Connect with us

ನೆಲದನಿ

ಅಂಬೇಡ್ಕರರ ಕೊನೆಯ ಸಂದೇಶ

Published

on

  • ರಘೋತ್ತಮ ಹೊ.ಬ

ನಿಜ, ಇಂತಹದನ್ನು ಬರೆಯಲು ಕೈಗಢಗಢ ಎಂದು ನಡುಗುತ್ತದೆ. ಬಾಬಾಸಾಹೇಬರ ಕೊನೆಯ ಸಂದೇಶ ಎಂದು ಹೇಳಲು ಮೈ ಬೆವರುತ್ತದೆ. ಯಾಕೆಂದರೆ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ “ಮಗ ನೋಡಪ್ಪ ನಾನು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದೇನೆ. ಇನ್ನು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಿನ್ನ ಜವಾಬ್ದಾರಿ” ಎಂದು ಹೇಳುವಾಗ ಯಾವ ಪರಿಯ ದುಃಖ ಒತ್ತರಿಸಿಬರುತ್ತದೆಯೋ, ಆರ್ದ್ರ ಭಾವನೆ ಉಕ್ಕಿ ಹರಿಯುತ್ತದೆಯೋ ಅಂತಹ ಭಾವ ಉಂಟಾಗುತ್ತದೆ.

ನಿಜ, ಕೊಟ್ಯಂತರ ದಲಿತರ ಆಯುಷ್ಯದ ಒಂದೊಂದು ಕ್ಷಣವನ್ನು ನೀಡಿ ಅಂಬೇಡ್ಕರರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅದು ಸಾದ್ಯವಿಲ್ಲವಲ್ಲ! ಈ ನಿಟ್ಟಿನಲ್ಲಿ ಉಳಿದಿರುವುದು ಅವರ ಆ ಅಮರ ಸಂದೇಶ ಮಾತ್ರ. ಅಂದಹಾಗೆ ಬಾಬಾಸಾಹೇಬರ ಆ ಸಂದೇಶವನು ಅವರ ಆಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ”Last few years of Dr. Ambedkar” ಕೃತಿಯಲ್ಲಿ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ಬಹುಶಃ ಅಂತಹ ದಾಖಲೆ ಬರೀ ದಲಿತ ಸಮುದಾಯವೊಂದಕ್ಕೆ ಅಲ್ಲ ಈ ಪ್ರಪಂಚದ ಪ್ರತಿಯೊಂದು ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ.

ಇರಲಿ, ಅದು 1956 ಜುಲೈ 31ರ ಮಂಗಳವಾರದ ಒಂದು ದಿನ. ಸಮಯ ಸಂಜೆ 5-30. ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಬಾಬಾಸಾಹೇಬರು ಇದ್ದಕಿದ್ದಂತೆ upset ಆದರು! ಕೆಲಹೊತ್ತು ಏನನ್ನು ಮಾತನಾಡದ ಅಂಬೇಡ್ಕರರ ಈ ವರ್ತನೆ ಕಾರ್ಯದರ್ಶಿ ರತ್ತುವರಿಗೆ ಗಾಭರಿಯುಂಟುಮಾಡಿತು.

ತಕ್ಷಣ ಎಚ್ಚೆತ್ತುಕೊಂಡ ರತ್ತುರವರು ಅಂಬೇಡ್ಕರರ ತಲೆಯನ್ನು ನೇವರಿಸುತ್ತಾ ಕಾಲನ್ನು ಒತ್ತುತ್ತಾ ಅವರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್‍ನ ಮೇಲೆ ಕುಳಿತುಕೊಂಡರು. ಹಾಗೆಯೇ ಭಯದಿಂದ ನಡುಗುತ್ತಾ ಅಂಬೇಡ್ಕರರನ್ನು “ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಖಿಃತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ?” ಎಂದು ಕೇಳಿಯೇ ಬಿಟ್ಟರು!

