Connect with us

ಬಹಿರಂಗ

ನಮ್ಮ ನಡುವಿನ ಮನು ನಮ್ಮೊಳಗಿನ ಸ್ಮೃತಿ

Published

on

ಈ ಲೇಖನ ಬೇರೊಂದು ಸಂದರ್ಭದಲ್ಲಿ ಬರೆದದ್ದು, ಎರಡು ತಿಂಗಳ ಹಿಂದೆ, ಇವತ್ತಿನ ಸಂದರ್ಭಕ್ಕೂ ಅನ್ವಯಿಸುತ್ತದೆ. ಹಾಗಾಗಿ ಮತ್ತೊಮ್ಮೆ ಓದುಗರ ಮುಂದೆ.

  • ನಾ ದಿವಾಕರ

ಭಾರತ ಮತ್ತೊಮ್ಮೆ ವಿಕೃತಿಯೆಡೆಗೆ ಹೊರಳುತ್ತಿರುವಂತಿದೆ. ಮನುಕುಲದ ಅಸ್ತಿತ್ವವನ್ನೇ ಇಲ್ಲವಾಗಿಸುವ ಯುದ್ಧಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಮನಸುಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ ಮಾನವ ಸಮಾಜದಲ್ಲಿ ಸಹಜೀವನವನ್ನು ಗಟ್ಟಿಗೊಳಿಸುವ ಪ್ರೀತಿ ಪ್ರೇಮ ಬಾಂಧವ್ಯಗಳನ್ನು ಯುದ್ಧ ಎಂದು ಬಣ್ಣಿಸಲಾಗುತ್ತಿದೆ.

ಪ್ರೀತಿ ಎನ್ನುವುದು ಒಂದು ರೀತಿಯಲ್ಲಿ ಯುದ್ಧವೇ ಸರಿ ಆದರೆ ಜೀವಕಂಟಕ ಯುದ್ಧವಲ್ಲ, ಎರಡು ಜೀವಗಳನ್ನು ಬೆಸೆಯುವ ಯುದ್ಧ. ಎರಡು ಹೃದಯ ಸಾಮ್ರಾಜ್ಯಗಳ ನಡುವೆ ನಡೆಯುವ ಯುದ್ಧದಲ್ಲಿ ಅಂತಿಮವಾಗಿ ಗೆಲ್ಲುವುದು ಮಾನವನ ಆಂತರ್ಯದಲ್ಲಿರುವ ಸಂವೇದನೆ, ಸಹನೆ ಮತ್ತು ಮಾನವೀಯತೆ. ಈ ಮೂರು ಮೌಲ್ಯಗಳು ಇಲ್ಲದಾದಾಗ ಇದು ಜಿಹಾದ್‍ನಂತೆ (ಧರ್ಮಯುದ್ಧ) ಕಾಣುತ್ತದೆ. ಭಾರತದಲ್ಲಿ ಆಗುತ್ತಿರುವುದೂ ಇದೇ.

20ನೆಯ ಶತಮಾನ ಇಡೀ ಮನುಕುಲಕ್ಕೆ ಸಂವೇದನೆಯನ್ನು ಕಲಿಸಬೇಕಿತ್ತು. ಏಕೆಂದರೆ ಇದು ಆಧುನಿಕ ಜಗತ್ತಿನ ಕನ್ನಡಿಯಂತೆ. ಒಂದು ಶತಮಾನದ ಅವಧಿಯಲ್ಲಿ ಮಾನವ ಸಮಾಜ ಕಂಡ ಸಾವು, ನೋವು, ಹಿಂಸೆ, ಕ್ರೌರ್ಯ, ದೌರ್ಜನ್ಯ ಮತ್ತು ವಿನಾಶಕಾರಿ ಬೆಳವಣಿಗೆಗಳು ನಮ್ಮಲ್ಲಿ, ಅಂದರೆ ಮಾನವ ಸಮಾಜದಲ್ಲಿ, ಮಾನವ ಪ್ರೀತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸಬೇಕಿತ್ತು. ಭೀಕರ ಯುದ್ಧದ ನಡುವೆಯೂ ಪ್ರೀತಿಯನ್ನು ಹುಡುಕುವ ಹೃದಯಗಳು ಆಗಲೂ ಇದ್ದವು. ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ, ಹಿಟ್ಲರನ ಕ್ರೌರ್ಯದ ನಡುವೆ, ತೈಲ ಮಾರುಕಟ್ಟೆಗಾಗಿ ನಡೆದ ವಿಧ್ವಂಸಕ ಸಮರಗಳಲ್ಲಿ, ಸಾಮ್ರಾಜ್ಯಶಾಹಿ ಬೆಳೆಸಿದ ಭಯೋತ್ಪಾದನೆಯಲ್ಲಿ, ಮತಧರ್ಮಗಳು ಬೆಳೆಸಿದ ಮತಾಂಧತೆಯಲ್ಲಿ ಪ್ರೀತಿಯನ್ನು ಹೆಕ್ಕಿ ತೆಗೆಯುವ ಪ್ರಯತ್ನಗಳೂ ನಡೆದೇ ಇದ್ದವು.

ಆದರೆ ಕೊನೆಯಲ್ಲಿ ಗೆದ್ದಿದ್ದು ಹಿಂಸೆಯೇ, ವಿಕ್ರಮ ಸಾಧಿಸಿದ್ದು ಯುದ್ಧಪರಂಪರೆಯೇ. ಪ್ರೀತಿಸಲು ಕಾರಣ ಬೇಕಿಲ್ಲ ಎರಡು ಹೃದಯಗಳು ಸ್ಪಂದಿಸಿದರೆ ಪ್ರೀತಿ ಹುಟ್ಟುತ್ತದೆ, ಎರಡೂ ಹೃದಯಗಳನ್ನು ಸಾಯಲು ಬಿಡದೆ ಕಾಪಾಡುತ್ತದೆ. ಆದರೆ ಯುದ್ಧ ಮಾಡಲು ಕಾರಣ ಬೇಕು. ನಿಮಿತ್ತ ಬೇಕು. ಅದು ಭೌಗೋಳಿಕ ಹಸಿವು, ಸಂಪತ್ತಿನ ಮೋಹ, ಅಧಿಪತ್ಯದ ಹಪಹಪಿ, ಶ್ರೇಷ್ಠತೆಯ ಪಾರಮ್ಯ, ದಿಗ್ವಿಜಯದ ಅಹಮಿಕೆ ಹೀಗೆ ಹಲವು ಕಾರಣಗಳು ಇಲ್ಲದೆ ಯುದ್ಧ ಸಂಭವಿಸುವುದಿಲ್ಲ.

ಈ ಕಾರಣಗಳನ್ನು ನಾವು ಇಸ್ಲಾಂ ಹೆಸರಿನಲ್ಲಿ ಸಾವಿರಾರು ಕೊಲೆ ಮಾಡಿರುವ ಭಯೋತ್ಪಾದಕರಲ್ಲಿ, ಹಿಂದುತ್ವದ ಹೆಸರಿನಲ್ಲಿ ಸಾವಿರಾರು ಶವಯಾತ್ರೆಗಳನ್ನು ಸಂಭ್ರಮಿಸಿರುವ ಮತಾಂಧರಲ್ಲಿ, ಜಾತಿ ಶ್ರೇಷ್ಠತೆಗಾಗಿ ನೂರಾರು ಜೀವಗಳನ್ನು ದಹಿಸಿ ವಿಕೃತಿ ಮೆರೆದಿರುವ ಮೇಲ್ಜಾತಿಗಳಲ್ಲಿ ಮತ್ತು ವರ್ಣಬೇಧ ನೀತಿಯನ್ನು ಸಂರಕ್ಷಿಸಲು ಪಣತೊಟ್ಟಿರುವ ಮನಸುಗಳಲ್ಲಿ ಕಾಣಲು ಸಾಧ್ಯ. 21ನೆಯ ಶತಮಾನದ ಆಧುನಿಕ ಭಾರತ, ಸಾವಿರಾರು ವರ್ಷಗಳ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಭಾರತ ಈ ವಿಕೃತಿಯಿಂದ ಹೊರಬರಬೇಕಿತ್ತು. ಏಕೆಂದರೆ ಜಗತ್ತಿನ ಯಾವುದೇ ಒಂದು ದೇಶದಲ್ಲಿ ಕಾಣಲಾಗದಷ್ಟು ಸಮಾಜ ಸುಧಾರಣೆಯ ಪ್ರಯತ್ನಗಳು ಇಲ್ಲಿ ನಡೆದಿವೆ. ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಇದನ್ನು ಕಂಡಿದ್ದೇವೆ.

ಆದರೆ ಈ ಮನಸ್ಥಿತಿ ಬದಲಾಗದಿರುವಂತೆ ಈ ದೇಶದ ಸ್ಥಾಪಿತ ಜಾತಿ ವ್ಯವಸ್ಥೆ ಮತ್ತು ಮತಧಾರ್ಮಿಕ ನೆಲೆಗಳು ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಎಚ್ಚರವಹಿಸಿವೆ. ಸಮಾಜ ಸುಧಾರಕರನ್ನು ತನ್ನೊಳಗೆ ಸಮೀಕರಿಸಿಕೊಳ್ಳುವ ಮೂಲಕ ಅಥವಾ ಸಂಪೂರ್ಣವಾಗಿ ನಿರಾಕರಿಸುವ ಮೂಲಕ ಅಥವಾ ಪರಂಪರೆ ಮತ್ತು ಸಾಂಸ್ಕೃತಿಕ ಇತಿಹಾಸದ ನೆಲೆಯಲ್ಲಿ ಯಥಾಸ್ಥಿತಿಯನ್ನು ಸಂರಕ್ಷಿಸುವ ಮೂಲಕ ವಿಕೃತ ಮನಸ್ಥಿತಿಯನ್ನು ಉಳಿಸಿಕೊಳ್ಳಲಾಗಿದೆ.

ಈ ಮನಸ್ಥಿತಿಯನ್ನೇ ಮನುಸ್ಮೃತಿ ಎನ್ನುವ ಪ್ರಾಚೀನ ಸಂಹಿತೆಗಳ ಗ್ರಂಥ ಪ್ರತಿಪಾದಿಸುತ್ತದೆ. ಪ್ರೀತಿಸಬೇಕಾದ ಎರಡು ಹೃದಯಗಳು ಮತಧಾರ್ಮಿಕ ಕಾರಣದಿಂದಲೋ, ಜಾತಿ ಬೇಧದ ಕಾರಣದಿಂದಲೋ ಅಥವಾ ಶ್ರೇಷ್ಠ-ಕನಿಷ್ಠದ ಅಸ್ಮಿತೆಗಳ ಕಾರಣದಿಂದಲೋ, ಪರಿಶುದ್ಧತೆ ಮತ್ತು ಮಾಲಿನ್ಯದ ಕಾರಣದಿಂದಲೋ ಏಕೆ ದೂರವೇ ಇರಬೇಕು, ಹೇಗೆ ದೂರ ಇರಬೇಕು ಮತ್ತು ಒಂದು ವೇಳೆ ಹತ್ತಿರ ಬಂದರೆ ಏನೇನು ಅನಾಹುತಗಳು ಸಂಭವಿಸುತ್ತವೆ ಎಂದು ವ್ಯಾಖ್ಯಾನಿಸುವ ಒಂದು ಕೃತಿ ಮನುಸ್ಮೃತಿ. ಇದಕ್ಕಿಂತಲೂ ಹೆಚ್ಚಿನದಾಗಿ ಏನೂ ಹೇಳದ ಒಂದು ಗ್ರಂಥ. ಆದರೆ ಇದನ್ನು ಹೇಳಲು ಧರ್ಮಶಾಸ್ತ್ರಗಳನ್ನು ಉಲ್ಲೇಖಿಸುವ ಮೂಲಕ ಮೇಲ್ಜಾತಿಗಳಲ್ಲಿ ಸಾರ್ವಕಾಲಿಕ ಮಾನ್ಯತೆ ಪಡೆದಿರುವ ಒಂದು ಗ್ರಂಥ.

ಮನುಸ್ಮೃತಿಯ ಅನುಸರಣೆಗೆ ದೊರೆಯುವ ಮಾನ್ಯತೆ, ಈ ಗ್ರಂಥವನ್ನು ಧಿಕ್ಕರಿಸುವ ಧೋರಣೆಗೆ ದೊರೆಯುವುದಿಲ್ಲ ಎನ್ನುವುದೇ ಭಾರತೀಯ ಸಮಾಜದ ದೌರ್ಬಲ್ಯ . ಏಕೆ ಹೀಗೆ ? ಏಕೆಂದರೆ ನಾವು ಮನುಸ್ಮೃತಿ ಎನ್ನುವ ಗ್ರಂಥವನ್ನು ಮಾತ್ರ ಸುಟ್ಟಿದ್ದೇವೆ, ಈ ಗ್ರಂಥ ನಮ್ಮ ಸಾಮಾಜಿಕ ವಲಯದಲ್ಲಿ, ಸಾಂಸ್ಥಿಕವಾಗಿ, ವ್ಯಕ್ತಿಗತವಾಗಿ, ಸಂಘಟನಾತ್ಮಕವಾಗಿ ಮತ್ತು ರಾಜಕೀಯವಾಗಿ ಗಟ್ಟಿಯಾದ ನೆಲೆ ಕಂಡುಕೊಂಡಿದೆ.

ಗ್ರಂಥದ ಅಧ್ಯಯನದ ಅವಶ್ಯಕತೆಯೇ ಇಲ್ಲದೆ,ಮನು ಎಂಬ ಒಬ್ಬ ಸನಾತನಿ ಭಾರತದಲ್ಲಿ ಬ್ರಾಹ್ಮಣ್ಯದ ನೆಲೆಯನ್ನು ಗಟ್ಟಿಗೊಳಿಸಲು ರೂಪಿಸಿದ ಸಂಹಿತೆಗಳನ್ನು ಚಾಚೂತಪ್ಪದಂತೆ ಪಾಲಿಸಿಕೊಂಡು ಬರುವ ಒಂದು ಬೃಹತ್ ಜನಸಮುದಾಯ ನಮ್ಮ ನಡುವೆ ಇದೆ. ಒಂದು ಸಮಾಜೋ ಸಾಂಸ್ಕೃತಿಕ ಪರಂಪರೆ ವ್ಯವಸ್ಥೆಯಾಗಿ ರೂಪುಗೊಂಡು, ಇಡೀ ಭೌಗೋಳಿಕ ಪ್ರದೇಶದ ಜನತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನಲು ಇದೊಂದು ನಿದರ್ಶನ.

ಹಾಗಾಗಿಯೇ ಟಿ ವಿ ವಾಹಿನಿಯಲ್ಲಿ ಬರುವ ಒಂದು ಕಾರ್ಯಕ್ರಮದಲ್ಲಿ ಮನುಸ್ಮೃತಿಯ ದಹನದ ಪ್ರಶ್ನೆ ಕೇಳಿಬಂದರೆ ಈ ಸಮಾಜೋ ಸಾಂಸ್ಕೃತಿಕ ವ್ಯವಸ್ಥೆ ಸಿಡಿದೇಳುತ್ತದೆ. ಕೌನ್ ಬನೇಗ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಪ್ರಶ್ನೋತ್ತರದ ಒಂದು ಭಾಗವಾಗಿ ಮೂಡಿಬಂದಿದೆ. ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅಂಬೇಡ್ಕರ್ ವಾದಿಯೇನಲ್ಲ. ವ್ಯಕ್ತಿಗತ ನೆಲೆಯಲ್ಲಿ ಮನುಸ್ಮೃತಿಯನ್ನು ಕುರಿತು ಅವರ ನಿಲುವು ಏನು ಎನ್ನುವುದೂ ಅಸ್ಪಷ್ಟವೇ.

ಆದರೂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಂದರೆ ಮನುಸ್ಮೃತಿ ಪ್ರಶ್ನಾತೀತವಾಗಿದೆ ಎಂದರ್ಥ ಅಲ್ಲವೇ ? ಭಾರತದ ಮಧ್ಯಮ ವರ್ಗಗಳಿಗೆ, ದಲಿತರನ್ನೂ ಸೇರಿದಂತೆ ಇದೊಂದು ಕ್ಷುಲ್ಲಕ ಘಟನೆಯಾಗಿ ಮರೆಯಾಗಿಬಿಡುತ್ತದೆ. ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿರುವ ಸಾಂಸ್ಕೃತಿಕ ರಾಜಕಾರಣಕ್ಕೆ ಇದು ಮತ್ತೊಂದು ರಸ್ತೆ ವಿಭಜಕವಾಗಿ ಜನರನ್ನು ಕವಲುಹಾದಿಗಳಲ್ಲಿ ನಿಲ್ಲಿಸಲು ಸಹಾಯಕವಾಗುತ್ತದೆ.

ಆದರೆ ಭಾರತದ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಈ ಪ್ರಶ್ನೆ ಇನ್ನೂ ಬಹಳ ವರ್ಷಗಳ ಕಾಲ ಕೇಳಿಬರುತ್ತಲೇ ಇರುತ್ತದೆ. ಮನುಸ್ಮೃತಿ ಏಕೆ ಪ್ರಶ್ನಾತೀತವಾಗಿರಬೇಕು ? “ ಡಾ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸಲು ಕಾರಣವೇನು ” ಎಂಬ ವಿಚಾರದ ಬಗ್ಗೆ ಈ ದೇಶದ ಎಷ್ಟು ಶಾಲೆಗಳಲ್ಲಿ ಪ್ರಬಂಧ ಅಥವಾ ಚರ್ಚಾಸ್ಪರ್ಧೆ ಆಯೋಜಿಸಲು ಸಾಧ್ಯ ? ಈ ಪ್ರಶ್ನೆಯೇ ಎಷ್ಟು ಚರ್ಚಾಸ್ಪದವಾಗಬಹುದು.

ಯೋಚಿಸೋಣ. ಡಾ ಬಿ ಆರ್ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸುವ ಮೂಲಕ, ಆ ಗ್ರಂಥ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡಿದ್ದರು. ಹಾಗೆಯೇ “ ನಾವು ಇಂದು ಕೇವಲ ಗ್ರಂಥವನ್ನು ಸುಡುತ್ತಿದ್ದೇವೆ ಮುಂದೊಂದು ದಿನ ಈ ಗ್ರಂಥದಲ್ಲಿನ ಜಾತಿ ಶ್ರೇಷ್ಠತೆಯ ವಿಕೃತ ಚಿಂತನೆಗಳನ್ನೂ ಹೀಗೆಯೇ ದಹಿಸುತ್ತೇವೆ ” ಎಂದು ಈ ದೇಶದ ಜಾತಿ ವ್ಯವಸ್ಥೆಯ ವಾರಸುದಾರರಿಗೂ ಎಚ್ಚರಿಕೆಯ ಸಂದೇಶ ನೀಡಿದ್ದರು.

ಅವರ ಮೊದಲನೆಯ ಸಂದೇಶವನ್ನು ಈಗಲೂ ಭಾರತದ ಜಾತಿಪೀಡಿತ ಮನಸುಗಳು, ಶ್ರೇಷ್ಠತೆಯ ಪ್ರತಿಪಾದಕ ಸಮುದಾಯಗಳು ಪಠಿಸುತ್ತಿವೆ. ಆದರೆ ಎರಡನೆಯ ಸಂದೇಶ ಬಹುಶಃ ನೇಪಥ್ಯಕ್ಕೆ ಸರಿದಿದೆ. ಏಕೆಂದರೆ ಮನುಸ್ಮೃತಿ ಮತಧರ್ಮದ ಹೆಸರಿನಲ್ಲಿ ಆಚರಣಾತ್ಮಕವಾಗಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನವ ಬ್ರಾಹ್ಮಣ್ಯ ಎಲ್ಲ ಜಾತಿಗಳಲ್ಲೂ ಆವರಿಸಿದೆ.

ಜಾತಿ ಶ್ರೇಣೀಕರಣ ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮತ್ತು ಇದನ್ನು ಸಂರಕ್ಷಿಸುವ ಮೂಲಕವೇ ಜಾತಿಗಳ ಮೂಲಕ ಜನಸಾಮಾನ್ಯರನ್ನು ವಿಭಜಿಸುತ್ತಾ ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಉಳಿಸಿಕೊಂಡು ಹೋಗುವ ಮನುಸ್ಮೃತಿಯ ಧ್ಯೇಯ ಸಾಧಿಸಲು ಸಂಘಪರಿವಾರ ತನ್ನದೇ ಆದ ವ್ಯೂಹ ರಚಿಸಿರುವುದನ್ನು ಹಿಂದುತ್ವ ರಾಜಕಾರಣದಲ್ಲಿ ನಾವು ಕಾಣಬೇಕಲ್ಲವೇ ? ರಾಮಮಂದಿರ ಮತ್ತು ಕಾಶ್ಮೀರ ಈ ವ್ಯೂಹದ ಎರಡು ಧೃವಗಳು ಎನ್ನುವುದನ್ನು ಹಿಂದುತ್ವದೊಡನೆ ಗುರುತಿಸಿಕೊಂಡಿರುವ ಅಂಬೇಡ್ಕರ್ ಅನುಯಾಯಿಗಳಿಗೆ ಅರ್ಥವಾಗಬೇಕಲ್ಲವೇ ?

ಕಂಬಾಲಪಲ್ಲಿಯಿಂದ ಹಥ್ರಾಸ್‍ವರೆಗಿನ ಬೆಳವಣಿಗೆಗಳನ್ನು ಖೈರ್ಲಾಂಜಿಯ ಮೂಲಕ ಸೂಕ್ಷ್ಮವಾಗಿ ಗಮನಿಸಿದರೆ ಇದರ ಒಳಸುಳಿಗಳನ್ನು ನಾವು ಅರ್ಥಮಾಡಿಕೊಳ್ಳಬಹುದು. 20 ವರ್ಷಗಳ ಹಿಂದೆ, ಗತ ಶತಮಾನದ ಕೊನೆಯ ವರ್ಷದಲ್ಲಿ, ಕಂಬಾಲಪಲ್ಲಿಯಲ್ಲಿ ಒಂದು ದಲಿತ ಕುಟುಂಬದ ಸಜೀವ ದಹನವಾಗಿತ್ತು. ಏಳು ಜೀವಗಳು ಸುಟ್ಟುಹೋಗಿದ್ದವು.

ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ದಲಿತ ಅಸ್ಮಿತೆ ಮತ್ತು ಜಾತಿ ಶ್ರೇಷ್ಠತೆಯ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಆರು ವರ್ಷಗಳ ನಂತರ 2006ರಲ್ಲಿ ಖೈರ್ಲಾಂಜಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಸಾರ್ವಜನಿಕವಾಗಿಯೇ ಸಂಭವಿಸಿತ್ತು. ದಲಿತ ಹೆಣ್ಣುಮಕ್ಕಳ ಸಾರ್ವಜನಿಕ ಬೆತ್ತಲೆ ಮೆರವಣಿಗೆ ಮತ್ತು ಕೊಲೆ ಸದ್ದಿಲ್ಲದೆ ಅಡಗಿಹೋಯಿತು. 2020ರಲ್ಲಿ ಹಥ್ರಾಸ್‍ನಲ್ಲಿ ಒಂದು ಹೆಣ್ಣು ಮಗು ಮೇಲ್ಜಾತಿಯವರಿಂದ ಅತ್ಯಾಚಾರಕ್ಕೊಳಗಾಗಿ ಅಸುನೀಗಿದಳು. ಆಕೆಯ ಶವವನ್ನು ಸದ್ದಿಲ್ಲದೆ ಆಡಳಿತ ವ್ಯವಸ್ಥೆಯ ಮೇಲ್ವಿಚಾರಣೆಯಲ್ಲೇ ದಹಿಸಲಾಯಿತು.

ಕಂಬಾಲಪಲ್ಲಿಗೂ ಹಥ್ರಾಸ್‍ಗೂ ಇರುವ ವ್ಯತ್ಯಾಸವಾದರೂ ಏನು ? ಸುಟ್ಟವರು ಯಾರು ಎಂಬುದಷ್ಟೇ. ಎರಡೂ ಪ್ರಕರಣಗಳಲ್ಲಿ ಮತ್ತು ಖೈರ್ಲಾಂಜಿಯಲ್ಲೂ ಸಹ ದೌರ್ಜನ್ಯಕ್ಕೆ ಕಾರಣವಾಗಿದ್ದು ಮನುಸ್ಮೃತಿಯಲ್ಲಿ ಹೇಳಲಾಗುವ ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಪ್ರಾಬಲ್ಯ . ಮನು ಅಪರಾಧಗಳನ್ನು ಶ್ರೇಣೀಕರಣಗೊಳಿಸುವಂತೆಯೇ ಅಪರಾಧಿಗಳನ್ನೂ ಶ್ರೇಣೀಕರಣಗೊಳಿಸುತ್ತಾನೆ.

ಮನುಷ್ಯನ ಹುಟ್ಟು ಅವನ ಅಪರಾಧಿ ಸ್ಥಾನವನ್ನೂ ನಿರ್ಧರಿಸುತ್ತದೆ. ಮನುಸ್ಮೃತಿಯನ್ನು ರಚಿಸಿದ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಇನ್ನೂ ನಾಗರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರಲಿಲ್ಲ ಎಂದು ಹೇಳಬಹುದಾದರೆ, ಇಂದಿನ ಪರಿಸ್ಥಿತಿಯಲ್ಲಿ ಏನು ಹೇಳಬಹುದು ? ಹಥ್ರಾಸ್ ಘಟನೆಯಲ್ಲೂ ಇದೇ ಅನಾಗರಿಕ ಪ್ರಜ್ಞೆ ಅನಾವರಣವಾಗಿರುವುದನ್ನು ಕಂಡಿದ್ದೇವೆ ಅಲ್ಲವೇ ?

ಈ ಮೂರೂ ಘಟನೆಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದು ನಿಶ್ಚಿತ. ಎರಡು ಘಟನೆಗಳನ್ನು ನಾವು ಮರೆತಿದ್ದೇವೆ. ನಡುವೆ ಊನ ಗ್ರಾಮದಲ್ಲಿ ನಡೆದ ಘಟನೆಯನ್ನು ಒಂದು ಸಿನೆಮಾದ ಚಿತ್ರೀಕರಣದಂತೆ ನೇಪಥ್ಯಕ್ಕೆ ಸರಿಸಿಬಿಟ್ಟಿದ್ದೇವೆ. ಹಥ್ರಾಸ್ ಸಹ ಮೆಲ್ಲನೆ ಬದಿಗೆ ಸರಿದುಬಿಡುತ್ತದೆ. ಇಷ್ಟರ ನಡುವೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಒಂದು ಸಂದೇಶ ಮನುಸ್ಮೃತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವಂತಿದೆ.

ಅಸ್ಪೃಶ್ಯ ಸಮುದಾಯಗಳು, ದಲಿತರು ನಾಲ್ಕು ಗೋಡೆಗಳ ನಡುವೆ ಅನುಭವಿಸುವ ಜಾತಿ ನಿಂದನೆಯ ಅಪಮಾನಗಳು ಎಸ್‍ಸಿ/ಎಸ್‍ಟಿ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ಹೇಳಿರುವುದನ್ನು ಗಮನಿಸಿದರೆ ಈ ದೇಶ ಸಂವಿಧಾನಕ್ಕಿಂತಲೂ ಹೆಚ್ಚು ಮನುಸ್ಮೃತಿಯನ್ನೇ ಅನುಸರಿಸುತ್ತಿದೆ ಎಂಬ ಶಂಕೆ ಕಾಡುತ್ತದೆ.

ಖೈರ್ಲಾಂಜಿ, ಕಂಪಾಲಪಲ್ಲಿ ಘಟನೆಗಳು “ಖುಲೇ ಆಕಾಶ್ ಕೆ ನೀಚೆ” ಎಂದು ಹಿಂದಿಯಲ್ಲಿ ಹೇಳುವಂತೆ ಎಲ್ಲರ ಕಣ್ಣೆದುರಿನಲ್ಲೇ ನಡೆಯಿತಲ್ಲವೇ ? ಅಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿತೇ ? ಈ ದೇಶದ ಅಸ್ಪೃಶ್ಯ ಸಮುದಾಯದ ಅಮಾಯಕರು ನಾಲ್ಕು ಗೋಡೆಗಳ ನಡುವೆ ದೌರ್ಜನ್ಯ ಅಪಮಾನಗಳನ್ನು ಮೌನವಾಗಿ ಸಹಿಸುತ್ತಲೇ ಬಂದಿದ್ದಾರೆ.

ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ, ವಿದ್ಯಾಸಂಸ್ಥೆಗಳಲ್ಲೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ, ಬೌದ್ಧಿಕವಾಗಿ ಇದು ನಡೆಯುತ್ತಲೇ ಇರುತ್ತದೆ. ಅಪಮಾನ ಅಥವಾ ಮಾನಸಿಕ ಚಿತ್ರಹಿಂಸೆ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ಒಂದು ನೊಂದ, ದಮನಿತ ಮನಸು ಅನುಭವಿಸುವ ಯಾತನೆಯೇ ಹೊರತು, ಸಾರ್ವಜನಿಕವಾಗಿ ನಿರ್ವಚಿಸಬಹುದಾದ ವಿದ್ಯಮಾನವಲ್ಲ. ನ್ಯಾಯ ವಿತರಣಾ ವ್ಯವಸ್ಥೆ ಸಾಕ್ಷಿ ಪುರಾವೆಗಳನ್ನು ಅವಲಂಬಿಸುವುದರಿಂದ ಈ ಸೂಕ್ಷ್ಮ ಅರ್ಥವಾಗದಿರಬಹುದು. ಆದರೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅರ್ಥವಾಗಬೇಕಲ್ಲವೇ ?

ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅಸ್ಪೃಶ್ಯ ಸಮುದಾಯವನ್ನು, ಶೋಷಿತರನ್ನು ಮತ್ತು ದಲಿತರನ್ನು ಪ್ರತಿನಿಧಿಸುವ ದೇಹಗಳು ಹೇರಳವಾಗಿವೆ. ಮನಸುಗಳು ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಏಕೆಂದರೆ ಅಧಿಕಾರ ಕೇಂದ್ರಗಳು ಈ ಮನಸುಗಳಲ್ಲಿ ಮನುಸ್ಮೃತಿಯ ಚಿಂತನೆಗಳನ್ನೇ ಬಿತ್ತುತ್ತವೆ. ಮನುಸ್ಮೃತಿ ಕೇವಲ ಒಂದು ಮತಧಾರ್ಮಿಕ ಸಂಹಿತೆಯಲ್ಲ.

ಅಧಿಕಾರ ರಾಜಕಾರಣದ ಒಂದು ನೀತಿ ಸಂಹಿತೆಯೂ ಹೌದು. ಇದು ಕಳೆದ 20-30 ವರ್ಷಗಳ ರಾಜಕಾರಣದಲ್ಲಿ, ವಿಶೇಷವಾಗಿ ಹಿಂದುತ್ವ ರಾಜಕಾರಣ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್‍ನ ತೀರ್ಪು, ಹಥ್ರಾಸ್ ಘಟನೆಯ ಬಗ್ಗೆ ಶೋಷಿತ ಸಮುದಾಯಗಳ ಮೌನ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವವರ ಜಾಣ ಕುರುಡು ಇದನ್ನು ಮತ್ತಷ್ಟು ದೃಢಪಡಿಸುತ್ತದೆ.

ಮನುಸ್ಮೃತಿ ಇಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಾಬಲ್ಯವನ್ನು ತೋರುತ್ತದೆ. ಅಪರಾಧದ ಶ್ರೇಣೀಕರಣ ಮತ್ತು ಅಪರಾಧಿಗಳ ಶ್ರೇಣೀಕರಣವನ್ನೂ ಸಹ ಮನುಸ್ಮೃತಿಯ ನೆಲೆಯಲ್ಲೇ ಇಂದಿನ ಆಡಳಿತ ವ್ಯವಸ್ಥೆ ನಿರೂಪಿಸುತ್ತಿದೆ. ನಾವು ಮತಧಾರ್ಮಿಕ ಅಸ್ಮಿತೆ, ಜಾತಿ ಅಸ್ಮಿತೆ ಮತ್ತು ರಾಜಕೀಯ ನಿಷ್ಠೆಯ ಹೆಸರಿನಲ್ಲಿ ಇದನ್ನು ಗಮನಿಸುತ್ತಿಲ್ಲ.

ಸ್ಟಾನ್ ಸ್ವಾಮಿ, ಆನಂದ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಗೌತಮ್ ನವಲಖಾ, ವರಾವರರಾವ್, ಪ್ರೊ. ಸಾಯಿಬಾಬಾ ಇವರೆಲ್ಲರನ್ನೂ ಒಂದೆಡೆ ನಿಲ್ಲಿಸಿ ಅರ್ನಾಬ್ ಗೋಸ್ವಾಮಿಯನ್ನು ಮುಖಾಮುಖಿಯಾಗಿಸಿದಾಗ ನಮಗೆ ಮನುಸ್ಮೃತಿಯ ಶ್ರೇಣೀಕೃತ ವ್ಯವಸ್ಥೆಯ ವಿಕೃತ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತದೆ. ನವ ಬ್ರಾಹ್ಮಣ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಆಳವಾಗಿ ಬೇರೂರಿರುವಂತೆಯೇ ಆಡಳಿತ ವ್ಯವಸ್ಥೆಯಲ್ಲೂ ಬೇರೂರಿರುವುದನ್ನು ಈಗಲೂ ಗಮನಿಸದೆ ಹೋದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಡಾ ಅಂಬೇಡ್ಕರ್ ಮನುಸ್ಮೃತಿಯ ಮುದ್ರಿತ ಅಕ್ಷರಗಳನ್ನು ಸುಟ್ಟುಹಾಕುವ ಮೂಲಕ ತಮ್ಮ ಹಾಗೂ ತಾವು ಪ್ರತಿನಿಧಿಸುವ ಶೋಷಿತ ಸಮುದಾಯದ ಆಕ್ರೋಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದು ಶತಮಾನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನಾವು ಸುಡಬೇಕಿರುವುದು ನಮ್ಮ ಮನಸಿನಲ್ಲಿ ಬೇರೂರಿರುವ ಆ ಸ್ಮೃತಿಯ ಬೇರುಗಳನ್ನು ,ಪಳೆಯುಳಿಕೆಗಳನ್ನು. ಸುಶಿಕ್ಷಿತ, ಆಧುನಿಕ, ಪಾಶ್ಚಾತ್ಯ ಚಿಂತನೆ ಮತ್ತು ದೇಸಿ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಮಧ್ಯಮ ವರ್ಗಗಳಲ್ಲಿ, ಹಿತವಲಯದ “ನಾಗರಿಕ ಪ್ರಜೆಗಳಲ್ಲಿ”, ಇವರ ಪ್ರಜ್ಞೆಯಲ್ಲಿ ಬೇರೂರಿರುವ ಮನು ನಿರ್ವಚಿಸಿದ ಸ್ಮೃತಿಯನ್ನು ಸುಡುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸ್ಮೃತಿಯಿಂದ ಹೊರತಾಗಿದ್ದೇವೆ ಎಂದು ಮೇಲ್ನೋಟಕ್ಕೆ ಪ್ರದರ್ಶಿಸಿಕೊಳ್ಳುತ್ತಲೇ ಮನುಸ್ಮೃತಿಯ ಆರಾಧಕರೊಡನೆ ಗುರುತಿಸಿಕೊಂಡಿರುವವರೂ ಇದನ್ನು ತಮ್ಮ ಆದ್ಯತೆ ಎಂದೇ ಪರಿಗಣಿಸಬೇಕಿದೆ.

ಇಲ್ಲವಾದಲ್ಲಿ ಇಂದು ಮದುವೆಯಾಗಲು ಮತಾಂತರ ನಿಷಿದ್ಧ ಎನ್ನುವ ವ್ಯವಸ್ಥೆ ನಾಳೆ ಜಾತಿ ದೌರ್ಜನ್ಯದಿಂದ ಬೇಸತ್ತು ಮತಾಂತರವಾಗುವುದನ್ನೂ ನಿಷೇಧಿಸುತ್ತದೆ. ಅಂತರ್ ಧರ್ಮೀಯ ವಿವಾಹಗಳಂತೆಯೇ ಅಂತರ್ ಜಾತಿ ವಿವಾಹಗಳೂ ಸಹ ಮಸಣದಲ್ಲಿ ನ್ಯಾಯ ಕೇಳಬೇಕಾದ ವಿದ್ಯಮಾನಗಳಾಗಿಬಿಡುತ್ತವೆ. ನಾವು ಗ್ರಂಥದತ್ತ ನೋಡುತ್ತಿದ್ದೇವೆ ಅವರು ಸ್ಮೃತಿಯನ್ನು ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇದು ಯೋಚಿಸಬೇಕಾದ ವಿಚಾರವಲ್ಲವೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending