ನೆಲದನಿ
ಕೇರಳವೆಂಬ ಹುಚ್ಚಾಸ್ಪತ್ರೆಯಲ್ಲಿ ವಿವೇಕ ಬಿತ್ತಿದ ಗುರು
- ದಿನೇಶ್ ಅಮಿನ್ ಮಟ್ಟು
ಕರ್ನಾಟಕದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಕೋಮುವಾದಿಗಳ ವಿರುದ್ದದ ಜಾತ್ಯತೀತರ ಗೆಲುವು ಎಂದು ವ್ಯಾಖ್ಯಾನಿಸುವವರಿದ್ದಾರೆ. ಇಲ್ಲ ಇದು ಒಂದು ಪಕ್ಷ ಸೋತು ಇನ್ನೊಂದು ಪಕ್ಷ ಗೆದ್ದ ಸಾಮಾನ್ಯ ರಾಜಕೀಯ ಬದಲಾವಣೆ ಎಂದು ಸರಳೀಕರಿಸುವವರೂ ಇದ್ದಾರೆ. ವಾಸ್ತವ ಎಲ್ಲೋ ಈ ಎರಡು ಅಭಿಪ್ರಾಯಗಳ ಮಧ್ಯೆ ಇದ್ದ ಹಾಗಿದೆ. ಇಂತಹ ಭಿನ್ನ ಅಭಿಪ್ರಾಯಗಳೇನಿದ್ದರೂ ಈ ಚುನಾವಣೆಯಲ್ಲಿ ನೆಲಕಚ್ಚಿದ ಕೋಮುವಾದಿ ರಾಜಕಾರಣ ಮತ್ತೆ ಜೀವಪಡೆಯದಂತೆ ನೋಡಿಕೊಳ್ಳುವ ಹೊಣೆ ರಾಜ್ಯದ ಎಲ್ಲ ಪ್ರಜ್ಞಾವಂತರ ಮೇಲಿದೆ.
‘ಕೋಮುವಾದ’ ದ ರಾಜಕಾರಣವನ್ನು ಎದುರಿಸುವ ಸರಿಯಾದ ಮತ್ತು ಯಶಸ್ವಿ ಅಸ್ತ್ರ ಎಂದರೆ ‘’ಸಾಮಾಜಿಕ ನ್ಯಾಯ’’ದ ರಾಜಕಾರಣ. ಈ ಮೂಲಕ ಕೋಮುವಾದ ರಾಜಕಾರಣ ಮಾಡುತ್ತಾ ಬಂದವರೂ ಅನಿವಾರ್ಯವಾಗಿ ‘ಸಾಮಾಜಿಕ ನ್ಯಾಯ’ದ ರಾಜಕೀಯದ ಆಟದ ನಿಯಮಗಳನ್ನೇ ಪಾಲಿಸುವಂತೆ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಬೇಕಾಗಿದೆ.
‘ಸಾಮಾಜಿಕ ನ್ಯಾಯ’ದ ರಾಜಕಾರಣಕ್ಕೆ ದಾರಿತೋರಿಸಬಲ್ಲ ಅನೇಕ ಯಶಸ್ವಿ ಚಿಂತನೆಗಳ ಮಾದರಿಗಳು ನಮ್ಮ ಮುಂದಿವೆ. ಇವರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ರಾಮಮನೋಹರ ಲೋಹಿಯಾ ಚಿಂತನೆಯ ಮಾದರಿಗಳ ಬಗ್ಗೆ ವಿಸ್ತೃತವಾದ ಚರ್ಚೆ ಕರ್ನಾಟಕದಲ್ಲಿ ನಡೆದಿವೆ. ರಾಜ್ಯದಲ್ಲಿ ಹೆಚ್ಚುಚರ್ಚೆಗೊಳಗಾಗದ ಇನ್ನೊಂದು ಮಾದರಿ ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳ ಚಿಂತನೆಯದ್ದು. ನಾವಿಂದು ಕಾಣುತ್ತಿರುವ ಪುರೋಗಾಮಿ ಮತ್ತು ಪ್ರಗತಿಗಾಮಿ ಕೇರಳದ ರೂವಾರಿ ನಾರಾಯಣ ಗುರುಗಳು. ಅವರ ಪ್ರವೇಶಕ್ಕೆ ಮುನ್ನ ಹಿಂದೂ ಸಮಾಜದ ಸುಧಾರಣೆಯ ಪ್ರಯತ್ನದಲ್ಲಿದ್ದ ಸ್ವಾಮಿ ವಿವೇಕಾನಂದರೇ ಕೇರಳ ರಾಜ್ಯ ಒಂದು ಹುಚ್ಚಾಸ್ಪತ್ರೆ’ ಎಂದು ಕೈಚೆಲ್ಲಿ ಹೋಗಿದ್ದರು.
ಜಾತಿವ್ಯವಸ್ಥೆ ಆ ರೀತಿಯ ಭೀಕರ ಮನೋರೋಗಿಗಳನ್ನು ಅಲ್ಲಿ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಅದರ ಎದುರಿನ ರಸ್ತೆಯಲ್ಲಿ ಕೂಡಾ ಅಸ್ಪøಶ್ಯರು ನಡೆದಾಡುವಂತಿರಲಿಲ್ಲ. ಮಹಾತ್ಮ ಗಾಂಧೀಜಿ ಮತ್ತು ನಾರಾಯಣ ಗುರುಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹ ನಡೆದದ್ದು ದೇವಸ್ಥಾನ ಪ್ರವೇಶಕ್ಕಾಗಿ ಅಲ್ಲ, ಅದರ ಮುಂಭಾಗದ ರಸ್ತೆಯಲ್ಲಿ ನಡೆದಾಡುವ ಸ್ವಾತಂತ್ರ್ಯಕ್ಕಾಗಿ ಎಂಬುದು ಗಮನಾರ್ಹ. ಒಂದೆಡೆ ಮೂಡನಂಬಿಕೆ,ಕಂದಾಚಾರಗಳು, ಇನ್ನೊಂದೆಡೆ ಮೇಲ್ವರ್ಗದವರ ದೌರ್ಜನ್ಯದಿಂದ ಅಲ್ಲಿ ಬಹುಸಂಖ್ಯೆಯಲ್ಲಿರುವ ತಳಸಮುದಾಯ ನಲುಗಿಹೋಗಿತ್ತು.
ಆದರೆ, ಇದೇ ಕೇರಳ ಇಂದು ದೇಶದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಪ್ರಗತಿಪರ ಚಿಂತಕರಿರುವ ರಾಜ್ಯ. ಪ್ರಜಾಸತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಹಾಗೂ ಜಗತ್ತಿನ ಎರಡನೇ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದದ್ದು ಕೇರಳದಲ್ಲಿ. ದೇಶ ವಿಭಜನೆ ಕಾಲದಲ್ಲಿ ಉತ್ತರ ಭಾರತ ಕೋಮುದಳ್ಳುರಿಯಲ್ಲಿ ಹತ್ತಿ ಉರಿಯುತ್ತಿದ್ದಾಗ ಶೇ.18ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಕೇರಳ ಶಾಂತವಾಗಿತ್ತು. ಅಡ್ವಾನಿಯವರ ರಥಯಾತ್ರೆಯ ನಂತರ ದೇಶಾದ್ಯಂತ ಕೋಮುಗಲಭೆ ಭುಗಿಲೆದ್ದಾಗಲೂ ಅಲ್ಲಿ ಯಾವ ಅಹಿತಕರ ಘಟನೆಗಳು ನಡೆಯಲಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಪ್ರಯಾಸಪಟ್ಟು, ಪ್ರವೇಶ ಪಡೆದ ಬಿಜೆಪಿಯನ್ನು ಈಗಲೂ ಹೊಸಲಿನಾಚೆ ನಿಲ್ಲಿಸಿರುವ ರಾಜ್ಯ ಕೇರಳ.
ಕೇವಲ ನೂರು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ನಡೆದ ಈ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಕಾರಣಗಳನ್ನು ಶೋಧಿಸುತ್ತಾ ಹೋದರೆ ನಮ್ಮೆದುರು ನಿಧಾನವಾಗಿ ನಾರಾಯಣ ಗುರು ಎಂಬ ಸಂತ ನಡೆಸಿದ್ದ ಧಾರ್ಮಿಕ ಚಳುವಳಿ ತೆರೆದುಕೊಳ್ಳುತ್ತದೆ. ನಾರಾಯಣ ಗುರುಗಳು ಹುಟ್ಟಿ ಸರಿಯಾಗಿ ನೂರು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯುನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂತೆಂಬುದು ಉಲ್ಲೇಖನೀಯ. ನಾರಾಯಣ ಗುರುಗಳು ಪ್ರಾರಂಭಿಸಿದ ಧಾರ್ಮಿಕ ಸುಧಾರಣಾ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಅವರ ಕಾರ್ಯತಂತ್ರ ಉಳಿದ ಸಮಾಜ ಸುಧಾರಕರಿಗಿಂತ ಯಾಕೆ ಭಿನ್ನವಾಗಿತ್ತು ಎಂಬ ಪ್ರಶ್ನೆಗಳಿಗೆ ಈ ಹಿನ್ನೋಟದಲ್ಲಿ ಉತ್ತರ ಇದೆ.
ಒಂದು ಚಳವಳಿಯ ಸೋಲು-ಗೆಲುವು, ಅದರ ಸಿದ್ದಾಂತ, ಸಂಘಟನೆ ಮತ್ತು ಹೋರಾಟದ ನೆಲಗಳನ್ನು ಅವಲಂಭಿಸಿರುತ್ತೇ. ನಾರಾಯಣ ಗುರು ಚಳವಳಿಯ ಎಲ್ಲಾ ಮಗ್ಗಲುಗಳನ್ನು ಈ ರೀತಿ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವ ಪ್ರಯತ್ನ ಕನ್ನಡದಲ್ಲಿ ನಡೆದಿಲ್ಲ. ಈ ರೀತಿಯ ಅಧ್ಯಯನದ ಕೊರತೆಯಿಂದಾಗಿಯೇ ನಾರಾಯಣ ಗುರು ಒಬ್ಬರದ್ದೇ ವೈಭವೀಕರಣ ನಡೆದು ಆ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾರಾಯಣ ಗುರುಗಳ, ಅನೇಕ ಅನುಯಾಯಿಗಳ ಪರಿಚಯ ಹೊರಜಗತ್ತಿಗೆ ಆಗಿಲ್ಲ.
ನಾರಾಯಣ ಗುರು ಚಳವಳಿ, ಪ್ರಮುಖವಾಗಿ ಐದು ಹಂತಗಳಲ್ಲಿ ನಡೆಯಿತು.ಮೊದಲನೆಯದು ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೇಯದ್ದು ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದ್ದು ಕುಮಾರನ್ ಆಶಾನ್ ನೇತೃತ್ವದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ನಡೆದ ಚಳವಳಿ, ನಾಲ್ಕನೇಯದ್ದು ಟಿ.ಕೆ ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪøಶ್ಯತೆಯ ವಿರುದ್ಧ ನಡೆದ ಚಳವಳಿ ಹಾಗೂ ಕೊನೆಯದ್ದು, ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಈ ಎಲ್ಲಾ ಹೋರಾಟಗಳು ನಾರಾಯಣ ಗುರುಗಳ ಸಿದ್ಧಾಂತ ನೆಲೆಗಟ್ಟಿನ ಮೇಲೆಯೇ ನಡೆದಿವೆ.
ಧಾರ್ಮಿಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರು ಚಳವಳಿ ಕಾಲ ಸರಿದಂತೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ಹೋಗಿದ್ದು ಆಕಸ್ಮಿಕವಲ್ಲ, ಅದು ಗುರುಗಳೇ ರೂಪಿಸಿದ ಕಾರ್ಯ ತಂತ್ರವೇನೋ ಎಂಬ ಅನುಮಾನ ಮೂಡುತ್ತದೆ.. ಸಮಾಜದ ಅಮೂಲಾಗ್ರ ಬದಲಾವಣೆ ಎಂದರೆ, ಪ್ರಮುಖವಾಗಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಎಂಬುದನ್ನು ನಾರಾಯಣ ಗುರು ಅರಿತಿದ್ದರು. ಇಂತಹ ಬದಲಾವಣೆಗೆ ಸಮುದಾಯದ ಮನಸ್ಸನ್ನು ಸಿದ್ದಗೊಳಿಸುವ ಪ್ರಾಥಮಿಕ ಕಾರ್ಯವನ್ನು ಅವರು ದೇವಾಲಯಗಳ ಸ್ಥಾಪನೆ ಮೂಲಕ ಮಾಡಿದರು.
ಅಸ್ಪøಶ್ಯತೆಯ ವಿರುದ್ಧದ ಹೋರಾಟಗಳಲ್ಲಿ ದೇವಸ್ಥಾನ ಪ್ರವೇಶ ಚಳವಳಿಯದ್ದು ಪ್ರಮುಖ ಪಾತ್ರವಾದರೆ, ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. ಅವರು ಸವರ್ಣೀಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಮತ್ತು ಅವರ್ಣಿಯ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ, ಅವರು ಮತ್ತೊಂದು ಧರ್ಮವನ್ನು ಕೂಡ ಸ್ಥಾಪಿಸಲು ಹೋಗಲಿಲ್ಲ.
ಮೊದಲು ದೇವಸ್ಥಾನ ಪ್ರವೇಶ ಚಳವಳಿ ನಡೆಸದೆ, ದೇವಸ್ಥಾನ ನಿರ್ಮಿಸುವ ಅವರ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಅಸ್ಪøಶ್ಯರಲ್ಲಿ ಆಗಿನ್ನೂ ಇರಲಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ನಾರಾಯಣ ಗುರು ಮೊದಲ ದೇವಸ್ಥಾನ ಸ್ಥಾಪಿಸಿದ ಮೂವತ್ತಾರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಹಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ, ಇದು ಸ್ಪಷ್ಟವಾಗುತ್ತದೆ.
ದೇವಸ್ಥಾನದ ಸ್ಥಾಪನೆಯನ್ನು ಪ್ರಶ್ನಿಸಿದ ಪುರೋಹಿತರಿಗೆ ನಾನು ಸ್ಥಾಪಿಸಿದ್ದು ಈಳವರ ಶಿವ ಎಂಬ ಮಾರ್ಮಿಕ ಉತ್ತರ ಕೊಟ್ಟು ಗುರುಗಳು ಯುದ್ದಕ್ಕೆ ಬಂದ ಅವರನ್ನು ಶಸ್ತ್ರಪ್ರಯೊಗವಿಲ್ಲದೆಯೇ ನಿಶ್ಯಸ್ತ್ರಗೊಳಿಸಿದರು. ಅದೇ ರೀತಿ, ಸಹಸ್ರಾರು ವರ್ಷಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದಲೂ ಕೆಳವರ್ಗದ ಜನರನ್ನು ಅವರು ಮುಕ್ತಗೊಳಿಸಿದರು. ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವಾದರೆ, ದೇವಾಲಯವನ್ನೇ £ಮ್ಮಲ್ಲಿಗೆ ತರುತ್ತೇನೆ ಎಂದು ಅಸ್ಪøಶ್ಯರಿಗೆ ಪೂಜೆಯ ಹಕ್ಕನ್ನು £ೀಡುವ ಮೂಲಕ ಅವರಲ್ಲಿ ಸ್ವಾಭಿಮಾನ ಜಾಗೃತಿಗೆ ಕಾರಣರಾದರು.
ದೇವಸ್ಥಾನಗಳ ಸ್ಥಾಪನೆ ಅಂದಿನ ಪುರೋಹಿತಶಾಹಿಗೆ ಅಘಾತಕಾರಿಯಾದ ಹೊಡೆತ, ಭಕ್ತ ಸಮೂಹದಲ್ಲಿ ದೈಹಿಕವಾಗಿ ದೂರವೇ ಉಳಿದಿದ್ದ ಮೂರನೇ ಎರಡರಷ್ಟಿದ್ದ ಕೆಳವರ್ಗದ ಜನರು ಮಾನಸಿಕವಾಗಿ ಕೂಡ ದೂರವೇ ಉಳಿದರೆ, ದೇವಸ್ಥಾನಗಳ ಹುಂಡಿ ತುಂಬುವುದು ಹೇಗೆ? ಅದರ ಮೂಲಕ ಉದರ ತುಂಬುವುದು ಹೇಗೆ ? ಎಂಬ ಭೀತಿ ಅವರನ್ನಾವರಿಸಿತ್ತು. ನಾರಾಯಣ ಗುರುಗಳ ನಂತರ ಕೇರಳದಲ್ಲಿ ಸವರ್ಣಿಯ ದೇವಾಲಯಗಳ ಆದಾಯದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ದಾಖಲೆಯಲ್ಲಿದೆ.
ನಾರಾಯಣ ಗುರುಗಳು ಎಂದೂ ಹಿಂದೂ ಧರ್ಮವನ್ನು ಪೆರಿಯಾರ್, ಅಂಬೇಡ್ಕರ್‍ರವರಂತೆ ಸಾರಾಸಗಟಾಗಿ ತಿರಸ್ಕರಿಸಲಿಲ್ಲ. ಅವರು ತಮ್ಮ ಜೀವನದುದ್ದಕ್ಕೂ ಧಾರ್ಮಿಕ ಪುನರುತ್ಥಾನದ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ದೇವನೂರು ಮಹಾದೇವ ಅವರ ಮಾತೊಂದು ನೆನಪಿಗೆ ಬರುತ್ತದೆ.
ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನವಾದ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೆ ಕುಯ್ಯುವಂತೆ ಗಾಂಧೀಜಿ ಕಾಣಿಸಿದರೆ, ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವಂತೆ ಕಾಣುತ್ತಾರೆ ಎಂದು ಗಾಂಧೀ ಮತ್ತು ಅಂಬೇಡ್ಕರ್ ಅವರ ಸೈದ್ಧಾಂತಿಕ ಸಂಘರ್ಷವನ್ನು ಪ್ರಸ್ತಾಪಿಸುತ್ತಾ ದೇವನೂರು ಹೇಳುತ್ತಾರೆ.
ಗಾಂಧೀ ಆ ಕೆಲಸ ಮಾಡಿರುವ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾವಾದಿ ಚಳವಳಿ ಮಾತ್ರ ಈ ಕಂಬ ಕುಯ್ಯುವ ಕೆಲಸವನ್ನು ಮಾಡಿದೆ. ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರ ಹೋರಾಟದ ಎಲ್ಲಾ ಕಾರ್ಯತಂತ್ರಗಳನ್ನು ಅವಲೋಕಿಸುತ್ತಾ ಬಂದರೆ, ಅವರಲ್ಲೊಬ್ಬ ಚತುರ ರಾಜಕಾರಣಿ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಅವರು ಸಮಾಜ ಸುಧಾರಕನ ಕೆಲಸ ಮಾಡಲಿಕ್ಕೆಂದೇ ಸನ್ಯಾಸಿಯ ಪಾತ್ರವನ್ನು ಧರಿಸಿದರೇನೋ ಎಂಬ ಅನುಮಾನ ಬರುತ್ತದೆ. ಕೋಮುವಾದಿ ರಾಜಕಾರಣವನ್ನು ಎದುರಿಸಲು ಇಂದು ಬೇಕಾಗಿರುವುದು ಇಂತಹ ನಾಯಕತ್ವ.
ಅವರು ದೇವಸ್ಥಾನ ಪ್ರವೇಶಾವಕಾಶದ ಬಗ್ಗೆ ಎಂದೂ ಗಂಭೀರವಾಗಿ ಪ್ರಯತ್ನ ನಡೆಸಲಿಲ್ಲ. ಅವರು ಸಾವಿನ ಎಂಟು ವರ್ಷಗಳ ನಂತರ ಕೇರಳ ಸರಕಾರ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸಿತ್ತು. ಆಗಲೇ ನಾರಾಯಣ ಗುರುಗಳು ಕೇರಳ, ಮದ್ರಾಸ್ ಮತ್ತು ಮಂಗಳೂರಿನಲ್ಲಿಯೂ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ನೂರಾರು ಗುರುಮಂದಿರ ಹಾಗೂ ಆಶ್ರಮಗಳು ಪ್ರಾರಂಭವಾಗಿದ್ದವು.
ದೇವಸ್ಥಾನಗಳ ಬಗೆಗಿನ ಅವರ ಪರಿಕಲ್ಪನೆಯೇ ಕ್ರಾಂತಿಕಾರಿಯಾದುದು. ಅರವಿಪುರಂನಲ್ಲಿ ಲಿಂಗಸ್ಥಾಪನೆ ಮಾಡಿದ ಗುರುಗಳು ತಮ್ಮ ಕೊನೆಯ ಪ್ರತಿಷ್ಠಾಪನೆಯನ್ನು ಕಳವಂ ಕೋಡಂ ನಲ್ಲಿ ಕನ್ನಡಿಯೊಂದನ್ನು ಸ್ಥಾಪಿಸುವ ಮೂಲಕ ನಡೆಸಿದರು. ಅದರ ನಡುವೆ ಒಂದೆಡೆ ಸತ್ಯ, ಧರ್ಮ, ಶಾಂತಿ, ದಯೆ ಎಂಬ ಸಂದೇಶವನ್ನು ಸಾರುವ ಸಲಕವನ್ನಷ್ಟೇ ಸ್ಥಾಪಿಸಿದರೆ, ಕರಮಕ್ಕು ಎಂಬಲ್ಲಿ ನಂದಾ ದೀಪವನ್ನಷ್ಟೇ ಹಚ್ಚಿದರು. ಕೊನೆಗಾಲದಲ್ಲಿ ಶಿವಗಿರಿಯಲ್ಲಿ ಅವರ ಚಿಂತನೆಯ ಮೂಲಧಾತುವಾದ ಅರಿವು ಸಂಕೇತವಾಗಿ ಸರಸ್ವತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ, ಶಂಕರಾಚಾರ್ಯರು ಹುಟ್ಟೂರಿಗೆ ಸಮೀಪದ ಅಲ್ವಾಯಿನಲ್ಲಿ ನಿರ್ಮಿಸಿದ ಅದ್ವೆತಾಶ್ರಮದಲ್ಲಿ ಮೂರ್ತಿಯನ್ನೇ ಸ್ಥಾಪಿಸಲಿಲ್ಲ. ಕೊನೆಗಾಲದಲ್ಲಿ ದೇವಸ್ಥಾನಗಳ ಸ್ಥಾಪನೆ ನಿಲ್ಲಿಸಿ ಎಂದು ಅನುಯಾಯಿಗಳಿಗೆ ಕರೆ ನೀಡಿದರು.
ನಾರಾಯಣ ಗುರುಗಳು ತಮ್ಮ ಚಳವಳಿ ಉದ್ದಕ್ಕೂ ದೇವಾಲಯಗಳನ್ನು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬಳಸುತ್ತಾ ಬಂದುದ್ದನ್ನು ಕಾಣಬಹುದು. ಅದು ಸನಾತನ ಧರ್ಮಾವಲಂಭಿಗಳ ಆಶಯಕ್ಕೆ ತದ್ವಿರುದ್ದವಾದದು. ದೇವಾಲಯಗಳ ಪೂಜೆ-ಹವನ-ಹೋಮಗಳಲ್ಲಿ ಮುಳುಗಿ ವ್ಯಾಪಾರಿ ಕೇಂದ್ರಗಳಾಗುವ ಬದಲಿಗೆ ಅವುಗಳನ್ನು ಸಾಮೂಹಿಕ ಪ್ರಾರ್ಥನಾ ಮಂದಿರವಾಗಿ ಉಳಿಸಬೇಕೆಂದು ಅವರು ಬಯಸಿದ್ದರು. ಈ ದೃಷ್ಟಿಯಿಂದ ಅವರ ದೇವಾಲಯದ ಪರಿಕಲ್ಪನೆ ಮಸೀದಿ, ಚರ್ಚುಗಳಿಗೆ ಹೆಚ್ಚು ಹತ್ತಿರವಾಗಿತ್ತು. ದೇವಸ್ಥಾನಗಳ ಭಕ್ತಿ ಪೀಠವಾಗುವದರ ಜೊತೆಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಉದ್ಯಾನ, ವಾಚನಾಲಯಗಳನ್ನೊಳಗೊಂಡು ಅವು ಸ್ವಚ್ಛ ಪರಿಸರದಲ್ಲಿ ನಿರ್ಮಾಣಗೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರು ಸ್ಥಾಪಿಸಿದ ಎಲ್ಲಾ ದೇವಾಲಯಗಳು ಈ ಅಭಿಪ್ರಾಯವನ್ನೇ ಬಿಂಬಿಸುತ್ತದೆ.
ನಾರಾಯಣ ಗುರುಗಳದ್ದು ಮುಖಾಮುಖಿ ಹೋರಾಟವಲ್ಲ. ಅವರು ವೈದಿಕಶಾಹಿ ಏಕಸ್ವಾಮ್ಯಕ್ಕೆ ನೇರ ಸವಾಲು ಹಾಕಲಿಲ್ಲ. ಅದರ ಬದಲಿಗೆ ವೈದಿಕ ಆಧಿಪತ್ಯದ ಬೇರುಗಳನ್ನೇ ಅಲ್ಲಾಡಿಸಿದರು. ಸಂಸ್ಕøತವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದನ್ನು ಅಧ್ಯಯನ ಮಾಡಿ ಶೂದ್ರರೂ ಅದನ್ನು ಕಲಿತು ಅರಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ವೇದಾಧ್ಯಯನಕ್ಕೆ ಜಾತಿ ಅಸ್ಪಶ್ಯವಲ್ಲ ಎಂದು ಸಾರಿದ ಗುರುಗಳು ಶಂಕರಾಚಾರ್ಯರ ಅದ್ವೈತ ವೇದಾಂತವನ್ನು ಕಲಿತರು. ಆತ್ಮೋಪದೇಶ ಶತಕಂ ಸೇರಿದಂತೆ ಹಲವಾರು ಸಂಸ್ಕøತ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರದ ವಿಶ್ಲೇಷಣೆ ಮಾಡಿದ ಮೊದಲ ಅಸ್ಪೃಶ್ಯ ಅವರು.
ದೇವಸ್ಥಾನಗಳಷ್ಟೇ ಸ್ಥಾಪಿಸದೆ ಅಲ್ಲಿ ಅರ್ಚಕರಾಗಿ ಕೆಳವರ್ಗದ ಜಾತಿ ಜನರನ್ನೇ ನೇಮಿಸಿದರು. ಅವರ ತರಬೇತಿಗಾಗಿ ಶಿವಗಿರಿಯಲ್ಲಿ ಬ್ರಹ್ಮ ಮೀಮಾಂಸ ಶಾಲೆಗಳನ್ನು ತೆರೆದು ಬ್ರಹ್ಮ ವಿದ್ಯೆ ಕಲಿಸಿದರು. ಅವರಿಂದ ಸ್ಥಾಪನೆಗೊಂಡ ಬ್ರಹ್ಮ ವಿದ್ಯಾ ಕೇಂದ್ರದಲ್ಲಿ ಈಳವರಲ್ಲದೆ, ಪುಲಯ, ಪರಯ ಮೊದಲಾದ ಇ£್ನತರ ಕೆಳಜಾತಿಯ ಜನರಲ್ಲದೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಆಗಮಶಾಸವನ್ನೊಳಗೊಂಡಂತೆ ವೇದಾಧ್ಯಯನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವರ ಜಾತಿಯ ಮದುವೆಯನ್ನು ಬಿಲ್ಲವ ಅರ್ಚಕರೇ ಮಾಡುತ್ತಿದ್ದಾರೆ. ಅವರೆಲ್ಲರೂ ಮೂಲತಃ ಶಿವಗಿರಿಯಲ್ಲಿ ತರಬೇತಿ ಪಡೆದವರು. ಆದರೆ, ಈಗ ಬಿಲ್ಲವ ಸಮುದಾಯದಲ್ಲಿಯೂ ಬೆಳೆಯುತ್ತಿರುವ ನವಬ್ರಾಹ್ಮಣರಿಗೆ ಬಿಲ್ಲವ ಅರ್ಚಕರು ಪಥ್ಯವಾಗುವುದಿಲ್ಲ ಎಂಬುದು ಬೇರೆ ಮಾತು.
ಅರವಿಪುರಂನಲ್ಲಿ ದೇವಾಲಯ ಸ್ಥಾಪನೆ ನಂತರ 1961 ರಲ್ಲಿ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ’ ಸ್ಥಾಪನೆಯಾಗುವ ವರೆಗೆ ಕೇರಳ ರಾಜ್ಯ ಮಾತ್ರವಲ್ಲ ತಮಿಳುನಾಡು ಮತ್ತು ಮಂಗಳೂರಿಗೂ ಭೇಟಿ ನೀಡಿ ದೇವಾಲಯಗಳನ್ನು ಸ್ಥಾಪಿಸಿದರು. ಕೆಳವರ್ಗದ ಜನರಲ್ಲಿದ್ದ ಮೂಡನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದರು. ವಿವಾಹಗಳನ್ನು ಸರಳಗೊಳಿಸಿದರು. ವಿವಾಹಕ್ಕೆ ಮಾಡುವ ದುಂದು ವೆಚ್ಚಗಳನ್ನು ವೃದ್ಧಾಪ್ಯದ ದಿನಗಳಿಗಾಗಿ ಉಳಿತಾಯ ಮಾಡುವಂತೆ ಸಲಹೆ ನೀಡಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. ‘ಮದ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ’ ಎಂದು ಹೇಳುವ ಮೂಲಕ ಮದ್ಯಪಾನದ ವಿರುದ್ಧ ವ್ಯಾಪಕ ಚಳವಳಿಯನ್ನೇ ನಡೆಸಿದರು.
ಇದರಿಂದ ಸಾಂಪ್ರದಾಯಿಕವಾಗಿ ಸೇಂದಿ ತೆಗೆಯುವ ವೃತ್ತಿಯನ್ನು ಮಾಡುತ್ತಿದ್ದ ಈಳವರು ಆ ವೃತ್ತಿಯನ್ನು ತ್ಯಜಿಸಿ, ಬೇರೆ ವೃತ್ತಿ ಕೈಗೆತ್ತಿಕೊಳ್ಳುವಂತಾಯಿತು. ಈ ಎಲ್ಲಾ ಸುಧಾರಣೆಗಳನ್ನು ಅವರು ಮೊದಲು ತಮ್ಮ ಶ್ರೀಮಂತ ಅನುಯಾಯಿಗಳ ಮನೆಯಲ್ಲಿಯೇ ಮಾಡಿದರು. ‘ತಾಳಿಕೆಟ್ಟು’, ‘ತಿರುಂಡಕಳಿ’ ಮೊದಲಾದ ಅಂಧಸಂಪ್ರದಾಯಗಳನ್ನು ಆಚರಿಸುವ ಮತ್ತು ಆಡಂಬರದ ಮದುವೆಗಳನ್ನು ಮಾಡುವ ಶ್ರೀಮಂತ ಅನುಯಾಯಿಗಳ ಮನೆಗಳನ್ನೇ ಬಹಿಷ್ಕರಿಸಿದರು.
1916ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಸ್ಥಾಪನೆಯ ಮೂಲಕ ನಾರಾಯಣ ಗುರು ಚಳವಳಿ ಸಂಘರ್ಷದ ಹಾದಿಗೆ ಇಳಿಯಿತು. ಆಗ ಅವರಿಗೆ ಜೊತೆಯಾದವರು ಡಾ.ಪಲ್ಪು, ಪಲ್ಪು ಮತ್ತು ಅವರಣ್ಣ ವೇಲು ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ, ಊರು ಬಿಟ್ಟು ಹೋದವರು.ವೇಲು ಈಳವ ಜನಾಂಗದ ಮೊದಲ ಪದವೀಧರ. ಆತ ಮದ್ರಾಸ್‍ನಲ್ಲಿಯೇ ಕಲಿತು, ಅಲ್ಲಿಯೇ ಸರ್ಕಾರಿ ನೌಕರಿ ಸೇರಿದರೆ, ಪಲ್ಪು ಮದ್ರಾಸ್‍ನಲ್ಲಿ ಓದಿ ಮೈಸೂರಿನಲ್ಲಿ ಸರ್ಕಾರಿ ವೈದ್ಯರಾಗುತ್ತಾರೆ. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರಿನ ದಿವಾನರಿಗೆ ಅರ್ಪಿಸುವ ಮೂಲಕ ಡಾ.ಪಲ್ಪು ತನ್ನ ಹೋರಾಟ ಆರಂಭಿಸುತ್ತಾರೆ.
ತಿರುವಾಂಕೂರಿನ ದಿವಾನರು, ವೈಸ್‍ರಾಯ್, ಬ್ರಿಟಿಷ್ ಪಾರ್ಲಿಮೆಂಟ್, ಕಾಂಗ್ರೇಸ್ ಪಕ್ಷ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳಿಗೆ ಈಳವರ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಅವರು ಸತತ ಪ್ರಯತ್ನ ನಡೆಸುತ್ತಾರೆ. ಅದಕ್ಕೆ ನಿರೀಕ್ಷಿತ ಫಲ ಸಿಗದಾಗ, ಬೆಂಗಳೂರಿನಲ್ಲಿ ಡಾ.ಪಲ್ಪು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು “ಆದ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರೆ, ಮಾತ್ರ ಕೇರಳದಲ್ಲಿ ಪರಿವರ್ತನೆ ಸಾಧ್ಯ” ಎನ್ನುತ್ತಾರೆ. ಅಲ್ಲಿಂದ ಕೇರಳಕ್ಕೆ ಹಿಂದಿರುಗಿದ ಡಾ.ಪಲ್ಪು ನಾರಾಯಣ ಗುರುಗಳನ್ನು ಭೇಟಿ ಮಾಡುತ್ತಾರೆ.
ಈ ಭೇಟಿಗೆ ಐತಿಹಾಸಿಕ ಮಹತ್ವವಿದೆ. ಇಬ್ಬರ ಮಿಲನದಿಂದಲೇ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಸ್ಥಾಪನೆಯಾಗುತ್ತದೆ. ಈಳವರಲ್ಲಿ ‘ಧಾರ್ಮಿಕ ಮತ್ತು ಜಾತ್ಯಾತೀತ ಶಿಕ್ಷಣ ಹಾಗೂ ಉದ್ಯಮಶೀಲ ಮನೋಭಾವನೆ’ಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು. ಈ ಹಂತದಲ್ಲಿ ಕುಮಾರ ಆಶಾನ್ ಇವರಿಬ್ಬರ ಜೊತೆಯಾಗುತ್ತಾರೆ. ಮೂಲತಃ ಕವಿ ಮತ್ತು ಲೇಖಕನಾಗಿದ್ದ ಆಶಾನ್ ತನ್ನ ಕಾವ್ಯ ಪ್ರತಿಭೆ, ಬರಹ, ಭಾಷಣಗಳ ಮೂಲಕ ಚಳವಳಿಗೆ ಜೀವ ತುಂಬಿದರು. ಅವರ ಸಂಪಾದಕತ್ವದ ವಿವೇಕೋದಯಂ ಪತ್ರಿಕೆ ಚಳವಳಿಯ ಮುಖವಾಣಿಯಾಗಿತ್ತು.
ಎಸ್‍ಎನ್‍ಡಿಪಿ ನೇತೃತ್ವದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಅನ್ಯಾಯದ ವಿರುದ್ಧದ ಹೋರಾಟದ ಕಣಕ್ಕಿಳಿದ ಈಳವರು ಆಗಲೇ ಧಾರ್ಮಿಕ ಚಳುವಳಿಯಿಂದಾಗಿ ಸಾಕಷ್ಟು ಜಾಗೃತರಾಗಿದ್ದರು. ತಮ್ಮದೇ ದೇವಾಲಯಗಳು ಅವರ ಸಂಘಟನೆಗೆ ಶಕ್ತಿ ತುಂಬಿದ್ದವು. ಎಸ್‍ಎನ್‍ಡಿಪಿ ಕೈಗಾರಿಕಾ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿತ್ತು. ಹಲವಾರು ಯುವಕರು ಮದ್ರಾಸ್ ಬೆಂಗಳೂರಿಗೆ ಹೋಗಿ ಇಂಗ್ಲೀಷ್ ಆಯುರ್ವೇದ ವ್ಯಾಸಾಂಗ ಮಾಡಿ ಬಂದಿದ್ದರು.
ನಾರಾಯಣ ಗುರುಗಳ ದೂರದರ್ಶಿತ್ವ ಮತ್ತು ಕಾರ್ಯತಂತ್ರ ಅರಿವಾಗುವುದು ಇಲ್ಲಿ. ದೇವಸ್ಥಾನ ಪ್ರವೇಶಕ್ಕೆ ಅವರು ಹೋರಾಟ ನಡೆಸಲಿಲ್ಲ. ಬದಲಿಗೆ ಅವರೇ ದೇವಸ್ಥಾನಗಳನ್ನು ಸ್ಥಾಪಿಸಿದರು. ಆದರೆ, ಶಾಲೆಗಳ ಸ್ಥಾಪನೆಗೆ ಆಡಳಿತದ ಅನುಮತಿ ಬೇಕಿತ್ತು. ಅದಕ್ಕಾಗಿ ಸರ್ಕಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು. ಶಾಲೆಗಳ ಪ್ರವೇಶಕ್ಕಾಗಿ ಎಸ್‍ಎನ್‍ಡಿಪಿ ಹೋರಾಟ ಪ್ರಾರಂಭಿಸಿದರೂ ಅದು ಅಷ್ಟೊಂದು ಸರಳವಾಗಿರಲಿಲ್ಲ. ಈಳವರಲ್ಲಿ ಬೆಳೆಯುತ್ತಿರುವ ಜಾಗೃತಿ ನಂಬೂದಿರಿ ಮತ್ತು ನಾಯರ್ ಜನಾಂಗದಲ್ಲಿ ದ್ವೇಷದ ಕಿಚ್ಚು ಹತ್ತಿಸಿತ್ತು. ದೇವಸ್ಥಾನ ಸ್ಥಾಪನೆಯ ಕಾಲದಲ್ಲಿ ಎದುರಾಗದ ವಿರೋಧ ಈಗ ದಟ್ಟವಾಗತೊಡಗಿತ್ತು. ಎಸ್‍ಎನ್‍ಡಿಪಿ ಚಳವಳಿಯಲ್ಲಿ ಈ ಕಾಲ ನಿರ್ಣಾಯಕವಾದದ್ದು. ಆಗ ಎಲ್ಲೆಡೆ ನಾಯರ್-ಈಳವರ ಸಂಘರ್ಷ ನಡೆಯುತ್ತದೆ. ಈಳವರ ಮೇಲೆ ಬಹಿರಂಗವಾಗಿ ದೌರ್ಜನ್ಯವೆಸಗಲಾಗುತ್ತದೆ.
ಎಸ್‍ಎನ್‍ಡಿಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಯನ್ನು ಸುಟ್ಟು ಹಾಕಲಾಗುತ್ತದೆ.
ಚಳವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದ್ದೇ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಾರೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬರುತ್ತದೆ. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆಯಿದು. ಇದು ಕುಮಾರ ಆಶಾನ್ ಮತ್ತು ಡಾ.ಪಲ್ಪು ಅವರ ನಾಯಕತ್ವದ ಜಯ. ಆದರೆ, ಸರ್ಕಾರಿ ಸೇವೆಗೆ ಹಿಂದುಳಿದ ಜಾತಿ ಸೇರುವ ಅವಕಾಶವನ್ನು ಕೊನೆಗೂ ತಮ್ಮ ಜೀವಮಾನದಲ್ಲಿ ನಾರಾಯಣ ಗುರುಗಳಿಗೆ ಕಾಣಲಾಗುವುದಿಲ್ಲ. 1936ರಲ್ಲಿ ಸರ್ಕಾರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ, ಉನ್ನತ ಹುದ್ದೆಗಳನ್ನು ಹೊರತುಪಡಿಸಿ, ಹಿಂದುಳಿದವರಿಗೆ ಶೇ.40ರಷ್ಟು ಮೀಸಲಾತಿಯನ್ನು ನೀಡುತ್ತದೆ.
ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಮೀಸಲಾತಿ ಈಳವ ಜನಾಂಗದಲ್ಲಿ ಎರಡೂ ವರ್ಗಗಳ ಬುದ್ಧಿಜೀವಿಗಳ ಸೃಷ್ಟಿಗೆ ಕಾರಣವಾಯಿತು. ಸಾಹಿತಿಗಳು, ಪತ್ರಕರ್ತರು, ಶಿಕ್ಷಕರು ಮತ್ತು ಧಾರ್ಮಿಕ ನಾಯಕರದ್ದು ಒಂದು ಗುಂಪಾದರೆ, ವೈದ್ಯರು, ವಕೀಲರು, ಉದ್ಯಮಿಗಳು, ಆಡಳಿತಾಧಿಕಾರಿಗಳು ಮತ್ತು ರಾಜಕಾರಣಿಗಳು ಇನ್ನೊಂದು ಗುಂಪಿನಲ್ಲಿದ್ದರು.
ಕೇರಳದಲ್ಲಿ ಶಿಕ್ಷಣದ ಪ್ರಸಾರದಲ್ಲಿ ಆರ್.ಶಂಕರ್ ಅವರದ್ದು ನಿರ್ಣಾಯಕ ಪಾತ್ರ. ಇವರು ಸ್ಥಾಪಿಸಿದ್ದ “ಶ್ರೀ ನಾರಾಯಣ ಟ್ರಸ್ಟ್” 1952ರಲ್ಲಿಯೇ ನೂರಾರು ಶಾಲೆ, ಪಾಲಿಟೆಕ್ನಿಕ್, ಶಿಕ್ಷಕ ತರಬೇತಿ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಹೊಂದಿದ್ದವು. ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಈಳವರು ಅಭಿವೃದ್ಧಿ ಹೊಂದಿದ್ದರು. ಎಸ್‍ಎನ್‍ಡಿಯ ಮೊದಲ ಅಧಿವೇಶನದ ಕಾಲದಲ್ಲಿಯೇ ನಾರಾಯಣ ಗುರುಗಳು ಕೈಗಾರಿಕಾ ಸಮ್ಮೇಳನವನ್ನು ನಡೆಸಿದ್ದರು. ಆನಂತರ ಅದು ವಾರ್ಷಿಕ ಕಾರ್ಯಕ್ರಮವಾಯಿತು. ತೆಂಗಿನನಾರು ಉದ್ದಿಮೆ ಜನಪ್ರಿಯವಾಗತೊಡಗಿದ್ದು ಅದೇ ಕಾಲದಲ್ಲಿ. ಪ್ರತಿ ದೇವಾಲಯ, ಆಶ್ರಮ ಮತ್ತು ಮಂದಿರಗಳಲ್ಲಿ ತೆಂಗು ನಾರಿನ ಉದ್ದಿಮೆಯ ಘಟಕಗಳನ್ನು ಸ್ಥಾಪಿಸುವಂತೆ ಅವರು ಪ್ರೇರೆಪಿಸಿದ್ದರು. ಈಗ ತೆಂಗುನಾರಿನ ಉದ್ದಿಮೆಯಲ್ಲಿ ಕೇರಳ ದೇಶದಲ್ಲಿಯೇ ಏಕಸ್ವಾಮ್ಯವನ್ನು ಪಡೆದಿದೆ.
ಈ ಹಂತದಲ್ಲಿ ಎಸ್‍ಎನ್‍ಡಿಪಿ ಮುಂದಿನ ಹೋರಾಟವನ್ನು ರಾಜಕೀಯ ಪ್ರಾತಿನಿದ್ಯಕ್ಕಾಗಿ ಕೇಂದ್ರಿಕರಿಸುತ್ತದೆ. ಈ ಹೋರಾಟದಲ್ಲಿ ಅವರಿಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗಗಳು ಜೊತೆಯಾಗುತ್ತವೆ. ಈ ಮೂರು ಜನಾಂಗಗಳ ಒಟ್ಟು ಜನಸಂಖ್ಯೆ ತಿರುವಾಂಕೂರು ಸಂಸ್ಥಾನದ ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು. ತಿರುವಾಂಕೂರು ಸಂಸ್ಥಾನದಲ್ಲಿ 1888ರಲ್ಲಿಯೇ ವಿಧಾನಸಭೆ ರಚನೆಯಾಗಿ ಚುನಾವಣೆಗಳು ನಡೆಯುತ್ತಾ ಬಂದಿದ್ದರೂ, 1935ರವರೆಗೆ ನಡೆದ 15 ಚುನಾವಣೆಗಳಲ್ಲಿ ಶೇ.26ರಷ್ಟಿದ್ದ ಈಳವರಲ್ಲಿ ಒಬ್ಬರೂ ಕೂಡ ಆಯ್ಕೆಯಾಗಿರಲಿಲ್ಲ. ಶೇ.22ರಷ್ಟಿದ್ದ ಕ್ರಿಶ್ಚಿಯನ್‍ರು ಮತ್ತು ಶೇ.18ರಷ್ಟಿದ್ದ ಮುಸ್ಲಿಂರ ಪ್ರಾತಿನಿಧ್ಯ ಮೂರು-ನಾಲ್ಕರ ಗಡಿ ದಾಟಿರಲಿಲ್ಲ.
ಐದು ರೂ. ತೆರಿಗೆ ನೀಡುವವರು ಮಾತ್ರ ಮತದಾನದ ಹಕ್ಕು ಪಡೆದಿರುವುದು ಈ ಅನ್ಯಾಯಕ್ಕೆ ಕಾರಣವಾಗಿತ್ತು. ಆ ಕಾಲದ ಭೂಒಡೆತನ ಬಹುಪಾಲು ನಾಯರ್ ಮತ್ತು ನಂಬೂದಿರಿಗಳ ಕೈಯಲ್ಲಿದ್ದ ಕಾರಣ ಉಳಿದ ಜನಾಂಗ ಮತದಾನದ ಹಕ್ಕನ್ನೇ ಪಡೆಯುವುದು ಅಸಾಧ್ಯವಾಗಿತ್ತು. ಇದನ್ನು ಪ್ರತಿಭಟಿಸಲೆಂದೇ ಮೂರು ಜನಾಂಗಗಳು ಕೂಡಿ “ಸಂಯುಕ್ತ ರಾಜಕೀಯ ಸಂಘಟನೆ”ಯನ್ನು ರಚಿಸಿಕೊಂಡು 1935ರ ಚುನಾವಣೆಯನ್ನು ಬಹಿಷ್ಕರಿಸಿತ್ತು. ಈ ಹೋರಾಟಕ್ಕೆ ಮಣಿದ ತಿರುವಾಂಕೂರು ಸಂಸ್ಥಾನ ಜಾತಿ ಪ್ರಮಾಣಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಘೋಷಿಸಿತು. ಕೇರಳದಲ್ಲಿ ಇಂದು ನಾವು ಕಾಣುತ್ತಿರುವ ರಾಜಕೀಯ ಜಾಗೃತಿಗೆ ಇದು ಮೂಲ ಕಾರಣ.
ಕೇರಳದ ಕಮ್ಯೂನಿಸ್ಟ್ ಪಕ್ಷವನ್ನು ನಾರಾಯಣ ಗುರು ಚಳವಳಿಯ ಮುಂದುವರೆದ ಭಾಗವೆನ್ನಬಹುದು. ಅಧಿಕೃತವಾಗಿ ನಾರಾಯಣ ಗುರು ಚಳವಳಿಗೆ ಎಸ್‍ಎನ್‍ಡಿಪಿಯೇ ಉತ್ತರಾಧಿಕಾರವನ್ನು ಪಡೆದಿದ್ದರೂ ಅದು ಕಮ್ಯೂನಿಸ್ಟ್ ಚಳವಳಿಗೆ ನಾಂದಿಯಾಗಿದ್ದನ್ನು ಇತಿಹಾಸ ಹೇಳುತ್ತದೆ.
ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣಕರ್ತರಾದವರು ಸಹೋದರ ಅಯ್ಯಪ್ಪನ್.ಪ್ರಗತಿಪರ ಚಿಂತನೆಯ, ನೇರನಡೆನುಡಿಯ ಅಯ್ಯಪ್ಪನ್ ಹುಟ್ಟಿನಿಂದಲೇ ಹೋರಾಟಗಾರ ಮತ್ತು ಅಪ್ರತಿಮ ಧೈರ್ಯಶಾಲಿ. ಜಾತಿ ಶ್ರೇಣಿಯಲ್ಲಿ ಈಳವರಿಗಿಂತ ಕೆಳಗಿದ್ದ ಪುಲಯರ ಜೊತೆ ತಮ್ಮೂರಿನಲ್ಲಿ ಸಹಭೋಜನ ಮಾಡಿಸಿ ಜಾತಿಯಿಂದ ಬಹಿಷ್ಕøತನಾದ ಅಯ್ಯಪ್ಪನ್ ಜಾತಿ ನಿರ್ಮೂಲನೆಯ ಪ್ರಬಲ ಪ್ರತಿಪಾದಕ. ಅಯ್ಯಪ್ಪನ್ ಅವರನ್ನು ಗುರುತಿಸಿದ ಗುರುಗಳು ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದರಂತೆ. ಮೂಲತಃ ನಾಸ್ತಿಕನಾದ ಅಯ್ಯಪ್ಪನ್ “ಸ್ವತಂತ್ರ ಸಮುದಾಯ ಪ್ರತಿಷ್ಠಾನ”ವನ್ನು ಸ್ಥಾಪಿಸಿ ಸಹೋದರ ಎನ್ನುವ ಪತ್ರಿಕೆ ಪ್ರಾರಂಭಿಸಿ ಜಾತಿ ವಿನಾಶ ಚಳವಳಿಯನ್ನು ನಡೆಸುತ್ತಿದ್ದರು. ಅವರನ್ನು ಪುಲಯರ ಅಯ್ಯಪ್ಪನ್ ಎಂದು ಜನ ಗೇಲಿ ಮಾಡುತ್ತಿದ್ದರಂತೆ.
ನಾರಾಯಣ ಗುರುಗಳ ಸಾವಿನ ನಂತರ ಪರಸ್ಪರ ಭಿನ್ನ ವಿಚಾರಧಾರೆಯನ್ನು ಹೊಂದಿದ್ದ ನಾಯಕರು ಎಸ್‍ಎನ್‍ಡಿಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಟ್ಟಿದ್ದರು. ಮೊದಲನೆಯದಾಗಿ ಮೇಲ್ಜಾತಿ ಜನರ ವೈರಿ ಎಂದು ಬಗೆಯಲಾದ ಬ್ರಿಟಿಷರನ್ನು ಸ್ನೇಹಿತರೆಂದು ತಿಳಿದುಕೊಂಡಿದ್ದ ಮಿತವಾದಿ ಕೃಷ್ಣನ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕವೇ ಈಳವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದ ಕಾಂಗ್ರೇಸ್ ಒಲವಿನ ಟಿ.ಕೆ ಮಾಧವನ್ ಮತ್ತು ಸಿ.ಕೇಶವನ್, ಸಮಾಜವಾದಿ ಮತ್ತು ಪುರೋಗಾಮಿ ವಿಚಾರಧಾರೆಯ ಸಹೋದರ ಅಯ್ಯಪ್ಪನ್ ಅವರ ಸಮಾಜವಾದಿ-ಪುರೋಗಾಮಿ ವಿಚಾರಧಾರೆಗಳನ್ನು ಮೇಳೈಸಲು ಯತ್ನಿಸುತ್ತಿದ್ದ ಇನ್ನೊಂದು ಗುಂಪು ಇದರಲ್ಲಿ ಪ್ರಮುಖವಾದವುಗಳು. ಈ ಕೊನೆಯ ಗುಂಪು ನಂತರದ ದಿನಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.
1937ರಲ್ಲಿ ಕೇರಳದಲ್ಲಿ ಕಮ್ಯೂನಿಷ್ಟ ಪಕ್ಷ ಪಿ.ಕೃಷ್ಣಪಿಳ್ಳೆ ಮತ್ತು ಇ.ಎಂ.ಎಸ್ ನಂಬೂದಿರಿ ಪಾಡ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಎಸ್‍ಎನ್‍ಡಿಪಿಯ ಅಯ್ಯಪ್ಪನ್, ದಾಮೋದರನ್, ಸುಕುಮಾರನ್ ಮೊದಲಾದವರು ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುತ್ತಿದ್ದರೆ ಸಿ.ಕೇಶವನ್, ಟಿ.ಕೆ ಮಾಧವನ್ ಮತ್ತು ಆರ್.ಶಂಕರ್ ಕಾಂಗ್ರೇಸ್ ಒಲವುಳ್ಳವರಾಗಿದ್ದರು. ವಿಪರ್ಯಾಸವೆಂದರೆ ಎಸ್.ಎನ್.ಡಿ.ಪಿ ಚಳವಳಿಯಿಂದ ಜಾಗೃತರಾದ ಕೆಳವರ್ಗದ ಜನಸಮೂಹ ಎಡಪಕ್ಷಗಳ ಕಡೆ ಆಕರ್ಷಿತರಾಗಿದ್ದರು. ಅವರಲ್ಲಿ ಭೂ ಹೀನ ಕಾರ್ಮಿಕರು, ಗೇಣಿದಾರರು, ಸೇಂದಿ ತೆಗೆಯುವವರು, ಪ್ಲಾಂಟೇಷನ್ ಕಾರ್ಮಿಕರು, ಗೇರುಬೀಜ ಕಾರ್ಖಾನೆ ಕಾರ್ಮಿಕರು ಮೊದಲಾದವರಿದ್ದರು. ಆ ವರ್ಗಗಳಲ್ಲಿ ಸಕ್ರಿಯವಾಗಿದ್ದ ಕಾರ್ಮಿಕರ ಸಂಘಟನೆಗಳು ಮಾತ್ರ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ್ದಾಗಿತ್ತು.
ಕಮ್ಯೂನಿಷ್ಟ್ ಪಕ್ಷದಲ್ಲಿ ನಾಯಕತ್ವ ಮಾತ್ರ ಈಳವ, ಪುಲಯ, ಪರವರ ಕೈಗೆ ಬರಲಿಲ್ಲ. ಅದು ನಂಬೂದಿರಿ, ನಾಯರ್ ಕೈಯಲ್ಲಿ ಭದ್ರವಾಗಿಯೇ ಉಳಿದಿದೆ.
ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಪಡೆದಿದ್ದ ಹಿರಿಯ ನಾಯಕಿ ಕೆ.ಆರ್ ಗೌರಿ ಅವಕಾಶವಂಚಿತರಾಗಿದ್ದು ಇದಕ್ಕೆ ಒಂದು ಉದಾಹರಣೆ ಕಾಂಗ್ರೇಸ್ ಪಕ್ಷವು ಈಳವರಿಗೆ ರಾಜಕೀಯ ಅಧಿಕಾರವನ್ನು ನೀಡಿತು. 1951ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿ.ಕೇಶವನ್ ಮುಖ್ಯಮಂತ್ರಿಯಾದರು. 1962ರಲ್ಲಿ ಆರ್. ಶಂಕರ್ ಮುಖ್ಯಮಂತ್ರಿಯಾದರು. 1971ರಲ್ಲಿ ಅಲ್ಲಿನ ವಿಧಾನಸಭೆಯಲ್ಲಿ 28 ಈಳವ ಶಾಸಕರಿದ್ದರು. ಇಂದು ಕೂಡಾ ಕೇರಳದಲ್ಲಿ ಎಸ್.ಡಿ.ಪಿ ಮತ್ತು ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಾಲಯಗಳು ಹಾಗೂ ಸನ್ಯಾಸಿ ಸಂಘದ ಮೇಲೆ ನಿಯಂತ್ರಣ ಸ್ಥಾಪಿಸಲು ಕಾಂಗ್ರೇಸ್ ಮತ್ತು ಎಡಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ಎಸ್.ಎನ್.ಡಿ.ಪಿ, ಶ್ರೀ ನಾರಾಯಣ ಟ್ರಸ್ಟ್ ಮತ್ತು ಸನ್ಯಾಸಿ ಸಂಘ ಇಂದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ.
ಮೇಲ್ಜಾತಿ ಜನರೂ ಸೇರಿದಂತೆ, ಎಲ್ಲ ವರ್ಗಗಳೊಳಗಿನಿಂದಲೂ ಸುಧಾರಣೆಯ ಧ್ವನಿ ಏಳುವಂತೆ ಮಾಡಿದ್ದು ನಾರಾಯಣಗುರು ಚಳವಳಿಯ ಇನ್ನೊಂದು ಸಾಧನೆ. ನಾಯರ್ ಸೇವಾ ಸಂಘ, ಪುಲಯ ಮಹಾಜನ ಸಭಾ ಮತ್ತು ನಂಬೂದಿರಿಗಳ ಯೋಗಕ್ಷೇಮ ಸಭಾಗಳು ಎಸ್.ಎನ್.ಡಿ.ಪಿ ಮಾದರಿಯಲ್ಲಿಯೇ ತಮ್ಮ ಜನಾಂಗಗಳ ಸುಧಾರಣೆಗೆ ಪ್ರಯತ್ನ ನಡೆಸಿದವು. ಸುಧಾರಣಾ ಚಳವಳಿಯಲ್ಲಿ ಭಾಗವಹಿಸಿದ್ದ ನಂಬೂದಿರಿ ಯುವಕರು ಬಹುಬೇಗನೆ ಕಮ್ಯೂನಿಸ್ಟ್ ಪಕ್ಷದತ್ತ ಆಕರ್ಷಿತರಾದರು. ಮುಂದೆ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ನಂಬೂದಿರಿ, ನಾಯರ್‍ಗಳ ಪಾಲಾಗಿ ಇತಿಹಾಸ ಮರುಕಳಿಸಿದ್ದನ್ನು ಕಾಣಬಹುದು.
ನಾರಾಯಣ ಗುರು ಚಳವಳಿ ಕೇರಳದಲ್ಲಿ ನಡೆಯದೇ ಹೋಗಿದ್ದರೆ, ಏನಾಗುತ್ತಿತ್ತು ಎಂಬ ಪ್ರಶ್ನೆಗೆ ರಾಜಗೋಪಾಲಚಾರಿ ಅವರು ಆ ಚಳವಳಿ ನಡೆಯುತ್ತಿದ್ದ ಕಾಲದಲ್ಲಿಯೇ ಉತ್ತರ ನೀಡಿದ್ದರು. ತಿರುವಾಂಕೂರು ಸಂಸ್ಥಾನದ ದಿವಾನರು ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದನ್ನು ಕಂಡ ರಾಜಗೋಪಾಲಾಚಾರಿಯವರು ದಿವಾನರಿಗೆ ಪತ್ರ ಬರೆದು “ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದಿದ್ದರೆ, ಕೇರಳದಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು” ಎಂದು ಎಚ್ಚರಿಸಿದ್ದರು. ಕೇರಳದ ಆಗಿನ ಸ್ಥಿತಿಯಲ್ಲಿ ಈ ಎಚ್ಚರಿಕೆ ಉತ್ಪ್ರೇಕ್ಷೆ ಆಗಿರಲಿಲ್ಲ. ವಾಸ್ಕೋಡಗಾಮ ಮೊದಲು ಬಂದಿಳಿದ ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಉಳಿದೆಲ್ಲಾ ಕಡೆಗಳಿಗಿಂತ ಹೆಚ್ಚು ಕ್ರೀಯಾಶೀಲವಾಗಿದ್ದವು. ನಾರಾಯಣಗುರುಗಳ ಪ್ರವೇಶವಾಗುವ ಮೊದಲು ಅಲ್ಲಿ ಜಾತಿ ಆಧಾರಿತ ದೌರ್ಜನ್ಯದಿಂದ ಬೇಸತ್ತ ಕೆಳವರ್ಗದ ಜನ ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದಲ್ಲಿ ಅತಿಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಇರುವ ರಾಜ್ಯ ಕೇರಳ. ಅಲ್ಲಿ ಶೇ.24ರಷ್ಟು ಕ್ರಿಶ್ಚಿಯನ್‍ರು ಇರುವುದು ಈ ಮತಾಂತರಕ್ಕೆ ಸಾಕ್ಷಿ.
ನಾರಾಯಣ ಗುರುಗಳ ಚಳವಳಿಯುದ್ದಕ್ಕೂ ಹಲವಾರು ಬಾರಿ ತಮ್ಮ ಅನುಯಾಯಿಗಳಿಂದಲೆ ಮತಾಂತರದ ಬೆದರಿಕೆಯನ್ನು ಎದುರಿಸಿದ್ದರು. ವೈಕಂ ಸತ್ಯಾಗ್ರಹದ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಮತಾಂತರದ ವಿಚಾರ ಮತ್ತೇ ಎಸ್.ಎನ್.ಡಿ.ಪಿಯಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಗುರುಗಳ ಪ್ರಮುಖ ಶಿಷ್ಯರಲ್ಲಿ ಸಿ.ವಿ ಕುಂಜುರಾಮನ್ ಕ್ರಿಶ್ಚಿಯನ್ ಮತಾಂತರವನ್ನು ಪ್ರತಿಪಾದಿಸುತ್ತಿದ್ದರೆ, ಸಹೋದರ ಅಯ್ಯಪ್ಪನ್ ಮತ್ತು ಸಿ.ಕೃಷ್ಣನ್ ಬೌದ್ಧ ಧರ್ಮದ ಪರ ಒಲವು ತೋರಿಸಿದ್ದರು. ಕುಮಾರ ಆಶಾನ್ ಕೂಡ ಬೌದ್ಧ ಧರ್ಮದ ಕಡೆ ಆಕರ್ಷಿತರಾಗಿದ್ದರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಟಿ.ಕೆ ಮಾಧವನ್ ಮತಾಂತರವನ್ನೇ ವಿರೋಧಿಸುತ್ತಿದ್ದರು.
ಎಸ್.ಎನ್.ಡಿ.ಪಿ ಅಸ್ತಿತ್ವವನ್ನೇ ಅಲುಗಾಡಿಸಿದ ಈ ವಿವಾದ ನಾರಾಯಣ ಗುರುಗಳಿಗೆ ಒಂದು ಸವಾಲಾಗಿತ್ತು. ತಕ್ಷಣ ಸ್ವಾಮಿಗಳು ಅಲ್ವಾಯಿಯಲ್ಲಿ 1924 ಪೆಬ್ರುವರಿಯಲ್ಲಿ ಎರಡು ದಿನಗಳ ಸರ್ವಧರ್ಮ ಸಮ್ಮೇಳನ ನಡೆಸಿದರು. ಈ ಸಮ್ಮೇಳನ ನಡೆಯುತ್ತಿರುವುದು “ತರ್ಕ ನಡೆಸುವದಕ್ಕಾಗಲಿ, ಗೆಲ್ಲುವುದಕ್ಕಾಗಲಿ ಅಲ್ಲ. ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು ಇದರ ಉದ್ದೇಶ” ಎಂದು ನಾರಾಯಣ ಗುರುಗಳು ಘೋಷಿಸಿದ್ದರು. ಸ್ವಾಮಿಗಳು “ಒಂದು ಜಾತಿ, ಒಂದು ಮತ, ಒಂದೇ ದೇವರು” ಎಂಬ ಸಂದೇಶ ಸಾರಿದರು. ಮನುಷ್ಯ ಬದಲಾದರೆ, ಜಾತಿ ಬದಲಾಯಿಸಬೇಕಾದ ಅಗತ್ಯ ಇಲ್ಲವೆಂದು ಅವರು ಹಿಂದೂ ಧರ್ಮದ ನಾಯಕರನ್ನು ಉದ್ದೇಶಿಸಿ ಹೇಳಿದರು. ಮತಾಂತರದ ವಿವಾದ ಅಲ್ಲಿಗೆ ತಣ್ಣಗಾಯಿತು.
ಕೇರಳದಿಂದಾಚೆಗೆ ತಮಿಳುನಾಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ, ಬೇರೆಡೆ ನಾರಾಯಣ ಗುರು ಚಳವಳಿ ಹೆಚ್ಚು ಪರಿಚಿತವಲ್ಲ. ನಾರಾಯಣ ಗುರುಗಳ ಶಿಷ್ಯರೇ ಆದ ಡಾ.ಪಲ್ಪು ಅವರ ಮಗ ನಟರಾಜ ಗುರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುಗಳ ಚಿಂತನೆಯ ಪ್ರಸಾರ ಮಾಡಿದರು. ಅವರು ಶಿವಗಿರಿಯ ಸಮೀಪ ಸ್ಥಾಪಿಸಿರುವ ಈಸ್ಟ್‍ವೆಸ್ಟ್ ವಿಶ್ವವಿದ್ಯಾಲಯವಿದೆ. ಆದರೆ, ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೂರಾರು ಗುರುಮಂದಿರಗಳಲ್ಲಿ ಅವರಿಗಾಗಿಯೇ ಕಟ್ಟಿದ ದೇವಾಲಯಗಳಲ್ಲಿ ನಾರಾಯಣ ಗುರುಗಳ ಆರಾಧನೆ-ಭಜನೆಗಳು ಕೂಡ ನಾರಾಯಣನೆಂಬ ಈ “ನರ”ನ ಸಾಧನೆಯ ನೈಜ ಚಿತ್ರಣ ನೀಡಲು ವಿಫಲವಾಗಿವೆ. ಸಾವಿರಾರು ವರ್ಷಗಳಿಂದ ಬೇರುಬಿಟ್ಟ ವೈದಿಕಷಾಹಿ, ಫ್ಯಾಸಿಸ್ಟ್ ಶಕ್ತಿ ತನ್ನನ್ನು ಪ್ರಶ್ನಿಸಿದವರನ್ನು ನಾಶ ಮಾಡಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ, ತನ್ನೊಳಗೆ ಜೀರ್ಣಿಸಿಕೊಂಡು ಬಿಡುತ್ತದೆ. ಬುದ್ಧ ವಿಷ್ಣುವಿನ ಅವತಾರವಾದ, ಬಸವಣ್ಣ ನಂದಿಯಾದ ದುರಂತವೇ ನಾರಾಯಣ ಗುರುಗಳಿಗಾಗಿದೆ. ಸನ್ಯಾಸಿಯಾದ ದಿನದಿಂದ ಸಾವಿನವರೆಗೂ ಕೇರಳದ ಅತ್ಯಂತ ಕೀಳು ಜಾತಿಯವರೆನಿಸಿದ ಪುಲಯ ಜನಾಂಗದ ಅಡಿಗೆಯವನಿಂದಲೇ ಕೈತುತ್ತು ತಿಂದು ಬದುಕಿದ ನಾರಾಯಣ ಗುರುಗಳು ಇಂದು ಈಳವ – ಬಿಲ್ಲವ ಜಾತಿ ಜನರ ನಾಯಕನಾಗಿಬಿಟ್ಟಿದ್ದಾರೆ.
ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದ ಗುರುಗಳ ಚಿಂತನೆಯನ್ನು ವಿದ್ಯೆ ಎಂದರೆ, ಅಕಾಡೆಮಿಕ್ ಶಿಕ್ಷಣ ಎಂದು ತಿಳಿದ ಕಾರಣದಿಂದಾಗಿಯೇ ಅವರ ಅನುಯಾಯಿಗಳೆನಿಸಿಕೊಂಡವರಲ್ಲಿ ಬಹಳಷ್ಟು ಮಂದಿ ಇಂದಿಗೂ ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಲ್ಲ. ಹಾಗಿಲ್ಲದಿದ್ದರೆ, ವರ್ಣಾಶ್ರಮ ವ್ಯವಸ್ಥೆಗೆ ಸವಾಲಾಗಿ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ ಅವರ ಅನುಯಾಯಿಗಳು, ಅದನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸುವ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸುತ್ತಿರಲಿಲ್ಲ. ಒಂದು ಜಾತಿ, ಒಂದು ಮತ, ಒಂದೇ ದೇವರು ಎಂದು ಸಾರಿದ ನಾರಾಯಣ ಗುರುಗಳು ಒಂದು ಜಾತಿಯ ಮಂದಿರಗಳಲ್ಲಿ ಬಂಧಿಯಾಗುತ್ತಿರಲಿಲ್ಲ. ಈ ‘ಭಕ್ತಸಮೂಹ’, ‘ಭಜನಾಮಂಡಳಿ’ಗಳಿಂದ ನಾರಾಯಣ ಗುರುಗಳನ್ನು ಬಿಡುಗಡೆಗೊಳಿಸಿ ಅವರನ್ನು ಎಲ್ಲರಿಗೂ ಸಲ್ಲುವ ಗುರುಗಳನ್ನಾಗಿ ಮಾಡಬೇಕಾಗಿದೆ. ಈ ಮೂಲಕವೇ ಕೋಮುವಾದಿ ರಾಜಕಾರಣಕ್ಕೆ ಪ್ರತಿಯಾಗಿ ‘ಸಾಮಾಜಿಕ ನ್ಯಾಯದ’ ರಾಜಕಾರಣವನ್ನು ರೂಪಿಸುವ ಕಾರ್ಯ ನಡೆಯಬೇಕಾಗಿದೆ. ಇದು ‘ಹಿಂದುತ್ವದ ಪ್ರಯೋಗಶಾಲೆ’ ಎಂಬ ಕುಖ್ಯಾತಿಗೆ ಈಡಾದ ದಕ್ಷಿಣಕನ್ನಡದಿಂದಲೇ ಪ್ರಾರಂಭವಾಗಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243



