ದಿನದ ಸುದ್ದಿ
ಆರ್ಥಿಕ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಸರಕಾರದ ನೆರವು ; ನೈಜ ಫಲಾನುಭವಿಗಳಿಗೆ ಪರಿಹಾರಧನ ಸದುಪಯೋಗವಾಗಲಿ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಸುದ್ದಿದಿನ,ದಾವಣಗೆರೆ: ಕೋವಿಡ್ 2ನೇ ಅಲೆಯ ಲಾಕ್‍ಡೌನ್ ಪರಿಣಾಮ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿವಿಧ ವಲಯದ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರವು 2 ಸಾವಿರ ರೂ. ಆರ್ಥಿಕ ನೆರವು ಘೋಷಿಸಿದ್ದು ನೆರವು ಪಡೆಯಲು ಕಾರ್ಮಿಕ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಸಂಕಷ್ಟದಲ್ಲಿರುವ ನೈಜ ಫಲಾನುಭವಿಗಳು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ನೀಡುವ ಕುರಿತು ಪೂರ್ವಪರಿಶೀಲನಾ ಸಭೆಯಲ್ಲಿ ವಿವಿಧ ಅಸಂಘಟಿತ ವಲಯದ ಪದಾಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಅಗಸರು, ಕ್ಷೌರಿಕರು, ಟೈಲರ್‍ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್ ಗಳು, ಕಮ್ಮಾರರು ಹಾಗೂ ಗೃಹ ಕಾರ್ಮಿಕರು ಈ 11 ವಲಯದ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಯೋಜನೆಯ ಮೂಲಕ ಒಂದು ಬಾರಿ ಪರಿಹಾರವಾಗಿ 2 ಸಾವಿರ ರೂ. ಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ ಎಂದರು.
2020 ನೇ ಸಾಲಿನ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ನೆರವು ಪಡೆದ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಈ ಸಾಲಿನಲ್ಲಿ ನೆರವು ಪಡೆಯದ ಕುಟುಂಬದ ಓರ್ವ ಕಾರ್ಮಿಕ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ನೀಡಲು ಹಾಗೂ ಸಲ್ಲಿಸಲು ನಗರದಲ್ಲಿ ಪ್ರತ್ಯೇಕವಾಗಿ ವಿಶೇಷ ಕೌಂಟರ್ ಸ್ಥಾಪಿಸಬೇಕು ಹಾಗೂ ಅಗತ್ಯ ಸಿಬ್ಬಂದಿಗಳನ್ನು ಇದಕ್ಕಾಗಿಯೇ ನೇಮಿಸಿ, ಜನರಿಗೆ ತೊಂದರೆಯಾಗದಂತೆ ಉದ್ಯೋಗ ಪ್ರಮಾಣ ಪತ್ರ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ.ಪಿ.ಮುದಜ್ಜಿ ಪ್ರತಿಕ್ರಿಯಿಸಿ, ನಗರದಲ್ಲಿ ಈಗಾಗಲೇ ಒಟ್ಟು ಮೂರು ಕಡೆ ವಿಶೇಷವಾಗಿ ಕೌಂಟರ್ ಸ್ಥಾಪಿಸಲಾಗಿದೆ. ರಾಜೀವ್ ಗಾಂಧಿ ನಗರ, ಮಹಾನಗರಪಾಲಿಕೆ ಕಾರ್ಯಲಯ ಹಾಗೂ ಶಾಮನೂರು ರಸ್ತೆಯಲ್ಲಿರುವ ಆಶ್ರಯ ರಸ್ತೆ ಪಕ್ಕದಲ್ಲಿ ಒಂದು ಕಚೇರಿಯನ್ನು ತೆರೆದಿದ್ದು ಈ ಮೂರು ಕಡೆ ಉದ್ಯೋಗ ಪ್ರಮಾಣ ಪತ್ರ ನೀಡಲಾಗುತ್ತಿದೆ. ಹಾಗೂ ಪ್ರತಿ ಕಚೇರಿಗೂ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ, ಈ ಮೂರು ವಿಶೇಷ ಕಾರ್ಯಾಲಯದ ಮುಂದೆ ಜನರಿಗೆ ತಿಳಿಯುವಂತೆ ಫ್ಲೆಕ್ಸ್ ಪ್ರದರ್ಶನ ಫಲಕ ಹಾಕಬೇಕು. ಮಹಾನಗರಪಾಲಿಕೆ ಕಾರ್ಯಾಲಯದಲ್ಲಿ ಸಿಬ್ಬಂದಿಗಳನ್ನು ನೇಮಿಸಬೇಕು. ಸಂಬಂಧಿಸಿದ ಎಲ್ಲ ಅಧಿಕಾರಿಗಳು ಒಂದು ಸಮಯವನ್ನು ನಿಗದಿಪಡಿಸಿಕೊಂಡು ಆ ನಿರ್ದಿಷ್ಟ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದು, ಅರ್ಜಿದಾರರಿಗೆ ಉದ್ಯೋಗ ಪ್ರಮಾಣ ಪತ್ರ ನೀಡಬೇಕು. ಜನರನ್ನು ವಿನಾಕಾರಣ ಸುಮ್ಮನೆ ಕಾಯಿಸುವುದಾಗಲೀ, ಅನಗತ್ಯವಾಗಿ ಕಚೇರಿಗೆ ಅಲೆದಾಡುವ ರೀತಿ ಮಾಡಬಾರದು. ವಿಶೇಷ ಅಭಿಯಾನದ ರೀತಿಯಲ್ಲಿ ಈ ಕೆಲಸ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಟ್ಟಡ ಕಾರ್ಮಿಕರಿಗೆ ಈ ಯೋಜನೆಯಡಿ ಅವಕಾಶ ಇರುವುದಿಲ್ಲ. ಅವರಿಗಾಗಿ ಪ್ರತ್ಯೇಕ ಯೋಜನೆ ಇದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ವೃತ್ತಿಯಲ್ಲಿ ತೊಡಗಿದಲ್ಲಿ ಒಬ್ಬರು ಮಾತ್ರ ಪರಿಹಾರ ಪಡೆಯಲು ಅರ್ಹರಿರುತ್ತಾರೆ. ಹಾಗೂ ಒಬ್ಬ ವ್ಯಕ್ತಿ ಅಗಸರು ಎಂದು ಅರ್ಜಿ ಸಲ್ಲಿಸಿ ತದನಂತರ ಅಕ್ಕಸಾಲಿಗ, ಹಮಾಲಿ ಎಂದೋ ಅರ್ಜಿ ಸಲ್ಲಿಸಲು ಬರುವುದಿಲ್ಲ. ಒಂದು ಬಿಪಿಎಲ್ ಕಾರ್ಡ್ ಗೆ ಒಬ್ಬರಿಗೆ ಮಾತ್ರ ಅವಕಾಶ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್ ಮಾತನಾಡಿ, ಜಿಲ್ಲೆಯಲ್ಲಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಜೂ.08 ರವರೆಗೆ 7306 ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದು ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಅವರ ಖಾತೆಗೆ ನೇರವಾಗಿ ಪರಿಹಾರವನ್ನು ಜಮಾ ಮಾಡಲಾಗುತ್ತದೆ. ಸೇವಾ ಸಿಂಧು ಪೋರ್ಟಲ್‍ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಜೂ.13 ರವರೆಗೆ 6452 ಅರ್ಜಿಗಳು ಸ್ವೀಕೃತಗೊಂಡಿರುತ್ತವೆ. 406 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು 35 ಅರ್ಜಿಗಳನ್ನು ವಿವಿಧ ಕಾರಣಗಳಿಗೆ ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯೋಜನೆಯಡಿ ಸರ್ಕಾರದ ನೆರವನ್ನು ಅರ್ಹರು ಮಾತ್ರ ಪಡೆದುಕೊಳ್ಳಬೇಕು. ಸುಳ್ಳು ಮಾಹಿತಿ ಅಥವಾ ದಾಖಲೆ ನೀಡಿ, ಯೋಜನೆ ದುರುಪಯೋಗ ಪಡಿಸಿಕೊಳ್ಳುವವರು ದಾಖಲೆ ಸಮೇತ ಸಿಕ್ಕಿಬಿದ್ದರೆ ಅಂತಹವರ ವಿರುದ್ಧÉ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾಯ್ದೆ ಐಪಿಸಿ 420 ರಡಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಅರ್ಜಿ ಸಲ್ಲಿಕೆಗೆ ಷರತ್ತುಗಳು
ಪರವಾನಿಗೆ ಪಡೆದಿರುವ ಸಂಸ್ಥೆಯಲ್ಲಿ 4 ಕ್ಕಿಂತ ಹೆಚ್ಚು ಕಾರ್ಮಿಕರು, ಪರವಾನಿಗೆಯನ್ನು ಪಡೆಯದೆ ಇರುವ ಸಂಸ್ಥೆಯಲ್ಲಿ 2ಕ್ಕಿಂತ ಹೆಚ್ಚು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಲ್ಲಿ ತಪಾಸಣೆ ಕಡ್ಡಾಯವಾಗಿರುತ್ತದೆ. ಬೇರೆ ರಾಜ್ಯದ ಕಾರ್ಮಿಕರು ಸಹ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಅಂತಹ ಫಲಾನುಭವಿ ಕಾರ್ಮಿಕರು ಕರ್ನಾಟಕ ಸರ್ಕಾರವು ನೀಡುವ ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಕುಟುಂಬದ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುವುದು. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರ ವಯೋಮಿತಿಯನ್ನು 18-65 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಈ ಯೋಜನೆಯ ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅರ್ಜಿ ಸಲ್ಲಿಸುವ ಕಾರ್ಮಿಕರು ವೃತ್ತಿ ನಿರ್ವಹಿಸುತ್ತಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಉದ್ಯೋಗ ಪ್ರಮಾಣ ಪತ್ರ ಪಡೆದಿರಬೇಕು.
ಉದ್ಯೋಗ ಧೃಡೀಕರಣ ನೀಡುವ ಅಧಿಕಾರಿಗಳು
ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯ್ತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಸಿಲ್ದಾರರು, ಉಪ ತಹಸಿಲ್ದಾರರು, ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಹಮಾಲಿ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು ಮೇಲ್ಕಂಡ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ, ಮಂಡಳಿ, ನಿಗಮದ ಅಧಿಕೃತ ಅಧಿಕಾರಿಗಳು, ಯಾವುದೇ ಇಲಾಖೆಯ ಪತ್ರಾಂಕಿತ ಅಧಿಕಾರಿಗಳಿಂದ ಉದ್ಯೋಗ ಪತ್ರ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಫಲಾನುಭವಿ ಕಾರ್ಮಿಕರು ಸೇವಾಸಿಂಧು ಪೋರ್ಟಲ್‍ನಲ್ಲಿ ಮಾತ್ರ ಅಗತ್ಯ ಮಾಹಿತಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಿಗಧಿ ಪಡಿಸಿದ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡುವುದು. ಆಧಾರ್ ಕಾರ್ಡ್, ವಿಳಾಸ ದೃಢಿಕರಣ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಬಿಪಿಎಲ್ ಕಾರ್ಡ್, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಖಾತೆಯ ವಿವರ, ಸ್ವಯಂ ಘೋಷಣೆ, ಅರ್ಜಿದಾರರ ವೃತ್ತಿಯ ಕುರಿತು ಉದ್ಯೋಗ ಪ್ರಮಾಣ ಪತ್ರಗಳನ್ನು ಸೇವಾ ಸಿಂಧು ಪೋರ್ಟಲ್‍ನಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ.ಪಿ.ಮುದಜ್ಜಿ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ನಜ್ಮ.ಜಿ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ.ಜಿ., ನಗರಸಭೆ ಪೌರಾಯುಕ್ತೆ ಲಕ್ಷ್ಮೀ.ಎಸ್., ಎಪಿಎಂಸಿ ಕಾರ್ಯದರ್ಶಿ ಕೆ.ಸಿ.ದೊರೆಸ್ವಾಮಿ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಜೆ.ಪ್ರಭು ಸೇರಿದಂತೆ ವಿವಿಧ ವಲಯದ ಅಸಂಘಟಿತ ಕಾರ್ಮಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

