ಬಹಿರಂಗ
ಕಾರ್ಮಿಕರನ್ನುದ್ದೇಶಿಸಿ ಅಂಬೇಡ್ಕರ್..!
ಕಾರ್ಮಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್‍ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾರ್ಮಿಕರಿರಬಹುದು, ಕಾರ್ಖಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನುಚಲಾಯಿಸುವವರಿರಬಹುದು, ಪ್ರತಿಯೊಬ್ಬರೂ ಕಾರ್ಮಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ ಗುಂಪೆಂದರೆ ಕಾರ್ಮಿಕರದ್ದೆ.
ಆದರೆ ಪ್ರಶ್ನೆಯೆನೆಂದರೆ ಈ ದೇಶದಲ್ಲಿ ಅದೆಷ್ಟು ದುಡಿಯುವ ಜೀವಿಗಳಿಗೆ ತಾವು ಕಾರ್ಮಿಕರು, ನಮಗೂ ಹಕ್ಕು ಅಧಿಕಾರ ಇದೆ, ಚಳುವಳಿ ಹೋರಾಟ ಇದೆ ಇತ್ಯಾದಿ ವಿಷಯಗಳ ಅರಿವು ಅದೆಷ್ಟಿದೆ? ಬಹುಶಃ ಈ ಪ್ರಶ್ನೆಗೆ ಉತ್ತರ ಶೂನ್ಯಕ್ಕೆ ಹತ್ತಿರ ಎನ್ನಬಹುದು ಯಾಕೆಂದರೆ ಕಾರ್ಮಿಕರು ಸಂಘಟಿತರಾಗೆ ಇಲ್ಲ. ಅದಕ್ಕೆ ಕಾರಣ ಅವರಲ್ಲಿರುವ ಅಜ್ಞಾನ ಅನಕ್ಷರತೆ ಮುಖ್ಯವಾಗಿ ಜಾತೀಯತೆ!
ಹೌದು, ಜಾತೀಯತೆ ಈ ದೇಶದ ಕಾರ್ಮಿಕರನ್ನು ಸಂಘಟಿತರಾಗದ ಹಾಗೆ ತಡೆದಿಟ್ಟಿದೆ. ಯಾವ ಮಾರ್ಕ್ಸ್, ಲೆನಿನ್ ಅಲ್ಲಲ್ಲಿ ಜೀವಂತವಿದ್ದರೂ ಕೂಡ ಈ ದೇಶದ ಜಾತೀಯ ವ್ಯವಸ್ಥೆಯ ಮುಂದೆ ಅವರು ಸಹ ಏನೂ ಮಾಡಲಾಗದೆ ಕನ್‍ಪ್ಯೂಸ್ ಆಗಿ ಕುಳಿತ್ತಿದ್ದಾರೆ. ಹಾಗಿದ್ದರೆ ಜಾತಿಯತೆಯ ವಿಷಮ ಬಲೆಯಲ್ಲಿ ಬಿದ್ದಿರುವ ಈ ದೇಶದ ಕಾರ್ಮಿಕರ ಹೋರಾಟ ಏನಾಗಿರಬೇಕು? ಯಾವ ದಿಕ್ಕನಲ್ಲಿರಬೇಕು? ಯಾರ ವಿರುದ್ಧ ಇರಬೇಕು? ಅವರ ನಾಯಕ ಯಾರಾಗಬೇಕು. ಉತ್ತರಕ್ಕೆ ತಡಕಾಡಬೇಕಿಲ್ಲ. ಯಾಕೆಂದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಾಬಾಸಾಹೇಬ್ ಅಂಬೇಡ್ಕರ್‍ರವರಲ್ಲದೆ ಬೇರಾರು ಅಲ್ಲ ಅದಕ್ಕೆ.
ಹೌದು, ಅಂಬೇಡ್ಕರ್ ಈ ದೇಶದ ಕಾರ್ಮಿಕರ ನಾಯಕ. ಅಕಸ್ಮಾತ್ ಈ ದೇಶದಲ್ಲಿ ಜಾತೀಯತೆ ಇಲ್ಲದೆ ಇದ್ದರೆ ಅವರ ಮುಖ್ಯ ಹೋರಾಟ ಕಾರ್ಮಿಕರ ಪರವೇ ಇರುತ್ತಿತ್ತು. ಆದರೆ ಭಾರತದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು, ಭೀಕರ ಅಸ್ಪøಶ್ಯತೆಯನ್ನು ಕಂಡು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅದರ ಹೊಣೆಹೊತ್ತುಕೊಂಡರೆ ಹೊರತು ಇನ್ನಾವುದೇ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದಲ್ಲ!
ಒಂದರ್ಥದಲ್ಲಿ ಹಿಂದೂ ಧರ್ಮ ಮೈನಸ್ ಜಾತೀಯತೆ ಎಂದಿದ್ದರೆ ಖಂಡಿತ ಅವರು ಅದರ ತಂಟೆಗೆ ಹೋಗುತ್ತಿರಲಿಲ್ಲ ಬದಲಿಗೆ ಭಾರತದ ಕಾರ್ಮಿಕರು ಮತ್ತು ಕಾರ್ಮಿಕರ ಸಮಸ್ಯೆಗಳು ಎಂದು ಸಂಪೂರ್ಣ ಕಾರ್ಮಿಕರ ಪರ ನಿಲ್ಲುತ್ತಿರುತ್ತಿದ್ದರು. “ದಾಸ್ ಕ್ಯಾಪಿಟಲ್” ನಂತಹ ಮತ್ತೊಂದು ಕೃತಿಯನ್ನು ರಚಿಸಿ ಅವರು ಭಾರತದ ಕಾರ್ಲ್‍ಮಾರ್ಕ್ಸ್ ಆಗಿರುತ್ತಿದ್ದರು ತನ್ಮೂಲಕ ಅವರ ಚಿಂತನೆಗಳು ಇಡೀ ವಿಶ್ವವನ್ನೇ ವ್ಯಾಪಿಸಿರುತ್ತಿತ್ತು. ಆದರೆ? ಈ ದೇಶದ ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ಕೊಡಲಿಲ್ಲ ಆ ಮೂಲಕ ನೈಜ ಸಾಮಾಜಿಕ ಕಳಕಳಿಯ ಬಾಬಾಸಾಹೇಬರು ಈ ದೇಶದ ಹಿಂದೂ ಸಾಮಾಜಿಕ ಜಂಜಡಗಳನ್ನು ಬಗೆಹರಿಸುವುದರಷ್ಟಕ್ಕೆ ಸಿಮೀತಗೊಳ್ಳಬೇಕಾಯಿತು.ಹಾಗಿದ್ದರೆ ಭಾರತದ ಕಾರ್ಮಿಕರು ಮತ್ತು ಅವರ ಸಮಸ್ಯೆಗಳನ್ನು ಕುರಿತಂತೆ ಅಂಬೇಡ್ಕರರ ಚಿಂತನೆಗಳು? ಬಹುಶಃ ಅದನ್ನು ಹೇಳತೊಡಗಿದರೆ ಬಾಬಾಸಾಹೇಬರ ವಿಶ್ವರೂಪ ಎಲ್ಲರಿಗೂ ಪರಿಚಯ ವಾಗುವುದಂತೂ ನಿಶ್ಚಿತ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಮೊಟ್ಟಮೊದಲ ದಲಿತ ವರ್ಗಕ್ಕೆ ಸೇರಿದ ಮಂತ್ರಿ ಮತ್ತು ಅವರು ಕಾರ್ಮಿಕ ಇಲಾಖೆ ಸಚಿವರಾಗಿದ್ದರು ಎಂಬ ಸಾಮಾನ್ಯ ಜ್ಞಾನವನ್ನು ಮೊದಲಿಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಷ್ಟೆ. ಏಕೆಂದರೆ 19 42 ರಿಂದ 1946ರ ವರೆಗೆ ತಮ್ಮbusy ಹೋರಾಟದ ನಡುವೆಯೂ ಅವರು ಅಂದಿನ ಕೇಂದ್ರ ಮಂತ್ರಿಮಂಡಲದಂತಿದ್ದ ಗೌರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದು ಬಹುತೇಕರಿಗೆ ತಿಳಿದಿಲ್ಲ. ಗೌರ್ನರ್ ಜನರಲ್‍ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಮುಖ್ಯವಾಗಿ ಅವರು ನಿರ್ವಹಿಸಿದ್ದು ಕಾರ್ಮಿಕ, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳನ್ನು.
ಇತಿಹಾಸದಲ್ಲಿ ಅಂಬೇಡ್ಕರ್‍ರವರ ಬಗ್ಗೆ ಏನೇನೋ ಹೇಳಲಾಗಿದೆ ಅದರೆ ಅವರ ಜೀವನದ ಇಂತಹ ನೈಜ ಅದ್ಬುತ ಸಾಧನೆಗಳನ್ನು, ಅನುಭವಿಸಿದ ಹುದ್ದೆಗಳನ್ನು ಮುಚ್ಚಿಡಲಾಗಿದೆ! ಯಾಕೋ ಏನೋ ಅಂಬೇಡ್ಕರರು ಬ್ರಿಟೀಷ್ ಸರ್ಕಾರದಲ್ಲಿ ಅಂತಹ ಮಂತ್ರಿಯಾಗಿದ್ದರು ಎಂಬ ವಿಷಯವೇ ಬಹುತೇಕರಿಗೆ ಕಸಿವಿಸಿ ಮೂಡಿಸುವಂತಹದ್ದಿರಬೇಕು! ಅದಕ್ಕೆ ಅದರ ಬಗ್ಗೆ ಪ್ರಸ್ಥಾಪಿಸಲು ಹೋಗಿಲ್ಲ. ಮತ್ತೊಂದು ವಿಷಯ ಅಂಬೇಡ್ಕರರು ಕಾರ್ಮಿಕರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದನ್ನು ಮುಚ್ಚಿಡಲಾಗಿದೆ. ಹೇಗೆ ಇಂಗ್ಲೇಂಡಿನಲ್ಲಿ “ಲೇಬರ್ ಪಾರ್ಟಿ” ಇದೆಯೋ ಅದೇ ರೀತಿ ಭಾರತದಲ್ಲಿ “ಇಂಡಿಯನ್ ಲೇಬರ್ ಪಾರ್ಟಿ” (ಭಾರತ ಕಾರ್ಮಿಕ ಪಕ್ಷ) ವನ್ನು ಸ್ಥಾಪಿಸಿದರು. ಪ್ರಶ್ನೆಯೆನೆಂದರೆ ಬಾಬಾಸಾಹೇಬ್ ಅಂಬೇಡ್ಕರ್‍ರ ಬಗ್ಗೆ ಇಂತಹ ಸರಳ ಸತ್ಯ ಅದೆಷ್ಟು ಜನರಿಗೆ ಗೊತ್ತು? ಎಂಬುದು.
ಒಂದಂತು ನಿಜ ಕಾರ್ಮಿಕ ಇಲಾಖೆ ಮಂತ್ರಿಯಾಗಿ ಅಪ್ರತಿಮ ಸಾಧನೆಗಳನ್ನು ಮಾಡಿ ಕಾರ್ಮಿಕರ ಹೆಸರಿನಲ್ಲೇ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ ಈ ದೇಶದ ಎಕೈಕ ರಾಜಕೀಯ ನಾಯಕರೆಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ. ಈ ನಿಟ್ಟಿನಲ್ಲಿ ಕಾರ್ಮಿಕರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್‍ರ ಚಿಂತನೆಗಳು ಮತ್ತು ಅಲೋಚನೆಗಳನ್ನು ತಿಳಿದುಕೊಳ್ಳುವುದು ಈಗ ಹಿಂದಿಗಿಂತಲೂ ಹೆಚ್ಚಿನ ಅಗತ್ಯವುಳ್ಳದ್ದಾಗಿದೆ.
ಹಾಗಿದ್ದರೆ ಕಾರ್ಮಿಕರ ಕುರಿತಂತೆ ಬಾಬಾಸಾಹೇಬ್ ಅಂಬೇಡ್ಕರ್‍ರ ಚಿಂತನೆಗಳೇನು? 1938 ಫ್ರೆಬ್ರವರಿ-12 ರಂದು ಮನ್‍ಮಾಂಡ್ ಎಂಬಲ್ಲಿ “ಬೃಹತ್ ಭಾರತ ಪ್ರಸ್ಥಭೂಮಿ ಶೋಷಿತ ರೈಲ್ವೆ ನೌಕರರ ಸಮ್ಮೇಳನ” ವನ್ನು ಉದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರರು “ಶೋಷಿತರು ಇದುವರೆಗೆ ತಮ್ಮ ಸಾಮಾಜಿಕ ನೋವುಗಳ ಬಗ್ಗೆ ಹೋರಾಟ ಮಾಡುತ್ತಿದ್ದರು. ತಮ್ಮ ಆರ್ಥಿಕ ಸಂಕಷ್ಟಗಳ ಬಗ್ಗೆ ಇದುವರೆಗೆ ಅವರು ಮಾತಾಡಿರಲೇ ಇಲ್ಲ. ಆದರೆ ಇಂದು ಪ್ರಪ್ರಥಮವಾಗಿ ನೀವು ನಿಮ್ಮ ಆರ್ಥಿಕ ಅಗತ್ಯತೆಗಳ ಬಗ್ಗೆ ಚರ್ಚಿಸಲು ಇಲ್ಲಿ ಸೇರಿದ್ದಿರಿ.
ಇದುವರೆಗೆ ನೀವು ಅಸ್ಪøಶ್ಯರಾಗಿ ಒಟ್ಟಿಗೆ ಸೇರುತ್ತಿದ್ದಿರಿ. ಆದರೆ ಇಂದು ನೀವು ಕಾರ್ಮಿಕರಾಗಿ ಒಟ್ಟಿಗೆ ಸೇರಿದ್ದೀರಿ”. ಎಂದು ತಾನೇಕೆ ಇದುವರೆಗೆ ಕಾರ್ಮಿಕರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬುದಕ್ಕೆ ಪೀಠಿಕೆ ನೀಡುತ್ತಾರೆ. ಈ ಪ್ರಕಾರ ಅಂಬೇಡ್ಕರರ ಮೊದಲ ಹೋರಾಟ ಸಾಮಾಜಿಕ ಅಗತ್ಯತೆಗೆ ಸಂಬಂಧಿಸಿದ್ದಾಗಿತ್ತು ನಂತರವಷ್ಟೆ ಅವರು ಆರ್ಥಿಕತೆಗೆ ಅರ್ಥಾತ್ ಕಾರ್ಮಿಕರ ಬಗ್ಗೆ ತಲೆಕೆಡಿಸಿಕೊಂಡ್ಡದ್ದು ಎಂದು ತಿಳಿದು ಬರುತ್ತದೆ. ಅಂದಹಾಗೆ ಹಾಗೆ ಕಾರ್ಮಿಕರ ಬಗ್ಗೆ ವಿಶೇಷವಾಗಿ ಭಾರತದ ಕಾರ್ಮಿಕರ ಬಗ್ಗೆ ಮತ್ತವರ ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಅವರು “ನನ್ನ ದೃಷ್ಟಿಯಲ್ಲಿ ಕಾರ್ಮಿಕರು ವಿಶೇಷವಾಗಿ ಈ ದೇಶದ ಕಾರ್ಮಿಕರು ಇಬ್ಬರು ಶತ್ರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಆ ಇಬ್ಬರು ಶತ್ರುಗಳೆಂದರೆ ಒಂದು ಬ್ರಾಹ್ಮಣವಾದ ಮತ್ತೊಂದು ಬಂಡವಾಳವಾದ”.
“ಬ್ರಾಹ್ಮಣವಾದ ಹಾಗೆಂದರೆ ಬ್ರಾಹ್ಮಣ ಸಮುದಾಯವಲ್ಲ. ಅವರು ಪಡೆದಿರುವ ಹಕ್ಕು ಅಧಿಕಾರಗಳೂ ಅಲ್ಲ. ನನ್ನ ಪ್ರಕಾರ ಬ್ರಾಹ್ಮಣವಾದವೆಂದರೆ ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ನಿರಾಕರಣೆ ಎಂಧರ್ಥ. ಈ ಅರ್ಥದಲ್ಲಿ ಬ್ರಾಹ್ಮಣವಾದದ ಮೂಲ ಬ್ರಾಹ್ಮಣರೆ ಇರಬಹುದು. ಆದರೆ ಅದು ಅವರಷ್ಟಕ್ಕೆ ಸಿಮೀತವಾಗಿಲ್ಲ. ಸಮಾಜದ ಎಲ್ಲಾ ವರ್ಗಗಳಲ್ಲೂ ಎಲ್ಲಾ ಜಾತಿಯ ಜನರಲ್ಲೂ ಹಾಸುಹೊಕ್ಕಾಗಿದೆ. ಆ ಮೂಲಕ ಅದು ಎಲ್ಲಾ ಜನರ ಅಲೋಚನೆ ಮತ್ತು ಕ್ರಿಯೆಯನ್ನು ನಿಯಂತ್ರಿಸುತ್ತಿರುತ್ತದೆ. ಒಂದಷ್ಟು ಜನರಿಗೆ ಅದು ಉನ್ನತ ಸ್ಥಾನವನ್ನು ಕಲ್ಪಿಸುತ್ತದೆ.
ಮತ್ತೊಂದಷ್ಟು ಜನರಿಗೆ ಅದು ಸಮಾನ ಅವಕಾಶಗಳನ್ನು ನಿರಾಕರಿಸುತ್ತದೆ. ಹಾಗೆ ಬ್ರಾಹ್ನಣವಾದವೆಂಬ ಆ ವಾದ ಸಾಮಾಜಿಕ ಹಕ್ಕುಗಳನ್ನು ನಿರಾಕರಿಸುವುದಷ್ಟಕ್ಕೆ ಸಿಮೀತವಾಗುವುದಿಲ್ಲ. ಬದಲಿಗೆ ನಾಗರೀಕ ಹಕ್ಕುಗಳನ್ನು ನಿರಾಕರಿಸುವತ್ತಲೂ ತನ್ನ ಕಬಂಧಕ ಬಾಹುಗಳನ್ನು ಚಾಚುತ್ತದೆ. ಬೇಕಿದ್ದರೆ ಶೋಷಿತ ಸಮೂದಾಯಕ್ಕೆ ಸೇರಿದ ಕಾರ್ಮಿಕನನ್ನು ಶೋಷಿತ ಸಮೂದಾಯಕ್ಕೆ ಸೇರಿಲ್ಲದ ಕಾರ್ಮಿಕನ ಜೊತೆ ಹೋಲಿಸಿ. ಅವರಲ್ಲಿ ಯಾರಿಗೆ ಹೆಚ್ಚಿಗೆ ಅವಕಾಶ ದೊರೆಯುತ್ತದೆ? ಅಕಸ್ಮಾತ್ ಹಾಗೆ ಅವಕಾಶ ದೊರೆತ ಶೋಷಿತ ಸಮುದಾಯದ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಬಡ್ತಿಯಲ್ಲಿ ಸಿಗುವ ಆದ್ಯತೆಯಾದರೂ ಏನು? ಕ್ರೂರ ಸತ್ಯವೆಂದರೆ ಹಲವಾರು ಸಂಧರ್ಭದಲ್ಲಿ ಅವರು ಅಸ್ಪøಶ್ಯರೆಂಬ ಕಾರಣಕ್ಕಾಗಿಯೆ ಶೋಷಿತ ವರ್ಗಕ್ಕೆ ಸೇರಿದ ಕಾರ್ಮಿಕರುಗಳನ್ನು ಹಲವಾರು ವೃತ್ತಿಗಳಿಂದ ದೂರವಿರಿಸಲಾಗಿದೆ”. ಹೀಗೆ ಸಾಗುವ ಅಂಬೇಡ್ಕರ್‍ರವರ ವಿಚಾರ ಲಹರಿಗಳು ಇದಕ್ಕೆ ಪೂರಕವಾಗಿ ಮುಂಬೈಯ ಹತ್ತಿ ಗಿರಣಿಗಳನ್ನು ಪ್ರಸ್ತಾಪಿಸುತ್ತಾ, ಅವರು ಅಲ್ಲಿ ಅಸ್ಪøಶ್ಯರನ್ನು ಹೆಚ್ಚು ಸಂಬಳ ಬರುವ ನೇಯ್ಗೆ ವಿಭಾಗದಿಂದ ದೂರ ಇಟ್ಟು, ಕಡಿಮೆ ಸಂಬಳ ಬರುವ ನೂಲುಬಿಚ್ಚುವ ವಿಭಾಗದಲ್ಲಷ್ಟೆ ದುಡಿಸುತ್ತಿರುವುದನ್ನು ಉದಾಹರಿಸುತ್ತಾರೆ.
ತನ್ಮೂಲಕ ಬ್ರಾಹ್ಮಣವಾದ ಈ ದೇಶದ ಕಾರ್ಮಿಕರ ವಿಶೇಷವಾಗಿ ಶೋಷಿತ ವರ್ಗಗಳ ಕಾರ್ಮಿಕರ ಮೇಲೆ ಬೀರುತ್ತಿರುವ ಘೋರ ಪರಿಣಾಮವನ್ನು ಅಂಬೇಡ್ಕರರು ಬಿಚ್ಚಿಡುತ್ತಾರೆ. ಹಾಗೆಯೆ ರೈಲ್ವೆ ಇಲಾಖೆಯಲ್ಲಿ ಶೋಷಿತ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಬರೆಯುವ ಅಂಬೇಡ್ಕರ್‍ರವರು ರೈಲ್ವೆಯಲ್ಲಿ ಶೋಷಿತರು ಬಹುತೇಕ ಗ್ಯಾಂಗ್‍ಮನ್‍ಗಳಾಗಿರುವುದನ್ನು ಉದಾಹರಿಸುತ್ತಾರೆ ಮತ್ತು ಅವರಿಗೆ ಯಾವುದೇ ಬಡ್ತಿ, ಮೂಲಭೂತ ಸೌಲಭ್ಯಗಳನ್ನು ನಿರಾಕರಿಸುವುದನ್ನು ಸಾಧ್ಯಂತವಾಗಿ ವಿವರಿಸಿಸುತ್ತಾರೆ. ಹಾಗೆಯೇ ರೈಲ್ವೆ ವರ್ಕ್ ಶಾಪ್‍ನಲ್ಲಿ ಮೆಕ್ಯಾನಿಕ್, ಮೇಸ್ತ್ರಿಗಳಾಗಿ ನೇಮಿಸಲ್ಪಡದ ದಲಿತರು ಕೇವಲ ಕೂಲಿಗಳಾಗಿ ದುಡಿಯುವುದನ್ನು ಅವರು ವಿಷದವಾಗಿ ತಿಳಿಸುತ್ತಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ “ಅವನು (ದಲಿತ) ಕೇವಲ ಕೂಲಿ ಕಾರ್ಮಿಕ ಮತ್ತು ಕೂಲಿ ಕಾರ್ಮಿಕನಾಗಿಯೇ ದುಡಿಯುತ್ತಾನೆ”!
ಎಷ್ಟೊಂದು ನಿಜ? ಅಂಬೇಡ್ಕರರರು ಆಗ ಹೇಳಿದ್ದು ಏಕೆಂದರೆ ಪ್ರಸ್ತುತ ರೈಲ್ವೆ, ಆರೋಗ್ಯ, ಶಿಕ್ಷಣ, ನಗರಪಾಲಿಕೆ ಇತ್ಯಾದಿ ಇಲಾಖೆಗಳಲ್ಲೆಲ್ಲಾ ದಲಿತರು ಹೇರಳವಾಗಿ ಇದ್ದಾರೆ. ಅದು ಎಲ್ಲಿ? ಆ ಇಲಾಖೆಗಳಲ್ಲಿ ಕಸ ಗೂಡಿಸುವ “ಡಿ” ಗ್ರೂಪ್ ನೌಕರನಾಗಿ, ಕಕ್ಕಸ್ಸು ಉಚ್ಚೆ ಕ್ಲೀನ್ ಮಾಡುವ ಪೌರ ಕಾರ್ಮಿಕನಾಗಿ. ರಾತ್ರಿ ಎಲ್ಲಾ ಬ್ಯಾಟರಿ ಹಿಡಿದು ಸೂಕ್ತ ರಕ್ಷಣೆಯಿಲ್ಲದೆ ತಿರುಗಾಡುವ ಕಾವಲುಗಾರನಾಗಿ, ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ, ಮೇಟಿಯಾಗಿ ದುಡಿಯುತ್ತಿದ್ದಾರೆ. ಮಿಸಲಾತಿ ಎಲ್ಲಿ ಭರ್ತಿಮಾಡುತ್ತಾರೋ ಏನೋ ಗೊತ್ತಿಲ್ಲ. ಆದರೆ ಇಲ್ಲೆಲ್ಲ ಶೇಕಡ 18 ಇರಲಿ ಶೇಕಡ 90 ರಷ್ಟು ಮಿಸಲಾತಿಯನ್ನು ಮೈನ್‍ಟೈನ್ ಮಾಡಿರುತ್ತಾರೆ ತನ್ಮೂಲಕ ದಲಿತ ಕಾರ್ಮಿಕರ ಸ್ಥಾನ ಯಾವುದು ಎಂದು ತೋರಿಸಿಕೊಡುತ್ತಿದ್ದಾರೆ !
ಹಾಗಿದ್ದರೆ ಹೀಗೆ ವಿಗಂಡಿಸುವುದು ಸರಿಯೇ? ಅಂದರೆ ಕಾರ್ಮಿಕರನ್ನು ಮೇಲ್ಜಾತಿಯ ಕಾರ್ಮಿಕರು ಶೋಷಿತ ವರ್ಗದ ಕಾರ್ಮಿಕರು ಎಂದು ಕೆಲವರು ಕೇಳಬಹುದು (ವಿಶೇಷವಾಗಿ ಕಾರ್ಮಿಕ ಮುಖಂಡರು). ಆದರೆ? ಭಾರತದಂತಹ ಜಾತಿ ಕೊಚ್ಚೆಯಲಿ? ಅಂಬೇಡ್ಕರ್‍ರ ಒಟ್ಟಾರೆ ಸಮಸ್ತ ದಲಿತ ಕಾರ್ಮಿಕ ಚಿಂತಕರ ಈ ತೀರ್ಮಾನ ಸರಿ. ಅಂಬೇಡ್ಕರರ ಮಾತುಗಳನ್ನು ಇಲ್ಲಿ ಪ್ರಸ್ತುತ ಪಡಿಸುವುದಾದರೆ “ತಪ್ಪು ಕಲ್ಪನೆಯಿಂದಾಗಿ ನಮ್ಮನ್ನು ಟೀಕಿಸುವ ಕಾರ್ಲ್ ಮಾರ್ಕ್ಸ್ ನ ಸಿದ್ದಾಂತವನ್ನು ಓದಿಕೊಂಡಿರುವ ಕೆಲ ಕಾರ್ಮಿಕ ನಾಯಕರು ಸಮಾಜವನ್ನು ಕೇವಲ ಮಾಲೀಕರ ವರ್ಗ ಮತ್ತು ಕಾರ್ಮಿಕ ವರ್ಗ ಎಂದಷ್ಟೆ ವಿಭಜಿಸುವ ವಾದವನ್ನು ಹೇಳುತ್ತಾರೆ. ಹಾಗೆ ಹೇಳುವ ಅವರು ಭಾರತಕ್ಕೂ ಅದೇ ಸಿದ್ದಾಂತವನ್ನು ಅಂದರೆ ಭಾರತದಲ್ಲೂ ಕೂಡ ಮಾಲೀಕ ವರ್ಗ ಮತ್ತು ಕಾರ್ಮಿಕ ವರ್ಗಗಳಿವೆ ಎಂದು ಹಿಂದೆ ಮುಂದೆ ಯೋಚಿಸದೆ ಅಭಿಪ್ರಾಯ ಮಂಡಿಸುತ್ತಾರೆ.
