Connect with us

ಬಹಿರಂಗ

ರೈತ ಪ್ರತಿಭಟನೆಯ ಜಾಗತಿಕ ಆಯಾಮ

Published

on

 

  • ಮೂಲ : ಉತ್ಸಾ ಪಟ್ನಾಯಕ್( ಹಿಂದೂ ದಿನಪತ್ರಿಕೆ 30-12-20) ಅನುವಾದ : ನಾ ದಿವಾಕರ

ರೈತರೊಂದಿಗೆ ಮಾತುಕತೆಯನ್ನೂ ನಡೆಸದೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿಯೂ ಚರ್ಚೆ ನಡೆಸದೆ ಅವಸರದಲ್ಲಿ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೇಶದ ರೈತರು ನಡೆಸುತ್ತಿರುವ ಆಂದೋಲನ ಎರಡನೆ ತಿಂಗಳಿಗೆ ಕಾಲಿಟ್ಟಿದೆ. ರೈತರ ಈ ಆಂದೋಲನ ಚಾರಿತ್ರಿಕ ಮಹತ್ವ ಪಡೆದಿದೆ.

ರೈತಾಪಿಯ ಈ ಮುಷ್ಕರ ಕೇವಲ ಕನಿಷ್ಠ ಬೆಂಬಲ ಬೆಲೆಗೆ ಸೀಮಿತವಾದದ್ದಲ್ಲ. ಸಾರ್ವಜನಿಕ ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆ ಮತ್ತು ವಿತರಣೆಯ ವ್ಯವಸ್ಥೆಯ ಉಳಿವಿಗೂ ಈ ಹೋರಾಟ ನಿರ್ಣಾಯಕವಾಗಿದೆ. ಭಾರತದ ಆಹಾರ ಕಣಜ ಎಂದೇ ಹೇಳಬಹುದಾದ ಉತ್ತರ ಭಾರತದ ಆಹಾರ ಧಾನ್ಯ ಉತ್ಪಾದನೆಯ ಆರ್ಥಿಕ ಸಕ್ಷಮತೆಯನ್ನು ಕಾಪಾಡದೆ ಹೋದಲ್ಲಿ ಇಡೀ ದೇಶದ ಸಾರ್ವಜನಿಕ ಆಹಾರ ಸಂಗ್ರಹಣೆ ವಿತರಣೆಯ ಪ್ರಕ್ರಿಯೆ ದುರ್ಬಲವಾಗುತ್ತದೆ. ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಏನೇ ಕೊರತೆ, ಲೋಪದೋಷಗಳಿದ್ದರೂ ಇದು ದೇಶದ ಬಹುಸಂಖ್ಯೆಯ ಜನರಿಗೆ ಜೀವನಾಧಾರ ಒದಗಿಸುತ್ತಿರುವುದನ್ನು ಇಲ್ಲಿ ಗಮನಿಸಬೇಕಿದೆ.

ವಸಾಹತುಕಾಲ ಸ್ಥಿತಿಯ ಮರುನಿರ್ಮಾಣ

ಉತ್ತರದ ಔದ್ಯಮಿಕ ದೇಶಗಳಾದ ಅಮೆರಿಕ, ಕೆನಡಾ ಮತ್ತು ಐರೋಪ್ಯ ಸಂಘಟನೆಯ ರಾಷ್ಟ್ರಗಳಲ್ಲಿ ಅಲ್ಲಿನ ಗ್ರಾಹಕರಿಂದಲೇ ಹೆಚ್ಚಿನ ಬೇಡಿಕೆ ಇರುವ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ದೇಶಗಳ ಹವಾಮಾನಕ್ಕೆ ಅನುಗುಣವಾಗಿ ಅಲ್ಲಿನ ಏಕ ಬೆಳೆಯ ಭೂಮಿಯಲ್ಲಿ ಬೆಳೆಯಲಾಗುವ ಆಹಾರ ಧಾನ್ಯಗಳು ಮತ್ತು ಹೈನು ಉತ್ಪನ್ನಗಳು ಹೇರಳವಾಗಿ ಸಂಗ್ರಹವಾಗಿರುತ್ತವೆ.

ಈ ಧಾನ್ಯಗಳಿಗೆ ಮತ್ತು ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಈ ದೇಶಗಳಿಗೆ ಅನಿವಾರ್ಯವಾಗಿರುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಶ್ರೀಮಂತ ರಾಷ್ಟ್ರಗಳು ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದ್ದು ಆಹಾರ ಧಾನ್ಯ ಸಂಗ್ರಹಣೆಯ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸುತ್ತಿವೆ.

ಬದಲಾಗಿ ಈ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಿಂದ ಆಹಾರಧಾನ್ಯಗಳನ್ನು ಆಮದು ಮಾಡಿಕೊಂಡು,ಇಲ್ಲಿನ ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಗುತ್ತಿಗೆ ಕೃಷಿ ಪದ್ಧತಿಗೆ ಒಳಪಡಿಸಿ ರಫ್ತು ಬೆಳೆಗಳನ್ನು ಬೆಳೆಯುವಂತೆ ಒತ್ತಡ ಹೇರಲಾಗುತ್ತಿದೆ. ಈ ರೀತಿಯ ಒತ್ತಡಕ್ಕೆ ಕಾರಣವೇನೆಂದರೆ ಈ ಔದ್ಯಮಿಕ ರಾಷ್ಟ್ರಗಳಲ್ಲಿ ಭಾರತದಲ್ಲಿ ಬೆಳೆಯುವಂತಹ ಆಹಾರ ಧಾನ್ಯಗಳನ್ನು ಬೆಳೆಯಲಾಗುವುದಿಲ್ಲ. ಅಂದರೆ ವಸಾಹತು ಕಾಲಘಟ್ಟದ ಆರ್ಥಿಕ ಸನ್ನಿವೇಶವನ್ನು ಪುನರ್ ಸೃಷ್ಟಿಸುವತ್ತ ಔದ್ಯಮಿಕ ರಾಷ್ಟ್ರಗಳು ಮುನ್ನಡೆದಿವೆ.

1990ರ ದಶಕದಲ್ಲಿ ಫಿಲಿಪೈನ್ಸ್ ಮತ್ತು ಹತ್ತು ವರ್ಷಗಳ ನಂತರ ಆಫ್ರಿಕಾ ಖಂಡದ ಬೋಸ್ಟ್ವಾನಾ ದೇಶಗಳು ಈ ರೀತಿಯ ಒತ್ತಡಕ್ಕೆ ಬಲಿಯಾಗಿದ್ದವು. ಈ ಸಂದರ್ಭದಲ್ಲೇ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಧಾನ್ಯಗಳ ಬೆಳೆಯನ್ನು ಎಥನಾಲ್ ಉತ್ಪಾದನೆಗೆ ಬಳಸಲು ಆರಂಭಿಸಿದ್ದರ ಪರಿಣಾಮವಾಗಿ 2007ರ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಗಳು ಗಗನಕ್ಕೇರಿದವು. ಆಹಾರ ಧಾನ್ಯಗಳಿಗಾಗಿ ಆಮದು ಪದಾರ್ಥಗಳನ್ನೇ ಅವಲಂಬಿಸಿದ್ದ 37 ದೇಶಗಳಲ್ಲಿ ಹಾಹಾಕಾರ ಉಂಟಾಗಿದ್ದು, ಆಹಾರಕ್ಕಾಗಿ ದಂಗೆಗಳು ಉಂಟಾಗಿದ್ದವು. ನಗರ ಪ್ರದೇಶದ ಜನರು ಹೆಚ್ಚಿನ ಬಡತನಕ್ಕೆ ನೂಕಲ್ಪಟ್ಟರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ ಭದ್ರತೆ ಅತ್ಯಂತ ಮಹತ್ವದ ಸಂಗತಿಯಾಗಿದ್ದು ಇದನ್ನು ಜಾಗತಿಕ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುವುದು ಅಪಾಯಕಾರಿಯಾಗುತ್ತದೆ. ಆದಾಗ್ಯೂ ಆಹಾರ ಭದ್ರತೆಯನ್ನು ಸಾಧಿಸಲು ಈ ದೇಶಗಳ ಸಾರ್ವಜನಿಕ ಆಹಾರ ಸಂಗ್ರಹಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಒಂದು ದಶಕದ ಹಿಂದೆಯಷ್ಟೇ ಭಾರತ ಈ ನಿಟ್ಟಿನಲ್ಲಿ ಜಾಗೃತವಾಗಿ ತನ್ನ ಆಹಾರ ಸಂಗ್ರಹವನ್ನು ಸಂರಕ್ಷಿಸಲು ಯಶಸ್ವಿಯಾಗಿತ್ತು.

2008ರ ಬೆಲೆ ಏರಿಕೆಗೂ ಮುನ್ನ ಆರು ವರ್ಷಗಳ ಕಾಲ ತಟಸ್ಥವಾಗಿದ್ದ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆರ್ಥಿಕ ಪುನಶ್ಚೇತನದ ಪರಿಣಾಮ ಪಂಜಾಬ್ ನಲ್ಲಿ ಜಡಗಟ್ಟಿದ್ದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಹುಸಂಖ್ಯೆಯ ಬಡಜನತೆಯನ್ನು “ ಬಡತನ ರೇಖೆಯ ಕೆಳಗಿರುವ ” ಪಡಿತರ ವ್ಯವಸ್ಥೆಯಿಂದ ಹೊರಗುಳಿಯುವಂತೆ ಮಾಡಿದ ಪರಿಣಾಮ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಲಿಲ್ಲ. 2016ರ ನೋಟು ರದ್ದತಿಯಿಂದ ಉಂಟಾದ ನಿರುದ್ಯೋಗ ಮತ್ತು 2020ರ ಕೋವಿದ್ ಪರಿಣಾಮದಿಂದ ಸೃಷ್ಟಿಯಾದ ಉದ್ಯೋಗ ಕೊರತೆ ಆಹಾರ ಧಾನ್ಯಗಳ ಒಟ್ಟಾರೆ ಬೇಡಿಕೆಯ ಪ್ರಮಾಣ ಚಾರಿತ್ರಿಕ ಕುಸಿತ ಕಾಣುವಂತೆ ಮಾಡಿವೆ.

ಭಾರತದ ರೈತಾಪಿ ಯಾವುದೇ ತರ್ಕಬದ್ಧ ಕಾರಣಗಳೇ ಇಲ್ಲದೆ ಅಪ್ರಾಮಾಣಿಕ ವ್ಯಾಪಾರದ ತಂತ್ರಗಾರಿಕೆಗಳಿಗೆ ಬಲಿಯಾಗಬೇಕಾಯಿತು. ಜಾಗತಿಕ ಬೆಲೆಗಳ ಏರುಪೇರುಗಳ ಪರಿಣಾಮ ಭಾರತದ ರೈತರು ತೀವ್ರ ಸಾಲದ ಹೊರೆಗೆ ಸಿಲುಕಿ ಸಂಕಷ್ಟಕ್ಕೀಡಾಗಬೇಕಾಯಿತು. ಪಂಜಾಬ್ ನ ಒಂದು ಗ್ರಾಮದಲ್ಲಿ ಆತ್ಮಹತ್ಯೆಯಿಂದ ತಮ್ಮ ಗಂಡಂದಿರನ್ನು ಕಳೆದುಕೊಂಡ 59 ವಿಧವೆಯರಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳೊಡನೆ ಭಾರತ ಪೈಪೋಟಿ ನಡೆಸುವುದು ತರವಲ್ಲ. ಏಕೆಂದರೆ 1990ರ ದಶಕದಲ್ಲಿ ಈ ಶ್ರೀಮಂತ ರಾಷ್ಟ್ರಗಳು ತಮ್ಮ ಬೆಂಬಲ ಬೆಲೆ ಪದ್ಧತಿಯನ್ನು ಪರಿಷ್ಕರಿಸುವ ಮೂಲಕ ಅಲ್ಲಿನ ರೈತರಿಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲು ಆರಂಭಿಸಿದ್ದವು.

ಅಂತಾರಾಷ್ಟ್ರೀಯ ಕೃಷಿ ಒಡಂಬಡಿಕೆಯ ಸಹಾಯಧನವನ್ನು ಕಡಿಮೆ ಮಾಡುವ ಒಪ್ಪಂದದ ಅನುಸಾರ ಈ ರೀತಿ ನೇರ ನಗದು ನೀಡುವುದು ನಿಯಮಗಳ ಉಲ್ಲಂಘನೆಯಾಗಿದ್ದರೂ, ಇದು ಒಡಂಬಡಿಕೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳದಂತೆ ಈ ದೇಶಗಳು ಎಚ್ಚರವಹಿಸಿದ್ದವು. ಇದರಿಂದ ಉಂಟಾಗಬಹುದಾದ ಪರಿಣಾಮವನ್ನು ಗಮನಿಸದೆಯೇ ಭಾರತ ಮತ್ತಿತರ ರಾಷ್ಟ್ರಗಳು ಈ ಒಡಂಬಡಿಕೆಗೆ ಸಹಿ ಹಾಕಿದ್ದವು.

ಅಮೆರಿಕದ 20 ಲಕ್ಷ ರೈತರಿಗೆ ನೀಡುವ ನೇರ ನಗದು ಸಹಾಯಧನದ ಪ್ರಮಾಣ ಆ ದೇಶದ ಒಟ್ಟು ಕೃಷಿ ಉತ್ಪನ್ನದ ಮೌಲ್ಯದಲ್ಲಿ ಅರ್ಧದಷ್ಟಾಗುತ್ತದೆ. ಇದಕ್ಕೆ ಅಮೆರಿಕದ ಬಜೆಟ್ ನ ಶೇ 1ರಷ್ಟು ನಿದಿ ಬಳಕೆಯಾಗುತ್ತದೆ. ಭಾರತದಲ್ಲಿ ಇದೇ ರೀತಿ ಒಟ್ಟು ಕೃಷಿ ಉತ್ಪಾದನಾ ಮೌಲ್ಯದ ಶೇ 25ರಷ್ಟು ಪ್ರಮಾಣವನ್ನು ಒಂದು ಕೋಟಿ 20 ಲಕ್ಷ ರೈತರಿಗೆ ಸಹಾಯಧನದ ರೂಪದಲ್ಲಿ ನೀಡಿದರೂ ಕೇಂದ್ರ ಬಜೆಟ್ ನಲ್ಲಿ ಶೇ 50ರಷ್ಟು ನಿಧಿಯ ಬಳಕೆಯಾಗುತ್ತದೆ. ಇದು ಆರ್ಥಿಕವಾಗಿ ಅಸಾಧ್ಯವಾಗಿದ್ದು ಆಡಳಿತ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ.

ಸಮರ್ಪಕ ಬೆಲೆಯ ನಿಷ್ಕರ್ಷೆ

ತಮಗೆ ಅಲ್ಪ ಪ್ರಮಾಣದ ನಗದು ಪಾವತಿ ಮಾಡುವುದನ್ನು ಭಾರತದ ರೈತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ದೇಶದ ಸಮಸ್ತ ಜನತೆಗಾಗಿ ತಾವು ಬೆಳೆಯುವ ಆಹಾರ ಧಾನ್ಯಗಳಿಗೆ ಸಮರ್ಪಕವಾದ, ತರ್ಕಬದ್ಧವಾದ ಬೆಲೆ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಹಾಗಾದಲ್ಲಿ ಮಾತ್ರ ರೈತರು ತಮ್ಮ ಬೇಸಾಯದ ವೆಚ್ಚವನ್ನು ಸರಿದೂಗಿಸಿ ಸಾಧಾರಣ ಬದುಕು ನಡೆಸಲು ಸಾಧ್ಯವಾಗುತ್ತದೆ.

ಭಾರತದ ಸಂದರ್ಭದಲ್ಲಿ ಬೆಂಬಲ ಬೆಲೆ ಪದ್ಧತಿಯೊಂದೇ ನ್ಯಾಯಯುತವಾಗಿ ಕಾಣುತ್ತದೆ. ಪಂಜಾಬ್ ನಲ್ಲಿ ಅಂತರ್ಜಲ ಕುಸಿಯುತ್ತಿರುವುದು ಆತಂಕಕಾರಿ ವಿಷಯವೇ ಆದರೂ ಇಲ್ಲಿ ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸುವುದು ಮುಖ್ಯವಾಗುತ್ತದೆ. ಕಡಿಮೆ ನೀರು ಬಳಕೆಯಾಗುವಂತಹ ಮಾದರಿಗಳನ್ನು ಬಳಸಬೇಕಾಗುತ್ತದೆ. ( ಕೃಷಿ ವಿಜ್ಞಾನಿಗಳು ಕಂಡುಹಿಡಿದಿರುವ Rice Intensification ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚಿನ ಸಾವಯವ ಗೊಬ್ಬರವನ್ನು ಬಳಸುವುದು ಮತ್ತು ಹೆಚ್ಚಿನ ಅಂತರದಲ್ಲಿ ಭತ್ತದ ನಾಟಿ ಮಾಡುವುದು, ಚೌಕಾಕಾರದಲ್ಲಿ ನಾಟಿ ಮಾಡುವುದರ ಮೂಲಕ ನಡುವೆ ಹೆಚ್ಚಿನ ಜಲಸಾಂದ್ರತೆಯನ್ನು ತಡೆಗಟ್ಟಿ, ತೇವಾಂಶವನ್ನು ಉಳಿಸಿಕೊಳ್ಳುವುದು, ಅಂತರ್ಜಲ ಸಂರಕ್ಷಣೆಯ ಒಂದು ವಿಧಾನವಾಗಿದೆ-ಅನುವಾದಕ)

ಅಂತಾರಾಷ್ಟ್ರೀಯ ಕೃಷಿ ಒಡಂಬಡಿಕೆಗಳಲ್ಲಿ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳು ಅಸಂಬದ್ಧ ರೀತಿಯಲ್ಲಿ, ನಿಷ್ಪ್ರಮಾಣವಾದ ನಿಯಮಗಳನ್ನು ರೂಪಿಸಿದ್ದು, ಈ ನಿಯಮಗಳ ಅಡಿಯಲ್ಲೇ ಆಹಾರ ಧಾನ್ಯಗಳ ಬೆಂಬಲ ಬೆಲೆ ನಿರ್ಧರಿಸುವುದನ್ನೂ ಅಳವಡಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಒಂದು ನಿಯಮವಾಗಿದೆ.

2018ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಗೆ ಭಾರತದ ವಿರುದ್ಧ ದೂರು ಸಲ್ಲಿಸಿದ್ದ ಅಮೆರಿಕ ಸರ್ಕಾರ, ಭಾರತದಲ್ಲಿ 1986-88ರ ಮೂಲ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು, ಅಂದಿನ ಡಾಲರ್ ಮೌಲ್ 12.5 ರೂಗಳಿಗೆ ಅನುಗುಣವಾಗಿ ಭಾರತ 2013-14ರಲ್ಲಿ ಭತ್ತ ಮತ್ತು ಗೋಧಿಗೆ ಒಂದು ಕ್ವಿಂಟಾಲಿಗೆ ಕ್ರಮವಾಗಿ 235 ರೂ ಮತ್ತು 354 ರೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಕೋರಿತ್ತು. ಆದರೆ ಭಾರತದಲ್ಲಿ ಈ ವೇಳೆಗೆ ಬೆಂಬಲ ಬೆಲೆ ಕ್ರಮವಾಗಿ 1348 ರೂ ಮತ್ತು 1386 ರೂಗಳಷ್ಟಿತ್ತು.

ಕ್ವಿಂಟಲ್‍ಗೆ ಒಂದು ಸಾವಿರ ರೂ ಹೆಚ್ಚಾಗಿತ್ತು. ಇದನ್ನು 2013-14ರ ಭತ್ತ ಮತ್ತು ಗೋಧಿ ಉತ್ಪನ್ನದ ಒಟ್ಟು ಮೌಲ್ಯದೊಡನೆ ಗುಣಾಕಾರ ಮಾಡಿದರೆ ಇದು ಒಟ್ಟು ಉತ್ಪಾದನೆಯ ಶೇ 77 ಮತ್ತು ಶೇ 67ರಷ್ಟಾಗುತ್ತದೆ. ಈ ಲೆಕ್ಕಾಚಾರವನ್ನು ವಿಶ್ವ ವಾಣಿಜ್ಯ ಸಂಸ್ಥೆಯ ಮುಂದಿರಿಸಿದ್ದ ಅಮೆರಿಕ ಸರ್ಕಾರ , ಭಾರತದ ಈ ನೀತಿ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ನಿಗದಿಪಡಿಸಿರುವ ಗರಿಷ್ಟ ಶೇ 10ರಷ್ಟು ಬೆಂಬಲ ನೀಡುವ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಎರಡು ತಿಂಗಳ ಹಿಂದೆ ಅಮೆರಿಕ ಭಾರತಕ್ಕೆ ಮತ್ತಷ್ಟು ಹೊಸ ಸವಾಲುಗಳನ್ನು ಹಾಕಿದೆ. ದುರ್ಬಲ ಅಭಿವೃದ್ಧಿಶೀಲ ದೇಶಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಕೃಷಿ ಒಡಂಬಡಿಕೆಯಲ್ಲಿ ಅಪ್ರಮಾಣಿಕವಾದ, ಅಸಂಬದ್ಧ ನಿಯಮಗಳನ್ನು ಅಳವಡಿಸಲಾಗಿದೆ.

ಭಾರತದ ರೈತರು ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಆಹಾರ ಉತ್ಪನ್ನ ಮಾಡುತ್ತಿದ್ದು 2013-14ರಲ್ಲಿ 60.5ರಷ್ಟಿದ್ದ ಡಾಲರ್ ಮೌಲ್ಯಕ್ಕೆ ತುಲನೆ ಮಾಡಿದರೆ ಭಾರತ ನೀಡುತ್ತಿರುವ ಬೆಂಬಲ ಬೆಲೆ ಜಾಗತಿಕ ಬೆಲೆಗಳಿಗಿಂತಲೂ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಅಂದರೆ ವಾಸ್ತವವಾಗಿ ಬೆಂಬಲ ಬೆಲೆ ನಕಾರಾತ್ಮಕವಾಗಿಯೇ ಕಂಡುಬರುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ನೋಡಿದಾಗ ಭತ್ತ ಮತ್ತು ಗೋಧಿಯ ಬೆಲೆಗಳು ಚಾರಿತ್ರಿಕ ಕುಸಿತ ಕಂಡಿವೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳಲ್ಲಿ ಕೃಷಿ ಸಹಾಯಧನ ತೀವ್ರ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲೇ ಈ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಂತಹ ದೇಶಗಳ ಮಾರುಕಟ್ಟೆಗಳಲ್ಲಿ ತಂದು ಸುರಿಯಲು ಹತಾಶರಾಗಿವೆ.

ಈ ದೃಷ್ಟಿಯಿಂದ ನೋಡಿದಾಗ ಭಾರತದ ರೈತ ಸಂಘಟನೆಗಳು ತಾವು ವಿರೋಧಿಸುತ್ತಿರುವ ಮೂರು ಕೃಷಿ ಮಸೂದೆಗಳಿಂದ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಲಾಭವಾಗುತ್ತದೆ ಎನ್ನುವುದನ್ನು ಸರಿಯಾಗಿ ಗುರುತಿಸಿದ್ದು, ವಿದೇಶಿ ಕೃಷಿ ಉದ್ದಿಮೆಗಳು ಭಾರತದ ಕೃಷಿ ವ್ಯವಸ್ಥೆಗೆ ಮಾರಕವಾಗುವುದನ್ನೂ ಸಮರ್ಪಕವಾಗಿ ಗುರುತಿಸಿವೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಈಗಾಗಲೇ ರೈತರು ವಿದೇಶಿ ಕೃಷಿ ಉದ್ದಿಮೆಗಳೊಡನೆ ಗುತ್ತಿಗೆ ಕೃಷಿಯನ್ನು ನಡೆಸಿ ಅದರ ದುಷ್ಪರಿಣಾಮಗಳನ್ನು ಎದುರಿಸಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಲೆ ಮತ್ತು ಗುಣಮಟ್ಟದ ಬಗ್ಗೆ ಒಪ್ಪಿತ ನಿಯಮಗಳನ್ನೂ ಉಲ್ಲಂಘಿಸುವ ಮೂಲಕ ರೈತರಿಗೆ ವಂಚಿಸುವ ಈ ಅಗೋಚರ ಖಾಸಗಿ ಕಾರ್ಪೋರೇಟ್ ಉದ್ದಿಮೆಗಳೊಡನೆ ತಾವು ಯಾವುದೇ ರೀತಿಯಲ್ಲೂ ವ್ಯವಹರಿಸಲು ಸಿದ್ಧರಾಗಿಲ್ಲ ಎಂದು ರೈತ ಸಮುದಾಯ ಸ್ಪಷ್ಟವಾಗಿ ಹೇಳಿದೆ.

ಎಷ್ಟೇ ಅದಕ್ಷತೆ ಇದ್ದರೂ, ಹಣ ಪಾವತಿಯಲ್ಲಿ ವಿಳಂಬ ಉಂಟಾದರೂ, ತಮ್ಮ ಉತ್ಪನ್ನಗಳನ್ನು ಸರ್ಕಾರಿ ಏಜೆಂಟರಿಗೆ ನಿಗದಿತ ಬೆಂಬಲ ಬೆಲೆಗೆ ಮಾರಾಟ ಮಾಡಲು ರೈತರು ಸಿದ್ಧರಾಗಿದ್ದಾರೆ. ನೂತನ ಕೃಷಿ ಕಾಯ್ದೆಗಳ ಅನುಸಾರ ಮಾರುಕಟ್ಟೆ ನಿಯಂತ್ರಣ ನಿಯಮಗಳನ್ನು ಸಡಿಲಗೊಳಿಸಿದರೆ ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಉದ್ದಿಮೆಗಳೊಡನೆ ವಿದೇಶಿ ಕೃಷಿ ಉದ್ದಿಮೆಗಳೂ ಪ್ರವೇಶಿಸುತ್ತವೆ, ಇದರಿಂದ ಕನಿಷ್ಟ ಬೆಂಬಲ ಬೆಲೆ ಪದ್ಧತಿಗೂ ಪೆಟ್ಟಾಗುವುದಲ್ಲದೆ, ಸಾರ್ವಜನಿಕ ಸಂಗ್ರಹಣೆಯ ಪದ್ಧತಿಯೂ ಇಲ್ಲವಾಗುತ್ತದೆ ಎನ್ನುವ ರೈತರ ಆತಂಕ ನ್ಯಾಯಯುತವಾಗಿದೆ.

ಸಹಾಯಧನ ಪಡೆಯುವ ವಿದೇಶಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿನ ಬಡ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹಲವು ಕೃಷಿ ವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಆದರೆ ಈ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಲ್ಲಿ ಹಸಿರು ಇಂಧನ ಬಳಕೆಯ ಆಗ್ರಹ ಹೆಚ್ಚಾಗುತ್ತಿದ್ದು ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳನ್ನು ಎಥನಾಲ್ ಉತ್ಪಾದನೆಗೆ ಬಳಕೆಯಾಗುತ್ತದೆ ಎನ್ನುವ ವಾಸ್ತವಾಂಶವನ್ನು ಈ ತಜ್ಞರು ಮರೆಮಾಚುತ್ತಿದ್ದಾರೆ.

ಹಾಗಾಗಿ ಇಂದು ಕಡಿಮೆ ಬೆಲೆಯ ಆಹಾರ ಧಾನ್ಯಗಳ ಆಮದು ಪ್ರಕ್ರಿಯೆಗೆ ಅವಕಾಶ ನೀಡಿದರೆ ಮುಂಬರುವ ದಿನಗಳಲ್ಲಿ ಇದರಿಂದ ಭಾರತದ ರೈತರು ವಿನಾಶದ ಅಂಚಿಗೆ ತಲುಪುವುದೇ ಅಲ್ಲದೆ, ಬೆಲೆ ಏರಿಕೆ ತೀವ್ರವಾಗಿ ಈ ಹಿಂದೆ ಕೆಲವು ಅಭಿವೃದ್ಧಿಶೀಲ ದೇಶಗಳು ಎದುರಿಸಿದ್ದ ಸಂಕಷ್ಟಗಳನ್ನೇ ಭಾರತವೂ ಎದುರಿಸಬೇಕಾಗುತ್ತದೆ. ತಮ್ಮ ಬೆವರು ಹರಿಸಿ ವ್ಯವಸಾಯದಲ್ಲಿ ತೊಡಗಿರುವ ಭಾರತದ ರೈತಾಪಿಯ ಬಗ್ಗೆ ಕಾಳಜಿ ಇರುವ ಯಾರೇ ಆದರೂ ಈ ಕೃಷಿ ಮಸೂದೆಗಳನ್ನು ವಿರೋಧಿಸುವುದೇ ಅಲ್ಲದೆ, ಸ್ಥಳೀಯ ಮತ್ತು ವಿದೇಶಿ ಉದ್ಯಮಿಗಳ ಕುತಂತ್ರಗಳ ವಿರುದ್ಧ ದನಿ ಎತ್ತಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!

Published

on

ಸಾಂದರ್ಭಿಕ ಚಿತ್ರ
  • ಆದಿತ್ಯ ಭಾರದ್ವಾಜ್

ಹುಟ್ಟಿನಿಂದ ನಾನು ಬ್ರಾಹ್ಮಣ. ನಾನು ಜಾತಿಯನ್ನು ನಿರಾಕರಿಸುವುದು ಸುಲಭ. ಆದರೆ ದಲಿತನಿಗೆ ಅದು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಜಾತಿಯನ್ನು ನಿರಾಕರಿಸದೆ ಅದರೊಂದಿಗೆ ಬರುವ previlege ಬಗ್ಗೆ ಸದಾಕಾಲ ಅರಿವು ಇಟ್ಟುಕೋಬೇಕು ಎಂಬುದು ನನ್ನ ನಿಲುವು.

ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನಿಸಲಾಗಿದೆ ಅಂತ ಬ್ರಾಹ್ಮಣ ಅಭಿವೃದ್ಧಿ ನಿಗಮ, ಹಿಂದುತ್ವದ ಮುಖವಾಡ ತೊರೆದ ಸಂವಾದ ಅಂತಹ ಸಂಘ ಪರಿವಾರದ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಮುಗಿಬಿದ್ದು ನಿರ್ದೇಶಕರ ಕೈಲಿ ಕ್ಷಮೆ ಕೇಳಿಸಿದ್ದಾರೆ. ದೃಶ್ಯಗಳಿಗೆ ಕತ್ತರಿ ಹಾಕಲು ಧಮಕಿ ಹಾಕಿ ಒಪ್ಪಿಸಿದ್ದಾರೆ.

ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ನಡೆ ಇದು. ಈ ನಿಗಮ ಸ್ಥಾಪನೆಯ ಬಗ್ಗೆ ಅಂದೇ ಬಹಿರಂಗವಾಗಿ ಖಂಡಿಸದಿರುವುದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಮರಾಠರು, ಲಿಂಗಾಯತರಿಗೆ ನಿಗಮ ಸ್ಥಾಪಿಸಿದಾಗ ವಿರೋಧ ವ್ಯಕ್ತವಾಗಿದೆ. ಆದರೆ ಬ್ರಾಹ್ಮಣರಿಗೇ ನಿಗಮ ಸ್ಥಾಪಿಸಿದ ಮೇಲೆ ಯಾವ ಜಾತಿಗೆ ಬೇಕಾದರೂ ಸ್ಥಾಪಿಸಬಹುದಾಗಿದೆ. ಇದು ಸಾಮಾಜಿಕ ನ್ಯಾಯದ ಅಣಕ. ಎಲ್ಲ ಮೇಲ್ಜಾತಿಗಳ ನಿಗಮಗಳನ್ನು ರದ್ದು ಮಾಡಬೇಕಿದೆ.

ಇವತ್ತು ಇದೇ ಬ್ರಾಹ್ಮಣ ಅಭಿವೃದ್ಧಿ ನಿಗಮ ಒಂದು ಶಕ್ತಿಕೇಂದ್ರವಾಗಿ ತಲೆ ಎತ್ತಿದೆ. ಬ್ರಾಹ್ಮಣ್ಯವನ್ನು ಯಾಕ್ರೀ ಲೇವಡಿ ಮಾಡ್ತೀರಿ ಅಂತ ಅದರ ಅಧ್ಯಕ್ಷರು ಕೇಳ್ತಾರೆ ಇವತ್ತು! ಬ್ರಾಹ್ಮಣರು ಮತ್ತು ಫ್ಯೂಡಲ್ ಮೇಲ್ಜಾತಿಗಳು ಜಾತಿ ನಿಂದನೆ ಅಂತ ಅರಚಾಡುವುದೇ ಅಪಹಾಸ್ಯ. ಈ ಜಾತಿಗಳು ನಡೆಸಿರುವ ಅಟ್ರಾಸಿಟಿಗಳ ಹಿನ್ನೆಲೆಯಲ್ಲಿ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಟೀಕಿಸಿದರೆ, ಬೈದರೆ ಅದನ್ನು ಕೇಳಿಸಿಕೊಳ್ಳುವ ಸಹನೆಯನ್ನು ಈ ಸಮುದಾಯಗಳು ಬೆಳೆಸಿಕೊಳ್ಳಬೇಕಿದೆ.

ಇದನ್ನೂ ಓದಿ | ಗ್ಯಾಸ್ ಸಿಲಿಂಡರ್ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!

ದನಿ ಇದ್ದವನದೇ ನ್ಯಾಯ ಎಂಬಂತಾಗಿದೆ. ಬಲಹೀನ ವರ್ಗಗಳನ್ನು ಕಾಪಾಡಲು ಇರುವ ಕಾನೂನು, ಮೀಸಲಾತಿಯಂತಹ ಸವಲತ್ತುಗಳನ್ನು, ಈ ಕೋಮುಗಳು ಹೊಡೆದುಕೊಳ್ಳುತ್ತಿವೆ, ತಮ್ಮ ಹಕ್ಕು ಎಂಬಂತೆ ಆಗ್ರಹಿಸುತ್ತಿವೆ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯ ತಾತ್ವಿಕ ತಳಹದಿಯನ್ನೇ ಬುಡಮೇಲು ಮಾಡಿ ಬ್ರಾಹ್ಮಣರು, ವೈಶ್ಯರು ಒಂದು ಬೆರಳು ಕೂಡಾ ಎತ್ತದೇ ಹೊಡೆದುಕೊಂಡರು. ಬ್ರಾಹ್ಮಣರು ಇವತ್ತು ತಾವೇ ವಿಕ್ಟಿಂಗಳು ಎಂಬಂತೆ ಇತರ ಬಲಹೀನ ವರ್ಗಗಳೊಂದಿಗೆ ತಮ್ಮನ್ನೂ ಕಾಣಬೇಕು ಎಂಬಂತೆ ಆಡುತ್ತಿದ್ದು ಅದಕ್ಕೆ ಮನ್ನಣೆ ಸಿಗುತ್ತಿರುವುದು ದುರಂತ. ಇವತ್ತು ಹಿಂದುತ್ವದ ಮುಖವಾಡ ಹೊತ್ತು ಅಧಿಕಾರ ಹಿಡಿದಿರುವುದು ಬ್ರಾಹ್ಮಣಿಕೆಯೇ ಆಗಿರುವುದರಿಂದ ಇದು ಆಶ್ಚರ್ಯವೇನೂ ಅಲ್ಲ.

ಇನ್ನು ಪೊಗರು ಸಿನಿಮಾದಲ್ಲಿ ಹೆಣ್ಣನ್ನು ಬಿಂಬಿಸಿರುವ ಕುರಿತು ಪ್ರತಿಭಟನೆಗಳಾಗಬೇಕಿತ್ತು. “ಖರಾಬು” ಹಾಡಿಗೆ ಯೂಟ್ಯೂಬ್ ಅಲ್ಲಿ ಸುಮಾರು 21 ಕೋಟಿ views ಇವೆ! ಬದಲಿಗೆ ಬ್ರಾಹ್ಮಣರು ಪ್ರತಿಭಟನೆ ಮಾಡುತ್ತಿರುವುದು, ಅದನ್ನು ದಕ್ಕಿಸಿಕೊಂಡಿರುವುದು ಇವತ್ತಿನ ಕಾಲಮಾಪದ ರೂಪಕ.

(ಕೃಪೆ : ಫೇಸ್‌ಬುಕ್‌ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’

Published

on

ಪಂಜಾಬ್‌ನ ರೈತರು ಹೊಸ ವಸಾಹತುಶಾಹಿ ಕಾನೂನುಗಳಾದ ಹೊಸ ವಸಾಹತು ಕಾಯ್ದೆ ಮತ್ತು ‘ದೋಆಬ್ ಬಾರಿ’ ಕಾಯ್ದೆಯ ವಿರುದ್ಧ ಕುದಿಯುತ್ತಿದ್ದರು. ಈ ಕಾಯ್ದೆಗಳ ಹಿನ್ನೆಲೆ ಏನೆಂದರೆ, ಬ್ರಿಟಿಷ್ ಸರ್ಕಾರವು ಚಿನಾಬ್ ನದಿಯಿಂದ ನೀರನ್ನು ಸೆಳೆಯಲು ಕಾಲುವೆಗಳನ್ನು ನಿರ್ಮಿಸಿ, ಅದನ್ನು ಜನವಸತಿ ಇಲ್ಲದ ಪ್ರದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಲು ಲಿಯಾಲ್‌ಪುರಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಹರಿಸತೊಡಗಿತು.

ಹಲವಾರು ಸೌಕರ್ಯಗಳೊಂದಿಗೆ ಉಚಿತ ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿದ ಬ್ರಿಟಿಷ್ ಸರ್ಕಾರ, ಜಲಂಧರ್, ಅಮೃತಸರ, ಮತ್ತು ಹೋಶಿಯಾರ್‌ಪುರದ ರೈತರು ಮತ್ತು ಮಾಜಿ ಸೈನಿಕರನ್ನು ಅಲ್ಲಿ ನೆಲೆಸಲು ಮನವೊಲಿಸಿತ್ತು.

ಈ ಜಿಲ್ಲೆಗಳ ರೈತರು ತಮ್ಮ ಮೂಲ ಭೂಮಿ ಮತ್ತು ಆಸ್ತಿಯನ್ನು ಬಿಟ್ಟು, ಹೊಸ ಪ್ರದೇಶಗಳಲ್ಲಿ ನೆಲೆಸಿದರು ಮತ್ತು ಬಂಜರು ಭೂಮಿಯನ್ನು ಕೃಷಿಗೆ ಯೋಗ್ಯವಾಗಿಸಲು ಶ್ರಮಿಸಿದರು. ಆದರೆ ಅವರು ಹಾಗೆ ಮಾಡಿದ ಕೂಡಲೇ, ಸರ್ಕಾರವು ಈ ಫಲವತ್ತಾದ ಭೂಮಿಯ ಒಡೆಯ ತಾನೇ ಎಂದು ಘೋಷಿಸಲು, ರೈತರಿಗೆ ಮಾಲೀಕತ್ವದ ಹಕ್ಕನ್ನು ನಿರಾಕರಿಸಲು ಹೊಸ ಕಾನೂನುಗಳನ್ನು ಜಾರಿಗೆ ತಂದಿತು.

ರೈತರು ಈ ಜಮೀನುಗಳಲ್ಲಿ ಮರಗಳನ್ನು ಕಡಿಯಲು ಸಾಧ್ಯವಿರಲಿಲ್ಲ, ಮನೆಗಳು ಅಥವಾ ಗುಡಿಸಲುಗಳನ್ನು ನಿರ್ಮಿಸಲು ಅಥವಾ ಅಂತಹ ಭೂಮಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಅವಕಾಶವಿರಲಿಲ್ಲ್ಲ ಮತ್ತು ಹಿರಿಯ ಮಗನಿಗೆ ಮಾತ್ರ ತನ್ನ ತಂದೆಯಿಂದ ಬೇಸಾಯ ಮಾಡಿದ ಭೂಮಿಗೆ ಪ್ರವೇಶಿಸಲು ಅವಕಾಶವಿತ್ತು.

ಇದರಲ್ಲಿ ಏನನ್ನಾದರೂ ಉಲ್ಲಂಘಿಸಿದರೆ, ಜಮೀನು ಸರ್ಕಾರದ ಆಸ್ತಿಯಾಗಿ ಬಿಡುತ್ತಿತ್ತು. 20 ಲಕ್ಷ ಎಕರೆ ಭೂಮಿಗೆ ನೀರಾವರಿ ಮಾಡಲು ಕಾಲುವೆಗಳ ಮೇಲೆ ವಿಧಿಸಲಾಗಿದ್ದ ತೆರಿಗೆಗಳಲ್ಲಿ, ಸರ್ಕಾರವು ತನ್ನ ಆರಂಭಿಕ ಹೂಡಿಕೆಯನ್ನು ಮರಳಿ ಪಡೆಯಿತಲ್ಲದೇ, ಅಬ್ಬಾಶಿ ತೆರಿಗೆಯ ಆಧಾರದಲ್ಲಿ ವಾರ್ಷಿಕ 7 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಗಳಿಸತೊಡಗಿತು.

ಅಜಿತ್ ಸಿಂಗ್ ಮತ್ತು ಅವರ ಒಡನಾಡಿಗಳು ಈ ವಿಷಯಗಳ ಬಗ್ಗೆ ಜನಪ್ರಿಯ ಸಾಮೂಹಿಕ ಪ್ರತಿರೋಧವನ್ನು ಬೆಳೆಸಿದರು. ಈ ಆಂದೋಲನವನ್ನು ಮುನ್ನಡೆಸಲು ಕಾಂಗ್ರೆಸ್ ವಿಫಲವಾಗಿದೆ, ಮಸೂದೆಯನ್ನು ಈಗಾಗಲೇ ಕಾನೂನಾಗಿ ಅಂಗೀಕರಿಸಲಾಗಿದೆ ಎಂದು ವಾದಿಸಿದರು. ರೈತ ವಿರೋಧಿ ಕಾನೂನುಗಳಿಗೆ ನಿರ್ಭೀತ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದ ಅಜಿತ್ ಸಿಂಗ್ ಮತ್ತು ಅವರ ಭಾರತ್ ಮಾತಾ ಸಮಾಜದ ನಾಯಕತ್ವವನ್ನು ರೈತರು ಒಪ್ಪಿಕೊಂಡರು.

ಆಗ, ಲಾಹೋರ್ ಮತ್ತು ಅದರ ನೆರೆಹೊರೆಯ ಪ್ರದೇಶಗಳಲ್ಲಿ ಸಾವಿರಾರು ಜನರು ಭಾಗವಹಿಸಿದ ರ‍್ಯಾಲಿಗಳು, ಪ್ರದರ್ಶನಗಳು ಮತ್ತು ಸಾಮೂಹಿಕ ಸಮಾವೇಶಗಳ ನಿಜವಾದ ಅಲೆ ಕಾಣಿಸಿಕೊಂಡಿತು. ಈ ಸಭೆಗಳು ಈ ದಮನಕಾರಿ ಕಾನೂನುಗಳ ಬಗ್ಗೆ ಮತ್ತು ಬ್ರಿಟಿಷ್ ವಸಾಹತುಶಾಹಿಯಿಂದ ಧ್ವಂಸಗೊಂಡ ರಾಷ್ಟ್ರದ ನಿಜವಾದ ಚಿತ್ರಣದ ಬಗ್ಗೆ ಚರ್ಚಿಸಿದವು.

ಅಂತಿಮವಾಗಿ ವಿದೇಶಿ ಆಡಳಿತದ ವಿರುದ್ಧ ಸಂಪೂರ್ಣ ದಂಗೆಗಾಗಿ ಪ್ರಚೋದಿಸುವ ಕರೆಯೊಂದಿಗೆ ಕೊನೆಗೊಂಡವು. ಅಜಿತ್ ಸಿಂಗ್ ಅವರ ಭಾಷಣಗಳನ್ನು ಕೇಳದಂತೆ ನಿಷೇಧ ಹೊರಡಿಸಲಾಗಿತ್ತು!

(1907 ರ ಮಾರ್ಚ್ 3 ರಂದು ಲಿಯಾಲ್‌ಪುರದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ, ‘ಜಂಗ್ ಸ್ಯಾಲ್’ ಪತ್ರಿಕೆಯ ಸಂಪಾದಕ ಬಂಕೆ ದಯಾಲ್ ಅವರು, “ಪಗ್ಡಿ ಸಂಭಲ್ ಜಟ್ಟಾ, ಪಗ್ಡಿ ಸಂಭಾಲ್ ಓಯೆ” ಹಾಡನ್ನು ಪರಿಚಯಿಸಿದರು. ಅದು ಚಳವಳಿಯ ಸಂಕೇತ ಮತ್ತು ಆತ್ಮವಾಯಿತು.)

(ಕೃಪೆ : Mass Media Foundation, Delhi)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಪಾಂಡವರಿಗೂ ಭಾವ, ಕೌರವರಿಗೂ ಭಾವ..!

Published

on

  • ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರರು,ಮುಂಬೈ

ಮೇಲಿನದು ಕುಂದಾಪ್ರಕನ್ನಡದ ಒಂದು ನುಡಿಗಟ್ಟು.
ಯಾರಿಂದಲಾದರೂ ‘ಫ್ರೆಂಡ್ಸ್ ರಿಕ್ವೆಸ್ಟ್’ ಬಂದಾಗ ಅದನ್ನು ಒಪ್ಪಿಕೊಳ್ಳಲು ‘ಮ್ಯುಚುಅಲ್ ಫ್ರೆಂಡ್ಸ್’ ಪಟ್ಟಿ ನೋಡುವುದು ಮೊದಲ ಕ್ರಮ. ಈಗೀಗ ಅದೂ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಮೊನ್ನೆ ಒಬ್ಬರಿಂದ ‘ಫ್ರೆಂಡ್ಸ್ ರಿಕ್ವೆಸ್ಟ್’ ಬಂತು.

ನಾನು ಯಾವುಯಾವುದನ್ನು ಜೀವವಿರೋಧಿ, ಮನುಷ್ಯ ವಿರೋಧಿ, ಕ್ರೌರ್ಯ, ಹಿಂಸೆ ಎಂದು ಪರಿಗಣಿಸಿ ಪಾಲಿಸುವುದಿಲ್ಲವೋ ಅದೆಲ್ಲವನ್ನು ಅವರು ಶಿರಸಾವಹಿಸಿ ಪಾಲಿಸುವವರು. ಆ ‘ಫ್ರೆಂಡ್ಸ್ ರಿಕ್ವೆಸ್ಟ’ನ್ನು ‘ಅಸೆಪ್ಟ್’ ಮಾಡುವ ಪ್ರಶ್ನೆಯೇ ಇರಲಿಲ್ಲ.

ಆದರೂ ಕುತೂಹಲಕ್ಕೆ ‘ಮ್ಯುಚುಅಲ್ ಫ್ರೆಂಡ್ಸ್’ ಪಟ್ಟಿ ನೋಡಿದರೆ ಅಲ್ಲಿ ನೂರಾರು ಹೆಸರುಗಳಿದ್ದವು! ಹಾಗಾಗಿ, ಇತ್ತೀಚೆಗೆ ಇಂತಹ ‘ಫ್ರೆಂಡ್ಸ್ ರಿಕ್ವೆಸ್ಟ್’ ಗಳನ್ನು ಡಿಲೀಟ್ ಮಾಡುವ ಜೊತೆ ಇಂತಹ ‘ಫ್ರೆಂಡ್ಸ್’ ಗಳನ್ನು ‘ಅನ್ಫ್ರೆಂಡ್’ ಮಾಡುವುದೂ ಅನೀವಾರ್ಯವಾಗುತ್ತಿದೆ. ಈ ಕಾರಣಕ್ಕಾಗಿಯೇ ನನ್ನ ‘ಫ್ರೆಂಡ್ಸ್ ಲಿಸ್ಟ್’ ದಿನೇ ದಿನೇ ಚಿಕ್ಕದಾಗುತ್ತ ಹೋಗುತ್ತಿದೆ!

ಇದರಿಂದ ಅವರಿಗೇನೂ ನಷ್ಟವಿಲ್ಲ, ನಿಜ. ಆದರೆ, ನನಗೆ ಲಾಭವಿದೆ. ಹೇಗೆಂದರೆ, ಉದಾಹಣೆಗೆ, ಜಾತಿ ವಿಚಾರ ತೆಗೆದುಕೊಳ್ಳಿ. ನನಗಿದು ಜೀವವಿರೋಧಿ ಕ್ರಮ ಮಾತ್ರವಲ್ಲ, ಇದೊಂದು ಹೇಯ ಕ್ರೌರ್ಯವೂ ಹೌದು. ಇದನ್ನು ಯಾವುದೇ ಕಾರಣ ಕೊಟ್ಟು ಸಮರ್ಥಿಸುವವರ ಜೊತೆ ಸ್ನೇಹ ಸಾಧ್ಯವೇ ಇಲ್ಲ.

ಇದನ್ನೂ ಓದಿ | ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ

ಅವರೊಂದಿಗೆ ಕೇವಲ ಮನುಷ್ಯ ಸಂಬಂಧ ಇಟ್ಟುಕೂಳ್ಳಬಹುದೇ ವಿನಃ ಸ್ನೇಹ ಸಂಬಂಧ ಸಾಧ್ಯವೇ ಇಲ್ಲ. ನನ್ನ ಪ್ರಕಾರ ಈ ಫೇಸ್ ಬುಕ್ ಎಂಬುವುದು ಸ್ನೇಹ ಸಂಬಂಧಕ್ಕಿರುವ ಒಂದು ಸೋಶಿಯಲ್ ಪ್ಲಾಟ್ ಫಾರ್ಮ್.

ಇಲ್ಲಿ ‘ಫ್ರೆಂಡ್ಸ್’ ಅಲ್ಲದವರು ‘ಸ್ಟೇಟಸ್’ಗಳನ್ನು ನೋಡಲು, ಅವುಗಳಿಗೆ ‘ಕಮೆಂಟ್ಸ್’ ಮಾಡಲು ಅವಕಾಶವಿದೆ ನಿಜ. ಆದರೆ, ಹಾಗೆ ಮಾಡುವ ‘ಕಮೆಂಟ್ಸ್’ ಗಳು ಕನಿಷ್ಟ ನಾಗರಿಕ ಸೌಜನ್ಯದ ಮಿತಿಯೊಳಗಿದ್ದರೆ ಅದು ಅವರಿಗೇ ಶೋಭೆ. ಇಲ್ಲವಾದರೆ, ಅವರಿನ್ನೂ ಮನುಷ್ಯರಾಗಿಲ್ಲ ಎಂದು ಕನಿಕರ ಪಡುತ್ತೇನೆ, ಅಷ್ಟೇ.

ಅಂದಹಾಗೇ, ನನಗೆ ಅತೀ ಹೆಚ್ಚಿನ ಸಂಖ್ಯೆಯ ‘ಮ್ಯುಚುಅಲ್ ಫ್ರೆಂಡ್ಸ್’ ಗಳಿರುವುದು ಕ್ರಮವಾಗಿ, ಮತ್ತು ರಾಜಾರಾಮ್ ತಲ್ಲೂರು ಜೊತೆ ಎಂಬುವುದು ತುಂಬಾ ಖುಷಿ ಕೊಡುವ ಸಂಗತಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending