ದಿನದ ಸುದ್ದಿ
ಕಾರಂತರು ಸಾಯಲಿ ಎಂದು ಬಯಸಿದ್ದ ಅಮಿನ್ ಮಟ್ಟು ಕೊಟ್ಟ ಸಮರ್ಥನೆ ಏನು ಗೊತ್ತಾ?

ಸುದ್ದಿದಿನ ಡೆಸ್ಕ್: ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದಲ್ಲಿ ಆರೆಸ್ಸೆಸ್ ಅನ್ನು ಸಮರ್ಥಿಸಿಕೊಂಡಾಗ ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಸಾಯಲಿ ಎಂದು ಬಯಸಿದ್ದೆ ಎಂಬುದಾಗಿ ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ವಾದವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾರಂತರ ಕುರಿತು ತಮಗಿರುವ ಪ್ರೀತಿ, ಹಾಗೂ ಮನಸ್ಸಿನಲ್ಲಿದ್ದ ಅವರ ಬಿಂಬ ಒಡೆದುಹೋದಾಗ ಆದ ನೋವು ಎಲ್ಲವನ್ನೂ ಈ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅವರು ಬರೆದಿರುವ ಫೇಸ್ ಬುಕ್ ಪೋಸ್ಟ್ ಗೆ ಮೆಚ್ಚುಗೆಯ ಕಮೆಂಟ್ ಗಳು ವ್ಯಕ್ತವಾಗುತ್ತಿವೆ. ಆ ಪೋಸ್ಟ್ ಹೀಗಿದೆ.
ಶಿವರಾಮ ಕಾರಂತರು ನನ್ನ ಮೊದಲ ವೈಚಾರಿಕ ಗುರು. ನಾನು ಎನ್.ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳಿಂದ ನೇರವಾಗಿ ಕಾರಂತರ ಕಾದಂಬರಿಗಳಿಗೆ ಗ್ರಾಜುವೇಟ್ ಆದವನು. ಸಾಹಿತ್ಯದ ವಿದ್ಯಾರ್ಥಿಯಲ್ಲದ ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವರ ಅಲ್ಲಿಯವರೆಗಿನ ಎಲ್ಲ ಕೃತಿಗಳನ್ನು ಓದಿಮುಗಿಸಿದವನು. ನನ್ನೊಳಗಿನ ವೈಚಾರಿಕ ಸ್ಪಷ್ಟತೆಗೆ ಮೊದಲು ಕಾರಣರಾದವರು ಕಾರಂತರು. ಅಂಬೇಡ್ಕರ್, ಲೋಹಿಯಾ, ಗಾಂಧೀಜಿ, ಕುವೆಂಪು, ಲಂಕೇಶ್ ನನಗೆ ಸಿಕ್ಕಿದ್ದು ನಂತರದ ದಿನಗಳಲ್ಲಿ. ಆದರೆ ಇವರನ್ನು ಓದಲು ಪ್ರೇರಣೆ ನೀಡಿದವರು ಕಾರಂತರು.
ಕಾರಂತರು ಘೋಷಿಸಿಕೊಳ್ಳದೆ ಇದ್ದರೂ ಅವರ ಕೃತಿಗಳಲ್ಲಿ ವೈಚಾರಿಕತೆಯ ಒಂದು ಒಳ ಹರಿವು ಇರುತ್ತಿತ್ತು. ಅದನ್ನು ಅವರು ಒಂದು Statement ರೀತಿ ಹೇಳದೆಯೇ ನಮ್ಮೊಳಗೆ ವೈಚಾರಿಕತೆಯನ್ನು ಬಿತ್ತುತ್ತಾ ಹೋದವರು. ಈ ಮೂಲಕವೇ ನನ್ನಂತಹವರಿಗೆ ಓದಿನ ಪಯಣದ ದಾರಿಯನ್ನು ತಿಳಿಸಿಕೊಟ್ಟವರು.
ಇದನ್ನು ಹಿಂದೊಮ್ಮೆ ಬರೆದಿದ್ದೆ, ನಾನು ಓದಲು ತರುತ್ತಿದ್ದ ಕಾದಂಬರಿಗಳನ್ನು ಓದತೊಡಗಿದ್ದ ನಿವೃತ್ತ ಜೀವನ ಕಳೆಯುತ್ತಿದ್ದ ನನ್ನ ತಂದೆ, ಕೊನೆಯ ದಿನಗಳಲ್ಲಿ ದೇವರು-ಧರ್ಮದ ಬಗ್ಗೆ ನನ್ನಂತೆಯೇ ಮಾತನಾಡತೊಡಗಿದ್ದರು.
ಕಾರಂತರು ನನ್ನೊಳಗೆ ವೈಚಾರಿಕತೆಯ ಕಿಡಿ ಹಚ್ಚಿದ್ದರೆ, ತಾನೇ ಬದಲಾಗುವ ಮೂಲಕ ನನ್ನ ನಿಲುವು ಸರಿ ಎಂದು endorse ಮಾಡಿದವರು ನನ್ನ ತಂದೆ.
ಆದ್ದರಿಂದ ಕಾರಂತರ ಬಗ್ಗೆ ಯಾರಾದರೂ ಬೈದರೆ ನನ್ನ ತಂದೆಗೆ ಬೈದಷ್ಟೇ ಕೋಪ ಬರ್ತಿತ್ತು. ‘ಬಾಳ್ವೆಯ ಬೆಳಕು’ ಬಗ್ಗೆ ಸ್ನೇಹಿತರ ಜತೆ _ಹಲವುಸುತ್ತಿನ ಜಗಳವಾಡಿದ್ದೆ.
ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನೊಳಗೆ ಅಚ್ಚೊತ್ತಿದ್ದ ಎರಡು ಬಿಂಬಗಳು, ಕಾರಂತರದ್ದು ಮತ್ತು ನನ್ನ ತಂದೆಯದ್ದು. ನನ್ನೊಳಗಿನ ಆ ಎರಡು ಬಿಂಬಗಳನ್ನು ನಾನು ಪ್ರೀತಿಸುತ್ತಾ ಬಂದವನು. ಆ ಬಿಂಬಗಳು ಛಿದ್ರಗೊಳ್ಳುವುದನ್ನು ನನಗೆ ಸಹಿಸಲಾಗುತ್ತಿರಲಿಲ್ಲ.
ಕಾರಂತರು ಮೊದಲಿನಿಂದಲೂ ಕಮ್ಯುನಿಷ್ಟರ ಟೀಕಾಕಾರರಾಗಿದ್ದರು. ಈ ವಿಷಯದಲ್ಲಿ ಅವರ ಕೆಲವು ಭಿನ್ನಾಭಿಪ್ರಾಯಗಳು ನನ್ನದೂ ಆಗಿದ್ದವು.
ಆದರೆ…
ಬಾಬರಿ ಮಸೀದಿ ಧ್ವಂಸದ ಘಟನೆಯನ್ನು ಅವರು ಬೆಂಬಲಿಸತೊಡಗಿದಾಗ ನನ್ನೊಳಗಿನ ಕಾರಂತರ ಬಿಂಬ ಅಲುಗಾಡತೊಡಗಿತ್ತು.
ಈದ್ಗಾ ಮೈದಾನದ ವಿವಾದದ ಸಂದರ್ಭದಲ್ಲಿ ಕಾರಂತರು ಧಾರವಾಡಕ್ಕೆ ಬಂದಿದ್ದರು. ಅವರನ್ನು ಧಾರವಾಡ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್‌ನಲ್ಲಿ ನಾನು ಸಂದರ್ಶನ ಮಾಡಿದ್ದೆ. ಆಗ ಅವರು ಈದ್ಗಾ ಮೈದಾನ ವಿವಾದದ ಹಿಂದಿನ ಕೋಮುವಾದಿ ಅಜೆಂಂಡಾದ ಅರಿವಿಲ್ಲದಂತೆ ಸಂಘ ಪರಿವಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದು ಕೇಳಿ ಆಘಾತಕ್ಕೀಡಾಗಿದ್ದೆ. ನನ್ನೊಳಗೆ ಕಟ್ಟಿಕೊಂಡಿದ್ದ ಕಾರಂತರ ಬಿಂಬ ಛಿದ್ರಗೊಳ್ಳುತ್ತಿತ್ತು. ನನ್ನ ಕೈ ಹಿಡಿದು ಮುನ್ನಡೆಸುತ್ತಾ ಬಂದಿದ್ದ ವೈಚಾರಿಕ ಕಾರಂತರು ಇಲ್ಲವಾದರಲ್ಲಾ ಎಂಬ ನೋವು ನನ್ನನ್ನು ತಿನ್ನತೊಡಗಿತ್ತು. ವೈಚಾರಿಕ ಕಾರಂತರು ಶಾಶ್ವತವಾಗಿ ಉಳಿಯಬೇಕಾದರೆ, ಕೋಮುವಾದದ ಸಮರ್ಥಕ ಕಾರಂತರು ಅಳಿಯಬೇಕು ಎಂದು ಒಂದು ಕ್ಷಣ ನನಗನಿಸಿದ್ದು ನಿಜ. ಈ ಅಳಿವು-ಉಳಿವು ದೈಹಿಕವಾದುದಲ್ಲ, ಅದು ಬರವಣಿಗೆಯ ಅಳಿವು-ಉಳಿವಿಗೆ ಸಂಬಂಧಿಸಿದ್ದು.
ಆದರೆ ಕಾರಂತರು ನನ್ನೊಳಗಿನ ಅವರ ಬಿಂಬವನ್ನು ಶಾಶ್ವತವಾಗಿ ಛಿದ್ರಗೊಳ್ಳಲು ಬಿಡಲಿಲ್ಲ. ಯಾಕೆಂದರೆ ಅವರು ತಾನು ಬರೆದುದನ್ನೇ disown ಮಾಡುವಂತೆ ಬರೆಯಲಿಲ್ಲ. ಸಾಹಿತಿ ತನ್ನ ಕೃತಿಗಳ ಮೂಲಕ ಬದುಕುತ್ತಾನೆ. ಲೇಖಕ ಕಾಲವಾದ ನಂತರವೂ ಬರವಣಿಗೆ ಉಳಿಯುತ್ತದೆ, ಅದಕ್ಕೆ ಸಾವಿರುವುದಿಲ್ಲ.
ಶಿವರಾಮ ಕಾರಂತರು ಈಗ ಬದುಕಬೇಕಿತ್ತು. ೧೯೭೫ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪದ್ಮ ಭೂಷಣ ಪ್ರಶಸ್ತಿಯನ್ನು ವಾಪಸು ಮಾಡಿದವರು ಕಾರಂತರು. ಅವರು ಬದುಕಿದ್ದರೆ ಈಗಿನ ಅಘೋಷಿತ ತುರ್ತು ಪರಿಸ್ಥಿತಿ ವಿರುದ್ದ ಅವರೇ ಮೊದಲು ದನಿ ಎತ್ತುತ್ತಿದ್ದರೇನೋ?

ದಿನದ ಸುದ್ದಿ
ಗೃಹಲಕ್ಷ್ಮಿ ಯೋಜನೆಗೆ 1 ಕೋಟಿಗೂ ಹೆಚ್ಚು ಅರ್ಜಿಗಳ ನಿರೀಕ್ಷೆ : ಸಚಿವ ಕೃಷ್ಣ ಬೈರೇಗೌಡ

ಸುದ್ದಿದಿನ, ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯಡಿ 1 ಕೋಟಿ 30 ಲಕ್ಷ ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ 898 ನಾಡಕಚೇರಿಗಳೂ ಸೇರಿದಂತೆ ಬಾಪೂಜಿ ಸೇವಾಕೇಂದ್ರ, ಗ್ರಾಮ-2, ಬೆಂಗಳೂರು-1ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಹಾಗೂ ಇದೇ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಆಪ್ ಮೂಲಕವೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದೆಂದು ಸಚಿವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಕರಡು ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಅರ್ಜಿ ಇನ್ನೂ ಅಂತಿಮವಾಗಿಲ್ಲ. ಅದರಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು, ಅಂತಿಮ ಅರ್ಜಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶಿಷ್ಯವೇತನಕ್ಕೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ 15 ಕೊನೆಯದಿನವಾಗಿರುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕುಗಳ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ www.sw.kar.nic.in ಅಥವಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸಲು ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹಜ್ಯೋತಿ ಆಗಸ್ಟ್ 1 ರಂದು ಜಾರಿಗೆ ಸಿದ್ಧತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ’ಗೃಹಜ್ಯೋತಿ’ ಯೋಜನೆ ಆಗಸ್ಟ್ 1 ರಂದು ಹಾಗೂ ಮನೆ ಯಜಮಾನಿಗೆ 2ಸಾವಿರ ರೂಪಾಯಿ ಅವರ ಖಾತೆಗೆ ಹಾಕುವ ’ಗೃಹ ಲಕ್ಷ್ಮಿ’ ಯೋಜನೆಗೆ ಆಗಸ್ಟ್ 17 ಅಥವಾ 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಗೃಹ ಜ್ಯೋತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅತ್ಯಂತ ಸರಳಗೊಳಿಸಬೇಕು. ಅನಗತ್ಯ ಮಾಹಿತಿ, ದಾಖಲೆಗಳನ್ನು ಕೇಳಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ, ಅದು ಸಕಾರಣವಾಗಿರಬೇಕು ಎಂದು ಅವರು ಹೇಳಿದರು. ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಕಾರಣ, ಅಪಾರ ಪ್ರಮಾಣದ ದತ್ತಾಂಶ ಸಲ್ಲಿಕೆಗೆ ಅನುಗುಣವಾಗಿ ಸೇವಾ ಸಿಂಧು ಪೋರ್ಟಲ್ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗೃಹಜ್ಯೋತಿ, ಉಚಿತ ವಿದ್ಯುತ್ ಯೋಜನೆ ಬಾಡಿಗೆದಾರರಿಗೂ ಅನ್ವಯಿಸುತ್ತಿದ್ದು, ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಗೃಹಲಕ್ಷ್ಮಿಯ ಯೋಜನೆಯ ಲಾಭ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತೆರಿಗೆ ಪಾವತಿಸುವವರು ಹಾಗೂ ಜಿಎಸ್ಟಿ ನೋಂದಣಿ ಮಾಡಿಕೊಂಡಿರುವವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್5 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ6 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ7 days ago
ಡಿ.ಇ.ಎಲ್.ಇ.ಡಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ5 days ago
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ
-
ದಿನದ ಸುದ್ದಿ5 days ago
ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ
-
ದಿನದ ಸುದ್ದಿ4 days ago
ಗೋ ಹತ್ಯೆ ನಿಷೇಧ ಕಾಯ್ದೆ ; ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ : ಸಿಎಂ ಸಿದ್ದರಾಮಯ್ಯ