ರತ್ತುರವರ ಈ ಗಾಭರಿ ಅಂಬೇಡ್ಕರರಿಗೆ ಅರ್ಥವಾಗಿತ್ತು. ಸಾವರಿಸಿಕೊಂಡ ಅವರು ಆ ದಿನ ತಮ್ಮ ಆ ದುಖಃಕ್ಕೆ ಕಾರಣ ಮತ್ತು ಆ ಕಣ್ಣಿರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರರ ಆ ನೋವಿನ ನುಡಿಗಳನ್ನು ಗೌರವದಿಂದ ದಾಖಲಿಸುವುದಾದರೆ “ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ.

ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ.

ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ” ಎನ್ನುತ್ತಾ ಅಂಬೇಡ್ಕರರು ತಮ್ಮ ದುಖಃದ ಮೊದಲ ಪುಟವನ್ನು ಬಿಚ್ಚಿಟ್ಟರು. ಮುಂದುವರಿದು ಅವರು “ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ.

ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ” ಎಂದು ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯದ ಸರ್ಕಾರಿ ನೌಕರರ ಬಗ್ಗೆ ಅಂಬೇಡ್ಕರರು ಅಂದು ಹೇಳಿದರು.

ಮುಂದುವರಿದು ಅವರು”ಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕೆಂದಿದ್ದೇನೆ. ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು!” ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಮುಂದುವರಿದು ಅವರು “ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ. “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” ಮತ್ತು “ಹಿಂದೂ ಧರ್ಮದ ಒಗಟುಗಳು” ಎಂಬ ಆ ನನ್ನ ಮಹೋನ್ನತ ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ. ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ.

ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ” ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ. ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ “ಅಪ್ರತಿಮ ಲೇಖಕನಿಗೆ” ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು. ಆದರೆ?

ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು “ನನ್ನ ನಂತರ, ನನ್ನ ಜೀವಿತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ.

ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ.

ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!” ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು.

ಮುಂದುವರಿದು ಅವರು “ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ” ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ.

ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ. ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ “ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದು ದಿನ ಈ ಜೀವನ ಕೊನೆಗೊಳ್ಳಲೇಬೇಕು!”

“ಜೀವನ…. ಕೊನೆ….” ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೋಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ, “ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ.

ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು.

ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…” ಎನ್ನುತ್ತಾ ಅಂಬೇಡ್ಕರರು ‘ನಿದ್ರೆ’ಗೆ ಹೊರಳುತ್ತಾರೆ.

ಪ್ರಶ್ನೆಯೇನೆಂದರೆ ಬಾಬಾಸಾಹೇಬರ ಈ ಸಂದೇಶ ಈ ದೇಶದ ಶೋಷಿತ ದಲಿತ ಸಮುದಾಯಕ್ಕೆ ಅರ್ಥವಾಗಿದೆಯೇ? ಇತಿಹಾಸದ ಪುಟಗಳು ಅದಕ್ಕೆ ಉತ್ತರ ಹೇಳಬೇಕಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು

Published

on

  • ರುದ್ರಪ್ಪ ಹನಗವಾಡಿ

ನಾನು ಮದುವೆಯಾದ ಮೇಲೆ ನಮ್ಮೂರಿನಲ್ಲಿಯೇ 3-4 ಅಂತರ್ಜಾತಿ ಮದುವೆಗಳಾದವು. ಮೈಸೂರಿನಲ್ಲಿ ನಮ್ಮ ಜೊತೆಗಿದ್ದ ಪ್ರೊ. ಗೊಟ್ಟಿಗೆರೆ ಶಿವರಾಜು ಚನ್ನರಾಯ ಪಟ್ಟಣದಲ್ಲಿ ರಾಜ್ಯಶಾಸ್ತçದ ಅಧ್ಯಾಪಕನಾಗಿದ್ದ. ಅವನ ಸಹೋದ್ಯೋಗಿಗಳಾಗಿದ್ದ ನರಸಿಂಹಾಚಾರ್ ಇಂಗ್ಲಿಷ್ ಅಧ್ಯಾಪಕ ಮತ್ತು ಪ್ರೊ. ಸುಮತಿ ಎನ್. ಗೌಡ ಅಧ್ಯಾಪಕರಾಗಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು.

ಅವರನ್ನು ನೇರ ಬಿಆರ್‌ಪಿಗೆ ಕರೆತಂದು, ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದನು. ನಾನು ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೃಷ್ಣಪ್ಪನವರಿಗೆ ಸುದ್ದಿ ಮುಟ್ಟಿಸಿ, ಮದುವೆಯ ಏರ್ಪಾಡು ಮಾಡಿದೆ. ಹುಡುಗಿ ಒಕ್ಕಲಿಗ ಜಾತಿ, ಹುಡುಗ ಬ್ರಾಹ್ಮಣನಾಗಿದ್ದ. ಸಹೋದ್ಯೋಗಿಗಳ ಪ್ರೀತಿಯ ಮದುವೆ ಮಾಡಿದ ಪ್ರೊ. ಜಿ.ಬಿ. ಶಿವರಾಜು ನಂತರ ದಿನಗಳಲ್ಲಿ ಗೌಡ ಜಾತಿಗೆ ಸೇರಿದ ಸಂಬಂಧಿಕರಿಂದ ಅನೇಕ ರೀತಿಯ ಕಿರುಕುಳಕ್ಕೂ ಒಳಗಾಗಬೇಕಾಯಿತು. ಆದರೆ ಈ ದಂಪತಿಗಳು ಶಿವರಾಜು ಪರ ಇರಬೇಕಾದವರು ನಂತರದ ದಿನಗಳಲ್ಲಿ ಇವರುಗಳಿಂದಲೇ ಕಿರುಕುಳ ಅನುಭವಿಸುವಂತೆ ಆದುದು ವಿಪರ್ಯಾಸವೇ ಸರಿ. ಮಾಡಿದ ಉಪಕಾರ ಸ್ಮರಣೆ ನಮ್ಮ ವ್ಯಕ್ತಿತ್ವದಲ್ಲಿ ಇರದಿದ್ದರೆ, ಮನುಷ್ಯನಿಂದ ಮತ್ತಿನ್ನೇನನ್ನು ಮಾಡಲು ಸಾಧ್ಯ?

ಈ ಸರಣಿಯಲ್ಲಿ ಇಲ್ಲಿಯೇ ಇನ್ನೊಬ್ಬನ ಕಥೆ ಹೇಳಿ ಮುಗಿಸುವೆ. ಬಳ್ಳಾರಿ ಮೂಲದ ಒಬ್ಬ ಡಾಕ್ಟರ್ ಮತ್ತು ಅವರ ಕೈಕೆಳಗೆ ಇದ್ದ ನರ್ಸ್ ಇಬ್ಬರೂ ಪ್ರೀತಿಸಿದ್ದು, ಮದುವೆಯಾಗುವ ತಯಾರಿಯಲ್ಲಿದ್ದರು. ಶಿವಮೊಗ್ಗದ ಕಡೆಯ ಗೆಳೆಯರೊಬ್ಬರ ಮೂಲಕ ನನ್ನಲ್ಲಿಗೆ ಬಂದರು. ಇಬ್ಬರೂ ಮದುವೆಗೆ ಅರ್ಹ ವಯಸ್ಸಿನವರಾಗಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ, ಹುಡುಗಿಗೆ ನನ್ನದೇ ಮನೆ ವಿಳಾಸಕೊಟ್ಟು ಮದುವೆ ಮಾಡಿಸಿ ಕಳಿಸಿಕೊಟ್ಟೆವು. ನಾನಾಗ ಪ್ರೊಬೆಷನರಿ ತಹಸೀಲ್ದಾರ್‌ನಾಗಿ ತರೀಕೆರೆಯಲ್ಲಿದ್ದೆ. ಅಲ್ಲಿನ ಸಬ್ ರಿಜಿಸ್ಟ್ರಾರ್ ಚಳಗೇರಿ ಎನ್ನುವವರ ಜೊತೆ ಮಾತಾಡಿ ರಿಜಿಸ್ಟ್ರೇಷನ್ ಮುಗಿಸಿ ಕಳಿಸಿದೆ.

ಇದೆಲ್ಲ ಆಗಿ ಒಂದು ವಾರದಲ್ಲಿ ಹುಡುಗನ ಕಡೆಯ ನಿವೃತ್ತ ಸೇನಾ ಅಧಿಕಾರಿ ಬಂದು ಗಾಯತ್ರಿಯೊಬ್ಬಳೇ ಮನೆಯಲ್ಲಿದ್ದಾಗ ನನ್ನ ಬಗ್ಗೆ ಆಕ್ಷೇಪಿಸಿ ನಾನು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸಂಬಂಧಿ, ನಿನ್ನ ಗಂಡನ ಕೆಲಸ ಕೂಡ ಕಳೆದುಕೊಳ್ಳುವಂತೆ ಮಾಡುತ್ತೇನೆ’ ಎಂದೆಲ್ಲ ಕೂಗಾಡಿ ಹೋಗಿದ್ದ. ನಾನು ತರೀಕೆರೆಯಿಂದ ಬಂದಾಕ್ಷಣ ಇವಳು ಆತಂಕದಿAದ `ನಾವೇನೋ ಮದುವೆಯಾಗಿದ್ದೇವೆ. ಬೇರೆಯವರ ಮದುವೆ ಮಾಡಲು ಹೋಗಿ ಯಾಕೆ ತೊಂದರೆಗೊಳಗಾಗಬೇಕೆಂದು’ ಅಲವತ್ತುಕೊಂಡಳು.

ನಾನು ಈ ರೀತಿ ಮದುವೆಗಳ ಬಗ್ಗೆ ಖಚಿತ ತಿಳುವಳಿಕೆಯುಳ್ಳವನಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ನಡೆದಿದ್ದ ಶಿವರಾಮ ಕಾರಂತ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೆ. ರಾಮದಾಸ್, ಕೃಷ್ಣಪ್ಪ, ಪ್ರೊ. ಎಂ. ನಂಜುಂಡಸ್ವಾಮಿ, ಪ್ರೊ. ರವಿವರ್ಮಕುಮಾರ್, ಹೀಗೆ ಮದುವೆಯಾದವರ ಬಗ್ಗೆ ಸಾಲು ಸಾಲು ಹೆಸರುಗಳನ್ನು ತಿಳಿಸಿ ಗಾಯತ್ರಿಗೆ ಸಮಾಧಾನ ಮಾಡುತ್ತಿದ್ದೆ.

ನಾವು ಮದುವೆಯಾಗಿ ಆರು ತಿಂಗಳು ಆಗಿರಲಿಲ್ಲ, ನಮ್ಮ ವಿದ್ಯಾರ್ಥಿಯೊಬ್ಬರ ಅಕ್ಕ ಪ್ಲಾರಿ ಬಿಆರ್‌ಪಿ ಹತ್ತಿರವಿರುವ ಜಂಕ್ಷನ್‌ನಿಂದ ಭದ್ರಾವತಿಗೆ ಸ್ಟೆಫೆಂಡಿಯರಿ ಗ್ರಾಜ್ಯುಯೇಟ್ ಸ್ಕೀಂನಲ್ಲಿ ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗ ಸಿದ್ದಯ್ಯ ಭದ್ರಾವತಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಬಿಆರ್‌ಪಿ ಹತ್ತಿರದ ಶಾಂತಿನಗರದಿಂದ ದಿನವೂ ಬಸ್‌ನಲ್ಲಿ ಓಡಾಡುತ್ತಿರುವಾಗ ಪರಿಚಯವಾಗಿ ಪ್ರೀತಿಯ ಸೆಳೆತದಲ್ಲಿದ್ದರು. ಒಂದು ದಿನ ಬೆಳಗಿನ ಜಾವ ಹುಡುಗನ ಅಣ್ಣ ಬಂದು ಅವರಿಬ್ಬರ ಪ್ರೀತಿಗೆ ತಮ್ಮ ಒಪ್ಪಿಗೆ ಇದ್ದು ಹುಡುಗಿ ಕಡೆಯವರು ಒಪ್ಪುವುದಿಲ್ಲ, ಮದುವೆ ಮಾಡಿಸಬೇಕಾಗಿ ಕೋರಿದ.

ಹುಡುಗಿಯ ತಮ್ಮ ನನ್ನ ವಿಭಾಗದಲ್ಲಿಯೇ ನೇರ ವಿದ್ಯಾರ್ಥಿಯಾಗಿದ್ದ. ಈಗಾಗಲೇ ನಮ್ಮ ವಿಭಾಗದಲ್ಲಿ ಇವರು ಬರೀ ಇಂತದೇ ಕೆಲಸ ಮಾಡುತ್ತಿರುತ್ತಾನೆಂದು ಅಪಪ್ರಚಾರ ಬೇರೆ ಮಾಡುತ್ತಿದ್ದರು. ಆದರೂ ಎಲ್ಲ ಸೇರಿಕೊಂಡು ಇಂದಿರಾ ಕೃಷ್ಣಪ್ಪನವರಿಗೆ ತಿಳಿಸಿ ಭದ್ರಾವತಿಯಲ್ಲಿ ಮದುವೆ ನಡೆಸಲಾಯಿತು. ಮದುವೆಯಾದ ನಂತರ ಹೆಣ್ಣಿನ ಕಡೆಯವರು ನನ್ನನ್ನು ಹೊಡೆಯಲು ಜಂಕ್ಷನ್ ಎಂಬಲ್ಲಿ ಕಾಯುತ್ತಿದ್ದಾರೆ, ಇಲ್ಲಿ ಕಾಯುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿದ್ದರು. ಆದರೆ ದಿನಗಳೆದಂತೆ ಹುಡುಗ-ಹುಡುಗಿಯ ಮದುವೆಯನ್ನು ಈರ್ವರ ಕಡೆಯವರು ಒಪ್ಪಿ ನಂತರ ನಮ್ಮ ಕಡೆಗೆ ದೂರುವುದನ್ನು ನಿಲ್ಲಿಸಿದರು. ಈಗ ಇಬ್ಬರೂ ತಮ್ಮ ವೃತ್ತಿಯಲ್ಲಿ ಮುಂದುವರಿದು ಮಕ್ಕಳೊಂದಿಗೆ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.

ಹೀಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಕೃಷ್ಣಪ್ಪನವರು ಪ್ರಾರಂಭಿಸಿದ ಒಲವಿನ ಸರಳ ಮದುವೆಗಳು ಸಾಲು ಸಾಲಾಗಿ ನಡೆಯುತ್ತಾ, ಡಿ.ಎಸ್.ಎಸ್. ಮತ್ತು ರೈತ ಸಂಘದ ಅನೇಕ ಕಾರ್ಯಕರ್ತರು ತಮ್ಮ ಕಾರ್ಯಸೂಚಿಯಲ್ಲಿ ಕಾರ್ಯಗತ ಮಾಡಬೇಕಾದ ಜವಾಬ್ದಾರಿ ಎಂಬಂತೆ ಸರಳ ಅಂತರ್‌ಜಾತಿ ಮದುವೆಗಳನ್ನು ನಡೆಸುವಂತಾಯಿತು. ಅದು ಇಂದಿಗೂ ಕರ್ನಾಟಕದಲ್ಲಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ನಮ್ಮ ಬಿಆರ್‌ಪಿ ಸ್ನಾತಕೋತ್ತರ ಕೇಂದ್ರ

Published

on

  • ರುದ್ರಪ್ಪ ಹನಗವಾಡಿ

ದಟ್ಟ ಮಲೆನಾಡಲ್ಲದಿದ್ದರೂ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದು ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಶಾಖೆಗಳಾಗಲೀ, ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವ ಯಾವ ತಯಾರಿಯೂ ಕಾಣುತ್ತಿರಲಿಲ್ಲ.

ಪ್ರಾರಂಭದಿಂದ ಇದ್ದ, ನಾಲ್ಕು ವಿಭಾಗಗಳು ಮತ್ತು 15-16ಜನ ಅಧ್ಯಾಪಕರುಗಳಾಗಿದ್ದನ್ನು ಬಿಟ್ಟರೆ ವಿಕಾಸದ ಯಾವ ಲಕ್ಷಣಗಳೂ ಇರಲಿಲ್ಲ. ನಾನು ಬಂದು ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆ ಮತ್ತು ನಮಗೆ ಮಗುವಾದುದ್ದನ್ನು ಬಿಟ್ಟರೆ ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಯಲ್ಲಿ ಮತ್ತೇನೂ ಬೆಳವಣಿಗೆಗಳು ನಡೆಯಲಿಲ್ಲ.

ಸ್ವಂತ ವಿಷಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದಿದ್ದೆ. ಮದುವೆಯಾಗುವ ಯಾವ ಪೂರ್ವಭಾವಿ ತಯಾರಿ ಇಲ್ಲದೆ ತಕ್ಷಣ ಆಗಬೇಕಾದ ಕಾರಣ ಸುಮಾರು 15 ಸಾವಿರದಷ್ಟು ವಿಶ್ವಾಸಿಕ ಸ್ನೇಹಿತರಿಂದ ಸಾಲ ಮಾಡಿದ್ದೆ. ಹೊಸ ಸಂಸಾರ ಹೂಡಿಕೆಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇದ್ದರೂ ಸದ್ಯ ಪಿಡಬ್ಲೂಡಿ ಕ್ವಾಟ್ರಸ್ ಒಂದನ್ನು ಅಲಾಟ್‌ಮೆಂಟ್ ಮಾಡಿಸಿಕೊಂಡಿದ್ದೆ. ಹಾಗಾಗಿ ಮದುವೆಯಾದಾಕ್ಷಣ ಉಳಿದುಕೊಳ್ಳಲು ಅದು ಅನುಕೂಲವಾಗಿತ್ತು. ಪ್ರಭು ಮತ್ತು ರೈತಸಂಘದ ಮಂಜಪ್ಪ, ಸ್ಟೀಲ್ ಅಂಗಡಿ ಶಾಂತು ಎಲ್ಲ ಶಿವಮೊಗ್ಗದಲ್ಲಿ ಪ್ರಭುವಿನ ಸ್ನೇಹಿತರಾಗಿದ್ದರು. ಬೇಕಾದ ಕನಿಷ್ಠ ಪಾತ್ರೆಗಳನ್ನು ಅವನ ಸ್ನೇಹಿತನಿಂದಲೇ ಸಾಲವಾಗಿ ತಂದಿದ್ದೆ. ಉಳಿದಂತೆ ಅವಶ್ಯ ಬಿದ್ದಾಗ ನನ್ನ ಸ್ನೇಹಿತರಾಗಿದ್ದ ಪ್ರಭು, ಜಿಎನ್‌ಕೆ ಜೊತೆ ಸಾಲ ಮಾಡಿ ತೀರಿಸೋ ವ್ಯವಸ್ಥೆಯಲ್ಲಿ ದಿನಗಳು ಕಳೆಯುತ್ತಿದ್ದವು.

ಆರ್ಥಿಕ ಸಂಕಷ್ಟ ಬಿಟ್ಟರೆ ನಮ್ಮಿಬ್ಬರ ಹೊಂದಾಣಿಕೆ ಅನನ್ಯವಾಗಿತ್ತು. ಬೇಂದ್ರೆಯವರ ಕವನದ ಸಾಲಿನಂತೆ
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂಬಂತೆ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆವು.

ರಜಾ ದಿನಗಳಲ್ಲಿ ಬಿಆರ್‌ಪಿಯಲ್ಲಿ ಇದ್ದ ಟೆಂಟ್ ಸಿನಿಮಾಕ್ಕೆ ಇಲ್ಲವೇ ಶಿವಮೊಗ್ಗಕ್ಕೆ ರಾಜಕುಮಾರ್ ಅವರ ಹೊಸ ಸಿನಿಮಾಗಳಿಗೆ ಹೋಗಿ ಬರುತ್ತಿದ್ದೆವು. ಇಂದಿರಾ ಕೃಷ್ಣಪ್ಪನವರ ಭದ್ರಾವತಿ ಮನೆಗೆ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮದುವೆಯಾದಾಕ್ಷಣ ಎಲ್ಲೂ ‘ಹನಿಮೂನ್’ಗೆಂದು ತಿರುಗಾಡಲು ಹೋಗಲಿಲ್ಲ. ಇದ್ದ ಸ್ನೇಹಿತರ ಮನೆ ಕಡೆಗೆ ಹೋಗಿ ಕಾಲ ಕಳೆದು ಬರುತ್ತಿದ್ದೆವು. ಕುಮ್ಮೂರ ಬಸವಣ್ಯಪ್ಪ, ಉಮಾ ಚಿತ್ರದುರ್ಗದಲ್ಲಿ ಇಬ್ಬರೂ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಮನೆಯಲ್ಲಿ ಉಳಿದು ಚಿತ್ರದುರ್ಗದ ಕೋಟೆಯನ್ನು ಇಬ್ಬರೇ ಸುತ್ತಿಕೊಂಡು ಬಂದು ಮಾರನೆ ದಿನ ಚಳ್ಳಕೆರೆಗೆ ಹೋಗಿದ್ದೆವು.

ಚಳ್ಳಕೆರೆಯಲ್ಲಿ ಗಾಯತ್ರಿಯ ಸೀನಿಯರ್ ಮತ್ತು ನನ್ನ ಹಳೇ ವಿದ್ಯಾರ್ಥಿನಿ ಶಾರದಾ, ಡಾ. ಚಂದ್ರಶೇಖರ್ ಎಂಬ ಅವರ ಸೋದರ ಮಾವನನ್ನು ಮದುವೆಯಾಗಿ ಅಲ್ಲಿನ ಪಿಹೆಚ್‌ಸಿಯಲ್ಲಿ ಡಾಕ್ಟರ್ ಆಗಿ ಕೆಲಸದಲ್ಲಿದ್ದರು. ನಾವಿದ್ದ ಎರಡೂ ದಿನಗಳಲ್ಲ್ಲಿ ಅಕ್ಕರೆಯಿಂದ ವಿಶೇಷ ಅಡುಗೆ ಮಾಡಿ ತುಂಬ ವಾತ್ಸಲ್ಯದಿಂದ ನಮ್ಮನ್ನು ಸತ್ಕರಿಸಿದ್ದಳು. ಅವರಿಬ್ಬರ ಅಕ್ಕರೆಯ ಆತಿಥ್ಯ ನಾವಿಬ್ಬರೂ ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಆ ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಶಾರದ ಎಲ್ಲಿದ್ದಾರೆ ಎಂಬುದು ತಿಳಿಯದೆ 40 ವರ್ಷಗಳೇ ಕಳೆದು ಹೋಗಿದ್ದವು.

ಈಗ್ಗೆ ಎರಡು ವರ್ಷಗಳಲ್ಲಿ ಯರ‍್ಯಾರನ್ನೋ ಕೇಳಿ, ಅವರ ವಿಳಾಸ ಪಡೆದು ನಾವಿಬ್ಬರು ನೆನಪು ಮಾಡಿ ಮಾತಾಡಿದೆವು. ಮನೆಗೆ ಆಹ್ವಾನಿಸಿದ ಮೇರೆಗೆ ಇತ್ತೀಚೆಗಷ್ಟೆ ಬಂದು ಹೋಗಿದ್ದಳು. ಹೀಗೆ ಬಂದು ಹೋಗಿ 3 ತಿಂಗಳಲ್ಲಿ ಹೃದಯಾಘಾತದಿಂದ ಶಾರದಾ ತೀರಿಕೊಂಡಳು. ಇಷ್ಟು ದೀರ್ಘ ಕಾಲದ ಅಜ್ಞಾತವಾಸದ ಕಾರಣ ತಿಳಿದು ಬೇಸರವಾಗಿತ್ತು. ಶಾರದಾ-ಚಂದ್ರಶೇಖರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಅಕಾಲಿಕ ಮರಣ ಹೊಂದಿದ್ದಳು.

ಇನ್ನೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗಂಡ ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಒಂದು ಎಮ್ಮೆ ಸಾಕಿಕೊಂಡು ಮೇಯಿಸುತ್ತಾ ಗಂಡ ಮಕ್ಕಳಿಗೆ ಹಾಲು, ಮಜ್ಜಿಗೆ ಮಾಡಿ ಉಣಿಸುತ್ತಿದ್ದ ಶಾರದಾ ಅವರಿಗೆ ಬದುಕಿನಲ್ಲಿ ನೆಮ್ಮದಿಗಿಂತ ನೋವೇ ಜಾಸ್ತಿಯಾಗಿದ್ದೊಂದು ವಿಷಾದದ ಸಂಗತಿ. ಒಳ್ಳೆಯ ಮನಸ್ಸುಗಳಿಗೆ ನೋವುಗಳೇ ಹೆಚ್ಚೆಂಬುದು ಅವಳ ವಿಚಾರದಲ್ಲಿ ನಿಜವಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

Trending