ಆ ಮೂಲಕ ಬಂಡವಾಳ ವಾದವನ್ನು ಬಗ್ಗುಬಡಿಯಬಹುದೆನ್ನುತ್ತಾರೆ. ನನ್ನ ಪ್ರಕಾರ ನಿಜಕ್ಕೂ ಇದು ತಪ್ಪಿನಿಂದ ಕೂಡಿದ್ದು. ಯಾಕೆಂದರೆ ಮಾರ್ಕ್ಸ್ ಸಮಾಜವನ್ನು ಮಾಲೀಕರ ವರ್ಗ ಕಾರ್ಮಿಕ ವರ್ಗವೆಂದು ವಿಭಜಿಸಬಹುದೆಂದು ಎಲ್ಲಿಯ clear cut ಆಗಿ ಹೇಳಿಲ್ಲ. ಹಾಗೆಯೇ ಅಂತಹ ಹೇಳಿಕೆ ನಿಜಕ್ಕೂ ಅಸತ್ಯವಾದುದು ಮತ್ತು ಅಪಾಯಕಾರಿ ಕೂಡ ಹೌದು ಮತ್ತು ಅದು ಅಂದರೆ ಮಾರ್ಕ್ಸ್ ನ ಸಿದ್ದಾಂತ ಯುರೋಪ್‍ಗಷ್ಟೆ ನಿಜವಾಗಿದ್ದು ಭಾರತಕ್ಕಲ್ಲ ಎಂದು ಹೇಳುವುದು ಕೂಡ ಅಷ್ಟೆ ಅಸತ್ಯವಾದುದು.
ಯಾಕೆಂದರೆ ಯುರೋಪ್ ಖಂಡಕ್ಕೆ ಸೇರಿದ ಜರ್ಮನಿಯಲ್ಲಿ ಬಡವರು ಮತ್ತು ಶೋಷಿತ ವರ್ಗದವರು ಇರಲಿಲ್ಲವೇ? ಹಾಗೆ ಅದೇ ಯುರೋಪ್ ಖಂಡಕ್ಕೆ ಸೇರಿದ ಫ್ರಾನ್ಸ್ ನಲ್ಲಿಯೂ ಎಲ್ಲವನ್ನು ಕಳೆದುಕೊಂಡ ಬಡವರು ಕುಶಲಕರ್ಮಿಗಳು ಇರಲಿಲ್ಲವೆ?. ಹಾಗಿದ್ದರೆ ಜರ್ಮನಿಯ ಬಡವರು ಮತ್ತು ಫ್ರಾನ್ಸ್ ನ ಬಡವರು ಮಾರ್ಕ್ಸ್ ನ ಸಿದ್ದಾಂತದ ಹಾಗೆ ಯಾಕೆ ಒಂದಾಗಲಿಲ್ಲ? ಸಾಲದಕ್ಕೆ ಅವರು ಇತ್ತಿಚಿಗೆ ಮುಗಿದ ಯುದ್ಧದಲ್ಲಿ (ಒಂದನೇ ಮಹಾಯುದ್ಧ) ಪರಸ್ಪರ ಹೊಡೆದಾಡಿದರು, ಬಡಿದಾಡಿದರು, ಶತ್ರುಗಳಂತೆ ಕಾದಾಡಿದರು. ಯಾಕೆ? ಹಾಗಿದ್ದರೆ ಇಲ್ಲಿ ಮಾಕ್ರ್ಸ್ failure ಆದನೆಂದರ್ಥವೆ? ಖಂಡಿತ ಇಲ್ಲ. ಏಕೆಂದರೆ ಮಾಕ್ರ್ಸ್ ಯಾವುದೆ ಸಮಾಜವನ್ನು ಬಡವ ಶ್ರೀಮಂತ ಎಂದ clear cut ಆಗಿ ಎಲ್ಲಿಯೂ ವಿಭಜಿಸಿಯೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಅಂತಹ ಸಿದ್ದಾಂತವನ್ನು ಅಂದರೆ ಬಡವ-ಶ್ರೀಮಂತ, ಮಾಲೀಕ-ಕಾರ್ಮಿಕ ಎಂಬ ಸಿದ್ದಾಂತವನ್ನು ಭಾರತದ ಕಾರ್ಮಿಕ ನಾಯಕರು ಭಾರತಕ್ಕೆapply ಮಾಡುವುದು ಅದೆಷ್ಟು ಸರಿ?”.
“ಒಂದಂತು ನಿಜ ಹೇಗೆ ಯುರೋಪ್‍ನಲ್ಲಿ ಬಡವ ಶ್ರೀಮಂತ ಎಂಬ ನೇರ ವಿಭಜನೆ ಸಾಧ್ಯವಿಲ್ಲವೋ ಹಾಗೆ ಭಾರತದಲ್ಲೂ ಕೂಡು ಬಡವ-ಶ್ರೀಮಂತ, ಮಾಲೀಕ-ಕಾರ್ಮಿಕ ಎಂಬ ನೇರ ವಿಭಜನೆ ಸಾದ್ಯವಿಲ್ಲ. ಒಟ್ಟಾರೆ ಎಲ್ಲಾ ಕಾರ್ಮಿಕರು ಒಂದು, ಒಂದು ವರ್ಗವಾಗಿದ್ದಾರೆ ಎಂಬುದು ಒಂದು ಅದರ್ಶವೆ ಹೊರತು ಅದು ಕಾರ್ಯಸಾಧುವಲ್ಲ. ಒಟ್ಟಿನಲ್ಲಿ ಅದು ತಪ್ಪಭಿಪ್ರಾಯ ಕೂಡ ಹೌದು. ಹಾಗಿದ್ದರೆ ನಾವು ಕಾರ್ಮಿಕರನ್ನು ಒಂದೆಡೆ ಸೇರಿಸುವುದು ಹೇಗೆ? ಅವರಲ್ಲಿ ಐಕ್ಯತೆಯನ್ನು ತರುವುದು ಹೇಗೆ? ಒಂದು ವರ್ಗದ ಕಾರ್ಮಿಕರು ಮತ್ತೊಂದು ವರ್ಗದ ಕಾರ್ಮಿಕರನ್ನು ತುಳಿಯುವುದರ ಮೂಲಕ ಅದು ಸಾಧ್ಯವೆ? ಅಥವಾ ಶೋಷಣೆಗೆ ಒಳಗಾದ ಆ ಮತ್ತೊಂದು ವರ್ಗದ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವುದರ ಮೂಲಕ ಅಂತಹ ಐಕ್ಯಮತ್ಯವನ್ನು ಸಾಧಿಸಬಹುದೆ? ಏಕೆಂದರೆ ಈಗ ಆಗುತ್ತಿರುವುದೆ ಹಾಗೆ. ಶೋಷಣೆಗೆ ಒಳಗಾಗುತ್ತಿರುವ ಆ ಮತ್ತೊಂದು ವರ್ಗದ ಕಾರ್ಮಿಕರು ಸಂಘಟಿತರಾಗದಂತೆ ಅವರ ಕಷ್ಟಗಳಿಗೆ ಹೋರಾಡದಂತೆ ಅವರನ್ನು ತಡೆಯಲಾಗುತ್ತಿದೆ. ಹಾಗಿದ್ದರೆ ಕಾರ್ಮಿಕರ ನಡುವಿನ ಐಕ್ಯತೆಯ ಪ್ರಶ್ನೆ?”.
“ನಿಜವಾಗಿ ಹೇಳಬಹುದಾದರೆ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ಒಂದು ವರ್ಗದ ಕಾರ್ಮಿಕರು ಮತ್ತೊಂದು ವರ್ಗದ ಕಾರ್ಮಿಕರ ಮೇಲೆ ಏಕೆ ದೌರ್ಜನ್ಯ ನಡೆಸುತ್ತಾರೆ? ಆದರ ಹಿಂದಿರುವ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಬೇಕು. ಮತ್ತು ಆ ಕಾರಣಗಳನ್ನು ತೊಡೆದು ಹಾಕಬೇಕು. ಆಗ ಮಾತ್ರ ಎಲ್ಲಾ ಕಾರ್ಮಿಕರಲ್ಲೂ ಐಕ್ಯಮತ್ಯ ಸಾಧ್ಯ”.
“ಹಾಗೇಯೆ ಶೋಷಿತ ವರ್ಗದ ಯಾವುದೇ ಕಾರ್ಮಿಕರುಗಳಿಗೆ ಹಕ್ಕು ಅಧಿಕಾರಗಳನ್ನು ಕೊಡಲು ನಿರಾಕರಿಸುವ ಉನ್ನತ ವರ್ಗದ ಕಾರ್ಮಿಕರರುಗಳು, ಮಾಲೀಕರು ಸರ್ಕಾರದಿಂದ ತಮ್ಮ ಹಕ್ಕು ಅಧಿಕಾರಗಳನ್ನು ನಿರೀಕ್ಷಿಸುವುದು ಅದೆಷ್ಟು ಸಮಂಜಸ? ನೈತಿಕವಾಗಿ ಅದೆಷ್ಟು ಸರಿ? ಇಂತಹದನ್ನು ಆ ಕಾರ್ಮಿಕರುಗಳಿಗೆ ಅರ್ಥಮಾಡಿಸಬೇಕು. ಹಾಗೆಯೇ ಅಂತಹ ಮೇಲ್ವರ್ಗದ ಕಾರ್ಮಿಕರುಗಳಿಗೆ ತಾತ್ವಿಕವಾಗಿ ಸಂಘಟನೆಯ ದೃಷ್ಟಿಯಿಂದ ಸಾಮಾಜಿಕ ತಾರತಮ್ಯ ಮಾಡುವುದನ್ನು ತಪ್ಪು ಎಂದು ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ವಿವಿಧ ಕಾರ್ಮಿಕವರ್ಗಗಳಲ್ಲಿ ಐಕ್ಯಮತ್ಯ ಸಾದ್ಯ”.
“ವಿಶಾಲಾರ್ಥದಲ್ಲಿ ಹೇಳುವುದಾದರೆ ಕಾರ್ಮಿಕರ ವಿವಿಧ ಗುಂಪುಗಳು ಒಟ್ಟಾಗಬೇಕಾದರೆ ಅವರ ನಡುವೆ ಇರುವ ಅಸಮಾನತೆಯ ಚೇತನವಾದ ಬ್ರಾಹ್ಮಣವಾದವನ್ನು ಕಿತ್ತೊಗೆಯಬೇಕು. ಬಂಡವಾಳವಾದದ ಬಗ್ಗೆ ಗಂಟಲು ಹರಿದುಕೊಂಡು ಮಾತಾನಾಡುವ ಕಾರ್ಮಿಕ ನಾಯಕರುಗಳನ್ನು ನೋಡಿದ್ದೇನೆ. ಆದರೆ ಬ್ರಾಹ್ಮಣವಾದದ ಬಗ್ಗೆ ಮಾತನಾಡುವ ಕಾರ್ಮಿಕ ನಾಯಕರನ್ನು ನಾನು ಎಲ್ಲಿಯೂ ನೋಡಿಲ್ಲ. ಒಂದರ್ಥದಲ್ಲಿ ಬ್ರಾಹ್ಮಣವಾದದ ಬಗೆಗಿನ ಅವರ ಈ ಮೌನ ಅನುಮಾನಾಸ್ಪದವಾದುದು.
ಕಾರ್ಮಿಕರ ಸಂಘಟನೆಗಳಿಗೂ ಬ್ರಾಹ್ಮಣವಾದಕ್ಕೂ ಯಾವುದೇ ಸಂಬಂಧವಿಲ್ಲವೆಂಬುದು ಅವರ ಆ ಮೌನದ ಅರ್ಥವೇ? ಅಥವಾ ಕಾರ್ಮಿಕರ ಅಸಂಘಟನೆಗೆ ಬ್ರಾಹ್ಮಣವಾದ ದೊಡ್ಡ ತೊಡಕಾಗಿದೆ ಆದ್ದರಿಂದ ಅದರ ಬಗ್ಗೆ ಮಾತಾನಾಡದೆ ಇರುವುದೆ ಕ್ಷೇಮವೆಂದು ಮೇಲ್ವರ್ಗದ ಕಾರ್ಮಿಕರು ಸುಮ್ಮನಿದ್ದಾರೆಯೇ? ಅಥವಾ ಕಾರ್ಮಿಕರ ನಾಯಕತ್ವವನ್ನಷ್ಟೆ ವಹಿಸಿಕೊಳ್ಳುವ ಇವರದು ಕೇವಲ ಅವಕಾಶವಾದಿತನವೇ? ಅದೆನೇ ಇರಲಿ ಕಾರ್ಮಿಕರ ಭಾವನೆಗಳಿಗೆ ನೋವಾದರೂ ಸರಿ ನಾನು ಇದನ್ನು ಪ್ರಶ್ನಿಸದೆ ಬಿಡುವುದಿಲ್ಲ”.
“ಕಾರ್ಮಿಕರ ಅಸಂಘಟನೆಗೆ ಬ್ರಾಹ್ಮಣವಾದ ಕಾರಣ ಎನ್ನುವುದಾದರೆ ಅದನ್ನು ಕಿತ್ತೆಸೆಯುವ ಗಂಭೀರ ಪ್ರಯತ್ನ ನಡೆಯಬೇಕು. ಕೇವಲ ಉದಾಸೀನತೆಯಿಂದ ಅಥವಾ ಮೌನವಾಗಿರುವುದರಿಂದ ಸೋಂಕು ನಿವಾರಣೆಯಾಗುವುದಿಲ್ಲ. ಅದನ್ನು ಗುರುತಿಸಬೇಕು ಮತ್ತು ಬೇರು ಸಮೇತ ಕಿತ್ತೊಗೆಯಬೇಕು. ಆಗ ಮತ್ತು ಅವಾಗ ಮಾತ್ರ ಕಾರ್ಮಿಕರ ಐಕ್ಯತೆಗೆ ಹಾದಿ ಸುಗಮವಾಗುತ್ತದೆ ಇಲ್ಲದಿದ್ದರೆ ಇದು ಖಂಡಿತ ಅಸಾಧ್ಯ”. ಕಾರ್ಮಿಕರ ಐಕ್ಯತೆಗೆ ಸಂಬಂಧಿಸಿದಂತೆ ಅಂಬೇಡ್ಕರರ ನೇರ ಮಾತುಗಳಿವು.
ಮುಂದುವರೆದು ಅವರು ಹೇಳುತ್ತಾರೆ “ಬ್ರಾಹ್ಮಣವಾದ ಒಂದು ಶಕ್ತಿಯಾಗಿ ಇರುವ ತನಕ ಜನರು ಅದಕ್ಕೆ ಅಂಟಿಕೊಂಡು ಇರಲು ಯತ್ನಿಸುತ್ತಾರೆ. ಏಕೆಂದರೆ ಅದು ಒಂದು ವರ್ಗಕ್ಕೆ ಅನುಕೂಲದ ರಾಶಿಯನ್ನು ಮತ್ತೊಂದು ವರ್ಗಕ್ಕೆ ಸಂಕೋಲೆಯ ಬೇಡಿಯನ್ನು ತೊಡಿಸುತ್ತದೆ. ಈ ಕಾರಣದಿಂದ ಸಂಕೋಲೆಯ ಬೇಡಿಯನ್ನು ತೊಡಿಸಲ್ಪಟ್ಟಿರುವ ಜನರು ಸಂಘಟಿತರಾಗಿ ಬ್ರಾಹ್ಮಣವಾದವನ್ನು ಬಗ್ಗುಬಡಿಯುವುದು ಅವರ ವಿಮೋಚನೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾದುದಾಗಿದೆ. ಇಲ್ಲದಿದ್ದರೆ ಎಲ್ಲಿ ಬ್ರಾಹ್ಮಣವಾದ ಹಾಗೆಯೆ ಮುಂದುವರೆಯುತ್ತದೆಯೋ ಎಂಬ ಭಯ ನನಗೆ!” ಎಂದು ಅಂಬೇಡ್ಕರರು ತಮ್ಮ ಅತಂಕವನ್ನು ವ್ಯಕ್ತಪಡಿಸುತ್ತಾರೆ.
ಒಂದಂತು ಸತ್ಯ ಯಾವ ಬ್ರಾಹ್ಮಣವಾದ ಎಂಬ ಒಂದು ಪ್ರಮುಖ ಸಮಸ್ಯೆಯನ್ನು ಈ ದೇಶದ ಕಾರ್ಮಿಕ ನಾಯಕರುಗಳು ಸಮಸ್ಯೆಯೆಂದು ಪರಿಗಣಿಸಿರಲಿಲ್ಲವೋ ಅಂತಹದನ್ನು ಸಮಸ್ಯೆಯೆಂದು ಗುರುತಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್. ಹಾಗಿದ್ದರೆ ಅಂಬೇಡ್ಕರ್‍ರವರು ಬ್ರಾಹ್ಮಣವಾದವನ್ನು ಈ ದೇಶದ ಕಾರ್ಮಿಕರ ಪ್ರಮುಖ ಸಮಸ್ಯೆಯಾಗಿ ಗುರುತಿಸಿದ್ದು ತಪ್ಪೆ? ಖಂಡಿತ ಇಲ್ಲ. ಯಾಕೆಂದರೆ ಯುರೋಪಿನಂತಹ ಅಲ್ಪಸ್ವಲ್ಪ ಸಮಾನತೆ ಇರುವ ಪ್ರದೇಶಕ್ಕೂ ಅನ್ವಯವಾಗದ ಮಾರ್ಕ್ಸ್ ವಾದ ಭಾರತದಂತಹ ಅಸಮ ಸಮಾಜಕ್ಕೆ ಹೇಗೆ ಅನ್ವಯವಾಗುತ್ತದೆ? ಒಬ್ಬ ಹೊಲಗೇರಿಯ ಕಾರ್ಮಿಕ ಒಬ್ಬ ಬ್ರಾಹ್ಮಣಗೇರಿಯ ಕಾರ್ಮಿಕ ಇಬ್ಬರೂ ಒಂದೇ ಹುದ್ದೆಯಲ್ಲಿ ದುಡಿಯುತ್ತಿರಬಹುದು.
ಒಂದೇ ಡ್ರೆಸ್ ಹಾಕುತ್ತಿರಬಹುದು. ಒಂದೇ ವೇತನ ಶ್ರೇಣಿ ಪಡೆಯುತ್ತಿರಬಹುದು. ಹಾಗಿದ್ದರೆ ಅವರಿಬ್ಬರು ಒಂದೇ ಎನ್ನಲು ಸಾಧ್ಯವೇ? ಅಂಬೇಡ್ಕರ್‍ರವರು ಬಿಡಿಸಿ ಬ್ರಾಹ್ಮಣವಾದವೆಂದು ವಿಸ್ತೃತವಾಗಿ ಹೇಳಿದ್ದು ಇದನ್ನೇ! ಹಾಗಿದ್ದರೆ ಇದಕ್ಕೆ ಪರಿಹಾರವಾಗಿ ಅಂಬೇಡ್ಕರ್ ಹೇಳಿದ್ದು? ಶೋಷಿತ ವರ್ಗಕ್ಕೆ ಸೇರಿದ ಕಾರ್ಮಿಕರು ಪ್ರತ್ಯೇಕವಾಗಿ ಸಂಘಟಿತರಾಗಬೇಕಾದ್ದನ್ನು. ಅವರ ಪ್ರಕಾರ ಟ್ರೇಡ್ ಯುನಿಯನ್ ಸಂಘಟನೆಗಳು ಭಾರತಕ್ಕೆ ಅತ್ಯಂತ ಅವಶ್ಯವಾದುದಾಗಿದೆ. ಆದರೆ ಅವು ಭಾರತದಲ್ಲಿ ನಿಂತ ನೀರಿನಂತಾಗಿವೆ ಅಥವಾ ಮುಳುಗುತ್ತಿರುವ ಹಡಗಿನಂತಾಗಿವೆ. ಇದಕ್ಕೆ ಕಾರಣ ಅದರ ನಾಯಕರ ಹೇಡಿತನ, ಸ್ವಾರ್ಥ ಮತ್ತು ತಪ್ಪು ಹಾದಿಯೆಂದು ಅಂಬೇಡ್ಕರ್‍ರು ದೂರುತ್ತಾರೆ.
ಮುಂದುವರೆದು ಅವರು “ಟ್ರೇಡ್ ಯೂನಿಯನ್ ನಾಯಕರ ಮುಖ್ಯ ಗುರಿ ಕಾರ್ಮಿಕರಲ್ಲಿ ಅತೃಪ್ತಿಯ ಭಾವನೆಯನ್ನು ಸೃಷ್ಟಿಸುವುದು. ಅಂತಹ ಅತೃಪ್ತಿಯಿಂದ ಕ್ರಾಂತಿಯನ್ನು ಬಯಸುವುದು. ಆ ಮೂಲಕ ಕಾರ್ಮಿಕರ ಆಡಳಿತ ಸ್ಥಾಪಿಸುವುದು” ಎಂದು ವಿಶ್ಲೇಷಿಸುತ್ತಾರೆ ಅಂಬೇಡ್ಕರ್‍ರವರು. ಅದಕ್ಕೆ ಪರಿಹಾರವಾಗಿ “ಕಾರ್ಮಿಕ ನಾಯಕರುಗಳು ಕಾರ್ಮಿಕರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಅರಿತುಕೊಳ್ಳಬೇಕು. ತನ್ಮೂಲಕ ಸರ್ವರಿಗೂ ಸಮಾನ ನ್ಯಾಯ ಒದಗಿಸುವಂತಹ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡುತ್ತಾರೆ.
ಮುಂದುವರೆದು ಅಂಬೇಡ್ಕರ್‍ರವರು “ಕಾರ್ಮಿಕ ಸಂಘಟನೆಗಳು ರಾಜಕೀಯ ಪ್ರವೇಶಿಸಲೇ ಬೇಕಾದ ಅಗತ್ಯತೆಯನ್ನು ಒತ್ತಿಹೇಳುತ್ತಾರೆ. ಏಕೆಂದರೆ ರಾಜಕೀಯ ಅಧಿಕಾರವಿಲ್ಲದೆ ಯಾವುದೇ ಕಾರ್ಮಿಕ ಸಂಘಟನೆಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಸಾಧ್ಯವಿಲ್ಲ” ಎಂಬ ಸೂಕ್ಷ್ಮತೆಯನ್ನು ಬಿಡಿಸಿ ಹೇಳುತ್ತಾರೆ.
ಹಾಗಿದ್ದರೆ ಕಾರ್ಮಿಕ ಸಂಘಟನೆಗಳು ರಾಜಕೀಯ ಅಧಿಕಾರ ಪಡೆಯಬೇಕು ಎಂದಾಕ್ಷಣ ಅವುಗಳು ರಾಜಕೀಯ ಪಕ್ಷಗಳನ್ನು ಸೇರಲೇ ಬೇಕಲ್ಲವೇ? ಅದಕ್ಕೆ ಅಂಬೇಡ್ಕರ್‍ರು “ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಮತ್ತು ಕಾರ್ಮಿಕ ವರ್ಗದ ಚಿಂತನೆಯನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಕಾರ್ಮಿಕ ಸಂಘಟನೆಗಳು ಸೇರಬೇಕು”ಎಂದು ಸಲಹೆ ನೀಡುತ್ತಾರೆ ತನ್ಮೂಲಕ ಕಾರ್ಮಿಕರ ಎಲ್ಲಾ ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಗಳಿಸಿಕೊಳ್ಳುವುದರಲ್ಲಿ ಪರಿಹಾರವಿದೆ ಎನ್ನುತ್ತಾರೆ.
ಏನೇ ಆಗಲಿ ಪ್ರಸ್ತುತ ದಿನಗಳಲ್ಲಿ ಅಸಂಘಟಿತ ಕೂಲಿ ಕಾರ್ಮಿಕರೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಾರ್ಮಿಕರು ವಿಶೇಷವಾಗಿ ಶೋಷಿತ ವರ್ಗಕ್ಕೆ ಸೇರಿದ ಕಾರ್ಮಿಕರು ಅಂಬೇಡ್ಕರ್‍ರವರ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರು ಹೇಳಿದ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಬೇಕಿದೆ. ಹಾಗಿದ್ದರೆ ಕಮ್ಯೂನಿಸ್ಟ್ ಪಕ್ಷಗಳಿವೆಯಲ್ಲವೆ ಎಂದು ಯಾರಾದರೂ ಪ್ರಶ್ನಿಸಬಹುದು. ಆದರೆ ಭಾರತದ ಕಮ್ಯೂನಿಸ್ಟರಿಗೂ ಕೋಮುವಾದಿಗಳಿಗೂ ಅಂತಹ ವ್ಯತ್ಯಾಸವೇನಿಲ್ಲಾ.
ಯಾಕೆಂದರೆ ಯಾವ ಬ್ರಾಹ್ಮಣವಾದ ಭಾರತದ ಕಾರ್ಮಿಕರ ಸಮಸ್ಯೆಯೆಂದು ಅಂಬೇಡ್ಕರ್ ಪರಿಭಾವಿಸಿದರೋ ಅದೇ ಬ್ರಾಹ್ಮಣವಾದವನ್ನು ಭಾರತದ ಕಮ್ಯೂನಿಸ್ಟರು ತಮ್ಮದಾಗಿಸಿಕೊಂಡಿದ್ದಾರೆ! ಭಾರತದ ಮಟ್ಟಿಗೆ “ಕೇಸರಿ” ಸ್ವಲ್ಪ ಗಾಢಬಣ್ಣಕ್ಕೆ ತಿರುಗಿ “ಕೆಂಪಾಗಿದೆ” ಎನ್ನಬಹುದು!
ಈ ನಿಟ್ಟಿನಲ್ಲಿ ಕಾರ್ಮಿಕರು ಇಂದು ಅಂಬೇಡ್ಕರ್ ರವರು ಕಾರ್ಮಿಕರ ಸಮಸ್ಯೆಯೆಂದು ಪರಿಭಾವಿಸಿದ ಬ್ರಾಹ್ಮಣವಾದವನ್ನು ಅರ್ಥಮಾಡಿಕೊಳ್ಳಬೇಕಿದೆ. ಪರಸ್ಪರ ಸಾಮಾಜಿಕ ಹಕ್ಕುಗಳನ್ನು ಗೌರವಿಸುವುದನ್ನು ಕಲಿತು ಆ ಮೂಲಕ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡ ಬಲ್ಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ತನ್ಮೂಲಕ ಈ ದೇಶದ ನೈಜ ಕಾರ್ಮಿಕ ನಾಯಕ ಬಾಬಾಸಾಹೇಬ್ ಅಂಬೇಡ್ಕರ್‍ರ ಕಾರ್ಮಿಕ ಕನಸುಗಳನ್ನು ನನಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಮಿಕರು ಮುಂದಡಿ ಇಡುವರೆ ? ಕಾದು ನೋಡಬೇಕಷ್ಟೆ.
– ರಘೋತ್ತಮ ಹೊ ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
~ಡಾ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುವ ಆಶಯದೊಂದಿಗೆ ಜಾರಿಗೆ ಬಂದರೂ, ಪ್ರಾಯೋಗಿಕವಾಗಿ ಅದು ದೇಶದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ತೀವ್ರ ಸ್ವರೂಪದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಕೇವಲ ಒಂದು ತಾಂತ್ರಿಕ ಪ್ರವೇಶ ಪರೀಕ್ಷೆಯಾಗಿ ಕಾಣುವ ಈ ವ್ಯವಸ್ಥೆಯು, ವಾಸ್ತವದಲ್ಲಿ ಭಾರತದ ಬಹುಸಂಸ್ಕೃತಿ ಮತ್ತು ಒಕ್ಕೂಟ ತತ್ತ್ವದ ಆಳವಾದ ರಚನೆಗಳ ಮೇಲೆ ಪ್ರಹಾರ ನಡೆಸುತ್ತಿದೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ತರಲಾದ ಈ ಕೇಂದ್ರೀಕೃತ ಮಾದರಿಯು ಹೇಗೆ ಸಾಮಾನ್ಯ ವಿದ್ಯಾರ್ಥಿ ಸಮೂಹವನ್ನು ಶೈಕ್ಷಣಿಕ ಪ್ರಕ್ರಿಯೆಯಿಂದ ಹೊರದೂಡುತ್ತಿದೆ, ಪ್ರಾದೇಶಿಕ ಸ್ವಾಯತ್ತತೆಯನ್ನು ಧ್ವಂಸಗೊಳಿಸುತ್ತಿದೆ ಮತ್ತು ಸಾಂಪ್ರದಾಯಿಕ ಶ್ರೇಣೀಕೃತ ಅಸಮಾನತೆಗಳನ್ನು ಆಧುನಿಕ ರೂಪದಲ್ಲಿ ಮರುಸ್ಥಾಪಿಸುತ್ತಿದೆ ಎಂಬುದನ್ನು ಸಾಮಾಜಿಕ ನ್ಯಾಯ ಮತ್ತು ವಿಮರ್ಶಾತ್ಮಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿವರವಾಗಿ ವಿಶ್ಲೇಷಿಸಬೇಕಾಗಿದೆ.
1. ತಾರತಮ್ಯದ ಆರ್ಥಿಕ ಮತ್ತು ಪಠ್ಯಕ್ರಮದ ನೆಲೆಗಳು (Socio-Economic and Curricular Discrimination)
ನೀಟ್ ಪರೀಕ್ಷೆಯು “ಎಲ್ಲರಿಗೂ ಸಮಾನ ಅವಕಾಶ” ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆಯಾದರೂ, ಅದರ ಒಳಗಣ್ಣು ಕೇವಲ ಒಂದು ನಿರ್ದಿಷ್ಟ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ. ಈ ಪರೀಕ್ಷಾ ಪದ್ಧತಿಯು ಭಾರತೀಯ ಸಮಾಜದಲ್ಲಿ ಹೊಸದೊಂದು ಆರ್ಥಿಕ ತಾರತಮ್ಯವನ್ನು ಕಾನೂನುಬದ್ಧಗೊಳಿಸಿದೆ. ಇಂದು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೇವಲ ವಿದ್ಯಾರ್ಥಿಯ ಪ್ರತಿಭೆಯನ್ನಷ್ಟೇ ಅವಲಂಬಿಸಿಲ್ಲ, ಬದಲಿಗೆ ಆ ಪೋಷಕರ ಆರ್ಥಿಕ ಸೌಲಭ್ಯವನ್ನು ಅವಲಂಬಿಸಿದೆ. ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವ ಕಾರ್ಪೊರೇಟ್ ಕೋಚಿಂಗ್ ಉದ್ಯಮದ (Coaching Industry) ಹಬ್‌ಗಳಾದ ಹಲವಾರು ಪ್ರತಿಷ್ಠಿತ ಕೇಂದ್ರಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧೆಯ ಆರಂಭಿಕ ಹಂತದಲ್ಲೇ ಸೋಲಿಸಲ್ಪಡುತ್ತಿದ್ದಾರೆ. ಇದರೊಂದಿಗೆ, ಪಠ್ಯಕ್ರಮದ ತಾರತಮ್ಯವು ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ದೇಶದ ವೈವಿಧ್ಯಮಯ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಗತ್ಯಗಳಿಗನುಗುಣವಾಗಿ ರೂಪಿಸಿಕೊಂಡ ರಾಜ್ಯ ಪಠ್ಯಕ್ರಮಗಳನ್ನು (State Syllabus) ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಸಿಬಿಎಸ್ಇ (NCERT) ಪಠ್ಯಕ್ರಮವನ್ನು ಮಾತ್ರ ಮಾನದಂಡವಾಗಿರಿಸಿಕೊಳ್ಳಲಾಗಿದೆ. ಇದು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದ ಕನಸಿನಿಂದಲೇ ವಂಚಿಸುವ ವ್ಯವಸ್ಥಿತ ತಾರತಮ್ಯವಾಗಿದೆ.
2. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುಸಿತ
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭ್ರಷ್ಟಾಚಾರ ಮುಕ್ತ ಎಂಬ ವಾದವನ್ನು ನೀಟ್ ಪರೀಕ್ಷೆಯ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆಗಳು (Paper Leaks) ಮತ್ತು ಅಕ್ರಮಗಳು ಸಂಪೂರ್ಣವಾಗಿ ಬೆತ್ತಲೆಗೊಳಿಸಿವೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಎಂಬ ಹಠದ ಪರಿಣಾಮವಾಗಿ, ಪ್ರಶ್ನೆ ಪತ್ರಿಕೆಗಳು ವ್ಯವಸ್ಥಿತ ಜಾಲಗಳ ಮೂಲಕ ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗುತ್ತಿರುವುದು ಪರೀಕ್ಷಾ ಮಂಡಳಿಗಳ ಸಾಂಸ್ಥಿಕ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವು, ಕಪ್ಪುಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಖರೀದಿಸುವ ಪ್ರಭಾವಿ ತರಬೇತಿ ಕೇಂದ್ರಗಳು ಹಾಗೂ ದಲ್ಲಾಳಿಗಳ ಪಾಲಾಗುತ್ತಿದೆ. ಇಂತಹ ವ್ಯವಸ್ಥಿತ ಹಗರಣಗಳು ಕೇವಲ ಅರ್ಹ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಷ್ಟೇ ಅಲ್ಲ; ಇಡೀ ಶೈಕ್ಷಣಿಕ ಆಡಳಿತದ ಮೇಲಿರುವ ಸಾರ್ವಜನಿಕ ವಿಶ್ವಾಸಾರ್ಹತೆಯನ್ನೇ ಧ್ವಂಸಗೊಳಿಸಿವೆ. ಪಾರದರ್ಶಕತೆಯ ಹೆಸರಿನಲ್ಲಿ ತರಲಾದ ವ್ಯವಸ್ಥೆಯು ಇಂದು ಭ್ರಷ್ಟಾಚಾರದ ಅತಿ ದೊಡ್ಡ ಆಡುಂಬೊಲವಾಗಿ ಮಾರ್ಪಟ್ಟಿರುವುದು ಈ ಪರೀಕ್ಷಾ ಮಾದರಿಯ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ.
3. ವ್ಯವಸ್ಥೆ ಸೃಷ್ಟಿಸಿದ ಆತ್ಮಹತ್ಯೆಗಳು ಮತ್ತು ಮಾನಸಿಕ ಹಿಂಸೆ (Institutional Tragedies and Mental Trauma)
ನೀಟ್ ಹೇರಿರುವ ಕಠಿಣ ಪರೀಕ್ಷಾ ಸ್ವರೂಪ ಮತ್ತು ಪದೇಪದೇ ಉಂಟಾಗುವ ಸಾಂಸ್ಥಿಕ ಲೋಪಗಳು ದೇಶದ ಯುವ ಸಮುದಾಯದ ಮೇಲೆ ಅಭೂತಪೂರ್ವ ಮಾನಸಿಕ ಒತ್ತಡವನ್ನು ಸೃಷ್ಟಿಸಿವೆ. ಇವು ಕೇವಲ ವೈಯಕ್ತಿಕ ವೈಫಲ್ಯದ ಸಾವುಗಳಲ್ಲ, ಬದಲಿಗೆ ಇವುಗಳನ್ನು “ಸಾಂಸ್ಥಿಕ ಕೊಲೆಗಳು” (Institutional Murders) ಎಂದು ಕರೆಯಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬನ ಸುದೀರ್ಘ ವರ್ಷಗಳ ಶ್ರಮ, ಅರ್ಹತೆ ಮತ್ತು ಇಡೀ ಬದುಕಿನ ಸಾಮರ್ಥ್ಯವನ್ನು ಕೇವಲ ಮೂರು ಗಂಟೆಗಳ ಒಂದು ಅಮಾನವೀಯ ವಸ್ತುನಿಷ್ಠ (MCQ) ಪರೀಕ್ಷೆಯಲ್ಲಿ ನಿರ್ಧರಿಸುವ ಕ್ರೂರ ನಡೆ ಇದು. ಕೃಷಿ ಅಥವಾ ಶ್ರಮಿಕ ಹಿನ್ನೆಲೆಯಿಂದ ಬಂದ ಪೋಷಕರು ತಮ್ಮ ಇಡೀ ಜೀವಮಾನದ ದುಡಿಮೆಯನ್ನು ಸಾಲದ ರೂಪದಲ್ಲಿ ಸುರಿದು ಮಕ್ಕಳನ್ನು ಓದಿಸುತ್ತಿರುವಾಗ, ಆ ಸಾಲದ ಹೊರೆ, ಪರೀಕ್ಷಾ ಅಕ್ರಮಗಳ ಆತಂಕ ಮತ್ತು ಸಾಮಾಜಿಕ ನಿರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಅತಿಯಾದ ಮಾನಸಿಕ ಹಿಂಸೆಯಾಗಿ ರೂಪಾಂತರಗೊಳ್ಳುತ್ತವೆ. ತಮಿಳುನಾಡಿನ ಅನಿತ್ಯಾಳಿಂದ ಹಿಡಿದು ದೇಶದ ನೂರಾರು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಹಾಗೂ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗಳ ಸಾಲು ಸಾಲು ಆತ್ಮಹತ್ಯೆಗಳು ಈ ಕಠಿಣ ಶೈಕ್ಷಣಿಕ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಇಡೀ ಬದುಕಿನ ಸೋಲು ಎಂಬಂತೆ ಬಿಂಬಿಸುವ ಇಂತಹ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯು, ಶಿಕ್ಷಣದ ಮೂಲ ಆಶಯವಾದ ವ್ಯಕ್ತಿತ್ವ ವಿಕಸನವನ್ನು ಕೊಲೆ ಮಾಡಿ ಯುವ ಮನಸ್ಸುಗಳಲ್ಲಿ ಕೀಳರಿಮೆ ಹಾಗೂ ತೀವ್ರ ಖಿನ್ನತೆಯನ್ನು ಬಿತ್ತುತ್ತಿದೆ.
4. ಪ್ರಾದೇಶಿಕ ಪ್ರಾಬಲ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ಪ್ರಹಾರ
ಭಾರತೀಯ ಸಂವಿಧಾನದ ಆಶಯದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಜಂಟಿ ಪಟ್ಟಿಯಲ್ಲಿದ್ದು (Concurrent List), ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಿಕೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗಿದೆ. ಆದರೆ ನೀಟ್ ಪದ್ಧತಿಯು ರಾಜ್ಯಗಳ ಈ ಸಾಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತೆರಿಗೆದಾರರ ಹಣದಿಂದ, ತಮ್ಮದೇ ಭೂಮಿಯಲ್ಲಿ ನಿರ್ಮಿಸಿದ ವೈದ್ಯಕೀಯ ಕಾಲೇಜುಗಳ ಸೀಟುಗಳ ಮೇಲಿನ ನಿಯಂತ್ರಣವನ್ನು ಕೇಂದ್ರದ ಏಜೆನ್ಸಿಯೊಂದು ಕಸಿದುಕೊಂಡಿರುವುದು ಒಕ್ಕೂಟ ವ್ಯವಸ್ಥೆಯ (Federalism) ಮೇಲಿನ ಗಂಭೀರ ಪ್ರಹಾರವಾಗಿದೆ. ಇದರ ಪರಿಣಾಮವಾಗಿ, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳ ಅರಿವಿಲ್ಲದ ಭಿನ್ನ ಪ್ರಾಂತ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಅಥವಾ ನಿರ್ದಿಷ್ಟ ರಾಜ್ಯಗಳ ಗ್ರಾಮೀಣ ಕೋಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ರೋಗಿಗಳೊಂದಿಗೆ ಭಾಷಾ ಸಂವಹನ ನಡೆಸಲಾಗದ ಇಂತಹ ವೈದ್ಯರಿಂದಾಗಿ ಗ್ರಾಮೀಣ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು (Public Healthcare) ಸಂಪೂರ್ಣವಾಗಿ ದುರ್ಬಲಗೊಳ್ಳುತ್ತಿದೆ. ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವೈದ್ಯರ ಲಭ್ಯತೆಯನ್ನು ಕಡಿತಗೊಳಿಸುವ ಮೂಲಕ ಈ ವ್ಯವಸ್ಥೆಯು ಪ್ರಾದೇಶಿಕ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ಸಮತೋಲನವನ್ನು ಏರುಪೇರು ಮಾಡಿದೆ.
5. ಜಾತೀಯತೆಯ ಕರಾಳತೆ ಮತ್ತು ಯಜಮಾನಿಕೆಯ ಮರುಸ್ಥಾಪನೆ (Perpetuation of Caste Hegemony)
ಸಮಕಾಲೀನ ಸನ್ನಿವೇಶದಲ್ಲಿ ನೀಟ್ ಪರೀಕ್ಷೆಯು “ಮೆರಿಟ್” (Meritocracy) ಮತ್ತು “ಪ್ರತಿಭೆ” ಎಂಬ ಅತ್ಯಂತ ಆಕರ್ಷಕ ಮುಖವಾಡವನ್ನು ಧರಿಸಿ ಬಂದಿದೆ. ಆದರೆ, ವಿಮರ್ಶಾತ್ಮಕವಾಗಿ ನೋಡಿದಾಗ ಈ ‘ಮೆರಿಟ್’ ಎನ್ನುವುದು ಕೇವಲ ವೈಯಕ್ತಿಕ ಸಾಮರ್ಥ್ಯವಲ್ಲ, ಬದಲಿಗೆ ಅದು ತಲೆಮಾರುಗಳಿಂದ ಒಂದು ನಿರ್ದಿಷ್ಟ ವರ್ಗವು ಅನುಭವಿಸಿಕೊಂಡು ಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳದ (Cultural Capital) ಹೊಸ ರೂಪವೇ ಹೊರತು ಬೇರೇನಲ್ಲ. ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿ, ಈಗಷ್ಟೇ ಮೊದಲ ತಲೆಮಾರಿನ ಶಿಕ್ಷಣ ಪಡೆಯುತ್ತಿರುವ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳಿಗೆ ಆಧುನಿಕ ಇಂಗ್ಲಿಷ್ ತರಬೇತಿ, ದುಬಾರಿ ಕೋಚಿಂಗ್ ಅಥವಾ ಇತ್ತೀಚಿನ ಪತ್ರಿಕೆ ಸೋರಿಕೆಯಂತಹ ಕರಾಳ ದಂಧೆಗಳ ರಹಸ್ಯ ಜಾಲಗಳಿಗೆ ಪ್ರವೇಶ ಪಡೆಯುವ ಸಾಮಾಜಿಕ ಹಿನ್ನೆಲೆ ಇರುವುದಿಲ್ಲ. ನೀಟ್ ವ್ಯವಸ್ಥೆಯು ಇಂತಹ ಐತಿಹಾಸಿಕ ಅಸಮಾನತೆಗಳನ್ನು ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತು, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ತಾಂತ್ರಿಕವಾಗಿ ತಲೆಕೆಳಗು ಮಾಡುತ್ತಿದೆ. ಇದರ ಪರಿಣಾಮವಾಗಿ, ವೈದ್ಯಕೀಯ ಕ್ಷೇತ್ರವು ಸಮಾಜದ ಬಹುಪಾಲು ಶ್ರಮಿಕ ಮತ್ತು ತಳಸಮುದಾಯಗಳ ಕೈತಪ್ಪಿ, ಮತ್ತೆ ಕೇವಲ ಆಯ್ದ ಕೆಲವು ಉನ್ನತ ವರ್ಗಗಳ ಯಜಮಾನಿಕೆಯ (Hegemony) ತಾಣವಾಗಿ ಬದಲಾಗುತ್ತಿದೆ. ಇದು ಸಾಂಪ್ರದಾಯಿಕ ಜಾತೀಯತೆಯ ಶ್ರೇಣೀಕೃತ ಕರಾಳತೆಯನ್ನು ಅತ್ಯಂತ ಸೂಕ್ಷ್ಮ ಹಾಗೂ ಆಧುನಿಕ ಶೈಕ್ಷಣಿಕ ನಿಯಮಗಳ ಮೂಲಕ ಪುನರುತ್ಪಾದಿಸುವ ಅಪಾಯಕಾರಿ ನೆಲೆಯಾಗಿದೆ.
6. ಸಮನ್ವಯದ ದಾರಿ….
ನೀಟ್ ಸೃಷ್ಟಿಸಿರುವ ಈ ಸಾಂಸ್ಥಿಕ, ಆರ್ಥಿಕ ಮತ್ತು ಸಾಮಾಜಿಕ ಅವಾಂತರಗಳು ನಮಗೆ ಶಿಕ್ಷಣ ವ್ಯವಸ್ಥೆಯ ಮರುಚಿಂತನೆಯ ತುರ್ತು ಅಗತ್ಯವನ್ನು ನೆನಪಿಸುತ್ತವೆ. ಪ್ರಜಾಪ್ರಭುತ್ವದ ನಿಜವಾದ ಆಶಯವಿರುವುದು ಕೇವಲ ಕಾಗದದ ಮೇಲಿನ ತಾಂತ್ರಿಕ “ಏಕರೂಪತೆ”ಯಲ್ಲಲ್ಲ, ಬದಲಿಗೆ ಭಿನ್ನ ಹಿನ್ನೆಲೆಯ ಜನರನ್ನು ಒಳಗೊಳ್ಳುವ “ಸಮಾನತೆ” ಮತ್ತು “ಸಾಮಾಜಿಕ ನ್ಯಾಯ”ದಲ್ಲಿ ಮಾತ್ರ. ಕೇವಲ ಬಂಡವಾಳಶಾಹಿ ಮಾರುಕಟ್ಟೆಯ, ಕೋಚಿಂಗ್ ಮಾಫಿಯಾಗಳ ಮತ್ತು ಪ್ರಶ್ನೆ ಪತ್ರಿಕೆ ಮಾರಾಟ ಮಾಡುವ ಕರಾಳ ಜಾಲಗಳ ಹಿತಾಸಕ್ತಿಯನ್ನು ಕಾಯುವ ಇಂತಹ ಪ್ರವೇಶ ಪರೀಕ್ಷೆಗಳು ವೈದ್ಯಕೀಯ ಕ್ಷೇತ್ರವನ್ನು ಕೇವಲ ವ್ಯಾಪಾರೀಕರಣದ ಕೇಂದ್ರವನ್ನಾಗಿ ಮಾಡುತ್ತವೆಯೇ ಹೊರತು ಮಾನವೀಯತೆಯುಳ್ಳ ವೈದ್ಯರನ್ನು ಸೃಷ್ಟಿಸಲಾರವು. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಸ್ವಾಯತ್ತತೆ, ಬಹುತ್ವ ಮತ್ತು ತಳಸಮುದಾಯಗಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸಲು ನೀಟ್ ಮಾದರಿಯ ಕೇಂದ್ರೀಕೃತ ಪರೀಕ್ಷೆಗಳ ತಾರತಮ್ಯದ ನೆಲೆಗಳನ್ನು ತಕ್ಷಣವೇ ಮರುಪರಿಶೀಲಿಸಬೇಕಾಗಿದೆ; ಇಲ್ಲದಿದ್ದರೆ ಇದು ದೇಶದ ಒಕ್ಕೂಟ ರಚನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡುವುದು ಖಂಡಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ6 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ


