಿವಮೊಗ್ಗದ ಮುನೀರ್,
ನಿಸಾರ್ ಅಹಮದ್, ದಿವಾಕರ ಹೆಗ್ಗಡೆ, ರೈತ ಸಂಘದ ಎನ್.ಡಿ. ಸುಂದರೇಶ್, ಬಿ. ರಾಜಣ್ಣ, ಎಂ. ಚಂದ್ರಶೇಖರಯ್ಯ, ಎನ್. ಗಿರಿಯಪ್ಪ, ಡುಮ್ಮ ರಾಜಣ್ಣ ಎಂಬೆಲ್ಲ ಇನ್ನೂ ಅನೇಕ ಸ್ನೇಹಿತರಿದ್ದರು. ಅರ‍್ಯಾರೂ ಒಂದು ಜಾತಿಯ, ಇಲ್ಲವೇ ಒಂದು ಕಸುಬಿನವರಾಗಿರಲಿಲ್ಲ. ಕೃಷ್ಣಪ್ಪನವರ ಸಮಾಜವಾದಿ ಚಿಂತನೆಯಲ್ಲಿ ತೀವ್ರ ಆಸಕ್ತಿಯಿಂದ ಪಾಲ್ಗೊಂಡ ಎಲ್ಲ ಜಾತಿಯಿಂದ ಬಂದ ಸ್ನೇಹಿತರಾಗಿದ್ದರು. ನಾನು ಬಿಆರ್‌ಪಿಯಿಂದ ಬಿಡುವಿನ ಸಮಯದಲ್ಲಿ ಭದ್ರಾವತಿಗೆ ಕೃಷ್ಣಪ್ಪನವರನ್ನು ನೋಡಲು ಹೋಗುತ್ತಿದ್ದೆ. ಆಗ ಭದ್ರಾವತಿಯ ಸಮಾಜವಾದಿ ಗೆಳೆಯರನೇಕರು ಪರಿಚಯವಾಗಿ, ನನಗೂ ಅವರುಗಳು ಕೂಡ ಆತ್ಮೀಯ ಗೆಳೆಯರಾದರು.

ಕೃಷ್ಣಪ್ಪನವರ ಶ್ರೀಮತಿ ಇಂದಿರಾ ಅವರು ಅದಾಗಲೇ ಕೆ.ಪಿ.ಎಸ್.ಸಿ.ಯಿಂದ ಆಯ್ಕೆಯಾಗಿ ತಾಲ್ಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣಪ್ಪನವರ ಮನೆಯಲ್ಲಿ ಅವರ ತಂದೆ ಬಸಜ್ಜ, ತಾಯಿ ಚೌಡಮ್ಮನವರ ಜೊತೆ ತಂಗಿ ರೇಣುಕ ಮತ್ತು ಹಿರಿಯ ತಂಗಿಯ ಮಕ್ಕಳಾದ ಮೈತ್ರೇಯಿ, ಶಿವು ಮತ್ತು ತಮ್ಮ ತಿಪ್ಪೇಶಿ ಕೂಡ ಇದ್ದು ಅವರೆಲ್ಲ ವಿವಿಧ ತರಗತಿಗಳಲ್ಲಿ ಓದುತ್ತಿದ್ದರು. ಕೃಷ್ಣಪ್ಪ ಅವರ ಮನೆಯೊಂದು ಮಿನಿ ಹಾಸ್ಟೆಲ್ ತರ ಇತ್ತು.
ಭದ್ರಾ ಕಾಲೇಜಿನಲ್ಲಿ ಶಿಸ್ತಿನ ಅಧ್ಯಾಪಕರಾಗಿದ್ದ ಕೃಷ್ಣಪ್ಪನವರು ಬಿಡುವಿನ ಸಮಯದಲ್ಲಿ ಸಮಾಜದಲ್ಲಿನ ಅಂಧ ಶ್ರದ್ಧೆ ಮತ್ತು ಮೌಢ್ಯಗಳ ಬಗ್ಗೆ, ಸಾಮಾಜಿಕ ಅಸಮಾನತೆಗಳ ಬಗ್ಗೆ ಮಿತ್ರರೊಡನೆ ಒಡಗೂಡಿ, ಸಾರ್ವಜನಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಅವರ ಹೋರಾಟಗಳನ್ನು ಕ್ರಮವಾಗಿ ಜೋಡಿಸಿದರೆ ಅದೊಂದು ಪ್ರಮುಖ ಬೃಹತ್ ಗ್ರಂಥವಾಗಿ ರೂಪುಗೊಳ್ಳುತ್ತದೆ. (ಇಂದಿರಾ ಕೃಷ್ಣಪ್ಪ ಬರೆದ ಕೃತಿ ‘ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಕೃಷ್ಣಪ್ಪ’ ಪುಸ್ತಕದಲ್ಲಿ ಸಂಕ್ಷಿಪ್ತ ಹೋರಾಟದ ವಿವರಗಳು ಇವೆ.)

ನನಗೆ ಮೈಸೂರಿನ ಹೋರಾಟದ ಗೆಳೆಯರ ಜೊತೆಗೆ ಕೃಷ್ಣಪ್ಪನವರ ಒಡನಾಟ ಮತ್ತು ಹೋರಾಟದ ಸಂಪರ್ಕ ದೊರೆತದ್ದು ಒಂದು ಸುವರ್ಣ ಅವಕಾಶವೆಂದೇ ಭಾವಿಸಿದ್ದೇನೆ. ನಮ್ಮಿಬ್ಬರ ಸಂಬಂಧ, ನನ್ನ ಮದುವೆ, ಮಕ್ಕಳು, ನಂತರ ನನ್ನೂರು ಕೇರಿಗಳಿಗೆ ವಿಸ್ತಾರಗೊಂಡು ಎರಡು ಮನೆತನಗಳ ಕಥನದಲ್ಲಿ ಒಬ್ಬರಿಗೊಬ್ಬರು ಸೇರಿ ಹೋಗಿದ್ದೇವೆ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

ಆತ್ಮಕತೆ | ತುರ್ತು ಪರಿಸ್ಥಿತಿ ಮತ್ತು ನಮ್ಮೂರಿನ ಭೂ ಹೋರಾಟ

Published

on

  • ರುದ್ರಪ್ಪ ಹನಗವಾಡಿ

ದೇಶದಾದ್ಯಂತ ತುರ್ತುಪರಿಸ್ಥಿತಿ ಇತ್ತು. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಿಗದಿಯಂತೆ ನಡೆಯುತ್ತಿದ್ದವು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾಂಗ್ರೆಸ್ ವಿರೋಧಿ ರಾಜಕೀಯ ನಾಯಕರನ್ನು ಬಂಧಿಸಿ ಜೈಲಿನಲ್ಲಿರಿಸಿದ್ದರು. ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳು ವಿಶೇಷವಾಗಿ ದಲಿತ ಹಿಂದುಳಿದವರ ಪರವಾಗಿದ್ದುದನ್ನು ಮುಖ್ಯಮಂತ್ರಿ ದೇವರಾಜ ಅರಸು ಅವರು ಒತ್ತಿ ಹೇಳುತ್ತಿದ್ದರು ಮತ್ತು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ರಾಜ್ಯಾಡಳಿತವನ್ನು ನಡೆಸುತ್ತಿದ್ದರು.

ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಿಂದೆಂದೂ ನೀಡಿರದಿದ್ದ ವಿಶೇಷ ಸವಲತ್ತುಗಳನ್ನು ದಲಿತರು, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿದ್ದರು. ಹಾಗೆ ಹೇಳುತ್ತಲೂ ಇದ್ದರು. ಅದು ನಿಜವೂ ಆಗಿತ್ತು. ಆದರೆ ನಾವೆಲ್ಲ ತುರ್ತುಪರಿಸ್ಥಿತಿಯ ವಿರುದ್ಧವಾಗಿ ಕೆಲಸ ಮಾಡುತ್ತಿದ್ದೆವು.

ನಮ್ಮ ಊರಿನಲ್ಲಿ ವೀರಭದ್ರ ದೇವರ ಚಾಕರಿ (ಮ್ಯಾಳ) ಮಾಡುತ್ತಿದ್ದ ಕಾರಣ ಹದಿನೇಳು ಎಕರೆ ವೀರಭದ್ರ ದೇವರ ಹೆಸರಿನಲ್ಲಿದ್ದುದನ್ನು ನಮ್ಮ ಎಲ್ಲ ಆರು ಕುಟುಂಬಗಳಿಗೆ ಊರಿನ ಪ್ರಮುಖರು ನಾವಿನ್ನು ಹುಟ್ಟುವ ಮುಂಚೆಯೇ ಹಂಚಿ ಕೊಟ್ಟಿದ್ದರು. ಅದರಲ್ಲಿ ಅಪ್ಪನಿಗೆ ಸುಮಾರು ನಾಲ್ಕು ಎಕರೆಯಷ್ಟನ್ನು ನೀಡಿದ್ದು ಸಾಗುವಳಿ ಮಾಡಿಕೊಂಡು ಬರುತ್ತಿದ್ದೆವು. ಈ ನಡುವೆ ಭೂಸುಧಾರಣಾ ಕಾನೂನು ಜಾರಿ ಮಾಡುವ ಬಗ್ಗೆ ಅರಸು ಸರ್ಕಾರ ವಿಶೇಷವಾಗಿ ಭೂನ್ಯಾಯ ಮಂಡಳಿಯನ್ನು ರಚಿಸಿತ್ತು. ಇದನ್ನರಿತ ನಮ್ಮವರೆಲ್ಲ ಸೇರಿ ನಮ್ಮ ಅಣ್ಣ ತಿಪ್ಪಣ್ಣನ ಪ್ರಯತ್ನದಿಂದ ಸರ್ಕಾರ ರಚಿಸಿದ್ದ ಭೂನ್ಯಾಯ ಮಂಡಳಿಯ ಮುಂದೆ ಎಲ್ಲ ಆರು ಜನರೂ ತಮಗೆ ಭೂಮಿಯ ಹಕ್ಕು ನೀಡಲು ನಮೂನೆ 7ರ ಅರ್ಜಿ ಸಲ್ಲಿಸಿದ್ದರು.

ಭೂನ್ಯಾಯ ಮಂಡಳಿಯ ಮುಂದೆ ಅರ್ಜಿ ಹಾಕಿದ ವಿಷಯ ಊರಲ್ಲಿ ದೊಡ್ಡ ಅಸಮಾಧಾನದ ಕಿಚ್ಚನ್ನು ಮೂಡಿಸಿತ್ತು. ಈ ನಡುವೆ ನಮಗಾಗಿ ಕೊಟ್ಟಿದ್ದ 17 ಎಕರೆಯಲ್ಲಿ ಮಧ್ಯ ಭಾಗದಲ್ಲಿ 4 ಎಕರೆಯನ್ನು ಕಬಳಿಸುವಷ್ಟು ರಾಷ್ಟ್ರೀಯ ಹೆದ್ದಾರಿಯು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ಬೈಪಾಸ್ ರಸ್ತೆಗಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಸರ್ಕಾರದಿಂದ ನೀಡಿದ ನಾಲ್ಕು ಎಕರೆ ಪರಿಹಾರದ ಹಣವನ್ನು ಕೂಡ ದೇವಸ್ಥಾನದವರೇ ತೆಗೆದುಕೊಂಡಿದ್ದರು. ಉಳಿದಿದ್ದ 13 ಎಕರೆಯಲ್ಲಿ ಮತ್ತೆ ಪುನಃ ಮರು ಹಂಚಿಕೆ ಮಾಡಿಕೊಂಡು ಆರು ಜನರು ಸುಮಾರು ಎರಡೆರಡು ಎಕರೆಗಳಷ್ಟು ಸಾಗುವಳಿ ಮಾಡುತ್ತಿದ್ದರು.
ದೇವಸ್ಥಾನ ಧರ್ಮದರ್ಶಿ ಕಮಿಟಿಯಲ್ಲಿ ಊರಿನ ಹಿರಿಯರಿದ್ದರೂ ಉಳಿದಿರುವ ಭೂಮಿಯನ್ನು ನಮ್ಮವರಿಂದ ಬಿಡಿಸುವುದು ಮತ್ತು ಪ್ರತಿ ಮಂಗಳವಾರ ಗುಡಿಯಲ್ಲಿ ಮಾಡುತ್ತಿರುವ ಮ್ಯಾಳಗಳನ್ನು ನಿಲ್ಲಿಸಬೇಕೆಂದು ಚರ್ಚೆ ಆಗ ಊರಲ್ಲಿ ನಡೆಯುತ್ತಿತ್ತು. ಅವರೆಲ್ಲರ ಚರ್ಚೆಗಳ ಮಧ್ಯೆ ಮ್ಯಾಳದವರು ನಿಲ್ಲಿಸದೆ ಪ್ರತಿ ಮಂಗಳವಾರ ತಪ್ಪಿಸದೆ ಗುಡಿಗೆ ಹೋಗಿ ಎಂದಿನಂತೆ ಮ್ಯಾಳ ಮಾಡಿ ಬರುತ್ತಿದ್ದರು.

ನಮ್ಮೂರ ಚಲುವಾದಿಗಳಿಗೆ ಈ ರೀತಿಯ ಧೈರ್ಯವಿರಲಿಲ್ಲ. ಇವೆಲ್ಲದರ ಹಿಂದಿನ ಯೋಜಕ ಮೈಸೂರಲ್ಲಿ ಓದುತ್ತಿರುವ ಹುಡುಗ ನಾನೇ ಎಂದು ಊರವರು ಮಾತಾಡಿಕೊಂಡರು. ಅವನು ಊರಿಗೆ ಯಾವ ದಾರಿಯಲ್ಲಿ ಬರುತ್ತಾನೋ ಕಾದು ಕುಳಿತು ಕಾಲು ಮುರಿಯಬೇಕೆಂಬ ಯೋಜನೆ ಕೂಡ ಹಾಕಿಕೊಂಡಿದ್ದರಂತೆ. ಆದರೆ ಏಕಾಂಗಿಯಾಗಿ ಓಡಾಡುತ್ತಿದ್ದ ನನಗೆ ಒಳಗೊಳಗೆ ಅಳುಕು ಇದ್ದರೂ ನಾನೇನು ತಪ್ಪು ಮಾಡುತ್ತಿಲ್ಲ ಎಂಬ ತಿಳುವಳಿಕೆ ಧರ‍್ಯ ನೀಡುತ್ತಿತ್ತು. ಆದರೆ ಊರಿಗೆ ಬಂದು ಹೊರಗೆ ಓಡಾಡುತ್ತಿದ್ದರೆ ನಮ್ಮವರೆಲ್ಲ ದೂರದಲ್ಲಿದ್ದುಕೊಂಡೇ ನನ್ನನ್ನು ಊರಲ್ಲಿರುವ ತನಕ ವಿಶೇಷವಾಗಿ ಕವರ್ ಮಾಡುತ್ತಿದ್ದರು.

ಇದಕ್ಕೂ ಮುಂಚೆ ನಾನಿನ್ನು ಬಿ.ಎ.ನಲ್ಲಿ ಓದುತ್ತಿರುವಾಗ ಸರ್ಕಾರದ ವತಿಯಿಂದ ನಮ್ಮ ಮನೆಯ ಹತ್ತಿರದಲ್ಲೇ ಸಾರ್ವಜನಿಕರಿಗಾಗಿ ಕುಡಿಯಲು ಒಂದು ತೆರೆದ ಬಾವಿಯನ್ನು ತೆಗೆದಿದ್ದರು. ಊರಲ್ಲಿದ್ದ ಎರಡು ಬಾವಿಗಳಿಂದ ನೀರು ಸೇದುತ್ತಿದ್ದ ಮೇಲ್ಜಾತಿಗಳ ಜನರಿಂದ ನಮ್ಮವರೆಲ್ಲ ಹೊಯ್ ನೀರು ತರುತ್ತಿದ್ದರು. ಅಂದರೆ ಮೇಲ್ಜಾತಿಯವರಿಂದ ನೀರು ಸೇದಿ ಇವರ ಕೊಡಗಳಿಗೆ ನೀರು ಹಾಕಬೇಕು, ಆಗ ಇವರ ಮನೆಗಳಿಗೆ ತೆಗೆದುಕೊಳ್ಳಬೇಕು. 1936ರಲ್ಲಿ ಸರ್ಕಾರ ನಮಗೊಂದು ರಂಗಜ್ಜನ ಮಠದ ಹತ್ತಿರ ಬಾವಿ ತೆಗೆಸಿತ್ತು. ಅದು ನಮ್ಮ ಮನೆಗಳಿಗೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ.

ಮನೆಯ ಹತ್ತಿರವಿರುವ ಬಾವಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸುವ ಮುನ್ನ ನಾನು ನಮ್ಮಲ್ಲಿದ್ದ ಹಸುವಿನ ಜೊತೆ ಆ ಹೊಸ ಬಾವಿಯಿಂದ ನೀರು ಸೇದಿ ಅದಕ್ಕೆ ಕುಡಿಸಿ ನಾನು ಅಲ್ಲೇ ಸ್ನಾನ ಮಾಡಿಕೊಂಡು ಬರುತ್ತಿದ್ದೆ. ನಾನಿರುವಾಗ ಯಾರೂ ಮಾತಾಡದೆ ಇದ್ದವರು, ನಾನು ಮೈಸೂರಿಗೆ ವಾಪಸ್ ಓದಲು ಹೋದಾಕ್ಷಣ ಮಾರನೆ ದಿನ ನಮ್ಮ ಮನೆಯ ಹೆಣ್ಣು ಮಕ್ಕಳು ನೀರಿಗೆ ಹೋದಾಗ ಹಗ್ಗ ಕೊಡಪಾನಗಳನ್ನು ಕಿತ್ತು ಬಿಸಾಕಿ ನೀರು ಸೇದಲು ಬಿಟ್ಟಿರಲಿಲ್ಲ. ಆಗಿನ್ನು ಅಪ್ಪ ಇದ್ದ. ‘ನೀನು ಊರ ಉಸಾಬರಿಗೆ ಬರಬೇಡ ನಿನ್ನ ಓದು ನೀನು ಮಾಡಿಕೊಂಡು ಸುಮ್ಮನಿರು’ ಎಂದು ಪತ್ರ ಬರೆಸಿ ಸಮಾಧಾನ ಹೇಳಿದ್ದ. ಆದರೂ ನಾನು ಆಗಿರುವ ಅವಮಾನದ ಬಗ್ಗೆ ಚಿಂತಿಸುತ್ತಿದ್ದಾಗ ಒಂದು ದಿನ ಮೈಸೂರಿಗೆ ಬಂದಿದ್ದ ಕಂದಾಯ ಮಂತ್ರಿಗಳಾಗಿದ್ದ ಬಸವಲಿಂಗಪ್ಪನವರ ಹತ್ತಿರ ಹೋಗಿ, ನಮ್ಮೂರಲ್ಲಿ ಸಾರ್ವಜನಿಕ ಬಾವಿಯಿಂದ ನೀರು ಸೇದಲು ಲಿಂಗಾಯತರು ತೊಂದರೆ ಕೊಡುತ್ತಿರುವ ಬಗ್ಗೆ ಹೇಳಿದೆ.

ಅವರು ಅದನ್ನು ಮನಸ್ಸಿನಲ್ಲಿಕೊಂಡು ಬೆಂಗಳೂರಿಗೆ ವಾಪಸಾಗಿದ್ದರು. ನಮ್ಮೂರ ಛರ‍್ಮನ್ ಬಸಪ್ಪನವರು ಮತ್ತು ನಮ್ಮ ಹರಿಹರದವರೇ ಬಿ. ಬಸವಲಿಂಗಪ್ಪನವರು ಮೊದಲಿಂದಲೂ ಬಳಕೆಯಲ್ಲಿದ್ದವರಾಗಿದ್ದರು. ಛರ‍್ಮನ್ ಬಸಪ್ಪನವರು ಇನ್ನು ನಮ್ಮ ಊರಿನವರೊಡನೆ ಬೆಂಗಳೂರಲ್ಲಿ ತಮ್ಮ ಯಾವುದೋ ಕೆಲಸಕ್ಕೆ ಭೇಟಿ ಮಾಡಿದಾಗ ನಾನು ಹೇಳಿದ ವಿಷಯವನ್ನು ಪ್ರಸ್ತಾಪಿಸಿ, ‘ನೀವೇನು ಹೆಂಡ ಕುಡಿಯೋದಿಲ್ಲವಾ? ಮಾಂಸ ತಿನ್ನೋದಿಲ್ವಾ’ ಎಂದೆಲ್ಲಾ ಕೇಳಿ ‘ಬಸವಣ್ಣ ಏನು ಹೇಳಿದ್ದಾನೆ ಗೊತ್ತಾ? ಅದನ್ನ ಪಾಲಿಸೋದು ಬಿಟ್ಟು, ಸರ್ಕಾರ ಕಟ್ಟಿಸಿದ ಬಾವಿಯ ನೀರು ಸೇದಲು ಅಡ್ಡಿಪಡಿಸಬಾರದೆಂದು ಗರ್ಜನೆ ಹಾಕಿ ತಾಕೀತು ಮಾಡಿ ಕಳಿಸಿದ್ದರು.

ನಮ್ಮೂರ ಛರ‍್ಮನ್ ಬಸಪ್ಪನವರು ಬಹಳ ದಿನಗಳ ಕಾಲ ನಮ್ಮೂರ ಛರ‍್ಮನ್‌ರಾಗಿ ಎಲ್ಲರ ಜೊತೆ ಒಳ್ಳೆಯ ಸಂಬಂಧವಿಟ್ಟುಕೊಂಡಿದ್ದರು. ಆದರೆ ಊರ ಸಮಷ್ಟಿಯ ಸಮಸ್ಯೆಗಳು ಬಂದಾಗ ಧೈರ್ಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಬೆಂಗಳೂರಿನಿಂದ ಬಂದವರೇ ಯಾರು ನಿಮಗೆ ನೀರು ತರಲು ಅಡ್ಡಿಪಡಿಸಿದವರು ಎಂದು ಹೇಳಿ ಅವರೇ ನಮ್ಮ ಕೇರಿಗೆ ಬಂದು ನಮ್ಮವರನ್ನೇ ನೀರು ಸೇದಿಕೊಳ್ಳಲು ಹೇಳಿದ್ದರು. ಊರಲ್ಲಿ ವಿರೋಧಿಸಿದವರಿಗೆ ಸರ್ಕಾರದಿಂದ ಆದೇಶವಾಗಿದೆ ಎಂದೆಲ್ಲ ಹೇಳಿ ಬಾಯಿ ಮುಚ್ಚಿಸಿದ್ದರು. ಛರ‍್ಮನ್ ಬಸಪ್ಪನವರು ಸುಮಾರು 20 ವರ್ಷಗಳ ಕಾಲ ಛರ‍್ಮನ್‌ರಾಗಿದ್ದರು. ಯಾರಿಗೂ ಕೇಡು ಬಯಸುವ ವ್ಯಕ್ತಿಯಾಗಿರಲಿಲ್ಲ. ಇದೇ ಸಮಸ್ಯೆ ಬೇರೆಯವರ ಕೈಗೆ ಬಿದ್ದಿದ್ದರೆ, ಏನೆಲ್ಲಾ ಅನಾಹುತ ಮಾಡುತ್ತಿದ್ದರೋ ಊಹಿಸಲೂ ಅಸಾಧ್ಯ.

ಈ ಹಿನ್ನೆಲೆಯಲ್ಲಿ ಈಗ ಊರ ಮಟ್ಟದಲ್ಲಿ ಮತ್ತೊಂದು ಮಹತ್ತರವಾದ ಸಮಸ್ಯೆಯಾಗಿ ಎದ್ದು ಕೂತಿತ್ತು. ಅದು ಭೂ ನ್ಯಾಯ ಮಂಡಳಿಗೆ ಅರ್ಜಿ ಫಾರಂ ಹಾಕಿದ್ದು. ಹರಿಹರದಲ್ಲಿ ನಡೆಸುತ್ತಿದ್ದ ಭೂನ್ಯಾಯ ಮಂಡಳಿಯ ಮುಂದೆ ಹಾಜರಾಗಬೇಕು. ನಮ್ಮವರೆಲ್ಲ ದೇವಸ್ಥಾನದ ಧರ್ಮದರ್ಶಿಗಳ ಜೊತೆಗೆ ಮಾತಾಡಿಕೊಂಡು ಅವರು ತರುತ್ತಿದ್ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ದರು. ನಮ್ಮ ಅಣ್ಣ ತಿಪ್ಪಣ್ಣ ಮಾತ್ರ ಅವರ ಜೊತೆಗೆ ಹೋಗುತ್ತಿರಲಿಲ್ಲ. ಅವರ ಜೊತೆ ಇರುವಾಗ, ನೀವು ಹೇಳಿದ ಹಾಗೆ ಸಾಕ್ಷಿ ಹೇಳುತ್ತೇವೆಂದು ಅವರ ಹತ್ತಿರವೇ ಬೀಡಿ ಕೇಳಿ ಸೇದಿಕೊಳ್ಳುತ್ತಿದ್ದರು. `ಇದೆಲ್ಲ ನಮ್ಮ ಹುಡುಗನ ಕೆಲಸ, ನಮಗ್ಯಾಕಣ್ಣ ದೇವರ ಜಮೀನು’ ಎಂದೆಲ್ಲ ಅವರ ಜೊತೆಯೇ ತಾಳ ಹಾಕುತ್ತ ಇದ್ದರು. ನಾನು ಊರಿಗೆ ಹೋದಾಗ ಯಾವಾಗ ತೀರ್ಮಾನಿಸಲಾಗುತ್ತದೆ ಎಂದು ಬಂದು ಗುಟ್ಟಾಗಿ ನನ್ನ ಬಳಿ ಕೇಳುತ್ತಿದ್ದರು. ನಮ್ಮವರೆಲ್ಲರ ಅದೃಷ್ಟವೋ ಎನ್ನುವಂತೆ ನನಗೆ 1969-1972ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕೆ.ಎಂ. ಶಂಕರಲಿಂಗೇಗೌಡರನ್ನು ದಾವಣಗೆರೆ ಭೂನ್ಯಾಯ ಮಂಡಳಿಯ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿತ್ತು. ನಾನು ನಮ್ಮ ಊರಿನ ಸ್ಥಿತಿಯನ್ನೆಲ್ಲ್ಲ ಅವರಿಗೆ ವಿವರಿಸಿ, ನಮಗೆ ಆದಷ್ಟು ಬೇಗ ಇತ್ಯರ್ಥಗೊಳಿಸಿಕೊಡಬೇಕೆಂದು ಅವರಲ್ಲಿ ವಿನಂತಿಸಿದೆ. ನಾನು ಹೋಗಿ ವಿನಂತಿಸಿದ 3-4 ತಿಂಗಳಲ್ಲಿ ನಮ್ಮವರೆಲ್ಲರ ಹೆಸರಿಗೆ ಭೂನ್ಯಾಯ ಮಂಡಳಿಯಲ್ಲಿ 1976ರ ವರ್ಷದ ಮಧ್ಯ ಭಾಗದಲ್ಲಿ ಭೂನ್ಯಾಯ ಮಂಡಳಿಯಿಂದ ತೀರ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಹೆಚ್. ಶಿವಪ್ಪನವರು ಹರಿಹರ ತಾಲ್ಲೂಕು ಶಾಸಕರು ಮತ್ತು ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದರು. ಅವರು ನಮಗೆಲ್ಲ ಜಮೀನು ನೋಂದಾಯಿಸುವ ಪ್ರಕರಣದಲ್ಲಿ ವಿರೋಧಿಸದೆ ಸಹಕಾರ ನೀಡಿದ್ದನ್ನು ನಾನು ನೆನಪಿಸಿಕೊಳ್ಳಬೇಕು. ಆದೇಶ ನೀಡುವ ಸಮಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಭೂನ್ಯಾಯ ಮಂಡಳಿಯ ಅಧ್ಯಕ್ಷರ ಎದುರೇ ‘ಊರಿಗೆ ರ‍್ರಲೇ ನೋಡಿಕೊಳ್ಳುತ್ತೇವೆ’ ಎನ್ನೋ ಧಮ್ಕಿ ಹಾಕಿದಾಗ, ಅಧ್ಯಕ್ಷರು ‘ನಿಮ್ಮನ್ನೆಲ್ಲ ಪೊಲೀಸ್ ಕರೆಸಿ ಈಗಲೇ ಜೈಲಿಗೆ ಕಳಿಸುತ್ತೇನೆಂದು ಹೇಳಿ ಎಚ್ಚರಿಕೆ ನೀಡಿದರೆಂದು ನಮ್ಮವರೆಲ್ಲ ನನ್ನ ಬಳಿ ಸಂತೋಷದಿಂದ ಎಲ್ಲ ಮುಗಿದ ಮೇಲೆ ಹೇಳಿಕೊಂಡಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending