ದಿನದ ಸುದ್ದಿ
ಒಬ್ಬರು ಈ ದೇಶದ ಮಹಾತ್ಮ ಇನ್ನೊಬ್ಬರು ಈ ದೇಶದ ಪುಣ್ಯಾತ್ಮ..!
- ಕೆ.ಶ್ರೀಧರ್ (ಕೆ.ಸಿರಿ)
ಅಕ್ಟೋಬರ್ ಎರಡು ಎಂದಾಕ್ಷಣ ನಮಗೆ ನೆನಪಾಗುವುದು ನಮಗೆ ಈ ದೇಶದ ಇಬ್ಬರು ವ್ಯಕ್ತಿಗಳು ನೆನಪಿಗೆ ಬರುತ್ತಾರೆ. ಒಬ್ಬರು ಈ ನಮ್ಮ ಭಾರತ ದೇಶವಷ್ಟೇ ಅಲ್ಲದೇ ಇಡೀ ವಿಶ್ವವನ್ನೇ ತನ್ನ ಅಹಿಂಸಾತ್ಮಕ ಮಾರ್ಗದ ಮೂಲಕ ಎದುರಿದ್ದವರ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದವರು ಮತ್ತು ತಮ್ಮ ಸಿದ್ದಾಂತಗಳ ಮೂಲಕ ತಮ್ಮತ್ತ ಸೆಳೆದವರು.
ಇನ್ನೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇಡೀ ದೇಶಕ್ಕೆ ತಮ್ಮ ಪ್ರಾಮಾಣಿಕ ಮತ್ತು ಸರಳಾತ್ಮಕ ವ್ಯಕ್ತಿತ್ವದ ಮೂಲಕ ಸೆಳೆದವರು. ನಾಳೆ ಈ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿ ಇಡೀ ಭಾರತವೇ ಈ ಮಹಾನ್ ಚೇತನಗಳ ಜಯಂತಿಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತದೆ.
ವಿಶೇಷವಾಗಿ ಇಂತಹ ಮಹಾನ್ ಚೇತನಗಳ ಜಯಂತಿಗಳು ಬಂದರೆ ಸಾಕು ನನಗೆ ನೆನಪಾಗುವುದು ನಮ್ಮ ಬಾಲ್ಯ ದಿನದ ಆ ಶಾಲಾ ದಿನಗಳು.ಶಾಲಾ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಶಾಲಾ ದಿನಗಳು ನೆನಪಾಗುತ್ತವೆ. ನಮ್ಮ ಶಾಲಾ ಶಿಕ್ಷಕರು ಜಯಂತಿಯ ವಿಶೇಷವಾಗಿ ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು ಈ ಮೂಲಕ ಇಂತಹ ಮಹಾನ್ ಚೇತನಗಳ ಅಭೂತಪೂರ್ವ ವ್ಯಕ್ತಿತ್ವದ ಪರಿಚಯ ನಮಗಾಗುತ್ತಿತ್ತು.
ಜಯಂತಿಗಳು ಆರಂಭವಾಗುವ ವಾರಕ್ಕೂ ಮೊದಲೆ ವಿಶೇಷ ಚಟುವಟಿಕೆಗಳ ತಯಾರಿ ಬಲು ಜೋರಿರುತ್ತಿತ್ತು. ನಮಗಂತೂ ಕುತೂಹಲವೋ ಕುತೂಹಲ ದಿನ ಸಂಜೆ ಸ್ಕೂಲಿಂದ ಮನೆಗೆ ಹೋಗಿ ಅಪ್ಪ ಅಮ್ಮಂದಿರ ಬಳಿ ಹೊಸ ಬಟ್ಟೆ ಹಾಗೂ ಚಾಕಲೇಟು,ನಿಂಬೆಹುಳಿ ಪೆಪ್ಪರಮೆಂಟು,ಶುಂಠಿ ಪೆಪ್ಪರರ್ಮೆಂಟು, ಈಗೇ ಇತ್ಯಾದಿಗಳನ್ನು ಕೊಡಿಸಬೇಕೆಂದು ತಾಕೀತು ಮಾಡುತ್ತಿದ್ದೆವು.
ಆ ಅಸಾಹಯಕ ಹಾಗೂ ಬಡತನದ ಪರಿಸ್ಥಿತಿಯಲ್ಲಿ ಇರುತ್ತಿದ್ದ ನಮ್ಮ ತಂದೆ ತಾಯಿಗಳು ಮನದಲ್ಲಿಯೇ ಯೋಚನೆ ಮಾಡುತ್ತಾ ನಿಟ್ಟುಸಿರು ಬಿಟ್ಟು ಹೇಗಾದರೂ ಮಾಡಿ ಹೊಸ ಬಟ್ಟೆ ಹೊಲಿಸಿ ಅಥವಾ ಇದ್ದ ಬಟ್ಟೆಗಳನ್ನೇ ಶುಭ್ರವಾಗಿ ತೊಳೆದು ನಮಗೆ ವ್ಯವಸ್ಥೆ ಮಾಡುತ್ತಿದ್ದರು. ಅಕ್ಟೋಬರ್ ಒಂದರ ಸಂಜೆಯಿಂದಲೇ ನಾಳೆ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಗೆ ಹೋಗುವ ತಯಾರಿ ಬಲು ಜೋರಿರುತ್ತಿತ್ತು.
ಬೆಳಗ್ಗೆ ಕುತೂಹಲದಿಂದ ಬೆಳುಗಾ ಮುಂಜಾನೆ ಎದ್ದು ತಣ್ಣೀರೋ ಬಿಸಿ ನೀರೋ ಮೈಗೆರೆದಕೊಂಡು ಆಗಾಗ ನಮ್ಮ ಬೇಡಿಕೆಗಳೂ ಈಡೇರಿಲ್ಲವೆಂದು ಮುನಿಸಿಕೊಂಡು ನಸು ಅಳುತ್ತಲೇ ಹಳೆಯ ಬಿಳಿ ಬಟ್ಟೆಗಳನ್ನು ಕೆಂಡ ತುಂಬಿದ ಚೊಂಬಿನಿಂದಲೋ ಅಥವಾ ಬಿಸಿ ನೀರು ತುಂಬಿದ ಚೊಂಬಿನಿಂದಲೋ ಇಸ್ತ್ರಿ ಮಾಡಿಕೊಂಡು ಭಾರತದ ಬಾವುಟವನ್ನು ಕೈಯಲ್ಲಿ ಹಿಡಿಯುತ್ತಿದ್ದೆವು.
ಮುನಿಸಿಕೊಂಡಾಗ ಅಮ್ಮ ಕೊಟ್ಟ ಪುಡಿಗಾಸು ಕೈಯಲ್ಲಿಡಿದು ಮೂಗಲ್ಲಿ ಶೀತಕ್ಕೆ ಸುರಿದ ಗೊಣ್ಣೆಯ ಅಂಗಿಗೆ ತಿಕ್ಕುತಾ ಮೇಷ್ಟ್ರು ಬರೆದುಕೊಟ್ಟ ಭಾಷಣವ ಶಾಲೆಗೆ ಹೋಗುವಾಗ ದಾರಿಯ ಉದ್ದಗಲಕ್ಕೂ ಜೋರಾಗಿ ಹೊದರುತ್ತಾ ಗೆಳೆಯರೊಂದಿಗೆ ಗುದ್ದಾಡುತ್ತಾ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳನ್ನು ಕೈಯಲ್ಲಿಡಿದು ಪಿ.ಟಿ ಮೇಷ್ಟ್ರು ಮಾರ್ಗದರ್ಶನದಲ್ಲಿ ಡಂಬಲ್ಸ್ ಬಾರಿಸುತ್ತಾ ಊರೆಲ್ಲಾ ಒಂದು ರೌಂಡ್ ಹೊಡೆಯುತ್ತಿದ್ದೆವು.
ಶಾಲೆಯ ಹತ್ತಿರ ಬಂದು ಕೂತುಕೊಂಡು ಪ್ರಾರ್ಥನಾ ಗೀತೆ, ಸ್ವಾಗತ ಭಾಷಣ, ಜ್ಯೋತಿ ಬೆಳಗಿಸುವ ಕಾರ್ಯಕ್ರಮ, ನಮ್ಮ ಭಾಷಣ, ಮುಖ್ಯ ಅತಿಥಿಗಳ ಭಾಷಣವನ್ನು ಕೇಳಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ತಿಳಿದುಕೊಳ್ಳುತ್ತಿದ್ದೆವೂ ಕೊನೆಗೆ ಅಧ್ಯಕ್ಷೀಯ ಭಾಷಣ ಮುಗಿದ ನಂತರ ಕಾರ್ಯಕ್ರಮಕ್ಕೆ ವಂದನಾರ್ಪಣೆ ಹೇಳಿ ಹೆಡ್ ಮೇಸ್ಟ್ರು ಕೊಟ್ಟ ಪೆಪ್ಪರ್ಮೆಂಟ್ಗಳ ಪಡೆದು ಖುಷಿಯಾಗಿ ತಂತಮ್ಮ ಸೂರುಗಳಿನ್ನು ಸೇರುತ್ತಿದ್ದೆವು. ಈ ನಿಟ್ಟಿನಲ್ಲಿ ನೋಡುವುದಾದರೆ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಂತಿಯ ಕಾರ್ಯಮಗಳ ಮೆರಗು ಹಾಗೂ ಸಾರ್ಥಕತೆಯೇ ಚೆಂದದ ಬಂಧ.
ಮೋಹನ್‌ದಾಸ್ ಕರಮ್ ಚಂದ್ ಗಾಂಧಿಯವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ ಹಾಗೂ ಧೀಮಂತ ನಾಯಕ ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. 2 ಅಕ್ಟೋಬರ್ 1869ರಲ್ಲಿ ಭಾರತದ ಇಂದಿನ ಗುಜರಾತ್ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.
ಅವರ ತಾಯಿ ಪುತಲೀಬಾಯಿಯವರು ತಂದೆ ಕರಮ್‌ಚಂದ್ ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು ಲಂಡನ್‌ಗೆಪ್ರಯಾಣಿಸಿದರು.
ಅಹಿಂಸೆ ಅಥವಾ ಸಂಪೂರ್ಣ ಅಹಿಂಸೆಯ ಮೇಲೆ ದೃಢವಾಗಿ ರೂಪಿಸಲ್ಪಟ್ಟ ಸಾಮೂಹಿಕ ಅವಿಧೇಯತೆಯ ಮೂಲಕ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹ ದ ಪರಿಕಲ್ಪನೆಗೆ ಅವರು ಪಥ (ದಾರಿ)ನಿರ್ಮಾಪಕರಾಗಿದ್ದು, ಅದು ಭಾರತವನ್ನು ಸ್ವಾತಂತ್ರ್ಯದತ್ತ ಒಯ್ದಿತು ಹಾಗೂ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು.
ಬ್ರಿಟಿಷರ ವಿರುದ್ಧ ಹಲವಾರು ಕ್ವಿಟ್ ಇಂಡಿಯಾ ಚಳುವಳಿ, ಅಸಹಕಾರ ಚಳವಳಿ ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿಯೂ ಸಹ ಹೋರಾಟ ಮಾಡಿದಂತಹ ಧೀಮಂತ ವ್ಯಕ್ತಿ ಅಹಿಂಸಾವಾದಿಗಳು ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನವಾದಿಗಳು.ತಮ್ಮ ಜೀವನದುದ್ದಕ್ಕೂ ಶಾಂತಿಯನ್ನು ಪ್ರತಿಪಾದಿಸಿದ್ದ ಗಾಂಧೀಜಿಯವರು, ಸ್ವಾತಂತ್ರ್ಯ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು.
ಗಾಂಧೀಜಿಯವರ ಪ್ರಕಾರ ರಾಮರಾಜ್ಯ ಎಂದರೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆಯನ್ನು ಸಾರುವ ಸಮಾಜವಾಗಿತ್ತು. ಇಲ್ಲಿ ರಾಜ ಮತ್ತು ಪ್ರಜೆಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ, ಒಬ್ಬ ಸಾಮಾನ್ಯ ನಾಗರಿಕನು ತನಗೆ ಸಿಗಬೇಕಾದ ನ್ಯಾಯವನ್ನು ತ್ವರಿತವಾಗಿ ದೊರಕಿಸಿಕೊಳ್ಳಬಹುದು.
ಮಹಾತ್ಮ ಗಾಂಧಿಜಿಯವರು ಭಾರದ ಭವಿಷ್ಯ ಹಳ್ಳಿಗಳಲ್ಲಿದೆ ಎಂದು ತಿಳಿಸಿದ್ದರು ಆದರೆ ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಈ ರಾಜಕೀಯ ದೊಂಬರಾಟದಿಂದ ಹಳ್ಳಿಗಳ ಅಭಿವೃದ್ಧಿಗೆ ಯೊರೊಬ್ಬರು ಕೂಡ ಒತ್ತು ನೀಡುತ್ತಿಲ್ಲ ಬರೀ ಗುದ್ದಲಿ ಪೂಜೆ ಪೋಟೋಕ್ಕೊಂದು ಪೋಜು ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ನಮ್ಮ ದೇಶ ನಿಜವಾಗಿಯೂ ಸ್ವಾತಂತ್ರವಾಗುವುದು ಒಂದು ಹೆಣ್ಣು ಮಧ್ಯ ರಾತ್ರಿ 12 ಗಂಟೆಗೆ ನಿರ್ಭಯವಾಗಿ ಓಡಾಡಲು ಸಾಧ್ಯವಾಗದ ಮಾತ್ರ ಎಂಬುದು ಗಾಂಧಿಜೀಯವರ ಕನಸ್ಸಾಗಿತ್ತು ಇತ್ತೀಚಿನ ದಿನಗಳಲ್ಲಿ ಹಾಡುಹಗಲಲ್ಲೇ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗುತ್ತಿರುವುದು ದುರ್ದೈವ ಸಂಗತಿಯಾಗಿದೆ.
2015 ರಲ್ಲಿ34,651, 2016 ರಲ್ಲಿ 38,947, 2017 ರಲ್ಲಿ 32,559,. 2018 ರಲ್ಲಿ 33,356, 2019 ರಲ್ಲಿ 32,500 ಕ್ಕೂ ಹೆಚ್ಚು ಹಾಗೂ ನಿನ್ನೆ ಉತ್ತರ ಪ್ರದೇಶದ 19 ವರ್ಷದ ಮನೀಷಾ ವಾಲ್ಮೀಕಿ ರವರನ್ನ ಸಾಮೂಹಿಕ ಅತ್ಯಚಾರವೆಸಗಿ ನಾಲಿಗೆ ಕತ್ತರಿಸಿ ಕೈಕಾಲು ಮುರಿದು ಕೊಂದಿರುವ ಘಟನೆ ಮತ್ತು ಅದೇ ಉತ್ತರ ಪ್ರದೇಶದ ಬಲರಾಮಪುರ್ ದ 14 ನೇ ವರ್ಷದ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾರವೆಸಗಿ ಕೊಲೆಗೈದಿದ್ರಾರೆ.
ನಿಜಕ್ಕೂ ಎತ್ತ ಸಾಗುತ್ತಿದೆ ನಮ್ಮ ಬದುಕು ಈಗಿರುವ ಅತ್ಯಾಚಾರದ ವಿರುದ್ಧದ ಕಾನೂನುಗಳು ಕಾಗದದ ಕುದುರೆಗಳಾಗಿವೆ ಹೀಗಾದರೆ ಹೇಗೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸ್ಸಾಗುವುದು??? ಇನ್ನಾದರೂ ರಾಜಕೀಯ ಪಕ್ಷಗಳು ರಾಜಕೀಯ ದೊಂಬರಾಟ ಬಿಟ್ಟು ಜ್ವಲಂತ ಸಮಸ್ಯೆಗಳತ್ತ ಗಮನಹರಿಸಬೇಕಾಗಿದೆ.
ಲಾಲ್ ಬಹಾದುರ್ ಶಾಸ್ತ್ರಿ
ಭಾರತದ ಎರಡನೆಯ ಪ್ರಧಾನಮಂತ್ರಿ.ಜನನ: ಅಕ್ಟೋಬರ್ 02- 1904, ಮರಣ: ಜನವರಿ 11, 1966,ಜನಿಸಿದ ಸ್ಥಳ:ಮೊಘಲ್‌ಸಾರಾಯ್, ಉತ್ತರ ಪ್ರದೇಶ.1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು.
9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.
ಆ ಕಾಲದಲ್ಲಿಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರ್ಕಾರಕ್ಕೆ ನನಗೆ ನೀಡುವ ವೇತನ ಜಾಸ್ತಿಯಿದೆ ದಯವಿಟ್ಟು ವೇತನವನ್ನು ಕಡಿಮೆ ಮಾಡಿ ಎಂದು ಪತ್ರ ಬರೆದ ಮಹಾನ್ ಚೇತನವಾದಿ.ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ. ಇದು ‘ಶಾಸ್ತ್ರಿ ಸೋಮವಾರವೆಂದೇ’ ಪ್ರತೀತಿ ಇದೆ.. ಇವರ ಜನಪ್ರಿಯತೆ ಹೊಂದಿದೆ. ಇಂತಹ ಇಬ್ಬರು ಮಹಾನ್ ಚೇತನವಾದಿಗಳು ಒಬ್ಬರು ಮಹಾತ್ಮರಾದರೆ ಇನ್ನೊಬ್ಬರೂ ಭಾರತ ಕಂಡ ಪುಣ್ಯಾತ್ಮರು ಎಂಬುದು ನನ್ನ ಅಭಿಮತ.
–ಕೆ.ಶ್ರೀಧರ್ (ಕೆ.ಸಿರಿ)
ಮೊಬೈಲ್: 9741270125
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243



